ಕಣ್ಣೊಂದು ಕವಿತೆ ಕುಕ್ಕಿ, ಕವಿತೆಯೊಂದು ಕಣ್ಣ ಕುಕ್ಕಿ: ಶಿವಕುಮಾರ ಚನ್ನಪ್ಪನವರ

ಭಾಗ-1

“ಕಣ್ಣೊಂದು ಕವಿತೆ ಕುಕ್ಕಿ
ಗುಂಜಿ, ಗುಂಜಿಯಾಗಿ, ಗುಂಪಾಗಿ ಗೂಡಾಗಿ ಕೊರಗುತ್ತಿತ್ತು
ಅವಳ ಹೊಗಳದ ಪದವೊಂದು ಸಿಗದೇ”

ಇನ್ನೇನು ಹೂಬಿಸಲು ಸತ್ತು ಹೋಗುತ್ತದೆನ್ನುವ ಮಾತು ಅನುವಾಗುವಂಥ ಸಮಯವಾದ್ದರಿಂದ, ಎರಡರಿಂದ ಐದಾಳ ಇರುವ ವರದೆಯ ಬದುವಿಗೆ ಬೇರು ಚಾಚಿ, ಬಾಗಿ, ವರದೆಯನ್ನೇ ಇಣುಕುವಂತ ಮರಗಳ ಮೇಲೊಂದು ಜಾತ್ರೆಯೇ ನಡೆಸಿರುವಂತೆ ಗುಬ್ಬೆ-ಕಾಗೆಗಳು ಒಂದೊಂದು ಗುಂಪು ಕಟ್ಟಿ ಪಿಸುಮಾತು ನಡೆಸುತ್ತಿವೆ. ಈಗೈದು ತಿಂಗಳ ಹಿಂದೆಯಷ್ಟೇ ಅದೇ ಕಳೆಗುಂದದ ಸೇತುವೆಯ ಮೇಲೆ ಕುಳಿತು ಕಥೆ, ಕವಿತೆ ಕಟ್ಟುತ್ತೇನೆಂದು ಹೊಯ್ದಾಡುವ ಸಂದರ್ಭಗಳನ್ನೇ ಒಟ್ಟುಗೂಡಿಸುವಲ್ಲಿ ವಿಫಲವಾಗುತ್ತಿದ್ದ ‘ಮೈಲಾರಿ’ ಇಲ್ಲದೇ ಕಳೆಗುಂದಿತ್ತು ವಾತಾವರಣ. ಅದೇ ಹೈವೆಯಿಂದ ಹಾದು ಎರೆಡು ಮೈಲಿ ಸಾಗಿದರೆಂದರೆ ಸಿಗುವುದೇ ಎಂದ್ರಾಳ. ಅಲ್ಲಿಗೆ ರೈಲ್ವೆ ಸ್ಟೇಶನ್ನಿನ ರೈಲು ಕೂಗುವ ಸದ್ದು ಹೈವೇಯ ಭರ್ಜರಿ ವಾಹನಗಳ ಸದ್ದಿನ ಹೊರತಾಗಿಯೂ ಕೇಳಿಸುತ್ತದೆ. ನಿನ್ನೆಯಿಂದ ಚಿಂತೆಯನ್ನೇ ತಲೆದಿಂಬಿಗಿಟ್ಟು ಮಲಗಿ ರಾತ್ರಿಗೊಂದಿಷ್ಟು ಅನ್ನ ಬೇಯಕ್ಕಿಟ್ಟರಾಯಿತೆಂದುಕೊಂಡು ಹಾಸಗಿಯಿಂದ ಕೊಡವಿ ಏಳಲು ತಡಕಾಡಿದ ಪಾರಿಗೆ ಏಳಲು ಮನಸ್ಸಾಗಲಿಲ್ಲ. ತಿಗಣೆಯಂತೆ ಹಾಸಿಗೆಯಲ್ಲೇ ಮೈ ಹೊಕ್ಕ ಆಯಾಸ, ವಯಸ್ಸಾಯಿತೆಂದು ಹೇಳುವಂತೆ ಇಳಿಬಿದ್ದ ಚರ್ಮದ ಸುಕ್ಕುಗಳು, ಮಲ್ಲಾರಿಯರ ಮನೆತನಕ್ಕಾಗಿ ತಾನು ತನ್ನನ್ನೇ ಸಮರ್ಪಿಸಿಕೊಂಡು ಇಪ್ಪತ್ತೆ ೈದು ವರ್ಷಗಳೇ ಕಳೆದಿವೆಯೆಂಬುದು, ಒಂಟಿತನ ಹೆಚ್ಚಾದಂತೆಲ್ಲಾ ಕೊರಗುಗಳೇ ಗಂಟಿಕ್ಕಿಕೊಳ್ಳುತ್ತವೆಂದು, ವಿಚಾರ ಲಹರಿಯ ದಿಕ್ಕನ್ನು ಬದಲಿಸಹೊರಟರೂ ಭಜನೆಗೆ ತಕ್ಕ ತಾಳದಂತೆ ಸೊಳ್ಳೆಗಳ ಸೋಬಾನ ಹಾಡು ಅವಳನ್ನು ಅದೇ ಕೊಪಕ್ಕೆ ಮತ್ತೆ ಮತ್ತೆ ತಳ್ಳುತ್ತಿದ್ದವು. ಹೀಗಾದದ್ದು ವರದಾಳ ತಟದಲ್ಲಿಯ ಎಂದ್ರಾಳದ ಹತ್ತಿಪ್ಪತ್ತು ಮನೆಗಳ ಪೈಕಿ, ಮೈಲಾರಲಿಂಗನ ಕಾರಣಿಕ ಹೇಳುವ ಗ್ವಾರ ರುದ್ರನ ಜೋಪಡಿಯಲ್ಲಿ. ಐದು ತಿಂಗಳ ಹಿಂದೆ ಎಂದ್ರಾಳದ ಗೌಡ ಸತ್ತಾಗಲೂ ಕೂಡದ ಪರಸಿ ಕೂಡಿದ್ದು ಗ್ವಾರ ರುದ್ರ ಸತ್ತಾಗ. ಮೈಲಾರದ ಕಮೀಟಿಯವರು ಕಂಗಾಲಾಗಿದ್ದರು. ಮುಂದಿನ ಬಾರಿಗೆ ಅವ್ನ ಮಗ ನೀ ಬಿಲ್ಲೇರಿಸಬೇಕೆನ್ನುವ ಅವರ ಮಾತುಕತೆಗಳಿಗೂ ಮೈಲಾರಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಪಾರಿಯ ಕಷ್ಟವೆಲ್ಲಕ್ಕೂ ಸರಿಯೆನ್ನುವಂತೆ ಒಂದು ನಿಟ್ಟುಸಿರು ಬಿಟ್ಟ ವರದೆಗೂ, ಪಾರಿಗೂ ಸಮಾನ ತೃಪ್ತಿಯೊಂದರ ಭಾವವೆಂದರೇ ‘ಏಳುಕೋಟಿಗೋ ಚಾಹಂಗಮಲೋ’ ಎನ್ನುತ್ತಾ ತನ್ನ ಉಡಿಯಲ್ಲೇ ಹಾದು ಆಚೆ ದಡಕ್ಕೆ ಸೇರುತ್ತಿದ್ದ ಹತ್ತಾರು ಕೊಲಾರಿ ಬಂಡಿಗಳ ಕೂಗನ್ನು ತನ್ನ ಮೇಲೆ ಯಾರೋ ಕಚಗುಳಿಯಿಟ್ಟಂತೆ ಭಾಸವಾಗಿ ಹೂನಗುವ ವರದೆ, ಕೆಲವೊಮ್ಮೆ ಕೋಪ ಬಂದಿತೆಂದರೆ ಕೊಸರಾಡಿ ಕೊಲಾರಿಗಳನ್ನು ತನ್ನ ಉಡಿಯಲ್ಲೇ ಹಾಕಿಕೊಳ್ಳಲು ಹಪಹಪಿಸುತ್ತಿದ್ದಳು. ಹೀಗೆ ಮ್ಯಾಗರ ಸ್ವಾಮ ಹತ್ತು ವರ್ಷದ ಹಿಂದ ಸತ್ತದ್ದು, ಅಷ್ಟೆ ಏಕೆ ಪಾರಿಯ ಗಂಡ ರುದ್ರನು ಮೈಲಾರಲಿಂಗಪ್ಪನ ಬಿಲ್ಲನ್ನೇ ಹತ್ತುವನಾದರೂ ವರದೆ ಹೊಡೆತಕ್ಕೆ ಸಿಕ್ಕು ಹೆಣವೂ ಸಿಗದಂತಿದ್ದ ಪರಿಸ್ಥಿತಿಯಲ್ಲಿ ಪಾರಿಯ ಗೋಳಾಟಕ್ಕೆ ಹತ್ತು ತೆಪ್ಪಗಳು ವರದೆಯನ್ನೇ ಶೋಧಿಸಿದಾಗ ಹೆಣವಾಗಲೇ ಐದೂರ ದಾಟಿ ಹೋಗಿತ್ತು. ಪಾರಿ ವರದೆಯ ಮೈಗುಂಟ ಇಪ್ಪತ್ನಾಕು ವರ್ಷಗಳ ಹಿಂದ ಹೋಗಿ ಏಳು ಕೋಟಿ ಪರಸಿಯೊಳಗೂ ‘ದೀಡು ನಮಸ್ಕಾರ ಹಾಕಿ, ಗ್ವಾರಪ್ಪನ ವೇಷದಲ್ಲಿ ಲಿಂಗಪ್ಪನಂತೆ ಕಾಣುತ್ತಿದ್ದ ರುದ್ರನು, ಲಿಂಗಪ್ಪನೇ ನಾಚುವಂತೆ ದೋಣಿ ತುಂಬಿಸುವ ಆಟ ಆಡುತ್ತಿದ್ದದ್ದು ದಪ್ಪ ಹುರಿಮೀಸೆ, ದಢೂತಿ ಆಳ್ತನ. ಒಮ್ಮೆ ಜೋರಾಗಿ ಕೂಗಿದ ನೆಂದರೇ ಅದು ಆನೆ ಘೀಳಿಟ್ಟಂತೆ ಪರಸಿಯೇ ಸ್ಥಬ್ಧವಾಗಿ, ಸಾಕೆಂತಿಕವಾಗಿ ಮುಗಿಲು ನೋಡುತ್ತಾ ಬಿಲ್ಲನ್ನೇರಿ ಮೂರು ದಿನಗಳ ಉಪವಾಸಕ್ಕೆ ತೆರೆ ಬೀಳುವಂತೆ ಹೇಳಿದ ಕಾರಣಿಕ ಮುಂದಿನೊರ್ಷದವರೆಗೂ ಅನ್ವಯಿಸಬೇಕು.

