ಕಾಮಾಟಿಪುರದ ರಾಣಿ: ಜೆ.ವಿ.ಕಾರ್ಲೊ


ಇಂಗ್ಲಿಷಿನಲ್ಲಿ: ಎಸ್.ಹುಸೇಯ್ನ್ ಝೈದಿ/ ಜೇನ್ ಬೋರ್ಜೆಸ್
ಕನ್ನಡಕ್ಕೆ: ಜೆ.ವಿ.ಕಾರ್ಲೊ

ಅವಳಿಗೆ ವಧುವಿನಂತೆ ಶೃಂಗರಿಸಿ ಮಂಚದ ಮೇಲೆ ಕುಳ್ಳಿರಿಸಿ ಸುತ್ತ ಗುಲಾಬಿ ಪಕಳೆಗಳನ್ನು ಹರವಲಾಗಿತ್ತು. ತುಟಿಗಳಿಗೆ ಗಾಢವಾದ ಕೆಂಪು ಬಣ್ಣವನ್ನು ಬಳಿದು ದೊಡ್ಡದಾದ ಮೂಗುತಿಯನ್ನು ತೊಡಿಸಿದ್ದರು. ಆ ಕೋಣೆಯಲ್ಲಿ ಪುರಾತನ ಗ್ರಾಮಫೋನೊಂದು ಹಳೆ ಹಿಂದಿ ಹಾಡನ್ನು ಪದೇ ಪದೇ ಹಾಡುತ್ತಿತ್ತು. ಮೊದಲರಾತ್ರಿಯ ವಾತಾವರಣವನ್ನು ಅಲ್ಲಿ ಸೃಷ್ಟಿಸಲಾಗಿತ್ತು. ಆದರೆ ಮಧುಗೆ ಇದಾವುದರ ಪರಿವೆಯೂ ಇರಲಿಲ್ಲ. ತನ್ನನ್ನೇಕೆ ಇಲ್ಲಿ ತಂದು ಕುಳ್ಳಿರಿಸಿದ್ದಾರೆಂದು ಅವಳಿಗಿನ್ನೂ ಅರ್ಥವಾಗಿರಲಿಲ್ಲ.

ಒಮ್ಮೆಲೆ ಬಾಗಿಲು ತೆರೆದು ಒಳಗೆ ಬಂದ ಜಗನ್ ಸೇಠನ್ನು ನೋಡಿ ಮಧು ಬೆಚ್ಚಿ ಬಿದ್ದಳು. ನಶೆ ತುಂಬಿದ ಅವನ ಕೆಂಪು ಕಣ್ಣುಗಳೊಮ್ಮೆ ಅವಳ ಮೇಲೆ ಹರಿದವು. ತೃಪ್ತಿಯಿಂದ ಅವನ ಮುಖ ಅರಳಿತು.

ಮೈತುಂಬಾ ಬಟ್ಟೆ ತೊಟ್ಟುಕೊಂಡಿದ್ದರೂ ಮಧುಗೆ ಬೆತ್ತಲೆಯಾದಂತೆ ಕಸಿವಿಸಿಯಾಯಿತು. ಹದಿನಾರು ವರ್ಷದ ಆ ಅಮಾಯಕ ಹೆಂಗಳೆಗೆ ಅದು ತನ್ನ ‘ನತ್ತ್ ಉತಾರ್ನ’ ಅಥವಾ ‘ಮೂಗುತಿ ಕಳಚುವ’ ದಿನವೆಂದು ಅರ್ಥವಾಗಿರಲಿಲ್ಲ. ನತ್ತ್ ಉತಾರ್ನಾವೆಂದರೆ ಸಾಂಕೇತಿಕವಾಗಿ ಕನ್ಯತ್ವ ಕಳಕೊಳ್ಳುವ ದಿನ. ಮೊದಲ ರಾತ್ರಿ ಪತಿಯು ತನ್ನ ವಧುವಿನ ಮೂಗತಿಯನ್ನು ಕಳಚಿ ಅವಳ ಕನ್ಯತ್ವ ಹರಣಕ್ಕೆ ತಯಾರುಗೊಳಿಸುವ ಉಪಕ್ರಮ. ಲೈಂಗಿಕ ಕಾರ್ಯಕರ್ತರ ಮಧ್ಯೆ ‘ಮೂಗುತಿ ಕಳಚುವುದು’ ಎಂದರೆ ಹೆಣ್ಣು ಮಕ್ಕಳನ್ನು ವೇಶ್ಯಾ ವೃತ್ತಿಗೆ ಅಧಿಕೃತವಾಗಿ ಒಳಗೊಳಿಸುವ ದಿನವೆಂದು ಅರ್ಥ.

ಜಗನ್ ಸೇಠು ತನ್ನ ಬಟ್ಟೆಗಳನ್ನು ಕಳಚತೊಡಗಿದಾಗ ಮಧು ಹೌಹಾರಿದಳು. ಅವಳಿಗೆ ಜೋರಾಗಿ ಅಳಬೇಕೆನಿಸಿತು. ಆದರೆ ಅಳುವುದೇ ಆಗಲಿ ಅಥವಾ ಬೇರಾವುದೇ ರೀತಿಯಲ್ಲಿ ಪ್ರತಿಭಟಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಮೇಡಂ ರಶ್ಮಿ ಮೊದಲೇ ಎಚ್ಚರಿಸಿದ್ದಳು. ‘ಹುಡುಗಿ ನೀನೇದರೂ ಅತ್ತರೆ ಅವನು ನಿನ್ನನ್ನು ಸಾಯಿಸಿಯೇ ಬಿಡುತ್ತಾನೆ. ಅವನು ಹೇಳಿದಂತೆ ಮಾಡು.’ ಎಂದಿದ್ದಳು. ಅವಳನ್ನು ಲಾಡ್ಜಿಂದ ಕರೆದುಕೊಂಡುಬಂದಿದ್ದವರು ಅವಳನ್ನು ಮೇಡಂ ರಶ್ಮಿಗೆ ಮಾರಿದ್ದರು. ಕೇವಲ ಮೂರು ವಾರಗಳ ಹಿಂದೆ ಮಧು ಅವಳ ಪ್ರಿಯಕರ ಶ್ರವಣನೊಂದಿಗೆ ಹಳ್ಳಿಯಿಂದ ಬೊಂಬಾಯಿಗೆ ಓಡಿ ಬಂದಿದ್ದಳು. ಆ ಲಾಡ್ಜಿನಲ್ಲಿ ಶ್ರವಣನೊಂದಿಗೆ ಕೆಲವು ದಿನಗಳು ತಂಗಿದ್ದಳು. ಒಂದು ದಿನ ಶ್ರವಣ ಹೊರಗೆ ಹೋಗಿದ್ದಾಗ ಯಾರೋ ಇಬ್ಬರು ಬಂದು ಅವಳನ್ನು ಎತ್ತಿಕೊಂಡು ಬಂದಿದ್ದರು. ಶ್ರವಣನೇ ಅವಳನ್ನು ಒಂದು ಸಾವಿರ ರೂಗಳಿಗೆ ಮಾರಿದ್ದನೆಂದು ಅವಳಿಗಿನ್ನೂ ಗೊತ್ತಿರಲಿಲ್ಲ.

ಮರುಕ್ಷಣದಲ್ಲೇ ಜಗನ್ ಸೇಠ್ ಬೆತ್ತಲಾಗಿ ಅವಳ ಪಕ್ಕದಲ್ಲಿ ಕುಳಿತುಕೊಂಡ. ಅವನು ಜೋರಾಗಿ ಉಸಿರಾಡುತ್ತಿದ್ದ. ಅವನ ಶ್ವಾಸದಲ್ಲಿ ಮದ್ಯ, ಸಿಗರೇಟು ಮತ್ತು ಪಾನ್ಬೀಡಾ ಮಿಶ್ರಣದ ವಿಚಿತ್ರ ವಾಸನೆ ಹೊರಹೊಮ್ಮುತ್ತಿತ್ತು. ಉಸಿರುಕಟ್ಟಿದಂತಾಗಿ ಮಧು ಮುಖ ಪಕ್ಕಕ್ಕೆ ತಿರುಗಿಸಿದಳು. ಕೆಲವು ಸಮಯ ಅಲ್ಲಿ ಮೌನ ನೆಲೆಸಿತು. ನಂತರ ಸೇಠ್ ಅವಳ ಕೈ ಹಿಡಿದು, ‘ನನ್ನ ಕಡೆಗೆ ತಿರುಗು’ ಎಂದ.

ಮಧು ಪ್ರತಿಕ್ರಿಯಿಸಲಿಲ್ಲ. ಅವನೇ ಅವಳ ಗಲ್ಲವನ್ನು ಒರಟಾಗಿ ಹಿಡಿದು ಅವನೆಡೆಗೆ ತಿರುಗಿಸಿದ. ಅವನ ಬೊಜ್ಜು ತುಂಬಿದ ದೇಹ ಮತ್ತು ಡೊಳ್ಳೊಟ್ಟೆಯನ್ನು ನೋಡಿ ಅವಳಿಗೆ ವಾಕರಿಕೆ ಬಂದಂತಾಯಿತು. ಇವನಿಗೆ ಸ್ವಲ್ಪವೂ ನಾಚಿಕೆ ಇಲ್ಲವಲ್ಲವೆಂದುಕೊಂಡು ಅವಳೇ ತಲೆ ತಗ್ಗಿಸಿದಳು.
ಅವಳನ್ನು ಮಂಚದ ಮೇಲೆ ಕೆಡವಿ ಸೇಠ್ ಅವಳನ್ನು ವಿವಸ್ತ್ರಗೊಳಿಸಿದ. ಅಸಹಾಯಕತೆಯಿಂದ ಒದ್ದಾಡಿದರೂ ಸೇಠ್ ಅವಳ ಮೇಲೆ ದೊಡ್ಡ ಬಂಡೆಯಂತೆ ಏರಿದ. ಅವನು ಮನುಷ್ಯನಾಗಿರಲಿಲ್ಲ. ಅವನು ಮುಗಿಸಿದಾಗ ಅವಳು ಜರ್ಝರಿತಳಾಗಿದ್ದಳು. ಅವಳ ತಲೆಯಲ್ಲಿ ಒಂದೇ ವಿಚಾರ ಹೊಳೆಯುತ್ತಿತ್ತು: ಆತ್ಮಹತ್ಯೆ.
ಮಧು, ಜಗನ್ ಸೇಠಿಗೆ ಸಹಕರಿಸಲಿಲ್ಲವೆಂದು ತಿಳಿದಾಗ ರಶ್ಮಿ ಮೇಡಂ ಕೆಂಡಮಂಡಲವಾದಳು. ಅವಳೂ ಅವಳ ಗಂಡನೂ ಸೇರಿ ಮೈಮೇಲೆ ಬಾಸುಂಡೆಗಳು ಏಳುವಂತೆ ಅವಳನ್ನು ಹೊಡೆದರು. ಶ್ರವಣ ಅವಳನ್ನು ಮಾರಿದ್ದಾನೆಂದು ಅವರಿಂದ ತಿಳಿದಾಗ ಅವಳಿಗೆ ದೊಡ್ಡ ಅಘಾತವಾಯಿತು. ಆದರೂ, ಅವಳ ಕಣ್ಣುಗಳಿಂದ ಒಂದು ಹನಿಯೂ ಕಣ್ಣೀರು ಬರಲಿಲ್ಲ.

ಅವಳು ಊಟ, ನೀರು ತ್ಯಜಿಸಿದಳು. ಮೌನವ್ರತ ಆಚರಿಸುತ್ತಿರುವವಳಂತೆ ಮಾತನಾಡುವುದನ್ನೂ ನಿಲ್ಲಿಸಿದಳು. ಒಂದು ಕಲ್ಲಿನ ಮೂರ್ತಿಯಂತೆ ಸುಮ್ಮನೇ ಕುಳಿತು ಬಿಟ್ಟಳು. ಆದರೂ ರಶ್ಮಿ ಮೇಡಂ ಬಿಡಲಿಲ್ಲ. ಒಬ್ಬ ಗಿರಾಕಿಯನ್ನು ಅವಳ ಬಳಿಗೆ ಕಳುಹಿಸಿದಳು. ಅವನು ಬಂದಂತೆ ವಾಪಸ್ಸು ಬಂದು, ‘ನನ್ನ ದುಡ್ಡು ವಾಪಸ್ಸು ಕೊಡಮ್ಮ. ನನಗೆ ‘ಅಸಲಿ’ ಹೆಣ್ಣು ಬೇಕು. ಗೊಂಬೆಯಲ್ಲ!’ ಎಂದ. ಇವನೇನಾದರೂ ಅಪಪ್ರಚಾರ ಮಾಡಿದರೆ ದಂಧೆ ಎಲ್ಲಿ ಹಾಳಾಗುವುದೋ ಎಂದು ಹೆದರಿದಳು ರಶ್ಮಿ ಮೇಡಂ. ಈ ಪರಿಸರಕ್ಕೆ ಕೆಲವು ದಿನ ಒಗ್ಗಿಕೊಂಡರೆ ತಾನಾಗಿಯೇ ದಾರಿಗೆ ಬರುತ್ತಾಳೆಂದು ತರ್ಕಿಸಿ ಕೆಲವು ದಿನ ಸುಮ್ಮನಿರುವುದೆಂದು ನಿರ್ಧರಿಸಿದಳು.

ಒಂದು ವಾರ ಕಳೆದರೂ ಮಧು ದಾರಿಗೆ ಬರುವ ಸೂಚನೆಗಳು ಕಾಣಲಿಲ್ಲ. ಅವಳ ಮುಂದೆ ಎರಡೇ ದಾರಿಗಳಿದ್ದವು. ಒಂದು ಅವಳಿಗೆ ಮತ್ತೆ ತಿಳಿ ಹೇಳುವುದು. ಎರಡು, ಅವಳನ್ನು ಹೊರಕ್ಕೆ ಹಾಕುವುದು. ಎರಡನೆಯ ದಾರಿಯೇ ಸೂಕ್ತವೆಂದೆನಿಸಿದರೂ, ಪೋಲಿಸು ರಗಳೆಗಳಾಗುವ ಸಂಭವವಿತ್ತು. ಆ ಕ್ಷಣದಲ್ಲಿ ಅವಳಿಗೆ ಗಂಗೂ ಬಾಯಿಯ ನೆನಪಾಯಿತು. ಈ ಸಮಸ್ಯೆಯನ್ನು ಯಾರಾದರೂ ಪರಿಹರಿಸುವವರಿದ್ದರೆ ಅದು ಗಂಗು ಬಾಯಿಯೇ ಆಗಿದ್ದಳು.
ಕಾಮಾಟಿಪುರದ ಜಗತ್ತಿನಲ್ಲಿ ಗಂಗೂ ಬಾಯಿ ‘ಮೇಡಮ್ಮಂದಿರ ಮೇಡಂ’ ಎಂದು ಹೆಸರಾಗಿದ್ದಳು. ಅವಳು ಬಹಳಷ್ಟು ವೇಶ್ಯಾಗೃಹಗಳ ಮಾಲಕಿಯಾಗಿದ್ದಳು ಮಾತ್ರವಲ್ಲದೆ ದಂಧೆ ಮಾಡುವ ಹುಡುಗಿಯರೂ ಕೂಡ ಅವಳನ್ನು ಗೌರವಿಸುತ್ತಿದ್ದರು. ಮಧು ದಂಧೆಗೆ ಒಗ್ಗಿಕೊಳ್ಳುವಂತೆ ಕಾಣಿಸದಿದ್ದಾಗ ರಶ್ಮಿ ಮೇಡಂ ಗಂಗೂ ಬಾಯಿಯ ಸಲಹೆ ಪಡೆಯಲು ನಿಶ್ಚಯಿಸಿದಳು. ಗಂಗೂ ಬಾಯಿಗೆ ಇಂತ ಸಮಸ್ಯೆಗಳೇನೂ ಹೊಸತಾಗಿರಲಿಲ್ಲ.

ಐದು ಅಡಿ ಎತ್ತರದ ಶುಭ್ರ ಶ್ವೇತವಸ್ತ್ರಧಾರಿಯಾದ ಗಂಗೂ ಬಾಯಿ ಕಾರಿನಿಂದ ಇಳಿದು ಮೆಟ್ಟಿಲುಗಳನ್ನು ಹತ್ತಿ ಮಧುವಿನ ರೂಮಿನ ಕಡೆಗೆ ಹೋದಳು. ಗಿರಾಕಿಗಳನ್ನು ಬರಮಾಡಿಕೊಳ್ಳಲು ಕಾದು ನಿಂತಿದ್ದ ಹುಡುಗಿಯರು ಅವಳನ್ನು ಕಾಣುತ್ತಲೇ ತಲೆ ಬಗ್ಗಿಸಿದರು.
ಮಧುವಿನ ಕೋಣೆಯನ್ನು ಪ್ರವೇಶಿಸುತ್ತಿದ್ದಂತೆ ಗಂಗೂ ಬಾಯಿ ಕದವನ್ನು ಮುಚ್ಚಿ ಅಗಳಿಯನ್ನು ಹಾಕಿದಳು. ಆ ಪುಟ್ಟ ಕೋಣೆಯಲ್ಲಿ ಅವಳಿಗೆಂದೇ ಒಂದು ಕುರ್ಚಿಯನ್ನು ಹಾಕಲಾಗಿತ್ತು. ಮಂಚದ ಒಂದು ಮೂಲೆಯಲ್ಲಿ ಮಧು ಒಂದು ಕಲ್ಲಿನ ಮೂರ್ತಿಯಂತೆ ಕುಳಿತುಕೊಂಡಿದ್ದಳು. ಗಂಗೂ ಬಾಯಿ ಕುರ್ಚಿಯ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಅವಳು ಹೋಗಿ ಮಧುವಿನ ಪಕ್ಕದಲ್ಲಿ ಕುಳಿತುಕೊಂಡಳು.

