ಇಳಿ ಸಂಜೆಯ ಮೌನ… ಮಂಜುಗಣ್ಣಿನ ಮಾತು:ಶ್ರೀವತ್ಸ ಕಂಚೀಮನೆ

 

ಏಳು ದಶಕಗಳ ಹಣ್ ಹಣ್ಣು ಬದುಕು…ಹೆಸರು ಆನಂದರಾವ್…
ಮಣ್ಣ ಮನೆಯಲಿ ಮಲಗುವ ಮುನ್ನಿನ ಮಂಜುಗಣ್ಣಿನ ಹಿನ್ನೋಟದಲ್ಲಿ, ಹೆಸರಲ್ಲಿ ಮಾತ್ರ ಕಂಡ ಆನಂದದ ಅರ್ಥ ಹುಡುಕುತ್ತಾ ಕಂಗಾಲಾಗಿದ್ದೇನೆ…

ಈದೀಗ ಮನದಿ ಸುಳಿದಿರುಗುತ್ತಿರೋ ಭಾವ ಇದೊಂದೇ "ಎಷ್ಟುಕಾಲ ಬದುಕಿದ್ದೊಡೇನು – ಜೀವಿಸಲಾಗದಿದ್ದೊಡೆ ನನ್ನಂತೆ ನಾನು…" ಈ ಬದುಕಿಗೆ (ನನ್ನನ್ನೂ ಸೇರಿ ಈ ಜನಕ್ಕೆ) ಅದ್ಯಾಕೆ ಅಷ್ಟೊಂದು ಪ್ರೀತಿಯೋ ಮುಖವಾಡಗಳ ಮೇಲೆ…ಇಂದೀಗ ಬಯಲ ಹಸಿರ ತಂಗಾಳಿ ನಡುವೆಯೂ ಉಸಿರುಗಟ್ಟುವ ಭಾವ ನನ್ನಲ್ಲಿ…

ಏನೆಲ್ಲ ಇತ್ತಲ್ಲವಾ ಬದುಕ ದಾರೀಲಿ…ಸೊಗಸಾದದ್ದು, ಆಹ್ಲಾದವನೀಯುವಂಥದ್ದು…ಪುಟ್ಟ ಪುಟ್ಟದು…ಆಸ್ವಾದಿಸಿದರೆ ಬೆಟ್ಟದಷ್ಟು ಖುಷಿಯ ಕೊಡಬಲ್ಲದ್ದು…ಅವನ್ನೆಲ್ಲ ಎಡಗಾಲಲ್ಲಿ ಒದ್ದು ಓಡಿದ್ದು ಯಾವುದಕ್ಕಾಗಿ…

ಐಶ್ವರ್ಯದ, ಅಧಿಕಾರದ ಬೆನ್ನ ಹಿಂದೆ ಹೋಗಿ ಆನಂದಕ್ಕೆ ಬೆನ್ನು ಹಾಕಿದೆನಾ…

ಹಣ – ಹಣ ತಂದುಕೊಡುವ ಅಧಿಕಾರ – ಅಧಿಕಾರ ತಂದುಕೊಟ್ಟ ಮತ್ತಷ್ಟು ಹಣ – ಮತ್ತಷ್ಟು ಅಧಿಕಾರ…ಅಲ್ಲಲ್ಲೇ ಗಿರಕಿ ಹೊಡೆಯುತ್ತಾ ಪ್ರೀತಿ, ಸಂಸಾರ, ಸಂಬಂಧ, ಜೀವಿಸುವುದು ಎಲ್ಲವನ್ನು ಮರೆತು ಮನಸು ಸತ್ತವನಂತೆ ಬದುಕಿದ್ದೆನಲ್ಲ…ಯಾಕಾಗಿ..?

