ಸ್ವಾರ್ಥಿಗಳಾಗಿ – ಅಗತ್ಯವಿದ್ದವರಿಗೆ ನೆರವಾಗಿ: ಎಂ.ಎನ್.ಸುಂದರ ರಾಜ್, ಶಿವಮೊಗ್ಗ


ಇದೊಂದು 100 ವರ್ಷದ ಕಥೆಯಾದರೂ, ಅದರಿಂದ ದೊರಕುವ ಪಾಠ ಇಂದಿಗೂ ಪ್ರಸ್ತುತವಾದದ್ದು. 1892ನೆಯ ಇಸವಿ., ಸ್ಥಳ ಸ್ಟಾಂಡ್ ಫೋರ್ಡ್ ವಿಶ್ವವಿದ್ಯಾನಿಲಯ. 18 ವರ್ಷದ ಯುವ ವಿದ್ಯಾರ್ಥಿಯೊಬ್ಬ ಕಾಲೇಜಿನ ಶುಲ್ಕ ಕಟ್ಟಲು ಹೆಣಗಾಡುತ್ತಿದ್ದ. ಅವನೊಬ್ಬ ಅನಾಥ, ಯಾವ ಬಂಧುಗಳೂ ಇಲ್ಲ, ಹಣ ಹೊಂದಿಸುವುದು ಹೇಗೆಂದು ಒದ್ದಾಡುತ್ತಿದ್ದ. ಆಗ ಅವನಿಗೊಂದು ಉಪಾಯ ಹೊಳೆಯಿತು. ಅವನು ಮತ್ತು ಅವನ ಗೆಳೆಯನೊಬ್ಬ ವಿಶ್ವ ವಿದ್ಯಾನಿಲಯದ ಆವರಣÀದಲ್ಲಿ ಒಂದು ಸಾಂಸ್ಕøತಿಕ ಕಾರ್ಯಕ್ರಮವನ್ನೇರ್ಪಡಿಸಿ ಹಣ ಸಂಪಾದಿಸಿ ಕಾಲೇಜಿನ ಶುಲ್ಕ ಭರ್ತಿ ಮಾಡುವುದು. ಅದಕ್ಕಾಗಿ ಅಂದಿನ ಪ್ರಸಿದ್ಧ ಪಿಯಾನೋ ವಾದಕ ಇಗ್ನೆಸ್ ಪೆಡೆವರಸ್ಕಿ ಎಂಬ ಕಲಾವಿದನನ್ನು ಗೊತ್ತುಮಾಡಲಾಯಿತು. ಆತ ತನಗೆ 2000 ಡಾಲರ್ ನೀಡಿದರೆ ಮಾತ್ರ ಬರುವುದಾಗಿ ತಿಳಿಸಿದ. ಸರಿ ಕಾರ್ಯಕ್ರಮ ಮುಗಿದ ಮೇಲೆ ಹಣ ನೀಡುವುದಾಗಿ ಒಪ್ಪಂದವೂ ಆಯಿತು. ಯುವಕರು ಕಾರ್ಯಕ್ರಮ ಸಿದ್ಧತೆ ಮಾಡಿಕೊಂಡರು. ಕಾರ್ಯಕ್ರಮದ ದಿನವೂ ಬಂತು. ಕಾರ್ಯಕ್ರಮ ಅದ್ಭುತವಾಗಿ ನಡೆಯಿತು. ಆದರೆ ದುರದೃಷ್ಟವೆಂದರೆ ಅವರು ನಿರೀಕ್ಷಿಸಿದಷ್ಟು ಟಿಕೇಟ್ ಖರ್ಚಾಗದೆ ಕೇವಲ 1600 ಡಾಲರ್ ಮಾತ್ರ ಸಂಗ್ರಹವಾಯಿತು. ಅವರು ಅದನ್ನೇ ಪೆಡೆವರಸ್ಕಿ ಯವರಿಗೆ ನೀಡಿ, ಇನ್ನು ಉಳಿದ 400 ಡಾಲರ್ ಗಳಿಗೆ ಒಂದು ಚೆಕ್ ನೀಡಿ ಆದಷ್ಟು ಬೇಗ ಹಣ ತುಂಬಿಸುವುದಾಗಿ ಭರವಸೆ ನೀಡಿದರು. “ಅದು ಸಾಧ್ಯವಿಲ್ಲ” ಎಂದವರೇ ಪೆಡೆವರಸ್ಕಿ ಆ ಚೆಕ್ಕನ್ನು ಹರಿದು ಹಾಕಿ ಹೇಳಿದರು, “ಗೆಳೆಯರೇ, ನೀವು ಕಾರ್ಯಕ್ರಮಕ್ಕೆ ಖರ್ಚು ಮಾಡಿರುವ ಹಣ ಮತ್ತು ನಿಮ್ಮ ಕಾಲೇಜಿನ ಶುಲ್ಕಕ್ಕಾಗಿ ವೆಚ್ಚವಾಗುವ ಹಣ ಎರಡನ್ನೂ ಈ 1600 ಡಾಲರಿನಲ್ಲಿ ಮುರಿದುಕೊಂಡು ಎಷ್ಟು ಉಳಿಯುತ್ತದೆಯೋ ಅಷ್ಟನ್ನು ಮಾತ್ರ ನನಗೆ ನೀಡಿರಿ” ಎಂದಾಗ ಗೆಳೆಯರಿಬ್ಬರಿಗೆ ಆಶ್ಚರ್ಯ ಮತ್ತು ಸಂತೋಷ. ಅವರು ಕಲಾವಿದರಿಗೆ ತಮ್ಮ ಹೃತ್ಪೂರ್ವಕ ಧನ್ಯವಾದ ತಿಳಿಸಿ, ಕೃತಜ್ಞತೆ ಅರ್ಪಿಸಿದರು.