‘ನಿನ್ನ ಹೆಸರೇನು ಮಗಳೆ?’ ಗಂಗೂ ಬಾಯಿ ಮೃದುವಾಗಿ ಕೇಳಿದಳು.
ಹುಡುಗಿ ಉತ್ತರಿಸುವುದಿರಲಿ, ಬಗ್ಗಿಸಿದ್ದ ತಲೆಯನ್ನೂ ಮೇಲೆತ್ತಲಿಲ್ಲ. ಅವಳ ಮುಖವನ್ನು ಬೊಗಸೆಯಲ್ಲಿ ಹಿಡಿದು ತನ್ನ ಕಡೆಗೆ ತಿರುಗಿಸಿದಳು ಗಂಗೂ ಬಾಯಿ. ಹುಡುಗಿಯ ಕಣ್ಣುಗಳು ಅತ್ತು ಅತ್ತು ಕೆಂಪಗಾಗಿ ಊದಿಕೊಂಡಿದ್ದವು. ಗಂಗೂ ಬಾಯಿ ತನ್ನ ಸೆರಗಿನ ಅಂಚನ್ನು ಪಕ್ಕದಲ್ಲೇ ಇದ್ದ ಹೂಜಿಯ ನೀರಿನಿಂದ ಒದ್ದೆ ಮಾಡಿ ಹುಡುಗಿಯ ಮುಖವನ್ನು ಕಕ್ಕುಲಾತಿಯಿಂದ ಒರೆಸಿದಳು. ಸ್ವಲ್ಪ ಹೊತ್ತಿನಲ್ಲೇ ಹುಡುಗಿ ಕರಗಿದಳು. ಗಂಗೂಬಾಯಿಯನ್ನು ಬಲವಾಗಿ ತಬ್ಬಿಕೊಂಡು ರೋಧಿಸತೊಡಗಿದಳು.
‘ಅಮ್ಮಾ, ದಯವಿಟ್ಟು ನನ್ನನ್ನು ಇಲ್ಲಿಂದ ಬಿಡಿಸಿ. ನಾನಿಲ್ಲಿ ಸತ್ತೇ ಹೋಗುತ್ತೇನೆ.’ ಎಂದಳು ಬಿಕ್ಕುತ್ತಾ.
‘ಅಳುವವರನ್ನು ನಾನು ಇಷ್ಟಪಡುವುದಿಲ್ಲ. ನಾನು ನಿನಗೆ ಸಹಾಯ ಮಾಡಲು ಇಲ್ಲಿಗೆ ಬಂದಿದ್ದೇನೆ. ಅಳುವುದನ್ನು ನಿಲ್ಲಿಸಿ ಮಾತನಾಡು.’ ಎಂದಳು ಗಂಗೂಬಾಯಿ.
ಹುಡುಗಿ ಅಳುವುದನ್ನು ನಿಲ್ಲಿಸಿದಳು.
‘ನಿನ್ನ ಹೆಸರೇನು?’
‘ಮಧು..’
‘ಮಗಳೇ, ನೀನು ಉಪವಾಸವಿದ್ದು ಸಾಯಬೇಕೆಂದುಕೊಂಡಿದ್ದೀಯೇನು?’
‘ಅಮ್ಮಾ, ನಾನು ಸತ್ತರೂ ಪರವಾಯಿಲ್ಲ. ಇಲ್ಲಿ ಇರಲಾರೆ.’
‘ನೀನಿಲ್ಲಿ ಬಂದದ್ದಾದರೂ ಹೇಗಮ್ಮ?’

‘ಅವನು.. ಅವನು.. ಶ್ರ..ವಣ!’ ಅವಳು ತೊದಲಿದಳು. ಶ್ರವಣನ ನೆನಪು ಮರುಕಳಿಸಿದಂತೆ ಅವನು ಮಾಡಿದ್ದ ಮೋಸ ನೆನೆದು ಮತ್ತೊಮ್ಮೆ ಅಳಲು ಶುರುವಿಟ್ಟುಕೊಂಡಳು. ಮುಂದುವರೆಸಿ, ‘ನಾನು ಶ್ರವಣನೊಟ್ಟಿಗೆ ರತ್ನಗಿರಿಯಿಂದ ಮುಂಬೈಗೆ ಓಡಿಬಂದೆ. ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಮದುವೆಯಾಗುತ್ತೇನೆಂದು ಅವನು ಮಾತುಕೊಟ್ಟಿದ್ದ… ಅವನು ನನಗೆ ಮಾರಿದ್ದಾನೆಂದು ಈಗ ಗೊತ್ತಾಯಿತು. ನನಗೆ ಮನೆಗೆ ವಾಪಸ್ಸು ಹೋಗಬೇಕು.
ಗಂಗೂಬಾಯಿ ಅವಳ ಕತೆ ಕೇಳಿ ಮೂಕಿಯಾದಳು. ಮಧು ಹೇಳಿದ ಕತೆ ಕೇಳಿ ಅವಳಿಗೂ ಗತಕಾಲದ ನೆನಪುಗಳು ಮರುಕಳಿಸಿದವು. ಅವಳಿಗೆ ಆಗಷ್ಟೇ ಹದಿನಾರರ ಪ್ರಾಯ…

.. ಗಂಗಾ ಹರ್ಜೀವನ್ದಾಸ್ ಕತಿಯಾವಾಡಿ, ಗುಜ್ರಾತಿನ ಕತಿಯಾವಾಡಿ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದಳು. ಅವಳ ಮನೆತನ ಕತಿಯಾವಾಡಿ ರಾಜಮನೆತನದ ಸಂಬಂಧಿಯಾಗಿದ್ದು ಅವಳ ತಂದೆಯ ಕುಟುಂಬ ವಕೀಲರು ಮತ್ತು ಶಿಕ್ಷಣತಜ್ಞರಿಂದ ಕೂಡಿತ್ತು. ಅವಳ ತಂದೆ ಮತ್ತು ಸೋದರರು ಸಂಪ್ರದಾಯಸ್ತರಾಗಿದ್ದರು. 40 ರ ದಶಕದಲ್ಲಿ ಮನೆಯ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಪದ್ದತಿ ಇರಲಿಲ್ಲವಾದರೂ ಅವಳಿಗೆ ಶಾಲೆಗೆ ಕಳುಹಿಸಿದ್ದರು. ಹರೆಯಕ್ಕೆ ಕಾಲಿಟ್ಟ ಗಂಗೂ, ಶಿಕ್ಷಣದ ಜತೆಯಲ್ಲಿ ಬೇರೆ ಅಭಿರುಚಿಗಳನ್ನೂ ಬೆಳೆಸಿಕೊಂಡಿದ್ದಳು. ಅವಳು ಹಿಂದಿ ಚಲನಚಿತ್ರಳಿಗೆ ಮನಸೋತಿದ್ದಳು. ಅವಳ ತಲೆಯಲ್ಲಿ ಹಿಂದಿ ಸಿನೆಮಾಗಳು, ತಾರೆಯರು ಮತ್ತು ಬೊಂಬಾಯಿಯಷ್ಟೇ ತುಂಬಿತ್ತು. ಮುಂಬಯಿಗೆ ಹೋಗಿ ಬಂದಿದ್ದ ಅವಳ ಸ್ನೇಹಿತೆಯರು ಉಪ್ಪುಖಾರ ಸೇರಿಸಿ ಮುಂಬಯಿ ಎಂಬ ಸ್ವರ್ಗವನ್ನು ವರ್ಣಿಸುತ್ತಿದ್ದಾಗ ಗಂಗಾಳ ಮನಸ್ಸು ಕತಿಯಾವಾಡಿ ಬಿಟ್ಟು ಮುಂಬಯಿ ಅಗಸದಲ್ಲಿ ಹಾರಾಡುತ್ತಿತ್ತು. ಮುಂಬಯಿಗೆ ಹೋಗಲು ಅವಳು ಚಡಪಡಿಸುತ್ತಿದ್ದಳು.
ಇಪ್ಪತ್ತೆಂಟು ವರ್ಷದ ರಾಮ್ನಿಕ್ಲಾಲನನ್ನು ಅವಳ ತಂದೆ ಲೆಕ್ಕ ಪತ್ರಗಳ ಉಸ್ತುವಾರಿಗೆಂದು ನೇಮಿಸಿಕೊಂಡಂದಿನಿಂದ ಅವಳ ಸುಪ್ತ ಆಸೆ ಗರಿಗೆದರತೊಡಗಿತು.

ರಾಮ್ನಿಕ್ಲಾಲ್ ಕೆಲವು ಸಮಯ ಮುಂಬಯಿಯಲ್ಲಿ ಇದ್ದುದ್ದರಿಂದ ಮತ್ತು ಗಂಗಾಳ ಸುಪ್ತ ಆಸೆ ಅರಿತ ಅವನು ಅವಳನ್ನು ಮರುಳು ಮಾಡಿ ತನ್ನ ಜಾಲಕ್ಕೆ ಬೀಳಿಸಿಕೊಳ್ಳುವಲ್ಲಿ ಸಫಲಗಿದ್ದ. ಅವರ ಮಧ್ಯೆ ಗುಪ್ತ ಸಲುಗೆ ಬೆಳೆಯಿತು. ಅವನಿಗೆ ಬಂಗಲೆಯ ಔಟ್ಹೌಸಿನಲ್ಲಿ ತಂಗಲು ಜಾಗ ಕೊಟ್ಟಿದ್ದರು. ಅವನಿಗೆ ತಿಂಡಿ, ಕಾಫಿ, ಊಟ ಕೊಡುವ ನೆಪದಲ್ಲಿ ಗಂಗಾ ಅವನನ್ನು ದಿನವೂ ಕಾಣತೊಡಗಿದಳು. ಶುರುವಿನಲ್ಲಿ ಅವರಿಬ್ಬರ ಮಾತುಕತೆ ಹಿಂದಿ ಸಿನೆಮಾಗಳು, ಚಿತ್ರ ನಟ-ನಟಿಯರು ಮತ್ತು ಗಂಗಾಳ ನಟಿಯಾಗುವ ಸುಪ್ತ ಆಸೆಯ ಸುತ್ತ ಗಿರಕಿಹೊಡೆಯುತ್ತಿದ್ದು ದಿನಕಳೆದಂತೆ ಅವರ ಮಧ್ಯೆ ಅನುರಾಗ ಬೆಳೆಯಿತು. ಅವರು ಹೊರಗೆ ಕದ್ದುಮುಚ್ಚಿ ಭೇಟಿಯಾಗತೊಡಗಿದರು. ತನಗೆ ಹಿಂದಿ ಸಿನೆಮಾರಂಗದಲ್ಲಿ ಬಹಳಷ್ಟು ಜನರ ಪರಿಚಯವಿರುವುದರಿಂದ ಅವಳಿಗೊಂದು ಅವಕಾಶ ಮಾಡಿಕೊಡಿಸುವುದೇನು ತನಗೆ ದೊಡ್ಡ ಕೆಲಸವಲ್ಲವೆಂದು ಅವನು ಗಂಗಾಳನ್ನು ನಂಬಿಸಿದ್ದ. ಹಾಗೆಯೇ ಅವಳೊಟ್ಟಿಗೆ ಮದುವೆಯ ಪ್ರಸ್ತಾಪವನ್ನೂ ಇಟ್ಟ.

ಅವಳಿಗೆ ಇಲ್ಲವೆನ್ನಲು ಯಾವುದೇ ಕಾರಣಗಳಿರಲಿಲ್ಲ. ತಾನು ರಾಮ್ನಿಕ್ಲಾಲನನ್ನು ಮದುವೆಯಾಗುವುದು ಮತ್ತು ಮುಂಬಯಿಗೆ ಹೋಗಿ ಚಿತ್ರರಂಗದಲ್ಲಿ ಕೆಲಸ ಮಾಡುವುದು ಮನೆಯವರು ಖಂಡಿತ ಒಪ್ಪುವುದಿಲ್ಲವೆಂದು ಅವಳಿಗೆ ಗೊತ್ತಿತ್ತು. ಯಾರಿಗೂ ತಿಳಿಸದೆ ಮುಂಬಯಿಗೆ ಓಡಿಹೋಗುವ ಪ್ರಸ್ತಾಪವನ್ನು ರಾಮ್ನಿಕ್ಲಾಲ್ ಅವಳ ಮುಂದಿಟ್ಟ. ಮದುವೆಯಾಗದೇ ಒಬ್ಬ ಪುರುಷನೊಂದಿಗೆ ಹೋಗುವುದು ಅವಳಿಗೆ ಸರಿಕಾಣಲಿಲ್ಲ. ಓಡಿಹೋಗುವ ಹಿಂದಿನ ದಿನ ಅವರು ಕತಿಯಾವಾಡಿಯ ಒಂದು ಸಣ್ಣ ಮಂದಿರದಲ್ಲಿ ಮದುವೆಯಾದರು. ಕೆಲವು ಬಟ್ಟೆಗಳು, ಹಣ ಮತ್ತು ತಾಯಿಯ ಒಡವೆಗಳೊಂದಿಗೆ ಗಂಗಾ ರಾಮ್ನಿಕ್ಲಾಲನೊಂದಿಗೆ ಅಹ್ಮದಬಾದಿನಿಂದ ಮುಂಬಯಿಗೆ ಹೋಗುವ ರೈಲನ್ನು ಹತ್ತಿದಳು. ಈ ವಿಚಾರ ಗಂಗೂಬಾಯಿ ತನ್ನ ಆಪ್ತಸ್ನೇಹಿತೆಯರಿಗೂ ತಿಳಿಸಿರಲಿಲ್ಲ. ಎಲ್ಲವೂ, ಯಾರಿಗೂ ಸುಳಿವು ಸಿಗದಂತೆ ರಹಸ್ಯವಾಗಿ ನಡೆದಿತ್ತು. ಮತ್ತೆಂದೂ ತನಗೆ ಮನೆಯ ಬಾಗಿಲು ತೆರೆಯಲಾರದೆಂದು ಗಂಗೂಬಾಯಿಗೆ ಚೆನ್ನಾಗಿ ಮನವರಿಕೆಯಾಗಿತ್ತು. ಎರಡು ದಿನಗಳ ನಂತರ ಗಂಗಾ ಮತ್ತು ರಾಮ್ನಿಕ್ಲಾಲ್ ಬಾಂಬೆ ಸೆಂಟ್ರಲ್ ನಿಲ್ದಾನದಲ್ಲಿ ಇಳಿದರು. ಸ್ನೇಹಿತೆಯರು ಅವಳಿಗೆ ಬಾಂಬೆ ಸೆಂಟ್ರಲ್ ರೈಲು ನಿಲ್ದಾಣದ ಬಗ್ಗೆ ಹೇಳಿದ್ದರಾದರೂ, ಅಷ್ಟೊಂದು ವಿಶಾಲವಾದ ರೈಲು ನಿಲ್ದಾಣವನ್ನು ಅವಳು ನೋಡಿರಲಿಲ್ಲ. ತನ್ನ ದಿಗ್ಭ್ರಮೆಯನ್ನು ಅವರಿಗೆ ತಿಳಿಸಲು ಸಾಧ್ಯವಾಗದಿರುವ ಬಗ್ಗೆ ಅವಳಿಗೆ ಖೇದವೆನಿಸಿತು. ‘ನೀನೇನೂ ಬೇಜಾರು ಮಾಡ್ಕೊಬೇಡ ಚಿನ್ನ. ನೀನು ಹಿಂದಿ ಚಿತ್ರರಂಗದಲ್ಲಿ ಮೆರೆಯುವ ದಿನಗಳು ದೂರವಿಲ್ಲ. ನಿನ್ನ ಸ್ನೇಹಿತೆಯರು ಖಂಡಿತಾ ನಿನ್ನನ್ನು ನೋಡಲು ಓಡಿಬರುತ್ತಾರೆ.’ ಎಂದು ರಾಮ್ನಿಕ್ಲಾಲ್ ಅವಳನ್ನು ಸಮಾಧಾನಪಡಿಸಿದ.