ಗಿರಿಯ ತುದಿ ತಲುಪುವ ಧಾವಂತದಲ್ಲಿ ಗಿರಿಮುಖದ ದಾರಿಯ ಆಚೀಚೆ ನೋಡಲೇ ಇಲ್ಲ…ದಾರಿಯ ಇಕ್ಕೆಲಗಳಲ್ಲಿ ಎಳೆಗರಿಕೆಯ ಮೇಲಿಂದ ಹಿಮಬಿಂದುವೊಂದು ಜಾರಿದ್ದು, ಗೋಪಿ ಹಕ್ಕಿ ಸೀಟಿ ಹಾಕಿದ್ದು, ಬಣ್ಣ ಬಣ್ಣದ ಹೂಗಳು ಅರಳಿದ್ದು, ದುಂಬಿಯೊಂದು ಕನವರಿಸಿದ್ದು, ಮಾವು ಚಿಗುರಿದ್ದು – ಕೋಗಿಲೆ ಉಲಿದದ್ದು, ಹರಿಣಗಳ ಸರಸ, ಹಾವು – ಮುಂಗುಸಿಯ ವಿರಸ, ಚಿರತೆಯೊಂದರ ಮರಿಗಳೆಡೆಗಿನ ಪ್ರೇಮ, ಕರಡಿಗಳ ಮಿಲನ, ಚಿಟ್ಟೆಯೊಂದು ಉಚ್ಚೆ ಹೊಯ್ದಿದ್ದು…ಉಹುಂ ಒಂದನೂ ನೋಡಿಲ್ಲ, ಆಸ್ವಾದಿಸಿಲ್ಲ, ಅಚ್ಚರಿಯಿಂದ ಕಣ್ಣರಳಿಸಿಲ್ಲ…ಬರೀ ಓಡಿದ್ದೇ ಓಡಿದ್ದು… ಕಣ್ಕಾಪು ಕಟ್ಟಿಸಿಕೊಂಡ ಯುದ್ಧ ಕುದುರೆಯಂತೆ…ಹಿಂಗದ ನನ್ನದಾಗಿಸಿಕೊಂಬ, ಹಿಡಿದಿಟ್ಟುಕೊಂಬ ದಾಹ…ಅದಕಿಟ್ಟುಕೊಂಡ ಚಂದದ ಹೆಸರು ಸಾಧನೆಯ ಮೈಲಿಗಲ್ಲು…

ಏರು ಯೌವನ, ಒಂದಷ್ಟು ಡಿಗ್ರಿಗಳು…ಆಗತಾನೆ ಸಿಕ್ಕ ಕೆಲಸ… ಬೆನ್ನಿಗಿದ್ದ ಹಣವಿಲ್ಲದೆ ಅನುಭವಿಸಿದ ಕಷ್ಟಗಳ, ಅವಮಾನಗಳ ನೆನಪು…ಕಣ್ಮುಂದೆ ಕುಣಿಯುವ ರಂಗು ರಂಗಿನ ಲೋಕ…ಹಣದ, ಅಧಿಕಾರದ ಹೆಗಲಿಗೆ ಜೋತುಬೀಳಲು ಅಷ್ಟು ಸಾಕಲ್ಲವಾ…

ಕೆಲಸ, ಧಕ್ಷತೆಯ ನಿರೂಪಣೆ, ಅಧಿಕಾರ, ಹಣ…ಸಂಜೆಗೆ ಸುಸ್ತು ಮರೆಯಲು ಹಣ ತಂದು ಕೊಡುವ ಸುಖಗಳು…ಇವುಗಳೆಲ್ಲ ಸೇರಿ ಇಷ್ಟಿಷ್ಟಾಗಿ ಜೀವಿಸುವುದು ಮರೆತೇ ಹೋಯಿತಲ್ಲವಾ…

