ಪ್ರಬುದ್ಧ ಸಾಹಿತಿ –ಡಾ.ಸರಜೂ ಕಾಟ್ಕರ್: ನಾಗರೇಖಾ ಗಾಂವಕರ

ಪತ್ರಕರ್ತನೊಬ್ಬನ ವೃತ್ತಿ ಬದುಕಿನ ಹಾದಿ ಸಂಘರ್ಷಗಳ ಕಲ್ಲುಚಪ್ಪಡಿ ಎಂಬುದನ್ನು ಯಾರೂ ಅಲ್ಲಗಳಿಯುವಂತಿಲ್ಲ. ಎಡತಾಕುವ ವಿಘ್ನಗಳು ಹತ್ತು ಹಲವು. ಬೆದರಿಕೆಗಳ ಹೊದಿಕೆಯೊಳಗೆ ಜೀವವನ್ನು ಕೈಲಿಟ್ಟುಕೊಂಡೇ ಲೋಕದ ಡೊಂಕನ್ನು ಜಗತ್ತಿನ ಕಣ್ಣುಗಳಿಗೆ ರವಾನಿಸಬೇಕಾದ ಅದರಲ್ಲೂ ಸತ್ಯದ ಸೂಡಿ ಹಿಡಿದೇ ನಡೆಯಬೇಕಾದ ಅನಿವಾರ್ಯತೆ ಆತನದು. ಆತನ ವೃತ್ತಿಕ್ಷಮತೆ ಪ್ರಾಮಾಣಿಕವಾಗಿದ್ದಷ್ಟೂ ಆತನ ವೃತ್ತಿ ಶತ್ರುಗಳು, ಹಿತ ಶತ್ರುಗಳು ಹುಟ್ಟಿಕೊಳ್ಳುತ್ತಲೇ ಇರುವರು. ಅಂತಹ ಸಂದಿಗ್ಧ ಜಗತ್ತಿನಲ್ಲಿ ದಿಟ್ಟತನಕ್ಕೆ ಹೆಸರಾದ, ಆಮಿಷಗಳಿಗೆ ಬಲಿಯಾಗದೇ, ಬೆದರಿಕೆಗಳಿಗೆ ಅಂಜದೇ ಕಾರ್ಯನಿರ್ವಹಿಸಿದ ಪತ್ರಕರ್ತ ಡಾ. ಸರಜೂ ಕಾಟ್ಕರ್.

ಒಬ್ಬ ಪತ್ರಕರ್ತನಲ್ಲಿ ಇರಬೇಕಾದ ಧೈರ್ಯ, ಆತ್ಮವಿಶ್ವಾಸ, ಹಾಗೂ ಪರಿಸ್ಥಿತಿಗಳನ್ನು ನಿಭಾಯಿಸಬೇಕಾದ ಸಕಾರಾತ್ಮಕ ನಿಲುವು ಮತ್ತು ಆ ತಾಕತ್ತು, ವಿಭಿನ್ನ ಸಂದರ್ಭಗಳಲ್ಲಿ ಸುದ್ದಿ ನಿರ್ವಹಣೆಯಲ್ಲಿ ಬಳಸಬೇಕಾದ ಭಾಷಾ ಫ್ರೌಡಿಮೆ ಅವರನ್ನು ಪತ್ರಿಕಾ ರಂಗದಲ್ಲಿ ಪ್ರಬುದ್ಧರನ್ನಾಗಿಸಿತು. ಹಾಗೇ ಸಂವೇದನಾಶೀಲತೆ, ವೈಚಾರಿಕ ನೋಟ, ಸೂಕ್ಷ್ಮ, ನಿಲುವು ಸಾಹಿತ್ಯದ ಕಣ್ಮಣಿಯನ್ನಾಗಿಸಿತೆಂದರೆ ಅತಿಶಯೋಕ್ತಿಯಲ್ಲ. ಬಂಡಾಯದ ಹಿನ್ನೆಲೆಯಿಂದ ಬಂದ ಶೋಷಿತ ಸಮುದಾಯದ ಧ್ವನಿಯಾಗಿ ಕಾವ್ಯ ರಚಸಿದ ಡಾ. ಸರಜೂ ಕಾಟ್ಕರ್ ಸಾಹಿತ್ಯದ ಬಹುಪ್ರಕಾರಗಳನ್ನು ಸ್ಪರ್ಶಿಸಿ, ತಮ್ಮ ವಿಶಿಷ್ಟ ಭಾಷಾ ಕೌಶಲ್ಯದ ಮೂಲಕ ಬಹುಮಾನ್ಯ ಸಾಹಿತಿಯಾಗಿ ಬೆಳೆದು ಬಂದವರು. ಅಪರೂಪದ ಕವಿಯಾಗಿ ಹೆಸರು ಗಳಿಸಿದವರು. ಧೀಮಂತ ಪತ್ರಕರ್ತರಾಗಿ ನಾಡಿನ ಹಲವಾರು ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದವರು. ಹೀಗೆ ಸಾಹಿತ್ಯ ಮತ್ತು ಸುದ್ದಿ ಜಗತ್ತಿನಲ್ಲಿ ಪದಗಳ ಜೊತೆ ಸರಸವಾಡುತ್ತಲೇ ಕಾವ್ಯ ಲೋಕಕ್ಕೂ ಅಮೋಘ ಕೊಡುಗೆ ನೀಡಿದ ಸಾಹಿತಿ. ಕವನ ಸಂಕಲನಗಳು , ಕಾದಂಬರಿಗಳು, ಅನುವಾದಿತ ಕೃತಿಗಳು ಹೀಗೆ ಅವರ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ಅವರದು.

ನಾಡಿನ ಹಲವಾರು ದಿನಪತ್ರಿಕೆಗಳನ್ನು ಮುನ್ನೆಡೆಸಿದ ಕೀರ್ತಿ ಕೂಡಾ ಅವರ ಹಿರಿಮೆ. ಪತ್ರಕರ್ತ ತನ್ನ ತಾನು ಮೊದಲು ಅರಿತುಕೊಂಡಿರಬೇಕು. ಪಾರದರ್ಶಕ ವ್ಯಕ್ತಿತ್ವ ಹೊಂದಿರಬೇಕು. ನಾಡಿನ ಹಿರಿಮೆ ಗರಿಮೆಗಳ ಜೊತೆಗೆ ಅಲ್ಲಿಯ ಅಂಕುಡೊಂಕುಗಳನ್ನು ತನ್ನ ಹರಿತ ಖಡ್ಗದ ಮುಖೇನ ಕಿತ್ತೆಗೆಯಬಲ್ಲ ಸಾಮಥ್ರ್ಯ ಉಳ್ಳ ಪತ್ರಕರ್ತನ ಜವಾಬ್ದಾರಿ ಸುಲಭದ್ದಲ್ಲ. ಆ ಕುರಿತು ಅವರು ಹೀಗೆ ಹೇಳುತ್ತಾರೆ, “ ಪತ್ರಕರ್ತನಾದವನಿಗೆ ಒಂದೇ ಸಮಯದಲ್ಲಿ ಮೂರು ಕಾಲಗಳಲ್ಲಿ ಸಂಚರಿಸುವ ಅವಕಾಶವಿರುತ್ತದೆ. ಆತ ವರ್ತಮಾನದಲ್ಲಿ ಜೀವಿಸುತ್ತಲೇ, ಭೂತಕಾಲದ ಸಹಾಯದಿಂದ, ಭವಿಷ್ಯತ್ತನ್ನು ಬರೆಯಬಲ್ಲ, ಈ ಸತ್ಯ ಅರಿತುಕೊಂಡ ನಾನು ಸೃಜನಶೀಲ ಸಾಹಿತ್ಯಕ್ಕೆ ಇಳಿದಿದ್ದೇನೆ” ಎನ್ನುತ್ತಾರೆ.

