ನಮ್ಮ ದಸರಾ Exhibition ಸವಾರಿ: ವಿಭಾ ಶ್ರೀನಿವಾಸ್

“Exhimition…Exhimition…” ಪದವನ್ನು ಸರಿಯಾಗಿ ಉಚ್ಚರಿಸಲೂ ಬಾರದ ಆ ದಿನಗಳಲ್ಲಿ ವರ್ಷಕ್ಕೊಮ್ಮೆ ಎದುರಾಗುತಿದ್ದ ಸ೦ತಸವೇ ಮೈಸೂರು ದಸರಾ Exhibition (ದಸರಾ ವಸ್ತುಪ್ರದರ್ಶನ). ಎಲ್ಲಾ ವರ್ಗದ, ಎಲ್ಲಾ ಭಾಷೆಗಳನ್ನು ಮಾತನಾಡುವ ಜನ ಕಾಣಸಿಗುತಿದ್ದ mini world !!

ಪ್ರವೇಶ ಟಿಕೆಟ್ ನ ದರ ರೂ5 ಇದ್ದ ಕಾಲ. ನಾ ಮುಂದು ತಾ ಮುಂದು ಎ೦ದು ಟಿಕೆಟ್ ಪಡೆದು, ಮುಖ್ಯದ್ವಾರದ ಕನ್ನಡಿಯಲ್ಲಿ ಮುಖವನ್ನೊಮ್ಮೆ ನೋಡಿ ಹಲ್ಲುಕಿರಿದ ನ೦ತರವೇ ಪ್ರವೆಶಿಸಿದೆವೆ೦ಬ ಖುಷಿ. ಮು೦ದಿನ ೨-೩ ಗಂಟೆಗಳ ಕಾಲ ಅಣ್ಣ/ಚಿಕ್ಕಪ್ಪನ ಮಗಳ ಕೈ ಹಿಡಿದೇ ನಡೆಯಬೇಕೆ೦ಬ ಪೋಷಕರ ಸೂಚನೆ. ಪ್ರವೆಶಿಸುತ್ತಿದ್ದ೦ತೆ ಎಡಬದಿಯಿ೦ದ ಶುರುವಾಗುತ್ತಿದ್ದುದು ಅಮ್ಮ೦ದಿರ ವಿಭಾಗ. ಬೆಡ್ ಶೀಟ್ಗಳು, ಸೋಪಿನ ಡಬ್ಬಿಗಳು, ಬಟ್ಟೆ ಕ್ಲಿಪ್ಪುಗಳು, ಹಣೆಬೊಟ್ಟುಗಳು, ಇರುವೆ ಗಾತ್ರದಿ೦ದ ಹಿಡಿದು ಆನೆಯ ಗಾತ್ರದವರೆಗೆ ಸಿಗುತಿದ್ದ ತಟ್ಟೆ-ಲೋಟಗಳು ಒ೦ದು ಕಡೆಯಾದರೆ, “ಸರ್ ಮೇಡ೦ ಬರ್ರೀ ಐವತ್ತ್ ಐವತ್ತ್ ಐವತ್ತ್ !” ಅನ್ನೊ ಕಿರುಚಾಟಗಳು ಮತ್ತೊ೦ದು ಕಡೆ. ಅಮ್ಮ೦ದಿರು ಯಾವಾಗ ಅಂಗಡಿಯಿ೦ದ ಹೊರಬರುತ್ತಾರೋ ಎ೦ದು ಕಾದು ಕುಳಿತಿರುವಾಗ ಎಳೆಯ ಮನಸ್ಸಿಗೆ ಮುದ ನೀಡುತಿದ್ದುದು ಶೀಷೆಯಿ೦ದ ಹೊರಬರುವ ಸೋಪಿನ ಗುಳ್ಳೆಗಳು ಮತ್ತು ಹನುಮ೦ತನ೦ತೆ ಹಾರುವ ಪ್ಯಾರಚೂಟುಗಳು. ಕರಟದಿ೦ದ ಮಾಡಿದ ತ೦ಬೂರಿಯಲ್ಲಿ ಮಾರುವಾತನಿಗಷ್ಟೇ ನುಡಿಸಲು ಬರುತ್ತಿದ್ದ ಹಿ೦ದೀ ಗೀತೆಗಳು (ಪರ್ ದೇಸಿ ಪರ್ ದೇಸಿ ಜಾನ ನಹೀ) ಅದೇಕೋ ನಾವು ನುಡಿಸಿದಾಗ ಬರೀ ಕೊoಯ್ಯಾ-ಪoಯ್ಯಾ ಎನ್ನುತ್ತಿದ್ದವು.

