ಅವರೆಲ್ಲಿ, ಇವನೆಲ್ಲಿ…???: ಬಸವರಾಜ ಕಾಸೆ

ಅನಿಲ್ ಮತ್ತು ಸುನೀಲ್ ಕೆಲಸ ಮಾಡುವ ಕಂಪನಿ ಮಾಲೀಕನ ಮಗನ ಅದ್ದೂರಿ ಮದುವೆ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಸರದಿ ಸಾಲಿನಲ್ಲಿ ನಿಂತು ಶುಭಾಶಯ ಕೋರಿದ ನಂತರ ಔತಣಕೂಟಕ್ಕೆ ಆಗಮಿಸಿದರು. ವಿಧ ವಿಧವಾದ ಭಕ್ಷ್ಯ ಭೋಜನಗಳಿಂದ ಕೂಡಿದ ರುಚಿಯ ಪರಿಮಳ ಸುತ್ತಲೂ ಪಸರಿಸಿತ್ತು. ಎರಡು ನಿಮಿಷ ನಿಂತು ನೋಡಿದ ಸುನೀಲಗೆ ಆಶ್ಚರ್ಯ.

“ಅರೇ ಅನಿಲ್, ಅಲ್ಲಿ ನೋಡೋ. ರಾಮಣ್ಣ, ಶಾಮಣ್ಣ, ಸೀನ ಎಲ್ಲಾ ಇಲ್ಲೇ ಇದಾರೆ”

“ಎಲ್ಲೋ”

“ಆ ಕಡೆ ಮತ್ತು ಈ ಕಡೆ ಎರಡು ಕೌಂಟರು ನೋಡೋ”

ಅತ್ತಿತ್ತ ನೋಡಿ ಹಿಂದೆ ತಿರುಗಿದ ಅನಿಲ್ “ಓಹೋ, ಹೌದಲ್ವಾ? ಅಪರೂಪಕ್ಕೆ ಅಂತ ಒಂದು ಮದುವೆಗೆ ಬಂದರೆ ಇಲ್ಲೂ ಇವರೇ ಇದ್ದಾರೆಲೋ ಮಗಾ”

“ಸರಿ ಬಾರೋ, ಏನು ಬೇಕೋ ಅದನ್ನು ೨೪ ಸಲ ವಿಚಾರಿಸಿ ಚೆನ್ನಾಗಿ ಬಡಿಸ್ತಾರೆ, ಗಡದ್ದಾಗಿ ತಿನ್ನೋಣ”

“ನಾ ಬರಲ್ಲ ಕಣೋ, ಹೋಗಿ ತಿನ್ನಕೊಂಡು ಬಾ. ರಿಸ್ಪಶನ್ ಹಾಲ್ ಅಲ್ಲಿ ಇರತೀನಿ”

“ಯಾಕೋ, ಊಟ ಮಾಡಲ್ವಾ?”

“ಇಲ್ಲ ಮಗಾ, ಆ ಮುಖಗಳನ್ನು ನೋಡಿ ಊಟ ಮಾಡೋಕೆ ಮನಸ್ಸು ಬರತಿಲ್ಲ”

“ಅವರ ಮುಖಕ್ಕೂ ಇದಕ್ಕೂ ಏನಪ್ಪಾ ಸಂಬಂಧ”

“ಹೊರನಾಡ ಸುಂಟರಗಾಳಿ, ಒಳನಾಡಿನ ತಣ್ಣನೆ ಹವೆಗೂ ಆಗಿ ಬರಲ್ವೋ”

“ಓಹೋ, ಏನು ಅವರು ಕಂಡರೆ ಭಯನಾ?”