ಸಂಸಾರ ಹೂಡಿದ್ದು ಖರೆ…ಹೊರಗೆ ಇನ್ಯಾರಿಂದಲೋ ಆಳಿಸಿಕೊಂಡಿದ್ದನ್ನು ಮರೆಯಲು ಮನೆಯಲ್ಲೊಂದಿಷ್ಟು ಆಳಿಸಿಕೊಳ್ಳುವ ಜೀವಗಳಿರಲಿ ಎಂಬ ಆಳದ ಭಾವದಿಂದಲೇನೋ ಎಂಬುದು ಇಂದಿನ ಅನುಮಾನ..
.
ಬೆಳಿಗ್ಗೆ ೮ ರಿಂದ ರಾತ್ರಿ ೮ ರವರೆಗೆ ಕತ್ತೆ ದುಡಿತ…ಒಂದಷ್ಟು ಮೀಟಿಂಗು, ಈಟಿಂಗು ಮತ್ತು ಒಣ ನಗೆಯ ಪ್ರದರ್ಶನ…ಆಮೇಲೆರಡು ತಾಸು ಐದು ನಕ್ಷತ್ರಗಳ ಹೋಟಲ್ಲಿನ ಕೃತಕ ಗಾಳಿ ಹಾಗೂ ಮಬ್ಬುಗತ್ತಲಲ್ಲಿ ಸುಖದ ಹುಡುಕಾಟ…ಅಮಲುಗಣ್ಣಲ್ಲಿ ಮನೆ ಸೇರುವಾಗ ಭರ್ತಿ ಮಧ್ಯರಾತ್ರಿ…ಮಕ್ಕಳಿಬ್ಬರೂ ನಿದ್ರಾ ದೇವಿಯ ಮಡಿಲಲ್ಲಿ ಮುಗುಳ್ನಗುತ್ತಿರುತ್ತವೆ…ಮಕ್ಕಳ ಆ ಮುಗ್ಧ ನಗುವನ್ನು ನೋಡಿ ಸವಿಯುವ ಸ್ಥಿತೀಲಿ ಖಂಡಿತ ನಾನಿರುತ್ತಿರಲಿಲ್ಲ…ಒಮ್ಮೆಯೂ ಮಕ್ಕಳು ಮೈಮೇಲೆ ಉಚ್ಚೆ ಹೊಯ್ದದ್ದು, ನಾನವರ ಕುಂಡೆ ತೊಳೆದದ್ದು, ಪಾಪಚ್ಚಿ ಮಕ್ಕಳ ಬೊಮ್ಮಟೆ ಕುಂಡೆಯ ಕಚ್ಚಿದ್ದು, ಅವು ಪಪ್ಪಾ ಮೀಸೆ ಚುಚ್ಚಿ ಚುಚ್ಚಿ ಅಂತ ತೊದಲು ತೊದಲಾಗಿ ನುಡಿದದ್ದನ್ನು ಕೇಳಿಸಿಕೊಂಡ ನೆನಪಿಲ್ಲ ನನ್ನಲ್ಲಿ…
ಹಾಸಿಗೆ ಮನೇಲಿ ನಿದ್ದೆಗಣ್ಣಲ್ಲೇ ಮಾತಾಡಿಸೋ ಹೆಂಡತಿಯ ಒಂದಿನವೂ ಎದೆಗೊರಗಿಸಿಕೊಂಡು ಪ್ರೇಮ ಸ್ಪರ್ಶನೀಡಿ ಸವಿನುಡಿಯನಾಡಿದ್ದಿಲ್ಲ…ಬದಲಿಗೆ ಕೊಟ್ಟದ್ದು ಮಧ್ಯರಾತ್ರಿ ನನ್ನ ಸೊಂಟದ ಕೆಳಗಿನ ಹಸಿವಿಗೆ ಒಂದು ಅವಸರದ ಬೆವರಿಳಿಸುವ ಬೆತ್ತಲೆ ಕಾಟ…ಅವಳ ಬೇಸರದ ನಿಟ್ಟುಸಿರು ನನ್ನ ಕಿವಿಯ ತಲುಪುವ ಮೊದಲೇ ಅವಳ ಕಿವಿಯಲ್ಲಿ ನನ್ನ ಗೊರಕೆ ಸದ್ದಿನ ಮಾರ್ದನಿ…

