ಗುರುಗಳನ್ನು ಗೌರವಿಸಿ ಗೌರವ ಹೆಚ್ಚಿಸಿಕೊಂಡವರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸೆಪ್ಟಂಬರ್ 5 ಡಾ!! ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ. ಅದನ್ನೇ ಭಾರತದಲ್ಲಿ ಶಿಕ್ಷಕರ ದಿನ ಎಂದು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅಕ್ಟೋಬರ್ 5 ನ್ನು ವಿಶ್ವ ಶಿಕ್ಷಕರ ದಿನ ಎಂದು ಆಚರಿಸುವರು. ನಿಜವಾಗಿಯೂ ಶಿಕ್ಷಕರ ದಿನಾಚರಣೆಯನ್ನು ಸಮಾಜ ಆಚರಿಸಬೇಕು. ಸಮಾಜದಲ್ಲಿನ ಸಂಘ – ಸಂಸ್ಥೆಗಳು ಆಚರಿಸಿದರೆ ಶಿಕ್ಷಕರಿಗೆ ಗೌರವ. ಅಷ್ಟೇ ಅಲ್ಲ ಆ ಸಂಘ ಸಂಸ್ಥೆಗಳಿಗೂ ಗೌರವ ! ಸಮಾಜ ಶಿಕ್ಷಕರ ದಿನವನ್ನು ಆಚರಿಸದಿರುವುದರಿಂದ ಶಿಕ್ಷಕರೇ ಅವರ ದಿನವನ್ನು ಅವರೇ ಆಚರಿಸಿಕೊಳ್ಳುವಂತಾಗಿರುವುದು ಅವರೇ ಅವರ ಬೆನ್ನನ್ನು ತಟ್ಟಿಕೊಂಡಂತಾಗುತ್ತಿದೆ. ಶ್ರೇಷ್ಠ ಶಿಕ್ಷಕನೂ ದೇಶದ ರಾಷ್ಟ್ರಪತಿಯೂ ಆಗಿದ್ದ ಡಾ!! ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನವನ್ನೇ ಶಿಕ್ಷಕರ ದಿನ ಎಂದು ಆಚರಿಸುವುದರಿಂದ ಅವರ ಸ್ಮರಣೆ ಮಾಡುವುದು ಗುರುವೃಂದಕ್ಕೆ ಗೌರವದ ವಿಷಯ! ಶಿಕ್ಷಕರು ಮಕ್ಕಳ ಮನದಲ್ಲಿನ ನಕಾರಾತ್ಮಕ ಅಂಶಗಳನ್ನು ಕಿತ್ತೊಗೆದು ಇದ್ದ ಸಕಾರಾತ್ಮಕ ಅಂಶಗಳನ್ನು ಪೋಷಿಸಿ ಇಲ್ಲದ, ಇರಲೇಬೇಕಾದ ಸಕಾರಾತ್ಮಕ ಅಂಶಗಳನ್ನು ತುಂಬಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತಿರುವುದರಿಂದ, ಆ ಮೂಲಕ ಉತ್ತಮ ಸಮಾಜವನ್ನು ಸೃಜಿಸುತ್ತಿರುವುದರಿಂದ, ದೇಶದ ಭವಿಷ್ಯವನ್ನು ಭವ್ಯವಾಗಿಸುವವರ ರೂಪಿಸುತ್ತಿರುವುದರಿಂದ ಶಿಕ್ಷಕರ ದಿನಾಚರಣೆಯನ್ನು ಸಮಾಜ ಆಚರಿಸುವುದು ಅರ್ಥಪೂರ್ಣ!

ಅಧಿಕಾರಿಗಳಿಲ್ಲದೆ ವ್ಯವಸ್ಥಿತವಾದ ಆಡಳಿತವಿಲ್ಲ!
ಜಡ್ಜ್ ಇಲ್ಲದಿದ್ದರೆ … ನ್ಯಾಯದಾನವಿಲ್ಲ!
ಡಾಕ್ಟರಿಲ್ಲದಿದ್ದರೆ … ರೋಗಿಗಳಿಗೆ ಮುಕ್ತಿಯಿಲ್ಲ!
ಇಂಜಿನಿಯರಿಲ್ಲದಿದ್ದರೆ … ವ್ಯವಸ್ಥಿತ ಟಿಕ್ನಾಲಜಿಯಿಲ್ಲ!
