ಕ್ಷಮೆ ಮತ್ತು ರಾಜಿ ಸೂತ್ರ ಪ್ರತಿಪಾದಿಸುವ The tempest: ನಾಗರೇಖ ಗಾಂವಕರ

ಆಫ್ರಿಕಾದ ಟ್ಯುನಿಸ್‍ನಲ್ಲಿ ವಿವಾಹಕಾರ್ಯದಲ್ಲಿ ಭಾಗವಹಿಸಿ ಮರಳುತ್ತಿದ್ದ Neapolitansಗಳಾದ [ನೇಪಲ್ಸ್‍ನ ನಿವಾಸಿಗಳು] ಇಟಲಿಯ ನೇಪಲ್ಸ್‍ನ ರಾಜ ಅಲೆನ್ಸೋ ಆತನ ಪುತ್ರ ಫರ್ಡಿನಾಂಡ್, ಸಹೋದರ ಸೆಬಾಸ್ಟಿಯನ್ ಹಾಗೂ ಮಿಲನ್‍ನ ಡ್ಯೂಕ್ ಅಂಟೋನಿಯೋ ಮತ್ತು ಇತರ ಸಂಗಡಿಗರಿದ್ದ ಹಡಗು ಸಮುದ್ರ ಮಧ್ಯೆ ಬಿರುಗಾಳಿಯ ಹೊಡೆತಕ್ಕೆ ನಲುಗಿ ಹೋಗಿದೆ. ಇದಕ್ಕೆ ಕಾರಣ ಪ್ರೊಸ್ಪೆರೋ. ಆತನ ಉದ್ದೇಶವೆಂದರೆ ಅವರೆಲ್ಲಾ ತಾನು ವಾಸವಾಗಿದ್ದ ಆ ನಡುಗಡ್ಡೆಗೆ ಬರುವಂತಾಗಬೇಕು. ಅದಕ್ಕಾಗಿ ಅತ ತನ್ನ ಮಾಂತ್ರಿಕ ವಿದ್ಯೆಯನ್ನು ಬಳಸಿ ಚಂಡಮಾರುತವನ್ನೆಬ್ಬಿಸಿದ್ದಾನೆ. ಇದಕ್ಕೆ ಕಾರಣವಿದೆ. ಆತನಿಗೆ ಅವರಿಂದ ಅನ್ಯಾಯವಾಗಿದೆ.

ಮಿಲನ್‍ನ ಡ್ಯೂಕ್ ಪ್ರೋಸ್ಪೆರೋ ಪುಸ್ತಕಪ್ರಿಯ. ತನ್ನ ಓದಿನ ಹುಚ್ಚಿಗೆ ರಾಜ್ಯಭಾರವನ್ನು ಕಡೆಗಣಿಸುವಷ್ಟು ತೀವ್ರವಾದ ಜ್ಞಾನದಾಹಿ ಆತ. ಹಾಗಾಗಿ ತನ್ನ ಆಡಳಿತ ನಿರ್ವಹಣೆಯಲ್ಲಿ ಸಹೋದರ ಅಂಟೋನಿಯೋನ ನೇಮಿಸಿಕೊಂಡಿದ್ದ. ಆದರೆ ಕೃತಘ್ನನಾದ ಆತ ವರ್ಷಗಳ ಹಿಂದೆ ನೇಪಲ್ಸ್‍ನ ಅಲೆನ್ಸೋ ಜೊತೆ ಸೇರಿ ಮೋಸದಿಂದ ಪ್ರೋಸ್ಪೆರೋನನ್ನು ಮತ್ತು ಆತನ ಮೂರುವರ್ಷದ ಮಗಳಾದ ಮಿರಿಂಡಾಳನ್ನು ದೋಣಿಯೊಂದರಲ್ಲಿ ಹಾಕಿ ನಡುಗಡ್ಡೆಯೊಂದಕ್ಕೆ ಸಾಗಹಾಕಿದ. ತಾನು ಮಿಲನ್‍ನ ಡ್ಯೂಕ್ ಪದವಿಯನ್ನು ಧರಿಸಿದ.ಆ ಸಮಯದಲ್ಲಿ ಪ್ರೋಸ್ಪೆರೋನ ಆತ್ಮೀಯನೂ ಆತನ ಶುಭಾಕಾಂಕ್ಷಿಯೂ ಜೊತೆಗೆ ಪ್ರೋಸ್ಪೆರೋನ ಪುಸ್ತಕ ಪ್ರೀತಿಯನ್ನು ಮನಗಂಡಿದ್ದ ಗೋಂಜೆಲೋ ಕೆಲವು ಪುಸ್ತಕ ದೋಣಿಯಲ್ಲಿ ಹಾಕಿದ್ದು ಪ್ರೋಸ್ಪೆರೋನ ಅದೃಷ್ಟವಾಗಿ ಬಂತು.