ಮಳೆಯಾಗದೇ ಊರೂರೇ ಬರಗಾಲದಿಂದ ತತ್ತರಿಸುವಾಗ ವರದೆಯೂ ಖಾಲಿಯಾಗಿ ಕೈ ಚೆಲ್ಲಿ ಅಲ್ಲೇ ಕೊಂಚ ಗುಂಡಿಗಳಲ್ಲಿ ನಿಂತ ನೀರುಗಳಲ್ಲಿ ಊರ ಗಂಡಸರೆಲ್ಲಾ ಮುಕಳಿ ಮುಟ್ಟುವದಕ್ಕಷ್ಟೇ ಎಂದುಕೊಂಡು ಉಳಿದುದ್ದಕ್ಕೆ ಪರದಾಡಿದರೂ ಆಚೆ ಕಡೆ ಮೈಲಾರ ಪರಸಿಯ ದಿಕ್ಕಿಗೆ ಕಾಲುನಡಿಗೆ ಹೊರಟವರ ಕಂಡು ನಾಯಿಯೊಂದು ಮುಗಿಲಿಗೆ ಮುಖಮಾಡಿ ಬೊಗಳಿ, ಮದ್ದೆಳೆ ನಾದ ಗಮ್ಮತ್ತುಗಳಲ್ಲಿ ಜಾತ್ರೆ ವಿಲೀನವಾಗಿತ್ತು. ಅವತ್ತೆ ಪಾರಿ ರುದ್ರನನ್ನು ವರಿಸಿದ್ದು. ಒತ್ತೊಟ್ಟು ಇಂಚು ಜಾಗವಿಲ್ಲದ ರುದ್ರ ಪಾರಿಗಾಗಿ ಗುಡಿಸಲೊಂದ ಕಟ್ಟಿದ. ಸಂಸಾರ ಅಂತ ಮಾಡಿದಕ್ಕೆ ಇಂತಿ ಎಂದ್ರಾಳವೆಂಬ ಪುರಮಲ್ಲಿ ಹಗಲು ರಾತ್ರಿಯೆರಡರಲ್ಲೂ ಊರಲ್ಲಿನ ಸಣ್ಣ ಸಣ್ಣ ಸುದ್ಧಿಗಳನ್ನೇ ದೊಡ್ಡದು ಮಾಡಿಕೊಂಡು ಅಲ್ಲಲ್ಲಿ ಮೀಟಿಂಗು ಮಾಡುವಾಗೆಲ್ಲಾ ಮೈಲಾರಿಯೆಂಬುವನದೊಂದು ಕೂಸು ಮೂರು ಗಂಟೆಯ ಬಸ್ಸಿಗೆ ಬಂದವನೇ ನಾನೊಂದು ಕತಿ ಬರಿಬೇಕೆಂದು ಅವರವರ ಅಭಿಪ್ರಾಯಕ್ಕೆ ಅನುವಾಗಿ, ಸುಮ್ಮನೇ ಕೇಳಿಸಿಕೊಳ್ಳುತ್ತಾ ಪ್ಯಾಡು, ¥ನೆÀ್ನು ಹಿಡಿಯಬೇಕೆನ್ನುವಷ್ಟರಲ್ಲೇ ಅತ್ತ ಅಪ್ಪ ರುದ್ರ ತನ್ನ ಗ್ವಾರಪ್ಪನ ವೇಷದಾಗೆ ಏಳು ಕೋಟಿಗೋ ಚಾಹಂಗ ಮಲೋ ಎನ್ನುತ್ತಾ ಚಾಟಿ ಏಟಿಂದ ಬಳಲಿದಂತೆ ಕಂಡರೂ ತೋರ್ಗೊಡದೇ ಚಡಿ ಏಟು ಹಾಕಿಕೊಳ್ಳುತ್ತಾ ಭೋರ್ಗರೆಯುವ ಹೊತ್ತಿಗಾಗಲೇ ತಾಯಿಯಾದ ಪಾರಿಯೂ ದೋಣಿ ತುಂಬಿಸುವದಕ್ಕೇಂದೇ ಮಾಡಿದ್ದ ಎಡೆ ಹಾಕಿ ಸಂತೃಪ್ತರಾಗುತ್ತಾಳೆ. ಮತ್ತೆ ಮೈಲಾರಿ, ರುದ್ರ, ಪಾರಿಯರ ನಗು ಊಟದ ರುಚಿಯೊಂದಿಗೆ ಬೆರೆತು ಹೋಗುವುದು ಬಹಳ ದಿನಗಳ ತಂಕ ಉಳಿದು ಮೈಲಾರಿಯ ಮೀಸೆ ಚಿಗುರಿ ಕಾಲೇಜಿಗೆಂದು ಬೆಳಗ್ಗಿನ ಬಸ್ಸು ಹತ್ತಿ ಎಲ್ಡು ವರ್ಷ ಕಲಿಯುವುದಕ್ಕೂ ಒಂದು ದಿನ ರುದ್ರನು ಮಳೆಗಾಲಕ್ಕೆ ಕಾಲು ಜಾರಿ ತುಂಬಿದ ವರದೆಯಲ್ಲಿ ಲೀನವಾಗುವುದಕ್ಕೂ ಸವನಾಗಿತ್ತು. ರುದ್ರನ ಮನೆಯ ಕುರಿಯನ್ನು ಕುರುಬರ ದಿಳ್ಳಿಗೆ ಕೊಟ್ಟು ಸರ್ಪಾಲಿನ ಮರಿ ಟಗರಾದುದ್ದಕ್ಕೆ ಗುದ್ದಾಡಿ ದಿಳ್ಳಿಯಿಂದ ಟಗರು ಮರಿ ಹೊತ್ತು ಮನೆ ಸೇರುವುದಕ್ಕೂ ಪಾರಿ ಗಂಡು ಕೂಸಿಗೆ ಜನ್ಮ ನೀಡಿದ್ದಕ್ಕೂ ‘ಅರೇ ಪಾರಿ ನಾನು ಮೈಲಾರಿನ ತಗೊಂಡು ಬಂದೆ’ ಎಂದದ್ದು ಕೂಸಿಗೋ ಟಗರಿಗೋ ಗೊತ್ತಾಗದಾಗಿ ಪಾರಿ ಕೂಸಿಗೂ ಮೈಲಾರಿ ಎಂದಿದ್ದಳು. ಹಾಸಿಗೆಯಿಂದಲೇ ಎಲ್ಲಾ ಮೈಲಾರಲಿಂಗ ನಿಚ್ಛೆ ಎಂದೊಂದು ಕೈ ಮುಗಿದಳು. ಒಂದು ಭಾರವಾದ ನಿಟ್ಟುಸಿರು ಬಿಟ್ಟು.

‘ಹೊಸ್ತಿಲ ಹುಣ್ವಿ ತಂಡಿಗೆ ಹೊಸ್ಲ ನಡಗತದಂತ’ ಪಾರಿ ನಡುಗಿದ್ದು ಮಗನ ವಾಚಾಳಿಯ ಗುಣಕ್ಕೆ ಪುಸ್ತಕದ ತುಂಬೆಲ್ಲಾ ಕವಿಗಳದ್ದೇ ಪೋಟೋಗಳನ್ನು ತುಂಬಿಕೊಂಡಿದ್ದ. ಮೈಲಾರಿ ಜುಬ್ಬಾ ಹಾಕಿಕೊಳ್ಳುವ ಆಸೆಯನ್ನೇ ಜೀವನದ ಪರಮ ಗುರಿಯಂತೆ ನಾಕು ದಿನ ಇಟ್ಟಿಗೆ ಹೊತ್ತು ಕುರ್ತಾ ಖರೀದಿಸಿ ಹಾಕಿದ್ದ. ಹೊಟ್ಟೆಗೆ ಹಿಟಿಲ್ದ ಹೊತ್ತಿನ್ಯಾಗ ಜುಟ್ಟಿಗೆ ಮಲ್ಲಿಗೆ ಹೂ ಬೇಕೆನ್ಲಾ ಬಡ್ಡೆದೇ. ಅದೆಲ್ಲಾ ಬಿಟ್ಟು ಕೆಲ್ಸಕ್ಕೊಗು ದೊಡ್ಡ ಕವಿಪುಂಗವ. ರುದ್ರ ಅಂಗಸಾವ, ರುದ್ರ ಸಾಯುವದಕ್ಕೂ ಅದನ್ನೇ ಕಾಯುತ್ತಿದ್ದವನಂತೆ ಮೈಲಾರಿ ಪ್ಯಾಂಟಿಯಂಚಿಗೆ ಬೆಂಗಳೂರಿನ ತಂಕ ಟ್ರೇನು ಹತ್ತಿ ಹೊರಟು ಹೋಗಿ, ಐದು ತಿಂಗಳು ಸಮಾ ಆಗಿ ಒಂದಾಣಿನೂ ಕಂಡಿಲ್ಲ. ನಿನ್ನೆ ವಾರ ಕಮೀಟಿಯವ್ರು ಬ್ಯಾರೇ ಕಾಯಕೊಟ್ಟು ಮಗ್ನ ಕಾರಣಿಕಕ್ಕ ಕಳಿಸಬೇಕಂತ ಬುಲಾವು ನೀಡಿ ಹೋದದ್ದು ಪಾರಿಯ ತಳಮಳಕ್ಕೆ ಕಾರಣವಾಗಿತ್ತು.
ಭಾಗ-2

