ಜಾಣಸುದ್ದಿ 15: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com

ಜಾಣ ಸುದ್ದಿ ಧ್ವನಿಮುದ್ರಿಕೆ (ಆಡೀಯೊ)

ಈ ವಾರದ ಸಂಚಿಕೆಯಲ್ಲಿ:

• ಪರಜೀವಿಯ ಮೇಲೊಂದು ಪರಜೀವಿ!,
• ಸಂವಿಧಾನದ ರಕ್ಷಣೆ ,
• ಸುಗಂಧಿತ ಬ್ಯಾಂಡೇಜು,
• ತುಂತುರು ಸುದ್ದಿಗಳು
• ಅಜೋಯೀನ್ ಸಂಶ್ಲೇಷಣೆ

1. ಪರಜೀವಿಯ ಮೇಲೊಂದು ಪರಜೀವಿ
ಈ ಜಗತ್ತಿನಲ್ಲಿ ಸಂಬಂಧ ಎನ್ನುವುದು ಬಲು ವಿಚಿತ್ರವಾದ ಸಂಗತಿ ಎಂದರೆ ನೀವು ಬಹುಶಃ ವೇದಾಂತಿ ಎಂದು ಹೆಸರಿಸಿಬಿಡುತ್ತೀರಿ. ಊಹೂಂ. ಹಾಗಲ್ಲ. ಜೀವಿಜಗತ್ತಿನಲ್ಲಿ ವಿವಿಧ ಜೀವಿಗಳ ನಡುವೆ ಬಲು ವಿಚಿತ್ರವಾದ, ಬೆರಗುಗೊಳಿಸುವ ಸಂಬಂಧಗಳನ್ನು ನೋಡಬಹುದು. ಅದರಲ್ಲೂ ಗಿಡ ಹಾಗೂ ಪ್ರಾಣಿಗಳ ನಡುವಣ ಸಂಬಂಧ ಬಲು ವಿಚಿತ್ರ. ಚಿಟ್ಟೆಗಳನ್ನೇ ತೆಗೆದುಕೊಳ್ಳಿ. ಹುಳುವಾಗಿದ್ದಾಗ ಇವು ಗಿಡಗಳನ್ನು ತಿಂದು ಹಾಳುಗೆಡವುತ್ತವೆ. ಆದರೆ ಚಿಟ್ಟೆಗಳಾದ ಮೇಲೆ ಅದೇ ಗಿಡಗಳ ಹೂಗಳಿಗೆ ಪರಾಗ ಮುಟ್ಟಿಸಿ ಅವು ಸಂತಾನಾಭಿವೃದ್ಧಿ ಮಾಡುವಂತೆ ಮಾಡುತ್ತವೆ. ಇನ್ನೂ ಕೆಲವು ಕೀಟಗಳಿವೆ. ನೋಡಲು ಇವು ಗಿಡಗಳಿಗೆ ತೊಂದರೆ ಕೊಟ್ಟಿವೆಯೇನೋ ಎನ್ನುವಂತಿರುತ್ತವೆ. ಆದರೆ ವಾಸ್ತವದಲ್ಲಿ ಗಿಡ ಹಾಗೂ ಕೀಟಗಳೆರಡೂ ಜೊತೆ, ಜೊತೆಯಾಗಿ ಸಹಬಾಳ್ವೆಯನ್ನೂ ನಡೆಸುತ್ತಿರುತ್ತವೆ.
ಇಂತಹ ಸಂಬಂಧಗಳಲ್ಲಿ ಮೂರನೆಯ ಜೀವಿ ಮೂಗು ತೂರಿಸಿದರೆ ಏನಾದೀತು? ಈ ಮೂವರಲ್ಲಿ ಯಾರಿಗೆ ಲಾಭವಾದೀತು? ಉದಾಹರಣೆಗೆ, ಜೊತೆಯಾಗಿ ಬದುಕುತ್ತಿರುವ ಸಸ್ಯ ಹಾಗೂ ಕೀಟದ ನಡುವೆ ಮತ್ತೊಂದು ಸಸ್ಯ ಬಂದರೆ ಏನಾಗಬಹುದು? ಸಸ್ಯದ ಬದಲು ಕೀಟ ಬಂದರೆ? ಈ ಬಗೆಯ ಸ್ವಾರಸ್ಯಕರ ಪ್ರಶ್ನೆಗಳನ್ನು ವಿಜ್ಞಾನಿಗಳು ಕೇಳುತ್ತಿರುತ್ತಾರೆ. ಹಾಗೂ ಅಂತಹುದೊಂದು ವಿಚಿತ್ರ ಸಂಬಂಧವೊಂದರ ಕಥೆಯನ್ನು ಕರೆಂಟ್ ಬಯಾಲಜಿ ಪತ್ರಿಕೆ ಕಳೆದ ವಾರ ಪ್ರಕಟಿಸಿದೆ. ಗಿಡಗಳೊಳಗೆ ಮನೆ ಮಾಡಿಕೊಂಡು ಅವುಗಳಲ್ಲಿ ದೊಡ್ಡ ಗಂಟುಗಳನ್ನುಂಟು ಮಾಡುವ ಕೀಟಗಳು, ಪರಜೀವಿಯಾಗಿ ಅದೇ ಗಿಡವನ್ನು ಆಕ್ರಮಿಸುವ ಮತ್ತೊಂದು ಗಿಡದಿಂದಾಗಿ ತುಸು ಬಲಹೀನವಾಗುತ್ತವೆಯಂತೆ. ಹೀಗೆಂದು ಅಮೆರಿಕೆಯ ಹ್ಯೂಸ್ಟನ್ನಿನಲ್ಲಿರುವ ರೈಸ್ ವಿಶ್ವವಿದ್ಯಾನಿಲಯದ ಜೀವಿವಿಜ್ಞಾನಿ ಸ್ಕಾಟ್ ಪಿ ಈಗನ್ ಮತ್ತು ಸಂಗಡಿಗರು ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಓಕ್ ಎಲೆಯ ಮೇಲೆ ಮುಳ್ಳುಹಂದಿಯಾಕಾರದ ಗಂಟು

ಅಮೆರಿಕೆಯ ಫ್ಲಾರಿಡಾ ರಾಜ್ಯದಲ್ಲಿ ಕ್ವೆರ್ಕಸ್ ಜರ್ಮಿನೇಟ ಎನ್ನುವ ಓಕ್ ಮರ ಬೆಳೆಯುತ್ತದೆ. ಮಾವಿನ ಮರದಲ್ಲಿ ಬದನಿಕೆಯ ಬಳ್ಳಿ ತಗುಲಿಕೊಳ್ಳುವ ಹಾಗೆ ಈ ಮರಕ್ಕೂ ಒಂದು ಪರಜೀವಿ ಸಸ್ಯದ ಕಂಟಕವಿದೆ. ಲವ್ ವೈನ್ ಅಥವಾ ಕ್ಯಾಸಿತಾ ಫಿಲಿಫಾರ್ಮಿಸ್ ಎನ್ನುವ ಈ ಪರಜೀವಿ ಓಕ್ ಮರದೊಳಗೆ ತನ್ನ ಬೇರನ್ನು ನೆಟ್ಟು ಅದರ ನಾಳಗಳಲ್ಲಿ ಹರಿಯುವ ರಸವನ್ನು ಹೀರಿ ಬದುಕುತ್ತದೆ. ಈ ಮರಕ್ಕೆ ಬರುವ ಕಂಟಕ ಇದೊಂದೇ ಅಲ್ಲ. ಇನ್ನೂ ಹಲವು ಜೀವಿಗಳು ಇದನ್ನು ಕಾಡುತ್ತವೆ. ಬೆಲನೊನೀಮ ಟ್ರೀಟೆ ಎನ್ನುವ ಕಣಜ ಇವುಗಳಲ್ಲೊಂದು. ಇದೊಂದು ಗಾಲ್ ಕಣಜ. ಅರ್ಥಾತ್, ಇದು ಸೋಂಕಿದ ಗಿಡದಲ್ಲಿ ಗಂಟು ಬೆಳೆಯುತ್ತದೆ. ಆ ಗಂಟಿನೊಳಗೆ ಇದು ಸುರಕ್ಷಿತವಾಗಿ ನೆಲೆಯಾಗುತ್ತದೆ. ಸಸ್ಯದ ಮೆದು ಭಾಗಗಳನ್ನು ಇದರ ಲಾರ್ವಗಳು ತಿಂದು ಬೆಳೆಯುತ್ತವೆ. ಇದು ಇಂತಹ ಪರಜೀವಿ ಕೀಟಗಳ ಜೀವನದ ಪರಿ.

