ಪರಮ ದೇಶಭಕ್ತ ಕ್ರಾಂತಿಕಾರಿ ಭಗತ್ ಸಿಂಗ್  !: ಕೆ ಟಿ ಸೋಮಶೇಖರ್ ಹೊಳಲ್ಕೆರೆ

1931 ರಲ್ಲಿ  ತನ್ನ 23 ನೇ ವಯಸ್ಸಿನಲ್ಲಿ ನೇಣಿಗೆ ಸಿದ್ಧನಾಗಿ ಕಪ್ಪು ಬಟ್ಟೆಯನ್ನು ತೊಟ್ಟರೂ ನೇಣಿಗೆ ಹೆದರಿ ಮುಖ ಮುಚ್ಚಿಕೊಳ್ಳದೆ  ನೇಣಿಗೆ ನಡುಕ ಉಂಟು ಮಾಡಿ ಕತ್ತನ್ನು ನೇಣಿಗೆ ಕೊಟ್ಟು ಕತ್ತನ್ನು ಸುತ್ತುವರಿದ ನೇಣಿನ ಹಗ್ಗಕ್ಕೆ ಮುತ್ತಿಟ್ಟು ತನ್ನ ಇಬ್ಬರು ಸ್ನೇಹಿತರೊಂದಿಗೆ ಹುತಾತ್ಮನಾದ ಧೈರ್ಯವಂತ ಭಗತ್ ಸಿಂಗ್!  ನೇಣಿಗೆ ಕತ್ತು ಕೊಡಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ‘ ದ ರೆವಲ್ಯೂಷನರಿ ಲೆನಿನ್ ‘ ಪುಸ್ತಕ ತಂದಿದ್ದೀರಾ? ಎಂದು ತಮ್ಮ ಕೊನೆಯ ಅಸೆಯ ತಿಳಿಯಲು ಬಂದ  ತಮ್ಮ ಪರ ವಕೀಲರಾದ ಪ್ರಾಣನಾಥ್ ಮೆಹ್ತಾರನ್ನು ಕೇಳಿದವ. ಆ ಪುಸ್ತಕ ಕೈಗೆ ಬರುತ್ತಿದ್ದಂತೆ ಬಿಡದೆ ಓದತೊಡಗಿದ ಕ್ರಾಂತಿಕಾರಿ ಸಾಹಿತ್ಯ ಪ್ರೇಮಿ!  ರಾಷ್ಟ್ರಕ್ಕೆ ಏನಾದರೂ ಸಂದೇಶ ನೀಡುವುದಿದೆಯೆ? ಎಂದು ಗಲ್ಲಿಗೇರಿಸುವ ಮುನ್ನ ಕೊನೆಯ ಆಸೆಯನ್ನು ಕೇಳಿದವರಿಗೆ ‘ ದ ರೆವಲ್ಯೂಷನರಿ ಲೆನಿನ್ ‘ ಪುಸ್ತಕದ ಕಡೆಗೆ ನೆಟ್ಟಿದ್ದ ದೃಷ್ಟಿಯನ್ನು ತೆಗೆಯದೆ ‘ ಸಾಮ್ರಾಜ್ಯ ಶಾಯಿಗೆ ಧಿಕ್ಕಾರ ‘, ‘ ಕ್ರಾಂತಿ ಚಿರಾಯುವಾಗಲಿ ‘ ಈ ಎರಡು ಘೋಷಣೆಗಳನ್ನು ಬ್ರಿಟೀಷರಿಗೆ ತಿಳಿಸಿ ಎಂದ ಕ್ರಾಂತಿಕಾರಿ! ನಿನಗೆ ಮತ್ತೇನಾದರೂ ಕೊಟ್ಟ ಕೊನೆಯ ಆಸೆ ಇದೆಯೇ ಎಂದು ಕೇಳಿದವರಿಗೆ ಹೌದು ಈ ದೇಶದಲ್ಲಿ ಮತ್ತೆ ಹುಟ್ಟುವ ಆಸೆ ಇದೆ. ಮತ್ತೆ ಹುಟ್ಟಿದರೆ ರಾಷ್ಟ್ರದ ಸೇವೆ ಮಾಡಬಹುದು ಎಂದ ದೇಶಾಭಿಮಾನಿ ! ಒಂದು ದಿನ ಮುಂಚಿತವಾಗಿಯೇ ಗಲ್ಲಗೇರಿಸಲು ತೀರ್ಮಾನವಾದಾಗ ಗಲ್ಲಿಗೇರಿಸುವವರು ಬಂದು ಕರೆದಾಗ ” ದ ರೆವಲೂಷನರಿ ಲೆನಿನ್ ” ಪುಸ್ತಕದ ಒಂದು ಅಧ್ಯಾಯವನ್ನಾದರೂ ಮುಗಿಸುವುದಕ್ಕೆ ಅವಕಾಶ ಕೊಡುತ್ತೀರಾ ಎಂದು ಸಾವಿನ ಭಯವೇ ಇಲ್ಲದೆ ಓದಿನ ದಾಹ ತಣಿಯದೆ ಕೇಳಿದ ಸಮಾಜವಾದಿ! ಕಭೀ ವೋ ದಿನ್ ಭಿ ಆಯೆಗಾ, ಕೆ ಜಬ್ ಆಜಾದ್ ಹಮ್ ಹೋಂಗೆ, ಯೇ ಅಪ್ನಿ ಹೈ ಜಾಮೀನು ಹೋಗಿ, ಯೇ ಅಪ್ನಾ ಆಸ್ಮಾನ್ ಹೋಗಾ … ಎಂದು ಆಶಾ ಗೀತೆ ತನ್ನಿಬ್ಬರು ಸ್ನೇಹಿತರೊದಿಗೆ ಹಾಡುತ್ತಾ ಗಲ್ಲಿನ ವೇದಿಕೆಗೆ ಸೆಂಟ್ರಿಗಳ ಹಿಂದೆ ಹೆಜ್ಜೆ ಹಾಕುತ್ತಾ ಸಾವನ್ನು ಎದುರಿಸಲು ಹೊರಟವ! ನಿಜವಾಗಿ ಕ್ರಾಂತಿಕಾರಿ ಸೇನೆಗಳು ಹಳ್ಳಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿವೆ. ಶ್ರಮಿಕರು ಮತ್ತು ಕೃಷಿಕರು ನಿಜವಾದ ಸೈನಿಕರು ಆದರೆ ನಮ್ಮ ಬೂರ್ಜ್ವಾ  ನಾಯಕರು ಅವರನ್ನು ಎದುರಿಸುವುದಿಲ್ಲ… ಕ್ರಾಂತಿ ಎಂದರೆ ಇರುವ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಿತ್ತೆಸೆಯುವುದು. ಅದರ ಜಾಗದಲ್ಲಿ ಸಮಾಜವಾದಿ ವ್ಯವಸ್ಥೆಯನ್ನು ತರುವುದು …  ಈ ಉದ್ದೇಶಕ್ಕಾಗಿ ಸರ್ಕಾರ ಆಡಳಿತ ಯಂತ್ರವನ್ನು ನಿಯಂತ್ರಿಸಲು ನಾವು ಹೋರಾಡುತ್ತಿದ್ದೇವೆ. ಇದರ ಜತೆಗೆ ಸಮುದಾಯಕ್ಕೆ ಸೂಕ್ತ ವಾತಾವರಣವನ್ನು ಉಂಟು ಮಾಡಲು ಶಿಕ್ಷಣ ಅಗತ್ಯ .. ಎಂದು ಭಾವಿಸಿದ್ದ ಲೆನಿನ್ ಸಾಹಿತ್ಯ ಪ್ರೇಮಿ!

