ಕನ್ನಡಿಗಂಟದ ಬಿಂದಿ: ಡಾ.ಅಜಿತ್ ಹರೀಶಿ

ಜೇಡ ತನ್ನೊಳಗಿನಿಂದ ತಾನು ಅಂಟನ್ನು ಸ್ರವಿಸುತ್ತಾ ಬಲೆ ನೇಯುತ್ತಲೇ ಇತ್ತು. ಸೂರ್ಯನ ಕಿರಣಗಳು ಬಲೆಯ ಮೇಲೆ ಬಿದ್ದಾಗ ಕಣ್ಣಿಗೆ ಬಣ್ಣದೋಕುಳಿಯಾಗುತ್ತಿತ್ತು. ದಿನವೂ ಅದೊಂದು ಚಿತ್ತಾಪಹಾರಿಯಾದ ದೃಶ್ಯವಾಗಿತ್ತು. ಆದರೆ ಇಂದೇಕೋ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಅನ್ನಿಸಿತು. ಕೆಲಸದ ರಾಜಮ್ಮ ಅದಾಗಲೇ ನನ್ನ ರೂಮಿಗೆ ಬಂದು ನೆಲ ಗುಡಿಸುತ್ತಿದ್ದಳು.

ರಾಜಮ್ಮ, ಮೇಲೆಲ್ಲಾ ನೋಡು, ಕಸ ಹೊಡೆಯೋದೇ ಇಲ್ಲ. ಹೇಳದೇ ಯಾವ ಕೆಲಸವನ್ನೂ ಇತ್ತೀಚೆಗೆ ನೀನು ಮಾಡಲ್ಲ' ತುಸು ಗಡಸು ಧ್ವನಿಯಲ್ಲಿ ಜೇಡರ ಬಲೆ ತೋರಿಸುತ್ತಾ ಹೇಳಿದೆ. ಅಯ್ಯೋ, ಇದೊಳ್ಳೆ ಆಯ್ತಲ್ಲಾ ಸಣ್ಣಮ್ಮೋರೆ, ನೀವೇ ಆರು ತಿಂಗಳ ಹಿಂದೆ ಅದೇ ಜೇಡರ ಬಲೆ ತೆಗೆದು ಚೊಕ್ಕ ಮಾಡಿದಾಗ ದೊಡ್ಡ ರಂಪಾಟ ಮಾಡಿದ್ರಲ್ವಾ?’ ಪ್ರಶ್ನಿಸಿದಳು ರಾಜಮ್ಮ.
`ಅವತ್ತಿಂದು ಅವತ್ತು, ಹೋಗ್ಲಿ ಬಿಡು. ಇವತ್ತು ಎಲ್ಲಾ ಕ್ಲೀನ್ ಮಾಡು’.
ಗಿಡ್ಡಿಯಾಗಿದ್ದ ಅವಳಿಗೆ ಮಾಡು ನಿಲುಕುತ್ತಿರಲಿಲ್ಲ. ಹಾಗಾಗಿ ನನ್ನ ರೂಮಿನಿಂದ ಮನೆಯೊಳಗೆ ಹೋಗಿ ಒಂದು ಸ್ಟ್ಯಾಂಡು ತಂದುಕೊಂಡಳು.

ಮನೆಯೊಳಗೆ ಹಾವು ಬಂದೈತಂತೆ, ದೊಡ್ಡಮ್ಮ ಹೇಳಿದರು. ಕಿಟಕಿ ಬಾಗಿಲು ಹಾಕ್ಕೊಂಡು ಇರಬೇಕಂತೆ'. ಅದೊಂದು ಕಡಿಮೆಯಾಗಿತ್ತು ಈ ಮನೆಗೆ…’
ಬಿಡ್ತು ಅನ್ರವ್ವಾ, ಯಾಕೋ ಈಗಿತ್ಲಾಗೆ ನೀವು ಒಂಥರಾ ಆಡ್ತೀರಪ್ಪಾ. ಅಪ್ಪ- ಅಮ್ಮೋರು, ಇರೋದು ಒಬ್ಬಳೇ ಮಗಳು ಅಂತ ಎಷ್ಟು ಚಂದ ರೂಮು ಕಟ್ಟಿಸಿ ಕೊಟ್ಟು ರಾಣಿಯಂತೆ ಇಟ್ಟವ್ರೇ, ನೀವೊಂದು...' ಕಾರಣ ಇಲ್ದೇ ಯಾರೂ ಏನೂ ಮಾಡಲ್ಲ, ತಿಳ್ಕೋ ರಾಜಮ್ಮ’
ಅದಾಗಲೇ ಅವಳು ಕೆಲಸ ಮುಗಿಸಿ ಹೊರಡುವ ಸನ್ನಾಹದಲ್ಲಿ ಇದ್ದಳು. ನಾನು ಸಣ್ಣವಳಿದ್ದಾಗಿನಿಂದಲೂ ನನ್ನನ್ನು ನೋಡಿದವಳು ಅವಳು.
`ಜಪ್ತಿ ಇರಲಿ, ರೂಮು ಮತ್ತು ಮನೆ ಮಧ್ಯೆ ಇರೋ ಕಿಟಕಿ ಬಾಗಿಲು ತೆಗಿಬೇಡ್ರಿ’ ಎಂದು ಇನ್ನೊಮ್ಮೆ ಜ್ಞಾಪಿಸಿ ರಾಜಮ್ಮ ಹೋದಳು.

ಅವಳು ಹೋಗಿದ್ದೇ ತಡ, ಚಾರ್ಜಿಗೆ ಹಾಕಿದ್ದ ಮೊಬೈಲನ್ನು ಮಲಗಿದ್ದಲ್ಲಿಂದಲೇ ನನ್ನ ಕಡೆ ಎಳೆದುಕೊಂಡೆ. ವಾಟ್ಸಾಪಿನಲ್ಲಿ ಜೀವದ ಗೆಳತಿಯಾದ ಸುಮಾಳ ಗುಡ್ ಮಾನಿರ್ಂಗ್ ಮೆಸೇಜ್ ಹೊರತಾಗಿ ಬೇರೇನೂ ಇರಲಿಲ್ಲ. ನಾನು ತಿರುಗಿ ಜಿ.ಎಮ್ ಅಂತಷ್ಟೇ ಹಾಕಿ ಸುಮ್ಮನಾದೆ.
ಹಲ್ಲುಜ್ಜಿ ಆಯ್ತೇನೆ ಶಶಿಕಲಾ? ತಿಂಡಿ ತಗೋಂಡು ಬರಲಾ?' ಅಮ್ಮ ಕೂಗಿದಳು. ಐದು ನಿಮಿಷ ಅಮ್ಮಾ’. ಅಮ್ಮ ಎಂದಿನಂತೆ ಏನೋ ಗೊಣಗಿದಳು, ಕೇಳಲಿಲ್ಲ. ನಾನು ನನ್ನ ರೂಮಿಗೆ ಅಟಾಚ್ಡಾಗಿ ಇದ್ದ ಬಾತ್ರೂಮಿಗೆ ಓಡಿದೆ.
ತಿಂಡಿ ತಿನ್ನುವಾಗಲೂ ನನ್ನ ಮನಸ್ಸು ಮೊಬೈಲಿನ ಕಡೆಗೇ ಇತ್ತು. ಸುಮಾ ಇನ್ನೂ ನನ್ನ ಮೆಸೇಜ್ ನೋಡಿದ ನೀಲಿ ಗೆರೆ ಬಿದ್ದಿರಲಿಲ್ಲ. ಆಕೆ ಅದಾಗಲೇ ಸಂಸಾರಸ್ಥೆ. ಒಂದು ಮಗುವಿನ ತಾಯಿ ಕೂಡ. ಅವಳಿಗೆ ಅವಳದೇ ಬೆಳಗಿನ ಕೆಲಸದ ಧಾವಂತವಿರಬೇಕು ಎಂದು ಸುಮ್ಮನಾದೆ.