ರಾಮ್ನಿಕ್ ಒಂದು ಲಾಡ್ಜಿನಲ್ಲಿ ರೂಮನ್ನು ಹಿಡಿದ. ಅಲ್ಲೇ ಅವರ ಪ್ರಥಮ ರಾತ್ರಿ ಜರುಗಿತು. ಮುಂದಿನ ಕೆಲವು ದಿನಗಳು ಬೊಂಬಾಯಿ ಸುತ್ತುವುದರಲ್ಲಿ ಕಳೆದವು. ತಂದೆಯ ಲಾಕರಿನಿಂದ ಕದ್ದ ಹಣ ಉಪಯೋಗಕ್ಕೆ ಬಂತು. ಅವಳು ಬೇರೆಯದೇ ಲೋಕದಲ್ಲಿದ್ದಳು. ಕತಿಯಾವಾಡಿ ಅವಳ ಸ್ಮøತಿಯಿಂದ ಮಾಸಿಹೋಗಿತ್ತು.
ಕದ್ದು ತಂದ ಹಣ ಕರಗುತ್ತಿತ್ತು. ಲಾಡ್ಜಲ್ಲಿ ಉಳಿದು ಹೋಟಲಿನಲ್ಲಿ ಊಟಮಾಡುವುದು ದುಬಾರಿಯಾಗುತ್ತಿತ್ತು. ಒಂದು ವಾರದ ನಂತರ ರಾಮ್ನಿಕ್ ಆದಷ್ಟು ಬೇಗ ತಾನೊಂದು ಬಾಡಿಗೆ ಮನೆಯನ್ನು ಹುಡುಕಿ ಗೊತ್ತುಮಾಡುವವರೆಗೆ ತನ್ನ ಚಿಕ್ಕಮ್ಮಳ ಮನೆಯಲ್ಲಿ ಅವಳಿಗೆ ಬಿಡುತ್ತೇನೆ ಎಂದು ಒಪ್ಪಿಸಿದ.
ಬಾಂಬೆಯಲ್ಲಿ ತನ್ನವರು ಯಾರೂ ಇಲ್ಲವೆಂದು ಹೇಳುತ್ತಿದ್ದ ರಾಮ್ನಿಕ್ ಈಗ ತನ್ನನ್ನು ಚಿಕ್ಕಮ್ಮಳ ಮನೆಯಲ್ಲಿ ಬಿಡುತ್ತೇನೆ ಎಂದಾಗ ಗಂಗಾಳಿಗೆ ಆಶ್ಚರ್ಯವಾಯಿತು. ಆದರೂ ಅವಳು ಏನೂ ಹೇಳಲಿಲ್ಲ. ರಾಮ್ನಿಕನ ಚಿಕ್ಕಮ್ಮ ಅವಳನ್ನು ಕರೆದುಕೊಂಡು ಹೋಗಲು ಲಾಡ್ಜಿಗೇ ಬಂದಳು. ಮೊದಲನೋಟದಲ್ಲೇ ಗಂಗಾಳಿಗೆ ರಾಮ್ನಿಕನ ಶೀಲಾ ಚಿಕ್ಕಮ್ಮ ಪಸಂದಾಗಲಿಲ್ಲ. ಗಾಢ ವರ್ಣದ ಸೀರೆಯುಟ್ಟ ಅವಳು ಇಪ್ಪತ್ನಾಲ್ಕು ಗಂಟೆಗಳೂ ತಂಬಾಕು ಜಗಿಯುತ್ತಿದ್ದಳು. ರಾಮ್ನಿಕ್ ಒಂದು ಟ್ಯಾಕ್ಸಿಯನ್ನು ಕರೆಸಿ ಅವರನ್ನು ಕುಳ್ಳಿರಿಸಿ ತಾನು ನಾಳೆ ಬಂದು ಅವಳನ್ನು ಕಾಣುತ್ತೇನೆಂದ.

ಟ್ಯಾಕ್ಸಿ, ಶೀಲಾ ಆಂಟಿ ಮನೆಯ ಗಲ್ಲಿಯನ್ನು ಪ್ರವೇಶಿಸಿದಾಗ ಗಂಗಾ ಹೌಹಾರಿದಳು. ಬೀದಿಯ ಇಕ್ಕೆಲಗಳಲ್ಲೂ ಕಟ್ಟಡಗಳ ಉದ್ದಕ್ಕೂ ಅರೆಬರೆ ಉಡುಪು ತೊಟ್ಟು ತುಟಿಗಳಿಗೆ ಗಾಢವಾದ ಕೆಂಪು ಬಣ್ಣ ಸವರಿಕೊಂಡ ಹುಡುಗಿಯರು ಪುಟ್ಟ ಪುಟ್ಟ ಬಾಲ್ಕನಿಗಳಲ್ಲಿ ಪಂಜರದೊಳಗಿಟ್ಟ ಹಕ್ಕಿಗಳಂತೆ ರಸ್ತೆಯ ಕಡೆ ದೃಷ್ಟಿ ನೆಟ್ಟು ನಿಂತಿದ್ದರು. ಅವಳು ಕಸಿವಿಸಿಗೊಂಡಿದ್ದನ್ನು ನೋಡಿದ ಶೀಲಾ ಆಂಟಿ, ‘ಈ ಬಾಂಬೇ ಹುಡುಗಿಯರೇ ಹೀಗೆ..’ ಎಂದು ಸಮಜಾಯಿಷಿ ನೀಡಿದಳು.
‘ಈ ಜಾಗಕ್ಕೆ ಏನೆನ್ನುತ್ತಾರೆ?’ ಗಂಗಾ ಕೇಳಿದಳು.
‘ಕಾಮಾಟಿಪುರ. ಎಂದಾದರೂ ಕೇಳಿದಿಯೇನು?’
‘ಇಲ್ಲ.’ ಎಂದಳು ಗಂಗಾ.
‘ನನ್ನ ಮನೆ ಇದೇ ಗಲ್ಲಿಯಲ್ಲರುವುದು. ನಿನಗೂ ಕೆಲವು ಸಮಯ ಇಲ್ಲೇ ಇರಬೇಕಾಗುವುದು.’
‘ಇಲ್ಲ, ಇಲ್ಲ! ನಾಳೆ ರಾಮ್ನಿಕ್ ಬಂದು ನನ್ನನ್ನು ಕರೆದೊಯ್ಯುತ್ತಾನೆ.’ ಅವಳು ತಕ್ಷಣ ಹೇಳಿದಳು.
ಶೀಲಾ ಆಂಟಿ ಏನೂ ಉತ್ತರಿಸಲಿಲ್ಲ. ಅವಳು ಇಳಿದಾಗ ಗಂಗಾ ಕೂಡ ಇಳಿದಳು. ಹಲವು ಜೋಡಿ ಕಣ್ಣುಗಳು ಅವಳನ್ನು ಕುತೂಹಲದಿಂದ ಗಮನಿಸುತ್ತಿದ್ದವು. ಅವರೆಲ್ಲರೂ ಶೀಲಾ ಆಂಟಿಗೆ ಪರಿಚಿತರಂತೆ ಅವಳಿಗೆ ಭಾಸವಾಯಿತು. ಅವಳು ಶಾಂತಳಾಗಿರುವುದಕ್ಕೆ ಪ್ರಯತ್ನಿಸಿದಳಾದರೂ ಜತೆಯಲ್ಲಿ ರಾಮ್ನಿಕ್ ಇಲ್ಲದಿರುವುದು ಅವಳಿಗೆ ಅಪಧೈರ್ಯವುಂಟುಮಾಡಿತ್ತು.
ಅವಳಿಗೊಂದು ಪುಟ್ಟ ರೂಮನ್ನು ತೊರಿಸುತ್ತಾ ಶೀಲಾ ಆಂಟಿ ಅವಳ ಸಾಮಾನುಗಳನ್ನು ಜೋಡಿಸಿ ಫ್ರೆಶ್ಶಾಗಲು ಹೇಳಿದಳು.
‘ಸಾಮಾನುಗಳನ್ನು ಹೊರತೆಗೆದು ಜೋಡಿಸುವ ವೃಥಾ ತೊಂದರೆ ಯಾಕೆ? ನಾಳೆ ನನ್ನನ್ನು ಕರೆದೊಯ್ಯಲು ಹೇಗೂ ರಾಮ್ನಿಕ್ ಬರುತ್ತಾನಲ್ಲ?’ ಎಂದಳು ಗಂಗಾ.
ಶೀಲಾ ಆಂಟಿ ಬಹಳ ಹೊತ್ತು ಅವಳನ್ನೇ ದಿಟ್ಟಿಸಿ ನೋಡುತ್ತಾ ಹೀಗೆಂದಳು: ‘ನಿನ್ನ ಬಳಿ ಮುಚ್ಚುಮರೆ ಏಕೆ ಹುಡುಗಿ? ನಾನು ರಾಮ್ನಿಕನ ಆಂಟಿಯಲ್ಲ. ನಾನಿಲ್ಲಿ ವೇಶ್ಯಾಗೃಹವನ್ನು ನಡೆಸುತ್ತಿದ್ದೇನೆ.’

ಅವರ ಮಧ್ಯೆ ಒಂದು ದೀರ್ಘ ಮೌನ ನೆಲೆಸಿತು. ಅವಳಿಗೆ ನಿಜಕ್ಕೂ ಅಘಾತವಾಗಿತ್ತು. ರಾಮ್ನಿಕ್ಲಾಲ್ ಅವಳಿಗೆ ವಿಶ್ವಾಸದ್ರೋಹ ಮಾಡಿದ್ದ. ಆದರೂ, ಅವಳಿಗೆ ತನ್ನ ಪರಿಸ್ಥಿತಿಯ ಸಂಪೂರ್ಣ ಅರಿವಾಗಲಿಲ್ಲ.
‘ಹಾಗಾದರೆ ನನ್ನನ್ನೇಕೆ ಇಲ್ಲಿಗೆ ಕರೆದುಕೊಂಡು ಬಂದಿರಿ?’ ಅವಳು ಕೇಳಿದಳು.
‘ರಾಮ್ನಿಕ್ ನಿನ್ನನ್ನು ನನಗೆ ಐನೂರು ರುಪಾಯಿಗಳಿಗೆ ಮಾರಿ ಕತಿಯಾವಾಡಿಗೆ ಹಿಂದಿರುಗಿದ್ದಾನೆ.’
‘ನೀನು ಸುಳ್ಳು ಹೇಳುತ್ತಿದ್ದೀಯಾ!’ಗಂಗಾ ಚೀರಿದಳು. ಅವನು ಹಾಗೆ ಮಾಡಲು ಸಾಧ್ಯವೇಯಿಲ್ಲ. ಅವನು ಅವಳನ್ನು ಮನಸಾರೆ ಪ್ರೀತಿಸುತ್ತಿದ್ದಾನೆಂದೇ ಅವಳು ನಂಬಿದ್ದಳು.
‘ಹುಡುಗೀ, ನಿನ್ನ ಬಳಿ ಸುಳ್ಳು ಹೇಳಿ ನನಗೇನು ಲಾಭ ಹೇಳು? ನೀನು ಸುಸಂಸ್ಕøತ ಕುಟುಂಬದ ಹುಡುಗಿ ಎಂದು ನಾನು ಊಹಿಸಬಲ್ಲೆ. ಆದರೇನು? ನಿನ್ನ ಗಂಡ ನಿನ್ನನ್ನು ಮಾರಿದ್ದಾನೆ!’
‘ಅವನೇಕೆ ಹಾಗೆ ಮಾಡಿದ?’ ಅವಳು ತನಗೇ ಎಂಬಂತೆ ಕೇಳಿಕೊಂಡಳು.
‘ನನಗೆ ಗೊತ್ತಿಲ್ಲ ಕಣಮ್ಮ. ಈಗ ಕೇಳಿಲ್ಲಿ..’
‘ನಾನು ನಿನ್ನ ಮಾತು ಕೇಳಲು ತಯಾರಿಲ್ಲ..’ ಎನ್ನುತ್ತಾ ಗಂಗಾ ಅಲ್ಲಿಂದ ಹೊರಡಲಣಿಯಾದಳು. ಶೀಲಾ ಆಂಟಿ ಅವಳ ಭುಜವನ್ನು ಹಿಡಿದು ಹಿಂದಕ್ಕೆ ಎಳೆದು ತಂದಳು.

‘ಏಯ್ ಹುಡುಗಿ! ನೀನು ನನ್ನ ಒಳ್ಳೆತನದ ಲಾಭಗಳಿಸಲು ನೋಡುತ್ತಿದ್ದೀಯಾ? ನಾನಿಲ್ಲಿ ದಂಧೆ ನಡೆಸುತ್ತಿದ್ದೇನೆ. ನನ್ನ ಗ್ರಾಹಕರನ್ನು ತೃಪ್ತಿಪಡಿಸುವುದು ನಿನ್ನ ಕೆಲಸ. ಗೊತ್ತಾಯ್ತೇನೆ? ನನಗೆ ಸಿಟ್ಟು ಬರಿಸಬೇಡ.’ ಎಂದು ಕೋಣೆಯ ಹೊರಗಿನ ಚಿಲಕ ಎಳೆದು ಶೀಲಾ ಆಂಟಿ ಹೊರಟು ಹೋದಳು.
ದಿನಗಳುರುಳಿದವು. ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಗಂಗಾಳಿಗೆ ಸಾಧ್ಯವಾಗಲೇಯಿಲ್ಲ. ಅಳುತ್ತಾ ಕೂರುವುದೇ ಅವಳ ದಿನಚರಿಯಾಯಿತು. ಅವಳನ್ನು ತಿದ್ದಲು ಉಪವಾಸ ಕೆಡವಲಾಯಿತು. ದೈಹಿಕ ಹಲ್ಲೆ ನಡೆಸಲಾಯಿತು. ಕತಿಯಾವಾಡಿಗೆ ವಾಪಸ್ಸು ಹೋಗುವ ಹಾದಿಯನ್ನು ಅವಳೇ ಕೈಯಾರೆ ಮುಚ್ಚಿದ್ದಳು. ರಾಮ್ನಿಕ್ಲಾಲನೊಂದಿಗೆ ಓಡಿ ಬಂದು ಅವಳು ಕುಟುಂಬದ ಮಾನವನ್ನು ಹರಾಜು ಹಾಕಿದ್ದಳು. ತಂದೆಯ, ಅಣ್ಣಂದಿರ ಹೆಸರಿಗೆ ಮಸಿ ಬಳಿದಿದ್ದಳು. ಅವರು ಅವಳನ್ನು ಮತ್ತೆ ಸ್ವಾಗತಿಸುವುದು ಸಾಧ್ಯವೇ ಇರಲಿಲ್ಲ. ಅಲ್ಲದೆ ಅವಳ ಬೆನ್ನ ಹಿಂದೆ ಅವಳ ತಂಗಿಯರೂ ಇದ್ದರು. ತಂದೆ ಅವರ ಭವಿಷ್ಯದ ಬಗ್ಗೆಯೂ ಚಿಂತಿಸಬೇಕಾಗಿತ್ತು,
ಕತಿಯಾವಾಡಿಯ ಜನರಿಗೆ ಅವಳು ಕಾಮಾಟಿಪುರದಲ್ಲಿದ್ದಿದ್ದಳೆಂದು ಗೊತ್ತಾದರೆ ಖಂಡಿತವಾಗಿಯೂ ಅವಳ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕುವುದರಲ್ಲಿ ಸಂದೇಹವಿಲ್ಲವೆಂದು ಶೀಲಾ ಆಂಟಿ ಹೆದರಿಸುತ್ತಿದ್ದಳು.

ಇದನ್ನೆಲ್ಲಾ ಯೋಚಿಸುತ್ತಾ ಗಂಗಾ ಮತ್ತೆ ಕತಿಯಾವಾಡಿಗೆ ಹಿಂದಿರಿಗುವ ಯೋಚನೆಗಳನ್ನು ತೊರೆದಳು. ಅವಳ ಮುಂದಿದ್ದ ಮತ್ತೊಂದು ದಾರಿಯೆಂದರೆ ಆತ್ಮಹತ್ಯೆ. ಹಗಲು ರಾತ್ರಿ ಪ್ರತಿಯೊಬ್ಬರ ಕಣ್ಣು ಅವಳ ಮೇಲಿದ್ದರಿಂದ ಅದೂ ಸಾಧ್ಯವಿರಲಿಲ್ಲ. ಎರಡು ವಾರಗಳಷ್ಟು ಕಾಲ ಪ್ರತಿರೋಧ ತೋರಿದ ಗಂಗಾ ಕೊನೆಗೂ ಶೀಲಾ ಆಂಟಿಗೆ ಶರಣಾದಳು. ಹೇಗೂ ಒಬ್ಬ ದುರುಳನಿಗೆ ತನ್ನ ಶೀಲವನ್ನು ಅರ್ಪಿಸಿಯಾಗಿದೆ. ಇನ್ನೇನು ಉಳಿದುಕೊಂಡಿದೆ ಎಂದು ತನಗೆ ತಾನೇ ಸಮಧಾನಪಟ್ಟುಕೊಂಡಳು.
ಅಂದೇ ರಾತ್ರಿ ಗಂಗಾಳ ಮೂಗುತಿ ಕಳಚುವ ಕಾರ್ಯಕ್ರಮ ಜರುಗಿತು. ಅವಳಿನ್ನೂ ಅಪ್ಪಟ ಕುಮಾರಿ ಎಂದು ರಾಮ್ನಿಕ್ಲಾಲ್ ಶೀಲಾ ಆಂಟಿಯನ್ನು ನಂಬಿಸಿದ್ದ. ವೇಶ್ಯಾವೃತ್ತಿಯ ಸಂಪ್ರದಾಯ ಗಂಗಾ ಕೂಡ ಅರಿತಿರಲಿಲ್ಲವಾದ್ದರಿಂದ ಅವಳೂ ಈ ಬಗ್ಗೆ ಏನೂ ಹೇಳಿರಲಿಲ್ಲ.
ಒಳಗಿಂದೊಳಗೆ ಅಸಹ್ಯಪಟ್ಟುಕೊಂಡರೂ, ಗಂಗಾ, ತನ್ನನ್ನು ಅನುಭವಿಸಲು ಬಂದಿದ್ದ ಸೇಠನೊಂದಿಗೆ ಅತ್ತು ಕರೆದು ರಾದ್ಧಾಂತವೆಬ್ಬಿಸಲಿಲ್ಲ. ಇದುವೆ ತನ್ನ ಮುಂದಿನ ವೃತ್ತಿ ಎಂದು ಅವಳಿಗೆ ಅರ್ಥವಾಗಿತ್ತು. ಅವಳೊಂದಿಗೆ ತೃಪ್ತಿಪಟ್ಟ ಸೇಠ್ ಅವಳಿಗೆ ಭಕ್ಷೀಸಷ್ಟೇ ಅಲ್ಲದೆ ತನ್ನ ಉಂಗುರವನ್ನೂ ಬಿಚ್ಚಿ ಕೊಟ್ಟ.
ಹೋಗುವ ಮೊದಲು ಸೇಠ್ ಅವಳ ಹೆಸರೇನೆಂದು ಕೇಳಿದ.
‘ಗಂಗೂ.’ ಅವಳು ಉತ್ತರಿಸಿದಳು. ಅವಳ ಪಾಲಿಗೆ ‘ಗಂಗಾ’ ಸತ್ತು ಹೋಗಿದ್ದಳು!

