ನಡುವೆ ಬಂದವರು: ಸಿಂಧು ಭಾರ್ಗವ್

ರೋಶನಿ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ. ವಯಸ್ಸು 35 ವರ್ಷವಿರಬಹುದು. ಮದುವೆಯಾಗಿ ಒಂದು ಮಗು ಇರುವ ಸಂಸಾರಸ್ಥೆ. ಹೀಗಿರುವಾಗ ರೋಹಿತ್ ಎಂಬ ಹೊಸ ಸಹೋದ್ಯೋಗಿಯ ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿಯ ನಾಮಕರಣ ಮಾಡಿದ್ದಳು. ಅವನೋ ಇನ್ನೂ ಯುವಕ. 23 ವರ್ಷ ವಯಸ್ಸಿರಬಹುದು. ನೋಡಲು ಸುರದ್ರೂಪಿ. ಉತ್ಸಾಹಿ ಕೆಲಸಗಾರ. ಅನುದಿನವೂ ಅವಳ ಜೊತೆ ಹರಟುವುದು, ಅವಳ ಸೌಂದರ್ಯವನ್ನು ಹೊಗಳುವುದು, ವೃತ್ತಿ ನಿಷ್ಠೆಯನ್ನು ಹೊಗಳುವುದು ಅವನ ದಿನಚರಿಯಾಗಿತ್ತು. ಹೆಣ್ಮಕ್ಕಳಿಗೆ ಸ್ವಲ್ಪ ಹೊಗಳಿದರೂ ಕರಗಿ ಹೋಗುವುದು ಅವರ ಮನೋ ದೌರ್ಬಲ್ಯ ಎನ್ನಬಹುದೇನೋ. ಪ್ರಕೃತಿ ಸಹಜವೂ ಹೌದು.

ಜೊತೆಗೆ ಅವಳ ಸಾಂಸಾರಿಕ ವಿಷಯಗಳನ್ನು ಕೇಳಿ ತಿಳಿದು ಸಲಹೆ ನೀಡುವುದು ತುಂಬಾ ಸಕಾರಾತ್ಮಕವಾಗಿ ಮಾತನಾಡುವುದು ಅವನತ್ತ ಆಕರ್ಷಿಸಲು ಮುಖ್ಯ ಕಾರಣವಾಗಿತ್ತು. ಮನವು ಆಕರ್ಷಿಸಿದ ಮೇಲೆ ತನುವೂ ಜೊತೆಗೂಡುತ್ತದೆ ಎನ್ನುವುದು ಸುಳ್ಳಲ್ಲ‌. ರೋಶನಿಗೆ ತಪ್ಪು ಅನ್ನಿಸಲೂ ಇಲ್ಲ. ಗಂಡ, ಮುದ್ದಾದ ಮಗು ಇದ್ದರೂ ರೋಹಿತ್ ಗೆ ಮನಸೋತು ತನ್ನ ಸ್ಥಾನವೇನು ಎಂಬುದನ್ನೇ ಮರೆತು ಅವನಿಗೆ ಶರಣಾದಳು. ಅವಳು ವಯಸ್ಸಿನಲ್ಲಿ ಹನ್ನೆರಡು ವರುಷ ಹಿರಿಯಳು. ಅದ್ಯಾವುದೂ ಲೆಕ್ಕಕ್ಕೇ ಬರದೇ ಪ್ರೀತಿ ಎಂಬ ಹೆಸರಿನಲ್ಲಿ ದಿನಗಳು ಉರುಳುತ್ತಿತ್ತು.