“ಇಲ್ವೋ, ನೋಡಿದರೆ ಸಾಕು. ಹಾಗೆ ಅನಿಲ್, ಹೀಗೆ ಅನಿಲ್ ಅಂತ ಬಂದು ಮಾತಾಡಿಸ್ತಾರೆ”

“ಒಳ್ಳೆಯದು ಅಲ್ವಾ, ಮತ್ತೆ ಇನ್ನೇನು ಪ್ರಾಬ್ಲಮು”

“ನಾವು ಏನೋ ಸ್ಟ್ಯಾಂಡರ್ಡ ಆಗಿ ಬಂದಿದೀವಿ. ನಮ್ಮ ಪರಿಚಯದವರು, ಕಂಪನಿ ಸ್ಟಾಪ್, ಪ್ರೆಂಡ್ಸ ಅವರು ಇವರು ಎಲ್ಲಾ ಇಲ್ಲಿ ಬಂದೀರತಾರೆ. ಅವರ ಎದುರು ಒಬ್ಬ ಊಟ ಬಡಿಸುವ ಸಪ್ಲೈಯರ್ ಬಂದು ಮಾತಾಡಿಸಿದರೆ ಹೇಗೆ ಆಗಲ್ಲ ನೀನೇ ಹೇಳು”

“ಲೋ ಅದರಲ್ಲಿ ಏನಿದೆ, ಅವರು ಪ್ರೆಂಡ್ಸೇ ತಾನೇ? ನೀನು ನಾನು ಇಬ್ಬರೂ ಕೂಡ ಅವರ ಜೊತೆಗೆ ಸಪ್ಲೈ ಕೆಲಸ ಮಾಡಿ ಬಂದವರೇ”

“ಅದು ಆಗ ಕಣೋ, ಸಮಯ ಸಂದರ್ಭಕ್ಕೆ ತಕ್ಕ ಹಾಗೆ ನಾವು ಬದಲಾಗಬೇಕು. ಬದಲಾದ ಕಾಲಘಟ್ಟದಲ್ಲಿ ನಾವು ಈಗ ಅವರಿಗಿಂತ ಒಳ್ಳೆಯ ಲೆವೆಲ್ ಅಲ್ಲಿ ಇದೀವಿ.”

“ಓಹೋ, ಆ ಸೀನನ ಜೊತೆಗೆ ಹೊರಗೆ ಇವಾಗಲೂ ಹರಟೆ ಹೊಡಿತೀಯಾ, ಇಲ್ಲಿ ನೋಡಿದರೆ ಲೆವೆಲ್ ಅಂತಿಯೆಲ್ಲೋ”

“ಎಲ್ಲಿ ಹೇಗೆ ಇರಬೇಕು ಹಾಗೆ ಇದ್ದರೆ ಚೆಂದ ಮಗಾ. ಅವನು ಇಲ್ಲಿ ಒಬ್ಬ ಸಪ್ಲೈಯರ್ ಮತ್ತು ನಾವು ಗೆಸ್ಟ್ ಅಷ್ಟೇ”

“ಸ್ನೇಹ ಅನ್ನೋದು ಎಲ್ಲಾ ಬೇಧ ಭಾವಗಳನ್ನು ದಾಟಿರೋದು ಅಲ್ವಾ ಅನಿಲ್”

“ಇಲ್ಲ, ಎಲ್ಲಾದಕ್ಕೂ ಎಲ್ಲಾ ಕಡೆ ಮಿತಿಗಳಿವೆ. ಮಿತಿ ಮೀರುವ ಅವಕಾಶ ಕೊಡದೇ ಇರೋದು ನಮ್ಮ ವ್ಯಕ್ತಿತ್ವನೇ ಎತ್ತಿ ಹಿಡಿಯುತ್ತೆ”

“ಲೋ ನೀನು ಏನು ಈಗ ದೊಡ್ಡ ಐಎಎಸ್ ಆಫೀಸರ್ ಆಗಿಲ್ಲ, ಆಗರ್ಭ ಶ್ರೀಮಂತನೂ ಅಲ್ಲ. ಸುಮ್ಮನೆ ಬಾರಪ್ಪಾ ನೀನು”

“ಹಂಗಲ್ವೋ, ಜನ ನಮ್ಮ ಬಗ್ಗೆ ತಪ್ಪಾಗಿ ತಿಳಕೊಂತಾರೆ. ಅವರ ಜೊತೆಗೆ ಮಾತಾಡಿದರೆ ನನ್ನನ್ನು ಅದೇ ಲೆವೆಲಗೆ ಇಳಿಸಿ ಚೀಪ್ ಆಗಿ ನೋಡತಾರೆ ಸೋ ನಾವು ಇದನ್ನು ಎಲ್ಲಾ ಅರ್ಥ ಮಾಡಕೊಂಡು ನಮ್ಮತನ ಕಾಪಾಡಕೋಬೇಕು”

