ಸೌಮ್ಯ ನಾಯಕಿ ಸ್ನೇಹ ಮಹೋತ್ಸವ: ವೃಂದಾ. ಸಂಗಮ

ನಿಜವಾಗಿಯೂ ಇದು ಸೌಮ್ಯ ನಾಯಕಿಯ ಕಥೆಯೂ ಅಲ್ಲ. ಬೇಲೂರಿನ ಅಂತಃಪುರ ಗೀತೆಗಳ ವಾಚನವೂ ಅಲ್ಲ. ‘ಹಂಗಾದ್ರೆ ಇನ್ನೇನು?’ ಅಂತ ನೀವು ಕೇಳೋದಿಕ್ಕೆ ಮೊದಲೇ ಹೇಳುವ ಕತೆಯಿದು. ಕಥಾ ನಾಯಕಿಯ ಹೆಸರು ಸೌಮ್ಯ. ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳು, ಸರ್ಕಾರೀ ನೌಕರಿಯೆಂದು ಹೆಸರಾದ ಒಂದು ಖಾಯಂ ನೌಕರಿಯೊಳಗಿದ್ದ ಒಬ್ಬ ಸಾಮಾನ್ಯ ನೌಕರನ ಮಗಳು. ಯಾವುದೇ ಮಹತ್ವಾಕಾಂಕ್ಷೆಗಳಿಲ್ಲದ ಸಾಮಾನ್ಯ ಹುಡುಗಿ. ನೋಡಲು ಗೋಧಿ ಬಣ್ಣ ಸಾಧಾರಣ ಮೈಕಟ್ಟು. ಹುಟ್ಟಿದ್ದಕ್ಕೆ ಬೆಳೆದಳು. ಬೆಳೆದಿದ್ದಾಳೆಂದು ಅಂಗನವಾಡಿಯ ಟೀಚರ್ ಎಳಕೊಂಡು ಹೋದರು, ಅಂಗನವಾಡಿ ಸೇರಿದಳು. ಅಲ್ಲಿಯವರೆಲ್ಲಾ ಸರ್ಕಾರಿ ಶಾಲೆ ಸೇರಿದ್ದಕ್ಕೆ  ಸರ್ಕಾರದವರು ಬಟ್ಟೆ ಕೊಟ್ಟರು, ಪುಸ್ತಕ ಕೊಟ್ಟರು, ಶೂ ಕೊಟ್ಟರು, ಯಾವುದೋ  ಕಂಪನಿಯವರು ಪುಕ್ಕಟೆ ಚೀಲ ಕೊಟ್ಟರು, ಸರ್ಕಾರದವರು ಹಾಲು ಕೊಟ್ಟರು, ಅಕ್ಕಿ ಕೊಟ್ಟರು. ಅಂತೂ ಸರ್ಕಾರದ ಸಾಧನೆಗಳಿಂದ ಇವಳ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವಂತೂ ಪೂರ್ತಿಯಾಯಿತು. ಇಷ್ಟೇ ಆಗಿದ್ದರೆ ಅವಳು ಭವ್ಯ ಭಾರತದ ನೂರು ಕೋಟಿಗೂ ಮಿಕ್ಕಿದ ಪ್ರಜೆಗಳಲ್ಲಿ ಒಬ್ಬಳಾಗಿರುತ್ತಿದ್ದಳು. ಆದರೆ ಈ ಕಥಾ ನಾಯಕಿಯಾಗುತ್ತಿರಲಿಲ್ಲ.