ಇದೊಂದು ಸಣ್ಣ ಸಹಾಯವಿರಬಹುದು. ಆದರೆ ಲೋಕದ ಕಣ್ಣಿಗೆ ಪೆಡೆವರಸ್ಕಿ ಒಬ್ಬ ದೊಡ್ಡ ಮಾನವೀಯ ಗುಣಗಳನ್ನು ಹೊಂದಿದ ಮಹಾನ್ ವ್ಯಕ್ತಿಯಾಗಿ ಗೋಚರಿಸಿದ. ಒಪ್ಪಂದದಂತೆ ಅವನು ಹಣವನ್ನು ನಿರ್ದಾಕ್ಷಿಣ್ಯವಾಗಿ ಹಣ ಪಡೆಯಬಹುದಾಗಿತ್ತು. ಆದರೆ ಅವನೇಕೆ ಈ ಇಬ್ಬರು ಯುವಕರಿಗೆ ಸಹಾಯ ಮಾಡಿದ ಗೊತ್ತಿಲ್ಲ. ಇಂತಹ ಅನೇಕ ಘಟನೆಗಳು ನಮ್ಮ ಜೀವನದಲ್ಲೂ ಸಂಭವಿಸಬಹುದು.

ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡುವ ಅನೇಕ ಅವಕಾಶಗಳು ನಮಗೆ ದೊರೆಯಬಹುದು. ಆದರೆ ”ಇವನಿಗೆ ಸಹಾಯ ಮಾಡಿದರೆ ನನಗೇನು ಲಾಭ?” ಎಂದು ಯೋಚಿಸುವವರೇ ಜಾಸ್ತಿ. ನಾವು ಕೇವಲ ನಮಗೋಸ್ಕರ ಯೋಚಿಸುತ್ತೇವೆ. ನಾವು ಮಾಡಿದ ಅಲ್ಪ ಸಹಾಯಕ್ಕೆ ಪತ್ರಿಕೆಗಳಲ್ಲಿ ಪ್ರಚಾರ ಬಯಸುತ್ತೇವೆ. ಆದರೆ ದೊಡ್ಡ ಮನಸ್ಸಿನವರು ಹಾಗೆ ಯೋಚಿಸುವುದಿಲ್ಲ. ಬೇರೆಯವರು ತಮ್ಮನ್ನು ಹೊಗಳಲಿ ಎಂದಾಗಲೀ, ತಮ್ಮನ್ನು ಕರೆದು ಸನ್ಮಾನಿಸಲಿ ಎಂದಾಗಲೀ ಬಯಸುವುದಿಲ್ಲ. ಸಹಾಯಕ್ಕೆ ಪ್ರತಿಯಾಗಿ ಅವರು ಏನನ್ನೂ ಬಯಸುವುದಿಲ್ಲ. ಸಹಾಯ ಪಡೆದವರಿಗೆ ಒಳ್ಳೆಯದಾಗಲಿ ಎಂಬ ಸದುದ್ದೇಶ ಮಾತ್ರ ಇರುತ್ತದೆ.