ಮಕ್ಕಳಿಗೆ ದೊಡ್ಡ ಹೆಸರಿನ, ಅಷ್ಟೇ ದೊಡ್ಡ ದುಡ್ಡಿನ ಶಾಲೆ, ಹೆಂಡತಿಗೊಂದಿಷ್ಟು ಒಡವೆ ಸೀರೆ…ಹಣವೊಂದನ್ನುಳಿದು ಬೇರೇನನ್ನೂ ಕೊಟ್ಟ ನೆನಪಿಲ್ಲ ಸಂಸಾರಕ್ಕೆ…
ಒಂದು ಸಿಹಿ ಮುತ್ತಿನ ಒಡವೆ, ಸವಿ ಮಾತಿನೂಟ, ಒಂದು ಬೆಚ್ಚನೆ ತಬ್ಬುಗೆಯ ಇಬ್ಬನಿ ಹಾರ, ಒಂದು ಒಲವಿನ ಕೂಟ…ಉಹುಂ ಕೊಟ್ಟದ್ದಿಲ್ಲ…ಒಲವ ಹಂಚದಿರುವುದರಿಂದ ಎಷ್ಟೆಲ್ಲ ಕಳೆದುಕೊಂಡೆ ಎಂಬ ಮನದ ಭಣ ಭಣ ಭಾವ ಇಂದು…

ಇಂದು ಈ ಅನಿವಾರ್ಯ ಮತ್ತು ಅಸಹಾಯ ನಿವೃತ್ತ ಇಳಿಸಂಜೆಯಲ್ಲಿ ಅದೆಲ್ಲ ಬೇಕೆನಿಸುತ್ತಿದೆ…ಹಣ ತಾನು ನೀಡಲಾರದ್ದು – ಒಲವು ಮಾತ್ರ ಕೊಡಮಾಡಬಹುದಾದ ಮಧುರ ಆನಂದ…ಆದರೆ ಕಾಲಕ್ಕೆ ಹಿಮ್ಮುಖ ಚಲನೆ ಇಲ್ಲವಲ್ಲ… 🙁

ಕಳೆದುಕೊಂಡ ಮುಗ್ಧ ಮಗುವ ನಗುವ ನೋಡುವ ಖುಷಿಯ ಮೊಮ್ಮಗುವಲ್ಲಿ ನೋಡೋಣ ಎಂದರೆ ಮಗಳಿಗೆ ಮಕ್ಕಳೇ ಬೇಡವಂತೆ…ಮಗ ದೂರದ ದೇಶದಲ್ಲಿ ಅದಾಗಲೇ ಮತ್ತೊಬ್ಬ ಆನಂದರಾವ್…ಮಗಳಿಗೆ ಮಕ್ಕಳು ಬೇಡವಾದರೆ ಮಗನಿಗೆ ಮದುವೆಯೇ ಬೇಡ…ಸಿಹಿ ಕಹಿಯ ಹಂಚಿಕೊಳ್ಳೋಣವೆಂದರೆ ಹೆಂಡತಿ ವಜ್ರದ ಹಾರ, ತೋಳಿಲ್ಲದ ರವಿಕೆ ತೊಟ್ಟು ಸಮಾಜ ಸೇವೆಯಲ್ಲಿ ಎಂದೋ ಕಳೆದುಹೋಗಿದ್ದಾಳೆ…ತಪ್ಪಿಲ್ಲ ಅವರಲ್ಲಿ – ನಾ ಬಿತ್ತಿದ್ದನ್ನೇ ನಾ ಬೆಳೆದಿದ್ದೇನಷ್ಟೇ…
ಇಂದೀಗ ನಾ ಕಟ್ಟಿಕೊಂಡ ಹಣದ ಮಹಲಿನಲ್ಲಿ ನಾನು ಏಕಾಂಗಿ ಖೈದಿ…
ಮನೆಯ ತುಂಬ ಇರುಳ ಕತ್ತಲಲ್ಲೂ ಝಗಮಗಿಸೋ ಬೆಳಕಿದೆ – ಅಂಗಳದಿ ಕೂತ ನನ್ನ ಮನದಲ್ಲಿ ಬರೀ ಕತ್ತಲು…