ಹುಯ್ಯೋ ಹುಯ್ಯೋ ಮಳೆರಾಯ, ಬಾಳೆ ತೋಟಕೆ ನೀರಿಲ್ಲ ಮುಂಜಾನೆ ಯೆಂದಲ್ಲ, ಸಂಜೆಯೆಂದಲ್ಲ ರಾತ್ರಿಯೆಂದಲ್ಲ, ಹಗಲೆಂದಲ್ಲ ಬಿಸಿಲಿನ ಜಳಕ್ಕಿಂತ ಡಾಂಭರಿನ ಧಗೆ ವಾಹಗನಗಳ ಬಿಸಿಗಾಳಿಯ ಧಗೆಗೆ ಸೋತವನಂತೆ ನಾಡಿನಿಂದ ಕಾಡಿಗೆ ಎಂಬುದೊಂದು ಕಥೆ ಬರೆಯಬೇಕೆಂದು ಬೆಳ್ಳಬೆಳ್ಳಿಗ್ಗೆ ಹೊರಟವನು ಪಿಣ್ಯಾ ಸರ್ಕಲ್ಲಿನಲ್ಲಿ ನಿಂತು ನೋಡಿದ ಯಾವ ಊಹೆಯೂ ನಿಲಕಲಿಲ್ಲ. ನೇರ ಲಾಲ್‍ಬಾಗ್‍ಗೆ ಲಗ್ಗೆಯಿಟ್ಟು ಕುಳಿತ, ಬೆಳಗಿನ ವಾಕಿಂಗಿನವರು ಇವನೆಡೆಗೆ ವಿಚಿತ್ರ ನೋಟ ಬೀರುತ್ತಾ ಹೋಗುತ್ತಿದ್ದರೇ, ಮತ್ತೆ ಅವನಾಗಲೇ ಮೆಜೆಸ್ಟಿಕ್ಕಿನ ಪ್ಲೆ ೈ ಓವರ್ ಮೇಲೆ ನಡೆದಾಡುತ್ತಿದ್ದ. ಇದೇ ಟೇಮಿನ್ಯಾಗ ಊರಲ್ಲಿಯ ಚಳಿ ನೆನೆಸಿಕೊಂಡ ಹಾಡಬೇಕೆನಿಸಿ ಹಾಡಿದ ಹುಯ್ಯೋ.. ಹುಯ್ಯೋ.. ಮಳೆರಾಯ ಬಾಳೆ ತೋಟಕೆ ನೀರಿಲ್ಲವೆಂದು ಆಟೋತ್ತಿಗಾಗಲೇ ಕೈಲಿ ಲಾಪ್ ಹಿಡಿದು ಅಲೆದಾಡುತ್ತಿದ್ದ. ಸಾಪ್ಟವೇರ್ ಐದರ ಕ್ವಾಯಿನೊಂದನ್ನು ಇವನೆಡೆಗೆ ಎಸೆದ. ಅರೇ…? ಯ್ಯೋ.. ತಾನೇನು ಬಿಕ್ಷಕನೇ ಎಂದು ಕೇಳಬೆಕೆನ್ನುವ ಅನುಮಾನದ ಎಳೆ ಹರಿದಾಡಿತು ಕವಿತೆ ಕವಿಯೊಬ್ಬನ ಎಳೆದಾಡುವಂತೆ.