“ಜನ ಯಾರು ಏನು ಅಂದುಕೊಂತಾರೋ ಗೊತ್ತಿಲ್ಲ ಮಗಾ, ಆದರೆ ನಾವು ಏನು ಅಂದುಕೊಂಡಿದೀವಿ ಮತ್ತು ಹೇಗೆ ನಡಕೊಂತೀವಿ ಅನ್ನೋದು ನಿಜಕ್ಕೂ ಮುಖ್ಯ ಸೋ ನೀನು ಇವಾಗ ಯೋಚನೆ ಮಾಡತಾ ಇರುವ ರೀತಿ ಚೂರು ಸರಿಯಿಲ್ಲ”

“ನನಗೆ ಹಾಗೆಲ್ಲಾ ಏನು ಇಲ್ವೋ, ಒಂದು ಸಮಾಜದಲ್ಲಿ ನಾವು ಬದುಕತಾ ಇದೀವಿ ಅಂದಾಗ ವೈಯಕ್ತಿಕ ಭಾವನೆಗಳಿಗಿಂತ ಸಾರ್ವಜನಿಕ ಗ್ರಹಿಕೆಗಳು ಹಾಗೆ ಹೀಗೆ ಮಾತಾಡತಾವೆ ನಾವು ಹೇಗೆ ಅನ್ನೋದು”

“ನಡೆದು ಬಂದ ದಾರಿನಾ ಮರಿಬೇಡ ಮಗಾ, ಅವೇ ಮುಂದಕ್ಕೆ ಯಾವಾಗಲೂ ಕೈ ಹಿಡಿದು ನಡೆಸೋದು. ಎಲ್ಲಾ ಕೆಲಸಕ್ಕೂ ತನ್ನದೇ ಆದ ಬೆಲೆ ಇರುತ್ತೆ. ಊಟ ಬಡಿಸೋದು ಎಂತಹ ಒಂದು ಶ್ರೇಷ್ಠವಾದ ಕೆಲಸ. ಆ ಕೆಲಸ ಮಾಡೋವನು ಕೀಳಾಗಿ ನೋಡುವ ನಿನ್ನಲ್ಲಿಯೇ ಕೀಳರಿಮೆ ಇದೆ ಅಂತ ನನಗೆ ಅನಿಸುತ್ತೆ”

“ನೀನು ಏನಾದರೂ ಅಂದುಕೊಳ್ಳೋ ಪರವಾಗಿಲ್ಲ. ನನ್ನ ವಿಚಾರ ನನ್ನ ಪ್ರಕಾರ ಸರಿಯಾಗಿ ಇದೆ. ಮರ್ಯಾದೆಗೆ ಅಂಜಿ ಬದುಕುವವನು ನಾನು, ಎಲ್ಲಾ ಬಿಟ್ಟು ನಿಂತುಕೊಂಡವನು ಅಲ್ಲ.”

“ಮರ್ಯಾದೆ ಹೋಗೋಕೆ ನೀನೇನು ಒಬ್ಬ ಅಪರಾಧಿ ಜೊತೆಗೆ ಮಾತಾಡತೀಯಾ ಅಥವಾ ಕೆಟ್ಟವರ ಸಹವಾಸ ಮಾಡಿದ್ದೀಯಾ? ಅವನೇನು ಕಳ್ಳನಾ, ಸುಳ್ಳನಾ ಅಥವಾ ಕೊಲೆಗಡುಕನಾ? ಥೂ ಏನೋ ಹೇಳತೀಯಾ ನೀನು!!! ಇಂತಹ ಅನಿಸಿಕೆಗಳೇ ಅಂತರಗಳನ್ನು ಸೃಷ್ಟಿಸಿ ದಾರಿ ತಪ್ಪಿಸೋದು.”

“ನಿನ್ನ ಅನಿಸಿಕೆ ನಿಂದು ಕಣೋ, ನನಗೆ ನಂದು”

“ನನಗೆ ಏನೋ ಹಾಗೆ ಅನಿಸ್ತಾ ಇಲ್ಲ, ನಿನ್ನ ಅನಿಸಿಕೆಗಳನ್ನೇ ಉಳಿದವರು ಮೇಲೂ ಹೇರಿ ಅಥವಾ ನಿನ್ನ ನಡೆ ನುಡಿ ಪರಿಣಾಮ ಬೀರಿ ಉಳಿದವರು ಹಾಗೆ ನಡಕೊಂಡರೆ ಮತ್ತೊಂದು ವೃತ್ತಿಗಳ ನಡುವಿನ ಅಸಮಾನತೆ ಆಕ್ರೋಶವಾಗುತ್ತೆ”

“ಏನಾದರೂ ಆಗಲಿ, ನನ್ನ ಸಂಕಟ ನನಗೆ. ನನ್ನ ಮನಸ್ಸಿನ ತಳಮಳ ಅರ್ಥ ಆಗದ ನಿನಗೆ ಇಲ್ಲಿನ ಜನರ ಮನೋಭಾವವು ಗೊತ್ತಾಗಲ್ಲ”

“ನಿನ್ನದು ಮನೋಸ್ಥೈರ್ಯವೇ ಇಲ್ಲದ ಮಾನಸಿಕ ಸ್ಥಿತಿ ಕೀಳರಿಮೆ ಕಣೋ. ನಿನ್ನ ಬಗ್ಗೆ ಅದು ನಿನಗೆ ಇದೆ. ನೀನು ಸಹಜವಾಗಿ ಅವರನ್ನು ಪ್ರೀತಿಯಿಂದ ಮಾತಾಡಿಸಿದರೆ ಒಪ್ಪಕೊಂತಿದ್ದೆ ನಿನ್ನ ಮನೋಭಾವ ಉತ್ತಮ ಅಂತ. ಆವಾಗ ನಿನ್ನ ಉತ್ಸಾಹ ನೋಡಿ ಬೇರೆಯವರಿಗೂ ಹೆಚ್ಚಾಗುತ್ತೆ ಗೌರವ”

“ನೋಡು ಒಬ್ಬ ಯಜಮಾನ ಬಂದು ಕೂಲಿಯವನ ಕೂಲಿ ತರಹನೇ ಮಾತಾಡಿಸತಾನೆ. ಕೂಲಿಯವನು ಯಜಮಾನನ ಹೆಗಲು ಮೇಲೆ ಕೈ ಹಾಕಿ ಏನೋ ಮಚ್ಚಾ ಹೇಗೆ ಇದೀಯಾ ಅನ್ನಲ್ಲ”

“ಓಹೋ ತಮಗೆ ಆಗಲೇ ಆ ಅಭಿಪ್ರಾಯ ಬಂದು ಬಿಟ್ಟಿದೀಯಾ, ಆದರೆ ಒಳ್ಳೆಯತನ ಅನ್ನೋದು ಒಬ್ಬ ರಾಜ ಕೂಡ ಬಡವನ ಮನೆಗೆ ಬಂದು ಕುಶಲೋಪರಿ ವಿಚಾರಿಸೋದರಲ್ಲಿ ಸದ್ಗುಣಗಳು ಇರೋದು”

“ಹಾಗೆ ಮಾಡಿ ಅನುಕಂಪ, ಅಭಿಮಾನ ಗಿಟ್ಟಿಸಿಕೊಳ್ಳೋಕೆ ನಾನಿನ್ನೂ ರಾಜಕಾರಣಿ ಆಗಿಲ್ಲ ಮಗಾ, ಇರೋದರಲ್ಲೇ ಚೆನ್ನಾಗಿ ಇರುವ ನನ್ನ ನೀತಿಗಳು ನನಗೆ ಎಲ್ಲಕ್ಕಿಂತ ಬೆಸ್ಟ್”

“ಸರಿ ಆಯಿತು, ಹೋಗಪ್ಪಾ. ನಿನ್ನ ಅಂತಹವನ ಪ್ರೇಂಡಶಿಪ್ ಮಾಡಿದ ಪಶ್ಚಾತ್ತಾಪ ನನಗೆ ಆಗಲೇ ಶುರು ಆಗಿದೆ”

“ಸ್ಸಾರಿ ಮಗಾ, ನಿನಗೆ ಬದುಕೋದು ಹೇಗೆ ಅಂತ ಗೊತ್ತಿಲ್ಲ. ಈ ವಿಷಯ ನಮ್ಮಲ್ಲೇ ಇರಲಿ. ಆಚೆ ಇರತೀನಿ ಬಾ…” ಎಂದ ಅನಿಲ್ ಅಲ್ಲಿಂದ ಸೀದ ಹೊರ ನಡೆದ.