ಏನಕೇಣ ಪ್ರಕಾರೇಣ, ಹಂಗೂ ಹಿಂಗೂ ಎಸ್ ಎಸ್ ಎಲ್ ಸಿ ಮುಗಿಸಿ ಮನೆಯಲ್ಲಿ ಕಲ್ಲವ್ವ ಮಲ್ಲವ್ವರೊಡನೆ ಕುಳಿತಿದ್ದಾಗಲೇ  ಒಂದು ದೊಡ್ಡ ತಿರುವು ಬಂದಿತ್ತು. ಸರ್ಕಾರಿ ನೌಕರಿ ಅದೂ ಯಾರದೋ ಕೃಪೆಯಿಂದ ಜವಾನ ನೌಕರಿ ಮಾಡುತ್ತಿದ್ದ ಅಪ್ಪ ಅಪಘಾತದಲ್ಲಿ ಮರಣ ಹೊಂದಿದ್ದ. ರಾತ್ರಿ ಕುಡಿದು ಬಂದು ತನ್ನ ನಿದ್ದೆ ಕೆಡಿಸುತ್ತಿದ್ದ ಅಪ್ಪ ಸತ್ತ ಎಂದಾಗ ಸ್ವಲ್ಪ ಸಮಾಧಾನವೇ ಆಗಿತ್ತು. ಕುಡಿಯುವ ಚಟ ಇಲ್ಲದಿರುವವರು ಅಕ್ಕಪಕ್ಕದಲ್ಲಿ ಯಾವ ಗಂಡಸರೂ ಇರಲಿಲ್ಲ. ಸಾ,ಮಾನ್ಯವಾಗಿ ಗಂಡಸರ ದುಡಿಮೆಯಲ್ಲಾ ಇದಕ್ಕೇ ಖಾಲಿ. ಹೆಂಗಸರೇ ದುಡಿದು ಮನೆ ಮಕ್ಕಳನ್ನು ನಿಭಾಯಿಸುತ್ತಿದ್ದರು. ಹೆಂಗಸರನ್ನು ಹೊಡೆಯುವುದೂ ರಾತ್ರಿಯ ಕಿರುಚಾಟಗಳೂ ಸಾಮಾನ್ಯವೇ ಆಗಿದ್ದವು. ಸೌಮ್ಯಳ ತಂದೆ ಸರ್ಕಾರಿ ನೌಕರಿಯವನಾದ್ದರಿಂದ ಗಿಂಬಳದಲ್ಲಿ ಕುಡಿದು, ಸಂಬಳದ ಅರ್ಧ ಹಾಳು ಮಾಡಿ ಉಳಿದರ್ಧ ಕೊಟ್ಟರೂ ಮನೆಯಲ್ಲಿ ಕುರ್ಚಿ, ಸೋಫಾ, ಟೀವೀ, ಗ್ಯಾಸ್, ಮಿಕ್ಸಿಗಳು ಮನೆಯನ್ನು ಅಲಂಕರಿಸುವುದರಲ್ಲಿ ತಮ್ಮ ಕೈಲಾದ ಸಹಾಯ ಮಾಡಿದ್ದವು.

ಯಾವಾಗ ಅಪ್ಪ ಸತ್ತನೋ ಆವಾಗ ಇವಳಿಗೊಂದು ಸರ್ಕಾರಿ ನೌಕರಿ ಅದೂ ಅಪ್ಪನ ಕೆಲಸಕ್ಕಿಂತ ದೊಡ್ಡ ಕೆಲಸ ಹದಿ ವಯಸ್ಸಿಗೇ ಸಿಕ್ಕಿತು. ಇನ್ನೂ ಹದಿವಯಸ್ಸಾದ್ದರಿಂದ “ಹರೆಯದಲ್ಲಿ ಕತ್ತೆಯೂ ಚನ್ನಾಗಿ ಮಿಂಚುತ್ತದೆ.” ಎಂಬಂತಿದ್ದಳು. ಇದೇ ಕಾರಣಕ್ಕೇ ಕೆಲಸಕ್ಕೆ ಸೇರಿದಾಗ ಸಹೋದ್ಯೋಗಿಗಳು ಕೆಲಸ ಕಲಿಸುವುದರ ಬದಲಾಗಿ ತಾನೇ ಮಾಡಿ ಕೊಟ್ಟು ಬಿಡುತ್ತಿದ್ದರು. ಅವಳಿಗೆ ಕೆಲಸವನ್ನು ಹಂಚಿಕೆ ಮಾಡುವಾಗಲೇ ಇವಳ ನಿಭಾಯಿಸುವ ಶಕ್ತಿಯನ್ನರಿತು ಮೇಲಾಧಿಕಾರಿಗಳು ಬರೀ ಟಪಾಲು ಕೆಲಸವನ್ನೇ ನೀಡಿರುತ್ತಿದ್ದರು. ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂದು ಬಸವಣ್ಣನವರು ಹೇಳಿದ್ದನ್ನು ಕಾಯಾ ವಾಚಾ ಮನಸಾ ಪಾಲಿಸಿದಳು. ಬಂದಿರುವ ಟಪಾಲನ್ನು ತನ್ನ ರಜಿಸ್ಟರಿನಲ್ಲಿಟ್ಟು ಸುತ್ತಮುತ್ತ ತಿರುಗಲು ಹೊರಟರೆ ಮಧ್ಯಾನ್ಹ ಊಟಕ್ಕೆ ಹಾಜರಾಗುತ್ತಿದ್ದಳು.