ಸುಶ್ರೂಶಕಿಯರಿಲ್ಲದಿರೆ ರೋಗಿಗಳಿಗುಪಚಾರವೇ ಇಲ್ಲ!
ಪೋಲೀಸ್ ಇಲ್ಲದಿದ್ದರೆ .. ಸಮಾಜಕ್ಕೆ ಭದ್ರತೆಯಿಲ್ಲ!
ಸೋಲ್ಡ್ಜರ್ ಇಲ್ಲದಿದ್ದರೆ … ದೇಶಕ್ಕೆ ರಕ್ಷಣೆಯೇ ಇಲ್ಲ!
……………………………….
ಶಿಕ್ಷಕರು ಇಲ್ಲದಿದ್ದರೆ
ಮೇಲಿನ ಯಾರೂ ಇಲ್ಲ!
ಅಷ್ಟೇ ಅಲ್ಲ, ಉತ್ತಮ ನಡೆ – ನುಡಿ, ಉತ್ತಮ ಸಂಸ್ಕಾರ, ಸಂಸ್ಕೃತಿ, ಸದಾಚಾರ, ಸನ್ನಡತೆ, ಶಿಸ್ತು, ಶಾಂತಿ, ಸಹಬಾಳ್ವೆ, ಉತ್ತಮ ವ್ಯವಸ್ಥೆ, ನಯ – ವಿನಯ, ಆಚಾರ – ವಿಚಾರ, ವಿಮರ್ಶೆ , ವೈಚಾರಿಕತೆ, ವಿಜ್ಞಾನ … ಯಾವುದೂ ಇಲ್ಲ! ಇದನ್ನು ಅರ್ಥ ಮಾಡಿಕೊಂಡು ಗುರುವನ್ನು ಗೌರವಿಸಬೇಕು.

ಗೌರವ ಅನ್ನುವಂತಹದ್ದು ಸುಮ್ಮನೆ ಬರುವಂತಹದ್ದಲ್ಲ! ಸಂಪಾದಿಸಬೇಕು. ಕೆಲವರಿಗೆ ಗೌರವ ತಾವು ಹೊಂದಿದ ಆಧಿಕಾರ ಮತ್ತು ಸ್ಥಾನದಿಂದ ಬರುತ್ತದೆ. ಅಧಿಕಾರ ಮತ್ತು ಉನ್ನತ ಸ್ಥಾನ ಶಾಶ್ವತವಲ್ಲ! ಅದನ್ನು ಎಂದಾದರೂ ಒಂದು ದಿನ ಕಳೆದುಕೊಳ್ಳಬೇಕಾಗುತ್ತದೆ. ಹಾಗೆ ಕಳೆದುಕೊಂಡವರು ಅದರೊಂದಿಗೆ ಅದಕ್ಕೆ ಸಂಬಂಧಿಸಿದ ಗೌರವವನ್ನೂ ಕಳೆದುಕೊಳ್ಳುತ್ತಾರೆ. ಅದರೆ ಕೆಲವರು ತಮ್ಮ ಅಧಿಕಾರ ಮತ್ತು ಉನ್ನತ ಸ್ಥಾನ ಕಳೆದುಕೊಂಡಾಗಲೂ ಮೊದಲಿಗಿಂತಲೂ ಹೆಚ್ಚಾಗಿ ಗೌರವಿಸಲ್ಪಡುತ್ತಾರೆ. ಡಾ!! ಅಬ್ದುಲ್ ಕಲಾಮ್ ಅಂತಹ ಗೌರವ ಹೆಚ್ಚಿಸಿಕೊಂಡವರಲ್ಲಿ ಒಬ್ಬರು! ಅದೇ ನಿಜವಾದ ಗೌರವ! ಅಧಿಕಾರ ಮತ್ತು ಉನ್ನತ ಸ್ಥಾನದಲ್ಲಿದ್ದವರ ನಡವಳಿಯನ್ನು ಅದು ಅವಲಂಭಿಸಿರುತ್ತದೆ. ಶಿಕ್ಷಕರು ಉತ್ತಮ ಜ್ಞಾನ, ನಡವಳಿ, ಕಲಿಸುವಿಕೆಯಿಂದ ರಾಧಾಕೃಷ್ಣನ್ ರಂತೆ ಗೌರವವನ್ನು ಹೆಚ್ಚಿಸಿಕೊಳ್ಳಬೇಕಿದೆ. ದೇಶದಲ್ಲಿನ ಜನ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿದ್ದಾರೆ ಆದರೆ ಅವರಿಗೆ ತಮ್ಮ ವೃತ್ತಿಯಿಂದ ಗೌರವ ಲಭಿಸುವುದಿಲ್ಲ! ಆದರೆ ಶಿಕ್ಷಕರಿಗೆ ಮಾತ್ರ ತಮ್ಮ ವೃತ್ತಿಯಿಂದನೇ ಗೌರವ ಲಭಿಸುತ್ತಿದೆ! ಡಾಕ್ಟರ್, ಇಂಜಿನಿಯರ್, ಡಿಸಿ, ತಹಶೀಲ್ದಾರ್ ಮುಂತಾದವರು ತಮಗೆ ಕಲಿಸಿದ ಗುರು ಎದುರಾದಾಗ ಅವರಿಗೆ ಇಂದಿಗೂ ಗೌರವ ಕೊಡುತ್ತಿರುವುದುನ್ನು ಕಂಡು ಇದನ್ನು ಅರ್ಥಮಾಡಿಕೊಳ್ಳಬಹುದು! ಡಾಕ್ಟರ್, ಇಂಜಿನಿಯರ್, ಡಿಸಿ, ವಿಜ್ಞಾನಿ ಮುಂತಾದವರ ಕೀರ್ತಿ, ಯಶಸ್ಸು, ಸಾಧನೆಗೆ ಸೋಪಾನವಾದವರು ಶಿಕ್ಷಕರು. ಆದ್ದರಿಂದ ಅವರಿಗೆ ಅ ಗೌರವ ಸಲ್ಲಲೇಬೇಕು. ಗೌರವಕ್ಕಿಂತಾ ಅಮೂಲ್ಯ ವಸ್ತು ಯಾವುದೂ ಇಲ್ಲ! ಇದನ್ನು ತನ್ನ ವೃತ್ತಿ ಮಾತ್ರದಿಂದನೇ ಸಂಪಾದಿಸಿದ ಗುರು ಧನ್ಯಸ್ಯಧನ್ಯ? ಇದನ್ನು ದುಡ್ಡು ಕೊಟ್ಟು ಪಡೆಯಲಾಗುವುದಿಲ್ಲ! ತಮ್ಮ ವೃತ್ತಿಯಿಂದ ಲಭಿಸಿದ ಗೌರವವನ್ನು ಶಿಕ್ಷಕ ತಮ್ಮ ನಡವಳಿಯಿಂದ ಪ್ರಕಾಶಮಾನವಾಗುವಂತೆ ಬೆಳಗಬಹುದು! ಗೌರವ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಗುರುಗಳು ವಿದ್ಯಾರ್ಥಿಗಳನ್ನು, ವೃತ್ತಿಯನ್ನು ಪ್ರೀತಿಸಿ ಆದರ್ಶ ಮೌಲ್ಯಯುತ ವ್ಯಕ್ತಿತ್ವ ಹೊಂದಬೇಕು. ಆಗ ಸಮಾಜ ತನ್ನಷ್ಟಕ್ಕೆ ತಾನೇ ಗೌರವ ಕೊಡುತ್ತದೆ! ತಾನು ಸಂಪಾದಿಸದೆ ಸುಖಾಸುಮ್ಮಾನೆ ತನಗೆ ಅದು ಸಿಗಬೇಕೆಂದು ಬಯಸುವುದು ಸರಿಯಲ್ಲ! ಗುರುಗಳಾದವರು ದೇಶದ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಹೊತ್ತವರು. ಪ್ರಯುಕ್ತ ತಮಗೆ ಗೌರವ ಬರುವಂತೆ ವೃತ್ತಿಯಲ್ಲಿ ತೊಡಗಿ ಉತ್ತಮ ನಡೆ ನುಡಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು, ಉತ್ತಮವಾಗಿ ದೇಶದ ಭಾವಿ ಭವಿಷ್ಯಗಳ ರೂಪಿಸುವವರ ರೂಪಿಸುವುದು ಅವಶ್ಯಕ. ಹಾಗೂ ಅಂತಹವರನ್ನು ಸಮಾಜ ಗುರುತಿಸಿ, ಗೌರವಿಸಿ ತನ್ನ ಗೌರವ ಹೆಚ್ಚಿಸಿಕೊಳ್ಳುವುದು ಉತ್ತಮ ಸಮಾಜದ ಲಕ್ಷಣ! ಶಿಕ್ಷಕರನ್ನು ಗೌರವಿಸುವುದೆಂದರೆ ಅವರಿಗೆ ವರುಷದಲ್ಲಿ ಎಂದಾದರೂ ಒಂದು ದಿನ ವೇದಿಕೆಗಳಲಿ ಹಾರ ಹಾಕಿ, ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸುವುದೆಂದು ಅರ್ಥವಲ್ಲ! ನಿತ್ಯ ಸಮಾಜದಲ್ಲಿ ಅವರಿಗೆ ಗೌರವ ಸಿಗಬೇಕು ಹಿಂದೆಲ್ಲಾ ಹಾಗೆ ಸಿಗುತ್ತಿತ್ತು! ಅದು ನಿಜವಾದ ಗೌರವ! ವರುಷಕ್ಕೊಮ್ಮೆ ನಿಗಧಿತ ಕ್ಷೇತ್ರದಲ್ಲಿ ಕೆಲಸಿಸುವ ಶಿಕ್ಷಕರಲ್ಲೇ ಉತ್ತಮ ಸಾಧನೆ ಮಾಡಿದ ಕೆಲವು ಶಿಕ್ಷಕರನ್ನು ಉತ್ತಮ ಶಿಕ್ಷಕರೆಂದು ಗೌರವಿಸುವ ಪರಂಪರೆ ಶಿಕ್ಷಣ ಇಲಾಖೆಯಿಂದ ಪ್ರತಿ ವರುಷ ಜರುಗುತ್ತದೆ. ಅದು ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸುವುದರಿಂದ ತಮ್ಮ ಸಾಧನೆಯನ್ನು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡುತ್ತಿರುವುದರಿಂದ, ಇತರರನ್ನೂ ಉತ್ತಮ ಶಿಕ್ಷಕನಾಗಲು ಪ್ರೇರೇಪಿಸುವುದರಿಂದ ಅದು ಒಳ್ಳೆಯ ಪರಂಪರೆ!

ಶಿಕ್ಷಕರು, ಶಿಕ್ಷಣ ಇಲಾಖೆ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದಕ್ಕಿಂತ ಶಿಕ್ಷಣ ಇಲಾಖೇತರ ಸಂಘ ಸಂಸ್ಥೆಗಳು, ಸಮಾಜ ಶಿಕ್ಷಕರನ್ನು ಗೌಗವಿಸುವುದು ಸೂಕ್ತ! ಇತ್ತೀಚೆಗೆ ಶಿಕ್ಷಣ ಇಲಾಖೇತರ ಕೆಲವು ಸಂಘ ಸಂಸ್ಥೆಗಳು ಶಿಕ್ಷಕರ ಜವಾಬ್ದಾರಿಯನ್ನು ಗುರುತಿಸಿ ಶಿಕ್ಷಕರನ್ನು ಗೌರವಿಸುವ ಉತ್ತಮ ಸಂಪ್ರದಾಯನ್ನು ಆರಂಭಿಸಿ ಉತ್ತಮ ಪರಂಪರೆಗೆ ನಾಂದಿ ಹಾಡಿವೆ! ಹೊಳಲ್ಕೆರೆ ಪಟ್ಟಣದ ಪತ್ರಿಕೆಯ ವರದಿಗಾರರ ಸಂಘ ಅಸ್ತಿತ್ವಕ್ಕೆ ಬಂದು ಅಂತಹ ಒಂದು ಉತ್ತಮ ಕಾರ್ಯ ಮಾಡುತ್ತಿದೆ. ಅವರು ತಮ್ಮ ವೃತ್ತಿಯನ್ನು ನಿರ್ವಹಿಸುತ್ತಾ ಉತ್ತಮ ಸಾಧನೆ ಮಾಡಿದಂತಹ ಶಿಕ್ಷಕರ ಗುರುತಿಸಿ ಅವರನ್ನು ಗೌರವಿಸುವ ಕಾರ್ಯ ಆರಂಭಿಸಿರುವುದು ಶ್ಲಾಗನಾರ್ಹ! ಅವರು ಪತ್ರಿಕಾ ವರದಿಗಾರರಾದರೂ ದೇಶದ ಭವಿಷ್ಯ ರೂಪಿಸುವವರ ಗುರುತಿಸುವ ಕಳಕಳಿ ಮೆಚ್ಚುವಂತಹದ್ದು. ಹಾಗೂ ಶಿಕ್ಷಕರ ಮಹತ್ವ ಅರಿತು ಗುರುತಿಸುತ್ತಿರುವುದು ಪತ್ರಿಕಾ ವರದಿಗಾರರ ಸಂಘಕ್ಕೇ ಮತ್ತು ವರದಿಗಾರರಿಗೇ ಕಿರೀಟ! ಇವರನ್ನು ಗುರುವೃಂದ ಗೌರವಿಸಬೇಕಿದೆ! ಯಾರೇ ಆಗಲಿ ಗುರುಗಳನ್ನು ಗೌರವಿಸುವುದು ಅವರೇ ಅವರನ್ನು ಗೌರವಿಸಿಕೊಂಡಂತೆ!