ಒಂದಿಷ್ಟು ಬೇಜಾರು ಮತ್ತೊಂದು ಇಷ್ಟು ಕೋಪದಿಂದ ಆತ ಹೋಗುತ್ತಿದ್ದನ್ನೇ ನೋಡುತ್ತಿದ್ದ ಸುನೀಲನ ನೆಮ್ಮದಿ ಹಾಳಾದಂತಾಗಿ ಮನಸ್ಸಲ್ಲಿ ನೂರಾರು ವಿಚಾರಗಳು ಓಡತೊಡಗಿದವು. ನೋಡುವ ದೃಷ್ಟಿ ಒಬ್ಬರಿಂದ ಒಬ್ಬರಿಗೆ ಬದಲಾಗುತ್ತಾದರೂ ಕೆಲವರ ದೃಷ್ಟಿ ಒಂದೇ ತರಹ ಇರುತ್ತೆ ಮತ್ತು ದೃಷ್ಟಿ ತಾಗಿಸಲು ಒಳಗೊಳಗೆ ಲೆಕ್ಕಾಚಾರ ಹಾಕುತ್ತಿರತಾರೆ. ಇದ್ದಕ್ಕಿದ್ದಂತೆ ತನ್ನದೇ ಜೀವನದಲ್ಲಿ ಹಿಂದೆ ನಡೆದ ಒಂದು ಘಟನೆ ಕಣ್ಣೆದುರು ಬಂದಂತೆ ಭಾಸವಾಯಿತು. ಅದು ಅದು ಅದು….!!!

ಏಳೆಂಟು ವರ್ಷಗಳ ಹಿಂದೆ ಪದವಿ ಓದಲೆಂದು ಬೆಂಗಳೂರಿಗೆ ಬಂದಿದ್ದ ಸುನೀಲ ತನ್ನ ಓದಿನೊಡನೆ ಕೋಣೆಯ ಬಾಡಿಗೆ, ಪುಸ್ತಕ, ಊಟ ತಿಂಡಿ ಇತರೆ ಖರ್ಚು ವೆಚ್ಚಗಳಿಗೆ ತಂದೆ ತಾಯಿಯನ್ನು ಅವಲಂಬಿಸದೆ ಮಧ್ಯಾಹ್ನ ಮೂರು ಗಂಟೆಗೆ ಕಾಲೇಜು ಬಿಟ್ಟ ನಂತರ ನಾಲ್ಕು ಘಂಟೆಯಿಂದ ಹೋಟೆಲ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಸಮಯದಲ್ಲಿ ತನ್ನದೇ ಊರಿನ ಸ್ನೇಹಿತನೊಬ್ಬ ಕೆಲಸಕ್ಕಾಗಿ ಅಲೆಯುತ್ತಿದ್ದಾಗ ಆತನ ಅರ್ಹತೆಗೆ ಅನುಗುಣವಾಗಿ ಕಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೆಲಸ ನೋಡಿ ಇರಲು ಕೂಡ ವ್ಯವಸ್ಥೆ ಮಾಡಿ ಕೊಟ್ಟಿದ. ಆದ್ದರಿಂದ ಇಬ್ಬರ ಆ ಗೆಳೆತನ ಇಲ್ಲಿಯೂ ಮುಂದುವರೆದಿತ್ತು. ಆದರೆ ಒಂದು ದಿನ ಸುನೀಲ ಹೋಟೆಲ್ ಅಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡ ಆತ ಕರೆ ಮಾಡಿ “ನಿನ್ನನ್ನು ನನ್ನ ಪ್ರೇಂಡ ಅಂತ ಹೇಳಕೊಳ್ಳೋಕೆ ನಾಚಿಕೆ ಆಗುತ್ತೆ. ನೀನೊಬ್ಬ ಜುಜುಬಿ ಹೋಟೆಲ್ ಅಲ್ಲಿ ಕೆಲಸ ಮಾಡೋವನು” ಹಾಗೆ ಹೀಗೆ ಅಂತ ಕೇವಲವಾಗಿ ಮಾತಾಡಿದ್ದು ಅಲ್ಲದೇ ಈ ವಿಷಯವನ್ನು ಊರಲ್ಲಿ ಎಲ್ಲರಿಗೂ ಹೇಳಿ ಸುದ್ದಿ ಆಗುವಂತೆ ಮಾಡಿದ್ದ ಆತ ಅವನ ಮತ್ತು ಅವರ ಕುಟುಂಬದ ಮಾನ ಮರ್ಯಾದೆ ಹರಾಜು ಹಾಕಿದೆ ಮತ್ತು ನಾನು ದೊಡ್ಡವನು ಎಂದು ಬೀಗತೊಡಗಿದ.