ಭಯೋತ್ಪಾದನೆ ಮುಗ್ಧರನ್ನು ಬಲಿ ತೆಗೆದುಕೊಳ್ಳುತ್ತದೆ. ಬಲವನ್ನು ಪ್ರದರ್ಶಿಸಿ ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತದೆ… ವ್ಯಕ್ತಿಯವಿರುದ್ದ ಸಿಟ್ಟಾಗಿರುತ್ತದೆ. ಅದಕ್ಕೆ ಸಿದ್ದಾಂತ ಬೇಕಾಗುವುದಿಲ್ಲ. ಆದರೆ ತನ್ನನ್ನು ಹತ್ತಿಕ್ಕಿದ ಸಮಾಜದ ಒಳಿತಿಗಾಗಿ ಕ್ರಾಂತಿಕಾರಿ ಹೋರಾಡುತ್ತಾನೆ. ಕ್ರಾಂತಿ ಹಿಂಸಾ ಕೃತ್ಯವಲ್ಲ. ಪ್ರತಿಭಟನೆಯ ಕೃತ್ಯ. ಅದೊಂದು ಸೈದ್ಧಾಂತಿಕ ಸಮರ. ಸಮಾಜದ ಬದಲಾವಣೆಗೆ ಪ್ರಯತ್ನಿಸುತ್ತದೆ. ಕ್ರಾಂತಿಕಾರಿಯ ಹೋರಾಟ ವ್ಯವಸ್ಥೆಯ ವಿರುದ್ಧ; ಮನುಷ್ಯನನ್ನು ಮನುಷ್ಯ , ರಾಷ್ಟ್ರವನ್ನು ರಾಷ್ಟ್ರ ಶೋಷಿಸುವ ವ್ಯವಸ್ಥೆಯ ವಿರುದ್ಧ ಎಂದು ಭಯೋತ್ಪಾದನೆ ಮತ್ತು ಕ್ರಾಂತಿಕಾರಿ ಬಗ್ಗೆ ತನ್ನ ಗ್ರಹಿಕೆಯ ಅನಾವರಣಗೊಳಿಸಿ ಕ್ರಾಂತಿಕಾರಿಯ ಉದ್ದೇಶ ಹಿಂಸೆಯಲ್ಲ ಹೋರಾಟ ಎಂದು ಸ್ಪಷ್ಟಪಡಿಸುತ್ತಾ ತಾನು ಹಿಂಸೆಯನ್ನು ಬಯಸುವವನಲ್ಲ ಎಂದು ಸಾರುತ್ತಾನೆ !

ಅಸೆಂಬ್ಲಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಮಟ್ಟ ಹಾಕುವ ಉದ್ದೇಶದಿಂದ ಮಸೂದೆಗಳು ಮಂಡನೆಯಾಗಬೇಕಿದ್ದವು. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಯಿಲ್ಲದೆ ಬಂಧಿಸುವ ಕರಾಳ ಮಸೂದೆ ಅವುಗಳಲ್ಲೊಂದಾಗಿತ್ತು. ಆ ಮಸೂದೆಗಳ ಮಂಡೆನೆಯಾಗದಂತೆ ತಡೆಯುವ, ತನ್ನ ಕಡೆಗೆ, ತನ್ನ ವಿಚಾರಗಳ ಕಡೆಗೆ ಗಮನ ಸೆಳೆಯಲು ಬಾಂಬ್ ಹಾಕಲು ಯೋಜಿಸಿದರು. ಮಸೂದೆ ಮಂಡನೆಯಾಗುವ ಅಸೆಂಬ್ಲಿಯ ಹಾಲ್ ಗೆ ಒಂದು ದಿನ ಮುಂಚಿತವಾಗಿ ಗುರುತು ಸಿಗದಂತೆ ಪ್ರವೇಶಿಸಿ ಎಲ್ಲಿಗೆ ಬಾಂಬ್ ಹಾಕಿದರೆ ಯಾರಿಗೂ ಅಪಾಯವಾಗುವುದಿಲ್ಲ ಎಂಬುದನ್ನು ಗುರುತಿಸಿ ಮನವರಿಕೆ ಮಾಡಿಕೊಂಡು ಅಸೆಂಬ್ಲಿ ನಡೆಯುವಾಗ ಆ ಜಾಗಕ್ಕೆ ಪೂರ್ವ ಯೋಜನೆಯಂತೆ ತನ್ನ ಸ್ನೇಹಿತನೊಂದಿಗೆ ತಾನೂ ಬಾಂಬ್ ಹಾಕಿದ. ಬಾಂಬ್ ಹಾಕಿ ಕೈಯಲ್ಲಿ ಗನ್ ಹಿಡಿದಿದ್ದರೂ ಗುಂಡು ಹಾರಿಸಿ ಹಿಂಸೆ ಮಾಡಿ ತಪ್ಪಿಸಿಕೊಂಡು ಹೋಗದೆ  ಪೋಲೀಸರು ಬಂಧಿಸಲು ಅವರ ಸಮೀಪ ಹೋಗಲು ಹೆದರುತ್ತಿರುವಾಗ ಗನ್ನನ್ನು ಅವರೆಡೆಗೆ ಎಸೆದು ಅವರಿಗೆ ಶರಣಾಗಿ ಅನೇಕ ಸತ್ಯ ಮಿಥ್ಯ ಆರೋಪಗಳ ಹೊತ್ತು ಮರಣದಂಡನೆಗೆ ಗುರಿಯಾಗಿ ಆರು ತಿಂಗಳಿಗೆ ಬರುವ ಮರಣದಂಡನೆಯ ಆ ದಿನವನ್ನು ಕಾಯುತ್ತಾ ನೆಲಮಾಳಿಗೆಯ ಕತ್ತಲಲ್ಲಿ ದಿನ ನೂಕುತ್ತಾ ಏಕಾಂತದ ವೇದನೆ ತಾಳದೆ ಮರಣ ದಂಡನೆ ಬೇಗ ಜಾರಿಯಾಗಲಿ ಆಗಲಾದರೂ ಸ್ವಾತಂತ್ರ್ಯ ಹೋರಾಟ ಹೆಚ್ಚಿನ ಚಾಲನೆ ಪಡೆದೀತು ಎಂದು ಭಾವಿಸಿದ ಸ್ವಾತಂತ್ರ್ಯ ಪ್ರೇಮಿ!

ಕಾರ್ಲ್ ಮಾರ್ಕ್ಸ್  ” ಮನುಷ್ಯನ ಚರಿತ್ರೆಯ ಎಲ್ಲ ಬದಲಾವಣೆಗಳು ಆರ್ಥಿಕ ಶಕ್ತಿಯ ಸಮತೋಲನದಲ್ಲಿ ಬದಲಾವಣೆಯನ್ನೇ ಅವಲಂಬಿಸಿವೆ ” ಎಂದು ಹೇಳಿರುವುದನ್ನು ಭಗತ್ ಸಿಂಗ್ ಒಪ್ಪಿದ್ದ. ರಾಜಕೀಯ ಇತಿಹಾಸ, ಚಿಂತನೆಯ ಇತಿಹಾಸ, ಧರ್ಮಗಳ ಇತಿಹಾಸ ಮತ್ತು ಉಳಿದೆಲ್ಲವೂ ಆರ್ಥಿಕ ಸನ್ನಿವೇಶದ ಹೊಟ್ಟೆಯಿಂದಲೇ ಬಂದವು. ರಾಜಕೀಯ ಕ್ರಿಯೆಗಳು ಆರ್ಥಿಕ ಶಕ್ತಿಗಳ ಉತ್ಪನ್ನಗಳು ಎಂಬುದು ಭಗತ್ ಅನುಭವಕ್ಕೆ ಬಂದಿದ್ದು ಮಾರ್ಕ್ಸ್ ಮೂಲಕ. ಭಾರತದಲ್ಲಿ ಸ್ವಾತಂತ್ರಕ್ಕಾಗಿ ನಡೆಯುವ ಹೋರಾಟ ಮೂಲತಃ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದಕ್ಕಾಗಿ ನಡೆಯುವ ಹೋರಾಟ. ಇದಕ್ಕೆ ಅವಕಾಶ ಕಲ್ಪಿಸಿಕೊಡುವುದೇ ಸ್ವಾತಂತ್ರ್ಯ. ಬಡತನವನ್ನು ಹೊಡೆದೋಡಿಸದಿದ್ದರೆ ಅದು ಹೆಸರಿಗೆ ಮಾತ್ರ ಸ್ವಾತಂತ್ರ್ಯವನ್ನು ಪಡೆದಿರುತ್ತದೆ. ಒಂದು ಯಥಾಸ್ಥಿತಿಯನ್ನು ಬದಲಿಸಿ ಮತ್ತೊಂದು ಯಥಾಸ್ಥಿತಿಯನ್ನು ತರುವುದು ಸ್ವಾತಂತ್ರ್ಯವಲ್ಲ ಎಂದುಕೊಂಡಿದ್ದ. ಇದು ಭಗತ್ ನ ಸ್ವಾತಂತ್ರ್ಯದ ಕಲ್ಪನೆ. ಮತ್ತು ಬಡತನಕೆ ಮಿಡಿವ ಸ್ಪಂದನೆ.