ನಡುಗಡ್ಡೆಯಲ್ಲಿ ಯಕ್ಷಿಣಿ ವಿದ್ಯೆಯನ್ನು ಸಾದರಪಡಿಸಿದ ಪುಸ್ತಕದ ನೆರವಿನಿಂದ ಪ್ರೋಸ್ಪೆರೋ ಮಾಂತ್ರಿಕ ಕಲೆಯಲ್ಲಿ ಪಾರಂಗತನಾದ. ಅಲ್ಲಿ ಪ್ರೋಸ್ಪೆರೋ ಮತ್ತು ಮಿರಿಂಡಾ ಬೇರೆ ಮನುಷ್ಯ ಮಾತ್ರದವರ ಸಹವಾಸವಿಲ್ಲದೇ ಬದುಕಬೇಕಾಗುತ್ತದೆ. Sಥಿಛಿoಡಿಚಿx ಎಂಬ ಮಾಟಗಾತಿ ಮತ್ತಾಕೆಯ ಮಗ ಕೆಲಿಬಾನ್ ಬಿಟ್ಟರೆ ಬೇರೆ ನರಮನುಷ್ಯರಾರೂ ಅಲ್ಲಿರಲಿಲ್ಲ. ಅದಕ್ಕಾಗಿ ಕೆಲಿಬ್ಯಾನ್‍ನನ್ನು ಪ್ರೋಸ್ಪೆರೋ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾನೆ. ಅಲ್ಲಿ ಆತನಿಗೆ ಏರಿಯಲ್ ಎಂಬ ಗಾಳಿದೆವ್ವವೊಂದರ ಕೈವಶವಾಗುತ್ತದೆ. ಆದರೆ ಪ್ರೋಸ್ಪೆರೋ ಸಜ್ಜನ. ಸುಸಂಸ್ಕøತ. ತನ್ನ ಇಂದ್ರಜಾಲದ ವಿದ್ಯೆಯನ್ನೆಂದೂ ಕೆಡಕು ಮಾಡಲು ಬಳಸುವುದಿಲ್ಲ. ಬದಲಾಗಿ ಏರಿಯಲ್ ಎಂಬ ಗಾಳಿದೆವ್ವವನ್ನು ತನ್ನ ಕ್ಷುದ್ರ ಅನುಜ್ಞೆಗಳನ್ನು ಪಾಲಿಸದ ಕಾರಣ ಮಾಟಗಾತಿ ಸೈಕೋರೆಕ್ಸ್ ಆತನನ್ನು ನಡುಗಡ್ಡೆಯಲ್ಲಿ ಬಂಧಿಸಿಡುತ್ತಾಳೆ. ಪ್ರೋಸ್ಪೆರೋ ತನ್ನ ಯಕ್ಷಿಣಿ ವಿದ್ಯೆಯ ಸಹಾಯದಿಂದ ಆತನನ್ನು ಬಂಧಮುಕ್ತಗೊಳಿಸುತ್ತಾನೆ. ಪ್ರತ್ಯೂಪಕಾರವಾಗಿ ಏರಿಯಲ್ ಪ್ರೋಸ್ಪೆರೋನಿಗೆ ಸಹಾಯ ಮಾಡುತ್ತದೆ. ಆದರೆ ಕೆಲಿಬ್ಯಾನ್ ತಾಯಿಯಂತೆ ದುರುಳ ಬುದ್ಧಿಯನ್ನು ಪ್ರದರ್ಶಿಸಿ ಮಿರಿಂಡಾಳ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸುತ್ತಲೇ ಕೋಪಗೊಂಡ ಪ್ರೊಸ್ಪೆರೋ ಆತನನ್ನು