ಬದುಕ ಅರಿವಿನ ದಾರಿ ತಪ್ಪಿದ್ದೆಲ್ಲಿ..? ಬಾಲ್ಯದ ಕಷ್ಟ, ಅವಮಾನಗಳಲ್ಲಾ? ಯೌವನದ ಗೆಲುವಿನ ಹಂಬಲದಲ್ಲಾ?? ಮಧ್ಯ ವಯಸಿನ ಕಳಕೊಳ್ಳುವ – ಸೋಲುವ ಭಯದಲ್ಲಾ.?? ಎಲ್ಲಿ ಕಳೆದು ಹೋಯಿತು ಬದುಕ ಜೀವಂತಿಕೆ..??? ಬರೀ ಪ್ರಶ್ನೆಗಳು…

ಮನೆ ಮುಂದಿನ ದಾರೀಲಿ ಓಡಾಡೋ ಅಂದಿನ ನನ್ನದೇ ಪ್ರತಿರೂಪಗಳಂತಹ ಕಿರಿಯರನ್ನು ಕಂಡಾಗ ವಿಷಾದವೊಂದು ಹರಳುಗಟ್ಟುತ್ತೆ…
ಒಮ್ಮೊಮ್ಮೆ ಈ ಒಂಟಿಭಾವ ತೀವ್ರವಾಗಿ ಕಂಗೆಡಿಸಿದಾಗ ಬೀದಿ ಮಧ್ಯೆ ನಿಂತು ಕೂಗಿ ಹೇಳಬೇಕೆನಿಸುತ್ತೆ – "ಹೆಣದ ಜೊತೆಗೆ ಹಣವ ಹೂಳುವುದಿಲ್ಲ" ಎಂದು…ತಕ್ಷಣ ಬಾಲ್ಯದ ಆ ನೆನಪು ಕಾಡುತ್ತೆ…ಹಣವಿಲ್ಲದಿರುವುದರಿಂದಲೇ ಅಮ್ಮನ ಹೆಣ ಹೂಳಲು ಪರದಾಡಿ ಬೋರೆಂದು ಅತ್ತ ಅಪ್ಪನ ಅಸಹಾಯಕ ಮುಖ ನೆನಪಾಗಿ ಗಂಟಲು ಕಟ್ಟಿ ಸುಮ್ಮನಾಗುತ್ತೇನೆ…


ಹಣವಿಲ್ಲದೇ ಕಳಕೊಂಡ ಬಾಲ್ಯದ ಮತ್ತು ಯೌವನದ ಮೊದಲರ್ಧದ ಹಲವಾರು ಸುಖಗಳು ಹಾಗೂ ಉಂಡ ಅವಮಾನಗಳು – ಹಣದಿಂದಾಗಿ ಕಳಕೊಂಡ ಆಮೇಲಿನ ಬದುಕಿನ ಆನಂದಗಳು ಎಲ್ಲ ಸೇರಿ ಮನ ಬರೀ ಗೊಂದಲದ ಗೂಡಾಗಿ ಉತ್ತರಗಾಣದ ಪ್ರಶ್ನೆಗಳಲಿ ನನ್ನೊಳಗಿನ ಮಾತೆಲ್ಲ ಸತ್ತು ವರ್ಷಗಳೇ ಸಂದವು…

ಅಥವಾ ಕೆಲವೆಲ್ಲ ದ್ವಂದ್ವಗಳ ಹುಟ್ಟುಹಾಕುವ ಗಂಭೀರ ಪ್ರಶ್ನೆಗಳಿಗೆ ಮೌನವೇ ಉತ್ತರವೇನೋ…..
ಕಾಯುವುದೊಂದೆ ಕೆಲಸ ಈಗ ಇರವನ್ನೆ ಕಳೆದು ಬಿಡುವ ಬರುವ ಆ ಚಿರಮೌನಕ್ಕಾಗಿ…
ನನ್ನ ಹೆಸರು ಆನಂದರಾವ್… 🙁
 

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

ಇಂದು ಈ ಅನಿವಾರ್ಯ ಮತ್ತು ಅಸಹಾಯ ನಿವೃತ್ತ ಇಳಿಸಂಜೆಯಲ್ಲಿ ಅದೆಲ್ಲ ಬೇಕೆನಿಸುತ್ತಿದೆ…ಹಣ ತಾನು ನೀಡಲಾರದ್ದು – ಒಲವು ಮಾತ್ರ ಕೊಡಮಾಡಬಹುದಾದ ಮಧುರ ಆನಂದ…ಆದರೆ ಕಾಲಕ್ಕೆ ಹಿಮ್ಮುಖ ಚಲನೆ ಇಲ್ಲವಲ್ಲ… 
The main theme should be under stood by everybody