ತಾಯಿಗೆ ಒಮ್ಮೆ ಬರೆದಿದ್ದ ‘ ಮಾ, ನನ್ನ ದೇಶ ಒಂದು ದಿನ ಸ್ವಾತಂತ್ರ್ಯ ಪಡೆಯುತ್ತದೆ ಎಂಬ ಬಗ್ಗೆ ನನಗೆ ಅನುಮಾನವಿಲ್ಲ. ಆದರೆ ನನಗೆ ಭಯವಿರುವುದು ಬಿಳಿ ಸಾಹೇಬರ ಜಾಗದಲ್ಲಿ ಕಂದು ಸಾಹೇಬರು ಬಂದು ಕುಳಿತುಕೊಳ್ಳುತ್ತಾರೆಂಬುದು.’   ಸ್ವಾತಂತ್ರ್ಯ ಎಂದರೆ ಕೇವಲ ಈ ಯಜಮಾನರ ಬದಲಾವಣೆ ಎಂದಾದರೆ ಜನರ ಸ್ಥಿತಿ ಹೀಗೆಯೇ ಉಳಿಯುತ್ತದೆ. ಪುರಾತನ ವ್ಯವಸ್ಥೆಯನ್ನು ನಾಶ ಮಾಡದೆ ಹೊಸ ಬದಲಾವಣೆಯನ್ನು ತರುವುದು ಸಾಧ್ಯವಿಲ್ಲ.  ಈ ಬದಲಾವಣೆ ಸಾಧ್ಯವಾಗುವುದು ಕ್ರಾಂತಿಯಿಂದ ಮಾತ್ರ ಎಂದು ಭಾವಿಸಿದ್ದ ಕ್ರಾಂತಿಕಾರಿ . ಕಮಿನಿಸಂ,  ಮಿಲಿಟರಿಸಂ ಮುಂತಾದವುಗಳ ಓದು ವಿರೋಧ ಪಕ್ಷಗಳು ಒಡ್ಡುತ್ತಿದ್ದ ವಾದವನ್ನು ಎದುರಿಸುವುದಕ್ಕೆ, ಕ್ರಾಂತಿಯ ತನ್ನ ಪಥವನ್ನು ಸಮರ್ಥಿಸುವ ಕಾರಣಗಳನ್ನು ನೀಡಲಿಕ್ಕೆ, ಭಾರತದಲ್ಲಿನ ವ್ಯವಸ್ಥೆಯನ್ನು ಬದಲಾಯಿಸುವ ವಿಧಾನಗಳನ್ನು ಅರಿಯಲು ಅಗತ್ಯವಾಗಿತ್ತು. ಅದಕ್ಕಾಗಿ ಅವನು ಅಧ್ಯಯನದಲ್ಲಿ ತೊಡಗಿ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಿದ್ದ.