ಊರಿನವರು ಎಲ್ಲಾ ಫೋನ್ ಕರೆ ಮಾಡಿ ಮತ್ತು ಸುನೀಲನ ತಂದೆ ತಾಯಿಯ ಬಳಿ ಈ ಬಗ್ಗೆ ವಿಚಾರಿಸಿದರು. ತಂದೆ ತಾಯಿ ಬೇಜಾರು ಮಾಡಕೊಂಡಿರತಾರೆ ಅಂತ ಹಬ್ಬಕ್ಕೂ ಸಹ ಊರಿಗೆ ಹೋಗಿರಲಿಲ್ಲ. ನಂತರ ತುಂಬಾ ಒತ್ತಾಯದ ಬಳಿಕ ಹೋದ ಸುನೀಲಗೆ ಆಶ್ಚರ್ಯವೋ ಆಶ್ಚರ್ಯ..!!!

ಬಸ್ ಇಳಿದು ಮನೆಗೆ ಹೋಗುವ ದಾರಿಯಲ್ಲಿ ಸಿಕ್ಕ ಪರಿಚಯದ ಪ್ರತಿಯೊಬ್ಬರು ಗೌರವ ಅಭಿಮಾನದಿಂದ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದರು. ತದ ನಂತರ ಆತನಿಗೆ ಗೊತ್ತಾದ ವಿಷಯ ಊರಲ್ಲಿ ಅವನ ಅಪ್ಪ ಅಮ್ಮ “ಹೌದು ನನ್ನ ಮಗ ಬೆಂಗಳೂರಿಗೆ ಹೋಗಿ ಹಾಳಾಗಿಲ್ಲ, ಒಂದು ಕೆಟ್ಟ ಚಟ ಕಲಿತಿಲ್ಲ. ನಮ್ಮ ಹತ್ತಿರ ಒಂದು ರೂಪಾಯಿನೂ ಇಸಕೊಳ್ಳದೇನೇ ಅವನೇ ಕಷ್ಟಪಟ್ಟು ದುಡಿದು ತನ್ನದೇ ದುಡ್ಡಲ್ಲಿ ಓದುತ್ತಾ ಇದಾನೆ” ಅಂತ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದರ ಹಿಂದಿರುವ ತಂದೆ ತಾಯಿಯ ಪ್ರೀತಿ ವಾತ್ಸಲ್ಯಕ್ಕೆ ಮೊದಲ ಬಾರಿ ಕಣ್ಣೀರು ಹಾಕಿದ್ದ ಸುನೀಲಗೆ ತುಂಬಾ ಖುಷಿ ಆಗಿತ್ತು.

