Facebook

ಪಂಜು ಕಾವ್ಯಧಾರೆ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕ ನೇಯ್ದ ಅವ್ವ…!!

ಕಾವ್ಯ ಪುರಾಣ ವೇದ ಉಪನಿಷತ್ತು
ಕಟ್ಟಿ ತಿಳಿಸಿ ಓದಿದವಳಲ್ಲ
ಹೊಲ ಗದ್ದೆ ಪೈರು ಮನೆಯನ್ನ
ಜೇಡರ ಬಲೆಯಂತೆ ನೇಯ್ದು
ಬಂಡೆಯಲ್ಲಿ ಮೊಳಕೆಯೊಡೆದು
ಸೂರಿಗೆ ಚಂದ್ರನಾಗಿ ತಂಪ ನೀಡಿದವಳು

ಕೋಳಿ ಕೂಗೋ ಮುಂಚೆ ಎದ್ದು
ದನ ಕರು ಕಟ್ಟಿ, ಕಸ ಸುರಿದು ಬಂದು
ಮಬ್ಬ ನೆಲದಾಗಸವ ಶುಚಿಗೊಳಿಸಿ
ನೀರ-ನಿಡಿ ಹಿಡಿದು ಕಾಯಿಸಿ
ಹಜಾರದಲ್ಲಿ ಮಕ್ಕಳಿಗೆ ಮಜ್ಜನ ಮಾಡಿಸಿ
ಕೊಳಕಿಲ್ಲದ ಶ್ವೇತವಸ್ತ್ರ ತೊಡಿಸಿ
ಲೋಕದ ಮಾನ ಮುಚ್ಚಿ
ಬಾಚಣಿಗೆಯಲ್ಲೆ ವಿಶ್ವಪರ್ಯಟಿಸಿ
ಚಿಂದಿ ಮನಗೂಡಿಸಿ ಸಮತೆ ಸಾರಿ
ನಾಲಗೆ ಮೇಲೆ ಬಿಜ್ಜಿಯಿರಲು
ಇಸ್ಕೂಲಿಗೆ ನಮ್ಮ ಕಳುಸಿದವಳು

ನಡುರಾತ್ರಿ ಪೂರ ನಿದ್ದೆಗೆಟ್ಟು
ಕಲ್ಲನ್ನೆತ್ತಿ ರಾಗಿ ಬೀಸಿ
ದಣಿದು ಆಯಾಸಗೊಂಡು
ಲೋಕವನ್ನೊಮ್ಮೆ ಸುತ್ತಿಬರುತ್ತಿದ್ದಳು
ಮಕ್ಕಳೆಂದರೆ ಅವಳಿಗೆ
ಜಿನುಗೋ ಜೀವ
ತಾ ಹಸಿದರೂ, ಮುದ್ದೆಸೊಪ್ಪುಬೇಯಿಸಿ
ಎಲ್ಲರ ಹೊಟ್ಟೆ ತುಂಬಿಸಿದವಳು

ಆಕೆ ಹೆಬ್ಬೆಟ್ಟು,
ನೀತಿ ತತ್ವ ಬಲ್ಲವಳಲ್ಲ
ಕರುಳ ಮಣ್ಣ ಹದಮಾಡಿ
ಆಚಾರಕ್ಕೆ ಅರಸನಂತಿರಬೇಕೆಂಬ
ಜನಪದ ನುಡಿಯ ಸತ್ವ ಬಿತ್ತಿ
ನಮ್ಮ ಬೆಳೆಸಿದವಳು

ಆದಿನಾರಾಯಣ್


ಪಲಾಯನ ವೇಗ

ಬಣ್ಣ-ಬಣ್ಣದ ಆಟದ ಬೊಂಬೆ ಹರಡಿ ನೆಲದ ಮೇಲೆ,
ಆಡುತಿಹಳು ಉತ್ಸಾಹದಲಿ ಆ ಮೂರು ವರ್ಷದ ಬಾಲೆ.
ಗರ್ಜಿಸುವ ಹುಲಿ, ಆಡುವ ನವಿಲು, ಕುಪ್ಪಳಿಸುವ ಮಂಗ:
ಓಡುವ ರೈಲು, ಬಸ್ಸು ಕಾರು ನಭಕೆ ಹಾರುವ ವಿಮಾನ.
ಪಾತ್ರೆ, ಪಡಗ ಜೋಡಿಸಿ ನಡೆದಿದೆ ಅಲ್ಲಿ ಮನೆಯಾಟ.
ಭವಿಷ್ಯದ ಸಂಸಾರ ನಾಟಕಕೆ ಇದೊಂದು ಪೂರ್ವಪಾಠ.