ಇಂತಹ ಪರಜೀವಿ ಸಸ್ಯ ಹಾಗೂ ಪರಜೀವಿ ಕೀಟಗಳಿದ್ದಾಗ ಯಾರ ಕೈ ಮೇಲಾಗುತ್ತದೆ? ಈ ಸ್ವಾರಸ್ಯಕರ ಪ್ರಶ್ನೆಗೆ ಉತ್ತರವನ್ನು ಹುಡುಕಲು ಈಗನ್ ಮತ್ತು ಸಂಗಡಿಗರು ಹೀಗೆ ಗಂಟು ಬೆಳೆದ 2500 ಮರಗಳನ್ನು ತಡಕಿದ್ದಾರೆ. ಈ ಗಂಟುಗಳ ಜೊತೆಗೆ ಎಲ್ಲೆಲ್ಲಿ ಕ್ಯಾಸಿತಾ ಫಿಲಿಫಾರ್ಮಿಸ್ ಬೆಳೆದಿದೆ ಎಂದೂ ಗಮನಿಸಿದ್ದಾರೆ. ಈ ಲವ್ ವೈನ್ ತನ್ನ ಬೇರುಗಳನ್ನು ಕಣಜದ ಗಂಟುಗಳೊಳಗೆ ಇಳಿಸಿರುವುದನ್ನು ಕಂಡಿದ್ದಾರೆ. ಇದು ಆಕಸ್ಮಿಕವೋ ಅಥವಾ ಕೀಟವಿರುವ ದೆಸೆಯಿಂದಲೋ ಎಂದು ಪರೀಕ್ಷಿಸಲು ಬೆಲನೊನೀಮ ಟ್ರೀಟೆಯ ಗಂಟುಗಳು ಹಾಗೂ ಇದೇ ರೀತಿಯಲ್ಲಿ ಇತರೆ ಗಂಟುಗಳ ಜೊತೆ ಎಷ್ಟೆಷ್ಟು ಪರಜೀವಿ ಸಸ್ಯದ ಬೇರುಗಳು ಹೊಕ್ಕಿವೆ ಎಂದು ಲೆಕ್ಕ ಹಾಕಿದ್ದಾರೆ. ಇವನ್ನು ಗಣಿಸಿದಾಗ, ಎಲ್ಲೆಲ್ಲಿ ಕಣಜವಿತ್ತೋ, ಅಲ್ಲೆಲ್ಲ ಸಾಮಾನ್ಯವಾಗಿ ಈ ಬಳ್ಳಿಯೂ ಬೆಳೆದಿತ್ತಂತೆ.

ಇದು ಕಾಕತಾಳೀಯವೋ, ಅಥವಾ ಇದರಿಂದ ಇಬ್ಬರಲ್ಲಿ ಯಾರಿಗಾದರೂ ಹಾನಿಯಾಗುತ್ತಿರಬಹುದೋ ಎಂದು ಸಂದೇಹಗೊಂಡ ಈಗನ್ ತಂಡ ಲವ್ ವೈನ್ ತಳುಕಿಕೊಂಡ ಗಂಟುಗಳಲ್ಲಿ ಹಲವನ್ನು ಕತ್ತರಿಸಿ, ಒಳಗಿನ ಚಿತ್ರವನ್ನು ಗಮನಿಸಿದ್ದಾರೆ. ಇಂತಹ ಗಂಟುಗಳಲ್ಲಿ ಕಣಜಗಳ ಶವಗಳಿವೆಯೇ ಎಂದು ಪರೀಕ್ಷಿಸಿದ್ದಾರೆ. ಸಾಮಾನ್ಯ ಗಂಟುಗಳಿಗೆ ಹೋಲಿಸಿದಲ್ಲಿ ಲವ್ ವೈನ್ ತಾಕಿದ ಗಂಟುಗಳಲ್ಲಿ ಇದ್ದ ಶವಗಳ ಸಂಖ್ಯೆ ತುಸು ಹೆಚ್ಚು. ಬಹುಶಃ ಈ ಬಳ್ಳಿ ಒಳನುಗ್ಗಿ ಬೆಳೆದು ಕಣಜಗಳು ಗಂಟಿನೊಂದ ಹೊರ ಹೋಗದಂತೆ ಬಂಧಿಯಾಗಿಸಿರಬೇಕು. ಅವು ಉಸಿರುಗಟ್ಟಿ ಸತ್ತಿರಬಹುದು ಎಂದು ಇವರು ತರ್ಕಿಸಿದ್ದಾರೆ.

ಅಷ್ಟೇ ಅಲ್ಲ. ಇದು ನಿಜವೋ ಸುಳ್ಳೋ ಎಂದು ಖಚಿತಪಡಿಸಿಕೊಳ್ಳಲು, ಈ ಬಳ್ಳಿ ತಾಕುವ ಮತ್ತೊಂದು ಕಣಜದ ಗಂಟುಗಳನ್ನೂ ಪರಿಶೀಲಿಸಿದ್ದಾರೆ. ಕ್ಯಾಲಿರೈಟಿಸ್ ಕ್ವೆರ್ಕಸ್ ಬಟಾಟಾಯಿಡೀಸ್ ಎನ್ನುವ ಈ ಕಣಜ ತುಸು ಅಪರೂಪದ ಪರಜೀವಿ. ಹೀಗಾಗಿ ಇದರಲ್ಲಿ ಬಳ್ಳಿ ತಳುಕಿಕೊಳ್ಳುವ ಸಾಧ್ಯತೆಗಳು ಕಡಿಮೆ. ಹಾಗಿದ್ದೂ ಬಳ್ಳಿ ಹಾಗೂ ಕಣಜದ ಗಂಟು ಎರಡೂ ಇರುವ ಮರಗಳಲ್ಲಿ ಬಳ್ಳಿಯ ಬೇರುಗಳು ಗಂಟುಗಳನ್ನೇ ಆತುಕೊಳ್ಳುವುದು ಸಾಮಾನ್ಯವಾಗಿತ್ತು. ಇಲ್ಲಿಯೂ ಬೇರು ಹೊಕ್ಕ ಗಂಟುಗಳಲ್ಲಿ ಕಣಜದ ಶವಗಳು ಹೆಚ್ಚಿದ್ದುವು ಎಂದು ಈಗನ್ ತಂಡ ಗಮನಿಸಿದೆ.

ಅರ್ಥಾತ್, ಓಡಲು, ಹಾರಲು, ಕಡಿಯಲು, ತಿನ್ನಲು ಸಾಮರ್ಥ್ಯವಿಲ್ಲದ ಈ ಬಳ್ಳಿ ಹಾಗೂ ಹೀಗೂ ಕಣಜಗಳನ್ನು ಬೆಳೆಯದಂತೆ ಮಾಡಬಲ್ಲುದು ಎನ್ನುವುದು ವಿಚಿತ್ರವೇ ಸರಿ. ಇದುವರೆವಿಗೂ ಇಂತಹ ವಿಚಿತ್ರ ಸಂಬಂಧವನ್ನು ವಿಜ್ಞಾನಿಗಳು ಕಂಡಿರಲಿಲ್ಲ ಎನ್ನುತ್ತಾರೆ ಈಗನ್.
ಎತ್ತಣ ಕಣಜ ಎತ್ತಣ ಬದನಿಕೆ ಎನ್ನೋಣವೇ?
ಆಕರ: Scott P. Egan et al., Botanical parasitism of an insect by a parasitic plant Current Biology 28, R847–R870, August 20, 2018
ಲಿಂಕ್: https://doi.org/10.1016/j.cub.2018.06.024.