ಅಪ್ಪ ಅಮ್ಮ ಹಾವನ್ನು ಹುಡುಕುತ್ತಾ ಅದೇನೋ ಸದ್ದು ಮಾಡುತ್ತಲೇ ಇದ್ದರು. ಹಾವು ಇವರಿಗೆ ಹೆದರಿ ಕೂತಿದೆ. ಅದರೆ ಇವರು ಹಾವಿಗೆ ಹೆದರಿದ್ದರಿಂದ ಸುಮ್ಮನೇ ಕೂರಲಾಗುತ್ತಿಲ್ಲ ಅನ್ನಿಸಿ ನಗು ಬಂತು. ಅದರ ಹಿಂದೆ ನನ್ನದೂ ಒಂಥರಾ ಅದೇ ಸ್ಥಿತಿ ಎಂಬುದೂ ನೆನಪಾಗಿ ಒಂದು ತೆರನಾದ ವಿಷಾದ ಆವರಿಸಿತು.
ಮನೋವೈದ್ಯರು ಕೊಟ್ಟ ಪಾಯಿಂಟ್ ಟೂ ಫೈವ್ ಗುಳಿಗೆ ತಿಂದು ನೀರು ಕುಡಿದೆ. ರಾತ್ರಿಯಾದರೆ ಪಾಯಿಂಟ್ ಫೈವ್ ತೆಗೆದುಕೊಳ್ಳಬೇಕು. ಅದನ್ನು ನುಂಗುವುದು ಮತ್ತು ಮಲಗುವುದೇ ನನ್ನ ಜೀವನ ಎಂದುಕೊಳ್ಳುತ್ತಾ ಹಾಸಿಗೆಗೆ ಒರಗಿದೆ. ಈ ಡಬಲ್ ಕಾಟ್ ನನ್ನ ಆಡಂಬೋಲವಾಗಿ ಮತ್ತು ಈ ರೂಮು ನನ್ನ ಪ್ರಪಂಚವಾಗಿ ಅದೆಷ್ಟು ವರ್ಷಗಳಾದವು ಎಂದು ಲೆಕ್ಕ ಮಾಡತೊಡಗಿದೆ.

ಟಣಕ್ ಟಣಕ್' ಎಂಬ ಮೆಸೇಜ್ ಟೋನ್ ಆ ಲೆಕ್ಕವನ್ನು ತಪ್ಪಿಸಿತು. ಅದು ಸುಮಾಳ ಸಂದೇಶವಾಗಿತ್ತು. ಅವನಿಗೆ ನಿನ್ನ ಮನೆಯ ವಿಳಾಸ ನೀಡಿರುವೆ. ಸುಮಾರು ಹನ್ನೊಂದು ಗಂಟೆಗೆ ಬರ್ತಾನೆ. ಹನ್ನೆರಡು- ಒಂದು ಗಂಟೆಯವರೆಗೆ ಇರ್ತಾನೆ. ಉಳಿದ ವಿಷಯ ಆಮೇಲೆ, ಕೂಲ್’ ಅಂತ ಹಾಕಿ ಒಂದು ಥಮ್ಸ್ ಅಪ್ ಇಮೋಜಿ ಹಾಕಿದ್ದಳು. ಆಗಲೇ ಒಂಬತ್ತು ಗಂಟೆಯಾಗಿತ್ತು.

ಸ್ನಾನವನ್ನು ಮಾಡಲು ಹೋದೆ. ಅವತ್ತು ಎಂದಿಗಿಂತ ತುಸು ಹೆಚ್ಚೇ ಸಮಯ ಹಿಡಿದಿದ್ದು ಸ್ವಾಭಾವಿಕವಾಗಿತ್ತು. ಎಲ್ಲಾ ಮುಗಿಸಿ ಹೊರಬಂದು ಅದೆಷ್ಟೋ ದಿನಗಳ ನಂತರ ಕನ್ನಡಿಯ ಮುಂದೆ ನಾನು ನಿಂತೆ. ಕನ್ನಡಿಗೆ ಅಂಟಿಕೊಂಡಿದ್ದ ಬಿಂದಿ ಹಣೆಗೆ ಸರಿಯಾಗಿ ಹೊಂದಿಕೊಳ್ಳುವಂತೆ ಸರಿದಾಡಿಸಿದೆ. ಕನ್ನಡಿಗಂಟಿಕೊಂಡಿದ್ದ ಬಿಂದಿಯು ನನ್ನ ಭ್ರೂಮಧ್ಯೆ ಬಂದಾಗ ಒಂದು ರೀತಿಯ ಸಮಾಧಾನದ ಭಾವವು ಆವರಿಸಿತು.

`ಹಾವು ಗೋಡೌನಿಗೆ ಹರಿದುಹೋಯ್ತು ನೋಡಿ. ನಿಮಗಂತೂ ಆ ಸುಟ್ಟು ಕವಳ ಹಾಕಿ ಮುಗಿಯುವುದೇ ಇಲ್ಲಾ…’ ಅಮ್ಮ ಒಳಮನೆಯಲ್ಲಿ ಕೂಗುತ್ತಿದ್ದಳು.
ನಾನು ಇತ್ತ ರೂಮಿನಲ್ಲಿ ಸಂಭ್ರಮದಲ್ಲಿ ತೇಲಾಡುತ್ತಾ ಹೊಸ ಚೂಡಿದಾರ್ ಧರಿಸುತ್ತಿದ್ದೆ. ಮನಸ್ಸು ಬೇಡವೆಂದರೂ ಹಿಂದೆ ಓಡುತ್ತಿತ್ತು.


`ಶಶೀ … ಇಲ್ಬಾರೆ ಎಂತೋ ಕೊಡ್ತೇ’. ನಾರಾಣ ಕಾಕಾ ಕರೆಯುತ್ತಿದ್ದರು. ಅವರು ನನ್ನನ್ನು ಬಹಳವೇ ಪ್ರೀತಿಸುತ್ತಿದ್ದರು.
ಯಾವಾಗಲೂ ತೊಡೆಯ ಮೇಲೆ ಕೂರಿಸಿಕೊಂಡು ಹೊಸ ಹೊಸ ಸಿಹಿತಿನಿಸುಗಳನ್ನು ತಂದು ಸ್ವತಃ ಅವರೇ ತಿನ್ನಿಸುತ್ತಿದ್ದರು.

ಆದರೆ ಮುಂದೆ ನಾನು ದೊಡ್ಡವಳಾದ ಮೇಲೆ ಕದ್ದು ಕರೆದು ಕೊಡತೊಡಗಿದ್ದರು.
`ಉಳಿದ ಮಕ್ಕಳೆದುರಿಗೆ ಕೊಟ್ಟರೆ ಅವರೂ ಹಟ ಮಾಡ್ತಾರೆ. ಬಾ ಇಲ್ಲಿ ದಡೀ’್ಡ ಎನ್ನುತ್ತಾ ಜನರಿಲ್ಲದೆಡೆಗೆ ಎಳೆದೊಯ್ಯುತ್ತಿದ್ದರು. ನಾನು ತಿನ್ನುವಾಗ ನನ್ನ ಮೈಯನ್ನೆಲ್ಲ್ಲಾ ಒತ್ತುತ್ತಿದ್ದರು. ಹಿಂದಿನಿಂದ ಅಪ್ಪಿಕೊಂಡು ಮುತ್ತು ಕೊಡುತ್ತಾ ಹುಲ್ಲುಗೊಣಬೆಗೋ, ಗೋಡೆಗೋ ಒತ್ತಿಕೊಂಡು ನಿಲ್ಲುತ್ತಿದ್ದರು. ಫ್ರಾಕು ಎತ್ತಿ ಏನೇನೋ ಕೊಸರಾಡುತ್ತಿದ್ದರು.