ಮರಾಠಿ ಭಾಷಿಕ ಕುಟುಂಬದಲ್ಲಿ ಜನಿಸಿದ ಕಾಟ್ಕರರು ಕನ್ನಡಮ್ಮನ ಮಡಿಲ ಕಂದನಾಗಿ ಬೆಳೆದು, ಈ ವಲಯದಲ್ಲಿ ಮಾಡಿದ ಸಾಧನೆ ನೀಡಿದ ಕೊಡುಗೆ ಹೆಮ್ಮೆ ಪಡುವಂತಹದ್ದು. ಭಾಷಾ ನಿರರ್ಗಳತೆ, ವಸ್ತುನಿಷ್ಟ ವಿಮರ್ಶೆ,ವೈಚಾರಿಕತೆ, ಅವರ ಸಾಮಥ್ರ್ಯ. ಹುಬ್ಬಳ್ಳಿಯ ಮರಾಠಾ ಗಲ್ಲಿಯ ಮರಾಠಾ ಕುಟುಂಬದಲ್ಲಿ 1953ರಲ್ಲಿ ಜನಿಸಿದ ಡಾ. ಸರಜೂ ಕಾಟ್ಕರರು ತಮ್ಮ ತಂದೆ ತಾಯಿಯರ ಹನ್ನೊಂದು ಜನ ಮಕ್ಕಳಲ್ಲಿ ಎಂಟನೇಯವರು. ತಂದೆ ಹನುಮಂತರಾವ್ ಹುಬ್ಬಳ್ಳಿಯ ‘ಮರಾಠಿ ಮೂಲಾಂಚೀ ಶಾಳಾ ನಂ 1’ ರಲ್ಲಿ ಮುಖ್ಯಾಧ್ಯಾಪಕರಾಗಿದ್ದರು. ಉಳಿದ ಹತ್ತು ಮಕ್ಕಳು ಮರಾಠಿಯಲ್ಲಿ ವಿಧ್ಯಾಭ್ಯಾಸ ಮಾಡಿದರೆ ಡಾ.ಸರಜೂ ಅವರು ಮಾತ್ರ ಕನ್ನಡ ಶಾಲೆಗೆಸೇರಿಸಲ್ಪಟ್ಟರು. ಬಹುಶಃ ಮಗ ಕನ್ನಡ ಸಾಹಿತ್ಯದಲ್ಲಿ ಮುಂದೆ ಉಜ್ವಲ ದೀಪದಂತೆ ಬೆಳಗುವನೆಂಬ ಪೂರ್ವಸೂಚನೆ ಇತ್ತೆಂದು ಕಾಣುತ್ತದೆ. ಬಾಲ್ಯದಿಂದಲೂ ಓದು ಅವರಪ್ರಮುಖ ಹವ್ಯಾಸ. ಉತ್ತರ ಕನ್ನಡದ ದಾಂಡೇಲಿಯ ಸಂಬಂಧಿಯೋರ್ವರ ಮನೆಯಲ್ಲಿ ಕೆಲಕಾಲ ಇದ್ದ ಕಾಟ್ಕರರು ಅಲ್ಲಿಯ ಜನತಾ ವಿದ್ಯಾಲಯದಲ್ಲೂ ವ್ಯಾಸಂಗ ಮಾಡಿದ್ದರು. ಸುಂದರ ಪ್ರಾಕೃತಿಕ ಪರಿಸರ ಹೊಂದಿದ ಈ ಸ್ಥಳ ಕವಿ ಸಾಹಿತಿಗಳ ಮನಸ್ಸನ್ನು ತನ್ನೆಡೆಗೆ ಸೆಳೆಯುವಂತಹುದು ಎಂಬ ಅಭಿಪ್ರಾಯ ಅವರದು. ಚಿಕ್ಕಂದಿನಲ್ಲಿ ಹೊಸದಾಗಿ ಕಂಡ ಸಂಗತಿಗಳಲ್ಲಿ ತೀವೃ ಆಸಕ್ತಿ ಉಂಟಾಗುತ್ತಿತ್ತೆಂದೂ, ಹಾಗೆ ಒಮ್ಮೆ ಕಾವಿಧಾರಿ ಸ್ವಾಮಿಯೊಬ್ಬನ ಕಂಡು ಆತನಂತೆ ಕೆಲವು ದಿನ ವರ್ತಿಸಿದ್ದಾಗಿಯೂ ತಮಾಷೆಯಾಗಿ ಹೇಳುವ ಕಾಟ್ಕರ ಮುಂದೆ ಕನ್ನಡ ಜಗತ್ತು ವಿಸ್ಮಯ ಪಡುವಂತೆ ಕವನ, ಕಥೆ, ನಾಟಕ, ಕಾದಂಬರಿಗಳ ಮೂಲಕ ಬೆಳೆಯುತ್ತಲೇ ಹೋಗುತ್ತಿದ್ದಾರೆ.

ತಮ್ಮ ಅತಿ ಚಿಕ್ಕ ವಯಸ್ಸಿನಲ್ಲಿಯೇ ಕವಿತೆಗಳನ್ನು ಬರೆದು ಅದು ಪತ್ರಿಕೆಗಳಲ್ಲಿ ಪ್ರಕಟವಾದಾಗ ಹೆಮ್ಮೆ ಪಡುತ್ತಿದ್ದರು. ಕಾಲೇಜು ದಿನಗಳಲ್ಲಿ ಗೆಳೆಯ ಹಾಗೂ ಸಹಪಾಠಿಯೂ ಆಗಿದ್ದ ಸತೀಶ ಕುಲಕರ್ಣಿ ಜೊತೆಗೂಡಿ ‘ಬೆಂಕಿಬೇರು’ ಎಂಬ ಕವನ ಸಂಕಲನವನ್ನು ಹೊರತಂದರು. ಕೆ ಪದ್ಮರಾಜ್ ಜೊತೆಗೂಡಿ ‘ನೆಲದ ನೆರಳು ‘ಸಂಕಲನವನ್ನು ಹೊರತಂದರು. ಅವರ ಗುರುಗಳಾದ ಡಾ. ಗುರುಲಿಂಗ ಕಾಪಸೆಯವರ ಮಾರ್ಗದರ್ಶನ, ಬೆಂಬಲವಿತ್ತು. ಕಾಲೇಜು ದಿನಗಳಲ್ಲಿ ಜಯಪ್ರಕಾಶ ನಾರಾಯಣ, ರಾಮ ಮನೋಹರ ಲೋಹಿಯಾ ಮುಂತಾದವರ ವೈಚಾರಿಕ ನಿಲುವುಗಳಿಂದ ಪ್ರಭಾವಿತರಾದರು. ಬಂಡಾಯದ ಸಣ್ಣ ಕಿಚ್ಚು ಎಳೆಯ ಮನಸ್ಸನ್ನು ಆಗಲೇ ಹೊಕ್ಕಿತ್ತು. ಹಾಗಾಗಿ ಕಾಟ್ಕರ್‍ರ ಮೊದಲ ಕವನ ಸಂಕಲನಗಳಲ್ಲಿ ಆ ಧ್ವನಿ ಮುಕ್ತವಾಗಿ ವ್ಯಕ್ತವಾಗಿದೆ.

‘ಹಸಿದ ನೆಲ’ ಎಂಬ ತಮ್ಮ ಸ್ವತಂತ್ರ ಮೊದಲ ಸಂಕಲನದಲ್ಲಿಯೇ ಭರವಸೆಯ ಕವಿಯಾಗಿ ಮೂಡಿದ, ಆ ಭಾವಗಳನ್ನು ಗುರುತಿಸಿದ ಡಾ. ಸರಜೂ ಕಾಟ್ಕರರ ಗುರುಗಳಾದ ಡಾ. ಗುರುಲಿಂಗ ಕಾಪಸೆಯವರ ಮಾತುಗಳನ್ನು ಕುರಿತು ಪ್ರಕಾಶ ಗಿರಿಮಲ್ಲನವರ ತಮ್ಮ ‘ಕಾವ್ಯ ಕಾರ್ತಿಕ ಡಾ. ಸರಜೂ ಕಾಟ್ಕರ್’ ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.“ ಡಾ. ಸರಜೂ ಕಾವ್ಯದ ವಸ್ತುವನ್ನು ಕಾಣುವುದರಲ್ಲಿ, ಅಭಿವ್ಯಕ್ತಿಗೊಳಿಸುವುದರಲ್ಲಿ ತಮ್ಮದೇ ಆದ ದಾರಿ ತುಳಿಯುತ್ತಿರುವುದು ಕಂಡುಬರುತ್ತಿದೆ. ತರುಣಕವಿಗಳಾದ ಕಾಟ್ಕರರಿಗೆ ಸಾಮಾನ್ಯವಾಗಿ ಉಳಿದ ತರುಣ ಕವಿಗಳಲ್ಲಿ ಕಾಣುವ ಪ್ರೀತಿ-ಪ್ರಣಯಗಳ ಹುಚ್ಚು ವಿಶೇಷಾಗಿಲ್ಲದಿರುವುದು ಇಲ್ಲಿ ಎದ್ದು ಕಾಣುವ ವಿಶೇಷ. ಸುತ್ತಮುತ್ತಲಿನ ಪರಿಸರ ಹಾಗೂ ಸಾಮಾಜಿಕ ಜೀವನದ ವಿವಿಧ ಮುಖಗಳ ಸುತ್ತ ಕಾಟ್ಕರ್‍ರ ದೃಷ್ಟಿ ಹರಿದಾಡುತ್ತಿರುವುದು ಇಲ್ಲಿಯ ಬಹುಪಾಲು ಕವಿತೆಗಳಲ್ಲಿ ಕಂಡುಬರುತ್ತದೆ, ಅದಕ್ಕಾಗಿಯೇ ಈ ಸಂಗ್ರಹ ಒಂದು ವಿಶಿಷ್ಟ ಕೃತಿಯಾಗಿ ನಿಲ್ಲುತ್ತದೆ”ಎಂದಿದ್ದಾರೆ ಹಿರಿಯಕವಿ ಡಾ. ಕಾಪಸೆ.