2. ಸಂವಿಧಾನದ ರಕ್ಷಣೆ
ಇತ್ತೀಚೆಗೆ ಸಂವಿಧಾನದ ರಕ್ಷಣೆ ಆಗಬೇಕು. ಪ್ರಜಾಸತ್ತೆ ಉಳಿಯಬೇಕು ಅಂತೆಲ್ಲ ಗುಲ್ಲು ಹಬ್ಬುವುದನ್ನು ಕೇಳಿರಬೇಕು. ಯಾವು ಯಾವುದೋ ಕಾರಣಕ್ಕೆ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕಿ ಪ್ರಚಾರ ಪಡೆದವರ ಬಗ್ಗೆಯೂ ಓದಿರುತ್ತೀರಿ. ನಾನಿಲ್ಲಿ ಹೇಳುತ್ತಿರುವುದು ಆ ಬಗ್ಗೆ ಅಲ್ಲ. ನಮ್ಮ ಅಂದರೆ ಭಾರತದ ಸಂವಿಧಾನದ ಮೂಲ ಪ್ರತಿಯನ್ನು ಸಂರಕ್ಷಿಸುವ ಬಗ್ಗೆ. 1947ರ ಆಗಸ್ಟ್ ಹದಿನೈದರಂದು ಬ್ರಿಟಿಷರು ನಮ್ಮ ದೇಶದ ಆಡಳಿತವನ್ನು ನಮ್ಮ ಕೈಗೇ ಒಪ್ಪಿಸಿ ಹೋಗಿದ್ದು ಚರಿತ್ರೆ. ತದನಂತರ, ನಮ್ಮ ದೇಶ ಹೇಗಿರಬೇಕು, ಆಡಳಿತ ಹೇಗೆ ನಡೆಯಬೇಕು, ಪ್ರಜೆಗಳೆಂದರೆ ಯಾರು, ಅವರಿಗಿರುವ ಸ್ವಾತಂತ್ರ್ಯಗಳೇನು ಇತ್ಯಾದಿ ಹಲವು ವಿಷಯಗಳ ಬಗ್ಗೆ ಮುಂದಾಲೋಚಿಸಿ, ನಮ್ಮ ಸಂವಿಧಾನವನ್ನು ರಚಿಸಲಾಯಿತು. ಸಂವಿಧಾನದಲ್ಲಿ ಏನಿರಬೇಕು, ಏನಿರಬಾರದು ಎನ್ನುವ ಬಗ್ಗೆ ಅಂದಿನ ಪಾರ್ಲಿಮೆಂಟಿನಲ್ಲಿ ಚರ್ಚೆಯೂ ಆಗಿ, ಡಾ. ಅಂಬೇಡ್ಕರರ ನೇತೃತ್ವದಲ್ಲಿ ಹಾಗೊಂದು ಹಕ್ಕು, ಬಾಧ್ಯತೆಗಳ ಪಟ್ಟಿ ಸಿದ್ಧವಾಯಿತು. ಅದುವೇ ಭಾರತೀಯ ಸಂವಿಧಾನ.

ಅಂಬೇಡ್ಕರರು ರೂಪಿಸಿದ ಈ ಇಡೀ ಸಂವಿಧಾನವನ್ನು ಒಂದು ಸುಂದರವಾದ ಪುಸ್ತಕದ ರೂಪದಲ್ಲಿ ಬರೆಯಲಾಯಿತು. ಸಂಪೂರ್ಣ ಕೈಬರೆಹದ ಈ ಹಸ್ತಪ್ರತಿಯನ್ನು ಪಾರ್ಚಮೆಂಟಿನ ಮೇಲೆ ಬರೆಯಲಾಗಿದೆ. ಇಂಗ್ಲೀಷಿನಲ್ಲಿ ಒಂದು ಹಾಗೂ ಅದೇ ರೂಪ, ಮತ್ತು ಬರೆಹದ ಶೈಲಿ ಇರುವ ಹಿಂದಿ ರೂಪಾಂತರದ ಪ್ರತಿಯನ್ನೂ ಅಂದು ರಚಿಸಲಾಯಿತು. ಇವೆರಡನ್ನೂ ಈಗ ಪಾರಂಪರೆಯ ದ್ಯೋತಕವಾಗಿ ಪಾರ್ಲಿಮೆಂಟಿನ ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಈ ಮೂಲಪ್ರತಿಯನ್ನು ನಾವೆಲ್ಲರೂ ನೋಡಬಹುದೇ ಹೊರತು, ಮುಟ್ಟಲಾಗದು. ಏಕೆಂದರೆ ಅವು ಅತ್ಯಂತ ವಿಶಿಷ್ಟವಾದ ಡಬ್ಬಿಯೊಳಗೆ ಸಂಗ್ರಹವಾಗಿವೆ. ಈ ಡಬ್ಬಿಯ ರಚನೆ ಹಾಗೂ ಅದರ ಹಿಂದಿರುವ ವಿಜ್ಞಾನವನ್ನು ಕರೆಂಟ್ ಸೈನ್ಸ್ ಪತ್ರಿಕೆಯಲ್ಲಿ ಮೊನ್ನೆ ನ್ಯಾಶನಲ್ ಫಿಸಿಕಲ್ ಲ್ಯಾಬೊರೇಟರಿ ಅರ್ಥಾತ್ ಎನ್ಪಿಎಲ್ಲಿನ ಡಿ. ಕೆ. ಆಸ್ವಾಲ್ ಮತ್ತು ರಂಜನಾ ಮೆಹ್ರೋತ್ರ ವರದಿ ಮಾಡಿದ್ದಾರೆ. ಸಂವಿಧಾನದ ರಕ್ಷಣೆಯ ಈ ಕಥೆ ಸ್ವಾರಸ್ಯಕರವಾಗಿದೆ.

ಸಂವಿಧಾನವನ್ನು ಮುಟ್ಟಲಾಗದು ಎಂದೆನಲ್ಲವೇ? ಅದನ್ನು ಭದ್ರವಾಗಿ ಕೂಡಿಟ್ಟಿರುವುದಷ್ಟೆ ಇದಕ್ಕೆ ಕಾರಣವಲ್ಲ. ಇದು ಭಾರೀ ಪುಸ್ತಕ. ಸುಮಾರು 14 ಕಿಲೋಗ್ರಾಂ ಭಾರವಿದೆ. ಪ್ರತಿಯೊಂದು ಪುಟವೂ ಒಂದೂವರೆ ಅಡಿ ಅಗಲ ಎರಡೂವರೆ ಅಡಿ ಉದ್ದವಿದೆ. ಇಂಗ್ಲೀಷು ಪ್ರತಿಯಲ್ಲಿ ಒಟ್ಟು 221 ಪುಟಗಳೂ, ಹಿಂದೀ ಪ್ರತಿಯಲ್ಲಿ 252 ಪುಟಗಳಿವೆ. ಇಂಗ್ಲೀಷು ಪ್ರತಿಯನ್ನು ಪ್ರೇಮ್ ಬಿಹಾರಿ ನಾರಾಯಣ್ ರಾಯ್ಜಾದಾ ಎನ್ನುವವರೂ, ಹಿಂದಿಯನ್ನು ಬಸಂತರಾವ್ ವೈದ್ಯ ಎನ್ನುವವರೂ ಸುಂದರ ಹಸ್ತಲಿಪಿಯಲ್ಲಿ ಬರೆದಿದ್ದಾರೆ. ಇಡೀ ಪುಸ್ತಕದ ಅಂಚಿಗೆ ಇರುವ ಚೌಕಟ್ಟಿನಲ್ಲಿ ಮೊಹೆಂಜೊದಾರೋವಿನಿಂದ ಸ್ವಾತಂತ್ರ್ಯ ದೊರೆಯುವವರೆಗಿನ ಚರಿತ್ರೆಯನ್ನು ಶ್ಯಾಮಲಾಲ್ ಬೋಸ್ ಎನ್ನುವವರು ರಚಿಸಿದ್ದಾರೆ. ಪುಸ್ತಕಕ್ಕೆ ದಪ್ಪ ತೊಗಲಿನ ಹೊದಿಕೆ ಇದ್ದು ಅದರ ಮೇಲೆ ಚಿನ್ನದ ಅಕ್ಷರಗಳಲ್ಲಿ ಬರೆಯಲಾಗಿದೆ. ಹೀಗೆ ಇವು ಕೇವಲ ಚಾರಿತ್ರಿಕ ದಾಖಲೆಗಳಷ್ಟೆ ಅಲ್ಲ, ಕಲೆ ಹಾಗೂ ಪಾರಂಪರಿಕ ವಸ್ತುವೂ ಆಗಿವೆ.