ಊಟದ್ದೂ ಒಂದು ಕಥೆ. ಒಂದು ದಿನವೂ ಮನೆಯಲ್ಲಿ ಯಾವುದೇ ಅಡುಗೆ ಮಾಡಿದ್ದನ್ನು ತಂದಿರುತ್ತಿರಲಿಲ್ಲ. ಆದರೆ, ಎಲ್ಲರೊಟ್ಟಿಗೆ ಊಟಕ್ಕೆ ತಪ್ಪದೇ ಬರುತ್ತಿದ್ದಳು. ಪಾಪ ಎಲ್ಲರ ಮನೆಯ ತಿಂಡಿಯ ಒಂದೊಂದು ತುತ್ತೂ ಸೇರಿ ಇವಳಿಗೆ ಎಲ್ಲರಿಗಿಂತ ಹೆಚ್ಚೇ ಪಾಲು ಸಿಗುತ್ತಿತ್ತು. “ಏನೋ ಚಿಕ್ಕವಳು ಮಗು ತರಹ, ಹೋಗಲಿ ಬಿಡಿ. ದಾನೇ ದಾನೇ ಲಿಖಾ ಹೈ , ಖಾನೇ ವಾಲಾ ಕಾ ನಾಮ್. ಹೋದ ಜನ್ಮದಲ್ಲಿ ಚನ್ನಾಗಿ ಅನ್ನದಾನ ಮಾಡಿರಬೇಕು, ಕೂತಲ್ಲೇ ಎಲ್ಲಾ ಸಿಗಬೇಕಾದರೆ.” ಎನ್ನುತ್ತಲೇ ಇವಳನ್ನು ಬಿಟ್ಟು ಊಟ ಮಾಡುತ್ತಿರಲಿಲ್ಲ.