ಬಂಡೆಗಲ್ಲಿಗೆ ಬಂಧಿಸಿ ಕೆಲಸಗಾರನಂತೆ ಮನೆಗೆಲಸಕ್ಕೆ ನೇಮಿಸುತ್ತಾನೆ. ಮನೆಯ ಮಗನಂತೆ ಪಾಲಿಸಿದ ಆತನ ದುರ್ವರ್ತನೆ ಪ್ರೋಸ್ಪೆರೋನ ನಿಷ್ಠುರ ನಿರ್ಧಾರಕ್ಕೆ ಕಾರಣವಾಗುತ್ತದೆ. ಆದರೆ ಏರಿಯಲ್ ಪ್ರೋಸ್ಪೆರೋನ ಸಹಾಯವನ್ನು ಮರೆಯುವುದಿಲ್ಲ. ಆತನ ಆಜ್ಞೆಯಂತೆ ಬಿರುಗಾಳಿ ಎಬ್ಬಿಸಿ ಹಡಗನ್ನು ನಡುಗಡ್ಡೆಗೆ ಸೆಳೆದು ತರುತ್ತದೆ. ಹಡಗಿನಲ್ಲಿದ್ದವರೆಲ್ಲ ಜೀವಭಯದಿಂದ ಪರದಾಡುತ್ತಿರುವುದ ನೋಡಿದ ಮಿರಿಂಡಾ ಸಂತಾಪ ವ್ಯಕ್ತಪಡಿಸುತ್ತಾಳೆ. ಪ್ರೋಸ್ಪೆರೋ ತನ್ನ ಹಿಂದಿನ ಕಥೆಗಳನ್ನೆಲ್ಲಾ ಆಗ ಬಿಚ್ಚಿಡುತ್ತಾನೆ. ಇದು ಶೇಕ್ಸಪಿಯರ ಬರೆದ ಕೊನೆಯ ನಾಟಕ ಟೆಂಪೆಸ್ಟ್‍ನ ಕಥಾಹಂದರ, ನಾಟಕದ ಮೊದಲ ಅಧ್ಯಾಯ.

ಮೊದಲ ದೃಶ್ಯವನ್ನು ಹಾಸ್ಯದೊಂದಿಗೆ ಬೆರೆಸಿ ಹೇಳುವ ಶೇಕ್ಸಪಿಯರ ಅದನ್ನು ಮನೋಹರವಾಗಿ ಕಟ್ಟಿಕೊಡುತ್ತಾನೆ. ಹಡಗಿನಲ್ಲಿಯ ನಾವಿಕರ ಜೀವ ಭಯದ ಚೀರಾಟ ಕೇಳಿದ ಮಿರಿಂಡಾ ದುಃಖಿತಳಾಗಿದ್ದಾಳೆ. ಆಕೆಗೆ ತನ್ನ ತಂದೆ ಪ್ರೊಸ್ಪೆರೋ ಈ ಭಯಂಕರ ಚಂಡಮಾರುತಕ್ಕೆ ಕಾರಣವೆಂಬ ಅರಿವಿಲ್ಲ. ಪ್ರೊಸ್ಪೆರೋ ಈಗ ಹಿಂದಿನ ಕಥೆಯನ್ನು ತೆರೆದಿಡುತ್ತಾನೆ. ತನ್ನ ಡ್ಯೂಕ್ ಪದವಿಯನ್ನು ಮೋಸದಿಂದ ಕಸಿದುಕೊಂಡ ತನ್ನ ಸಹೋದರ ಆಂಟೋನಿಯೋ ಆತನ ಕುತಂತ್ರ ಅದಕ್ಕೆ ಸಹಾಯ ಮಾಡಿದ ನೇಪಲ್ಸ್‍ನ ಅಲೆನ್ಸೋ ವಿರುದ್ದ ಆತನಿಗೆ ಕೋಪವಿದೆ. ಇಲ್ಲಿ ಬದುಕಿನ ಜಿಜ್ಞಾಸೆ ಕೂಡಾ ಪ್ರತಿಬಿಂಬಿಸಿದೆ.