ಲೋಕಸಭೆಯ ಗ್ರಂಥಾಲಯದಲ್ಲಿ ಇರುವ ಸಂವಿಧಾನದ ಮೂಲ ಪ್ರತಿಗಳು. ಕೃಪೆ: ಕರೆಂಟ್ ಸೈನ್ಸ್

ತೊಗಲು, ಪಾರ್ಚಮೆಂಟು, ಪುಸ್ತಕ ಬರೆಯಲು ಬಳಸಿರುವ ಇದ್ದಿಲಿನ ಶಾಯಿ ಇವೆಲ್ಲವೂ ನೀರಿಗೆ, ಗಾಳಿಯ ಹೊಡೆತಕ್ಕೆ ಹಾಳಾಗಬಲ್ಲಂತಹ ವಸ್ತುಗಳು. ಹೀಗಾಗಿ ಈ ಸಂವಿಧಾನದ ಪುಸ್ತಕವನ್ನು ಹಾಳಾಗದಂತೆ ಸಂರಕ್ಷಿಸುವುದೂ ಒಂದು ಸವಾಲು ಎನ್ನುತ್ತಾರೆ ಅಸ್ವಾಲ್ ಮತ್ತು ಮೆಹ್ರೋತ್ರ. ಸ್ವಾತಂತ್ರ್ಯ ಬಂದು ಸುಮಾರು ನಲವತ್ತು ವರ್ಷಗಳು ಕಳೆದ ಮೇಲೆ ಈ ಹೊತ್ತಿಗೆಯನ್ನು ಮತ್ತೊಮ್ಮೆ ಪರೀಕ್ಷಿಸಲಾಯಿತು. ನ್ಯಾಶನಲ್ ಫಿಸಿಕಲ್ ಲ್ಯಾಬೊರೇಟರಿಯ ವಿಜ್ಞಾನಿಗಳು ಪುಸ್ತಕದ ಹಾಳೆಗಳು, ಹೊದಿಕೆ ಹಾಗೂ ಶಾಯಿಯ ಸ್ವರೂಪದಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ ಎಂದು ಅದನ್ನು ಮುಟ್ಟದೆಯೇ ತಿಳಿಯಲು ಪ್ರಯತ್ನಿಸಿದರು. ಇದಕ್ಕಾಗಿ ರಾಸಾಯನಿಕಗಳು ಹಾಗೂ ಖನಿಜ ವಸ್ತುಗಳನ್ನು ವಿಶ್ಲೇಷಿಸಲು ಬಳಸುವ ತಂತ್ರಗಳನ್ನು ಬಳಸಲಾಯಿತು. ಪುಸ್ತಕಕ್ಕೆ ಹಾನಿಯೇನೂ ಆಗಿಲ್ಲವೆನ್ನುವುದು ತಿಳಿದ ಮೇಲೆ ಅದನ್ನು ರಕ್ಷಿಸುವುದರ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಯಿತು. ಯುಕ್ತ ವಿಧಾನವನ್ನು ರೂಪಿಸಲು ವಿಜ್ಞಾನಿಗಳ ತಂಡವೊಂದು ಈ ಕೆಲಸವನ್ನು ಮಾಡಿತು. ಇದಕ್ಕೆ ಸುಮಾರು ಒಂದು ದಶಕವೇ ತಗುಲಿತಂತೆ.

ಹಾಳೆಗಳು ಹಾಳಾಗಲು ಪ್ರಮುಖ ಮೂರು ಕಾರಣಗಳಿವೆ. ಗಾಳಿಯಲ್ಲಿರುವ ತೇವಾಂಶ, ಆಕ್ಸಿಜನ್ನು ಹಾಳೆಗಳನ್ನು ಆಕ್ಸಿಡೀಕರಿಸಿ ಹಾಳುಗೆಡಬಹುದು. ಅಥವಾ ಸೂಕ್ಷ್ಮಜೀವಿಗಳು ಹಾಳೆಗಳನ್ನು ಆವರಿಸಿ ತಿಂದು ಹಾಳುಗೆಡವಬಹುದು. ಇಲ್ಲವೇ ವಾಯುಮಾಲಿನ್ಯದಿಂದಾಗಿಯೂ ಅದು ಹಾಳಾಗಬಹುದು. ಆದ್ದರಿಂದ ಗಾಳಿಯೇ ತಾಗದಂತೆ ಭದ್ರವಾದ ಕಪಾಟಿನಲ್ಲಿ ಹಾಗೂ ಆಕ್ಸಿಜನ್ ಇಲ್ಲದ ವಾತಾವರಣದಲ್ಲಿ ಇಟ್ಟರೆ ಸಂವಿಧಾನವನ್ನು ಹಲವು ನೂರು ವರ್ಷಗಳ ಕಾಲ ಕಾದಿಡಬಹುದು ಎಂದು ತರ್ಕಿಸಲಾಯಿತು. ಹಾಗೂ ಇದಕ್ಕಾಗಿ ಅಂತಹುದೊಂದು ಪೆಟ್ಟಿಗೆಯನ್ನು ತಯಾರಿಸಲೂ ತೀರ್ಮಾನಿಸಲಾಯಿತು.
ಡಬ್ಬಿಯನ್ನು ತಯಾರಿಸಬಹುದು. ಆದರೆ ಗಾಜಿನ ಮುಚ್ಚಳವನ್ನು ಗಾಳಿಯು ಒಳಸೇರದಂತೆ ಭದ್ರಪಡಿಸುವುದು ಸವಾಲಾಗಿತ್ತು. ಅದಕ್ಕಾಗಿ ಆಗ ಮೂರು ವಿಧಾನಗಳಷ್ಟೆ ಲಭ್ಯವಿದ್ದುವು. ಮೊದಲನೆಯದಾಗಿ ಬೆಳ್ಳಿ-ಸೀಸದ ಲೋಹವನ್ನು ಗಾಜಿನ ಮುಚ್ಚಳದ ಅಂಚಿನಲ್ಲಿ ಲೇಪಿಸಿ, ಭದ್ರವಾಗಿ ಮುಚ್ಚುವುದು; ಇಲ್ಲವೇ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಇರುವಂತೆ ರಬ್ಬರ್ ಬಳೆಯೊಂದನ್ನಿಟ್ಟು ಗಾಳಿ ಒಳನುಸುಳದಂತೆ ಕಾಯುವುದು, ಇಲ್ಲವೇ ಪಾಲಿಮರ್ ಅಂಟುಗಳಿಂದ ಮುಚ್ಚುವುದು. ಗಾಜಿನ ಮುಚ್ಚಳವಿರುವಂತಹ, ಮರದ ಡಬ್ಬಿಗಳನ್ನು ಈ ಮೂರೂ ವಿಧಾನಗಳನ್ನು ಬಳಸಿ ತಯಾರಿಸಿ ಪರೀಕ್ಷಿಸಲಾಯಿತು. ಆದರೆ ಇವುಗಳು ಬಲು ದೀರ್ಘಕಾಲ ಭದ್ರವಾಗಿ ಇರುವುದು ಸಂದೇಹಾಸ್ಪದವಾದ್ದರಿಂದ ಇದಕ್ಕಾಗಿ ಜರ್ಮನಿ ಹಾಗೂ ಫ್ರೆಂಚ್ ತಜ್ಞರನ್ನು ಸಂಪರ್ಕಿಸಲಾಯಿತು. ಅಮೆರಿಕೆಯಲ್ಲಿ ಪುರಾತನ ಮಮ್ಮಿಗಳನ್ನು ಕಾದಿಡಲೆಂದು ರೂಪಿಸಿದ್ದ ಡಬ್ಬಿಗಳ ಬಳಸಿದರೆ ಸಂವಿಧಾನವನ್ನು ಬಲು ದೀರ್ಘಕಾಲ ಕಾದಿಡಬಹುದು ಎಂದು ಅವರು ಶಿಫಾರಿಸು ಮಾಡಿದರು. ಈ ಮೇರೆಗೆ ಅಮೆರಿಕೆಯ ಗೆಟ್ಟಿ ಕನ್ಸರ್ವೇಶನ್ ಇನ್ಸ್ಟಿಟ್ಯೂಟಿನ ಜೊತೆಗೆ ಒಪ್ಪಂದ ಮಾಡಿಕೊಂಡು ಹೊಸದೊಂದು ಪೆಟ್ಟಿಗೆಯನ್ನು ರಚಿಸಲಾಯಿತು
ಸಂಪೂರ್ಣ ಉಕ್ಕಿನ ಟ್ಯೂಬುಗಳಿಂದ ರಚಿಸಿದ ಹಂದರದಲ್ಲಿ ಈ ಗಾಳಿ ಒಳಸೇರದಂತೆ ಭದ್ರಪಡಿಸಿದ ಗಾಜಿನ ಡಬ್ಬಿಯನ್ನು ಕೂರಿಸಲಾಯಿತು. ಉಕ್ಕಿನ ಹಂದರ ಕಾಣದಂತೆ ಸುಂದರವಾದ ತೇಗದ ಚೌಕಟ್ಟು ಹೊದಿಸಲಾಯಿತು. ಅನಂತರ ಡಬ್ಬಿಯೊಳಗಿರುವ ಗಾಳಿಯ ತೇವಾಂಶ 40-50% ಇರುವಂತೆಯೂ, ಆಕ್ಸಿಜನ್ ಪ್ರಮಾಣ ಕೇವಲ 1% ಇರುವಂತೆಯೂ ನೋಡಿಕೊಳ್ಳಲಾಯಿತು. ಈ ಗುಣಮಟ್ಟದಲ್ಲಿ ಏರುಪೇರಾಗುವುದನ್ನು ತಿಳಿಯಲು ಒಂದು ಸಂವೇದಕವನ್ನೂ ಅಳವಡಿಸಲಾಯಿತು. ವರ್ಷಕ್ಕೊಮ್ಮೆ ಈ ಸಂವೇದಕವನ್ನು ಪರೀಕ್ಷಿಸಿ ಗುಣಮಟ್ಟವನ್ನು ತಿಳಿಯಲಾಗುತ್ತದೆ. ಹಿಂದಿ ಹಾಗೂ ಇಂಗ್ಲೀಷಿನ ಪ್ರತಿಗಳೆರಡನ್ನೂ ಇಂತಹ ಡಬ್ಬಿಗಳಲ್ಲಿಟ್ಟು, ಇವುಗಳನ್ನು ಇಡಲೆಂದೇ ನಿರ್ಮಿಸಿದ ವಿಶೇಷ ಹವಾನಿಯಂತ್ರಿತ ಕೋಣೆಯೊಳಗೆ ಕೂಡಿಡಲಾಗಿದೆ.
ಕೊನೆಗೆ 1994ರ ಮಾರ್ಚಿಯಲ್ಲಿ ಈ ಪೆಟ್ಟಿಗೆಗಳು ಪಾರ್ಲಿಮೆಂಟಿನ ಗ್ರಂಥಾಲಯದಲ್ಲಿ ಸ್ಥಾಪನೆಯಾದುವು. ಇದೋ ಹೀಗೆ ನಡೆಯಿತು ನಮ್ಮ ಸಂವಿಧಾನದ ಸಂರಕ್ಷಣೆ.
ಆಕರ: D. K. ASWAL & RANJANA MEHROTRA ‘Constitution of India’: Preservation of original CURRENT SCIENCE, VOL. 115, NO. 4, Pp 788 25 AUGUST 2018