ಆಮೇಲೆ ಸುಸ್ತಾಗಿ ನೆಲಕ್ಕೆ ಕುಳಿತು ನಡುಗುತ್ತಾ ಟವೆಲಿನಿಂದ ಬೆವರು ಒರೆಸಿಕೊಳ್ಳುತ್ತಾ ಅಲ್ಲಿಂದ ಹೋಗುತ್ತಿದ್ದರು. ಅದೊಂದು ದಿನ ನನ್ನನ್ನು ಮಲಗಿಸಿ ಮೇಲೆ ಬಂದಾಗ ನೋವು ತಡೆಯಲಾಗದೆ ಕೂಗಹೋದೆ. ಬಾಯಿ ಒತ್ತಿ ಹಿಡಿದು ಕೂಗಿದರೆ ಕೊಂದೇ ಹಾಕುವುದಾಗಿ ಹೇಳಿದರು. ಹೆದರಿ ಮಾತೇ ಹೊರಡಲಿಲ್ಲ. ಅವರ ಪಂಚೆ ಮೈಮೇಲೆ ಇರಲಿಲ್ಲ. ನನ್ನ ದೇಹದೊಳಗೆ ಅದೇನೋ ದೂಡುತ್ತಿದ್ದಾರೆ ಎಂದು ಅನಿಸುತ್ತಿತ್ತು. ನೋವು ವಿಪರೀತ ಹೆಚ್ಚಾಗ ತೊಡಗಿತು. ಅವರು ಏದುಸಿರು ಬಿಡುತ್ತಾ ತಮ್ಮ ಕೆಲಸ ಮುಗಿಸಿ ಸ್ವಲ್ಪ ಸಮಯದಲ್ಲೇ ಎದ್ದು ಹೋದರು. ಅವತ್ತು ನನಗೆ ಓಡಾಡಲು ಆಗಲಿಲ್ಲ. ರಾತ್ರಿ ತಡೆಯಲಾರದೆ ಅಮ್ಮನಿಗೆ ಹೇಳಿದೆ.

ಮರುದಿನವೇ ಅಮ್ಮ ನನ್ನನ್ನು ಹೊತ್ತುಕೊಂಡು ಅಜ್ಜನ ಮನೆಗೆ ಹೊರಟಿದ್ದಳು. ಅಪ್ಪ ಅಮ್ಮ ಅದೇನೇನೋ ಮಾತಾಡಿಕೊಂಡರು. ಅಮ್ಮ ಯಾವುದಕ್ಕೂ ಬಗ್ಗಲಿಲ್ಲ.
ತೋಟದ ಆಚೆ ಕಡೆಯ ದಿಂಬದಲ್ಲಿ ಒಂದು ಬಿಡಾರದಂತಹ ಮನೆಯನ್ನು ಅಪ್ಪ ಕಟ್ಟಿಸಿದ ಮೇಲೆಯೇ, ನಾನು ಮತ್ತು ಅಮ್ಮ ಮತ್ತೆ ನಮ್ಮೂರಿಗೆ ಬಂದಿದ್ದು. ಮತ್ತೆಂದೂ ನಾರಾಣ ಕಾಕಾ ನಮ್ಮ ಮನೆಯತ್ತ ಸುಳಿಯಲಿಲ್ಲ. ಆದರೆ ರಾತ್ರಿಯಾದರೆ ನನಗೆ ಹೆದರಿಕೆ ಶುರುವಾಗುತ್ತಿತ್ತು. ನಿದ್ರೆಯಲ್ಲಿ ಕನವರಿಸುತ್ತಿದ್ದೆನಂತೆ.

ಸ್ವತಃ ಅಪ್ಪನೇ ಹತ್ತಿರ ಬಂದರೂ ಹೆದರಿ ಅಮ್ಮನ ಬಳಿ ಓಡುತ್ತಿದ್ದೆನಂತೆ. ಶಾಲೆ ಎಂದರೆ ಜ್ವರ ಬಂದು ಮಲಗುತ್ತಿದ್ದೆನಂತೆ. ಅಮ್ಮನಿಗೆ, ನನಗೆ ಶಿಕ್ಷಣ ಕೊಡಿಸುವ ಏಕಮಾತ್ರ ಗುರಿಯಿತ್ತು. ಅದು ಹೇಗೋ ಮಾಡಿ ಒಂದು ವರ್ಷ, ನಮ್ಮ ಊರಿನವಳೇ ಆದ ಸುಮಾಳ ಜೊತೆ ಗೆಳೆತನ ಮಾಡಿಸಿ ಆಕೆಯ ಮೂಲಕವೇ ಪುಸಲಾಯಿಸಿ, ನಾನು ಶಾಲೆಯ ಮೆಟ್ಟಿಲು ಹತ್ತುವಂತೆ ಅಮ್ಮ ಮಾಡಿದ್ದಳು. ಹಾಗೆ ಒಂದು ಕರಾಳ ಅಧ್ಯಾಯ ನನ್ನ ಬದುಕಿನಲ್ಲಿ ಮುಗಿದಿತ್ತು. ಆದರೂ ಗಂಡಸರೆಡೆಗಿನ ಭಯ ಮಾತ್ರ ಹೋಗಿರಲೇ ಇಲ್ಲ.

ಮುಂದೊಮ್ಮೆ ಹತ್ತನೇ ತರಗತಿಯಲ್ಲಿ ವಿಜ್ಞಾನದ ಕುಬೇರಪ್ಪ ಮೇಷ್ಟ್ರು ಪಾಠ ಮಾಡುವಾಗ ಆ ಹಿಂದೆ ನಡೆದ ಘಟನೆ ಎಲ್ಲವೂ ಸ್ವಲ್ಪ ಸ್ವಲ್ಪ ಅರ್ಥವಾಗತೊಡಗಿತ್ತು. ಆದರೆ ಅವತ್ತು ಏನಾಗಿತ್ತು ಅಂತ ಮತ್ತಷ್ಟು ತಿಳಿಸಿ ಹೇಳಿದವಳು ಸುಮಾ. ಊರೆಲ್ಲಾ ಗುಸುಗುಸು ಮಾತನಾಡುತ್ತಿದ್ದ ಸುದ್ದಿ ಅವಳಮ್ಮನ ಮೂಲಕ ಅವಳಿಗೆ ಗೊತ್ತಾಗಿತ್ತಂತೆ. ಆಗ ಮತ್ತೆ ನನ್ನ ಗಾಯವು ಕೆದರಿ ಮಂಗನ ಹುಣ್ಣಾಗಿತ್ತು. ಇದು ಅವಳಿಗೆ ಮುಂದೆ ತಿಳಿದು ಕ್ಷಮೆ ಕೇಳಿದ್ದಳು ಕೂಡಾ. ಆದರೆ ಇದರಿಂದ ನನಗೆ ಆ ಊರಿನ ಮೇಲೆಯೂ ತಿರಸ್ಕಾರ ಭಾವನೆ ಶುರುವಾಗಿತ್ತು.

ಅಪ್ಪ – ಅಮ್ಮನಿಗೂ ಹೀಗೇಯೇ ಏಕೆ ಅನಿಸಿತ್ತು ಎಂಬುದು ಕಡೆಗೂ ನನಗೆ ಗೊತ್ತಾಗಲಿಲ್ಲ. ಮನೆಯಲ್ಲಿ ತಮ್ಮ ಪಾಲಿಗೆ ಬಂದ ಜಮೀನು ಕ್ರಯವಾದ ಕೂಡಲೇ ಪೇಟೆಯಲ್ಲಿ ಒಂದು ಸ್ವಂತ ಮನೆ ಕೊಂಡು ಸ್ವಂತ ವ್ಯಾಪಾರ ಮಾಡುವ ಕುರಿತು ಅವರಲ್ಲಿ ಚರ್ಚೆ ನಡೆಯುತ್ತಿತ್ತು. ಅಮ್ಮ ಬಹಳ ದಿನಗಳ ನಂತರ ಖುಷಿಯಾಗಿ ಇರತೊಡಗಿದ್ದರು. ನಾನು ಕನ್ನಡಿಗೆ ಅಂಟಿಸಿ ಇಡುತ್ತಿದ್ದ ಬಿಂದಿಯನ್ನು ಮರೆಯದೇ ಹಣೆಗಿಟ್ಟು ಕಳಿಸುತ್ತಿದ್ದರು. ನನ್ನ ವಯಸ್ಸಿಗೆ ಮೀರಿದ ಯೌವನದ ಕುರಿತು ಅಮ್ಮ ಆತಂಕದಿಂದ ಮತ್ತು ಸುಮಾ ಮೆಚ್ಚುಗೆಯಿಂದ ಮಾತನಾಡುತ್ತಿದ್ದುದು ನನಗೆ ಗೊಂದಲವನ್ನು ಹುಟ್ಟಿಸುತ್ತಿತ್ತು.