ಬೊಂಬೆಗಳ ವೈವಿಧ್ಯದ ಲೋಕಕೆ ನಾನೇ ಮನಸೋತೆ.
ಇನ್ನು ಆ ಕಿಶೋರಿ ನಲಿದರೆ ಅಚ್ಚರಿಯೆಂಬುದುಂಟೆ!

ಆಟಗಳ ಪಟ್ಟಿಗೆ ಸೇರಿತು ಮತ್ತಷ್ಟು ಸರಕು.
ಸಮಕಾಲೀನ ಪವಾಡಕೆ, ಆಧುನಿಕತೆಯ ಪೋಷಾಕು.
ಅರ್ಪಿಸಿದ ಹಾಲ ಸೊಂಡಿಲಲಿ ಹೀರುವ ವಿನಾಯಕ,
ಕಣ್ ರೆಪ್ಪೆ ಆಡಿಸುವ ಸಂತ, ಕಣ್ಣೀರಿಡುವ ಹನುಮಂತ

ನೆಲದ ಆಕರ್ಷಣೆಗಳ ಗುರುತ್ವ ಭೇದಿಸಿ ಮಗುವೇ,
ಬೌದ್ಧಿಕ ಚಿಂತನೆಯಾಗಸಕೆ ನೀನೆಂದು ಜಿಗಿವೆ?

ಮಹಾಬಲ ಕೆ ಎನ್


ಸಂಕ್ರಾಂತಿ

ಸಂಕ್ರಾಂತಿ ಶುಭ ಸಂಕ್ರಾಂತಿ
ಸುಗ್ಗಿಯ ಹಬ್ಬವು ಸಂಕ್ರಾಂತಿ
ಜನ, ಜಾನುವಾರಿಗು ಸುಖಶಾಂತಿ
ಹಿಗ್ಗುತ ಪಡೆವರು ಸಂತೃಪ್ತಿ

ಶಿಶಿರನ ಉಪಟಳ ಮುಗಿಯುತಿದೆ
ಮಾಗಿಯ ಚಳಿಯು ಸವೆಯುತಿದೆ
ದಿನಕರ ಪಥವನು ಬದಲಿಸುವ
ಮಕರರಾಶಿಯನು ಪ್ರವೇಶಿಸುವ

ಬೆಳೆಗಳ ರೈತರು ಕೊಯ್ಯುವರು
ಬಂಗಾರ ಫಸಲನು ಪಡೆಯುವರು
ಕಣದಲಿ ಒಕ್ಕಣೆ ಮಾಡುವರು
ಧಾನ್ಯದ ರಾಶಿಯ ಪೂಜಿಪರು

ಅಪ್ಪನು ದನಗಳ ಮೀಯಿಸುವ
ಬೆಚ್ಚನೆ ಕಿಚ್ಚನು ಹಾಯಿಸುವ
ಅಮ್ಮನು ಕಿಚಿಡಿಯ ಮಾಡುವಳು
ಗೋವಿಗೆ ಎಡೆಯನು ನೀಡುವರು

ಮಕ್ಕಳು ಮನೆಮನೆಗೆ ಹೋಗುವರು
ಎಳ್ಳು-ಬೆಲ್ಲಗಳ ಬೀರುವರು
ನೆರೆಹೊರೆ ಹರುಷವ ಹಂಚುವರು
ಹಿರಿಯರ ಹಾರೈಕೆ ಬೇಡುವರು