ಕಾಟ್ಕರರ ಕವನಗಳು: ಕಾಟ್ಕರರ ಕವನಗಳು ಸಾಮಾಜಿಕ ತಲ್ಲಣಗಳಿಗೆ ಸದಾ ಮುಖಾಮುಖಿಯಾಗುವ ಆ ಮೂಲಕ ಪ್ರೇರಣೆಯಾಗುವ ಧ್ವನಿಯಾಗಿವೆ. ನೇರ ಅಭಿವ್ಯಕ್ತಿಯ ಕವನಗಳು ಪ್ರತಿಮೆ, ಸಂಕೇತಗಳ ಮೂಲಕ ಗಾಢವಾಗಿ ಪರಿಣಾಮ ಬೀರುವಂತೆ ಹಣೆಯಲ್ಪಟ್ಟಿವೆ. ಅವರದೇ ಆದ ವಿಶಿಷ್ಟ ಲಯ ಶೈಲಿ ಅವರ ಕವನಗಳ ಹೆಗ್ಗಳಿಕೆ. ಪ್ರತಿ ಕವಿಯ ದನಿಯೂ ವಿಭಿನ್ನವಾಗಿ ದ್ವನಿಸುತ್ತದೆ ಎಂಬ ಮಾತಿದೆ. ಅದಕ್ಕೆ ಪೂರಕವಾಗಿ ಅವರ ಕವಿತೆಗಳಲ್ಲಿ ಹೆಚ್ಚಾಗಿ ಪದಗಳ ಆಡಂಬರವಿಲ್ಲ. ಆದರೆ ಹೇಳಬೇಕಾದುದನ್ನು ಮನಮುಟ್ಟುವಂತೆ ಹೇಳಬಲ್ಲರು. ಅವರ ಕಾವ್ಯಗಳನ್ನು ಒಟ್ಟಾರೆ ನೋಡಿದರೆ ಬಂಡಾಯದ ಮುಖೇನವೇ ಮಾತಾಡುವ ಕಾವ್ಯ ಆದ್ರ್ರತೆಯನ್ನು ಉಳಿಸಿಕೊಂಡೇ ಎದೆಗಿಳಿಯಬಲ್ಲದು ವರ್ಣವ್ಯವಸ್ಥೆಯ ಕ್ರೌರ್ಯ, ಕಾಯುವ ವೃತ್ತಿಯಲ್ಲಿದ್ದು, ಕೊಲ್ಲುವ ಪ್ರವೃತ್ತಿಗೆ ತಮ್ಮ ತೊಡಗಿಸಿಕೊಂಡಿರುವ ಮುಖವಾಡಗಳ ಬಣ್ಣ ಬಯಲಿಗೆಳೆಯುತ್ತಾರೆ. ಕಾಟ್ಕರ್‍ರ ಬಂಡಾಯ ನಿಲುವಿನ ಕವನಗಳು ಸಮಷ್ಟಿಯ ಹಿತದ ದೃಷ್ಟಿಯಿಂದ ಕಟ್ಟಲ್ಪಟ್ಟಿದ್ದರೆ,

ಅವರ ಒಂದು ಸಂಕಲನ “ಏಕಾಂತದ ಮನುಷ್ಯ” ದ ಕವನಗಳು ಅವರಲ್ಲಿಯ ವ್ಯಷ್ಟಿ ಮೂಲದ ತಾತ್ವಿಕ ಹಿನ್ನೆಲೆಯಲ್ಲಿ ತೆರೆದಿಡುತ್ತದೆ. ಈ ಕವನ ಡಾ. ಸರಜೂ ಕಾಟ್ಕರ್‍ರ ಅಂತರ್ಗತ ಬಂಡಾಯದ ನಿಲುವಿಗೆ ಕೊಂಚ ಭಿನ್ನ ಹೆಣಿಗೆ ಹೊಂದಿದೆ. ಕಾಟ್ಕರರ ಕವನಗಳು ಗಹನ ವಿಷಯಗಳ ಸರಳವಾಗಿ ಹೇಳುವ ಸಹಜತೆಯಿಂದ ಮನಸೆಳೆಯುತ್ತದೆ.
ಮನುಷ್ಯನ ಬಹಿರಂಗದಲ್ಲಿ ಕಾಣುವ ವ್ಯಕ್ತಿತ್ವ ಹಾಗೂ ಮುಖವಾಡದ ಘನಗಾಂಭಿರ್ಯಕ್ಕೂ ಅದೇ ವ್ಯಕ್ತಿ ಒಬ್ಬನೇ ಇದ್ದಾಗ ವರ್ತಿಸುವ ರೀತಿಗೂ ಅನ್ವಯಿಸಿ ಹೇಳುವುದಾದರೆ, ನಮ್ಮೆಲ್ಲರಲ್ಲೂ ಒಂದಿಲ್ಲ ಒಂದು ವಿಕ್ಷಿಪ್ತತೆ ಮನೆ ಮಾಡಿರುವುದು ಸತ್ಯ. ಅವರ ಏಕಾಂತದ ಮನುಷ್ಯ ಕವಿತೆ ಈ ಸಂಗತಿಯನ್ನು ಯಾವ ಮುಲಾಜಿಲ್ಲದೇ ತೆರೆದಿಡುತ್ತದೆ.

“ಏಕಾಂತದ ಮನುಷ್ಯ ಯಾರನ್ನೂ ನೋಯಿಸುವುದಿಲ್ಲ.
ಏಕಾಂತದ ಮನುಷ್ಯ ಯಾರನ್ನೂ ಪ್ರೀತಿಸುವುದಿಲ್ಲ
ಏಕಾಂತದ ಮನುಷ್ಯ ತಾನೇ ತನ್ನನ್ನು ಮಾತ್ರ ಪ್ರೀತಿಸಿಕೊಳ್ಳುತ್ತ
ಉಭಯಲಿಂಗಿಯಾಗುತ್ತಾನೆ.”
ಏಕಾಂಗಿಯಾಗಿರುವ ಸಂದರ್ಭದಲ್ಲಿ ಮನುಷ್ಯ ಹುಚ್ಚು ಹೆಜ್ಜೆಗಳನ್ನು, ಸುಸ್ಥಿತ ಮನಸ್ಸಿನ ಅಸ್ತವ್ಯಸ್ತ ವರ್ತನೆಗಳನ್ನೂ ಆಡುತ್ತಿರುತ್ತಾನೆ. ರೀತಿ ನಿಜಕ್ಕೂ ಅಚ್ಚರಿ. ಕವಿ ಹೇಳುತ್ತಾನೆ “ಏಕಾಂಗಿಯಾಗಿದ್ದಾಗ ಮನುಷ್ಯ ಒಂದೋ ದೇವರಂತೆ ಇಲ್ಲ ದೆವ್ವದಂತೆ ವರ್ತಿಸುತ್ತಿರುತ್ತಾನೆ” ಮನುಷ್ಯನಲ್ಲಿ ಒಳ್ಳೆಯ ಮತ್ತು ಕಟ್ಟ ಗುಣಗಳೆರಡೂ ಇರುವುದು ಎನ್ನುವುದಕ್ಕೆ ಈ ಸಾಲು ಸಾಕ್ಷಿ.