ಬಿರುಗಾಳಿಯ ಹೊಡೆತಕ್ಕೆ ಹಡಗು ನಡುಗಡ್ಡೆಗೆ ಬಂದಪ್ಪಳಿಸುತ್ತದೆ. ಅಲ್ಲಿ ಅಲೆನ್ಸೋನ ಪುತ್ರ ಫರ್ಡಿನಾಂಡ ಗುಂಪಿನಿಂದ ಕಣ್ಮರೆಯಾಗುತ್ತಾನೆ. ನೀರಿನಲ್ಲಿ ಮುಳುಗಿಹೋದನೆಂದು ಉಳಿದವರು ಭಾವಿಸುತ್ತಾರೆ. ಪ್ರೋಸ್ಪೆರೋಗೆ ಅನ್ಯಾಯಮಾಡಿದ ಕಾರಣ ತನ್ನ ಪುತ್ರನನ್ನು ಕಳೆದುಕೊಂಡೆನೆಂಬ ಪಶ್ಚಾತ್ತಾಪದ ಕುದಿಯಲ್ಲಿ ಅಲೆನ್ಸೋ ಬೇಯುತ್ತಾನೆ. ತನ್ನ ಸಹೋದರ ಅಂಟೋನಿಯೋ ಮೋಸವನ್ನು ಆತನಿಗೆ ಮನಗಾಣಿಸುವ ಪ್ರೋಸ್ಪೆರೋ ಆತನ ವಿರುದ್ಧ ಸೇಡು ಮಸೆಯುವುದಿಲ್ಲ. ಕ್ಷಮಿಸಿಬಿಡುತ್ತಾನೆ. ಅದೃಷ್ಟವಶಾತ ಫರ್ಡಿನಾಂಡ್ ಸಾಯದೇ ಮಿರಿಂಡಾಳೊಂದಿಗೆ ಮುಖಾಮುಖಿಯಾಗುತ್ತಾನೆ ಆತನಲ್ಲಿ ಪ್ರೇಮಭರಿತಳಾಗುವ ಆಕೆ ಅದನ್ನು ಮುಚ್ಚುಮರೆ ಇಲ್ಲದೇ ವ್ಯಕ್ತಪಡಿಸುತ್ತಾಳೆ. ಪರಸ್ಪರ ಪ್ರೀತಿಯಲ್ಲಿ ಬೀಳುವ ಆ ಜೋಡಿ ಮುಂದೆ ಕುಟುಂಬಗಳ ವೈಮನಸ್ಸುಗಳನ್ನು ನಿವಾರಿಸಿ ಒಗ್ಗೂಡಿಸುತ್ತವೆ, ಮಗ ಬದುಕಿರುವ ಸಂಗತಿ ತಿಳಿದ ಅಲೆನ್ಸೋ ವಿವಾಹಕ್ಕೆ ಸಮ್ಮತಿಸುತ್ತಾನೆ. ವಿವಾಹ ಪೂರ್ವ ಮಿರಿಂಡಾ ಮತ್ತು ಫರ್ಢಿನಾಂಡ ತಮ್ಮ ನೈತಿಕತೆಯನ್ನು ಕಳೆದುಕೊಳ್ಳದಂತೆ ತಂದೆ ಪ್ರೋಸ್ಪೆರೋ ಕಾಳಜಿ ವಹಿಸುತ್ತಾನೆ. ಮುಂದೆ ಪ್ರೋಸ್ಪೆರೋ ಕಳೆದುಕೊಂಡ ಡ್ಯೂಕ್ ಪದವಿಯೂ ಆತನ ಪಾಲಿಗೆ ಒದಗಿ ನೇಪಲ್ಸ್ ಮತ್ತು ಮಿಲನ್ ನಡುವೆ ಬಾಂಧವ್ಯ ಬೆಸೆದು ಕಥೆ ಸುಖಾಂತಗೊಳ್ಳುತ್ತದೆ.