ನೇಣಿಗೇರುವ ಮುನ್ನ ತನ್ನನ್ನು ನೋಡಲು ಬಂದ ತಾಯಿ ‘ ಎಲ್ಲರೂ ಒಂದು ದಿನ ಸಾಯಲೇಬೇಕು ಆದರೆ ಉನ್ನತ ಸಾವು ಎಂದರೆ ಪ್ರಪಂಚ ನೆನಪಿಟ್ಟುಕೊಳ್ಳ ಬೇಕಾದದ್ದು ‘ ಎಂದು ಹೇಳಿದಳು. ನೇಣುಗಂಬದ ಬಳಿ ನಿಂತಾಗ ‘ ಇಂಕ್ವಿಲಾಬ್ ಜಿಂದಾಬಾದ್ ‘ ಎಂದು ಕೂಗಬೇಕೆಂದು ಮಗನಿಗೆ ಹೇಳಿ ದೇಶಾಭಿಮಾನ ಮೆರೆದಳಾದರೂ ಆಕೆಯ ಕಣ್ಣಲ್ಲಿ ನೀರು ಜಿನುಗುತ್ತಿದ್ದವು. ಇದನ್ನು ಕಂಡು ನೀನು ಹೀಗೆ ಅಳುತ್ತಾ ಹೋದರೆ ನನ್ನನ್ನು ನಾನು ಸಂಭಾಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಗಲ್ಲಿಗೆ ಹಾಕಿದಾಗ ನನ್ನ ತಾಯಿಯ ಕಣ್ಣಲ್ಲೂ ನೀರೂರಿತ್ತು ಎಂದು ಜನ ಹೇಳುವಂತಾಗುವುದನ್ನು ನಾನು ಇಷ್ಟಪಡುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಕುಟುಂಬಕ್ಕೆ ಇದು ತಕ್ಕುದಲ್ಲ. ವಿದೇಶಿ ಆಡಳಿತಗಾರರನ್ನು ಹೊರದಬ್ಬಲು ಶಸ್ತ್ರಗಳನ್ನು ಕೈಗೆತ್ತಿಕೊಂಡಿದ್ದೇನೆ. ಇತರರನ್ನು ಗುಲಾಮರಾಗಿ ಮಾಡುವ ಹಕ್ಕು ಯಾರಿಗೂ ಇಲ್ಲ. ಯಾವುದೇ ರಾಷ್ಟ್ರವನ್ನು ಇನ್ನೊಂದು ರಾಷ್ಟ್ರ ಆಳಬಾರದು … ಎಂದು ಮುಂತಾಗಿ ತಾಯಿಯೊಂದಿಗೆ ಮಾತನಾಡಿ ತಾಯಿ ಅಳಬಾರದು. ನಾನು ಯಾವ ಅಪರಾಧ ಮಾಡಿಲ್ಲ ದೇಶಕ್ಕಾಗಿ ಈ ನೇಣಿಗೇರುವಿಕೆ ಎಂದು ಸಮಾಧಾನ ಪಡಿಸಿದ ಸ್ವಾತಂತ್ರ್ಯ ಪ್ರೇಮಿ!

ಈ ದೇಶಭಕ್ತ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಸಿಡಿಗುಂಡು ಪಂಜಾಬಿನ ಬಾಂಗಾ ಎಂಬ ಹಳ್ಳಿಯ ಕೊಡುಗೆ, ಪರೋಪಕಾರಕ್ಕಾಗಿ ಹೆಸರುವಾಸಿಯಾದ ಕುಟುಂಬದಿಂದ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಹುಮಾನ! ಬ್ರಿಟಿಷರ ವಿರುದ್ದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಮನೆತನದ ಕುಡಿ, ದೊಡ್ಡವನಾಗಿ ತನ್ನ ಚಿಕ್ಕಪ್ಪಂದಿರನ್ನು ಜೈಲಿನಿಂದ ಮುಕ್ತಿಗೊಳಿಸಿ ಬ್ರಿಟೀಷರನ್ನು ಓಡಿಸುವೆ ಎಂದು ಚಿಕ್ಕಮ್ಮನಿಗೆ ದೈರ್ಯ ತುಂಬಿದವ, ತನ್ನ ಚಿಕ್ಕಪ್ಪ ಹೊಲಕ್ಕೆ ಕರೆದುಕೊಂಡು ಹೋಗಿ ನಾನು ಈ ಪುಣ್ಯ ಭೂಮಿಯಲ್ಲಿ ಎಲ್ಲರಿಗೂ ಗೋಧಿಯನ್ನು ಬಿತ್ತಿ ಬೆಳೆಯುವೆನೆಂದಾಗ ಬಂದೂಕು ತಂದು ಆ ಭೂಮಿಯಲ್ಲಿ ನೆಟ್ಟು ನಾನು ಈ ಭೂಮಿಯಲ್ಲಿ ಬಂದೂಕು ಬೆಳೆದು ಎಲ್ಲರಿಗೂ ಕೊಟ್ಟು ಬ್ರಿಟೀಷರನ್ನು ದೇಶದಿಂದ ಓಡಿಸುವೆ ಎಂದ ಧೀರ ಪೋರ! ಲಾಲಾ ಲಜಪತರಾಯ್ ಸೈಮನ್ ಆಗಮನವನ್ನು ವಿರೋಧಿಸಿ ಪ್ರತಿಭಟಿಸಿದಾಗ ಅವನನ್ನು ಬ್ರಿಟೀಷರು ಹಿಂಸಿಸಿ  ಕೊನೆಯುಸಿರೆಳೆಯುವಂತೆ ಮಾಡಿದುದನ್ನು ಸಹಿಸದೆ ಅದಕ್ಕೆ ಕಾರಣರಾದವರ ಮುಗಿಸಲು ಸಂಚು ರೂಪಿಸಿದ ಮರಿ ಸಿಂಹ! ಪಂಜಾಬ್ ಸರಕಾರದಿಂದ ‘ ಪಂಜಾಬ್ ಮಾತಾ ‘ ಎಂದು ಬಿರುದಾಂಕಿತಳಾದ ಮಾತೆಯ ಮಡಿಲ ಮಮತೆಯ ಮುತ್ತು, ಗಲ್ಲಿಗೇರುವ ಮುನ್ನ ‘ ಇಂಕ್ವಿಲಾಬ್ ಜಿಂದಾಬಾದ್ ‘ ಎಂದು ಕೂಗುವಂತೆ ಹೇಳಿದ ವೀರಮಾತೆಯ ಪುತ್ರ ರತ್ನ ! ಕ್ರಾಂತಿಕಾರಿಗಳಿಗೆ ಜೈಲಿನಲ್ಲಿ ಆಗುತ್ತಿದ್ದ ತೊಂದರೆ ತಾರತಮವನ್ನು ಕಂಡು ಅನುಭವಿಸಿ ಜೈಲಿನ ಸುಧಾರಣೆಗೆ ಹೋರಾಡಿದ ತರತಮ ಸಮಗಾರ! ತಂದೆಗೆ ಬರೆದ ಕಾಗದದಲ್ಲಿ ತನ್ನ ಬದುಕು ಭಾರತದ ಸ್ವಾತಂತ್ರ್ಯಕ್ಕೆ  ಮುಡುಪಾಗಿದೆ ಎಂದಿದ್ದ ಭಾರತ ಮಾತೆಯ ಅಮರ ಪುತ್ರ! 1924 ರಲ್ಲಿ ಶಾಲೆ ಬಿಟ್ಟು ದೇಶ ಸೇವೆಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬ್ರಿಟೀಷರಿಗೆ ನಡುಕ ತಂದು ಬಾಂಬು ಹಾಕಿದ ಮತ್ತು ಸ್ಯಾಂಡರ್ಸನ್ನನನ್ನು ಕೊಂದ ಆಪಾದನೆ ಮೇಲೆ ತನ್ನ 23 ನೇ ವಯಸ್ಸಿನಲ್ಲೇ ಸುಖ್ ದೇವ್,  ರಾಜ್ ಗುರು ಅವರೊಂದಿಗೆ ನೇಣಿಗೇರಿದ ಕ್ರಾಂತಿಕಾರಿ, ಸ್ವಾತಂತ್ರ್ಯ ಪ್ರೇಮಿ ‘ ಭಗತ್ ಸಿಂಗ್ ‘ !

-ಕೆ ಟಿ ಸೋಮಶೇಖರ್ ಹೊಳಲ್ಕೆರೆ .


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x