ಜಗತ್ತು ಹೊಂದಿರುವುದು ಎಲ್ಲ ರೀತಿಯ ಜನರನ್ನು. ಸದ್ಗುಣಗಳು ದುರ್ಗುಣಗಳು ಎಲ್ಲರಲ್ಲೂ ಇರುವಂತದ್ದು ಅದನ್ನೆ ಸರ್ ವಾಲ್ಟರ್ ಫಾಸ್ ಎಂಬ ಆಂಗ್ಲ ಸಾಹಿತಿ ಹೇಳುತ್ತಾರೆ. “ಹಾದಿ ಬದಿಯ ಮನೆಯಲ್ಲೇ ನನಗೆ ಬದುಕ ಬಿಡಿ, ಎಲ್ಲಿ ಜನರ ದಂಡು ಸದಾ ಸಂಚರಿಸುವುದೋ ಅಲ್ಲಿ’ ಅವರು ಕೆಲವರು ಒಳ್ಳೆಯವರು ಮತ್ತು ಕೆಟ್ಟವರು.ಕೆಲವು ಒಳ್ಳೆಯ ಮತ್ತೆ ಕೆಲವು ಕೆಟ್ಟ ಗುಣಗಳಿರುವ ನನ್ನಂತೆ” ಎನ್ನುತ್ತಾರೆ. ಇದು ಸಾಮಾಜಿಕ ಹಿನ್ನೆಲಯಲ್ಲಿ ಕಟ್ಟಿದ ಕವನವಾದರೂ ವ್ಯಕ್ತಿಗತ ಭಿನ್ನತೆಯನ್ನು ಕುರಿತು ಮಾತಾಡುತ್ತದೆ. ಫಾಸ್ ಹೇಳಿದಂತೆ ಕಾಟ್ಕರ್‍ರು ದೆವ್ವ ಮತ್ತು ದೇವರು ಎರಡೂ ನಮ್ಮಲ್ಲೇ ಇವೆ ಎನ್ನುತ್ತಾರೆ. ಮನುಷ್ಯನ ವಿಚಿತ್ರ ಮಾನಸಿಕ ವ್ಯಾಪಾರಗಳು ಹೊರಮುಖಕ್ಕೆ ತೆರೆದುಕೊಳ್ಳುವುದಿಲ್ಲ. ಹೌದು ಮನುಷ್ಯ ಜಗತ್ತಿನ ಶ್ರೇಷ್ಠ ಸೃಷ್ಟಿ. ಆತನ ಆಂತರಿಕ ಮತ್ತು ಬಾಹ್ಯ ಚಲನೆಗಳು ಎಷ್ಟೋ ಸಂದರ್ಭಗಳಲ್ಲಿ ಪರಸ್ಪರ ವಿರುದ್ಧವಾಗಿರುತ್ತವೆ. ಜನಸಮ್ಮುಖದಲ್ಲಿ ಸರಳವಾಗಿ ಸಾಧುವಾಗಿ ವ್ಯವಹರಿಸುವ ವ್ಯಕ್ತಿ ಏಕಾಂಗಿಯಾಗಿರುವಾಗ ಭಿನ್ನವಾಗಿ ವರ್ತಿಸಬಹುದು. ಏಕಾಂತ ಆತನ ನಿಜ ರೂಪವನ್ನು ಆತನಿಗೆ ತೋರಿಸುವುದು. ಆತ ಯಾರಿಗೂ ನೋವುಂಟುಮಾಡುವುದಿಲ್ಲ. ಬೇರೆ ಯಾರನ್ನೂ ಪ್ರೀತಿಸುವುದೂ ಇಲ್ಲ. ಆದರೆ ತನ್ನ ತಾನೇ ಪ್ರೀತಿಸಿಕೊಳ್ಳುತ್ತ ಉಭಯಲಿಂಗಿಯಂತೆ ವರ್ತಿಸಬಹುದು. ತನ್ನೊಳಗಿನ ಭಿನ್ನ ಲಿಂಗದ ಬಗೆಗಿನ ಆಕರ್ಷಣೆಯನ್ನು ತೃಪ್ತಿ ಪಡಿಸಿಕೊಳ್ಳಲು ಆತನಿಗೆ ಏಕಾಂತ ನೆರವಾಗುತ್ತದೆ. ಪ್ರತಿ ಮನುಷ್ಯನಲ್ಲೂ ಇರುವ ಈ ವಿಕ್ಷಿಪ್ತ ಮನಸ್ಥಿತಿ ಆತನ ಎಲ್ಲ ಮುಖಗಳಿಗೂ ಅನ್ವಯಿಸಬಹುದು. ಮಾನಸಿಕ ವಿಚಲತೆ, ದೈಹಿಕ ಬಯಕೆ, ಸಾಮಾಜಿಕ ರಾಜಕೀಯ ಸ್ತರಗಳಲ್ಲಿ ವ್ಯಸ್ತರಾಗಿರುವ ಜನರ ಮುಖವಾಡ ಇವೆಲ್ಲವನ್ನೂ ಸೂಕ್ಷ್ಮವಾಗಿ ನೋಡುವ ಕವನವನ್ನು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಕಾಣುವ ಸಂಗತಿ ಎಂದರೆ ಇದು ಮಾನವಸಹಜ ಅಂತರ್ಗತ ಸಂವೇದನೆಗೆ ಸಂದರ್ಭಾನುಸಾರ ವರ್ತನೆಗೆ ಸಂಬಂಧಿಸಿದೆ.

ಏಕಾಂತದ ಮನುಷ್ಯ ಕವನದಲ್ಲಿ ಕವಿ ಉಲ್ಲೇಖಿಸುವ ಗ್ರೀಕ್ ದಂತಕಥೆಯ ನಾರ್ಸಿಸಿಸ್‍ನ ಪ್ರತಿಮೆ ಇಡೀ ಕಾವ್ಯದ ಒಟ್ಟು ಅರ್ಥವನ್ನು ಪಡಿಮೂಡಿಸುಬಲ್ಲದು. ತನ್ನ ಸೌಂದರ್ಯಕ್ಕೆ ತಾನೇ ಮರುಳಾದ ತನ್ನನ್ನೇ ಅತಿಯಾಗಿ ಪ್ರೀತಿಸಿಕೊಳ್ಳುತ್ತಿದ್ದ ಚೆಲುವ ಚೆನ್ನಿಗನಾದ ನಾರ್ಸಿಸಿಸ್ ಒಬ್ಬ ಬೇಟೆಗಾರ. ಕಾಡಿನಲ್ಲಿ ಒಮ್ಮೆ ನಾರ್ಸಿಸಿಸ್ ಅಡ್ಡಾಡುತ್ತಿರುವಾಗ ಆತನ ಸೌಂದರ್ಯಕ್ಕೆ ಮರುಳಾಗಿ ಬಂದ ಪರ್ವತ ಅಪ್ಸರೆ ಇಕೋ ಆತನ ತಬ್ಬಿಕೊಳ್ಳಲು ಮುಂದಾಗುತ್ತಾಳೆ. ಆದರೆ ದೈಹಿಕ ಸಂಬಂಧಗಳಲ್ಲಿ ಆಸಕ್ತಿ ಇಲ್ಲದ ನಾರ್ಸಿಸಿಸ್ ಆಕೆಯ ಪ್ರೇಮವನ್ನು ನಿರಾಕರಿಸುತ್ತಾನೆ. ಆಕೆ ಆಶಾಭಂಗಗೊಂಡು ಬರಿಯ ಬರಿಯ ಸದ್ದಾಗಿ ಉಳಿದುಬಿಡುತ್ತಾಳೆ. ಇದನ್ನು ಗಮನಿಸಿದ ನೆಮೆಸಿಸ್ ಎಂಬ ದ್ವೇಷ ದೇವತೆ, ಬೇಟೆಯಿಂದ ಬಾಯಾರಿ ಬಂದ ನಾರ್ಸಿಸಿಸ್‍ನನ್ನು ಸರೋವರವೊಂದಕ್ಕೆ ಕರೆದೊಯ್ದು, ನೀರಲ್ಲಿ ತನ್ನ ಪ್ರತಿಬಿಂಬ ಕಾಣುವಂತೆ ಮಾಡುತ್ತಾಳೆ. ತನ್ನ ಬಿಂಬವನ್ನೆ ಬೇರೊಂದು ವ್ಯಕ್ತಿ ಎಂದು ಬಗೆದ ನಾರ್ಸಿಸಿಸ್ ಆ ಬಿಂಬವನ್ನು ವಿಚಿತ್ರವಾಗಿ ಪ್ರೀತಿಸತೊಡಗುತ್ತಾನೆ. ಆ ಭ್ರಮೆಯಿಂದ ಹೊರಬರಲಾಗದೇ ಕೊನೆಗೊಮ್ಮೆ ಬಿಳಿ ಮತ್ತು ಬಂಗಾರ ಮೈಬಣ್ಣದ ಹೂವಾಗಿ ರೂಪಾಂತರಗೊಳ್ಳುತ್ತಾನೆ. ನಾರ್ಸಿಸಿಸ್ ನಿಂದ ನಾರ್ಸಿಸಂ ಎಂಬ ಮನೋವೈಜ್ಞಾನಿಕ ಪದ ಹುಟ್ಟಿಕೊಂಡಿದೆ. ತನ್ನನ್ನೆ ತಾನು ವಿಪರೀತ ಪ್ರೀತಿಸುವ ಮನಸ್ಥಿತಿ ಅದು. ಈ ಕಲ್ಪನೆಯ ಮೂಲಕ ಕಾಟ್ಕರ್ ಕಟ್ಟಿಕೊಡುವ ಚಿತ್ರಣ ವ್ಯಕ್ತಿತ್ವ ವಿಮರ್ಶೆ.