ಶುಭಕರ ಗಳಿಗೆಯು ಬರುತಲಿದೆ
ಅಯನದ ಕಣ್ಣು ತೆರೆಯುತಿದೆ
ಸಂಕ್ರಾಂತಿ ಶುಭ ಸಂಕ್ರಾಂತಿ
ಬೆಳೆಗೂ ಕಾಲಕೂ ಬೆಲೆಕ್ರಾಂತಿ
-ಎಂ.ಡಿ.ಚಂದ್ರೇಗೌಡ ನಾರಮ್ನಳ್ಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಪಂಜು ಕಾವ್ಯಧಾರೆ”

  1. Venu Jalibenchi says:

    ಈ ಸಲದ ಪಂಜು ಕಾವ್ಯಧಾರೆಯ ಈ ಮೂರೂ ಕವಿತೆಗಳು ಮನಸ್ಸಿಗೆ ಮುದ ನೀಡಿದವು…ಮೊದಲ ಕವಿತೆ ಬದುಕ ನೇಯ್ದ ಅವ್ವ….ನಿಜಕ್ಕೂ ಓದುಗರೊಂದಿಗೆ ಆಪ್ತವಾಗುವ ಕವಿತೆ… ಅವ್ವನ ಬಗ್ಗೆ ಎಷ್ಟು ಬರೆದರೂ ಕಡಿಮೆ… ಎಂಬುದಕ್ಕೆ ಮತ್ತೊಂದು ಸೇರ್ಪಡೆ ಈ ಕವಿತೆ… ಕವಿ ಆದಿನಾರಾಯಣ್ ಹಾಗೂ ಪ್ರಕಟಿಸಿದ ಪಂಜು ಬಳಗದ ಸಂಪಾದಕರಿಗೆ ಅಭಿನಂದನೆಗಳು…

    ಎರಡನೆಯ ಕವಿತೆ ಪಲಾಯನ ವೇಗ….ಆಧುನಿಕ ಜಗತ್ತು ತಂದೊಡ್ಡ ದುರಂತಗಳ ಕುರಿತು ಮಾತನಾಡುತ್ತಿದೆ…ಮೂರು ವರ್ಷದ ಮಗುವಿಗೆ ಆಟಿಕೆ ಸಾಮಾನುಗಳೇ ಪ್ರಪಂಚವಾಗಿ ಬೌದ್ಧಿಕ ಬೆಳವಣಿಗೆ ಅಸಾಧ್ಯವಾಗುತ್ತಿರುವುದರ ಬಗ್ಗೆ ಕವಿಯ ಕೊರಗು ಇದೆ…ಕವಿ ಮಹಾಬಲ ಕೆ.ಎನ್ ಹಾಗೂ ಪ್ರಕಟಿಸಿದ ಪಂಜು ಬಳಗದ ಸಂಪಾದಕರಿಗೆ ಅಭಿನಂದನೆಗಳು…

    ಹಾಗೆಯೇ ಮೂರನೆಯ ಕವಿತೆ ಈ ವರ್ಷದ ಸಂಕ್ರಾಂತಿ ಹಬ್ಬದ ಕುರಿತು ಬರೆದದ್ದು…ಸರಳ ಪ್ರಾಸಬದ್ಧ ರಚನೆ.. ಸಂಕ್ರಾಂತಿ ಹಬ್ಬದ ಸಮಯದಲ್ಲಿ ನಡೆಯುವ ಹಲವು ಆಚರಣೆಗಳನ್ನು ನೆನಪಿಸುತ್ತ…ಒಟ್ಟಿನಲ್ಲಿ ಸಂಕ್ರಾಂತಿ ಶುಭ ಸಂಕ್ರಾಂತಿ ಎಂದು ಅಭಿಪ್ರಾಯಪಡುತ್ತಾ…ಸಂಕ್ರಾಂತಿಯ ವಿಶೇಷವಾಗಿ ಈ ಕವಿತೆ ಬಂದಿದೆ.. ಕವಿ ಎಂ.ಡಿ.ಚಂದ್ರೇಗೌಡ ನಾರಮ್ನಳ್ಳಿ ಹಾಗೂ ಪ್ರಕಟಿಸಿದ ಪಂಜು ಬಳಗದ ಸಂಪಾದಕರಿಗೆ ಅಭಿನಂದನೆಗಳು… ಶುಭವಾಗಲಿ…

Leave a Reply