*****

ಸ್ವಲ್ಪ ಸಮಯದಲ್ಲಿಯೇ ಗಂಗೂ ಕಾಮಾಟಿಪುರದಲ್ಲಿ ಗ್ರಾಹಕರು ತನ್ನನ್ನು ಹುಡುಕಿ ಬರುವಷ್ಟು ಹೆಸರುವಾಸಿಯಾದಳು. ಅವಳು ಎಷ್ಟು ಬೇಗ ಹೊಸ ಪರಿಸರಕ್ಕೆ ಹೊಂದಿಕೊಂಡಳೆಂದರೆ, ಕತಿಯಾವಾಡಿ, ರಾಮ್ನಿಕ್ಲಾಲ್ ಮತ್ತು ತನ್ನ ಹಿಂದಿನ ಜೀವನವನ್ನು ಅಕ್ಷರಶಃ ಮರೆತೇ ಬಿಟ್ಟಳು. ಡೆಲ್ಲಿ, ಹೈದರಬಾದ್ ಮತ್ತು ಕಲ್ಕತ್ತಾದ ಸೇಠುಗಳು ಬಾಂಬೆಗೆ ಬಂದಾಗಲೆಲ್ಲಾ ಅವಳನ್ನೇ ಹುಡುಕಿಕೊಂಡು ಬರತೊಡಗಿದರು. ಅವಳೇನು ಅಂತ ವಿಶೇಷ ಸುಂದರಿಯಾಗಿರಲಿಲ್ಲ. ರೂಪದಲ್ಲಿ ಅವಳಿಗಿಂತ ಸುಂದರಿಯರಾದ ಹುಡುಗಿಯರು ಶೀಲಾ ಆಂಟಿಯ ಮನೆಯಲ್ಲಿದ್ದರು. ಆದರೆ ಗಂಗಾಳಲ್ಲಿ ಗಂಡಸರು ಮತ್ತೆ ಮತ್ತೆ ತನ್ನ ಬಳಿ ಬರುವಂತೆ ಪ್ರೇರೇಪಿಸುವ ಅದ್ಯಾವುದೋ ಆಯಸ್ಕಾಂತೀಯ ಮಾಂತ್ರಿಕತೆಯಿತ್ತು.

ಗಿರಾಕಿಗಳೊಡನೆ ಭಾವನಸ್ತರದಲ್ಲಿ ಒಳಗೊಳ್ಳದೆಯೂ ಅವರ ಜೇಬಿಂದ ಹಣ ಬಿಚ್ಚಿಸುವ ಕಲೆಯನ್ನು ಗಂಗೂ ರೂಡಿಸಿಕೊಂಡಿದ್ದಳು. ಅವಳಿಗೆ ಚಿನ್ನದ ಆಸೆ ವಿಪರೀತವಾಗಿತ್ತು. ಅವಳಿಗೆ ಸಿಕ್ಕ ದುಡ್ಡಿನಿಂದ ಆಗಾಗ ಚಿನ್ನದ ಒಡವೆಗಳನ್ನು ಮಾಡಿಸಿಕೊಳ್ಳುತ್ತಿದ್ದಳು. ಅವಳ ಮತ್ತೊಂದು ಹವ್ಯಾಸ ಹಿಂದಿ ಚಿತ್ರಗಳನ್ನು ನೋಡುವುದು. ಅವಳ ಚಿತ್ರ ನಟಿಯಾಗುವ ಕನಸು ನುಚ್ಚುನೂರಾಗಿತ್ತು. ಆ ಕನಸನ್ನು ಅರಸಿಯೇ ತಾನು ಇಲ್ಲಿಗೆ ಬಂದು ಮುಟ್ಟಿದೆ ಎಂಬ ವಿಷಾದ ಅವಳನ್ನು ಆಗಾಗ ಕಾಡುತ್ತಿತ್ತು. ಗಂಗೂ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿ ಎಂದು ಅರಿತಿದ್ದ ಶೀಲಾ ಆಂಟಿ ಅವಳಿಗೆ ವಿಶೇಷ ಸ್ವಾತಂತ್ರ್ಯವನ್ನು ಕೊಟ್ಟಿದ್ದಳು.
ಅವಳಿಗೀಗ ಇಪ್ಪತ್ತೆಂಟು ವರ್ಷ ಪ್ರಾಯವಾಗಿತ್ತು. ಅವಳನ್ನು ಕೇಳಿಕೊಂಡು ಒಬ್ಬ ಪಠಾಣ ರೌಡಿ ಶೀಲಾ ಆಂಟಿಯ ಮನೆಗೆ ಬಂದ. ಅವನು ಆರಡಿಗಿಂತಲೂ ಎತ್ತರವಿದ್ದು ಕಟ್ಟುಮಸ್ತಾಗಿದ್ದ. ಅವನನ್ನು ನೋಡಿ ಗಾಬರಿಗೊಂಡ ಶೀಲಾ ಆಂಟಿ ಅವನನ್ನು ತಡೆಯಲು ಎಷ್ಟೇ ಪ್ರಯತ್ನಪಟ್ಟರೂ ಅವಳ ಬಾಯಿಂದ ಮಾತುಗಳೇ ಹೊರಡಲಿಲ್ಲ. ಕೊನೆಗೆ, ಗಂಗೂ ಅವನನ್ನು ಹೇಗಾದರೂ ತನ್ನ ಚಾಲಾಕಿನಿಂದ ಸಂಭಾಳಿಸುತ್ತಾಳೆಂದು ಸುಮ್ಮನಾದಳು. ಆದರೆ ಅವಳು ನೆನೆದಂತೆ ಆಗಲೇ ಇಲ್ಲ. ಆ ಪಠಾಣ ಮನುಷ್ಯ ವರ್ಗಕ್ಕೆ ಸೇರಿದವನಾಗಿರಲಿಲ್ಲ. ಅಷ್ಟೊಂದು ಕ್ರೂರತೆ ಗಂಗೂ ಈವರೆಗೆ ಅನುಭವಿಸಿರಲಿಲ್ಲ. ತನ್ನ ಕೆಲಸ ಮುಗಿಯುತ್ತಿದ್ದಂತೆ ಅವನು ಅವಳಿಗೆ ಭಕ್ಷೀಸು ಕೊಡುವುದಿರಲಿ, ಶೀಲಾ ಆಂಟಿಗೂ ದುಡ್ಡು ಕೊಡದೆ ಹೊರಟು ಹೋದ.

ಈ ಘಟನೆಯಿಂದ ಮನೆಯಲ್ಲಿದ್ದ ಹುಡುಗಿಯರೆಲ್ಲರಿಗೂ ಅಘಾತವಾಯಿತು. ತುಂಬಾ ಸಮಯದ ವರೆಗೂ ಅವರ ಬಾಯಿಂದ ಮಾತುಗಳೇ ಹೊರಡಲಿಲ್ಲ. ಅದರೂ ಪೋಲಿಸ್ ಕಂಪ್ಲೇಟ್ ಕೊಡಲು ಶೀಲಾ ಆಂಟಿಗೆ ಧೈರ್ಯ ಬರಲಿಲ್ಲ. ಆ ದಿನಗಳಲ್ಲಿ ಕಾಮಾಟಿಪುರದ ಏರಿಯಾದಲ್ಲಿ ಪಠಾಣ್ ರೌಡಿಗಳದ್ದೇ ರಾಜ್ಯಭಾರವಾಗಿತ್ತು. ಪೋಲಿಸಿಗೆ ತಿಳಿಸಿದರೆ ಪರಿಣಾಮ ಏನಾಗಬಹದೋ ಎಂಬ ಹೆದರಿಕೆಯಿಂದ ಅವರು ಸುಮ್ಮನಾದರು. ಮುಂದಿನ ನಾಲ್ಕು ದಿನಗಳವರೆಗೂ ಗಂಗೂಗೆ ಮೇಲೇಳಲು ಸಾಧ್ಯವಾಗದಂತೆ ಮಾಡಿದ್ದ ಆ ಪಠಾಣ್ ರಾಕ್ಷಸ. ಮುಂದೆ ಎಂದಿಗೂ ಹೀಗಾಗದಂತೆ ನೋಡಿಕೊಳ್ಳುತ್ತೇನೆಂದು ಶೀಲಾ ಆಂಟಿ ಗಂಗೂ ಬಳಿ ಕ್ಷಮೆ ಕೇಳಿದಳು.

ಒಂದು ತಿಂಗಳ ನಂತರ ಆ ರಾಕ್ಷಸ ಪಠಾಣ ಮತ್ತೆ ಬಂದ. ಈ ಭಾರಿ ಅವನು ನಶೆಯಲ್ಲಿದ್ದ. ಅವನನ್ನು ನೋಡುತ್ತಿದ್ದಂತೆ ಶೀಲಾ ಆಂಟಿ ಇಬ್ಬರು ಗಂಡಸರನ್ನು ಕರೆದಳು. ಆ ರಾಕ್ಷಸನ ಮುಂದೆ ಅವರದೇನೂ ನಡೆಯಲಿಲ್ಲ. ಅವನು ಕೆಂಡಾಮಂಡಲವಾದ. ಅವರನ್ನು ಬದಿಗೆ ತಳ್ಳಿ ಅವನು ಗೂಳಿಯಂತೆ ಪೂತ್ಕರಿಸುತ್ತಾ ಗಂಗೂ ರೂಮಿಗೆ ನುಗ್ಗಿದ. ಆ ಹೊತ್ತು ಗಂಗೂ ಬಳಿ ಬೇರೊಬ್ಬ ಗಿರಾಕಿಯಿದ್ದ. ಪಠಾಣ ಅವನನ್ನು ಅನಾಮತ್ತಾಗಿ ಎತ್ತಿ ಬೆತ್ತಲೆ ಹೊರಗೆಸೆದು ಅಗುಳಿ ಹಾಕಿದ. ಶೀಲಾ ಆಂಟಿ ಆತಂಕದಿಂದ ಹೊರಗೆ ಬಡಬಡನೆ ಬಾಗಿಲನ್ನು ಬಡಿಯುತ್ತಿದ್ದಳಾದರೂ ಪಠಾಣ ಕಿಂಚಿತ್ತೂ ವಿಚಲಿತನಾಗಲಿಲ್ಲ. ಈ ಭಾರಿ ಪಠಾಣ ಗಂಗೂವಿನ ಮೇಲೆ ಕಳೆದ ಸಲಕ್ಕಿಂತ ಹೆಚ್ಚು ಕ್ರೌರ್ಯ ಮೆರೆದಿದ್ದ. ಅವಳನ್ನು ಆಳವಾಗಿ ಕಚ್ಚಿಯೂ ಘಾಸಿಗೊಳಿಸಿದ್ದ.

ಈ ಭಾರಿ ಗಂಗೂಳನ್ನು ಕೆಲವು ದಿನ ಆಸ್ಪತ್ರೆಗೆ ಸೇರಿಸಬೇಕಾಯಿತು. ಆಸ್ಪತ್ರೆಯಿಂದ ವಾಪಸ್ಸಾದ ನಂತರವೂ ಅವಳು ತುಂಬಾ ದಿನಗಳವರೆಗೆ ವಿಶ್ರಾಂತಿಯಲ್ಲಿರಬೇಕಾಯಿತು. ಅವಳಿಗೆ ತನ್ನ ಅಸಹಾಯಕತೆಯಷ್ಟೇ ಅಲ್ಲದೆ ಶೀಲಾ ಆಂಟಿಯ ಬೇಜವಬ್ದಾರಿಯ ಮೇಲೂ ಸಿಟ್ಟು ಉಕ್ಕಿ ಬಂತು.
ಅವಳಿಗೂ ಶೀಲಾ ಆಂಟಿಗೂ ಈ ಬಗ್ಗೆ ತೀಕ್ಷ್ಣ ಮಾತುಗಳ ವಿನಿಮಯ ನಡೆಯಿತು. ಕೊನೆಗೆ ಈ ಪಠಾಣನಿಗೆ ಬುದ್ಧಿ ಕಲಿಸುವ ಹೊಣೆಯನ್ನು ತನ್ನ ಮೇಲೆಯೇ ಹೊತ್ತುಕೊಂಡಳು. ಹೀಗೆಯೇ ಸುಮ್ಮನಾದರೆ ಮುಂದೆ ಇದಕ್ಕಿಂತ ಭಯಂಕರವಾದ ಪರಿಣಾಮಗಳನ್ನು ಎದುರಿಸಬೇಕಾಗಬಹುದೆಂದು ಅವಳಿಗೆ ಮನದಟ್ಟಾಗಿತ್ತು. ಅವಳು ಪಠಾಣನ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದಳು. ಕೊನೆಗೆ, ಗಂಗೂಳ ಗಿರಾಕಿಯೊಬ್ಬನಿಂದ ಅವನು ಕರೀಮ್ ಲಾಲನ ಗುಂಪಿನ ಶೌಕತ್ ಖಾನನೆಂದು ತಿಳಿದು ಬಂತು.

ಆ ದಿನಗಳಲ್ಲಿ ಅಬ್ದುಲ್ ಕರೀಮ್ ಖಾನ್ ಅಥವಾ ಕರೀಮ್ ಲಾಲ್ ಸಣ್ಣ ಮಟ್ಟದ ರೌಡಿ ಗುಂಪಿನ ನಾಯಕನಾಗಿದ್ದ. ಅವನು ‘ಫಕ್ತೂನ್ ಜಿರ್ಗಾಯ್ ಹಿಂದ್’ ಎಂಬ ರೌಡಿ ಗ್ಯಾಂಗನ್ನು ಮುನ್ನಡೆಸುತ್ತಿದ್ದ. ಕರೀಮ್ ಲಾಲ ಮಹಿಳೆಯರಿಗೆ ತುಂಬಾ ಗೌರವ ಕೊಡುತ್ತಿದ್ದನೆಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಶೌಕತ್ ಖಾನನಿಗೆ ಬುದ್ದಿ ಕಲಿಸಬೇಕೆಂದರೆ ಅದು ಕರೀಮ್ ಲಾಲನಿಂದ ಎಂದು ಗಂಗೂ ಅಂದಾಜಿಸಿದಳು. ಅವಳು ಕರೀಮ್ ಲಾಲನನ್ನು ಭೇಟಿ ಮಾಡಲು ನಿಶ್ಚಯಿಸಿದಳು. ಶೀಲಾ ಆಂಟಿ ಒಳಗೊಂಡು ಎಲ್ಲರೂ ಅವಳ ನಿರ್ಧಾರದಿಂದ ಹೌಹಾರಿ ಅವಳನ್ನು ತಡೆಯಲು ಪ್ರಯತ್ನಿಸಿದರು. ದಕ್ಷಿಣ ಬೊಂಬಾಯಿಯ ಭೂಗತ ಜಗತ್ತಿನ ನೆಂಟಸ್ತನ ನಮಗೆ ಬೇಡವೇ ಬೇಡವೆಂದು ಒಕ್ಕೊರಲಿನಿಂದ ಅವಳನ್ನು ಅಂಗಲಾಚಿದರು. ಗಂಗೂ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಒಂದು ಶುಕ್ರವಾರ ನಮಾಜನ್ನು ಮುಗಿಸಿ ಕರೀಮ್ಲಾಲ ಲ್ಯಾಮಿಂಗ್ಟನ್ ರೋಡಿನ ತಾಹಿರ್ ಮಂಜಿಲ್ನಲ್ಲಿದ್ದ ತನ್ನ ಮನೆಗೆ ಹೋಗುತ್ತಿದ್ದ. ಬೈದಾ ಗಲ್ಲಿಯಲ್ಲಿ ಅವನ ಆಗಮನಕ್ಕಾಗಿಯೇ ಕಾಯುತ್ತಿದ್ದ ಗಂಗೂ ಅವನನ್ನು ಎದರುಗೊಳ್ಳಲು ಮುಂದೆ ಹೋದಳು.