ಅ೦ತೂ ಕೈಯಲ್ಲೊ೦ದಿಷ್ಟು ತು೦ಬಿದ ಚೀಲಗಳನ್ನು ಅಮ್ಮ೦ದಿರು ತ೦ದರೆ, ಅದರೊಳಗೇನಿದೆ ಎ೦ದು ಇಣುಕಿ ನೋಡುವ ಕುತೂಹಲ. ಆಜುಬಾಜಿನಲ್ಲಿ ಸಿಗುವ ಒ೦ದೆರಡು ಬಣ್ಣದ ಪೆನ್ಸಿಲ್, ರಬ್ಬರ್ ಗಳನ್ನು ಕೊ೦ಡು, ಅವನ್ನು ತಿರುವಿ ಮುರುವಿ ಪರೀಕ್ಷಿಸುವಾಗ ಅವು ಅರ್ಧ ಮುರಿದರೆ, ಅಪ್ಪನೆಡೆಗೆ ಒ೦ದು ದೈನ್ಯದ ನೋಟವನ್ನು ಬೀರುತ್ತಿದ್ದೆವು. ಅವರು ಕರಗಿ ಮತ್ತೆರಡು ತೆಗೆಸಿಕೊಟ್ಟಾರೆ೦ಬ ಆಸೆಯಲ್ಲಿಯೇ ಖುಷಿ ಪಡುತ್ತಿದ್ದ ಕಾಲ. ಹೊಸ ಪೆನ್ಸಿಲ್ಗಳೊ೦ದಿಗೆ ಒ೦ದೆರಡು ಕೀಚೈನ್ ಗಳನ್ನೂ ಗಿಟ್ಟಿಸುತ್ತಿದ್ದೆವು.

ಹಾಗೆಯೇ ಮುಂದೆ ನಡೆದು ಬ೦ದರೆ ಸಿಗುತ್ತಿದ್ದುದೇ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ವಿಭಾಗ. ಬಹುಶಃ ಇ೦ದಿಗೂ ಬದಲಾಗದ ವಿಭಾಗವೆ೦ದರೆ ಇದೇ ಇರಬೇಕು. ಪ್ರವಾಸೋದ್ಯಮ, ಕೃಷಿ, ರೇಷ್ಮೆ, ಅರಣ್ಯ ಹೀಗೆ ವಿವಿಧ ಇಲಾಖೆಗಳಿಗೆ ತಮ್ಮದೇ ಆದ ನಿರ್ದಿಷ್ಟ ಸ್ಥಳಗಳು ಇರುತ್ತಿದ್ದವು (ಇವೆ). ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತಿದ್ದ ಹುಲಿ-ಚಿರತೆ-ಆನೆಗಳ ಪ್ರತಿಕೃತಿಗಳು, ಜೋಗ್ ಜಲಪಾತ-ಅರಮನೆ-ಹ೦ಪೆಯ ಕಲ್ಲಿನ ರಥದ ಮಾದರಿಗಳು, ನಾವು ಅರ್ಧ ಕಣ್ಮುಚ್ಚಿ ಇನ್ನರ್ಧದಿ೦ದ ನೋಡುತ್ತಿದ್ದ ರೇಷ್ಮೆಹುಳುಗಳು ಇ೦ದಿಗೂ ನೆನಪಿಗೆ ಬರುತ್ತವೆ.

ನಾವು ಜೂಜಾಡಿದ್ದೂ ಉ೦ಟು !! ಚೆಂಡನ್ನು ಎಸೆದು ಲೋಟಗಳನ್ನು ಬೀಳಿಸಿ, ಸ್ಟೀಲ್ ಚಮಚವನ್ನೋ, ರೆನಾಲ್ಡ್ಸ್ ಪೆನ್ನನ್ನೊ ಪಡೆದು ಅದಕ್ಕೊ೦ದೈದು ರೂಪಾಯಿ ತೆತ್ತೆವೆ೦ದು ಬೈಸಿಕೊ೦ಡಮೇಲೆ ಗಡಿಬಿಡಿಯಲ್ಲಿ ಆಟದ ವಿಭಾಗಕ್ಕೆ ಹೋಗುವ ಸ೦ತಸ. ಅಣ್ಣ/ಅಪ್ಪ/ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳು ಅಥವಾ ಒಬ್ಬಳೇ ಆದರೂ ಸರಿಯೇ ಒ೦ದೆರಡು ಆಟಗಳಲ್ಲಿ ಕುಳಿತು ಖುಷಿಪಟ್ಟರೇ ಮಾತ್ರ Exhibition ಗೆ ಬ೦ದದ್ದು ಸಾರ್ಥಕವಾಯಿತು ಎ೦ಬ ಮನೋಭಾವ. ದೊಡ್ಡವರು ಚಿಕ್ಕವರೆ೦ಬ ಭೇದವಿಲ್ಲದೇ ಎಲ್ಲರನ್ನೂ ರಂಜಿಸುತ್ತಿದ್ದ Giant-Wheel, Dashing car, ToraTora ಗಳು ಇ೦ದಿಗೂ ಕಣ್ಮು೦ದೆ ಬರುತ್ತವೆ. ಆಗೊಮ್ಮೆ ಈಗೊಮ್ಮೆ ಪೋಲೀಸ್ ಇಲಾಖೆಯವರು “ಕೆ೦ಪು ಅ೦ಗಿ ಧರಿಸಿರುವ ಮಗುವಿನ ಪೋಷಕರು ಎಲ್ಲಿದ್ದರೂ ಕೂಡಲೇ ಬರಬೇಕು, ನೀಲಿ ಫ್ರಾಕ್ ಧರಿಸಿರುವ ಮಗು ಕಾಣೆಯಾಗಿದೆ” ಎ೦ದು ಮೈಕ್ ನಲ್ಲಿ ಘೊಷಿಸುತ್ತಿದ್ದರೆ ನಾವೂ ಎಲ್ಲಿ ಕಳೆದುಹೋಗುವೆವೆ೦ಬ ಭಯದಲ್ಲಿ ಪೋಷಕರ ಕೈ ಹಿಡಿದದ್ದೂ ಉ೦ಟು 🙂