ಎಂದ್ರಾಳದ ವಾಂಚೆಯಿಂದ ಬಸ್ಸು ಹೊರಟು ವರದೆಯ ತಟದ ಮರಕ್ಕೆ ಕುಳಿತ ಹಕ್ಕಿಗಳನ್ನೇ ಕೊನೆಯ ಬಾರಿಯೊಮ್ಮೆ ನೋಡಿ ‘ಸಾವಲಕ್ಕಿ ಸಣ್ಣ, ಬಾರಲಕ್ಕಿ ಬಣ್ಣ’ ಎಂದು ಹಾಡಿಕೊಳ್ಳುತ್ತಾ ಬೆಂಗಳೂರು ಸೇರಿ ಐದು ತಿಂಗಳು ಅದ್ಯಾವುದೋ ಲಾಡ್ಜಿನ ಮೂರನೇ ಅಂಕಣದಲ್ಲಿ ಕುಳಿತು ಅದೇನನ್ನೋ ಬರೆಯಲು ಹೋಗಿ ಸೋತು ಮತ್ತೆ ಹೊಸ ವಿಚಾರಗಳ ಕಡೆ ವಾಲಿಕೊಳ್ಳುತ್ತಾ ತಲೆ ಮರೆಸಿಕೊಳ್ಳುವವರು ಓಡುವಂತೆ ತಲೆಯೋಡಿಸಿ ಬರೆದವು ಅಪೂರ್ಣವೆನಿಸಿ ಅಪೂರ್ಣದ ಕಟ್ಟನ್ನು ಸುರಳಿ ಸುತ್ತಿ ಚಾಪೆಯಡಿ ಇಟ್ಟು ಓದುವುದರಲ್ಲಿ ಮತ್ತೇನೋ ಕೊರತೆ ಎದ್ದೊಡುತಿತ್ತು.