ಐದಾರು ತಿಂಗಳ ಮೇಲೆ ಆಫೀಸಿನಲ್ಲಿ ಸಹೋದ್ಯೋಗಿಗಳು ಗುಸುಗುಸು ಮಾತನಾಡುವಾಗಲೇ ಮನಸ್ಸಿಗೆ ಸ್ವಲ್ಪ ಬಿಸಿ ಮುಟ್ಟಿತು. ಗಂಡನಿಗೆ ತಿಳಿದರೆ?? ಮುಂದೆ?? ಎಂಬ ಭಯ ಎದೆ ಬಡಿತ ಹೆಚ್ಚಿಸಿತ್ತು. ಆಗ ರೋಹಿತ್ ನ ಜೊತೆ ಎಲ್ಲ ತುಮುಲಗಳನ್ನು ಹಂಚಿಕೊಂಡಳು. ಆಗ ಅವನು ಸಮಾಧಾನ ಮಾಡಿ ಏನೂ ಆಗುವುದಿಲ್ಲ. ಇದೆಲ್ಲ ಕಾಮನ್. ಸರ್ವೇ ಸಾಮಾನ್ಯ ಎನ್ನುವ ಹಾಗೆ ಉತ್ತರಿಸಿದ. ಅವಳಿಗೆ ಮದುವೆ ಆಗಿದೆ ಮಗುವಿದೆ ಎನ್ನುವುದು ಇವನಿಗೊಂದು ಲೆಕ್ಕವೇ ಅಲ್ಲದವನಂತೆ ಉಢಾಫೆ ಮಾಡಿದ. ಇದರ ಮುಂದಿನ ಪರಿಣಾಮ ಅವಳ ಸಂಸಾರದಲ್ಲಿ ಕಾಡ್ಗಿಚ್ಚು ಹತ್ತಬಹುದು ಎಂದೂ ಕೂಡ ಊಹಿಸಲು ಹೋಗಲಿಲ್ಲ. ಕಾರಣ ಅವನೊಬ್ಬ ಮಡಿವಂತಿಕೆಯಿಲ್ಲದ ಬ್ರಹ್ಮಚಾರಿ.

ಪ್ರೀತಿ ಕುರುಡೋ, ಮರುಳುತನವೋ, ಅಮಲೋ ಏನೇ ಆದರೂ ಇವರಿಬ್ಬರ ಗಪ್ಚುಪ್ ಕಹಾನಿ ಒಂದು ದಿನ ಗಂಡನ ಕಿವಿಗೆ ಚಂಡಮಾರುತದಂತೆ ಬಂದಪ್ಪಳಿಸಿತ್ತು. ಸುಂಟರಗಾಳಿಯ ಹಾಗೆ ಸುರುಳಿ ಸುತ್ತುತ್ತ ಅವನ ನಿದ್ದೆಗೆಡಿಸಿತ್ತು. ಸೌಮ್ಯ ಸ್ವಭಾವದವನಾದ ಅವನಿಗೆ ಈ ವಿಷಯ ಅರಗಿಸಿಕೊಳ್ಳಲೂ ಆಗಲಿಲ್ಲ. ಒಂದು ಸಂಜೆ ಕರೆದು ಕೂತು ಚರ್ಚಿಸಿ “ನಾನೇನು ಕಡಿಮೆ ಮಾಡಿದ್ದೆ ನಿನಗೆ? ಏಕೆ ಹೀಗೆ ಮೋಸ ಮಾಡುತ್ತಿದ್ದೀಯಾ? ನಿನ್ನ ಮಗುವಿನ ಮುಖ ನೋಡು. ಅವನಾದರು ಏನು ತಪ್ಪು ಮಾಡಿದ್ದಾನೆ??” ಎಂದೆಲ್ಲ ಪ್ರಶ್ನೆ ಕೇಳಿದ. ಯಾವುದಕ್ಕೂ ಉತ್ತರ ಅವಳ ಬಳಿ ಇರಲಿಲ್ಲ. ಕೊನೆಗೆ ಮೊಬೈಲ್ ನಂಬರ್, ಉಳಿದ ಸೋಶಿಯಲ್ ಮೀಡಿಯಾದ ಎಲ್ಲ ಸಂಪರ್ಕ ಕಡಿತಗೊಳಿಸಲು ಹೇಳಿದ. ಅವನ ಕಣ್ಣೆದುರೇ ಎಲ್ಲವನ್ನೂ ಬ್ಲಾಕ್ ಮಾಡಿದಳು. ಇಷ್ಟಕ್ಕೆ ಎಲ್ಲ ಸರಿಯಾಗುವುದೇ? ನಡುವೆ ಬಂದವನಿಂದ ಒಳಿತಾಗುವುದೋ? ಕೆಡುಕೋ?