ಏಕಾಂತದ ಮನುಷ್ಯ ಕವಿತೆಯಲ್ಲಿ ಬರುವ ನಾಯಕ ಮೈಮೇಲಿನ ಬಟ್ಟೆಗಳನ್ನು ಕಿತ್ತೆಸೆದು, ಕನ್ನಡಿಯ ಎದುರು ನಿಂತು, ತನ್ನನ್ನೆ ತಾನು ಪ್ರೀತಿಸಿಕೊಳ್ಳುತ್ತ ನಿಜವಾದ ಉಭಯಲಿಂಗಿಯಾಗುತ್ತಾನೆ. ವ್ಯಕ್ತಿ ಆತ್ಮರತಿಯಲ್ಲಿ ತೊಡಗಿಸಿಕೊಳ್ಳುತ್ತಾನೇಯೇ? ಮಕ್ಕಳಂತೆ ಕಾಲುಮಡಚಿ ಕುಳಿತು ಅಳುತ್ತ ತನ್ನನ್ನೆ ತಾನು ಸಂತೈಸಿಕೊಳ್ಳುವ ಮನುಷ್ಯ ಮಗುವಾಗಬಯಸುತ್ತಾನೆಯೇ? ಅದರಂತೆ ಜೋರಾಗಿ ಅತ್ತು ಹಗುರಾಗಬಯಸುತ್ತಾನೆಯೇ? ಇವೆಲ್ಲ ಪ್ರಶ್ನೆಗಳಿಗೆ ಹೌದು ಎನ್ನಬೇಕಾಗುತ್ತದೆ. ಇಂತಹ ಏಕಾಂತದ ಅಳುವಿನಲ್ಲಿ ಸಿಗುವ ತೃಪ್ತಿ, ಸುಖ ಮನಸ್ಸಿಗೆ ಧೃಡತೆ ತರುತ್ತದೆ. ತನ್ನನ್ನು ನೋಡಿ ತಾನೇ ನಗುವ ಔದಾರ್ಯ ಬಂದಾಗ ಆ ವ್ಯಕ್ತಿತ್ವ ಗಟ್ಟಿಯಾಗುತ್ತದೆ. ಏಕಾಂತ ಅಂತಹ ಗಟ್ಟಿತನವನ್ನು ತಂದುಕೊಡುತ್ತದೆ. ಎಷ್ಟೋ ಬಾರಿ ಬಾಲ್ಯದ ಹುಡುಗುತನದಲ್ಲಿ ಆಡಿದ ಹುಚ್ಚು ಆಟಗಳನ್ನು ಎಗರಿ ಎಗರಿ ಬೀಳುವುದನ್ನು ಯೌವನದಲ್ಲೂ ಯಾರಿಗೂ ಕಾಣದಂತೆ ಆಗೊಮ್ಮೆ ಈಗೊಮ್ಮೆ ಪ್ರಯತ್ನಿಸಿ ಮತ್ತೆ ನಮ್ಮಷ್ಟಕ್ಕೆ ನಾವೇ ನಮ್ಮ ಹುಚ್ಚುತನವೆಂದು ನಕ್ಕು ತೃಪ್ತರಾಗುತ್ತೇವೆ. ಯೌವನದ ದಿನಗಳ ಯಾವುದೋ ಆನಂದವನ್ನು ಮುಪ್ಪಿನಲ್ಲಿ ಬಯಸಿ ಹಳಹಳಿಸುತ್ತೇವೆ. ಇವೆಲ್ಲ ಸ್ವ ಕೇಂದ್ರಿತ ಸಂಗತಿಗಳಾದರೂ, ಬಿಡಿಬಿಡಿಯಾಗಿ ಎಲ್ಲರೂ ಇಂತಹ ಒಂದಿಲ್ಲೊಂದು ಅತಿರೇಕದಲ್ಲಿ ತೊಡಗಿಕೊಂಡಿರುತ್ತಾರೆ.ಹೀಗೆ ಏಕಾಂತದ ಮನುಷ್ಯ ಹಲವು ಮಜಲುಗಳಲ್ಲಿ ನಮ್ಮ ವ್ಯಕ್ತಿತ್ವವನ್ನು ಜಾಲಾಡುತ್ತದೆ.

ಅವರ ಎರಡು ಕಥಾ ಸಂಕಲನಗಳಲ್ಲಿ ಒಂದು “ಹೇಳಲಾಗದ ಕಥೆಗಳು”ಸಂಕಲನ. ಇಲ್ಲಿರುವ ಕಥೆಗಳು ಬರಿಯ ಕಥೆಗಳಲ್ಲ. ಕಥೆಗಳಲ್ಲಿಯ ಯಾವೊಂದು ತಂತ್ರಗಾರಿಕೆಯೂ ಇಲ್ಲಿಲ್ಲ. ನಿರೂಪಣಾ ಶೈಲಿಯಲ್ಲಿ, ಭಾವಗಳ ವೈಭವೀಕರಿಸುವಲ್ಲಿ ಲೇಖಕರು ವ್ಯಸ್ತರಾಗದೇ ಕಂಡ, ಗೃಹಿಸಿದ, ಕೆಲವೊಮ್ಮೆ ಆ ಘಟನೆಯ ಒಂದು ಪಾತ್ರವೇ ಆದ ಎಲ್ಲ ವಿಚಾರಗಳನ್ನು ಸತ್ವಯುತವಾಗಿ ನಿರೂಪಿಸುತ್ತಾರೆ. ಘಟನೆಗಳು ಯಥಾವತ್ತಾದ ಚಿತ್ರಣಗಳು, . ಹಲವು ರಾಷ್ಟ್ರ, ರಾಜ್ಯ ನಾಯಕರುಗಳ ಘನವ್ಯಕ್ತಿತ್ವ, ಉದಾರತೆ, ಕಾಠಿಣ್ಯ ಎಲ್ಲವೂ ಸ್ವಾರಸ್ಯಕರವಾಗಿ ಮೂಡಿಬಂದಿದೆ.ಲೇಖಕರೇ ಹೇಳುವಂತೆ ಇವು “ ಹೇಳಲಾಗದ ಕಥೆಗಳು” ಕಥೆಯ ಹಂದರದೊಳಗೆ ಉಸಿರಾಡುತ್ತಿರುವ ಸತ್ಯ ಘಟನೆಗಳ ಅನಾವರಣ. ಇವುಗಳನ್ನು ಲೇಖಕ ಯಾಕೆ? ಹೇಗೆ?ಇಂತೆಲ್ಲ ವಿಶ್ಲೇಷಿಸ ಹೋಗುವುದಿಲ್ಲ. ಕಥೆಗಾರನಾಗಿ ಸಮಾಜಕ್ಕೆ ಸಂದೇಶವೊಂದನ್ನು ರವಾನಿಸುವ ಆದ್ಯ ಕಥೆಗಾರನ ಪೋಸು ನೀಡುವುದಿಲ್ಲ. ಬದಲಿಗೆ ಆ ಘಟನೆಗಳನ್ನು ಯಥಾವತ್ತಾಗಿ ಚಿತ್ರಿಸುತ್ತಾರೆ. ಓದುತ್ತ ಆ ಚಿತ್ರಗಳು ನಮ್ಮ ಮನಃಪಟಲದ ಗೋಡೆಯ ಮೇಲೆ ಪಾತ್ರಗಳಾಗುತ್ತ ಸರಿದು ಹೋಗುತ್ತ ವಿಚಿತ್ರವಾದ ಅನುಭವಗಳನ್ನು ಮೂಡಿಸುತ್ತ ಹೋಗುತ್ತವೆ.ಅಂತಹ ಒಂದೆರಡು ಕಥೆಗಳನ್ನು ಲಕ್ಷಿಸೋಣ.