‘ಕರೀಮ್ಭಾಯಿ ನಿಮ್ಮಿಂದ ನನಗೆ ಒಂದು ಉಪಕಾರವಾಗಬೇಕಿತ್ತು.’ ಅವಳು ಹೇಳಿದಳು.
ಅವಳ ವೇಷಭೂಷಣದಿಂದಲೇ ಅವಳಾರೆಂದು ಅವನಿಗೆ ಅರ್ಥವಾಯಿತು.
ಸಾರ್ವಜನಿಕವಾಗಿ ಒಬ್ಬ ವೇಶ್ಯೆಯೊಡನೆ ಮಾತನಾಡುತ್ತಾ ನಿಲ್ಲುವುದಕ್ಕೆ ಅವನಿಗೆ ಮುಜುಗರವಾಯಿತು.
‘ನಿನಗೇನು ಬೇಕಮ್ಮ?’ ಅವನು ಅವಸರಿಸಿದ.
‘ನಿನ್ನ ಗುಂಪಿನ ಸದಸ್ಯನೊಬ್ಬನ ಬಗ್ಗೆ ಮಾತನಾಡುವುದಿತ್ತು..’
ಅವನು ಅವಾಕ್ಕಾದ. ‘ನೀನು ಮನೆಗೆ ಬಾ. ಅಲ್ಲಿ ಮಾತನಾಡೋಣ.’ ಎಂದು ಅವನು ಮುಂದೆ ನಡೆದ. ಗಂಗೂ ಅವನನ್ನು ಹಿಂಬಾಲಿಸಿದಳು.
ಅವಳನ್ನು ಮನೆಯ ಒಳಗೆ ಕರೆದುಕೊಂಡು ಹೋಗಲು ಅವನು ತಯಾರಿರಲಿಲ್ಲ. ಅವಳಿಗೆ ಮೆಟ್ಟಿಲುಗಳನ್ನು ಹತ್ತಿ ಟೆರೇಸಿಗೆ ಹೋಗಲು ಹೇಳಿ ತಾನು ಬಟ್ಟೆ ಬದಲಾಯಿಸಿ ಬರುವುದಾಗಿ ಹೇಳಿ ಅವನು ಒಳಗೆ ಹೋದ. ಅವನು ಮೇಲೆ ಬರುವುದರೊಳಗೆ ಒಬ್ಬ ಆಳು ಅವಳಿಗಾಗಿ ಟೀ ಮತ್ತು ಬಿಸ್ಕಿಟುಗಳನ್ನು ತಂದಿತ್ತು ಹೋದ. ಕರೀಮ್ಲಾಲ ಹತ್ತು ನಿಮಿಷಗಳ ನಂತರ ಟೆರೇಸಿಗೆ ಬಂದ. ಗಂಗೂ ಟೀ ಬಿಸ್ಕಿಟನ್ನು ಮುಟ್ಟಿರಲಿಲ್ಲ.
‘ನೀನು ಟೀಯನ್ನು ಏಕೆ ಕುಡಿಯಲಿಲ್ಲಮ್ಮ?’ ಕರೀಮ್ಲಾಲ ಕೇಳಿದ.

‘ನನ್ನಂತವಳು ನಿಮ್ಮ ಮನೆಯೊಳಗೆ ಬರಲು ಯೋಗ್ಯಳಲ್ಲದಿದ್ದ ಮೇಲೆ ಈ ಟೀ ಕಪ್ಪನ್ನು ಹೇಗೆ ಎಂಜಲು ಮಾಡಲಿ ಭಾಯಿ?’ ಗಂಗೂ ಧೈರ್ಯದಿಂದ ಕೇಳಿದಳು.
ಕರೀಮ್ಲಾಲನ ಮುಖ ವಿವರ್ಣವಾಯಿತು.
‘ನಿನ್ನ ಹೇಸರೇನಮ್ಮ?’
‘ಗಂಗು.. ನಾನು ಕಾಮಾಟಿಪುರದವಳು.’
‘ನನ್ನಿಂದೇನಾಗಬೇಕು?’
‘ಭಾಯಿ, ನಿಮ್ಮ ಮನುಷ್ಯನೊಬ್ಬ ನನ್ನ ಮೇಲೆ ಅತ್ಯಚಾರಗೈದಿರುವಾಗ ಅವನಿಗೆ ಶಿಕ್ಷೆ ಕೊಡಬೇಕೆಂದು ನಿಮಗೆ ಅನಿಸುತ್ತಿದಯೋ ಇಲ್ಲ ನನಗೆ ಗೊತ್ತಿಲ್ಲ.. ಅನಿಸಿದರೆ, ಈ ಜೀವಮಾನವಿಡೀ ನಿಮ್ಮ ಸೂಳೆಯಾಗಿ ಬದುಕಲು ನಾನು ತಯಾರಾಗಿದ್ದೇನೆ.’
ಕರೀಮ್ಲಾಲನ ಮುಖ ಕಪ್ಪಿಟ್ಟಿತು. ಈ ರೀತಿ ಅವನ ಹತ್ತಿರ ಯಾರೂ ಮಾತನಾಡಿರಲಿಲ್ಲ. ಆದರೂ ಅವನು ತಾಳ್ಮೆ ಕೆಡಿಸಿಕೊಳ್ಳಲಿಲ್ಲ. ಅವನು ಹೇಳಿದ, ‘ನೋಡಮ್ಮ, ನಾನೊಬ್ಬ ಸಂಸಾರಸ್ಥ. ನನಗೆ ಸೂಳೆಯ ಅವಶ್ಯಕತೆಯಿಲ್ಲ. ನನ್ನ ಕಡೆಯವನು ನಿನ್ನ ಮೇಲೆ ಅತ್ಯಾಚಾರಗೈದಿದ್ದಾದರೆ ನಾನು ಖಂಡಿತವಾಗಿಯೂ ಅವನ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಯಾರವನು ಹೇಳು?’
‘ಅವನ ಹೆಸರು ಶೌಕತ್ ಖಾನ್. ಅವನು ನಿಮ್ಮ ಪಂಗಡದಲ್ಲಿದ್ದಾನೆಂದು ನನಗೆ ತಿಳಿದುಬಂದಿದೆ.’
‘ನನ್ನ ಪಂಗಡದವನೇ? ಆ ಹೆಸರಿನ ವ್ಯಕ್ತಿ ನನ್ನ ಪಂಗಡದಲ್ಲಿದ್ದಂತಿಲ್ಲವಲ್ಲ?’
‘ನಾನು ವಿಚಾರಿಸಿಕೊಂಡೇ ನಿಮ್ಮಲ್ಲಿಗೆ ಬಂದಿರುವುದು..’
‘ಇರಲಿ. ಅವನ ಅಪರಾಧವಾದರೂ ಏನು?’
‘ಕಳೆದ ತಿಂಗಳಲ್ಲಿ ಎರಡು ಭಾರಿ ಅವನು ನನ್ನ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾನೆ. ಅಷ್ಟೇ ಅಲ್ಲ, ದುಡ್ಡೂ ಕೊಟ್ಟಿಲ್ಲ. ನಾನೊಬ್ಬ ವೇಶ್ಯೆಯಾಗಿರಬಹುದು. ಹಾಗಂತ ಯಾರೂ ನನ್ನ ಮೇಲೆ ಜುಲುಮೆ ನಡೆಸುವುದು ನನಗೆ ಸಹಿಸಲು ಆಗುತ್ತಿಲ್ಲ.. ಅವನೊಬ್ಬ ಮನುಷ್ಯನಲ್ಲ, ಪ್ರಾಣಿ! ಅವನು ನನ್ನ ಮೇಲೆ ನಡೆಸಿರುವ ಜುಲುಮೆಯಿಂದಾಗಿ ನಾನು ಕೆಲವು ದಿನಗಳು ಆಸ್ಪತ್ರೆಗೂ ಸೇರಬೇಕಾಯಿತು.’ ಗಂಗೂ ತನ್ನ ಮೈಮೇಲಿನ ಕಲೆಗಳನ್ನು ಕರೀಮ್ಲಾಲನಿಗೆ ತೋರಿಸಿದಳು.

ಗಾಯದ ಕಲೆಗಳು ಭಯಾನಕವಾಗಿ ಕಾಣುತ್ತಿದ್ದವು. ಕರೀಮ್ಲಾಲ ತಲೆ ತಗ್ಗಿಸಿದ. ಒಬ್ಬ ಅಬಲೆಯ ಮೇಲೆ ಪುರುಷನೊಬ್ಬ ನಡೆಸಿದ್ದ ದೌರ್ಜನ್ಯವನ್ನು ಕಂಡು ಅವನಿಗೆ ಅಘಾತವಾಗಿತ್ತು. ಅದೂ ತನ್ನದೇ ಪಂಗಡದ ಒಬ್ಬ ಪಠಾಣನಿಂದ!
‘ನೋಡಮ್ಮ ಗಂಗು, ಮುಂದಿನ ಭಾರಿ ಅವನು ಬರುವಾಗ ನನಗೊಂದು ಸುದ್ದಿ ಕೊಡು. ನಾನೇ ಬರುತ್ತೇನೆ. ಅಲ್ಲಿಯವರೆಗೆ ಅವನು ಅಲ್ಲೇ ಇರುವಂತೆ ನೋಡಿಕೊಳ್ಳಿ. ಈಗ ನೀನು ಹೊರಡಬಹುದು.’ ಎಂದು ಅವನು ಎದ್ದನು.
ಗಂಗೂ ಕೂಡ ಎದ್ದಳು. ಅವಳ ತುಟಿಗಳು ತೃಪ್ತಿಯಿಂದ ಅರಳಿದವು. ಅವಳು ಪರ್ಸಿಂದ ಒಂದು ನೂಲನ್ನು ಹೊರತೆಗೆದಳು. ‘ಕರೀಮ್ ಭಾಯಿ, ನಾನು ಒಬ್ಬ ಗಂಡಸಿಗೆ ರಾಖಿ ಕಟ್ಟದೆ ಅದೆಷ್ಟು ವರ್ಷಗಳಾದವೋ ಏನೋ? ನನ್ನನ್ನು ಇಲ್ಲಿಗೆ ತಂದು ಬಿಟ್ಟ ನಂತರ ಯಾವ ಗಂಡಸಿನ ಬಳಿಯೂ ನನಗೆ ಸುರಕ್ಷತೆಯ ಅನುಭವವಾಗಿರಲಿಲ್ಲ. ಇಂದು ನೀವು ನನಗೆ ನಾನು ಊಹಿಸಲೂ ಸಾಧ್ಯವಿರದಂತ ಗೌರವವನ್ನು ಕೊಟ್ಟಿದ್ದೀರಿ. ಮನುಷತ್ವದಲ್ಲಿ ನಂಬಿಕೆ ಬರುವಂತೆ ಮಾಡಿದ್ದೀರಿ.’ ಎಂದಳು ಗದ್ಗದಿತಳಾಗಿ.

ಕರೀಮ್ಲಾಲ ಅಚ್ಚರಿಗೊಂಡ. ಒಂದು ಗಳಿಗೆಯ ಹಿಂದೆ ಅವನ ಸೂಳೆಯಾಗಲಿಕ್ಕೆ ತಯಾರಾಗಿದ್ದ ಹೆಣ್ಣೊಬ್ಬಳು ಮರುಗಳಿಗೆಯಲ್ಲೇ ರಾಖಿ ಕಟ್ಟಲು ತಯಾರಾಗಿದ್ದಾಳೆ! ಅವನ ತುಟಿಗಳಲ್ಲೂ ನಗು ಮೂಡಿತು. ಅವನು ಖುಷಿಯಿಂದಲೇ ಕೈಯನ್ನು ಮುಂದು ಮಾಡಿದ.
‘ಗಂಗೂ, ಇಂದಿನಿಂದ ನೀನು ನನ್ನ ತಂಗಿ!’ ಎಂದ ಕರೀಮ್ಲಾಲ ಪ್ಲೇಟಿನಿಂದ ಬಿಸ್ಕತ್ತನ್ನು ತೆಗೆದು ಅವಳ ಬಾಯಿಗಿಟ್ಟ. ಗಂಗೂಗೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಆನಂದವಾಯಿತು.
ಕರೀಮ್ಲಾಲ ಶೀಲಾ ಆಂಟಿಯ ಮನೆಯ ಎದುರುಗಡೆ ಕಾವಲು ಕಾಯಲು ತನ್ನವನೊಬ್ಬನನ್ನು ನೇಮಿಸಿದ. ದಿನಗಳುರುಳಿದವು. ಶೌಕತನ ಪತ್ತೆ ಇರಲಿಲ್ಲ. ಅವನು ಬಂದು ಕರೀಮ್ಲಾಲನ ಕೈಗೆ ಸಿಕ್ಕಿ ಬೀಳುವಂತಾಗಲು ಗಂಗು ದೇವರನ್ನು ಪ್ರಾರ್ಥಿಸುತ್ತಿದ್ದಳು.
ಮೂರು ವಾರಗಳ ನಂತರ ಶೌಕತ್ ಮತ್ತೆ ಬಂದ. ಗಂಗು ಕಾವಲು ಕಾಯುತ್ತಿದ್ದವನಿಗೆ ಸುದ್ದಿ ಮುಟ್ಟಿಸಿದಳು. ಅವನು ಕರೀಮ್ಲಾಲನಿಗೆ ತಿಳಿಸಲು ಸೈಕಲಿನಲ್ಲಿ ದೌಡಾಯಿಸಿದ. ಶೌಕತ್ ಖಾನ್ ಕಿಂಚಿತ್ತೂ ಬದಲಾಗಿರಲಿಲ್ಲ. ಈ ಭಾರಿ ಮತ್ತಷ್ಟು ಕ್ರೂರಿಯಾಗಿರುವವನಂತೆ ಕಂಡ. ಕರೀಮ್ಲಾಲ ಬರುತ್ತಾನೆಂಬ ಧೈರ್ಯದಲ್ಲಿ ಗಂಗು ಅವನನ್ನು ಎದುರುಗೊಂಡಳು. ಅವನು ಬಂದ ಹತ್ತು ನಿಮಿಷಗಳೊಳಗೆ ಜೋರಾಗಿ ಬಾಗಿಲು ಬಡಿದ ಶಬ್ಧ ಕೇಳಿಸಿತು.

ಶೌಕತ್ ಖಾನ್ ಕೆರಳಿದ. ಅವನು ಎದ್ದು ಗಂಗೂಳ ಕೆನ್ನೆಗೆ ಸಿಟ್ಟಿನಿಂದ ಬಾರಿಸಿದ. ಬೆಡ್ ಶೀಟನ್ನು ತನ್ನ ಸುತ್ತ ಸುತ್ತಿಕೊಂಡು ಗಂಗು ಬಾಗಿಲು ತೆರೆದಳು. ಎದುರಿಗೆ ಕರೀಮ್ಲಾಲ ನಿಂತಿರುವುದನ್ನು ನೋಡಿ ಶೌಕತನ ಜೋಶ್ ಒಮ್ಮೆಲೇ ಇಳಿದು ಹೋಯಿತು. ಅವನ ಮುಖ ಕಳೆಗುಂದಿತು. ಕರೀಮ್ಲಾಲನ ಜೊತೆಯಲ್ಲಿ ಮತ್ತಿಬ್ಬರು ಪಠಾಣರಿದ್ದರು. ಅವರ ಕೈಯಲ್ಲಿ ಹಾಕಿ ಸ್ಟಿಕ್ಕುಗಳಿದ್ದವು. ಅವಸರವಸರದಿಂದ ಶೌಕತ್ ತನ್ನ ಪೈಜಾಮವನ್ನು ಧರಿಸಲು ಶುರು ಮಾಡಿ ಹೊರಗೆ ಓಡಿ ಹೋಗಲು ದಾರಿ ಹುಡುಕತೊಡಗಿದ. ಅವನಿಗೆ ಯಾವುದಕ್ಕೂ ಅಸ್ಪದ ಕೊಡದೆ ಪಠಾಣರು ಅವನನ್ನು ಹಿಡಿದು ಹೊರಗೆಳೆದುಕೊಂಡು ಹೋದರು. ರಸ್ತೆ ಮುಟ್ಟುತ್ತಿದ್ದಂತೆ ಕರೀಮ್ಲಾಲ ಹಾಕಿ ಸ್ಟಿಕ್ಕನ್ನು ಕೈಗೆತ್ತಿಕೊಂಡು ಶೌಕತನಿಗೆ ಬಾರಿಸಲು ಶುರು ಮಾಡಿದ. ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದ ಶೌಕತ್ ಪಶ್ತೂನ್ ಬಾಷೆಯಲ್ಲಿ, ‘ಒಬ್ಬ ಬೀದಿ ಸೂಳೆಗಾಗಿ ನಿನ್ನ ಕುಲ ಬಾಂಧವನನ್ನೇ ಹೊಡೆಯುತ್ತಿದ್ದಿಯಲ್ಲಾ!’ ಎಂದು ಜರೆಯತೊಡಗಿದ. ಇದನ್ನು ಕೇಳಿದ ಕರೀಮ್ಲಾಲ ಮತ್ತಷ್ಟು
ಉಗ್ರನಾದ. ಅವನ ಹೊಟ್ಟೆಗೆ ಒದ್ದು, ಹಾಕಿ ಸ್ಟಿಕ್ಕನ್ನು ತಲೆಗೆ ಬೀಸಿದ. ‘ಪಠಾಣನೆಂದು ಕರೆಸಿಕೊಳ್ಳಲು ನಿನಗೆ ಯೋಗ್ಯತೆಯಿದೆಯೇನೋ ನಾಯಿ!’ ಎಂದ.
ಶೌಖತ್ ಖಾನನ ಕೆಲವು ಮೂಳೆಗಳು ಮುರಿಯುವವರೆಗೂ ಕರೀಮ್ಲಾಲನಿಗೆ ಸಮಧಾನವಾಗಲಿಲ್ಲ. ‘ಗಂಗು ನನ್ನ ರಾಖಿ ಕಟ್ಟಿದ ತಂಗಿ. ಅವಳನ್ನು ಕೆಣಕುವವರು ನನ್ನ ವೈರಿಗಳು, ಎಚ್ಚರ!’ ಕಾಮಾಟಿಪುರದ ಬೀದಿಯಲ್ಲಿ ಎಲ್ಲರೂ ಕೇಳುವ ಹಾಗೆ ಕರೀಮ್ಲಾಲ ಗರ್ಜಿಸಿದ.