3. ಸುಗಂಧಿತ ಬ್ಯಾಂಡೇಜು?
ಗಿರಿಯವರ ಗತಿಸ್ಥಿತಿ ಕಾದಂಬರಿಯಲ್ಲಿ ಹೋಟೆಲೊಂದರ ವಿವರಣೆ ಇದೆ. ಹಳದಿ ಗೋಡೆಗಳು, ಸದ್ದು ಮಾಡುವ ಫ್ಯಾನು, ಬಿಸಿಯೇರಿದ ಕೋಣೆ ಇತ್ಯಾದಿ. ಇದೇ ರೀತಿಯಲ್ಲಿ ಆಸ್ಪತ್ರೆಯ ವಿವರಣೆ ಬೇಕೆಂದರೆ, ಬಿಳಿಯ ಗೋಡೆಗಳು, ಉಸಿರುಗಟ್ಟಿಸುವ ಡೆಟ್ಟಾಲು ವಾಸನೆ, ದಾದಿಯರ ಕೂಗು ಎಂದೆಲ್ಲ ವಿವರಿಸಬಹುದು. ಕರೆಂಟ್ ಸೈನ್ಸ್ ಪತ್ರಿಕೆಯಲ್ಲಿ ವರದಿಯಾಗಿರುವ ಸಂಶೋಧನೆಯೊಂದು ಆಸ್ಪತ್ರೆಯ ವಿವರಣೆಯನ್ನು ತುಸು ಬದಲಿಸಿ ಎನ್ನುತ್ತದೆ. ಇದರಲ್ಲಿ ಕೊಮಾರಪಾಳಯಂನಲ್ಲಿರುವ ಎಸ್ಸೆಸ್ಸೆಮ್ ಪಾಲಿಟೆಕ್ನಿಕ್ಕಿನ ವಸ್ತ್ರತಜ್ಞ ಬಾಬುಷ್ಕಿನ್ ಮತ್ತು ಬಾಲಮುರುಗನ್ನರ ಸಂಶೋಧನೆಗೆಳ ಪ್ರಕಾರ ಇನ್ನು ಮುಂದೆ ಆಸ್ಪತ್ರೆಗಳ ವಾಸನೆ ಡೆಟಾಲಿನದಲ್ಲ. ಸುಗಂಧಿತ ತೈಲಗಳದ್ದೂ ಆಗಬಹುದು. ಏಕೆಂದರೆ ಬ್ಯಾಕ್ಟೀರಿಯಾಗಳನ್ನು ಬೆಳೆಯಗೊಡದಂತಹ ಬಟ್ಟೆಗಳನ್ನು ತಯಾರಿಸುವುದು ಸಾಧ್ಯ ಎಂದು ಇವರು ನಿರೂಪಿಸಿದ್ದಾರೆ.

ಆಸ್ಪತ್ರೆಗೂ ಬ್ಯಾಕ್ಟೀರಿಯಾಗೂ ಬಲು ನಿಕಟ ಸಂಬಂಧವಿದೆಯಷ್ಟೆ. ಸೋಂಕು ತಗುಲಿ ಆಸ್ಪತ್ರೆ ಸೇರಿದವರಷ್ಟೆ, ಆಸ್ಪತ್ರೆ ಸೇರಿದ ಮೇಲೆ ಸೋಂಕು ತಗುಲಿ ನರಳಿದವರೂ ಉಂಟು. ಅದಕ್ಕಾಗಿಯೇ ಆಸ್ಪತ್ರೆಗಳು ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಔಷಧಗಳು ಹಾಗೂ ಶುಚಿಕಾರಕಗಳಿಗೆ ಸಾಕಷ್ಟು ಹಣ ವೆಚ್ಚ ಮಾಡಬೇಕಾಗುತ್ತದೆ. ಕಾಸು ಕೊಟ್ಟರೂ ಮೂಗಿಗೆ ಘಾಟು ಬಡಿಸುವ ಅಂತಹ ರಾಸಾಯನಿಕಗಳ ಬದಲಿಗೆ ಸುಗಂಧಿತ ದ್ರವ್ಯಗಳನ್ನು ಬಳಸಿದರೆ ಹೇಗೆ? ಇದು ಬಾಬುಷ್ಕಿನ್ ಯೋಚನೆ.

ನೀಲಗಿರಿ ತೈಲ, ತುಳಸಿ ಎಣ್ಣೆ, ಇತ್ಯಾದಿ ಸುಗಂಧಿತ ತೈಲಗಳು ಬ್ಯಾಕ್ಟೀರಿಯಾಗಳನ್ನು ದೂರವಿಡಬಲ್ಲುವು ಎಂಬ ವಿಷಯ ಹೊಸತೇನಲ್ಲ. ಹಾಗೆಯೇ ಬೇವಿನ ಎಣ್ಣೆ ತುಸು ಕಡುವಾದರೂ ಅದ್ಭುತ ಬ್ಯಾಕ್ಟೀರಿಯಾ ಮಾರಕ. ಇವೆಲ್ಲವನ್ನೂ ಬಟ್ಟೆಯ ಮೇಲೆ ಬಳಸಿ ಬ್ಯಾಂಡೇಜಿನಂತೆಯೋ, ಆಸ್ಪತ್ರೆಯ ದಿರಿಸಿನಂತೆಯೋ ಬಳಸಿದರೆ ಬ್ಯಾಕ್ಟೀರಿಯಾದ ದಾಂಧಲೆಯನ್ನು ತುಸು ಕಡಿಮೆ ಮಾಡಬಹುದು ಎನ್ನುವುದು ಬಾಬುಷ್ಕಿನ್ ಯೋಚನೆ.


ಇದಕ್ಕಾಗಿ ಬಾಬುಷ್ಕಿನ್ ತುಳಸಿ, ನೀಲಗಿರಿ ತೈಲ ಹಾಗೂ ಬೇವಿನೆಣ್ಣೆಯನ್ನು ಸಂಸ್ಕರಿಸಿ ಬಳಸಿದ್ದಾರೆ. ತುಳಸಿ ಎಲೆ, ನೀಲಗಿರಿಯ ಎಲೆ, ಬೀಜ ಹಾಗೂ ಬೇವಿನ ಬೀಜಗಳನ್ನು ಅರೆದು, ಉಗಿಯಲ್ಲಿ ಬೇಯಿಸಿ ಎಣ್ಣೆ ತೆಗೆದಿದ್ದಾರೆ. ಪುಟ್ಟ ಹತ್ತಿಯ

ಬಟ್ಟೆಯ ತುಣುಕುಗಳನ್ನು ಈ ಎಣ್ಣೆಯೊಳಗೆ ಅದ್ದಿ ತೆಗೆದಿದ್ದಾರೆ. ಅನಂತರ ಅದನ್ನು ತುಸು ಬಿಸಿಗಾಳಿಯಲ್ಲಿ ಆರಲು ಬಿಟ್ಟು, 120 ಡಿಗ್ರಿ ಉಷ್ಣತೆಯಲ್ಲಿ ಬೇಯಿಸಿದ್ದಾರೆ. ವಿವಿಧ ಬಗೆಯ ಬ್ಯಾಕ್ಟೀರಿಯಾಗಳನ್ನು ಕೃಷಿ ಮಾಡಿ ಅವುಗಳ ಮೇಲೆ ಈ ಬಟ್ಟೆಯನ್ನು ಹೊದಿಸಿದ್ದಾರೆ. ಬ್ಯಾಕ್ಟೀರಿಯಾಗಳ ಬೆಳೆವಣಿಗೆಗೆ ಏನಾಗುತ್ತದೆ ಎಂದು ಗಮನಿಸಿದ್ದಾರೆ. ಬಟ್ಟೆಯ ಸುತ್ತಲೂ ಬ್ಯಾಕ್ಟೀರಿಯಾಗಳು ಬೆಳೆಯದ ಜಾಗೆ ಎಷ್ಟಿತ್ತು ಎಂದು ಗಮನಿಸಿದ್ದಾರೆ. ಇದು ಬಟ್ಟೆಯು ಬ್ಯಾಕ್ಟೀರಿಯಾಗಳನ್ನು ಬೆಳೆಯಗೊಡುತ್ತಿಲ್ಲ ಎನ್ನುವುದಕ್ಕೆ ಸೂಚಿ.