ಹತ್ತನೇ ತರಗತಿಯ ಫಲಿತಾಂಶ ಬರುವ ಹೊತ್ತಿಗೆ ತೋಟವನ್ನು ಮಾರಿ ಎಲ್ಲಾ ಮೋಕಳೀಕು ಮಾಡಿ ಪಟ್ಟಣ ಸೇರುವ ಅಪ್ಪನ ಆಸೆ ಮುಂದಕ್ಕೆ ಹೋಗ್ತಾ ಇತ್ತು.
ಅಮ್ಮ- `ಇನ್ನೊಂದು ಆರು ತಿಂಗಳು ಪುಟ್ಟಿ, ಎಲ್ಲರೂ ಪೇಟೆಗೆ ಹೋಗಾಣ. ಈಗ ಅಲ್ಲಿಯವರೆಗೆ ಸುಮಾಳÀ ಜೊತೆಗೆ ಕಾಲೇಜಿಗೆ ಬಸ್ಸಿನಲ್ಲಿ ಹೋಗಿ ಬಂದು ಮಾಡು’ ಎಂದಳು. ನನಗೂ ಶಿಕ್ಷಣದ ಮಹತ್ವ ಆಗಷ್ಟೇ ಅರಿವಾಗತೊಡಗಿತ್ತು, ಒಪ್ಪಿಕೊಂಡೆ.

ಪಿಯುಸಿ ಮೊದಲ ವರ್ಷವನ್ನು, ನಾನು ತಲೆಯನ್ನೇ ಎತ್ತದೇ ಕಳೆದುಬಿಟ್ಟೆ. ನಾನು, ಸುಮಾ, ಅಮ್ಮ ಮತ್ತು ವಿದ್ಯಾಭ್ಯಾಸ ಬಿಟ್ಟರೆ ಮತ್ತೇನೂ ನನ್ನತ್ತ ಸುಳಿಯಲಿಲ್ಲ. ಅಪ್ಪನೂ ಒಂದು ಕಡೆ ತೋಟದ ಕೆಲಸ ಬಿಡಲೂ ಆಗದೇ, ಇತ್ತ ಗಿರಾಕಿಗಳೂ ಹೊಂದದೇ ಅತಂತ್ರ ಸ್ಥಿತಿಯಲ್ಲಿ ಇದ್ದ. `ನಾವು ಕೊಟ್ಟ್ಟು ಹೋಗುವವರು ಅಂತ ಅಡ್ಡಾದುಡ್ಡಿಗೆ ಕೇಳ್ತಾರೆ’ ಅಂತ ನಾನು ಮಲಗಿದ ಮೇಲೆ ಒಳಬರುತ್ತಿದ್ದ ಅಪ್ಪ, ಅಮ್ಮನ ಬಳಿ ಸಣ್ಣ ಧ್ವನಿಯಲ್ಲಿ ಹೇಳುತ್ತಿದ್ದ. ನಾನು ಆಗ ಹೊದ್ದ ದುಪ್ಪಡಿಯನ್ನು ಮೈಗೆ, ಕಿವಿಗೆ ಮತ್ತಷ್ಟು ಮುಚ್ಚಿಕೊಂಡು ಸುರುಳಿ ಸುತ್ತಿ ಮಲಗುತ್ತಿದ್ದೆ.

ಅಂತೂ ಪಿಯೂಸಿ ಎರಡನೇ ವರ್ಷಕ್ಕೆ ನಾನು ಕಾಲಿಟ್ಟಿದ್ದೆ. ಮತ್ತೊಮ್ಮೆ ಅಮ್ಮ ಈ ಬಾರಿಯ ಹಂಗಾಮಿನ ನಂತರ ಯಾವ ಕಾರಣಕ್ಕೂ ಪಟ್ಟಣದಲ್ಲಿ ಉಳಿಯುವುದು ಪಕ್ಕಾ ಎಂದು ಹೇಳಿದಳು. ಸುಮಾಳ ಜೊತೆ ಬಸ್ ಓಡಾಟ ಮುಂದುವರೆಯಿತು. ನಮ್ಮ ತರಗತಿಗೆ ಬಾಂಬೆಯಿಂದ ಬಂದ ಹುಡುಗ ಸುನೀಲ ಮಾತ್ರ ನ್ಯೂ ಅಡ್ಮಿಷನ್ ಆಗಿದ್ದ. ತುಂಬಾ ಉಢಾಳನಾಗಿದ್ದ ಅವನನ್ನು ಅವನಪ್ಪ ಇಲ್ಲಿಯ ಅವನ ಚಿಕ್ಕಪ್ಪನ ಮನೆಗೆ ತಂದು ಬಿಟ್ಟಿದ್ದರು. ರ್ಯಾಲಿ ಸೈಕಲ್ ಹೊಡೆದುಕೊಂಡು ಕಾಲೇಜಿಗೆ ಬರುತ್ತಿದ್ದ. ಸುಮಾಳಿಗೆ ಏನಂತಾಳೆÉ ನಿನ್ನ ಗೆಳತಿ?' ಅಂತ ಕೇಳುತ್ತಿದ್ದ. ಸುಮಾನಾನ್ಯಾಕೆ ಮಧ್ಯೆ, ನೀನೇ ಕೇಳಿಕೋ ಅಂದಾಗ ನನಗೆ ಹೃದಯ ಬಾಯಿಗೆ ಬಂದಂತೆ ಆಗುತ್ತಿತ್ತು. ನಾನು ಮಾತನಾಡಲು ಹೋಗುತ್ತಿರಲಿಲ್ಲ.
ಆದರೆ ಕ್ರಮೇಣ ಆತ ಬಸ್‍ಸ್ಟ್ಯಾಂಡ್‍ಗೆ ಬರತೊಡಗಿದ. ಸುನೀಲ ನನ್ನ ಗಮನಸೆಳೆಯಲು ನಾನಾ ಕಸರತ್ತು ನಡೆಸುತ್ತಿದ್ದ. ಅದು ಪಿಯುಸಿಯ ಹಾಲ್‍ಟಿಕೆಟ್ ತರಲು ಹೋದ ದಿನ. ನಾವು ಬಸ್ ಇಳಿಯುತ್ತಿದ್ದಂತೆ ಸುನೀಲ ಮಡಚಿದ್ದ ಕಾಗದವನ್ನು ನಮ್ಮ ಕೈಯೊಳಗೆ ತುರುಕಿ ಹೋಗಿದ್ದ. ಕೆಂಪು ಬಣ್ಣದಲ್ಲಿ ಇದ್ದ ಪತ್ರವದು. ನಾನು ಓದದೇ ಸುಮಾಳ ಕೈಗೆ ವರ್ಗಾಯಿಸಿದ್ದೆ. ಏ ಕಲಾ, ಹುಚ್ಚು ಸುನೀಲ ರಕ್ತದಲ್ಲಿ ಪತ್ರ ಬರೆದಿದ್ದಾನೆ ಕಣೇ, ರಾಮಾ' ಎಂದವಳೇ ಪತ್ರವನ್ನು ಓದಿ ಹೇಳಿನೋಡು ರೆಡಿ ಇದ್ದರೆ ಆದಷ್ಟು ಬೇಗ ವಾಲಗ ಊದಿಸೋಣ’ ಎಂದು ಕಣ್ಣು ಮಿಟುಕಿಸಿದ್ದಳು.