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಕತೆ ಚೆನ್ನಾಗಿದೆ, ಧನ್ಯವಾದಗಳು ಸರ್

Hussain
11 years ago

ಹೌದು .. ಆಧುನಿಕ ಭರಾಟೆಯಲ್ಲಿ ನಾನು ಕಳೆದುಕೊಂಡ ಅತೀ ದೊಡ್ಡ ಸಂಪತ್ತು "ನಮ್ಮತನ".  ನಾನು ದುಡ್ಡು ಗಳಿಸುವ ಯಂತ್ರವಾಗಿದ್ದೇವೆ ..ಮಾನವೀಯ ಮೂಲ್ಯಗಳಿಗೆ , ನಮ್ಮ ಸಂಸ್ಕೃತಿಗೆ ವಿಮುಖರಗಿದ್ದೇವೆ …
 
ಅತ್ಯುತ್ತಮ ಲೇಖನ ಶ್ರೀ … 
Hussain

ರುಕ್ಮಿಣಿ ನಾಗಣ್ಣವರ

ಶೀವತ್ಸ, "ಇಳಿಸಂಜೆ ಮೌನವನ್ನು" ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದೀರ..
ದುಡ್ಡಿಲ್ಲದಿರುವಾಗ ಕಳೆದುಕೊಂಡ ಅಮ್ಮ,ದುಡ್ಡು ಗಳಿಸಿದಾಗ, ಹೆಂಡಂತಿ ಮಕ್ಕಳಿದ್ದರೂ,
ಏನೂ ಇಲ್ಲದಂತಿರುವ ಆ ಹತಾಶೆ..
ತುಂಬ ಚೆನ್ನಾಗಿ ನಿಮ್ಮ ಬರದಲ್ಲಿ ಬಿಂಬಿಸಿದ್ದೀರ. ಇಷ್ಟವಾಯಿತು ನಿಮ್ಮ ಲೇಖನ..

ಈಶ್ವರ ಭಟ್

ಹೌದು ಕಾಲಕ್ಕೆ ಹಿಮ್ಮುಖ ಚಲನೆ ಇಲ್ಲ. 
ಶ್ರೀವತ್ಸ ಲೇಖನ ಚೆನ್ನಾಗಿದೆ.
(…… !!! ಬಳಕೆ ಸ್ವಲ್ಪ ಕಡ್ಮೆ ಆದ್ರೆ ಒಳ್ಳೇದು ಅಂತ ನನ್ ವೈಯ್ಯುಕ್ತಿಕ ಅಭಿಪ್ರಾಯ)

ಸುಷ್ಮಾ ಮೂಡಬಿದರೆ

ಶ್ರೀ…
ನಿಮ್ಮ ಕಥಾ ನಿರೂಪಣೆಯ ಶೈಲಿಗೊಂದು ಸಲಾಂ..
ಹಣ, ಪ್ರಸಿದ್ದಿಯ ಹಿಂದೆ ಓಡಿ ಬದುಕಿನ ನಿಜವಾದ ಸತ್ವವನ್ನು ಕಳಕೊಂಡ ಅನೇಕ ದುರಂತ ನಾಯಕರು ನಮ್ಮ ಮದ್ಯೆ ಇದ್ದಾರೆ.. ಅವರೊಳಗಿನ ತಲ್ಲಣಗಳನ್ನು ಈ ಚಂದವಾಗಿ ಕಟ್ಟಿ ಕೊಡಲು ಬಹುಶಃ ಅಂತಹ ಅನುಭವ ಪಡೆದ ಸ್ವಂತ ವ್ಯಕ್ತಿಗೂ ಆಗಲಾರದೇನೋ.. ಚಂದದ ಕಥೆ ಮತ್ತು ಕಥೆಯ ನಿರೂಪಣೆ..