ನಿಜವಾಗಿಯೂ ಸೌಮ್ಯ ಎಷ್ಟು ಸೌಮ್ಯ ಹುಡುಗಿ ಎಂದರೆ, ಯಾರ ಮನೆಯ ತಿಂಡಿ ಚನ್ನಾಗಿರುತ್ತದೆಯೋ ಅವರಿಗೆ ವಿನಯದಿಂದ ಹೇಳಿ ಬಿಡುತ್ತಿದ್ದಳು. ನಿಮ್ಮ ಮನೆಯಲ್ಲಿ ರೊಟ್ಟಿ ಯಣ್ಣೆಗಾಯಿ ತುಂಬಾ ರುಚಿಯಾಗಿರುತ್ತದೆ. ನನಗೆ ಇನ್ನೊಂದು ಕೊಡಿ. ಇವರ ಮನೆಯ ಬಿಸಿ ಬೇಳೆ ಭಾತ್ ತುಂಬಾ ರುಚಿ. ನನಗೆ ಇನ್ನೂ ಸ್ವಲ್ಪ ಹಾಕಿ. ಎಂದು ತನ್ನ ಹೊಟ್ಟೆ ತುಂಬುವಷ್ಟು ಸಂಕೋಚಪಡದೇ ತಿನ್ನುತ್ತಿದ್ದಳು. ಹೊಟ್ಟೆಗೆ ಸಂಕೋಚ ಯಾಕೆ, ಎಂದು ತಾನೇ ಹೇಳಿ ಬಿಡುತ್ತಿದ್ದಳು. ಎಷ್ಟೋ ಬಾರಿ ತಂದಿದ್ದರಲ್ಲಿ ಅರ್ಧಕ್ಕಿಂತ ಹೆಚ್ಚು ಇವಳೇ ತಿಂದು,, ಕಷ್ಟಪಟ್ಟು ಮಾಡಿದವರೇ ಉಪವಾಸ ಇರುವಂತಿರುತ್ತಿತ್ತು. ನಮ್ಮ ನಾಯಕಿ ಸೌಮ್ಯ ನಮ್ಮವಳೇ, ತುಂಬಾ ಸಂತೋಷದಿಂದಲೇ ಹೇಳುತ್ತಿದ್ದಳು, “ವಂದೇ ಮಾತರಂ” ನಾವೆಲ್ಲಾ ಒಂದೇ ತಾಯಿಯ ಮಕ್ಕಳು, ಜೈ ಅನ್ನಪೂರ್ಣೆ”  ಬೇರೆಯವರ ಆಹಾರ ತಿನ್ನುವುದಕ್ಕೂ ವಂದೇ ಮಾತರಂ ಗೂ ಮಧ್ಯ ಇರುವ ಲಿಂಕ್ ನಮ್ಮಂತಹ ಬದುಕು ಅರಿಯದ ಅಜ್ಙಾನಿಗಳಿಗೆ ಅರ್ಥವಾಗುವುದಲ್ಲ.

ಕೆಲಸವನ್ನಂತೂ ಒಂದು ದಿನ ಮಾಡಿದ್ದು ಕಾಣೆ. ಅದಕ್ಕಾಗೇ ಒಂದು ದಿನ ಮೇಲಾಧಿಕಾರಿಗಳು, ಇವಳ ಬಳಿಯೇ ಒಂದು ಕೆಲಸ ಮಾಡಿಸಿದರು. ಅದರ ಯೋಗ್ಯತೆ ಎಲ್ಲರಿಗೂ ತಿಳಿದದ್ದೇ. ಆದ್ದರಿಂದ ಪ್ರತಿಫಲವಾಗಿ ಆ ದಿನ ಅವಳಿಗೊಂದು ಸ್ವೀಟ್ ಶೋಕಾಸ್ ನೋಟೀಸು ಬಂತು. ತುಂಬ ಕಷ್ಟದಿಂದ ಅದಕ್ಕೆ ಉತ್ತರವನ್ನೂ ಬರೆದಳು. ಆದರೆ  ಆ ಉತ್ತರವನ್ನು ಓದಲು ಅವಳ ಮೇಲಾಧಿಕಾರಿಗಳಿಗೆ  ಸಾಧ್ಯವಾಗಲಿಲ್ಲ. ಕೊನೆಗೆ ಅವರು, ನಮ್ಮ ಸೌಮ್ಯಳನ್ನೇ ಕರೆದರು, ನೋಟೀಸಿಗೆ ಇವಳು ಬರೆದ ಉತ್ತರವನ್ನು ಅವಳ ಕೈಯಿಗೇ ನೀಡಿ, ‘ನನಗಂತೂ ಇದನ್ನು ಓದಲು ಸಾಧ್ಯವಿಲ್ಲ. ನೀನೇ ಓದಿ ಹೇಳಮ್ಮ” ಎಂದರು. ತಾನು ಬರೆದ್ದದ್ದನ್ನು ತಾನೇ ಓದಬೇಕಾಗಿ ಬರುವ ಪರಿಸ್ಥಿತಿಯನ್ನು ಅವಳು ನೆನಸಿರಲಿಲ್ಲವೇನೋ. ಅಂತೂ ಒಟ್ಟಿನಲ್ಲಿ ಅವಳು ಬರೆದಿದ್ದನ್ನು ಅವಳಿಗೇ ಓದಲಾಗಲಿಲ್ಲ. ಇಂತಹ ಹಸೀ ಕಟ್ಟಿಗೆಗೆ ಏನು ಮಾಡಿದರೂ ಉರಿಸಲಾಗುವುದಿಲ್ಲ ಎಂಬುದು ಅವರಿಗೆ ಅರ್ಥವಾಗಿ, ‘ಆಯ್ತಮ್ಮ ನೀನಿನ್ನು ಹೊರಡು ಎಂದರು. ಆದರೆ, ಸೌಮ್ಯ ಹೇಳೋದೇನೂಂದರೆ, ನಾನು ಬರೆದಿದ್ದನ್ನ ಓದೋದಿಕ್ಕೆ ಆಗದೇ ಅರ್ಥ ಮಾಡೋದಕ್ಕೆ ಆಗದೇ ನನ್ನನ್ನ ಕರೆದರು, ಅಷ್ಟೂ ಅರ್ಥವಾಗದೇ ಇರೋವರು ಅದೆಂತಹ ಮೇಲಾಧಿಕಾರಿಗಳೋ?

ಇವಳ ಕಛೇರಿಗೆ ಆಟಗಾರರ ಮೀಸಲಾತಿಯಲ್ಲಿ ಒಂದು ಹುಡುಗಿ ಹೊಸದಾಗಿ ಸೇರಿಕೊಂಡಳು. ಪಕ್ಕದ ಹಳ್ಳಿಯ ಹುಡುಗಿ. ಆದರೆ ಛಲಗಾತಿ. ಪ್ರತಿ ದಿನ ನಾಲ್ಕೆಮ್ಮೆ ಹಾಲು ಕರೆದು, ಅದನ್ನ ಪ್ರತಿಯೊಬ್ಬರಿಗೂ ಮುಟ್ಟಿಸಿ, ನಂತರ ಕಛೇರಿಗೆ ಬರುವವಳು. ಒಂದಿನವೂ ತಡವಾಗಿ ಬರುತ್ತಿರಲಿಲ್ಲ. ಆರು ಕಿಲೋ ಮೀಟರ ದೂರದ ಹಳ್ಳಿಯಿಂದ ಓಡುತ್ತಲೇ ಬರುವಳು. ದುಡ್ಡೂ ಉಳಿತಾಯ. ದಿನವೂ ಓಟದ ಪ್ರ್ಯಾಕ್ಟೀಸ್ ಕೂಡಾ ಆಗುವುದು ಎಂಬುದು ಅವಳ ಅಭಿಪ್ರಾಯ.