ಹಾಲ್‍ಟಿಕೆಟ್ ಪಡೆದು ಮರಳುವಾಗ ಸುನೀಲ ಮತ್ತೆ ನಮ್ಮನ್ನು ಹಿಂಬಾಲಿಸಿದ್ದ. ಏನೇ, ಸುಮಾ. ಏನಂತಾಳೆ ನಮ್ಮ ಹುಡುಗಿ?' ಎಂದು ಗಹಗಹಿಸಿ ನಕ್ಕಿದ್ದ. ನನಗೆ ಸಿಟ್ಟು ಎಲ್ಲಿ ಹೆಪ್ಪುಗಟ್ಟಿ ನಿಂತಿತ್ತೋ? ಆತನ ಜನ್ಮವನ್ನುಜಾಲಾಡಿದ್ದೆ. ಆವೇಶದಲ್ಲಿ ಚಪ್ಪಲಿ ಎತ್ತಿ ಹಿಡಿದಿದ್ದೆ. ಆಮೇಲೆ ಸುಮಾ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಳು. ಮನೆಗೆ ಬಂದು ಅಮ್ಮನಿಗೆ ವಿಷಯ ತಿಳಿಸಿದ್ದೆ. ಪರೀಕ್ಷೆಗೆ ಹೋಗಲ್ಲ ಅಂತ ಹಟಮಾಡಿದೆ.ನೋಡು, ಮುಂದೆ ನೀನು ದೊಡ್ಡ ಅಧಿಕಾರಿಣಿಯಾಗಿ ಇಂತಹ ಬೀದಿ ಕಾಮಣ್ಣರಿಗೆ ಬುದ್ಧಿ ಕಲಿಸಬೇಕು’ ಎಂದಿದ್ದಳು ಅಮ್ಮ.

ಹೌದು, ಚಿಕ್ಕಪ್ಪನಂತಹ ರಾಕ್ಷಸರಿಗೂ... ಕೂಡಾ' ಎಂದಿದ್ದೆ. ಅಮ್ಮ ನನ್ನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಬಹಳ ಹೊತ್ತು ಅತ್ತಿದ್ದರು.ಅಳಬೇಡಮ್ಮ, ಪರೀಕ್ಷೆಯನ್ನು ಚೆನ್ನಾಗಿ ಬರೆದು ಆಫೀಸರ್ ಆಗ್ತೀನಿ’ ಅಂದಿದ್ದೆ.
ಮೊದಲ ಪರೀಕ್ಷೆಯ ದಿನ ಸುನೀಲ ಕ್ಲಾಸಿಗೆ ಬಂದು ಐ ಲವ್ ಯೂ' ಎಂದು ಹೋದ. ಅಮ್ಮನನ್ನು ನೆನಪಿಸಿಕೊಂಡು ನಾನು ಸುಮ್ಮನೆ ತಲೆತಗ್ಗಿಸಿ ಕೂತಿದ್ದೆ. ಸುಮಾ ಕಣ್ಣಿನಲ್ಲೇ ಕೂಲ್ ಎಂಬಂತೆ ಸಂಜ್ಞೆ ಮಾಡಿದ್ದಳು. ಹೀಗೇ ಪರೀಕ್ಷೆಗಳು ಕಳೆದಿದ್ದವು. ಕೊನೆಯ ಪರೀಕ್ಷೆ ಮುಗಿಸಿ ನಾವು ಗೆಳತಿಯರೆಲ್ಲಾ ಹರಟೆ ಹೊಡೆಯುತ್ತಾ ಕಾಲೇಜಿನ ಹೊರಗೆ ನಿಂತಿದ್ದೆವು. ಸುನೀಲ ನೇರವಾಗಿ ನನ್ನೆದುರಿಗೆ ಬಂದು ನಿಂತು- ನನಗೆ ಉತ್ತರ ಬೇಕು’ ಎಂದಿದ್ದ

ನೋಡು ಸುನೀಲ, ನನಗೆ ಇವೆಲ್ಲ ಇಷ್ಟ ಆಗೋಲ್ಲ. ನಂಗೆ ಮುಂದೆ ಬಹಳ ಓದಬೇಕಿದೆ. ಅದಲ್ಲದೇ ಲವ್ ಗಿವ್ ಮಾಡೋಕೆ ಮನಸ್ಸೂ ಇಲ್ಲ. ಗೆಟ್ ಔಟ್ ಫ್ರಂ ಹಿಯರ್' ಅಂದೆ. ಕಾಲೇಜಿಗೇ ತಾನು ಸುರಸುಂದರಾಂಗಿ ಅಂತ ಹಮ್ಮಿದೆ ನಿಂಗೆ.
ಕೊನೆಯ ಬಾರಿ ಕೇಳ್ತಾ ಇದ್ದೀನಿ. ನನ್ನನ್ನು ಪ್ರೀತಿಸ್ತೀಯೋ ಇಲ್ವೋ? ಸರಿಯಾಗಿ ಹೇಳಿಬಿಡು’ ಅಂದ.
`ನೋ… ನೆವರ್….’ ಅಂತ ಮಾತ್ರ ಹೇಳಿದ್ದು ನನಗೆ ನೆನಪಿದೆ. ಮುಂದಿನದೆಲ್ಲಾ ಮರೆತು ಹೋಗಿತ್ತು.
ಕೊನೆಗೆ ಕಣ್ಣು ತೆರೆದಾಗ ಆಸ್ಪತ್ರೆಯಲ್ಲಿ ಇದ್ದೆ.

ಮುಂದೆ ಅಮ್ಮ ವಿವರವಾಗಿ ಹೇಳಿದ್ದಳು. ಅವನು ನಿನ್ನ ಮೇಲೆ ಆಸಿಡ್ ಎರಚಿದ್ದ. ಮುಖಕ್ಕೇ ಎರಚಿದ್ದರಿಂದಾಗಿ ಮುಖದ ಭಾಗ ಹೆಚ್ಚು ಹಾನಿಯಾಗಿದೆ. ಆದರೆ ವೈದ್ಯರು ಹೇಳಿರುವ ಪ್ರಕಾರ ಮುಂದೆಲ್ಲಾ ಸರಿ ಹೋಗುತ್ತದೆ. ಇನ್ನೊಂದೆರಡು ಪ್ಲಾಸ್ಟಿಕ್ ಸರ್ಜರಿಗೆ ಸಂಬಂಧಪಟ್ಟ ಆಪರೇಷನ್ ಬೇಕಾಗಬಹುದೆಂದು ವೈದ್ಯರು ಹೇಳಿದ್ದಾರೆ'. ನಾನು ಕೇಳಿದ್ದು ಒಂದೇ ಪ್ರಶ್ನೆಸುನೀಲನಿಗೆ ಶಿಕ್ಷೆ ಆಗುತ್ತಾ?’
`ಇಲ್ಲ ಕಣೇ ಶಶಿ, ಅವನಿನ್ನೂ ಮೈನರ್ ಅಂತೆ. ಅಥವಾ ಆ ತರಹ ರೆಕಾರ್ಡ್ ಸೃಷ್ಟಿ ಮಾಡಿದಾರೋ ಗೊತ್ತಿಲ್ಲ. ಅವನಪ್ಪ ಪ್ರಭಾವಿ ವ್ಯಕ್ತಿ. ಅವನನ್ನು ರಿಮಾಂಡ್ ಹೋಂ ಗೆ ಕಳಿಸಿದ್ದಾರೆ’
ಅದನ್ನು ಕೇಳಿದ ನಾನು ಕಿರುಚಾಡತೊಡಗಿದ್ದೆ. ಡ್ರಿಪ್ ಕಿತ್ತು ಹಾಕಿ ಹೊರಟಿದ್ದೆ. ವೈದ್ಯರು ಬಂದು ಇಂಜೆಕ್ಷನ್ ಕೊಟ್ಟು ಹೋದರು. ಕಣ್ಣುಗಳು ಮಂಜಾಗ ತೊಡಗಿದವು.