ಅಂದಿನಿಂದ ಕಾಮಾಟಿಪುರದಲ್ಲಿ ಗಂಗೂಳ ಖದರೇ ಬೇರೆಯಾಯಿತು. ಅವಳನ್ನು ಎಲ್ಲರೂ ಗೌರವಿಸತೊಡಗಿದರು. ದಕ್ಷಿಣ ಬೊಂಬಾಯಿಯ ಬಲಿಷ್ಟ ಭೂಗತ ಡಾನನ ಅಭಯ ಹಸ್ತ ಅವಳ ಮೇಲಿತ್ತು. ಈ ನಂತರ ಅವಳನ್ನು ಯಾರೂ ತಡೆಯುವಂತಿರಲಿಲ್ಲ. ಗಂಗೂನ ಕಂಡರೆ ಶೀಲಾ ಆಂಟಿಯೂ ಹೆದರತೊಡಗಿದಳು. ಕರೀಮ್ಲಾಲನ ಮುಖಾಂತರ ಅವಳಿಗೆ ನಾಗಪಾಡದ ಪೋಲಿಸರ ಪರಿಚಯವೂ ಆಯಿತು. ಆಕಸ್ಮತ್ತಾಗಿ ಶೀಲಾ ಆಂಟಿ ತೀರಿಕೊಂಡಳು. ಎಲ್ಲರೂ ಗಂಗೂಳನ್ನು ಘರ್ವಾಲಿ ಚುನಾವಣೆಗೆ ನಿಲ್ಲಲು ಒತ್ತಾಯಿಸತೊಡಗಿದರು. (ವೇಶ್ಯಾಗೃಹಗಳನ್ನು ನಡೆಸುವ ಹೆಂಗಸರನ್ನು ಘರ್ವಾಲಿಗಳೆಂದು ಕರೆಯುತ್ತಾರೆ. ಈ ವೃತ್ತಿಯಲ್ಲೂ ಅನೇಕ ಶ್ರೇಣಿಗಳಿವೆ. ಸಾಮಾನ್ಯ ವೇಶ್ಯೆಯರೂ ಚುನಾವಣೆಯಲ್ಲಿ ಸ್ಪರ್ಧಿಸಿ ಮೇಲಂತಸ್ತಿಗೆ ಏರಬಹುದು. ಒಬ್ಬ ಘರ್ವಾಲಿಯ ಒಡೆತನದಲ್ಲಿ ಇಂತಿಷ್ಟೇ ಗೂಡುಗಳು (ಪಿಂಜ್ರೆ) ಅಥವಾ ಒಂದು ಮಂಚವನ್ನು ಜೋಡಿಸಿಡುವಷ್ಟು ಸ್ಥಳಾವಕಾಶವಿರುತ್ತದೆ.)
ಚುನಾವಣೆಯಲ್ಲಿ ಗೆದ್ದ ಗಂಗೂ ಅತೀ ಸಣ್ಣ ವಯಸ್ಸಿಗೆ ಘರ್ವಾಲಿಯಾದ ಕೀರ್ತಿಗೆ ಭಾಜನಳಾದಳು. ‘ಗಂಗು ಕಟೆವಾಲಿ’ ಎಂದೇ ಪ್ರಸಿದ್ಧಿಯಾದಳು. ಕಟೇವಾಲಿ, ‘ಕೋಟೆವಾಲಿ’ಯ ಅಪಭ್ರಂಶವಾಗಿದೆ. ಅವಳ ಹುಟ್ಟೂರು ಕತಿಯಾವಾಡಿಯ ಗೌರವಾರ್ಥವಾಗಿಯೂ ಅವಳು ‘ಕಟೇವಾಲಿ’ ವಿಶೇಷಣವನ್ನು ಇಷ್ಟಪಡುತ್ತಿದ್ದಳು.

****

ಮಧುವಿನ ಅಳು ಗಂಗೂಬಾಯಿಯನ್ನು ವಾಸ್ತವ ಲೋಕಕ್ಕೆ ತಂದಿಳಿಸಿತು.
‘ಹುಡುಗೀ, ನೀನು ಅಳುವುದನ್ನು ಕೊಂಚ ನಿಲ್ಲಿಸುತ್ತೀಯಾ? ಹೊರಗೆ, ನಾನು ನಿನಗೆ ಹೊಡೆಯುತ್ತಿದ್ದೇನೆಂದು ಜನ ತಿಳಿದಾರು!’
‘ಅಮ್ಮಾ, ದಯವಿಟ್ಟು ನನ್ನನ್ನು ಇಲ್ಲಿಂದ ಕಳುಹಿಸಿಕೊಡಿ.’ ಎನ್ನುತ್ತಾ ಅವಳು ಮತ್ತೆ ಅಳತೊಡಗಿದಳು.
ಗಂಗು ಅವಳ ಕೆನ್ನೆಯನ್ನು ಮೃದುವಾಗಿ ಸವರಿದಳು.
‘ಆಯ್ತು… ನಾನು ನಿನ್ನನ್ನು ಇಲ್ಲಿಂದ ಬಿಡಿಸಲು ಶಕ್ತಳಾದೇ ಎಂದುಕೊಳ್ಳೋಣ. ಮುಂದೆ?’
‘ನಾನು ರತ್ನಗಿರಿಗೆ ವಾಪಸ್ಸು ಹೋಗಬಯಸುತ್ತೇನೆ.’ಅವಳು ತಕ್ಷಣ ಹೇಳಿದಳು.
‘ಯಾರಲ್ಲಿಗೆ?’
‘ಇನ್ನೆಲ್ಲಿಗೆ? ನನ್ನ ತಂದೆ-ತಾಯಿಯ ಬಳಿಗೆ!’
‘ಒಬ್ಬ ಹುಡುಗನೊಂದಿಗೆ ಓಡಿಹೋಗಿ ನೀನು ನಿನ್ನ ತಂದೆ-ತಾಯಿಯರ ಗೌರವಕ್ಕೆ ಕಳಂಕ ತಂದಿದ್ದೀಯಾ! ಮತ್ತೆ, ನೀನೆಲ್ಲಾದರೂ ಕಾಮಾಟಿಪುರದಲ್ಲಿದ್ದೆ ಎಂದು ಊರಿನವರಿಗೆ ಗೊತ್ತಾದರೆ ನಿನ್ನ ಕುಟುಂಬದ ಗತಿ ಏನಾಗಬಹುದೆಂದು ಯೋಚಿಸಿದ್ದೀಯಾ?’

‘ಇಲ್ಲಿದ್ದ ವಿಚಾರವನ್ನು ಹೇಳದಿದ್ದರೆ ನನ್ನ ಮನೆಯವರು ಖಂಡಿತವಾಗಿಯೂ ನನ್ನನ್ನು ಮನೆಗೆ ಸೇರಿಸಿಕೊಳ್ಳುತ್ತಾರೆ.’ಅವಳು ಧೈರ್ಯದಿಂದ ಹೇಳಿದಳು.
‘ಹಾಗಾದರೆ ಅವರಿಗೆ ಏನೆಂದು ತಿಳಿಸುತ್ತೀಯಾ?’ ಗಂಗು ಆಶ್ಚರ್ಯದಿಂದ ಕೇಳಿದಳು.
‘ಇನ್ನೂ ಗೊತ್ತಿಲ್ಲ..’ ಅವಳು ಹೇಳಿದಳು.
ಒಂದು ಗಳಿಗೆಯ ಮೌನದ ನಂತರ ಗಂಗು ಹೇಳಿದಳು:
‘ಒಂದು ಕಾಲದಲ್ಲಿ ನಾನೂ ನಿನ್ನ ಹಾಗೇ ಮನೆ ಬಿಟ್ಟು ಓಡಿಬಂದಿದ್ದೆ. ನನ್ನ ಗಂಡ ನನ್ನನ್ನು ಮಾರಿದಾಗ ನನಗೂ ನಿನ್ನಷ್ಟೇ ಪ್ರಾಯವಾಗಿತ್ತು. ನಾನು ಹಿಂದಕ್ಕೆ ಹೋಗಲಿಲ್ಲ. ನಾನು ಕಾಮಾಟಿಪುರದಲ್ಲಿದ್ದೆ ಎಂದು ಅವರಿಗೆ ಗೊತ್ತಾಗಿದ್ದಿದ್ದರೆ ಖಂಡಿತವಾಗಿಯೂ ಅವರು ನನ್ನನ್ನು ಸಾಯಿಸಲೂ ಹಿಂಜರಿಯುತ್ತಿರಲಿಲ್ಲ. ನನಗೆ ಬೇರೆ ದಾರಿಯೇ ಇರಲಿಲ್ಲ. ಇದೇ ನನ್ನ ಮನೆಯಾಯ್ತು. ನೀನು ಊರಿಗೆ ವಾಪಸ್ಸು ಹೋದರೂ ಮನೆಯವರು ನಿನ್ನನ್ನು ಬರಮಾಡಿಕೊಳ್ಳುತ್ತಾರೆಂದು ಏನು ಖಾತರಿ? ಇಲ್ಲಿ ನಿನ್ನ ಹಾಗೆಯೇ ವಿನುತ ಎನ್ನುವ ಹುಡುಗಿ ಬಂದಿದ್ದಳು. ನಿನ್ನ ಹಾಗೆ ಅವಳೂ, ಮನೆಯವರು ಸೇರಿಸಿಕೊಳ್ಳುತ್ತಾರೆಂದು ನಂಬಿದ್ದಳು…’ ಎಂದು ಗಂಗುಬಾಯಿ ಕೆಲವು ಕ್ಷಣ ಮೌನಳಾದಳು. ನಂತರ, ‘..ಕೆಲವು ದಿನಗಳ ನಂತರ ನಮಗೆ ತಿಳಿದು ಬಂದಿದ್ದೇನೆಂದರೆ, ಅವಳ ಮರ್ಯಾದ ಹತ್ಯಾ ಮಾಡಲಾಗಿತ್ತು.’

ಮಧು ಮತ್ತೆ ಅಳಲುಪಕ್ರಮಿಸಿದಳು. ‘ಹಾಗಾದರೆ ನಾನು ಸಾಯುವವರೆಗೆ ಇಲ್ಲೇ ಇರಬೇಕಾಗುತ್ತಾ?’ ಅವಳು ಕೇಳಿದಳು.
‘ಹಾಗಂತ ನಾನೆಲ್ಲೇಳಿದೆ ಹುಡುಗಿ? ನಿನ್ನ ತಂದೆ-ತಾಯಿಯವರನ್ನು ನಂಬಿಸುವಷ್ಟು ಎದೆಗಾರಿಕೆ ನಿನಗಿದೆಯೇ?’
‘ನಾನು ಬಹಳ ದೊಡ್ಡ ತಪ್ಪು ಮಾಡಿದ್ದೇನೆಂದು ನನಗೆ ಗೊತ್ತು ಅಮ್ಮ. ಮನೆಯವರ ಕ್ಷಮೆ ಕೇಳಿ ಅವರನ್ನು ಒಪ್ಪಿಸಲು ನಾನು ಪ್ರಯತ್ನ ಮಾಡುತ್ತೇನೆ. ಒಪ್ಪದಿದ್ದರೆ ರತ್ನಗಿರಿಯಲ್ಲೇ ಏನಾದರು ಕೆಲಸ ಹುಡುಕಿಕೊಳ್ಳುತ್ತೇನೆ. ದಯವಿಟ್ಟು ನನಗೆ ಇಲ್ಲಿಂದ ಕಳುಹಿಸಿ ಕೊಡಿ.’
ಗಂಗೂ ಬಾಯಿ ಬಹಳ ಹೊತ್ತು ಅವಳನ್ನೇ ನೋಡುತ್ತಾ ಕುಳಿತುಕೊಂಡಳು. ನಂತರ ಏನೋ ತೀರ್ಮಾನ ತೆಗೆದುಕೊಂಡವಳಂತೆ ಎದ್ದು ರಶ್ಮಿ ಮೇಡಮ್ಗೆ ಕರೆದಳು.
‘ಈ ಹುಡುಗಿ ಇಲ್ಲಿರುವಂತೆ ಕಾಣಿಸುತ್ತಿಲ್ಲ. ಅವಳನ್ನು ಕಳುಹಿಸಿಕೊಡು.’ ಎಂದಳು.
‘ಇವಳ ಮೇಲೆ ನಾನೀಗಲೇ ಒಂದು ಸಾವಿರ ರುಪಾಯಿಗಳನ್ನು ಖರ್ಚು ಮಾಡಿದ್ದೇನೆ ಬಾಯಿ..’ ಅವಳು ಆತಂಕಗೊಂಡಳು.
‘ನನಗೆ ಗೊತ್ತು. ವ್ಯವಹಾರದಲ್ಲಾದ ನಷ್ಟ ಎಂದು ತಿಳಿದುಕೊ. ಮುಂದೆ ಯಾವುದೇ ಹುಡುಗಿಯರನ್ನು ಅವರ ಇಷ್ಟಕ್ಕೆ ವಿರುದ್ಧವಾಗಿ ಇಟ್ಟುಕೊಳ್ಳುವುದನ್ನು ನಾನು ಇಷ್ಟಪಡುವುದಿಲ್ಲ. ಗೊತ್ತಾಯಿತೇ? ಮೊದಲು ಪಪ್ಪೂನ ಕಳುಹಿಸಿ ಇವಳಿಗೆ ಸುರಕ್ಷಿತವಾಗಿ ರತ್ನಗಿರಿಯ ಬಸ್ಸು ಹತ್ತಿಸು.’ ಎಂದು ಹೇಳುತ್ತಾ ಗಂಗೂಬಾಯಿ, ಮಧು ಕೃತಜ್ಞತೆಗಳನ್ನು ಅರ್ಪಿಸುವುದನ್ನೂ ಕಾಯದೆ ಅಲ್ಲಿಂದ ಹೊರಟು ಹೋದಳು.