ಪ್ರೋಸ್ಪೆರೋ ನಾಟಕದ ಪ್ರಮುಖ ಪಾತ್ರ. ನಾಟಕದ ಪ್ರತಿಯೊಂದು ಘಟನೆಗಳು ಆತನ ಮಾಂತ್ರಿಕ ಶಕ್ತಿ ಹಾಗೂ ಇಚ್ಛೆಯಂತೆ ನಡೆಯುತ್ತವೆ. ತನ್ನಲ್ಲಿ ಅಗಾಧವಾದ ಶಕ್ತಿ ಇದ್ದಾಗಲೂ ಅದನ್ನಾತ ಕೇಡು ಮಾಡಲು ಬಳಸಿಕೊಳ್ಳುವುದಿಲ್ಲ. ಆತನ ಇಂದ್ರಜಾಲ ವಿದ್ಯೆ ಸಂಪೂರ್ಣ ಬೌದ್ಧಿಕತೆಯಿಂದ ಕೂಡಿದ್ದು ತನ್ನ ವೈರಿ ತನ್ನ ಸಾಮ್ರಾಜ್ಯ ಕಬಳಿಸಿದ ಅಂಟೋನಿಯೋನನ್ನು ಆತ ಕ್ಷಮಿಸುತ್ತಾನೆ.ಸ್ನೇಹ ಮತ್ತು ಪ್ರೇಮದ ಸಾರವನ್ನು ಶ್ರುತಪಡಿಸುತ್ತಾನೆ. ದ್ವೇಷವನ್ನು ಕೊನೆಗಾಣಿಸುತ್ತಾನೆ. ಅದರೊಂದಿಗೆ ಬರಿಯ ಜ್ಞಾನಿಯಾಗಿ ಮಾತ್ರ ಆತ ಕಾಣುವುದಿಲ್ಲ. ನೈತಿಕತೆಯನ್ನು ಎತ್ತಿ ಹಿಡಿಯುವ ಸದ್ಗುಣಿಯಾಗಿ ಆತನ ಚಿತ್ರಿಸಿದ್ದಾನೆ ಶೇಕ್ಸಪಿಯರ್. ತನ್ನ ಮಗಳು ಮಿರಿಂಡಾಳ ಅತ್ಯಾಚಾರಕ್ಕೆ ಪ್ರಯತ್ನಿಸಿದ ಕ್ಯಾಲಿಬಾನ್‍ನನ್ನು ಶಿಕ್ಷಿಸುತ್ತಾನೆ. ವಿವಾಹಪೂರ್ವ ಮಿರಿಂಡಾ ಪರ್ಢಿನಾಂಡನೊಂದಿಗೆ ಅತಿಯಾಗಿ ಬೆರೆಯದಂತೆ ಕಾಳಜಿವಹಿಸುತ್ತಾನೆ. ಮಗಳನ್ನು ಪ್ರೀತಿಯಿಂದ ಕಾಳಜಿಯಿಂದ ಸಲುಹಿ ಒಳ್ಳೆಯ ತಂದೆಯಾಗುತ್ತಾನೆ. ಹೀಗೆ ಎಲ್ಲ ಸಚ್ಚಾರಿತ್ಯಗಳ ಸಂಗಮದಂತೆ ಆತ ಕಂಗೊಳಿಸುತ್ತಾನೆ.
ಈ ಪಾತ್ರ ಶೇಕ್ಸಪಿಯರನ ವ್ಯಕ್ತಿತ್ವದೊಂದಿಗೆ ತಳಕುಹಾಕಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಪ್ರೋಸ್ಪೆರೋ ಒಬ್ಬ ಮುದುಕ. ಆತನ ಜೀವನಾನುಭವ, ಧ್ಯಾನಸ್ಥ ಹಾಗೂ ತಾತ್ವಿಕ ಚಿಂತನೆಗಳು ಆತನಲ್ಲಿ ವೈಶಾಲ್ಯತೆಯನ್ನು ಬೆಳೆಸುತ್ತವೆ. ಹಾಗೇ ಶೇಕ್ಸಪಿಯರ ತನ್ನ ಸ್ವಂತ ಬದುಕಿನಲ್ಲಿಯೂ ಉದ್ದಕ್ಕೂ ತನ್ನನ್ನು ಮೋಸಗೊಳಿಸಿದ, ಕಷ್ಟನೀಡಿದ ವ್ಯಕ್ತಿಗಳನ್ನು ಕ್ಷಮಿಸಿ ಉದಾತ್ತತೆ ಮೆರೆಯುವ ಮನಸ್ಥಿತಿ ಹೊಂದಿದ್ದು ಸೂಕ್ಷ್ಮವಾಗಿ ಇಲ್ಲಿ ಪ್ರತಿಪಾದಿಸಿದಂತಿದೆ. ಕ್ಷಮೆ ಯಾವಾಗಲೂ ಅಸಂತೋಷವನ್ನು ನಾಶಮಾಡಿ ಬದುಕನ್ನು ಸಹ್ಯವಾಗಿಸುತ್ತದೆ.