ಒಂದಲ್ಲ ಎರಡಲ್ಲ. ಬ್ಯಾಸಿಲಸ್ ಸಟಿಲಿಸಿ, ಸ್ಯುಡೊಮೋನಾಸ್ ಎರುಜಿನೋಸ, ಸ್ಟಫೈಲೊಕಾಕಸ್ ಆರಿಯಸ್, ಕ್ಯಾಂಡಿಡಾ ಆಲ್ಬಿಕನ್ಸ್ ಹಾಗೂ ಎಶ್ಚರಿಶಿಯಾ ಕೋಲಿ ಐದು ಬ್ಯಾಕ್ಟೀರಿಯಾಗಳನ್ನ ಬೆಳೆಸಿ, ಈ ತೈಲ ಲೇಪಿತ ಬಟ್ಟೆಗಳ ಪ್ರಭಾವವೇನು ಎಂದು ಪರೀಕ್ಷಿಸಿದ್ದಾರೆ. ಈ ಐದೂ ಬ್ಯಾಕ್ಟೀರಿಯಾಗಳೂ ಆಸ್ಪತ್ರೆಯಿಂದ ನಾವು ಹೊತ್ತು ತರುವ ಸೋಂಕುಗಳನ್ನುಂಟು ಮಾಡುವ ಜೀವಿಗಳು. ಜೊತೆಗೆ ಈ ಬಟ್ಟೆಗಳನ್ನು ಮತ್ತೆ ಮತ್ತೆ ಒಗೆದು ಬಳಸಿದ್ದಾರೆ. ಮೂರು ಬಾರಿ ಒಗೆದ ಮೇಲೂ ತುಳಸಿ ಹಾಗೂ ಬೇವಿನೆಣ್ಣೆಗಳ ಪ್ರಭಾವ ಉಳಿದಿತ್ತು. ನೀಲಗಿರಿ ಎಣ್ಣೆಯ ಪ್ರಭಾವ ಒಮ್ಮೆ ಒಗೆದ ಮೇಲಷ್ಟೆ ಕಂಡಿತಂತೆ. ಇವೆಲ್ಲವುಗಳಲ್ಲಿ ಬೇವಿನೆಣ್ಣೆಯ ಪ್ರಭಾವ ದೀರ್ಘಕಾಲ ಉಳಿದಿತ್ತು ಎಂದು ಇವರು ಸೂಚಿಸಿದ್ದಾರೆ.

ಅಂತೂ ಘಮಘಮಿಸುವ ಬ್ಯಾಂಡೇಜು ಬರುವ ಕಾಲ ಬಂದಿತು ಎನ್ನೋಣವೇ?
ಆಕರ: G. K. Balamurugan and S. Babuskin, Antimicrobial coating of cotton twill tape with neem oil, eucalyptus oil and tulsi oil for medicinal application. CURRENT SCIENCE, VOL. 115, NO. 4, Pp 779-882, 25 AUGUST 2018
ಲಿಂಕ್: http://www.currentscience.ac.in/Volumes/115/04/0779.pdf


4. ತುಂತುರು ಸುದ್ದಿಗಳು

• ಎಚ್ಚರದಿಂದ ಆಯ್ದ ಕೆಲವು ಕಿಣ್ವಗಳನ್ನು ಸಣ್ಣ ಗುಳ್ಳೆಗಳೊಳಗೆ ತುಂಬಿ ತೊಟ್ಟಿಯ ತಳದಲ್ಲಿಟ್ಟು ಬೇಕೆಂದಾಗ ಅವು ಮೇಲೆ ತೇಲುವಂತೆಯೂ, ಕೆಳಗೆ ಸರಿಯುವಂತೆಯೂ ಮಾಡಬಹುದಂತೆ. ಹೀಗೊಂದು ಸ್ವಾರಸ್ಯಕರವಾದ ರಸಾಯನದ ಚಮತ್ಕಾರದ ಬಗ್ಗೆ ಮುಂದಿನ ವಾರ ಕೇಳುವಿರಿ.
• ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಪುಟ್ಟ ಸಾಸಿವೆ ಕಾಳಿನ ಗಾತ್ರದ ಕೀಟವೊಂದು ಇಡೀ ಪ್ರಪಂಚದ ಧಾನ್ಯದ ಮಾರುಕಟ್ಟೆಗಳು ಕುಸಿಯದಂತೆ ಕಾಪಾಡಿರಬಹುದಂತೆ. ಇದೋ ಸಂಕೀರ್ಣವಾದ ಜೈವಿಕ ಕೀಟ ನಿಯಂತ್ರಣ ಹೀಗೂ ಸಾಧ್ಯ ಎಂದು ಎನ್ವಿರಾನ್ಮೆಂಟಲ್ ರಿಸರ್ಚ್ ಲೆಟರ್ಸ್ ಪತ್ರಿಕೆ ವರದಿ ಮಾಡಿದೆ. ಈ ಬಗ್ಗೆ ಇನ್ನಷ್ಟು ವಿವರಗಳು ಮುಂದಿನ ಜಾಣಸುದ್ದಿಯಲ್ಲಿ ಕೇಳೋಣ.
• ಭಾರತ, ಮಲೇಶಿಯಾ, ಆಫ್ರಿಕಾ, ದಕ್ಷಿಣ ಅಮೆರಿಕಾದಂತಹ ಉಷ್ಣವಲಯದ ಪ್ರದೇಶಗಳ ಜನರನ್ನಷ್ಟೆ ಕಾಡುತ್ತಿದ್ದ ಶಿಸ್ಟೊಸೋಮಿಯಾಸಿಸ್ ಇದೀಗ ಯುರೋಪಿನಲ್ಲೂ ಕಂಡು ಬಂದಿದೆ. ಇದು ಸುಮ್ಮನೆ ವಲಸೆ ಬಂದ ಪರಜೀವಿಯಲ್ಲ. ಎರಡು ವಿವಿಧ ಪ್ರಭೇದಗಳು ಕೂಡಿ ಹುಟ್ಟಿದ ಮಿಶ್ರತಳಿ. ತನ್ನ ಜನ್ಮದಾತರಿಗಿಂತಲೂ ಬಲು ಅಪಾಯಕಾರಿಯಂತೆ.
• ಭೂಮಿ ಬಿಸಿಯೇರುತ್ತಿದೆ. ಇದರ ಪರಿಣಾಮಗಳು ಹಲವು. ನಮ್ಮ ಭೂಮಿಯ ಮೇಲ್ಮೈ ತಾಪಮಾನ ಸರಾಸರಿ ಒಂದು ಡಿಗ್ರಿಯಷ್ಟು ಹೆಚ್ಚಾದರೂ ಭಾರತದಂತಹ ಉಷ್ಣವಲಯದ ನಾಡುಗಳಲ್ಲಿ ಬೆಳೆಯುವ ಭತ್ತ, ಗೋಧಿ ಹಾಗೂ ಮೆಕ್ಕೆಜೋಳದ ಇಳುವರಿಯಲ್ಲಿ ಶೇಕಡ ಹತ್ತರಿಂದ ಇಪ್ಪತ್ತೈದರಷ್ಟು ನಷ್ಟವಾಗಬಹುದು ಎಂದು ಸೈನ್ಸ್ ವರದಿ ಮಾಡಿದೆ.