ಗಂಗೂ ಬಾಯಿಯ ತೀರ್ಮಾನದ ಸುದ್ಧಿ ಒಣ ಹುಲ್ಲಿಗೆ ಬೆಂಕಿ ಹತ್ತಿಕೊಂಡಂತೆ ಕಾಮಾಟಿಪುರದಲ್ಲೆಲ್ಲಾ ಹರಡಿತು. ದಂಧೆ ಮಾಡುತ್ತಿರುವ ಹುಡುಗಿಯರಲ್ಲಿ ಅವಳ ಬಗ್ಗೆ ಗೌರವ ಇಮ್ಮಡಿಯಾಯಿತು. ಈ ಘಟನೆಯ ನಂತರ ಪಿರ್ಯಾದು ಹೊತ್ತುಕೊಂಡು ಬಹಳಷ್ಟು ಹುಡುಗಿಯರು ಅವಳ ಬಳಿಗೆ ಬಂದರು. ಅವರ ದೂರುಗಳು ನ್ಯಾಯೋಚಿತವೆಂದು ಕಂಡುಬಂದಲ್ಲಿ ಅವರನ್ನು ಬಿಡುಗಡೆ ಮಾಡಲು ಗಂಗೂಬಾಯಿ ನೆರವಾದಳು. ಇಡೀ ಕಾಮಾಟಿಪುರ ಅವಳ ಮುಷ್ಠಿಯಲ್ಲಿತ್ತು. ಒಬ್ಬ ರಾಣಿಯಂತೆ ಅವಳು ಕಾಮಾಟಿಪುರವನ್ನು ಆಳಿದಳು ಎನ್ನಬಹುದು. ಶೌಕತ್ ಖಾನಾನಂತ ಪ್ರಾಣಿಗಳಿಂದ, ಮದುವೆಯಾಗುತ್ತೇನೆಂದು ಹೇಳಿ ವೇಶ್ಯೆಯರನ್ನು ಲೂಟಿ ಹೊಡೆಯುತ್ತಿದ್ದ ಗಂಡಸರಿಂದ, ದುಡ್ಡು ಕೊಡದೇ ಮಜಾ ಉಡಾಯಿಸುತ್ತಿದ್ದ ದಗಲ್ಬಾಜಿಗಳಿಂದ ಅವಳು ಹುಡುಗಿಯರಿಗೆ ರಕ್ಷಣೆಯಿತ್ತಳು. ಅವಳ ಭೂಗತ ಮತ್ತು ಪೋಲಿಸ್ ಸಂಪರ್ಕದಿಂದಾಗಿ ಗಂಡಸರು ನಡುಗುತ್ತಿದ್ದರೆ, ಹುಡುಗಿಯರ ಪಾಲಿಗೆ ಅವಳು ‘ಗಂಗೂಮಾ’ ಆಗಿದ್ದಳು. ‘ಬಡೇ ಘರ್ವಾಲಿ’ (ಘರ್ವಾಲಿಯ ಮುಂದಿನ ಅಂತಸ್ತು ಬಡೇ ಘರ್ವಾಲಿ. ಒಬ್ಬ ಘರ್ವಾಲಿಯ ಕೈಕೆಳಗೆ ಒಂದು ಮಹಡಿ ಅಥವಾ ಹೆಚ್ಚುಕಮ್ಮಿ ನಲ್ವತ್ತು ‘ಪಿಂಜ್ರಾ’ಗಳಿದ್ದರೆ ‘ಬಡೇ ಘರ್ವಾಲಿ’ ಪೂರ್ತಿ ಕಟ್ಟಡವನ್ನೇ ನಡೆಸುತ್ತಿರುತ್ತಾಳೆ.) ಯ ಚುನಾವಣೆಯ ನಂತರ ಗಂಗೂ ಬಾಯಿ ಮತ್ತೂ ಪ್ರಸಿದ್ಧಿಯಾದಳು.

ನಗರಗಳ ವಿವಿಧ ಬಡಾವಣೆಗಳಲ್ಲಿ ವೇಶ್ಯಾಗೃಹಗಳಿರಬೇಕೆಂದು ಗಂಗೂಬಾಯಿಯ ಅಭಿಪ್ರಾಯವಾಗಿತ್ತು. ಅಜಾದ್ ಮೈದಾನದಲ್ಲಿ ಒಂದು ಸ್ತ್ರೀ ಸಮಾವೇಶ ಸಭೆಯಲ್ಲಿ ಅವಳು ಕೊಟ್ಟ ಬಾಷಣವನ್ನು ಇನ್ನೂ ಆನೇಕರು ಜಾಪಿಸಿಕೊಳ್ಳುತ್ತಾರೆ. ಈ ಸಮಾವೇಶವು ಸ್ತ್ರೀ ಮತ್ತು ಹೆಣ್ಣು ಮಗುವಿನ ಸಬಲೀಕರಣ ಕುರಿತಾಗಿತ್ತು. ಆನೇಕ ಓಉಔ ಗಳು, ಸ್ತ್ರೀ ಸಂಘಟನೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಇದರಲ್ಲಿ ಭಾಗವಹಿಸಿದ್ದವು. ವೇಶ್ಯೆಯರ ಮಧ್ಯೆ ಸಾಕ್ಷರತೆ ಹರಡುವ ವಿಚಾರದಲ್ಲಿ ಸಹಕರಿಸಲು ಗಂಗೂಬಾಯಿಗೂ ಆಮಂತ್ರಣವನ್ನೀಯಲಾಗಿತ್ತು. ವೇಶ್ಯೆಯರ ಸ್ಥಿತಿ-ಗತಿಯ ಬಗ್ಗೆ ಮಾತನಾಡಲು ಗಂಗೂಬಾಯಿಗೆ ಆಹ್ವಾನವನ್ನಿತ್ತಿದ್ದರು. ಗಂಗೂಬಾಯಿಯನ್ನು ‘ಕಾಮಾಟಿಪುರದ ರಾಣಿ’ಎಂದು ಸಂಬೋಧಿಸಿ ವೇದಿಕೆಗೆ ಹತ್ತಿಸಿಕೊಂಡಾಗ ಸಭಿಕರ ಮುಖದಲ್ಲಿ ತಿರಸ್ಕಾರದ ಭಾವನೆ ಮೂಡಿದ್ದು ಸುಳ್ಳಲ್ಲ. ಬಿಳಿ ಹತ್ತಿ ಸೀರೆ ಉಟ್ಟು ಬಂದಿದ್ದ ಗಂಗೂಬಾಯಿಗೆ ಇದನ್ನು ಅಂದಾಜಿಸಲು ತಡವಾಗಲಿಲ್ಲ. ಅವಳು ಈ ಮೊದಲು ಸಾರ್ವಜನಿಕ ವೇದಿಕೆಯ ಮೇಲಿಂದ ಮಾತನಾಡಿರಲಿಲ್ಲ. ವೇದಿಕೆ ಹತ್ತುವಾಗ ಅವಳ ಕಾಲುಗಳು ಕಂಪಿಸುತ್ತಿದ್ದವು. ಇಡೀ ದಿನ ಅವಳು ಅಭ್ಯಾಸ ನಡೆಸಿದ್ದಳಾದರೂ ಈಗ ಅಧೀರಳಾದಳು. ಅವಳು ಧ್ವನಿವರ್ಧಕದ ಬಳಿಗೆ ಹೋಗುವವರೆಗೂ ಸಭಿಕರಲ್ಲಿ ಗುಸು ಗುಸು ನಡೆದೇ ಇತ್ತು. ಆ ಕಾರಣಕ್ಕಾಗಿಯಾದರೂ ತಾನು ಅಧೀರಳಾಗಬಾರದೆಂದು ಅವಳು ತನ್ನಷ್ಟಕ್ಕೇ ಹೇಳಿಕೊಂಡಳು.

ಪ್ರಾಸ್ತವಿಕ ಮಾತುಗಳಲ್ಲೇ ಗಂಗೂಬಾಯಿ ಸಭಿಕರ ಮಧ್ಯೆ ಸಂಚಲನವನ್ನುಂಟು ಮಾಡಿದಳು.
‘ವೃತ್ತಿಯಲ್ಲಿ ನಾನೊಬ್ಬಳು ಘರ್ವಾಲಿಯಾದರೂ ಘರ್ತೋಡ್ನೆ (ಮನೆಮುರುಕಿ) ವಾಲಿಯಲ್ಲ.. ನಮ್ಮ ವೃತ್ತಿ ಸ್ತ್ರೀ ಕುಲಕ್ಕೇ ಕಳಂಕ ಎಂದು ನೀವು ಅಂದುಕೊಂಡಿದ್ದೀರಿ.. ನಿಜ. ಈ ಕಳಂಕ ನಾವು ಹೊತ್ತುಕೊಂಡಿರುವುದರಿಂದಲೇ ನೀವು ಸಹಸ್ರ ಸಹಸ್ರ ಮಹಿಳೆಯರು ಸಮಾಜದಲ್ಲಿ ಸುರಕ್ಷಿತರಾಗಿದ್ದೀರಿ..’
ಗುಸು ಗುಸು ನಿಂತು ಎಲ್ಲೆಡೆ ಮೌನ ಆವರಿಸಿತು. ಭಾರತದ ಇತರೆ ನಗರಗಳಿಗೆ ಹೋಲಿಸಿದಲ್ಲಿ, ಸ್ತ್ರೀಯರ ವಿಚಾರದಲ್ಲಿ ಬಾಂಬೆ ಬಹಳ ಸುರಕ್ಷಿತವಾದ ನಗರ. ಇಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ ಎನ್ನುವ ಸುದ್ಧಿ ಬಹಳ ಅಪರೂಪ. ಇದು ನಮ್ಮಿಂದಲೇ ಎಂದು ನಾನು ಬಡಾಯಿ ಕೊಚ್ಚಿಕೊಳ್ಳುವುದಿಲ್ಲವಾದರೂ ಈ ಕಳಂಕಿಣಿಯರ ಪಾತ್ರವೂ ಇದೆ ಎನ್ನುವುದು ಸುಳ್ಳಲ್ಲ..

‘ಸಾಮಾಜಿಕ ಸ್ಥಾನಮಾನದ ವಿಚಾರಕ್ಕೆ ಬಂದಾಗ ನಾವು ವಿವಾಹಿತ ‘ಘರ್ವಾಲಿ’ಗಳ ಹಿಂದೆ ಇದ್ದೀವಿ ಎನ್ನುವುದು ನಿಜ. ನಾವು ಗಂಡಸರ ಲೈಂಗಿಕ ಆಕ್ರಮಣಕ್ಕೆ ಗುರಾಣಿಯಾಗಿ ನಿಂತು ಇತರ ಸ್ತೀಯರ ರಕ್ಷಣೆಯನ್ನು ಮಾಡಿದ್ದೇವೆ. ಸ್ತ್ರೀಯರಿಗೆ ಇಂತ ರಕ್ಷಣೆ ನನ್ನ ಗುಜರಾತಿನಲ್ಲಿ ಖಂಡಿತಾ ಇಲ್ಲ. ಈ ವೃತ್ತಿಯಲ್ಲಿ ನಾವು ಆನಂದ ಪಡುತ್ತಿದ್ದೇವೆ, ಸಂತೋಷದಿಂದ್ದೇವೆ ಎಂದು ನೀವು ಭಾವಿಸಿರಬಹುದು. ಖಂಡಿತ ಇಲ್ಲ. ಈ ವೃತ್ತಿಯನ್ನು ನಮ್ಮ ಮೇಲೆ ಹೇರಲಾಗಿದೆ. ಸಮಾಜವು ನಮಗೆ ಕೃತಜ್ಞತೆಗಳನ್ನು ಸಲ್ಲಿಸುವ ಬದಲು ನಮ್ಮನ್ನು ತಿರಸ್ಕಾರದಿಂದ ಕಾಣುತ್ತದೆ, ಅಸಹ್ಯಪಡುತ್ತದೆ. ಇದನ್ನು ಕಂಡು ನನಗೆ ತುಂಬಾ ದುಃಖವಾಗುತ್ತದೆ. ನಾವು ದೇಶದ ಗಡಿಗಳಲ್ಲಿ ಶತ್ರುಗಳ ವಿರುದ್ಧ ಹೋರಾಡುತ್ತಿರುವ ಸೈನಿಕರಂತೆ. ವ್ಯತ್ಯಾಸ ಏನೆಂದರೆ, ಸೈನಿಕರಿಗೆ ಪದಕ, ಪ್ರಶಸ್ತಿ ಕೊಟ್ಟರೆ ನಮಗೆ ತಿರಸ್ಕಾರ. ಏಕೆ?..’
ಸಭಿಕರು ಗಂಗೂಬಾಯಿಯ ಮಾತುಗಳನ್ನು ಕಿವಿಕೊಟ್ಟು ಆಲಿಸುತ್ತಿದ್ದರು. ಅವಳು ಭಾವೋದ್ವೇಗದಿಂದ ತನ್ನನ್ನೇ ಮರೆತಿದ್ದಳು. ‘ನಿಮ್ಮ ಬಳಿ ನನ್ನ ಪ್ರಶ್ನೆಗೆ ಖಂಡಿತ ಉತ್ತರವಿಲ್ಲ.’ ಅವಳು ಹೇಳಿದಳು. ‘ಏಕೆಂದರೆ ಈ ಸಮಸ್ಯೆಗೆ ನಿಮ್ಮದೂ ಕಾಣಿಕೆಯಿದೆ. ಲೈಂಗಿಕ ಕಾರ್ಯಕರ್ತೆಯರಿಗೆ ಸಮಾನತೆ ಕೊಡುವುದರಲ್ಲಿ ಇದರ ಪರಿಹಾರವಿದೆ. ಇದು ಯಾವಾಗ ಸಾಧ್ಯವಾಗುತ್ತದೋ, ಆಗ ತಾನೇತಾನಾಗಿ ಮಹಿಳೆಯರ ಸಬಲೀಕರಣವೂ ಆಗುತ್ತದೆ. ಹೈದರಾಬಾದಿನಂತ ಸಂಪ್ರದಾಯಸ್ಥ ನಗರದಲ್ಲಿ ಕೆಂಪುದೀಪದ ಪ್ರದೇಶಕ್ಕೆ ‘ಮೆಹಬೂಬ್ಕಿ ಮೆಹೆಂದಿ’ (ಪ್ರೀತಿಸುವವರ ಮೆಹೆಂದಿ) ಎಂಬ ಸುಂದರ ಹೆಸರಿನಲ್ಲಿ ಕರೆಯಲ್ಪಡುತ್ತಿರುವಾಗ ಬೊಂಬಾಯಿಯಂತ ಪ್ರಗತಿಪರ ನಗರದಲ್ಲಿ ಕಾಮಾಟಿಪುರವೆಂದರೆ ಏಕೆ ಹೇಸಿಗೆ ಉಂಟುಮಾಡುತ್ತದೆ? ಮುಗಿಸುವ ಮುನ್ನ ಇಲ್ಲೊಂದು ಉಧಾಹರಣೆಯನ್ನು ಕೊಡಬಯಸುತ್ತೇನೆ. ಎಲ್ಲೆಂದರಲ್ಲಿ ಗಲೀಜು ಮಾಡಬಾರದೆಂದು ನಾವು ಮನೆಯಲ್ಲೇ ಪಾಯಿಖಾನೆಯನ್ನು ನಿರ್ಮಿಸುತ್ತೇವೆ. ಹಾಗೆಯೇ ಪ್ರತಿ ಊರಲ್ಲೂ ಒಂದು ವೇಶ್ಯಾಗೃಹವಿರಲೇ ಬೇಕು. ಸರ್ಕಾರದ ಮುಂದೆ ನನ್ನ ಇದೊಂದೇ ಬೇಡಿಕೆ.’

ಗಂಗೂಬಾಯಿಯ ಬಾಷಣ ಮುಗಿಯುತ್ತಿದ್ದಂತೆ ಇಡೀ ಸಭೆ ಮೇಲೆದ್ದು ಕರತಾಡನ ಮಾಡಿತು. ಈ ವರೆಗೆ ವೇಶ್ಯೆಯರ ಬಗ್ಗೆ ಯಾರೂ ಇಷ್ಟೊಂದು ತರ್ಕಬದ್ಧವಾಗಿ ಮಾತನಾಡಿರಲಿಲ್ಲ.

****

ಗಂಗೂ ಬಾಯಿಯ ಅಜಾದ್ ಮೈದಾನಾದ ಬಾಷಣಕ್ಕೆ ಸ್ಥಳೀಯ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ದೊರೆತು ಅವಳ ಹೆಸರು ಮನೆಮಾತಾಯಿತು. ಹಲವಾರು ಮಂತ್ರಿಗಳು, ಪತ್ರಕಾರರು ಅವಳನ್ನು ಭೇಟಿಯಾಗಿ ಅವಳಿಗೆ ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಲಭಿಸಿತು.
1950-60 ರ ದಶಕದಲ್ಲಿ ಕಾಮಾಟಿಪುರದ ಲೈಂಗಿಕ ಕಾರ್ಯಕರ್ತೆಯರ ಕಾರ್ಯಕ್ಷೇತ್ರ ಶುಕ್ಲಾಜಿ ಸ್ಟ್ರೀಟ್ನಿಂದ ಮಾನಾಜಿ ರಾವ್ ಸ್ಟ್ರೀಟ್ ಮಧ್ಯೆ ಇರುವ ಕಾಮಾಟಿಪುರದ ಪಶ್ಚಿಮ ಭಾಗ, ಅಲೆಕ್ಸಾಂಡ್ರಿಯ ಸಿನೆಮಾದಿಂದ ಫೊರಾಸ್ ರೋಡ್ ಮತ್ತು ಜೈರಾಜ್ ಲೇನ್ವರೆಗೆ ಹಬ್ಬಿಕೊಂಡಿತ್ತು. ಲೈಂಗಿಕ ಕಾರ್ಯಕರ್ತೆಯರು ಮಾನಾಜಿ ಸ್ಟ್ರೀಟ್, ಮಧ್ಯ ಮತ್ತು ಉತ್ತರ ಕಾಮಾಟಿಪುರಕ್ಕೆ ಕಾಲಿಡುತ್ತಿರಲಿಲ್ಲ. ಆದರೂ, ಕಾಮಾಟಿಪುರದ ಏಳನೇ ಗಲ್ಲಿಯ ಜಂಕ್ಷನ್ನಲ್ಲಿರುವ ಮುನ್ಸಿಪಲ್ ಸ್ಕೂಲಿಗೆ ಹೋಗುವ ಮಕ್ಕಳು ಮತ್ತು ಕಾಮಾಟಿಪುರದಲ್ಲಿರುವ ದೇವಾಲಯಗಳಿಗೆ ಹೋಗಬೇಕಾದರೆ ವೇಶ್ಯಾಗೃಹಗಳನ್ನು ದಾಟಿಕೊಂಡೇ ಹೋಗಬೇಕಿತ್ತು. ಅಲ್ಲದೆ 1920 ರಲ್ಲಿ ಕಟ್ಟಿದ್ದ ಸೈಂಟ್ ಆಂಟನೀಸ್ ಹೈಸ್ಕೂಲಿನ ಪ್ರವೇಶ ಧ್ವಾರ ಬೆಲ್ಲಾಸಿಸ್ ರಸ್ತೆಗೆ ಹೊಂದಿಕೊಂಡೇ ಇತ್ತು. ಅದರ ಹಿಂದುಗಡೆಯೇ ಕಾಮಾಟಿಪುರದ 14ನೇ ಸ್ಟ್ರೀಟ್. ಇದರಲ್ಲಿ 250 ಲೈಂಗಿಕ ಕಾರ್ಯಕರ್ತೆಯರು ವಾಸವಾಗಿದ್ದರು. ಶಾಲೆಯ ಮೊದಲ ಮಹಡಿಯಲ್ಲಿ ನಿಂತು ನೋಡಿದರೆ ಈ ಗಲ್ಲಿ ಕಾಣಿಸುತ್ತಿತ್ತು.