ಆಟ ಮುಗಿಸಿ ನಡೆದೂ ನಡೆದೂ ಸುಸ್ತಾಗಿ ಕಾಲು ನೋವೆ೦ದು ಮುಖ ಸಪ್ಪೆ ಮಾಡುವಾಗ ತುಟಿಯ೦ಚಲ್ಲಿ ನಗೆ ಮೂಡುತಿದ್ದುದು ‘ಮಲ್ಲಿಗೆ ಇಡ್ಲಿ’ ಮಳಿಗೆ ನೋಡಿದಾಗ. ಇಡ್ಲಿಯನ್ನೋ ದೋಸೆಯನ್ನೋ ಹೊಟ್ಟೆಗೆ ಸೇರಿಸುತ್ತಿದಾಗ ಕಣ್ಣೆದುರಿಗೆ ತೆಪ್ಪದಾಕೃತಿಯ ಗಜಾಕಾರದ ‘ಡೆಲ್ಲಿ ಹಪ್ಪಳ’ ಕಾಣಬೇಕೆ ?? ಅದರ ರುಚಿಯನ್ನೂ ಸವಿದೇ ತೀರಬೇಕೆ೦ಬ ಹಟ. ಹೀಗೆ ಹೊಟ್ಟೆಸೇವೆಯನ್ನೂ ಮುಗಿಸುತ್ತಿದ್ದೆವು. ಎಲ್ಲಾ ಮುಗಿದು ವಾಪಸ್ಸಾಗುವಾಗ ಆರಾಮ ಉಯ್ಯಾಲೆಯಲ್ಲೊಮ್ಮೆ ತೂಗಿಕೊ೦ಡು, ಕಾರ೦ಜಿಗಳನ್ನು ನೋಡಿ ಕಣ್ತು೦ಬಿಕೊ೦ಡು, ಮು೦ದಿನ ವರ್ಷದವರೆಗೂ ಮತ್ತೆ ಕಾಯಬೇಕೆ೦ಬ ಬೇಸರದಿ೦ದಲೋ ಅಥವಾ ನಾಳೆ ಮತ್ತೆ ಶಾಲೆಗೆ ಹೋಗಬೇಕೆ೦ಬ ನೆನಪಿನಿಂದಲೋ ಹೊರನಡೆವಾಗ ಸಣ್ಣಗೆ ಕಣ್ಣ೦ಚಿನಲ್ಲಿ ಹನಿಗಳು ಜಿನುಗುತಿದ್ದವು.

ಇ೦ದಿಗೂ ವಸ್ತುಪ್ರದರ್ಶನದ ಮೈದಾನ, ಇಡ್ಲಿಮಳಿಗೆ, ಆಟದ ವಿಭಾಗಗಳು ದಸರೆಯ ಸಮಯದಲ್ಲಿ ಝಗಮಗಿಸುತ್ತವೆ. ಆದರೆ ಬಯಸಿದರೂ ಬಾರದ ಹಳೆಯ ಮಧುರ ಕ್ಷಣಗಳು ಮಾತ್ರ ಲೇಖನವಾಗಿ ಮೂಡಿಬ೦ದಿವೆ 🙂

ಮೈಸೂರಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಸಹಾಯಮಾಡಿದ ಸಹೋದ್ಯೋಗಿ ಗೆಳತಿಗೊ೦ದು Thanks !!!!

-ವಿಭಾ ಶ್ರೀನಿವಾಸ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x