ಕಛೇರಿಯಲ್ಲಿ ಟಪಾಲು ಶಾಖೆಗೆ ಇರುವ ಸೌಮ್ಯಳ ಕೆಲಸದ ವಿಧಾನ ಅರಿತಿದ್ದ ಮೇಲಾಧಿಕಾರಿಗಳು, ಹೊಸ ಹುಡುಗಿಯನ್ನೂ ಟಪಾಲು ಶಾಖೆಗೆ ಹಾಕಿದರು. ಬಂದ ನಾಲ್ಕು ದಿನದಲ್ಲೇ ಕಛೇರಿಗೆ ಬಂದ ಟಪಾಲುಗಳ ವಿತರಣೆ, ಹೊರ ಕಛೇರಿಗಳಿಗೆ ಕಳುಹಿಸುವ ಟಪಾಲುಗಳಿಗೆ ಅಡ್ರೆಸ್ ಬರೆದು ಅಂಚೆಗೆ ಕಳುಹಿಸುವುದು ಎಲ್ಲಾ ಕಲಿತಿದ್ದಳು. ಹಿಂದಿನ ಬಾಕಿ ಕೆಲಸವನ್ನು ಪೂರೈಸಿ, ತನ್ನ ಶಾಖೆಯ ಕೆಲಸವನ್ನು ಸಮ ಸ್ಥಿತಿಗೆ ತಂದಿದ್ದಳು. ಜೇಡ ಕಟ್ಟಿದ ಶಾಖೆಯ ಮೂಲೆ ಮೂಲೆಯನ್ನೂ ಸ್ವಚ್ಛಗೊಳಿಸಿ ಒಂದು ಹದಕ್ಕೆ ತಂದಳು. ವಿಷಯ ತಿಳಿದ ಮೇಲಾಧಿಕಾರಿಗಳು ಶಾಖೆಯನ್ನು ನೋಡಲು ಬಂದಾಗ, ಸೌಮ್ಯ ತಾನೇ ಎಲ್ಲಾ ಕೆಲಸ ಮಾಡಿರುವುದಾಗಿ ಮುಂದೆ ನಿಂತು ಹೇಳಿದಳು. ಎಷ್ಡು ಟಪಾಲು ಕಳಿಸಿದಿರಿ, ಎಷ್ಟು ಬಾಕಿಯಿದೆ ಎಂಬೆಲ್ಲಾ ಪ್ರಶ್ನೆ ಕೇಳಿದಾಗ ಉತ್ತರಿಸಲು ಹೊಸ ಹುಡುಗಿ, ರಶ್ಮಿಯೇ ಬರಬೇಕಾಯಿತು.

ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ, ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಜಯಗಳಿಸಿದ ರಶ್ಮಿ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋಗ ಬೇಕಾಯಿತು. ಒಬ್ಬಳೇ ಹುಡುಗಿ ದೂರದ ಊರು, ವಸತಿ ಮುಂತಾದ ತೊಂದರೆಗಳನ್ನು ನೆನಪಿಸಿಕೊಂಡು ಚಿಂತಿಸುತ್ತಿದ್ದ ರಶ್ಮಿಗೆ ಸಹೃದಯಿ ಮೇಲಾಧಿಕಾರಿಗಳು, ಕಛೇರಿ ಖರ್ಚಿನಲ್ಲಿ ಸೌಮ್ಯಳನ್ನೂ ಜೊತೆಯಾಗಿ ಕಳಿಸುವುದಕ್ಕೆ ಆದೇಶಿಸಿದರು. ಅಲ್ಲದೇ ಸೌಮ್ಯಳ ಸ್ವಭಾವವನ್ನು ಅರಿತ ಅವರು, ಸ್ವಲ್ಪ ಖಂಡಿತವಾಗಿಯೇ ಸೌಮ್ಯಳಿಗೆ ರಶ್ಮಿಯ ಜೊತೆಗಿರಲು ಹಾಗೂ ಅವಳ ಆಟಗಳಿಗೆ ಸಹಕರಿಸಲು ಆದೇಶಿಸಿದರು.