ನಿಮಗೆ ಆಶ್ಚರ್ಯವಾಗಬಹುದು, ಪೆಡೆವರಸ್ಕಿ ಮುಂದೆ ಪೋಲೆಂಡಿನ ಪ್ರಧಾನ ಮಂತ್ರಿಯಾದರು. ಒಳ್ಳೆಯ ಆಡಳಿತಗಾರರಾಗಿದ್ದ ಅವರನ್ನು ಜನ ತುಂಬಾ ಗೌರವಿಸುತ್ತಿದ್ದರು. ದುರದೃಷ್ಟವಶಾತ್ ಪ್ರಪಂಚ ಮಹಾಯದ್ಧ ಪ್ರಾರಂಭವಾಯಿತು. ಪೋಲೆಂಡ್ ದೇಶ ಯುದ್ಧಕ್ಕೆ ಸಿಲುಕಿ ನಲುಗಿಹೋಯಿತು. ಜನ ಹಸಿವಿನಿಂದ ಕಂಗಾಲಾದರು. ಸರಿ ಸುಮಾರು 1.5 ಮಿಲಿಯ ಜನರ ಗೋಳು ಹೇಳತೀರದಾಯಿತು. ಪೆಡೆವರಸ್ಕಿ ತಡಮಾಡದೆ ಅಮೇರಿಕಾದ ಮೊರೆಹೋದರು. ಸಹಾಯಕ್ಕಾಗಿ ಮನವಿ ಮಾಡಿದರು. ಹರ್ಬರ್ಟ್ ಹೂವರ್ ಎಂಬಾತ ಅಮೇರಿಕಾದ ಆಹಾರ ಮತ್ತು ಪರಿಹಾರ ಆಡಳಿತದ ಮುಖ್ಯಸ್ಥರಾಗಿದ್ದರು. ಅವರು ಮುಂದೆ ಅಮೇರಿಕಾದ ಅಧ್ಯಕ್ಷರೂ ಆದರು . ಅವರು ತಕ್ಷಣ ಪೋಲೆಂಡಿನ ಮನವಿಯನ್ನು ಪುರಸ್ಕರಿಸಿ ಆ ದೇಶಕ್ಕೆ ಅಗತ್ಯವಾದ ಎಲ್ಲ ಪರಿಹಾರ ಸಾಮಗ್ರಿಗಳನ್ನೂ, ಆಹಾರ ಪದಾರ್ಥಗಳನ್ನೂ ಹೇರಳವಾಗಿ ಕಳುಹಿಸಿದರು. ಇದರಿಂದ ಪೋಲೆಂಡಿಗೆ ಆವರಿಸಿದ್ದ ಹಸಿವಿನ ಕರಿನೆರಳು ದೂರವಾಗಿತ್ತು. ಹೋವರ್ ಅವರಿಗೆ ಕೃತಜ್ಞತೆ ಅರ್ಪಿಸಲು ಸ್ವತಃ ಪ್ರಧಾನ ಮಂತ್ರಿ ಪೆಡೆವರಸ್ಕಿ ಅಮೇರಿಕಾಕ್ಕೆ ತೆರಳಿದರು. ಅವರನ್ನು ಕಂಡು ಪೋಲೆಂಡ್ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಆಗ ಹೋವರ್ ಹೇಳಿದರು, “ನೀವು ನನಗೆ ಧನ್ಯವಾದ ಅರ್ಪಿಸುವ ಅವಶ್ಯಕತೆ ಇಲ್ಲ. ಬದಲಾಗಿ ನಾನೇ ನಿಮಗೆ ಕೃತಜ್ಞತೆ ಅರ್ಪಿಸಬೇಕು. ನಿಮಗೆ ನೆನಪಿರಬೇಕು, ಹಲವು ವರ್ಷಗಳ ಹಿಂದೆ ನೀವು ಇಬ್ಬರು ಯುವಕರಿಗೆ ಸಂಗೀತ ಕಛೇರಿ ನಡೆಸಿ ಓದಲು ಸಹಾಯ ಮಾಡಿದಿರಿ. ಆ ಯುವಕರಲ್ಲಿ ನಾನೂ ಒಬ್ಬ” ಎಂದಾಗ ಪೆಡೆವರಸ್ಕಿ ಆವಾಕ್ಕಾದರು. ತಾನು ಎಂದೋ ಮಾಡಿದ ಸಹಾಯ ಇಷ್ಟೊಂದು ಪರಿಣಾಮ ಬೀರಿದೆ ಎಂದು ತಿಳಿದಾಗ ಅವರಿಗೆ ಸಹಾಯದ ಪ್ರಾಮುಖ್ಯತೆ ತಿಳಿಯಿತು. ಆನಂದ ಭಾಷ್ಪ ಕಣ್ಣಿನಲ್ಲಿ ತೇಲಿಬಂತು.

ಆದ್ದರಿಂದ ಇಂದು ನೀವು ಸ್ವಲ್ಪ ಸ್ವಾರ್ಥಿಗಳಾಗಿ. ಅಗತ್ಯವಿದ್ದವರಿಗೆ ಸಹಾಯ ಮಾಡಿ ! ಇಷ್ಟು ಮಾಡಿದರೆ ಸಾಕು. ಏನನ್ನೂ ಅದಕ್ಕೆ ಪ್ರತಿಯಾಗಿ ನಿರೀಕ್ಷಿಸಬೇಡಿ. ಆಗ ನೋಡಿ ಇಡೀ ವಿಶ್ವ ಅದ್ಭುತವಾಗಿ ತೋರುತ್ತದೆ.
ಎಂ.ಎನ್.ಸುಂದರ ರಾಜ್, ಶಿವಮೊಗ್ಗ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x