“ನಮ್ಮ ಮಗನಿಗೆ ಏನು ಬೇಕು ಏನು ಬೇಡ ಎಲ್ಲಾ ವ್ಯವಸ್ಥೆ ಮಾಡಿ ಕೊಟ್ಟರೂ ಓದಲಿಲ್ಲ, ಉಡಾಳ ಹುಡುಗರ ಸಹವಾಸ ಮಾಡಿ ಕಲಿಬಾರದು ಕಲಿತುಕೊಂಡು ಎಲ್ಲಾ ಕೆಡಿಸಕೊಂಡ. ಇದ್ದರೆ ನಿನ್ನಂತ ಮಗ ಇರಬೇಕು ಸುನೀಲ” ಎಂದು ಪಕ್ಕದ ಮನೆಯ ಹೆಂಗಸು ಹೇಳಿದಾಗ ತನ್ನ ಬಗ್ಗೆ ಕೇವಲವಾಗಿ ಮಾತಾಡಿದ ಅದೇ ಸ್ನೇಹಿತನ ಮನೆ ಮುಂದೆ ಎದೆಯುಬ್ಬಿಸಿ ತಿರುಗಾಡಿದ್ದ.

ಹೌದು ಆ ಸ್ನೇಹಿತ ತನ್ನ ಸ್ನೇಹವನ್ನು ಕಳೆದುಕೊಂಡು ಮುಂದೆ ಪಡಬಾರದ ಪಡಿಪಾಡಿಲು ಪಟ್ಟ. ಅವತ್ತೇ ಅವನ ನಡತೆಯ ಬಗ್ಗೆ ಮೂಡಿದ ಅಸಹ್ಯ ಆತನನ್ನು ನೋಡಿದಾಗಲೆಲ್ಲಾ ಸುನೀಲನಿಗೆ ವಾಕರಿಕೆ ತರಿಸುತ್ತಿತ್ತು ಎಂತೆಂತಹ ಜನ ಇರತಾರೆ ಅಂತ. ಮತ್ತೆ ಅವನನ್ನು ಎಂದೂ ಸಹ ಸುನೀಲ ತಿರುಗಿಯೂ ನೋಡಲಿಲ್ಲ. ಬದಲಾಗಿ ಆಡಿಕೊಳ್ಳುವವರ ಮುಂದೆ ಉತ್ತಮವಾಗಿ ಬಾಳುವ ಛಲ ಮೂಡಿತ್ತು.

ಇಂದು ಅಂತಹುದೇ ಮತ್ತೊಂದು ಘಟನೆ ತನ್ನೆದುರು.. ಆದರೆ ಈ ಸಲ ಬೇರೆ ಬೇರೆಯವರ ನಡುವೆ. ಆ ಮಟ್ಟಿಗೆ ಆಘಾತಕಾರಿ ಅಲ್ಲದಿದ್ದರೂ ಬಹುತೇಕ ಒಂದೇ ಮನಸ್ಥಿತಿ. ಇಂತಹವನು ಒಬ್ಬ ಮತ್ತೆ ನನ್ನ ಸ್ನೇಹಿತ ಹೇಗಾದ ಎಂದು ಯೋಚಿಸುವಷ್ಟರಲ್ಲಿ “ಸರ್ ಸರ್” ಎಂದು ಯಾರೋ ಕೂಗಿದಂತಾಯಿತು. ತಿರುಗಿ ನೋಡಲು ರಾಮಣ್ಣ ಇಷ್ಟಗಲ ಮುಖ ಅರಳಿಸಿ ನಗುತ್ತಾ ನಿಂತಿದ್ದ. ಇದೇ ಕೆಲಸ ಮಾಡಿಕೊಂಡೇ ಮಗಳನ್ನು ಇಂಜಿನಿಯರಿಂಗ್ ಓದಿಸಿ ಡಾಕ್ಟರ್ ಹುಡುಗನಿಗೆ ಮದುವೆ ಮಾಡಿ ಕೊಟ್ಟವರು ಈ ರಾಮಣ್ಣ. ಇವರನ್ನು ಕಂಡರೇನೇ ಒಂದು ಗೌರವ ಮತ್ತು ಅಭಿಮಾನ ಅದಾಗಿಯೇ ತುಂಬಿ ಬರುತ್ತೆ.