ಕತೆ ಒಂದು: ಮೀಸೆ ಪುರಾಣ
ಹುಬ್ಬಳ್ಳಿಯ ಕೋರ್ಟ ಒಂದರಲ್ಲಿ ಹೆಣ್ಣಿನ ವಿಷಯದಲ್ಲಿ ನಡೆದ ಕೊಲೆಯ ಕೇಸ್ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನ್ಯಾಯಾಧೀಶರು ಗಿರಿಜಾ ಮೀಸೆ ಹೊತ್ತ ಸಾಕ್ಷಿಯೊಬ್ಬನ ಮೀಸೆಗೆ ಕುತೂಹಲದಿಂದ ಕೇಳಿದ ಪ್ರಶ್ನೆಗಳು ಕೊನೆಯಲ್ಲಿ ನ್ಯಾಯಾಧೀಶರ ಕುರ್ಚಿಗೆ ಸಂಚಕಾರ ತರುವಂತಾಯ್ತು.
ವಿಚಾರಣೆಯ ನಂತರ ಸಾಕ್ಷಿ ತನಗೆ ನೀಡಿದ ಕಾಗದಕ್ಕೆ ಸಹಿ ಮಾಡಲೊಪ್ಪಲಿಲ್ಲ. ಕಾರಣ ಕೇಳಿದಾಗ ನ್ಯಾಯಾಧಿಶರು ತನಗೆ ಕೇಳಿದ ಎಲ್ಲ ಪ್ರಶ್ನೆಗಳಿಗೂ ತಾನು ಉತ್ತರಿಸಿದ್ದಾಗಿಯೂ ತನ್ನ ಮೀಸೆಯ ಬಗ್ಗೆ ಅವರು ಕೇಳಿದ ಪ್ರಶ್ನೆಗಳು ಅದಕ್ಕೆ ತನ್ನ ಉತ್ತರ ಅಲ್ಲಿ ನಮೂದಾಗಿಲ್ಲದ ಕಾರಣ ತಾನು ಸಹಿ ಮಾಡುವುದಿಲ್ಲವೆಂದ. ಕೊನೆಯಲ್ಲಿ ನ್ಯಾಯಾಧೀಶರೇ ಬೇರೆ ಉಪಾಯವಿಲ್ಲದೇ ಆತನ ಇಚ್ಛೆಯಂತೆ ಕ್ಷಮಾಪಣೆ ಕೇಳಿದ ಮೇಲೆ ಆತ ಸಹಿ ಮಾಡಿದ. ಮೀಸೆ ಬಗ್ಗೆ ಹಾಸ್ಯ ಚಟಾಕಿ ಪ್ರಶ್ನೆಗಳನ್ನು ಕೇಳಿದ ನ್ಯಾಯಾಧೀಶರಿಗೆ ಮೀಸೆಯೇ ಇರಲಿಲ್ಲ. ಮೀಸೆಯಿಲ್ಲದ ನ್ಯಾಯಾಧೀಶರಿಗೆ ಅದರ ಮಹತ್ತನ್ನು ಆತ ಮನಗಾಣಿಸಬಯಸಿದ್ದನೇ?

ಕತೆ ಒಂಬತ್ತು: ಚಂದ್ರಶೇಖರ ಜೊತೆ ನಾಲ್ಕು ಹೆಜ್ಜೆ.

ಇದು ಮಾಜಿ ಪ್ರಧಾನಿ ದಿವಂಗತ ಚಂದ್ರಶೇಖರರ ಅಂದಿನ ‘ಭಾರತ ಯಾತ್ರಾ’ದ ಒಂದು ತುಣುಕು. ಒಂದು ಕಾಲಕ್ಕೆ ಇಂದಿರಾಗಾಂಧಿಯ ‘ಆಂಖೋ ಕಾ ತಾರಾ’ ಆಗಿದ್ದ ಇವರು ಆನಂತರ ಇಂದಿರಾಗಾಂಧಿಯ ಕಟ್ಟಾವಿರೋಧಿಯಾಗಿದ್ದರು. ಮುಂದೆ ಆಗಿನ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಸಂಪೂರ್ಣ ಭಾರತವನ್ನು ನೋಡುವ ಉದ್ದೇಶದಿಂದ ‘ಭಾರತ ಯಾತ್ರಾ’ ಎಂಬ ಪಾದಯಾತ್ರೆಯ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆ ಸಮಯದಲ್ಲಿ ಬೆಳಗಾವಿಗೆ ಬಂದಿದ್ದ ಹೊತ್ತು. ಆ ಸಮಯದಲ್ಲಿ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಲೇಖಕ ಡಾ. ಸರಜೂ ಕಾಟ್ಕರ್‍ರಿಗೆ ಚಂದ್ರಶೇಖರ ಅವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸದಾವಕಾಶ ದೊರೆತಿತ್ತು. ಅಲ್ಲಿಯ ಸ್ವಾರಸ್ಯದ ಸಂಗತಿ ಎಂದರೆ ಕನ್ನಡ ಬಾರದ ಚಂದ್ರಶೇಖರರು ಹಾಗೂ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರದ ಸ್ಥಳಿಯ ಮುಖಂಡ ಬಸಗೌಡ ಪಾಟೀಲರು ನಡೆಸುತ್ತಿದ್ದ ಸಂಭಾಷಣೆ ಕೊನೆಗೆ ಗಡಿ ಸಮಸ್ಯೆಯನ್ನು ಭಾಷಣದಲ್ಲಿ ಎತ್ತಿ ಪ್ರಸ್ತಾಪಿಸುವಂತೆ ಸೂಚಿಸಿದ ಸಮಾಜವಾದಿ ಪಕ್ಷದ ಧುರೀಣ ಮಧು ದಂಡವತೆ ನೀಡಿದ ಸಲಹೆಯನ್ನು ಆಲಿಸಿಯೂ, ಈಗಾಗಲೇ ಮಹಾಜನ ವರದಿಯಲ್ಲಿ ಬೆಳಗಾವಿ ಕರ್ನಾಟಕದ್ದೆ ಎಂಬ ಅಂತಿಮ ತೀರ್ಪು ಬಂದಿರುವ ಬಗ್ಗೆ, ಪುನಃ ಅದೇ ವಿಚಾರವನ್ನು ಕೆದಕದಿರುವಂತೆ ನೀಡಿದ ಬಸಗೌಡ ಪಾಟೀಲರ ಸಲಹೆಯಂತೆ ಚಂದ್ರಶೇಖರರು ನಡೆದುಕೊಂಡ ಸ್ವಾರಸ್ಯಕರ ಘಟನೆ.

ಕತೆ ಹದಿಮೂರು: ಕಲ್ಪನಾ ವಿಲಾಪ.
ಕನ್ನಡ ಚಿತ್ರೋದ್ಯಮದಲ್ಲಿ ಉತ್ತುಂಗದ ತಾರೆಯಾಗಿ ಮಿಂಚುತ್ತಿದ್ದ ಮಿನುಗು ತಾರೆ ಕಲ್ಪನಾ ಆತ್ಮಹತ್ಯೆಗೆ ಶರಣಾದದ್ದು ಮಾತ್ರ ಬೆಳಗಾವಿ-ಸಂಕೇಶ್ವರ ನಡುವೆ ಇರುವ ಗೋಟೂರ್‍ನ ಪ್ರವಾಸಿಧಾಮದಲ್ಲಿ. ಆಕೆಯ ಆತ್ಮಹತ್ಯೆಯ ಕುರಿತಂತೆ ಪುಂಖಾನುಪುಂಖವಾಗಿ ಚಿತ್ರವಿಚಿತ್ರ ಕಥೆಗಳು ಇವೆಯಾದರೂ ನೈಜ ಕಾರಣ ಆಕೆಯ ಆತ್ಮಾಭಿಮಾನಕ್ಕೆ ಬಿದ್ದು ಪೆಟ್ಟು. ನಾಟಕ ಕಲಾವಿದನಾಗಿದ್ದ ಗುಡಗೇರಿ ಬಸವರಾಜ ಆಕೆಯ ಪ್ರೀತಿಪಾತ್ರನೂ, ಪತಿಯೂ ಆಗಿದ್ದೂ ಜಗತ್ತಿಗೆ ತಿಳಿದಿದ್ದು ಆಕೆಯ ಮರಣದ ನಂತರವೇ. ದಂಪತಿಗಳಲ್ಲಿಯ ಯಾವುದೋ ಕ್ಷುಲಕ ಕಾರಣ ನಾಟಕದ ಥೇಟರ ಮೇಲೂ ವಿಜೃಂಬಿಸಿದಾಗ ಸಂಯಮ ಕಳೆದುಕೊಂಡ ಬಸವರಾಜ ಆಕೆಗೆ ನೀಡಿದ ಒಂದೇ ಏಟು ಆಕೆಯನ್ನು ಜಗತ್ತಿನಿಂದಲೇ ವಿಮುಖಗೊಳ್ಳುವ ನಿರ್ಧಾರಕ್ಕೆ ಹಚ್ಚಿದ್ದು. ಖ್ಯಾತಿಯೂ ಕೆಲವೊಮ್ಮೆ ಅನಾನುಕೂಲತೆಯನ್ನು ಹೇಗೆ ತಂದೊಡ್ಡುವುದು ಎಂಬುದಕ್ಕೆ ಆಕೆಯ ಪೋಸ್ಟಮಾರ್ಟಂಗೆ ಉಂಟಾದ ಕಿರಿಕಿರಿ, ಸತ್ತವಳ ಹೆಸರಿನ ಮೇಲೆ ತಮ್ಮ ಮನೆ ಕಟ್ಟಿಕೊಳ್ಳುವ ದುರಾಸೆಯ ಜನ ಹೀಗೆ ಎಲ್ಲ ಸಂಗತಿಗಳನ್ನು ಹತ್ತಿರದಿಂದ ತಿಳಿದ ಪತ್ರಕರ್ತರ ಬರವಣಿಗೆ ಬಿಚ್ಚಿಟ್ಟ ರಹಸ್ಯ.