5. ಅಜೋಯೀನ್ ಸಂಶ್ಲೇಷಣೆ
ಕೆಟ್ಟ ಬೆಳ್ಳುಳ್ಳಿ ಇಲ್ಲವೇ ಈರುಳ್ಳಿಯ ವಾಸನೆ ಕುಡಿದಿದ್ದೀರಾ? ನೀವು ಎಲ್ಲೆ ಹೋದರೂ ಹಿಂಬಾಲಿಸಿಕೊಂಡು ಬಂದಷ್ಟು ಘಾಟಾಗಿ ಅದು ಕಾಡಬಲ್ಲುದು. ಬೆಳ್ಳಳ್ಳಿ ಹಾಗೂ ಈರುಳ್ಳಿಯಂತಹ ವಸ್ತುಗಳ ವಾಸನೆಯೇ ಹಾಗೆ. ಗಾಢವಾದ ಗಂಧಕದ ರಾಸಾಯನಿಕಗಳ ಮೂಲ ಇವು. ಇವುಗಳಲ್ಲಿರುವ ಸ್ವಾದವಸ್ತುಗಳು ಹಾಗೂ ಎಣ್ಣೆಯಂತಹ ವಸ್ತುಗಳಿಗೆ ಔಷಧ ಗುಣವಿದೆ ಎನ್ನುವುದೂ ಗೊತ್ತು. ಉದಾಹರಣೆಗೆ, ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಅದಕ್ಕೂ ಹೃದಯದ ಆಕಾರ ಇದೆ ಎನ್ನುವುದರಿಂದಲ್ಲ. ಅದರಲ್ಲಿರುವ ಹಲವು ರಾಸಾಯನಿಕಗಳ ಪ್ರಭಾವದಿಂದ ಅಷ್ಟೆ. ಬೆಳ್ಳುಳ್ಳಿಯಲ್ಲಿರ ಅಲಿಸಿನ್ ಎನ್ನುವ ವಸ್ತುವಿದೆ. ಇದುವೇ ಅದರ ಬಹುತೇಕ ಔಷಧಗುಣಗಳಿಗೆ ಮೂಲ.

ಈ ರಾಸಾಯನಿಕವನ್ನು ಪ್ರತ್ಯೇಕಿಸಿ ಬಳಸಿದರೆ ಇನ್ನೂ ಚೆನ್ನ ಎನ್ನುವ ನಿಮ್ಮ ಕಲ್ಪನೆ ನಿಜಕ್ಕೂ ಚೆನ್ನ. ದುರಾದೃಷ್ಟ ಎಂದರೆ ಅಲಿಸಿನ್ ಬಲು ಅಸ್ಥಿರ ವಸ್ತು. ಒಂದಿಷ್ಟು ಹೊತ್ತು ತೆರೆದಿಟ್ಟರೆ ಸಾಕು ಇತರೆ ವಸ್ತುಗಳಾಗಿ ಪರವರ್ತನೆಗೊಂಡು ನಷ್ಟವಾಗಿ ಬಿಡುತ್ತದೆ. ಹೀಗಾಗಿ ಅಲಿಸಿನನ್ನು ಶುದ್ಧ ರೂಪದಲ್ಲಿಯಾಗಲಿ, ಕೃತಕವಾಗಿ ತಯಾರಿಸಿ ಬಳಸಲು ಸಾಧ್ಯವಾಗಿಲ್ಲ. ಇದೋ. ಅದಕ್ಕೊಂದು ಪರ್ಯಾಯ ಉಪಾಯವಿದೆಯಂತೆ. ಅಲಿಸಿನ್ನಿನಿಂದ ಹುಟ್ಟುವ ಆದರೆ ನಮ್ಮ ದೇಹದಲ್ಲಿ ಹಲವು ಒಳ್ಳೆಯ ಕಾರ್ಯಗಳನ್ನು ಮಾಡುವ ಅಜೋಯೀನನ್ನು ಕೃತಕವಾಗಿ ತಯಾರಿಸಬಹುದು ಎನ್ನುವ ಸುದ್ದಿ ಬಂದಿದೆ. ಅಜೋಯೀನು ಅಲಿಸಿನ್ನಿಗಿಂತಲೂ ಸ್ಥಿರವಾದ ವಸ್ತು. ಸುಲಭವಾಗಿ ನಷ್ಟವಾಗುವುದಿಲ್ಲ. ಜೊತೆಗೆ ನಮ್ಮ ದೇಹವನ್ನು ಅಲಿಸಿನ್ ಪ್ರಭಾವಿಸುವುದೂ ಅಜೋಯೀನಿನ ಮೂಲಕವೇ. ಇದೀಗ ಇಂಗ್ಲೆಂಡಿನ ಕಾರ್ಡಿಫ್ ವಿಶ್ವವಿದ್ಯಾನಿಲಯದ ರಸಾಯನ ವಿಜ್ಞಾನಿ ಥಾಮಸ್ ವಿರ್ಥ್ ಅಲ್ಲಿಯದೇ ನೀಮ್ ಬಯೋಟೆಕ್ ಕಂಪೆನಿಯ ವಿಜ್ಞಾನಿಗಳೊಡಗೂಡಿ ಕೃತಕವಾಗಿ ಅಜೋಯೀನ್ ತಯಾರಿಸುವ ವಿಧಾನವನ್ನು ರೂಪಿಸಿರುವುದಾಗಿ ಆಂಗೆವಾಡ್ತೆ ಕೀಮೀ ಇಂಟರ್ನ್ಯಾಶನಲ್ ಎಡಿಶನ್ ಪತ್ರಿಕೆ ಕಳೆದ ವಾರ ವರದಿ ಮಾಡಿದೆ.
ಅಜೋಯೀನನ್ನು ಕೃತಕವಾಗಿ ತಯಾರಿಸಲು ನಡೆದ ಪ್ರಯತ್ನಗಳಲ್ಲಿ ಇದು ಮೊದಲನೆಯದಲ್ಲ. ಈ ಹಿಂದೆ ಅಲಿಸಿನ್ನನ್ನೇ ಬಳಸಿಕೊಂಡು, ಅಸಿಟೋನಿನ ಜೊತೆ ವರ್ತಿಸುವಂತೆ ಮಾಡಿ ಅಜೋಯೀನನ್ನು ತಯಾರಿಸುವ ಯತ್ನಗಳು ನಡೆದಿದ್ದುವು. ಇವು ತುಸು ಸಫಲವಾಗಿದ್ದರೂ ಕೂಡ, ಬಳಸಿದ ಅಲಿಸಿನಿನ ಮೂರನೇ ಒಂದು ಭಾಗದಷ್ಟು ಮಾತ್ರವೇ ಅಜೋಯೀನಾಗಿ ಬದಲಾಗುತ್ತಿತ್ತು. ಕ್ರಿಯೆಯ ಫಲ ಚೆನ್ನಾಗಿರಲಿಲ್ಲ. ಇದಕ್ಕಿಂತಲೂ ಸುಲಭವಾದ, ಇಳುವರಿ ಹೆಚ್ಚು ಕೊಡುವ ಹಾಗೂ ಅಲಿಸಿನ್ನಿನ ಬದಲಿಗೆ ಸರಳ ರಾಸಾಯನಿಕಗಳನ್ನು ಬಳಸುವ ಕ್ರಮದ ಅಗತ್ಯವಿತ್ತು.