ಒಳಿತು ಕೆಡುಕುಗಳ ಮಿಶ್ರಣ :- ಸ್ನೇಹಿತರೇ ಮೇಲಿನ ಘಟನೆಯನ್ನು ಗಮನಿಸಿ. ಇಲ್ಲಿ ಹೆಣ್ಣು ತಪ್ಪು ಮಾಡಿರುವುದು, ಗಂಡಸು ಮಾತ್ರ ತಪ್ಪು ಮಾಡುವುದನ್ನು ಪರ ಸ್ತ್ರೀ ಸಹವಾಸ ಮಾಡುತ್ತಾನೆ ಎಂಬುದನ್ನು ನೀವು ಕೇಳಿರಬಹುದು. ಆದರೆ ಹೆಂಡತಿಯೇ ಹೀಗೆ ಮಾಡಿದರೆ? ನಡತೆಗೆಟ್ಟವಳು ಎಂಬ ಪದಕವನ್ನು ಮೊದಲು ಕತ್ತಿಗೆ ನೇತು ಹಾಕುತ್ತಾರೆ.ಅವಳಿಗೆ ಅವಮಾನ ಮಾಡಿ ಗಲಾಟೆ ನಡೆಸಿ ಮನೆಯಿಂದ ಹೊರಹಾಕಬಹುದು. ಸೌಮ್ಯ ಸ್ವಭಾವದ, ವಿವೇಚನೆ ಇರುವ ಗಂಡನಾದರೆ ಸಾವಿರ ಪ್ರಶ್ನೆಗಳು ಅವನಲ್ಲಿ ಮೂಡುತ್ತವೆ. “ನಾನೇನು ತಪ್ಪು ಮಾಡಿದೆ?? ಎಲ್ಲಿ ತಪ್ಪಾಯಿತು??” “ನಾನಿರುವಾಗ ಪರಪುರುಷನ ಅಗತ್ಯವೇನಿತ್ತು”?? ಎಂದು ಪದೇ ಪದೇ ತನ್ನನ್ನೇ ಕೇಳಿಕೊಳ್ಳುತ್ತಾನೆ. ಇದಕ್ಕೆ ಕಾರಣವನ್ನು ಹುಡುಕುತ್ತಾನೆ.

ಇಂತಹ ಪರಿಸ್ಥಿತಿಗೆ ಮುಖ್ಯವಾದ ಕಾರಣವೇ ದಂಪತಿಗಳ ನಡುವಿನ ಸಂವಹನ ಪ್ರಕ್ರೀಯೆ ಇಲ್ಲದಿರುವುದು. ಇಬ್ಬರೂ ದುಡಿಯುವವರೇ. ಕೆಲಸದ ಒತ್ತಡ, ಸುಸ್ತು ಆಯಾಸ ಎಂದು ಮಾತು ಕಡಿಮೆ ಮಾಡಿ ಬಿಡುವಾದಾಗೆಲ್ಲ ನಿದ್ದೆ ಮಾಡಿಯೇ ಕಳೆಯುವುದು. ಅಲ್ಲದೇ ನಿಶ್ಶಕ್ತಿ, ಅನಾಸಕ್ತಿ ಎಂಬ ನೆಪವೊಡ್ಡಿ ತಿಂಗಳಲ್ಲಿ ಒಮ್ಮೆಯೂ ದೈಹಿಕ ಸಂಪರ್ಕ ನಡೆಸದೇ ಇರುವುದು. ವಾರಾಂತ್ರಯಕ್ಕೆ ಒಮ್ಮೆಯಾದರೂ ಹೊರಗಡೆ ಹೋಟೆಲ್ ಇಲ್ಲ ಪಾರ್ಕ್ ಗೆ ಕರೆದುಕೊಂಡು ಹೋಗಿ ಮಗುವನ್ನು ಆಡಿಸುವುದೋ ಇಲ್ಲ ಮಡದಿಯ ಜೊತೆ ಮಾತಿಗಿಳಿಯದೇ ಇರುವುದು. ಇದರಿಂದಲೇ ಕ್ರಮೇಣ ಆಕರ್ಷಣೆ ಕಡಿಮೆಯಾಗಿ ನೋಡುಗರ ದೃಷ್ಟಿಯಲ್ಲಿ ಗಂಡ-ಹೆಂಡಿರ ಹಾಗೆ ಬದುಕಲು ಶುರುಮಾಡುತ್ತಾರೆ. ಅವನತ್ತ, ಇವಳಿತ್ತ ಎಂಬಂತೆ ಒಬ್ಬೊಬ್ಬರೇ ಬದುಕುತ್ತಿರುತ್ತಾರೆ.

ಇಲ್ಲಿ ನಡೆದಿರುವುದೂ ಹಾಗೆಯೇ. ಹೆಣ್ಮಕ್ಕಳಿಗೆ ಸ್ವಲ್ಪ ಹೊಗಳಿದರೂ ನಾಚಿಕೆಮುಳ್ಳಿನ ಎಲೆಗಳಂತೆ ನಾಚಿಬಿಡುತ್ತಾರೆ. ಅಂತದ್ದರಲ್ಲಿ ಆ ಉತ್ಸಾಹಿ ತರುಣ ದಿನವೂ ಇವಳನ್ನು ಹೊಗಳುವುದೇ ತನ್ನ ಕೆಲಸವಾಗಿಸಿಕೊಂಡಾಗ ಸಹಜವಾಗಿಯೇ ಮನ ಸೋಲುತ್ತದೆ. ಅಲ್ಲದೇ ಕಷ್ಟಸುಖಗಳ ಕೇಳುವವನೊಬ್ಬ ಇದ್ದಾನೆ ಎಂದಾಗ, ಪ್ರೀತಿ-ಕಾಳಜಿ ತೋರಿಸುವವನು ಸಿಕ್ಕಿದ್ದಾನೆ ಎಂದಾಗ ಆ ಮನಸ್ಸಿಗೆ ಎಲ್ಲಿಲ್ಲದ ಖುಷಿಯಾಗುತ್ತದೆ. ಕಮರಿದ ಕನಸುಗಳು ಮತ್ತೆ ಚಿಗುರುತ್ತವೆ. ಎಲ್ಲ ವರ್ಗದ ವಯಸ್ಸಿನವರಿಗೂ ತಮ್ಮ ಭಾವನೆಗಳ ಹಂಚಿಕೊಳ್ಳಲು ಒಬ್ಬ ಗೆಳೆಯ/ಗೆಳತಿಯ ಅವಶ್ಯಕತೆ ಇರುತ್ತದೆ. ಅದು ಪ್ರಕೃತಿ ಸಹಜವೆಂದಾಗ ಒಪ್ಪಲೇಬೇಕು. ಹಾಗಿದ್ದಾಗ ಪತಿಮಹಾಶಯ ದಿನಕ್ಕೆ ಒಂದುಮಾತನ್ನೂ ಹೊರಹಾಕದಿದ್ದರೆ ಅವಳಿಗೆ ಹೇಗೇತಾನೇ ಅನ್ಯೋನ್ಯತೆ ಮೂಡುತ್ತದೆ.? “ಇವನು ನನ್ನ ಗಂಡ, ನಮ್ಮಿಬ್ಬರ ನಡುವೆ ಯಾರಿಗೂ ಪ್ರವೇಶವಿಲ್ಲ” ಎಂಬ ಭಾವ ಮೂಡುತ್ತದೆ. ನೀವೇ ಹೇಳಿ.

ಇದರ ಪರಿಣಾಮ ಏನಾಗಬಹುದು?? : ಪರಿಣಾಮ ಸ್ಪಷ್ಟವಾಗಿ ನಮ್ಮ ಕಣ್ಮುಂದಿದೆ. ಎರಡು ತರಹದ ಬದಲಾವಣೆಯನ್ನು ನಾವು ಕಾಣಬಹುದು.೧) ಪರಪುರುಷನ ಸಂಗ ಮಾಡಿದ ಅವಳನ್ನು ಮತ್ತೆ ಮುಟ್ಟಲು ಮನಸ್ಸು ಬರದೇ ಮತ್ತದೇ ದೈಹಿಕ ಸುಖದಿಂದ ವಂಚಿತಳಾಗಬಹುದು. ಆ ಕಹಿ ಘಟನೆ ಮರೆಯಲಾಗದೇ ಅವಳ ಮೇಲೆ ಸಿಡುಕುತಲಿರಬಹುದು. ಮಕ್ಕಳ ಎದುರು ಗಂಡ ಹೆಂಡಿರಂತೆ ನಾಟಕೀಯ ಜೀವನ ನಡೆಸಬಹುದು. ೨) ತನ್ನ ತಪ್ಪನ್ನು ಹುಡುಕಿಕೊಂಡು, ಇದರಲ್ಲಿ ಹೆಂಡತಿಯ ತಪ್ಪೇನಿಲ್ಲ ಎಂದು ಕ್ಷಮಿಸುವ ಮಹಾಗುಣವನ್ನು ತೋರಿ ಮತ್ತೆ ಅನ್ಯೋನ್ಯತೆ ಮೂಡಬಹುದು. ಸುಖಸಂಸಾರಕ್ಕೆ “ನಾಂದಿ” ಕೂಡ ಇದಾಗಬಹುದು. ಆದರೂ ಒಡೆದ ಕನ್ನಡಿಯಲ್ಲಿ ಮುಖವು ಅಸ್ಪಷ್ಟವಾಗಿ ಕಾಣುತ್ತದೆ ಎನ್ನುವುದು ಸುಳ್ಳಲ್ಲ.