ಕತೆ ಇಪ್ಪತ್ತೆಂಟು :ವಿಭಾಗಾಧಿಕಾರಿಯೂ ಅವರು ಸಾಕಿದ ಎಮ್ಮೆಯೂ ಸರಕಾರಿ ಅಧಿಕಾರಿಯ ಭ್ರಷ್ಟತೆಯನ್ನು ಬಯಲಿಗೆಳೆದ ಹಾಸ್ಯಭರಿತ ಸಂಗತಿ.ಪತ್ರಕರ್ತನನ್ನು ಖರೀದಿಸಿರುವಂತೆ ವರ್ತಿಸುವ ಕೆಲವು ಅಧಿಕಾರಿಗಳು, ಸ್ವತಃ ಖರ್ಚುಮಾಡದೇ ಅಧೀನ ಅಧಿಕಾರಿಗಳಿಂದ ಕಮೀಷನ್ ಪಡೆವ, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಪೊಗರು ಬೆಳೆಸಿಕೊಳ್ಳುವ ಅಧಿಕಾರಿಯ ನೀರಿಳಿಸಿದ ಸಂದರ್ಭವನ್ನು ರಸವತ್ತಾಗಿ ಬಣ್ಣಿಸುತ್ತಾರೆ. ಬೆಳಗಾವಿಯ ವಿಭಾಗಾಧಿಕಾರಿಯಾಗಿ ಬಂದ ಅಧಿಕಾರಿಯೊಬ್ಬ ತಾಜಾ ಹಾಲು ಸೇವನೆಗೋಸ್ಕರ ಕೆಳಹಂತದ ಅಧಿಕಾರಿಗಳಿಂದಲೇ ಎರಡೆರಡು ಬಾರಿ ವಂತಿಗೆ ವಸೂಲಿ ಮಾಡಿ ಎಮ್ಮೆ ಖರೀದಿಸಿದ್ದು, ಆ ಎಮ್ಮೆ ಎಲ್ಲೆಂದರಲ್ಲಿ ಸಿಕ್ಕಸಿಕ್ಕವರ ಮನೆಯ ಗಾರ್ಡನ್ನಿನ ಗಿಡಗಳಿಗೆ ಬಾಯಿ ಹಾಕಿದ್ದು, ಆ ಎಮ್ಮೆ ನೋಡಿಕೊಳ್ಳಲೆಂದೆ ಈ ಅಧಿಕಾರಿ ಸರಕಾರಿ ಸಂಬಳದಲ್ಲಿ ಕೆಲಸಗಾರನನ್ನು ನೇಮಿಸಿಕೊಂಡಿದ್ದು, ಮುಂದೆ ಈ ಸಂಗತಿ ಪತ್ರಿಕೆಯ ಮುಖಪುಟದ ವಸ್ತುವಾದಾಗ ಕೆಂಡಮಂಡಲನಾದ ಅಧಿಕಾರಿಯ ಕೋಪ ಆತನ ದವಡೆಗೆ ಕುತ್ತಾದ ಸ್ವಾರಸ್ಯಕರ ಸಂಗತಿ.

ಕತೆ ಮೂವತ್ತಾರು: ಓದುಗ ದೊರೆಗಳು
ಪತ್ರಿಕೆಯ ಮುಖ್ಯ ಜೀವಾಳ ಓದುಗ ವಲಯ.ಓದುಗರಿಲ್ಲದ ಪತ್ರಿಕೆ ನಾಮಾವಶೇಷವಾಗುತ್ತದೆ. ಓದುಗರ ಸ್ಪಂದನೆಗೆ ಪ್ರತಿಕ್ರಿಯಿಸದ ಪತ್ರಿಕೆ ಹೆಚ್ಚುಕಾಲ ಬಾಳದು.ಅಂತಹ ಶ್ರೇಷ್ಠ ಓದುಗರೊಬ್ಬರ ನೈಜ ಸಲಹೆಯಂತೆ ಪತ್ರಿಕೆಯ ಹವಾಮಾನ ವಿವರಣೆಯನ್ನು ಬದಲಾಯಿಸಿದ ಸಂದರ್ಭವನ್ನು ಲೇಖಕರು ನೆನಪಿಸಿಕೊಳ್ಳುತ್ತಾರೆ. ಹಾಗೇ ಬೆಳಗಾವಿಯ ಪ್ರಾಚಾರ್ಯರೊಬ್ಬರ ಅನಿಸಿಕೆಯೊಂದನ್ನು ಖುಷಿಯಿಂದಲೇ ಹಂಚಿಕೊಳ್ಳುತ್ತಾರೆ.” ಪತ್ರಿಕೆಗಳು ಸ್ವಾಮಿಗಳಿದ್ದಂತೆ. ಸ್ವಾಮಿಗಳು ಯಾವ ತಪ್ಪನ್ನು ಮಾಡಬಾರದೆಂದು ಜನರು ಬಯಸುತ್ತಾರೆ. ಅದೇ ರೀತಿ ಪತ್ರಿಕೆ ತಪ್ಪು ಮಾಡಬಾರದು’ ಎಂಬ ಆಶಯದಿ ಬರೆದ ಪತ್ರವನ್ನು ಇಲ್ಲಿ ಉಲ್ಲೇಖಿಸುತ್ತಾರೆ.ಪತ್ರಿಕೆಯ ನೈತಿಕತೆಯನ್ನು ಬೆಳಸುವ ಓದುಗ ಸಮುದಾಯವನ್ನು ಕಳಕಳಿಯಿಂದ ನೆನೆಯುತ್ತಾ ಪತ್ರಕರ್ತರ ಕರ್ತವ್ಯವನ್ನು ನೆನಪಿಸುತ್ತಾರೆ.
ಇಲ್ಲಿಯ ಕಥೆಗಳು ಕೆಲವು ಅವರ ವೃತ್ತಿ ಅನುಭವಗಳ ಕಥಾನಕಗಳು. ಕಥೆಗಳಲ್ಲಿ ಜೀವನದ ಒಂದು ದರ್ಶನ, ಮೌಲ್ಯಗಳ ನೋಟ ಅಂತರ್ಗತವಾಗಿ ಬರುತ್ತದೆ. ಇಲ್ಲಿಯ “ಹೇಳಲಾಗದ ಕಥೆಗಳು” ಅಂತಹ ಅಂತರ್ಗತ ದರ್ಶನವನ್ನು ಓದುಗನಲ್ಲಿ ತೆರೆದ ನುಡಿಗಳಲ್ಲಿಯೇ ಪಡಿಮೂಡಿಸುತ್ತವೆ. ಹಾಗೆ ಸಾಹಿತ್ಯಿಕ ಬರವಣಿಗೆಗಳು ಜೀವನಾನುಭವದ ಸಮೃದ್ಧತೆಯಿಂದ ಮೂಡಿದಾಗಲೇ ಅವುಗಳು ನೈಜತೆಯ ಸೊಗಸನ್ನು ಮೈಗೂಡಿಸಿಕೊಳ್ಳಬಹುದು. ವಿಸ್ತೃತ ಅನುಭವಗಳ ಜೊತೆ ಸಂವೇದನಾಶೀಲತ್ವ ಬರವಣಿಗೆಯ ಓಘವನ್ನು ನೈಪುಣ್ಯತೆಯೆಡೆಗೆ ಕೊಂಡೊಯ್ಯುತ್ತದೆ. ಅಂತಹ ನೈಪುಣ್ಯತೆಯ ಬರವಣಿಗೆಯ ಶೈಲಿ ಲೇಖಕರದು. ತಮ್ಮ ಸಾಹಿತ್ಯ ಶೈಲಿಗಳಲ್ಲಿ ಹೊಸತನವನ್ನು ಹುಟ್ಟುಹಾಕುವ ಪ್ರಯತ್ನದಂತೆ ಅವರ ಬರವಣಿಗೆ.