ನಾವು ಹೊಸ ಮನೆಗೆ ಬಂದಾದ ಬಹಳ ದಿನಗಳ ನಂತರ ಅಪ್ಪನ ಕುರಿತು ಪ್ರೀತಿಯನ್ನು ತೋರತೊಡಗಿದೆ. ಆತ ನನ್ನ ತಲೆ ಸವರಿ, ಬಂದ ಕಣ್ಣೀರನ್ನು ನನಗೆ ತೋರಿಸದಿರಲು ಯತ್ನಿಸುತ್ತಿದ್ದನು. ಇದಕ್ಕೆಲ್ಲಾ ಕಾರಣವಾಗಿದ್ದು ಅಪ್ಪ ನನಗೆಂದೇ ಕಟ್ಟಿಸಿಕೊಟ್ಟಿದ್ದ ವಿಶೇಷವಾದ ಕೊಠಡಿಯೂ ಕಾರಣವಿರ ಬಹುದು.
ಅದರಲ್ಲಿ ಎಲ್ಲವೂ ಇತ್ತು. ಒಂದು ಅದ್ಭುತವಾದ ಲೈಬ್ರರಿ ಕೂಡಾ ಅಲ್ಲಿತ್ತು. ಕುಮಾರವ್ಯಾಸನಿಂದ ಹಿಡಿದು ಕನ್ನಡಶಬ್ದಕೋಶದವರೆಗೆ. ಅಮ್ಮ ಮನೆಯಲ್ಲಿಯೇ ಕುಳಿತು ಡಿಗ್ರಿ ಮಾಡು ಎಂದಳು.

`ಹೌದು, ಇನ್ನು ನಾನು ಸುರಕ್ಷಿತ. ಈ ಮುಖ ಹೊತ್ತುಕೊಂಡು ಹೋದರೆ ಯಾರೂ ಏನೂ ಮಾಡಲ್ಲ. ಅಲ್ವಾ’ ಅಂತ ಕೂಗಾಡತೊಡಗಿದೆ. ಆಮೇಲೆ ಎಚ್ಚರ ತಪ್ಪಿತ್ತಂತೆ. ಅದಕ್ಕೆ ವೈದ್ಯರು ಹಿಸ್ಟಿರಿಯಾ ಎಂದು ಹೆಸರು ಕೊಟ್ಟರಂತೆ. ಕೌನ್ಸ್ಸಲಿಂಗ್ ಬೇಕೆಂದರು. ಮುಖಕ್ಕೆ ಮತ್ತೊಂದಿಷ್ಟು ಆಪರೇಶನ್, ತಲೆಗೆ ಕೌನ್ಸ್ಸಲಿಂಗ್ ಮತ್ತು ಹೊಟ್ಟೆಗೆ ಮಾತ್ರೆ.

ಆಮೇಲೆ ನನ್ನ ರೂಮಿಗೆ ಎಲ್ಲರಿಗೂ ಪ್ರವೇಶವನ್ನು ಕೈದು ಮಾಡಿದೆ. ಕನ್ನಡ ಸಾಹಿತ್ಯದ ಓದು ಓದು ಮತ್ತು ಓದು. ಹತ್ತು ವರ್ಷಗಳ ಕಾಲ ಸಾಹಿತ್ಯದ ಅಧ್ಯಯನ, ಶಬ್ದಕೋಶ ಮತ್ತು ವ್ಯಾಕರಣಗಳಲ್ಲಿ ಮುಳುಗಿಬಿಟ್ಟೆ.
ಆ ಹೊತ್ತಿಗೆ ಅಪ್ಪ ನನಗೆ ಗಿಫ್ಟ್ ಅಂತ ಒಂದು ಆಂಡ್ರಾಯ್ಡ್ ಸ್ಮಾರ್ಟ್‍ಫೋನ್ ಕೊಡಿಸಿದರು. ಮನೆಗೆ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಹಾಕಿಸಿಕೊಟ್ಟರು. ಆಹ್! ಎಂತಹ ಚಂದದ ಲೋಕವದು. ಮೊದಲು ಆರ್ಕೂಟ್ ಇತ್ತು. ನಂತರ ಜಿಮೇಲ್ ಮತ್ತು ಫೇಸ್ಬುಕ್ ಬಂತು.

ಓದಲು ಬ್ಲಾಗ್, ವಿಶೇಷ ವೆಬ್‍ಸೈಟ್‍ಗಳು. ನನಗೆ ಖುಷಿಯೋ ಖುಷಿ!! ಆಮೇಲೆ ಮೊನ್ನೆ ಮೊನ್ನೆ ವಾಟ್ಸಾಪ್ ಇನ್ಸ್ಟಾಲ್ ಮಾಡಿಸಿಕೊಂಡೆ. ಸಾಹಿತ್ಯದ ಗೆಳೆಯರು, ಸಮಾನ ಆಸಕ್ತಿಯ ಜನರು ಗುಂಪು ಹೀಗೆ.. ದಿನಗಳು ವೇಗವಾಗಿ ಕಳೆಯುತ್ತಾ ಇದ್ದವು.

ಆಗ ಪರಿಚಯವಾದವನು ಶಿವು. ನನಗಿಂತ ಕಿರಿಯ ಮತ್ತು ಮಹಾನ್ ತುಂಟನಾಗಿದ್ದನು. ಸಣ್ಣ ವಯಸ್ಸಿನಲ್ಲೇ ಬಹಳಷ್ಟು ಕಥೆ ಕವನ ಮತ್ತು ಒಂದು ಕಾದಂಬರಿಯನ್ನು ಬರೆದಿದ್ದನು. ಅಕಾಡೆಮಿ ಪ್ರಶಸ್ತಿಯ ಕಿರೀಟ ಬೇರೆ ಆತನ ಮುಡಿಗೇರಿತ್ತು. ಅವನÀ ವಿಕ್ಷಿಪ್ತ ಹುಡುಕಾಟ ನನಗೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ನನ್ನ ಡಿಪಿಯಲ್ಲಿ ಯಾವಾಗಲೂ ಒಂದು ಹೂವಿನ ಫೋಟೋ ಇರುತ್ತಿತ್ತು. ಅವನು `ನಿಮ್ಮ ದರ್ಶನ ಭಾಗ್ಯ ಯಾವಾಗ’ ಎಂದು ಒಮ್ಮೆ ನನ್ನನ್ನು ಕೇಳಿದ್ದ. ನಾನು ನನ್ನೆಲ್ಲಾ ಜೀವನದ ಘಟನೆಗಳನ್ನು ಅವನಿಗೆ ಬಿಡಿಸಿ ಹೇಳಿದೆ. ಆನಂತರ ಅವನು ತುಂಬಾ ಆತ್ಮೀಯನಾದ. ಶಿವು ನನಗೆ ಗೊತ್ತಿಲ್ಲದೇ ನನ್ನೊಳಗೆ ತರಂಗಗಳನ್ನು ಏಳಿಸತೊಡಗಿದ್ದನು.