1960 ರಲ್ಲಿ ಶಾಲೆಯ ಆಡಳಿತ ಮತ್ತು ಸುತ್ತಮುತ್ತಲಿನ ಜನರು ವೇಶ್ಯಾವಾಟಿಕೆ ಶಾಲಾ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯಲು ಇವರನ್ನು ಸ್ಥಳಾಂತರಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಯಾವುದೇ ಶಾಲೆಯ ಇನ್ನೂರು ಗಜಗಳ ಆಸುಪಾಸಿನಲ್ಲಿ ವೇಶ್ಯಾ ಧಂಧೆ ನಡೆಸಬಾರದೆಂಬ ಕಾನೂನನ್ನು ಆಡಳಿತ ಮಂಡಳಿ ಉಲ್ಲೇಕಿಸಿತ್ತು. ಎರಡೂ ಪಾರ್ಟಿಗಳ ಹಟಮಾರಿ ಧೋರಣೆಯಿಂದಾಗಿ ಸರ್ಕಾರ ನಡೆಸಿದ ರಾಜಿ ಪಂಚಾಯತಿ ಮುರಿದು ಬಿತ್ತು.
ಸಾರ್ವಜನಿಕ ಅಭಿಪ್ರಾಯವು ವೇಶ್ಯಾವಾಟಿಕೆಯ ವಿರುದ್ಧವಾಗತೊಡಗಿದಾಗ ಅಲ್ಲಿನ ಲೈಂಗಿಕ ಕಾರ್ಯಕರ್ತೆಯರು ಗಂಗೂಬಾಯಿಯ ಮೊರೆ ಹೊಕ್ಕರು. ಗಂಗೂಬಾಯಿ ಮಧ್ಯ ಪ್ರವೇಶಿಸುತ್ತಿದ್ದಂತೆಯೇ ಲೈಂಗಿಕ ಕಾರ್ಯಕರ್ತೆಯರ ಚಳುವಳಿಗೆ ಹೊಸ ದಿಶೆ ಲಭಿಸಿತು. ಕೊನೆಗೂ ಅವರಿಗೇ ಜಯ ಲಭಿಸಿತು.
ಗಂಗೂಬಾಯಿಯ ರಾಜಕೀಯ ಸಂಪರ್ಕಗಳಿಂದಾಗಿ ಕಾಣುತ್ತದೆ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಭಾರಿ ವೇಶ್ಯೆಯೊಬ್ಭಳಿಗೆ ಅಧಿಕೃತವಾಗಿ ಪ್ರಧಾನ ಮಂತ್ರಿಯವರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಆ ಹೊತ್ತಿನಲ್ಲಿ ಪಂಡಿತ್ ಜವಹರಲಾಲ್ ನೆಹರುರವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದರು.
ಗಂಗೂಬಾಯಿ ಕಟೇವಾಲಿಯ ಅಂತಿಮ ದಿನಗಳ ಬಗ್ಗೆ ಹೆಚ್ಚು ಮಾಹಿತಿ ದೊರಕುತ್ತಿಲ್ಲ. ಬಹಳಷ್ಟು ಜನರಿಗೆ ಗಂಗೂಬಾಯಿ ಕಟೇವಾಲಿ ಎಂದರೆ ಬಂಗಾರದ ಜರಿ ಅಂಚಿನ ಬಿಳಿ ಸೀರೆ, ಬಂಗಾರದ ಗುಂಡಿಗಳ ಬಿಳಿ ರವಿಕೆ ತೊಟ್ಟ ಹೆಂಗಸಿನ ಚಿತ್ರ ಕಣ್ಣಮುಂದೆ ಬರುತ್ತದೆ. ಬಂಗಾರದ ಒಡವೆಗಳ ಬಗ್ಗೆ ಗಂಗೂಬಾಯಿಗೆ ವಿಶೇಷ ವ್ಯಾಮೋಹವಿತ್ತು. (ಯಾವ ಭಾರತೀಯ ನಾರಿಗಿಲ್ಲ ಎನ್ನುತ್ತಿರಾ?). ತನ್ನ ಚಿನ್ನದ ಒಡವೆಗಳನ್ನು ಪ್ರದರ್ಶಿಸಲು ಅವಳಿಗೆ ಯಾವುದೇ ಸಂಕೋಚಗಳಿರಲಿಲ್ಲ. ಅವಳು ಚಿನ್ನದ ಕಟ್ಟಿನ ಕನ್ನಡಕವನ್ನು ಧರಿಸುತ್ತಿದ್ದಳು ಅಲ್ಲದೆ ಅವಳ ಒಂದು ಹಲ್ಲು ಕೂಡ ಚಿನ್ನದಾಗಿತ್ತು. ಆ ಕಾಲದಲ್ಲಿ ಕಡು ಕಪ್ಪು ಬಣ್ಣದ ಬೆಂಟ್ಲೀ ಕಾರಿನಲ್ಲಿ ತಿರುಗಾಡುತ್ತಿದ್ದ ವೇಶ್ಯೆ ಅವಳೊಬ್ಬಳೇ ಆಗಿದ್ದಿರಬೇಕು! ಅವಳು ಅಷ್ಟೊಂದು ಸಂಪತ್ತನ್ನು ಹೇಗೆ ಸಂಪಾದಿಸಿದಳೆಂದು ಈಗಲೂ ರಹಸ್ಯವಾಗಿಯೇ ಉಳಿದುಕೊಂಡಿದೆ. ಅವಳು ಹಲವಾರು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಳು. ಅವರೆಲ್ಲಾ ಅವಳ ಕಾಮಾಟಿಪುರದ ಹನ್ನೆರಡನೇ ಲೇನಿನ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದರು. ಸಾಮಾನ್ಯವಾಗಿ ಈ ಮಕ್ಕಳು ಅನಾಥರಾಗಿದ್ದರು. ಅವರ ಶಿಕ್ಷಣದ ಬಗ್ಗೆ ಅವಳು ವಿಶೇಷ ಗಮನ ಕೊಡುತ್ತಿದ್ದಳು. ಇಷ್ಟೆಲ್ಲಾ ಮಕ್ಕಳಲ್ಲಿ ಬಾಬ್ಬಿ ಎಂಬುವಳೊಬ್ಬಳೇ ಕಾಮಾಟಿಪುರದಲ್ಲಿ ವಾಸಿಸುತ್ತಿದ್ದಾಳೆ.

ಗಂಗೂಬಾಯಿಯ ಆಶ್ರಯದಲ್ಲಿ ಬೆಳೆದು ದೊಡ್ಡವಳಾದ ಒಬ್ಬಳು ಸಮಾಜ ಸೇವಕಿ ಅಭಿಪ್ರಾಯದಂತೆ ಗಂಗೂಬಾಯಿ ನಿಜವಾಗಿಯೂ ‘ಕಾಮಾಟಿಪುರದ ರಾಣಿ’ಯಾಗಿದ್ದಳು. ಇವತ್ತಿಗೂ ಕೂಡ ಗಂಗೂಬಾಯಿಯ ಕಟ್ಟು ಹಾಕಿದ ಚಿತ್ರಗಳು, ಮೂರ್ತಿಗಳು ಕಾಮಟಿಪುರದ ಕೆಲವು ವೇಶ್ಯಾಗೃಹಗಳಲ್ಲಿ ಕಾಣಸಿಗುತ್ತವೆ! ಅವಳ ಬಗ್ಗೆ ಈಗಿನ ವೇಶ್ಯೆಯರಿಗೆ ಏನೂ ಗೊತ್ತಿರದಿದ್ದರೂ ಅವಳ ಕೊಡುಗೆಯ ಅರಿವಿದೆ.
ಹಾಗಾದರೆ ಗಂಗೂಬಾಯಿ ವೇಶ್ಯೆಯ ವೇಷದಲ್ಲಿ ಅವತರಿಸಿದ್ದ ದೇವತೆಯೇ? ಅವಳಲ್ಲಿ ಏನೂ ದೋಷಗಳಿರಲಿಲ್ಲವೇ? ಎಲ್ಲವೂ ಹಾಲು ಸಕ್ಕರೆಯಾಗಿತ್ತೆ? ಬಾಬ್ಬಿ ಹೇಳುವಂತೆ ಗಂಗೂಬಾಯಿ ಬೆಳಿಗ್ಗೆ 6 ಗಂಟೆಗೆ ಎದ್ದಾಕ್ಷಣ ಚಹಾ ಕುಡಿಯುತ್ತಾ ಗುಜರಾತಿ ‘ಜನ್ಮಭೂಮಿ’ ಪತ್ರಿಕೆ ಓದುತ್ತಿದ್ದಳು. ನಂತರ ತಿಂಡಿ. ನಂತರ ನೆರೆಯವರ ಜೊತೆ ಕಾರ್ಡುಗಳನ್ನು ಆಡುವುದಕ್ಕೆ ಕುಳಿತುಕೊಳ್ಳುತ್ತಿದ್ದಳು. ಅವಳಿಗೆ ರಾಜಕಾರಣಿಗಳ, ಪತ್ರಕರ್ತರ ಸಹವಾಸವೂ ಇತ್ತು. ಬೀಡಿ ಸೇದುತ್ತಿದ್ದಳು. ‘ರಾಣಿ’ಛಾಪಿನ ಸರಾಯಿ ಕುಡಿಯುತ್ತಿದ್ದಳು. ಪಾನ್ ತಿನ್ನುತ್ತಿದ್ದಳು. ಅವಳು 1975-78 ಮಧ್ಯೆ ತೀರಿಕೊಂಡಳು. ಆ ನಂತರವೇ ಅವಳ ಕಟ್ಟು ಹಾಕಿದ ಚಿತ್ರಗಳು, ಮೂರ್ತಿಗಳು ಕಾಮಾಟಿಪುರದ ವೇಶ್ಯೆಯರ ರೂಮಿನ ಗೋಡೆಗಳ ಮೇಲೆ ರಾರಾಜಿಸಲು ಪ್ರಾರಂಭವಾಯಿತು.

ಒಂದು ಕಾಲದಲ್ಲಿ ಶ್ರೀಮಂತ ಬೀದಿಯೆಂದು ಪರಿಗಣಿತವಾಗಿದ್ದ ಕಾಮಾಟಿಪುರದ 12ನೇ ಲೇನು ಇವತ್ತು ಅದರ ದುರ್ಬಲ ಛಾಯೆ ಎನ್ನಬಹುದು. ಅಂಬಾಸಿಡರ್, ಮರ್ಸಿಡಿಸ್ ಮತ್ತು ಬೆಂಟ್ಲಿ ಕಾರುಗಳು ಓಡಾಡುತ್ತಿದ್ದ ಬೀದಿ ಇಂದು ಕೈಗಾಡಿಗಳ, ಬೀದಿ ನಾಯಿಗಳ ಮತ್ತು ಸಾಮಾನ್ಯ ಜನರ ಬೀದಿಯಾಗಿದೆ. ಈಗಿನ ಹನ್ನೆರಡನೇ ಲೇನಿನಲ್ಲಿ ಒಂದೋ ಎರಡೋ ವೇಶ್ಯಾಗೃಹಗಳಿರಬಹುದು.

ಗಂಗೂಬಾಯಿಯ ಜೀವನದ ಕೆಲವು ಆಧ್ಯಾಯಗಳು ದಂತಕತೆಗಳು ಎನ್ನಬಹುದಾದ ವರ್ಗಕ್ಕೆ ಸೇರಿದವಂತಾಗಿವೆ. ಅದರಲ್ಲೊಂದು ಅವಳ ಮತ್ತು ಪಂಡಿತ್ ಜವಹರ್ಲಾಲ್ ನೆಹರು ಮಧ್ಯದ ಭೇಟಿ ಮತ್ತು ಮಾತುಕತೆ. ಇದಕ್ಕೆ ಯಾವುದೇ ರುಜುವಾತುಗಳಿಲ್ಲದಿದ್ದರೂ ಕಾಮಾಟಿಪುರದ ಲೈಂಗಿಕ ಕಾರ್ಯಕರ್ತರ ಮಧ್ಯೆ ಪ್ರಚಲಿತವಾಗಿರುವಂತ ಒಂದು ದಂತಕತೆ. ಗಂಗೂಬಾಯಿ ನೆಹರೂರವರನ್ನು ಭೇಟಿಮಾಡಿದ ಸಮಯದಲ್ಲಿ ತನ್ನ ಮೋಡಿ ಮಾತುಗಳಿಂದ ಬೊಂಬಾಯಿಯಲ್ಲಿ ವೇಶ್ಯೆಯರ ಅವಶ್ಯಕತೆ ಮತ್ತು ವೇಶ್ಯಾವಾಟಿಕೆ ಮುಂದುವರೆಸಿಕೊಂಡು ಹೋಗುವ ಅಗತ್ಯತೆಯನ್ನು ನೆಹರುರವರಿಗೆ ಮನದಟ್ಟು ಮಾಡಿಸಿದ್ದಳಂತೆ.
‘ಇಷ್ಟು ಬುದ್ಧವಂತಳಾದ ನೀನು ಒಬ್ಬ ಸುಂಸ್ಕøತ ಮನೆತನದ ಹುಡುಗನೊಡನೆ ಮದುವೆಯಾಗಿ ಸುಖವಾಗಿ ಜೀವನ ನಡೆಸಬಹುದಿತ್ತಲ್ಲ?’ ಎಂದು ನೆಹರು ಕೇಳುತ್ತಾರಂತೆ. ಆಗ ಗಂಗೂ, ‘ನೀವು ನನಗೆ ಶ್ರೀಮತಿ ನೆಹರುರವರ ಪಟ್ಟ ಕೊಟ್ಟರೆ ನಾನು ತಯಾರು!’ ಅಂದಳಂತೆ. ಇದನ್ನು ಕೇಳಿ ನೆಹರೂರವರು ಅಘಾತಗೊಂಡಾಗ ಗಂಗೂಬಾಯಿ, ‘ಕ್ಷಮಿಸಿ ಪ್ರಧಾನಮಂತ್ರಿಗಳೇ, ಸಲಹೆ ಕೊಡುವುದು ಸುಲಭ ಆದರೆ ಕಾರ್ಯಗತ ಮಾಡುವುದು ಕಷ್ಟ.’ ಎಂದಳಂತೆ. ನೆಹರು ಮತ್ತೆ ಮಾತನಾಡಲಿಲ್ಲವಂತೆ.

ಸೈಂಟ್ ಆಂಟೋನಿಸ್ ಶಾಲೆಯ ಬಗ್ಗೆ ಹೇಳುವುದಾದರೆ, ‘ಕಾಮಾಟಿಪುರದಲ್ಲಿ ಶಾಲೆಗಿಂತ ಪುರಾತನವಾಗಿರುವುದು ವೇಶ್ಯಾವಾಟಿಕೆ. ಇಲ್ಲಿ ಶಾಲೆ ಕಟ್ಟುವ ಮೊದಲು ಶಾಲೆಯ ಆಡಸಳಿತ ಮಂಡಳಿ ಎಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ಪರಾಮರ್ಶಿಸಬೇಕಿತ್ತು.’ ಎಂದು ಗಂಗೂಬಾಯಿ ವಾದ ಮಂಡಿಸಿದ್ದಳು. ಈ ಕಾನೂನು ಸಮರದಲ್ಲಿ ಕೊನೆಗೆ ವಿಜಯಿಯಾಗಿದ್ದೂ ಅವಳೇ!.

****

(S.Hussain Zaidi ಮತ್ತು Jane Borges ಇವರ Mafia Queens of Bombay ಪುಸ್ತಕದ ‘The Matriarch of Bombay’ ಆಧ್ಯಾಯದ ಅನುವಾದ)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x