ಅಂತೂ ಬೆಂಗಳೂರಿಗೆ ಬಂದ ರಶ್ಮಿ ಹಾಗೂ ಸೌಮ್ಯ, ಕಬ್ಬನ್ ಪಾರ್ಕಿನ ಸರ್ಕಾರಿ ನೌಕರರ ಕಛೇರಿಗೆ ಬಂದರು. ಅಲ್ಲಿಯೇ ಒಂದು ಕೋಣೆಯಲ್ಲಿ ಇವರಿಬ್ಬರಿಗೂ ವಸತಿಗೆ ವ್ಯವಸ್ಥೆ ಮಾಡಲಾಯಿತು. ಮುಖ್ಯ ಮಂತ್ರಿ ಕ್ರೀಡಾ ಕೂಟದ ಉದ್ಘಾಟನೆ ಮಾಡಿ, ಸರ್ಕಾರಿ ನೌಕರರ ತೊಂದರೆಗಳ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಭಾಷಣ ಮಾಡಿ ಚಪ್ಪಳೆ ಸಿಳ್ಳು ಗಿಟ್ಟಿಸಿಕೊಂಡರು. ಪಾರಿವಾಳ ಹಾರಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಮೊದಲ ಸ್ಪರ್ಧೆಯಾಗಿ ಒಂದು ನೂರು ಮೀಟರ್ ಓಟದ ಸ್ಪರ್ಧೆ. ಮೊದಲ ಸ್ಪರ್ಧೆ ರಶ್ಮಿಯ ಅತ್ಯಂತ ಆಸಕ್ತಿಯ ಸ್ಪರ್ಧೆ. ಸಾಮಾನ್ಯವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರತಿಷ್ಟೆಯ ಸ್ಪರ್ಧೆಯಿದು. ರಶ್ಮಿ ಮೊದಲ ಸುತ್ತಿನಲ್ಲಿ ಆಯ್ಕೆಯಾದಳು. ಎರಡನೆಯ ಸುತ್ತಿನ ಸರ್ಧೆಯಲ್ಲಿ ಕಾಣದಾದ ಸೌಮ್ಯ, ರಶ್ಮಿಗೆ ಕಂಡಿದ್ದು, ಸಾಯಂಕಾಲ ತಮಗಾಗಿ ನೀಡಿದ್ದ ಕೋಣೆಯ ಬಳಿಯಲ್ಲಿ. ರಶ್ಮಿ ಎರಡನೆಯ ಸುತ್ತಿನಲ್ಲೂ ಆಯ್ಕೆಯಾಗಿ, ಕೊನೆಯ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿದಳು. ಅಲ್ಲಿಯೇ ಆ ಕ್ಷಣದಲ್ಲೇ ಕ್ರೀಡಾಂಗಣದಲ್ಲಿ ಬಹುಮಾನ ವಿತರಣೆಯಾಗಿ ಬಿಟ್ಟಿತು. ತಾನು ಕ್ರೀಡಾಕೂಟಕ್ಕೆ ಬಂದಿದ್ದು ಸಾರ್ಥವೆನಿಸಿತು ರಶ್ಮಿಗೆ. ಮೊದಲ ಸ್ಪರ್ಧೆಯಲ್ಲೇ ಮೊದಲ ಬಹುಮಾನ. ಅದೂ ಪ್ರತಿಷ್ಟೆಯ ಸ್ಪರ್ಧೆ. ಪ್ರತಿದಿನದ ತನ್ನ ಓಟ ಇಲ್ಲಿ ಫಲ ನೀಡಿತು ಎಂದು ಕೊಂಡಳು.

ಮಧ್ಯಾನ್ಹ ಊಟದ ವೇಳೆಯ ನಂತರ, ಇನ್ನೊಂದು ಸ್ಪರ್ಧೆ ಇನ್ನೂರು ಮೀಟರ್ ಓಟದ ಸ್ಪರ್ಧೆ. ಈ ಸ್ಪರ್ಧೆಯಲ್ಲೂ ರಶ್ಮಿ ತುಂಬಾ ಉತ್ಸಾಹದಿಂದ ಭಾಗವಹಿಸಿದಳು. ಇತರೆ ಸ್ಪರ್ಧಿಗಳೆಲ್ಲಾ ಮೊದಲಿನ ಸ್ಪರ್ಧೆಯಲ್ಲಿದ್ದವರೇ. ಈಗಾಗಲೇ ರಶ್ಮಿ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪಡೆದಿದ್ದರಿಂದ ಈ ಬಾರಿಯೂ ಅವಳು ಬಹುಮಾನ ನಿರೀಕ್ಷಿಸಿದ್ದಳು. ಆಕೆಯೊಂದಿಗೆ ಅನೇಕ ವೀಕ್ಷಕರೂ ಸಹ. ವೀಕ್ಷಕರಾಗಲೇ ‘ರಶ್ಮಿ, ರಶ್ಮಿ’  ಎಂದು ಕೂಗಲು ಪ್ರಾರಂಭಿಸಿದ್ದರು.