ಥಯೋಯೂರಿಯ ಎನ್ನುವ ವಸ್ತುವನ್ನು ಬ್ರೋಮೈಡುಗಳ ಜೊತೆಗೆ ಪ್ರತಿಕ್ರಯಿಸಿ ಅರೈಲ್ ಪ್ರೊಪೈಲ್ ಸೆಲೆನೈಡು ಎನ್ನುವ ವಸ್ತುವನ್ನು ಮೊದಲ ಹಂತದಲ್ಲಿ ತಯಾರಿಸಲಾಗುತ್ತದೆ. ತದನಂತರ ಈ ಸೆಲೆನೈಡಿನ ನಿರ್ದಿಷ್ಟ ಭಾಗಗಳನ್ನಷ್ಟೆ ಕ್ರಿಯೆಗೊಳಪಡಿಸಿದಾಗ ಎರಡು ರಾಸಾಯನಿಕಗಳು ರೂಪುಗೊಂಡುವು. ಇವೆರಡನ್ನೂ ಹೈಡ್ರೊಜನ್ ಪರಾಕ್ಸೈಡು ಅಥವಾ ಪೊಟ್ಯಾಶಿಯಂ ಹೈಡ್ರಾಕ್ಸೈಡಿನಂತಹ ಪ್ರಬಲ ರಾಸಾಯನಿಕಗಳ ಜೊತೆಗೆ ವರ್ತಿಸಿದಾಗ ಅಜೋಯೀನು ದೊರೆಯಿತು ಎಂದು ವಿರ್ಥ್ ಬರೆದಿದ್ದಾರೆ.
ರಾಸಾಯನಿಕ ಕ್ರಿಯೆ ನಡೆಯುವಾಗಿನ ಉಷ್ಣತೆ, ವಿವಿಧ ರಾಸಾಯನಿಕಗಳ ಸಾಂದ್ರತೆ, ಕ್ರಿಯೆಯ ಅವಧಿಯೇ ಮೊದಲಾದ ಪರಿಸ್ಥಿತಿಗಳನ್ನು ಸೂಕ್ತವಾಗಿ ಬದಲಿಸಿಕೊಂಡು ಥಯೋಲ್ ಯೂರಿಯಾದಿಂದ ಶೇಕಡ 87% ನಷ್ಟು ಅಜೋಯೀನು ಇಳುವರಿ ಪಡೆಯಬಹುದು ಎಂದು ಇವರು ನಿರೂಪಿಸಿದ್ದಾರೆ. ಹೀಗೆ ಕೃತಕವಾಗಿ ಪಡೆದ ಅಜೋಯೀನು ಹಾಗೂ ಬೆಳ್ಳುಳ್ಳಿಯಿಂದ ಹೆಕ್ಕಿದ ಅಜೋಯೀನುಗಳ ರಾಸಾಯನಿಕ ವರ್ತನೆಯನ್ನೂ ಇವರು ಹೋಲಿಸಿದ್ದಾರೆ. ನಮ್ಮ ದೇಹದಲ್ಲಿ ಇವು ವರ್ತಿಸುವ ಕಿಣ್ವಗಳನ್ನು ಪ್ರನಾಳಗಳಲ್ಲಿಟ್ಟು ಎಷ್ಟು ಭಾಗ ಬಳಕೆಯಾಗುತ್ತದೆ ಎಂದು ಪರೀಕ್ಷಿಸಿದ್ದಾರೆ. ಎರಡೂ ಅಜೋಯೀನುಗಳು ಒಂದೇ ಪ್ರಮಾಣದಲ್ಲಿ ಕಿಣ್ವಗಳನ್ನು ಬಳಸಿದುವು. ಅರ್ಥಾತ್, ಎರಡರಲ್ಲೂ ಯಾವುದೇ ವ್ಯತ್ಯಾಸವೂ ಇಲ್ಲ.
ಹೀಗೆ ಬೆಳ್ಳುಳ್ಳಿಯಲ್ಲಿನ ಅಜೋಯೀನನ್ನು ಕೃತಕವಾಗಿ ತಯಾರಿಸಬಹುದು ಎನ್ನುತ್ತಾರೆ ವಿರ್ಥ.
ಆಕರ: Filipa Silva et al., Short Total Synthesis of Ajoene, Angew. Chem. Int. Ed. 2018, 57, 1 – 5
ಆಕರ: DOI: 10.1002/anie.201808605


6. ಜಾಣಪ್ರಶ್ನೆ
ಹಾಂ. ಇನ್ನೇನು ಭಾರತವೂ ಗಗನಯಾನಕ್ಕೆ ಸಿದ್ಧವಾಗಿದೆ. ಇನ್ನೊಂದೈದು ವರ್ಷಗಳೊಳಗೆ ಇಸ್ರೊ ಸಂಸ್ಥೆ ಗಗನಯಾತ್ರಿಗಳನ್ನು ಹಾರಬಿಡಲಿದೆಯಂತೆ. ಈ ಯೋಜನೆಗೆ ಡಾ. ಲಲಿತಾಂಬ ಎನ್ನುವ ಮಹಿಳೆ ಸಾರಥಿಯಾಗಿದ್ದಾರೆ. ಈ ಮಧ್ಯೆ ಗಗನಕ್ಕೆ ಹಾರುವವರನ್ನು ಇಂಗ್ಲೀಷಿನಲ್ಲಿ ವ್ಯೋಮನಾಟ್ ಅಥವಾ ಗಗನಾಟ್ ಎಂದು ಕರೆಯಬಾರದೇಕೆ ಎನ್ನುವ ಸಲಹೆಗಳೂ ಬಂದಿದ್ದುವು. ಅಲ್ಲಾ. ಈಗಾಗಲೇ ಆಸ್ಟ್ರೋನಾಟ್ ಎನ್ನುವ ಪದವಿರುವಾಗ ಇದೇಕೆ ಎಂದಿರಾ? ಇರಲಿ. ಈ ಆಸ್ಟ್ರೊನಾಟ್ ಎನ್ನುವ ಪದ ಹುಟ್ಟಿದ್ದು ಕೂಡ ಅಚ್ಚರಿಯ ವಿಷಯ. ಆಸ್ಟ್ರೋ ಎಂದರೆ ತಾರೆ. ತಾರೆಯರತ್ತ ಪಯಣಿಸುವವ ಎಂಬ ಅರ್ಥದಲ್ಲಿ ಬ್ರಿಟನ್ನಿನ ಒಬ್ಬ ಕಥೆಗಾರ ಈ ಪದವನ್ನು ಹುಟ್ಟು ಹಾಕಿದ್ದರು. ಇದಕ್ಕೆ ಮೂಲ ಗ್ರೀಕ್ ಪದದಲ್ಲಿ ಇದ್ದ ಆರ್ಗೋನಾಟ್ ಎನ್ನುವ ಪದ. ಗ್ರೀಕ್ ಪುರಾಣದಲ್ಲಿ ಹೊಸ ನೆಲೆಯನ್ನು ಹುಡುಕಿ ಹೊರಟ ಪಯಣಿಗರನ್ನು ಆರ್ಗೊನಾಟ್ ಎಂದು ಹೆಸರಿಸಿದ್ದಾರೆ. ನಾಟ್ ಎಂದರೆ ಸಾಗರದ ಪಯಣಿಗ. ಹೀಗೆಯೇ ಅಂತರಿಕ್ಷದಲ್ಲಿ ಪಯಣಿಸುವವನನ್ನು ಆಸ್ಟ್ರೊನಾಟ್ ಎಂದು ಕರೆಯಲಾಯಿತು. ರಷ್ಯನ್ನರು ಇನ್ನೂ ವಿಸ್ತರಿಸಿ ಕಾಸ್ಮೊನಾಟ್ ಎನ್ನುವ ಪದವನ್ನೂ ಸೃಷ್ಟಿಸಿದ್ದರು. ಬರೇ ತಾರೆಗಳತ್ತ ಪಯಣಿಸುವವರಲ್ಲ. ವಿಶ್ವದಲ್ಲಿ ಪಯಣಿಸುವವರು ಎನ್ನುವ ಅರ್ಥದಲ್ಲಿ. ಹೀಗೆ ಹುಟ್ಟಿತು ಹೊಸ ಪದಗಳು. ಇದಕ್ಕೆ ಇನ್ನೂ ಕೂಡಿಸಬೇಕೇ?


7. ಜಾಣನುಡಿ
ಸೆಪ್ಟೆಂಬರ್ 2 , 1877

ಸಮಸ್ಥಾನಿಕಗಳು ಅಥವಾ ಐಸೋಟೋಪುಗಳು ಇವೆಯೆಂದು ನಿರೂಪಿಸಿದ ಇಂಗ್ಲಿಷ್ ರಸಾಯನವಿಜ್ಞಾನಿ ಫ್ರೆಡೆರಿಕ್ ಸಾಡಿ ಜನಿಸಿದ ದಿನ. ಈತ ಪರಮಾಣು ಸಂಖ್ಯೆಗಳು ಸಮಾನವಾಗಿದ್ದರೂ ಪರಮಾಣು ತೂಕ ಬೇರೆಯಾಗಿರುವಂತಹ ವಸ್ತುಗಳು ಒಂದೇ ಮೂಲವಸ್ತುವಿನ ವಿವಿಧ ರೂಪಗಳು. ಹೀಗಾಗಿ ಆವರ್ತ ಕೋಷ್ಟಕ ಅಥವಾ ಪೀರಿಯಾಡಿಕ್ ಟೇಬಲ್ಲಿನಲ್ಲಿ ಒಂದೇ ಮನೆಯೊಳಗೆ ಅವನ್ನು ಇರಿಸಬೇಕು. ಪ್ರತ್ಯೇಕವಾಗಿ ಅಲ್ಲ ಎಂದು ಹೇಳಿದ. ಜೊತೆಗೆ ಅಂತಹ ವಸ್ತುಗಳಿಗೆ ಐಸೋಟೋಪುಗಳು ಎಂದೂ ಹೆಸರಿಸಿದ. ಕನ್ನಡದಲ್ಲಿ ಇವನ್ನು ನಾವು ಸಮಸ್ಥಾನಿಗಳು ಎನ್ನುತ್ತೇವೆ. .

ರಚನೆ ಮತ್ತು ಪ್ರಸ್ತುತಿ : ಕೊಳ್ಳೇಗಾಲ ಶರ್ಮ. ಜಾಣಸುದ್ದಿ ಕುರಿತ ಸಲಹೆ, ಸಂದೇಹಗಳಿಗೆ ಹಾಗೂ ಜಾಣಪ್ರಶ್ನೆಗೆ ಉತ್ತರವಿದ್ದರೆ ನೇರವಾಗಿ 9886640328 ಈ ನಂಬರಿಗೆ ಕರೆ ಮಾಡಿ ಇಲ್ಲವೇ ವಾಟ್ಸಾಪು ಮಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x