ಸುಮಾ ಕೂಡಾ ವಾಟ್ಸಾಪ್‍ನಲ್ಲಿ ದಿನಾಲು ಸಿಗಲು ಆರಂಭಿಸಿದ್ದಳು. ಅವಳ ಬಳಿ ಶಿವು ಬಗ್ಗೆ ಎಲ್ಲವನ್ನು ಹೇಳಿದ್ದೆ. ಆತ, ಗಂಡಸರ ಬಗ್ಗೆ ನನ್ನ ಮನೋಸ್ಥಿತಿಯನ್ನು ಬದಲಾಯಿಸಿದುದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡೆ. ಅವಳು ಖುಷಿಪಟ್ಟಳು. ಎಲ್ಲಾ ಗಂಡಸರೂ ಕೆಟ್ಟವರಲ್ಲ, ಆದರೆ ಹಿಂದಾದ ಘಟನೆಯು ನಿನ್ನ ದುರಾದೃಷ್ಟ' ಎಂದಳು. ಶಿವು ಆತ್ಮೀಯನಾದಂತೆ ಮತ್ತಷ್ಟು ಪೋಲಿಯಾಗಿ ಮಾತನಾಡ ತೊಡಗಿದ. ಕ್ರಮೇಣ ನನಗೂ ಆ ರೋಗ ತಗುಲಿತು. ನನ್ನ ಮುಖ ನೋಡಲು ಸಾಧ್ಯವಿಲ್ಲ ಎಂದು ನಿಂಗೆ ಗೊತ್ತಲ್ಲ ಎಂದು ಹೇಳಿದ್ದೆ. ಅದಕ್ಕೆ ಅವನುನನ್ನದೇನಿದ್ದರೂ ಆತ್ಮದೊಂದಿಗೆ ಅನುಸಂಧಾನ’ ಎಂದು ಹೇಳಿದ್ದು ಕೇಳಿ ನನ್ನನ್ನು ಅವನಿಗೆ ರಾಧೆಯಾಗಿ ಅರ್ಪಿಸಿಕೊಳ್ಳುವ ತೀರ್ಮಾನಕ್ಕೆ ಬಂದೆ. ಆತನಿಗೆ ಒಂದು ಭಾನುವಾರ ಬೆಂಗಳೂರಿನಿಂದ ನಮ್ಮ ಮನೆಗೆ ಬರಲು ಆಹ್ವಾನಿಸಿದೆ. ಮನೆಯಲ್ಲಿ ನನ್ನನ್ನು ಯಾರೂ ಡಿಸ್ಟರ್ಬ್ ಮಾಡಲ್ಲ. ಯಾವ ತೊಂದರೆಯೂ ಇಲ್ಲವೆಂದು ಹೇಳಿದೆ.

ಅವತ್ತೇ ರಾತ್ರಿ ಸುಮಾ ಒಂದು ಸ್ಕ್ರೀನ್‍ಶಾಟ್ ಕಳಿಸಿದ್ದಳು. ಅದು ಶಿವುಗೆ ಸಂಬಂಧಿಸಿದ್ದಾಗಿತ್ತು. ಆತ ಅದರಲ್ಲಿ ತನ್ನ ಗೆಳೆಯನ ಬಳಿ ಹೇಳಿಕೊಂಡಿದ್ದ. `ಮುಖದಲ್ಲಿ ಸುಟ್ಟ ಕಲೆಯೇ ತುಂಬಿರುವ ಕಲಾಳ ಬಳಿ ಹೋದಾಗ ಮುಖಕ್ಕೆ ಒಂದು ಕರ್ಚೀಫು ಹಾಕಿಕೊಂಡÀರಾಯ್ತು ಮಗಾ… ನಥಿಂಗ್ ಹ್ಯಾಸ್ ಹ್ಯಾಪೆನ್ಡ್ ಟು ಹರ್ ಪ್ರೈವೇಟ್ ಪಾಟ್ರ್ಸ್’. ಅವತ್ತು ನಾನು ಆ ಮೆಸೇಜು ನೋಡಿ ಕುಸಿದಿದ್ದೆ! ಮತ್ತೊಮ್ಮೆ ಪ್ಯಾನಿಕ್ ಆಗಿದ್ದೆ. ಆಗಲೇ ಈ ಪಾಯಿಂಟ್ ಟೂ ಫೈವ್, ಫೈವಿನ ನಂಟು ಈ ನನ್ನ ಮನಸ್ಸಿಗೆ ಬೆಳೆಯಿತು. ವೈದ್ಯರು ಇದು ಅನಿವಾರ್ಯ ಎಂದರು. ನಾನು ನನ್ನ ಕರ್ಮ ಎಂದೆ.

ಆ ನಂತರ ಓದು ಕಡಿಮೆ ಆಗ್ತಾ ಬಂತು. ಮಾತ್ರೆಗಳ ಪ್ರಭಾವದಿಂದ ಫೋಕಸ್ ಮಾಡಲು ಆಗುತ್ತಿರಲಿಲ್ಲ. ಆಗ ಗೂಗಲ್ ನನ್ನ ಪ್ರಪಂಚವಾಯಿತು. ಎಲ್ಲಾ ಸೋಷಿಯಲ್ ಮೀಡಿಯಾದಿಂದ ದೂರವಾದೆ. ಆನಂತರ ನನ್ನನ್ನು ಡಿಸ್ಟಬಿರ್ಂಗ್ ಮೂವೀಸ್' ಹತ್ತಿರ ಸೆಳೆದವು. ನಾನು ನನಗೆ ಗೊತ್ತಿಲ್ಲದೆ ಮತ್ತೊಂದು ಪ್ರಪಂಚದ ಮಗ್ಗುಲಿಗೆ ಕಾಲಿಟ್ಟಿದ್ದೆ.ಜಿಗಾಲೋ ಗ್ರೂಪ್’ ನನ್ನ ಗಮನ ಸೆಳೆದಿತ್ತು. ಅದನ್ನು ಮಹಾನಗರದಲ್ಲಿ ಇರುವ ಸುಮಾಳ ಬಳಿ ಹೇಳಿಕೊಂಡಿದ್ದೆ.

ಅವಳು, `ನಾನು ಇವೆಲ್ಲಾ ಇದೆಯೆಂದು ಕೇಳಿದ್ದೆ. ಪೂರ್ತಿ ವಿವರ ಗೊತ್ತಿಲ್ಲ. ಅದೇನೇ ಇರಲಿ, ಇದರಲ್ಲಿ ತಪ್ಪು ಏನಿಲ್ಲ. ಅದೊಂದು ಹಸಿವು ಮಾತ್ರ. ಇದು ನಿನ್ನ ವೈಯಕ್ತಿಕ ಹಕ್ಕು. ಐ ವಿಲ್ ಸಪೋರ್ಟ್ ಯು ಇನ್ ದಿಸ್ ಮ್ಯಾಟರ್, ಮಾಹಿತಿ ತಗೊಂಡು ನಿನಗೆ ಬೇಕಾದರೆ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತೇನೆ’ ಎಂದಳು.


ಇವತ್ತು ಒಂದು ತೀರ್ಮಾನ ಆಗಬೇಕು, ಉಳಿಯೋದು ಈ ಹಾವೋ ಅಥವಾ ನಾನೋ ಎಂದು. ಪಾಪ ಪುಟ್ಟಿಯ ರೂಮಿಗೆ ಆ ಹಾವು ನುಗ್ಗಿದರೆ ಏನು ಕಥೆ' ಎಂದು ಅಪ್ಪ ಏರು ಧ್ವನಿಯಲ್ಲಿ ಹೇಳುತ್ತಿದ್ದರು. ಅಮ್ಮನಾನು ಸುಬ್ರಹ್ಮಣ್ಯಕ್ಕೆ ಹರಕೆ ಹೊತ್ತು ಕೊಂಡಿದ್ದೇನೆ ಏನಾಗಲ್ಲ ಸುಮ್ನಿರಿ ನೀವು’ ಎಂದಳು.

ನಾನು ಜೀವಮಾನದ ಒಂದು ದಹನಕ್ಕಾಗಿ ತಯಾರಾಗುತ್ತಿದ್ದೆ. ಕಾಡುವ ನೆನಪುಗಳ ವಿಷಾದದ ಛಾಯೆ ಹತ್ತಿರಕ್ಕೂ ಬರಲು ಬಿಡಲಿಲ್ಲ. ಮೈ ಬೆವರುತ್ತಿತ್ತು, ಕಾಲುಗಳು ನಡುಗುತ್ತಿದ್ದವು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಪ್ರಯೋಗವೊಂದಕ್ಕೆ ಒಡ್ಡಿಕೊಳ್ಳುವ ಭಂಡ ಧೈರ್ಯವನ್ನು ನಾನು ಆವಾಹಿಸಿಕೊಂಡಿದ್ದೆ. ಅವನನ್ನು ಕರೆಸಿಕೊಳ್ಳುವ ಏಕಮಾತ್ರ ದಾರಿ ನನ್ನಲ್ಲಿ ಪಶ್ಚಾತ್ತಾಪದ ಬದಲಿಗೆ ಒಂದು ಬಿಡುಗಡೆಯ ದಾರಿ ಎನಿಸತೊಡಗಿತ್ತು. ಅವನು ಬರುವುದನ್ನು ಮತ್ತು ಸಮಯವನ್ನು ಸುಮಾ ಆಗಲೇ ತಿಳಿಸಿದ್ದರಿಂದ ಕ್ಷಣವೊಂದು ಯುಗವಾಗಿ ಗೋಚರಿಸುತ್ತಿತ್ತು. ಆತಂಕ ಮತ್ತು ಒತ್ತಡ ತಡೆಯಲಾರದೆ ಇನ್ನೊಂದು ಪಾಯಿಂಟ್ ಫೈವ್ ಮಾತ್ರೆಯ ಮೊರೆ ಹೋದೆ, ಹೊಸ ವೈದ್ಯನಿಗಿಂತಲೂ ಹಳೆಯ ರೋಗಿ ಅನುಭವಿ ಎಂದು. ಅದನ್ನು ನುಂಗಿ ನೀರನ್ನು ಕುಡಿದ ನಂತರ ಸ್ವಲ್ಪ ನೆಮ್ಮದಿ ಸಿಕ್ಕಿತು.