ಮಿರಿಂಡಾ ಕೂಡಾ ಎಲ್ಲ ಆದರ್ಶಮಯಗುಣಗಳ ಹೊಂದಿದ ಸ್ತ್ರೀ ಪಾತ್ರವಾಗಿ ಮೂಡಿಬಂದಿದೆ.ಸುಂದರಿಯಾದ ಆಕೆ ಫರ್ಡಿನಾಂಡನನ್ನು ಕಂಡೊಡನೆ ಆತನಲ್ಲಿ ಮೋಹಿತಳಾಗಿ ಅದನ್ನು ಮುಚ್ಚುಮರೆಯಿಲ್ಲದೇ ಆಧುನಿಕ ಹೆಣ್ಣುಗಳಂತೆ ನಾಟಕೀಯತೆ ಪ್ರದರ್ಶಿಸದೇ ತಟ್ಟನೇ ವ್ಯಕ್ತಪಡಿಸುವ ರೀತಿ, ಹಡಗಿನಲ್ಲಿಯ ನಾವಿಕರ ಕುರಿತು ಆಕೆಯ ಅನುಕಂಪ ಎಲ್ಲವೂ ಅವಳೊಬ್ಬ ಸಾದಾ ಸರಳ ಸ್ತ್ರೀಯೆಂಬುದ ತೋರುತ್ತವೆ.
ಟೆಂಪೆಸ್ಟ್ ಐದು ಅಂಕಗಳಲ್ಲಿ ಹೆಣೆಯಲ್ಪಟ್ಟ ನಾಟಕ. ಶೇಕ್ಸಪಿಯರ ತನ್ನ ಬದುಕಿನ ಕೊನೆಯ ದಿನಗಳಲ್ಲಿ ಅಂದರೆ ಜೀವನದಲ್ಲಿ, ಹಾಗೂ ನಾಟಕಕಾರನಾಗಿ ಸಾಕಷ್ಟು ಪರಿಪಕ್ವವಾಗಿದ್ದ ಕಾಲದಲ್ಲಿ ಈ ನಾಟಕ ರಚಿಸಿದ. ನಾಟಕದ ಪ್ರಮುಖ ಪರಿಕಲ್ಪನೆ ಕೇಡುಂಟುಮಾಡುವ ದುರ್ಜನರನ್ನು ಕ್ಷಮಿಸಿ ಅವರ ವ್ಯಕ್ತಿತ್ವವನ್ನು ಶ್ರೇಷ್ಠಗೊಳಿಸುವುದು.. ಬದುಕಿನ ಎಲ್ಲ ಏರಿಳಿತಗಳ ಹಾದಿಯನ್ನು ಸಾಗಿ ಕಂಡುಂಡ ಅನುಭವಗಳಿಂದ ಗಳಿಸಿದ ಮುತ್ಸದ್ದಿತನ, ಸ್ಥಿತಪ್ರಜ್ಞತೆ ಪ್ರಬುದ್ಧತೆ ಎಲ್ಲ ಸಾರವನ್ನು ಒಳಗೊಂಡ ನಾಟಕವೆಂತಲೇ ಪರಿಭಾವಿಸಲ್ಪಡುವ ಈ ನಾಟಕದ ಮುಖ್ಯ ಸಾರ ಕ್ಷಮೆ, ಜೀವನದಲ್ಲಿ ರಾಜಿಯಾಗುವಿಕೆ, ಪಾಪದ ಪ್ರಾಯಶ್ಚಿತ್ತ, ಯೌವನದ ಕಾಲದ ಪ್ರೇಮತುಡಿತಗಳಿಂದಾಗುವ ಎಡವುವಿಕೆ ಇತ್ಯಾದಿಗಳ ಸಮರ್ಪಕ ನಿರ್ವಹಣೆ.

ನಾಗರೇಖ ಗಾಂವಕರ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x