ಪ್ರಕಾಶಕರ ಬಾಬತ್ತು ಗಿಟ್ಟಿಸಲೆಂದೇ ಕಾವ್ಯದ ಕುಸುರಿಯಲ್ಲೇ ಮಾತಾಡುವವನು ಒಂದು ಮಾತಾಡಲೂ ಬಿಡದೇ ಅಪೂರ್ಣ ಕತೆಗಳ ಪೈಕಿ ಒಂದನ್ನಾದರೂ ಪೂರ್ಣಗೊಳಿಸು. ಕಥೆ ಕಟ್ಟುವುದೆನೆಂದು ಗೊತ್ತಾಗುತ್ತದೆ. ಎಂದೆಲ್ಲಾ ಅನಿಸಿಕೊಂಡು, ಅನ್ನಕಂತ ಅದ್ಯಾವುದೋ ಪಾರ್ಟ್‍ಟೈಂ ಜಾಬ್ ಸಾಕಾಗಿ ಹೋಗುವ ಹೊತ್ತಿಗೊಂದು ಕಥೆ ಬರೆದಿದ್ದ ‘ಕಾಡಿನಿಂದ ನಾಡಿಗೆ’ ಅದೂ ಅವನ ಬಾಯ ಮೇಲೆ ಬೆರಳಿಡುವಂತೆ ಮಾಡಿತ್ತು ನನ್ನ ಕಾಡೇ ಉತ್ತಮ ಈ ನಾಡಿಗಿಂತೆನ್ನುವ ಸಂದೇಶದೊಂದಿಗೆ.

ಭಾಗ-3

ಯಥಾ ಪ್ರಕಾರ ಬುಲಾವು ಕೊಟ್ಟ ಕಮೀಟಿಯವರು ಮತ್ತೊಮ್ಮೆ ಮನೆ ಬಾಗಿಲಿಗೆ ಬರದಿದ್ದಕ್ಕೆ ಪಾರಿಗೂ ಕೊಂಚ ಸಮಾಧಾನವೆನಿಸಿ ಬಂದಿದ್ದರೆ ಉತ್ತರವೆನೆಂದು ಹೇಳುವುದು ತಿಳಿಯದೇ ರುದ್ರನ ಗ್ವಾರಪ್ಪನ ಧಿರಿಸು ದಿಟ್ಟಿಸುತ್ತಾ ಚುಮು ಚುಮು ಚಳಿಯಲ್ಲಿ ಕೂತು ಕವಳ ಕಚ್ಚುತ್ತಿದ್ದಾಳೆ. ದೇವರೆಂದರೇ ಉರಿದು ಬಿಳುವ ಮಗನ ಬಗ್ಗೆ ಮಾತಾಡುವುದು ತಪ್ಪು ಇಂತ ತಂಪೊತ್ತಿನಲ್ಲಿ ನೆನೆಯುವುದು ತಪ್ಪೆಂದು ತಿಳಿದಿದ್ದ ಪಾರಿ ತನ್ನ ಗಂಡನನ್ನೇ ನುಂಗಿದ್ದ ವರದೆಗೂ ಹಿಡಿಶಾಪ ಹಾಕುತ್ತಾ ಆಚೆ ದಡೆಯಡೆಗೆ ಸಾಗುವವರೆಗೂ ಯಕ್ಕಾ ನಿನ್ಮಗ ಅಲ್ಲೇ ಬಂದಿರ್ತಾನೋ ಹೆಂಗ ಒಬ್ಳೆ ಹೊಂಟಿಯಲ್ಲ ಈ ಸರ್ತಿ ಕಾರ್ಣಿಕ ಅವ್ನ ಕೈಯಾಗ ಹೌದಿಲ್ಲೋ ಏಟೊಂದು ಕೊಚನ್‍ಗಳಿಗೆ ಉತ್ತರವಿಲ್ಲವೆನ್ನುವಂತೆ ಸುಮ್ಮನಿದ್ದು ಪರಿಸಿಯೊಳಗೆ ಮಾಯವಾದಳು. ಅತ್ತ ಬಿಲ್ಲನೇರಿದ ಗ್ವಾರಪ್ಪ

ಕವಿತೆಯೊಂದು ಕಣ್ಣ ಕುಕ್ಕಿ
ಕಣ್ಣೊಂದು ಕವಿತೆ ಕೂಕ್ಕಿ
ಕವಿಯಾದವನ ಕೊಲೆಯಾದಿತೋ ಪರಾಕ್

ಮೈಲಾರಿಯ ಕಾರಣಿಕಕ್ಕೆ ಮೈಲಾರವೇ ದಿಕ್ಕು ತಪ್ಪಿದಂತಾಗಿ ಕೂತು ಬಿಟ್ಟಿತು. ಯಾರೊಬ್ಬರು ವಡಚಲಾರದೇ ಎಲ್ಲಾ ಮೈಲಾರಲಿಂಗನಿಗೆ ಬಿಟ್ಟಿದ್ದೆಂದರು.

ಈಗಲೂ ತನ್ನ ಗುಡಿಸಲ ಕಟ್ಟೆ ಮ್ಯಾಲೇ ಮೈಲಾರಿ ಹಾಡುತ್ತಾನೆ ಒಳಗಡೆ ಜ್ವಾಳ ಹಸಮಾಡೋ ತನ್ನವ್ವನ ಕಂಡೋ; ಇಲ್ಲ ಹೊನ್ನರಕಿ ಕಟ್ಗಿ ತರೋ ಸೊಸಿ ಹೊನ್ನಿನ ಕಂಡೋ…

“ಕಣ್ಣೊಂದು ಕವಿತೆ ಕುಕ್ಕಿ

ಗುಂಜಿ, ಗುಂಜಿಯಾಗಿ, ಗುಂಪಾಗಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x