ಬಾಗಿಲು ತಟ್ಟಿದ ಶಬ್ಧವಾಯಿತು. ಒಂದು ಝೀರೋ ಕ್ಯಾಂಡಲ್ ಬಲ್ಬ್ ಬಿಟ್ಟು ಉಳಿದೆಲ್ಲ ದೀಪಗಳÀನ್ನು ಆರಿಸಿದೆ. ಕಿಟಕಿಗಳೆಲ್ಲಾ ಮೊದಲೇ ಮುಚ್ಚಿದ್ದವು. ಬಾಗಿಲು ತೆರೆದೆ. ಬಿಳಿಯ ಬಣ್ಣದ ನಿಲುವಂಗಿ ತರಹದ್ದನ್ನು ಧರಿಸಿರುವ ಆಕೃತಿಯೊಂದು ಒಳಗೆ ಬಂತು. ಆ ಆಕೃತಿ ನನ್ನನ್ನು ಹಾಸಿಗೆಯ ಮೇಲೆ ಮಲಗಿಕೊಳ್ಳುವಂತೆ ಹೇಳಿದಾಗ ಅದನ್ನು ಪಾಲಿಸಿದೆ. ಅದು ಮಾತನಾಡತೊಡಗಿತು.

ನಿನ್ನ ಬಿಡುಗಡೆಯ ಹಂಬಲಕ್ಕೆ, ಆ ನಿಟ್ಟಿನಲ್ಲಿನ ಸ್ಥೈರ್ಯ- ಧೈರ್ಯಕ್ಕೆ ಮೆಚ್ಚಿದೆ ಹುಡುಗಿ. ನೀನು ನಿಜಕ್ಕೂ ಅದಕ್ಕೆ ಅರ್ಹಳು. ಅಳುಕಬೇಡ. ಆದರೆ ನಿನ್ನ ಅನುಸಂಧಾನ ಆಗಬೇಕಿರುವುದು ಆ ಆತ್ಮನೊಡನೆ. ಕಣ್ಣು ಮುಚ್ಚಿಕೋ... ನಾನು ಹೇಳುವುದನ್ನು ಮಾತ್ರ ಕೇಳು' ತೆರಣಿಯ ಹುಳು ತನ್ನ ಸ್ನೇಹದಿಂದ
ಮನೆಯ ಮಾಡಿ ತನ್ನ ನೂಲು
ತನ್ನನೆ ಸುತ್ತಿ ಸಾವಂತೆ,
ಮನಬಂದುದನ್ನು ಬಯಸಿ
ಬೇವುತ್ತಿದ್ದೇನಯ್ಯಾ,
ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ
ಚೆನ್ನಮಲ್ಲಿಕಾರ್ಜುನಾ.’


`ಇದೆಂಥಾ! ಹಗಲು ರಾತ್ರಿ ಎಲ್ಲಾ ಒಂದೇ ಆಗಿತ್ತು ನಿಮಗೆ. ನಾನು ಇವತ್ತು ಯಾರನ್ನೂ ಕೇಳದೇ ಒಂದು ಕೆಲಸ ಮಾಡಿದೆ ಗೊತ್ತಾ? ಏಳಿ ಏಳಿ, ಹೇಳ್ತೆ. ನಂಗೆ ಗೊತ್ತಿತ್ತು. ಈ ಮುದುಕರು ಹಾವು ಹಿಡದಂಗೆ, ಹೊಡದಂಗೆ ಹೇಳಿ. ಅದಕ್ಕೆ ಬೆಳಿಗ್ಗೆ ಕೆಲಸ ಬಿಟ್ಟು ಹೋಗಬೇಕಾದರೆ ಸ್ನೇಕ್ ಸುಂದರಗೆ ನಿಮ್ಮನಿ ವಿಳಾಸ ಕೊಟ್ಟು ಹೋಗಿದ್ದೆ. ಅಂವ ಹಾವು ಹಿಡ್ಕೊಂಡು ಹೋದ. ಎಲ್ಲಾ ಕಿಟಕಿ ಬಾಗಿಲು ತೆಗಿಯೋಣ ಇನ್ನು’ ಎಂದು ಹೇಳುತ್ತಾ ರಾಜಮ್ಮ ಬಾಗಿಲುಗಳನ್ನೆಲ್ಲಾ ತೆಗೆದಳು. ನನಗೆ ಕನಸೊಂದರಿಂದ ಎದ್ದಂತಾಯಿತು. ರೂಮಿನ ತುಂಬಾ ಬೆಳಕು ತುಂಬಿತ್ತು.

ಟಣಕ್ ಟಣಕ್ ಎಂದು ಮೊಬೈಲ್‍ಗೆ ಮೆಸೇಜ್ ಬಂದು ಬಿದ್ದಿತ್ತು. ಅದು ನಾನಂದುಕೊಂಡಂತೆ ಸುಮಾಳದ್ದೇ ಆಗಿತ್ತು.

`ನಿಮ್ಮೂರಿಗೆ ಹೋಗುವ ಎಲ್ಲಾ ದಾರಿಗಳೂ ಭೂಕುಸಿತದಿಂದ ಜಾಮ್ ಆಗಿವೆಯಂತೆ. ಆತ ಇವತ್ತು ತಲುಪುವುದು ಅಸಾಧ್ಯ’ ಎಂದು ಮೆಸೇಜ್ ಮಾಡಿದ್ದನು.

`ನನಗೆ ಅವನು ಸಿಕ್ಕ. ಭವದ ಇನ್ಯಾರು ಬೇಡ. ಆತನಿಗೆ ವಾಪಾಸು ತೆರಳಲು ಹೇಳು’ ಎಂದು ಟೈಪಿಸಿ ಹೊಸ ಹುಮ್ಮಸ್ಸಿನಿಂದ ಕೋಣೆಯ ಬಾಗಿಲು ತೆರೆದೇ ಇಟ್ಟೆ. ಬಿಸಿಲು ಕೋಲುಗಳು ಪರಸ್ಪರ ಪೈಪೋಟಿಯಿಂದ ಕೊಠಡಿಯ ಒಳಗೆ ಮುನ್ನುಗ್ಗ ತೊಡಗಿದವು. ಬೆಳಕು ಇಡೀ ರೂಮಿನ ತುಂಬೆಲ್ಲ ಆವರಿಸತೊಡಗಿತ್ತು.
ನಾನು ನಿಲುವುಗನ್ನಡಿಯ ಬಳಿ ತೆರಳಿ ನನ್ನನ್ನೇ ಬಹಳ ಹೊತ್ತು ದಿಟ್ಟಿಸುತ್ತ ನಿಂತೆ. ನೋಡನೋಡುತ್ತಿದ್ದಂತೆ ಕನ್ನಡಿಗಂಟಿಸಿದ ಬಿಂದಿ ಅಂಟಿನ ನಂಟನ್ನು ಕಳಚಿಕೊಂಡು ಕೆಳಗುರುಳಿತು.

ಡಾ.ಅಜಿತ್ ಹರೀಶಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x