ಮತ್ತಷ್ಟು ಕಥೆಗಳ ನಿರೀಕ್ಷೆಯಲ್ಲಿ
-ಸುಷ್ಮಾ ಮೂಡುಬಿದಿರೆ..

Badarinath Palavalli
11 years ago

ವೃದ್ಧಾಪ್ಯದ ಏಕಾಂತ ಸಂಭಾಷಣೆಯ ಸುತ್ತ ಹೆಣೆದುಕೊಟ್ಟ ಈ ಬರಹ, ನನ್ನದೂ ಆಗಬಹುದು ಅಥವಾ ಬೇರೆ ಇನ್ನಾರದೂ….

chaithra.n
chaithra.n
11 years ago

ಕಳೆದುಕೊಂಡ ಮುಗ್ಧ ಮಗುವ ನಗುವ ನೋಡುವ ಖುಷಿಯ ಮೊಮ್ಮಗುವಲ್ಲಿ ನೋಡೋಣ ಎಂದರೆ ಮಗಳಿಗೆ ಮಕ್ಕಳೇ ಬೇಡವಂತೆ…ಮಗ ದೂರದ ದೇಶದಲ್ಲಿ ಅದಾಗಲೇ ಮತ್ತೊಬ್ಬ ಆನಂದರಾವ್…ಮಗಳಿಗೆ ಮಕ್ಕಳು ಬೇಡವಾದರೆ ಮಗನಿಗೆ ಮದುವೆಯೇ ಬೇಡ…ಸಿಹಿ ಕಹಿಯ ಹಂಚಿಕೊಳ್ಳೋಣವೆಂದರೆ ಹೆಂಡತಿ ವಜ್ರದ ಹಾರ, ತೋಳಿಲ್ಲದ ರವಿಕೆ ತೊಟ್ಟು ಸಮಾಜ ಸೇವೆಯಲ್ಲಿ ಎಂದೋ ಕಳೆದುಹೋಗಿದ್ದಾಳೆ…ತಪ್ಪಿಲ್ಲ ಅವರಲ್ಲಿ – ನಾ ಬಿತ್ತಿದ್ದನ್ನೇ ನಾ ಬೆಳೆದಿದ್ದೇನಷ್ಟೇ…
ಬದುಕ ಅರಿವಿನ ದಾರಿ ತಪ್ಪಿದ್ದೆಲ್ಲಿ..? ಬಾಲ್ಯದ ಕಷ್ಟ, ಅವಮಾನಗಳಲ್ಲಾ? ಯೌವನದ ಗೆಲುವಿನ ಹಂಬಲದಲ್ಲಾ?? ಮಧ್ಯ ವಯಸಿನ ಕಳಕೊಳ್ಳುವ – ಸೋಲುವ ಭಯದಲ್ಲಾ.?? ಎಲ್ಲಿ ಕಳೆದು ಹೋಯಿತು ಬದುಕ ಜೀವಂತಿಕೆ..??? ಬರೀ ಪ್ರಶ್ನೆಗಳು…
ಹಣವಿಲ್ಲದೇ ಕಳಕೊಂಡ ಬಾಲ್ಯದ ಮತ್ತು ಯೌವನದ ಮೊದಲರ್ಧದ ಹಲವಾರು ಸುಖಗಳು ಹಾಗೂ ಉಂಡ ಅವಮಾನಗಳು – ಹಣದಿಂದಾಗಿ ಕಳಕೊಂಡ ಆಮೇಲಿನ ಬದುಕಿನ ಆನಂದಗಳು ಎಲ್ಲ ಸೇರಿ ಮನ ಬರೀ ಗೊಂದಲದ ಗೂಡಾಗಿ ಉತ್ತರಗಾಣದ ಪ್ರಶ್ನೆಗಳಲಿ ನನ್ನೊಳಗಿನ ಮಾತೆಲ್ಲ ಸತ್ತು ವರ್ಷಗಳೇ ಸಂದವು…
ಇದು ನಮ್ಮೆಲ್ಲರಿಗೂ ಭವಿಷ್ಯ ಘಂಟೆ.
 

8
0
Would love your thoughts, please comment.x
()
x