ರೋಟರಿ ಕ್ಲಬ್ ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ಪ್ರಸಿದ್ದ ಸಂಸ್ಥೆಗಳಲ್ಲಿ ಒಂದು. ಹೊಳಲ್ಕೆರೆ ವಿಭಾಗದ ರೋಟರಿ ಕ್ಲಬ್ ಸಹ ಸದಾ ಸಮಾಜ ಸೇವೆಯಲ್ಲಿ ಕ್ರಿಯಾಶೀಲವಾಗಿದೆ. ಪ್ರತಿವರುಷ ಸೆಪ್ಟಂಬರ್ ತಿಂಗಳಲ್ಲಿ ಅವರೇ ಕೆಲವು ಶಿಕ್ಷಕರನ್ನು ಆಯ್ಕೆ ಮಾಡಿ ಸನ್ಮಾನಿಸುವ ಉತ್ತಮ ಪರಂಪರೆಯನ್ನು ಹುಟ್ಟುಹಾಕಿದ್ದಾರೆ! ಪ್ರತಿ ವರುಷದಂತೆ ಈ ವರುಷವೂ ದಿನಾಂಕ 18 – 09 – 2018 ರಂದು ಅನೇಕ ಶಿಕ್ಷಕರನ್ನು ಸನ್ಮಾನಿಸಿ ಗುರುಗಳನ್ನು ಗೌರವಿಸಿ ಆ ಸಂಸ್ಥೆಯು ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ! ಅಂತಹವರನ್ನು ಗುರುಗಳು ಗೌರವಿಸಬೇಕಿದೆ.

ಸುಮಾರು ಇಪ್ಪತ್ತು ವರುಷದ ಹಿಂದೆ ಒಂದು ಕಟ್ಟಡದ ಒಂದನೇ ಮಹಡಿಯ ಒಂದು ಸಣ್ಣ ಬಾಡಿಗೆ ಕೊಠಡಿಯಲ್ಲಿ ಪ್ರಜಾಪಿತಾ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವಿಭಾಗವೊಂದು ತನ್ನ ಸೇವೆಯನ್ನು ಹೊಳಲ್ಕೆರೆಯಲ್ಲಿ ಆರಂಭಿಸಿತು. ಇಂದು ಸ್ವಂತಕ್ಕೆ ದೊಡ್ಡ ಕಟ್ಟಡ ಹೊಂದಿ ಅನೇಕ ಆದ್ಯಾತ್ಮ ಚಟುವಟಿಕೆಗಳ ಕೇಂದ್ರವಾಗಿ ವರುಷ ಪೂರ್ತಿ ಭಕ್ತಾದಿಗಳ ಆಕರ್ಷಿಸುತ, ಅನೇಕ ನೊಂದ ಜೀವಿಗಳಿಗೆ ಪ್ರತಿನಿತ್ಯ ಸಾಂತ್ವನ ಹೇಳುತ್ತಾ ಅನೇಕರ ಬದುಕಲ್ಲಿ ಹೊಸ ಬೆಳಕು ಮೂಡಿಸಿ ಹೊಸ ಬದುಕ ಆರಂಭಿಸಿ ಶಾಂತಿಯಿಂದ ಬದುಕುವಂತೆ ಮಾಡಿದೆ. ಬದುಕುವ ಉತ್ಸಾಹ ಕಳೆದುಕೊಂಡವರಿಗೆ ಬದುಕಿನ ಆಶಾಕಿರಣವಾಗಿ ಸಮಾಜ ಸೇವೆಯಲ್ಲಿ ತೊಡಗಿದೆ. ಇದಕ್ಕೆ ಕಾರಣ ಕರ್ತರಾದವರು ಮಾತೆ ಸುಮಿತ್ರಕ್ಕ ಎಂಬ ದಣಿವರಿಯದ ಚೇತನ! ಇವರು ಪ್ರಜಾಪಿತಾ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿಯಾಗಿ ಹೊಳಲ್ಕೆರೆ ಕೇಂದ್ರವನ್ನು ನಿರ್ವಹಿಸುತ್ತಾ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಪ್ರವಚನ ನೀಡುತ್ತಾ ಮಾತೆ ಸುಮಿತ್ರಕ್ಕ ಎಂದು ಹೊಳಲ್ಕೆರೆಯಲ್ಲಿ ಅನೇಕರು ಇಷ್ಟಪಡುವಂತೆ ಮಮತೆ ಪ್ರೀತಿ ವಾತ್ಸಲ್ಯ ಬೆಳೆಸಿಕೊಂಡಿದ್ದಾರೆ. ಈ ವಿವಿ ಯನ್ನು ಕಟ್ಟಿ ಬೆಳಸಿದ ಕೀರ್ತಿಗೆ ಪಾತ್ರರಾಗಿದ್ದಾರೆ! ಇವರು ಇದನ್ನು ಅನಾಯಾಸವಾಗಿ ಕಟ್ಟಲಿಲ್ಲ! ಅನೇಕ ಎಡರು ತೊಡರುಗಳು ಎದುರಾದರೂ ಎದೆಗುಂದದೆ ಎದುರಿಸಿ ಕಟ್ಟಿದರು! ಇವರ ಸಾಧನೆ ಬಗ್ಗೇ ಒಂದು ಲೇಖನ ಪ್ರತ್ಯೇಕವಾಗಿ ಬರೆಯಬೇಕು ಅಂತಹ ಸಾಧನೆ ಚಿಕ್ಕ ವಯಸ್ಸಿಗೇ ಮಾಡಿದ್ದಾರೆ. ಇವರಿಗೆ ಸಮಾಜ ಸೇವಾಭಾವದ ಕ್ರಿಯಾಶೀಲ ಯುವಕ ಮೋಹನ್ ನಾಗರಾಜ್ ಮತ್ತು ಅವರ ಸ್ನೇಹಿತರು ಅನೇಕ ಹೊಳಲ್ಕೆರೆಯ ಭಕ್ತಾದಿಗಳು ಸಹಕರಿಸಿದ್ದಾರೆ.

ಹೊಳಲ್ಕೆರೆ ವಿಭಾಗದ ಈ ವಿವಿ ತನ್ನ ಮಂದಿರದಲ್ಲಿ ದಿನಾಂಕ 12 -09- 2018 ರಂದು ಗುರುಗಳನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರೂ ತಪ್ಪದೆ ಹಾಜರಾಗಬೇಕೆಂದು ವಾಟ್ಸಾಪ್ ಮುಂತಾದ ಮಾಧ್ಯಮದಲ್ಲಿ ಎಲ್ಲಾ ಶಿಕ್ಷಕರಲ್ಲಿ ವಿನಂತಿಸಿತ್ತು. ಆ ಕಾರ್ಯಕ್ರಮಕ್ಕೆ ಶಿಕ್ಷಕರು ಬೆಂಬಲಿಸಿದರು! ಹಾಜರಾದ ಪ್ರತಿಯೊಬ್ಬ ಗುರುಗಳಿಗೆ, ಗುರು ಮಾತೆಯವರಿಗೆ ಪುಷ್ಪ ಪನ್ನೀರುಗಳನ್ನು ಪ್ರೋಕ್ಷಿಸಿ, ಆರತಿ ಬೆಳಗಿ, ಗಂಧ ವಸ್ತ್ರ ನೀಡಿ ಸನ್ಮಾನಿಸಿ ಸಿಹಿ ಬೋಜನದ ಜತೆಗೆ ಆಧ್ಯಾತ್ಮ ಸುಜ್ಞಾನವ ಬಡಿಸಿ ಸಂತೃಪ್ತರಾಗಿ ತಮ್ಮ ಮತ್ತು ತಮ್ಮ ಈವಿವಿಯ ಗೌರವ ಹೆಚ್ಚಿಸಿಕೊಂಡಿದ್ದಾರೆ! ಹೀಗೆ ತಮ್ಮ ಗೌರವ ಹೆಚ್ಚಿಸಿಕೊಳ್ಳಲು ಅವರಿಗೆ ಅವರ ಸದ್ಗುರುವೇ ಕಾರಣ ಆಗಿರಬೇಕಲ್ಲವೇ? ಸಾಮಾನ್ಯವಾಗಿ ಉತ್ತಮ ಶಿಕ್ಷಕರನ್ನು ಗೌರವಿಸುವುದು ವಾಡಿಕೆ. ಅದರೆ ಇಲ್ಲಿ ಆಗಮಿಸಿದ ಎಲ್ಲರನ್ನೂ ಬೇಧ ಭಾವ ಮಾಡದೆ ಗೌರವಿಸಿದುದು ಖುಷಿ, ವಿಶೇಷ, ಹೊಸ ಪರಂಪರೆ! ಅದೂ ಎಲ್ಲಾ ಶಿಕ್ಷಕರನ್ನು ಒಂದು ಮಾಧ್ಯಮದ ಮೂಲಕ ಆಹ್ಬಾನಿಸಿ ಗೌರವಿಸುವುದು ಮಹಾನ್ ಸಾಧನೆಯಲ್ಲವೇ? ಗೌರವಕ್ಕೆ ಭಾಜನವಾದಂತಹ ಶಿಕ್ಷಕರು ತಮ್ಮ ಕರ್ತವ್ಯದ ಬಗ್ಗೆ ತಾವು ರೂಪಿಸಿಕೊಂಡಿರುವ ವ್ಯಕ್ತಿತ್ವದ ಬಗ್ಗೆ ಆತ್ಮವಿಮರ್ಶೆ ಮಾಡಕೊಳ್ಳಬೇಕಿದೆ. ಅಗತ್ಯವೆನಿಸಿದರೆ ಗೌರವ ಹೆಚ್ಚುವಂತೆ ಬದಲಾಗಬೇಕಿದೆ! ಈವಿವಿಯ ಮಾತೆಯವರು ಶಿಕ್ಷಕರನ್ನು ಗೌರವಿಸಿದುದು ಶಿಕ್ಷಕರು ತಮ್ಮ ಕರ್ತವ್ಯದ ಬಗ್ಗೆ , ವೃತ್ತಿಯ ಬಗ್ಗೆ ತಾವು ಹೆಮ್ಮೆಪಡವಂತಾಗಿ ಇನ್ನೂ ಉತ್ತಮ ಸೇವೆಸಲ್ಲಿಸಲು ಪ್ರೇರಣೆಯಾದುದು ಸುಳ್ಳಲ್ಲ! ಆಗಮಿಸಿದ ಎಲ್ಲಾ ಶಿಕ್ಷಕರನ್ನು ಬೇಧಭಾವವಿಲ್ಲದೆ ಸಮಾನವಾಗಿ ಗೌರವಿಸುವ ಒಳ್ಳೆಯ ಪರಂಪರೆ ಆರಂಭಿಸಿದವರನ್ನು ಎಲ್ಲರೂ ಅಭಿನಂಧಿಸಿ ಗೌರವಿಸಬೇಕಿದೆ! ಹೀಗೆ ನಾಡಿನಾದ್ಯಂತ ಗುರುಗಳನ್ನು ಗೌರವಿಸಿ ಅವರ ಗೌರವವನ್ನು ಹೆಚ್ಚಿಸಿಕೊಂಡವರಿದ್ದಾರೆ ಅವರನ್ನು ಗೌರವಿಸಬೇಕಿದೆ. ಇದಕ್ಕೆ ಪೂರಕವಾಗಿ ಶಿಕ್ಷಕರು ತಮ್ಮನ್ನು ವೃತ್ತಿಯಲ್ಲಿ ತಮ್ಮ ಆತ್ಮ ಮೆಚ್ಚುವಂತೆ ತೊಡಗಿಸಿಕೊಂಡು ಮೌಲ್ಯಯುತವಾಗಿ ಬದುಕಬೇಕಿದೆ. ಜತೆಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕಲಿಸುವುದಕ್ಕಷ್ಟೇ ಸೀಮಿತಗೊಳಿಸಿ ಕಳೆದು ಹೋಗುತ್ತಿರುವ ಅವರ ಗೌರವ ಹೆಚ್ಚಿಸಿಕೊಳ್ಳಲು ಸರಕಾರ ಅವಕಾಶ ಮಾಡಿಕೊಡಬೇಕಿದೆ!

* ಕೆ ಟಿ ಸೋಮಶೇಖರ ಹೊಳಲ್ಕೆರೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x