ಕಾದಂಬರಿ ಜಗತ್ತಿನಲ್ಲಿ ದೇವರಾಯ, ಬಾಜಿರಾವ್ ಮಸ್ತಾನಿ, ಜುಲೈ 22, 1947, ಸಾವಿತ್ರಿಬಾಯಿ ಪುಲೆ, ಗೌರಿಪುರ ಮುಂತಾದ ಜನಪ್ರಿಯ ಕಾದಂಬರಿಗಳನ್ನು ಬರೆದಿದ್ದಾರೆ. ಸಾವಿತ್ರಿ ಬಾಯಿ ಫುಲೆ, ಜುಲೈ 22, 1947, ಈಗಾಗಲೇ ಸಿನೇಮಾಗಳಾಗಿ ಮಿಂಚಿವೆ. ‘ಬಾಜಿರಾವ್ ಮಸ್ತಾನಿ’ ಹಿಂದಿ ಸಿನೇಮಾದಲ್ಲಿ ಕಾಟ್ಕರರ ಕಾದಂಬರಿಯ ಕೆಲವು ಸನ್ನಿವೇಷಗಳನ್ನು ಬಳಸಿಕೊಳ್ಳಲಾಗಿದೆ. ಗೌರಿಪುರ ಕಾದಂಬರಿಯು ಚಲನಚಿತ್ರವಾಗಿದ್ದು, ಚಿತ್ರೀಕರಣ ಬಹುತೇಕ ಮುಗಿದಿದೆ. ‘ಅಂಬೆ’ ಅವರ ಸ್ವರಚಿತ ನಾಟಕವಾಗಿದ್ದು, ಮಹಿಳಾ ವಾದದ ನೆಲೆಯಲ್ಲಿ ಶ್ರೇಷ್ಟ ರಚನೆಯಾಗಿದೆ. ಅತೀತ, ಹೇಳಲಾಗದ ಕಥೆಗಳು ಕಥಾಸಂಕಲನಗಳಾಗಿವೆ, ‘ಮೊಕ್ಕಾಂ ಪೋಸ್ಟ ಲಂಡನ್’ ಎಂಬ ಪ್ರವಾಸ ಕಥನ, ’ ನಾನು ಪಾಟೀಲ ಪುಟ್ಟಪ್ಪ’ ಆತ್ಮಕಥೆ ನಿರೂಪಣೆ, ಇದರೊಂದಿಗೆ ಹಲವಾರು ವೈಚಾರಿಕ ಕೃತಿಗಳು, ಸಂಪಾದಕೀಯಗಳು,ವ್ಯಕ್ತಿಚಿತ್ರಗಳು, ಅವರ ಸಾಹಿತ್ಯದ ಸಿರಿಮುಡಿಯನ್ನು ಅಲಂಕರಿಸಿವೆ.

ಸಾಹಿತ್ಯದ ಬಹುಮುಖ್ಯ ಪ್ರಕಾರಗಳಲ್ಲಿ ಬರೆದ ಕಾಟ್ಕರ್ ಅನುವಾದ ಸಾಹಿತ್ಯದಲ್ಲೂ ಹೇರಳ ಕೃಷಿ ಮಾಡಿದ್ದಾರೆ. ‘ಮರಾಠಿ ದಲಿತ ಕಾವ್ಯ’ , ‘ಅಟಲ ಬಿಹಾರಿ ವಾಜಪೇಯಿ ಕವಿತೆಗಳು’, ‘ಬಾಂಬ್ ವಿರೋಧಿ ಪಾಕಿಸ್ತಾನಿ ಕವಿತೆಗಳು’, ‘ತಸ್ಲಿಮ್ ನಜ್ರೀನ್ ಕವಿತೆಗಳು’ ಮುಂತಾದ ಅನುವಾದಿತ ಕವನ ಸಂಕಲನಗಳನ್ನು, ‘ಛಿನ್ನ’, ಮತ್ತು ‘ದೇಹಭಾನ’ ಅನುವಾದಿತ ನಾಟಕಗಳನ್ನು, ‘ಒಂದೂರಿನಲ್ಲಿ ಒಬ್ಬ ರಾಜನಿದ್ದ’ ಅನುವಾದಿತ ಕಾದಂಬರಿ, ‘ಸಾದತ್ ಹಸನ್ ಮಂಟೋ ಬಹಿಷ್ಕೃತ ಕಥೆಗಳು’ ಅನುವಾದಿತ ಕಥಾ ಸಂಕಲನ ಇತ್ಯಾದಿ ಅನುವಾದಿತ ಕೃತಿಗಳು ನಾಡಿನ ಹೆಸರಾಂತ ಪ್ರಕಾಶನಗಳಿಂದ ಪ್ರಕಟವಾಗಿವೆ. ಇವರ ಹಲವು ಕೃತಿಗಳು ಸಿನೇಮಾಗಳಾಗಿ ಜನಪ್ರಿಯತೆ ಗಳಿಸಿವೆ.ಇತ್ತೀಚೆಗೆ ಸಾವಿತ್ರಿಬಾಯಿ ಪುಲೆ ಕೃತಿ ಸಿನೇಮಾ ಜಗತ್ತಿನಲ್ಲಿ ತನ್ನದೇ ಆದ ಐತಿಹಾಸಿಕ ಮುದ್ರೆಯೊತ್ತಿದ ಕೃತಿ.

ಡಾ. ಸರಜೂ ಕಾಟ್ಕರ್‍ರ ಕೃತಿಗಳಲ್ಲಿ ನಿಷ್ಠುರತೆ ಇದೆ. ಸಮಯೋಚಿತ ನಿಲುವು ಹಾಗೂ ಅಷ್ಟೇ ತಾಳ್ಮೆಯನ್ನು ಹೊಂದಿರುವ ವ್ಯಕ್ತಿ ಮಾತ್ರ ಈ ರೀತಿ ಯಾವ ಭೀಡೆಗೂ ಒಳಗಾಗದೇ ಬರೆಯಬಲ್ಲ. ಅಂತಹ ವ್ಯಕ್ತಿತ್ವ ಡಾ.ಸರಜೂ ಕಾಟ್ಕರ್ ಅವರದು. ವಿಶಿಷ್ಟ ನಿಲುವಿನ, ಜನಪರ ಚಿಂತನೆಯ ಡಾ. ಕಾಟ್ಕರ್ ಒಬ್ಬ ಅಪರೂಪದ ಕವಿ ಹಾಗೂ ಸಾಹಿತಿ. ಹಿರಿಕಿರಿಯರೆನ್ನದೇ ತಮ್ಮ ಸ್ನೇಹದ ವರ್ತುಲಕ್ಕೆ ಬಂದ ಎಲ್ಲರನ್ನೂ ಗೌರವಿಸುವ, ಹಾಗೇ ಕಳಕಳಿಯಿಂದ ಕಾಣುವ ದೊಡ್ಡಗುಣ ಅವರದು.

ಕೆಲವೊಮ್ಮೆ ಅತೀ ಸಂಕೋಚದ ವ್ಯಕ್ತಿಯಾಗಿ ಮತ್ತೆ ಕೆಲವೊಮ್ಮೆ ಕಲ್ಲಿನಷ್ಟು ಗಟ್ಟಿ ಮನಸ್ಕರಾಗಿ ಕಾಣುವ ಡಾ. ಸರಜೂ ಅವರನ್ನು ಪತ್ರಿಕಾ ರಂಗ ಹಾಗೂ ಸಾಹಿತ್ಯ ಲೋಕದ ನೂರಾರು ಪ್ರಶಸ್ತಿಗಳು, ವಿವಿಧ ಜವಾಬ್ದಾರಿಯುತ ಗೌರವಗಳು ಅವರನ್ನು ಹುಡುಕಿಬಂದಿವೆ. ಹೀಗಿದ್ದೂ ಎಲ್ಲರೊಂದಿಗೆ ಸಾಮಾನ್ಯವಾಗಿ ಬೆರೆಯುವ ಅವರ ಗುಣ ವ್ಯಕ್ತಿತ್ವಕ್ಕೆ ಶೋಭೆ

ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x