ಕೊನೆಯದಾಗಿ : ಹಾಗಾಗಿ ಸ್ನೇಹಿತರೇ, ಮದುವೆಯ ನಂತರ ಪರಸ್ತ್ರೀ ಇಲ್ಲ ಪುರುಷನಲ್ಲಿ ಮೂಡುವ ಪ್ರೀತಿ, ವಯಸ್ಸಿನ ಗಡಿಯಿಲ್ಲದೇ, ಕರ್ತವ್ಯ ಮತ್ತು ಜವಾಬ್ದಾರಿಗಳ ಅರಿತುಕೊಳ್ಳದೇ ಮಾಡುವ ತಪ್ಪುಗಳು ಕೇವಲ ದೈಹಿಕ ಸುಖಕ್ಕಾಗಿ ಮಾತ್ರ. ನೆನಪಿರಲಿ!! ಕಾಳಜಿಯನ್ನು, ಪ್ರೀತಿ ಎಂಬ ಹೆಸರಿಟ್ಟು ತಪ್ಪು ಮಾಡಿ ಸಮಜಾಯಿಷಿ ನೀಡುವುದೂ ದೊಡ್ಡತಪ್ಪು. ಗೆಳತಿಯರೇ ಸೋಲಬೇಡಿ. ಕಾಳಜಿಯನ್ನೇ ಪ್ರೀತಿ ಎಂದು ನಂಬಿ ಗೊಂದಲಕ್ಕೊಳಗಾಗಬೇಡಿ. ಒಂದೊಳ್ಳೆ ಸ್ನೇಹಿತನನ್ನು ಕಳೆದುಕೊಳ್ಳಬೇಡಿ. ಸುಖದ ಹಿಂದೆ ಹೋದವರು ಯಾರೂ ಗೆದ್ದು ಬಂದದ್ದು ಚರಿತ್ರೆಯಲ್ಲಿಲ್ಲ. ಇದರಿಂದ ಅವಮಾನ, ಹಣಕ್ಕಾಗಿ ಬ್ಲಾಕ್ ಮೇಲ್ ಗಳು ನಡೆಯುವುದೇ ಅಧಿಕ. ಪ್ರತಿಷ್ಠೆ, ಸ್ವಾಭಿಮಾನ ಎಲ್ಲವೂ ಬೀದಿಪಾಲಾಗುತ್ತದೆ. ದೈಹಿಕ ಸುಖವೊಂದೇ ಸಾಂಸಾರಿಕ ಜೀವನಕ್ಕೆ ಮುಖ್ಯವಲ್ಲ. ಆದರೂ ಅದೂ ಕೂಡ ಬೇಕೇ ಬೇಕು. ದುಡಿಯುವ ಗಂಡಸರೇ ದಿನವೂ ಮಡದಿ-ಮಕ್ಕಳ ಜೊತೆ ಒಂದೆರೆಡು ಮಾತನಾಡಿ ,ನಗೆಯಾಡಿಸಿ, ಕಷ್ಟ ಸುಖಗಳ ವಿಚಾರಿಸಿ ದಿನಚರಿಯನ್ನು ಕೇಳಿ ತಿಳಿದುಕೊಳ್ಳಿ. ಮಾತಿಗೆ ಅವಕಾಶ ಕೊಡಿ. ಮೌನಕ್ಕಲ್ಲ. ಯಾಂತ್ರಿಕ ಜೀವನ ಸಲ್ಲ‌.

– ಸಿಂಧು ಭಾರ್ಗವ್ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x