“ಅರೇ ರಾಮಣ್ಣ, ಹೇಗೆ ಇದೀರಿ” ಎಂದು ಕೈ ಕುಲುಕಿ ಯೋಗಕ್ಷೇಮ ಮಾತುಕತೆಯ ನಂತರ

“ಬಾರೋ ಊಟ ಮಾಡು” ಅಂತ ಆತನೇ ಪ್ಲೇಟ್ ತಗೊಂಡು ಒಂದು ಬಿಡದೇ ಎಲ್ಲಾ ಐಟಮ್ಸ್ ಬಡಿಸಿ ತಿನ್ನಲು ಕೊಟ್ಟ. ತಿನ್ನುತ್ತಾ ಶಾಮಣ್ಣ, ಸೀನ ಮೊದಲಾದವರ ಜೊತೆಗೂ ಬಹು ಆತ್ಮೀಯವಾಗಿ ಮಾತಾಡಿದ.

“ನಾಚಕೋಬೇಡ, ತಿನ್ನೋ”

“ಅವನಿಗೆ ಬದಾಮ ಬರ್ಫಿ, ಫೇಡಾ ಎಲ್ಲಾ ಸ್ವೀಟ್ಸ್ ಎರಡೆರಡು ಹಾಕಪ್ಪಾ”

“ನಮ್ಮ ಹುಡುಗ ಕಣ್ರೋ” ಹೀಗೆ ತುಂಬಾ ಸಲಿಗೆಯಿಂದ ತಂದೆ ತಾಯಿಯಂತೆ ತುಂಬಾ ಪ್ರೀತಿಯಿಂದ ಎಲ್ಲಾ ರೀತಿಯಿಂದನೂ ವಿಚಾರಿಸಿಕೊಂಡರು. ಅವರ ಪ್ರೀತಿಗೆ ಕಟ್ಟು ಬಿದ್ದ ಸುನೀಲ ಮೊದಲ ಬಾರಿಗೆ ಸಿಕ್ಕಾಪಟ್ಟೆ ಊಟ ಮಾಡಿದ. “ಅರೇ ನಾನು ಇಷ್ಟು ತಿಂತೀನಾ” ಅಂತ ಆತನಿಗೆ ಅನಿಸಿತು.

“ನೀನು ಚೆನ್ನಾಗಿ ಇದ್ದರೆ ಅದೇ ಖುಷಿ ಕಣೋ, ಆಗಾಗ ಫೋನ್ ಮಾಡತಾ ಇರು. ಏನಾದರೂ ತೊಂದರೆ ಇದ್ದರೆ ಹೇಳು ನಾವಿದೀವಿ” ಅಂತ ಮನಸಾರೆ ಧೈರ್ಯ ಉತ್ಸಾಹ ತುಂಬಿದಾಗ ಸುನೀಲನ ಮನಸ್ಸು ತುಂಬಿ ಬಂದಿತ್ತು. ಅಲ್ಲಿಂದ ಹೊರಡಲು ಸಿದ್ದವಾದಾಗ ಇನ್ನೂ ಸ್ವಲ್ಪ ಹೊತ್ತು ಇವರ ಜೊತೆಗೆ ಇರೋಣ ಅಂತ ಅನಿಸ್ತು. ಭಾರವಾದ ಹೆಜ್ಜೆಗಳನ್ನು ಇಟ್ಟು ಅಲ್ಲಿಂದ ಮುನ್ನಡೆದಾಗ ಆತನ ಕಣ್ಣಾಲಿಗಳು ಮತ್ತೊಮ್ಮೆ ಒದ್ದೆ ಆಗಿದ್ದವು.

ಈತ ಹೊರ ಬರುವುದನ್ನು ಕಂಡ ಅನಿಲ್ “ಎ ಸುನೀಲ, ಎ ಸುನೀಲ” ಅಂತ ಕರೆದು ಹಿಂದೆ ಓಡಿ ಬಂದರೂ “ಅವರೆಲ್ಲಿ, ಇವನೆಲ್ಲಿ” ಎಂದೆನಿಸಿ ತಿರುಗಿಯೂ ನೋಡದೆ ಇವನ ಸಹವಾಸ ಎಂದು ತನ್ನಷ್ಟಕ್ಕೆ ತಾ ಬಸ್ ಏರಿ ಮನೆಗೆ ನಡೆದ.

-ಬಸವರಾಜ ಕಾಸೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x