ನೂರು ಮೀಟರ್ ಓಟದ ಸ್ಪರ್ಧೆಯ ಬಹುಮಾನ ರಶ್ಮಿಯ ಕೈಯಲ್ಲೇ ಇತ್ತು. ಈಗ ಇನ್ನೂರು ಮೀಟರ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಬಹುಮಾನ ಇಟ್ಟುಕೊಳ್ಳಲು ಸೌಮ್ಯಳನ್ನು ಹುಡುಕಿದರೆ, ಅವಳೆಲ್ಲಿ?  ಅವಳಂತೂ ಕೈಗೆ ಸಿಗುವಂತಿಲ್ಲ. ಅಲ್ಲೇ ಹತ್ತಿರ ಇದ್ದವರ ಬಳಿ  ಬಹುಮಾನವಾಗಿ ಸಿಕ್ಕ ಮೆಡೆಲು ಸರ್ಟಿಫಿಕೇಟು ನೀಡಿ, ಓಟಕ್ಕೆ ನಿಂತಳು. ಜೊತೆಯಾಗಿ ಹುರಿದುಂಬಿಸುವುದಕ್ಕಾಗೇ ಬಂದ ಸೌಮ್ಯ ಮಾಯವಾಗಿದ್ದಳು.

ಸಭಿಕರ ಶುಭ ಹಾರೈಕೆಯೊಂದಿಗೆ ಮೊದಲ ಸುತ್ತಿನಲ್ಲಿ ಮುಂದಿದ್ದ ರಶ್ಮಿ, ಎರಡನೇ ಸುತ್ತಿನ ಕೊನೆವರೆಗೂ ಮುಂದೇ ಇದ್ದಳು. ಇನ್ನೇನು ಮುಕ್ತಾಯದ ಹಂತದಲ್ಲಿ ಸ್ನಾಯು ಸೆಳೆತಕ್ಕೆ ಸಿಲುಕಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಳು. ಅಲ್ಲಿಯೇ ಇದ್ದವರು ರಶ್ಮಿಯ ಕಾಲು ಉಜ್ಜಿದರು. ನೀರು ಕುಡಿಸಿದರು. ಜೊತೆಗಿರಬೇಕಾಗಿದ್ದ ಸೌಮ್ಯಳೂ ಇನ್ನೊಂದು ರೀತಿ ನೀರು ಕುಡಿಸಿದಳು. ಸುಖ ದುಃಖಗಳ ಸಮ್ಮಿಲನದಲ್ಲಿ ದಿನದಾಟಗಳು ಮುಗಿದವು. ಎರಡು ಮೆಡೆಲುಗಳು ರಶ್ಮಿ ಕೈಯಲ್ಲಿ. ಸಾಯಂಕಾಲ ನೇರವಾಗಿ ಕೋಣೆಗೆ ಬಂದ ಸೌಮ್ಯ ತಾನು ಥ್ರೋಬಾಲ್ ನೋಡಲು ಹೋಗಿದ್ದಾಗಿ ತಿಳಿಸಿದಳು. ಅವಳಿಗೆ ಹೊಸ ಗೆಳತಿಯರು ಸಿಕ್ಕಿದ್ದರು.

ಮರುದಿನ, ನಾಲ್ಕು ನೂರು ಮೀಟರ್ ಓಟದಲ್ಲಿಯೂ ರಶ್ಮಿ ದ್ವಿತೀಯ ಸ್ಥಾನ ಗಳಿಸಿದಳು. ಆ ದಿನವೇ ವೈಯಕ್ತಿಕ ಸ್ಪರ್ಧೆ ಮುಗಿದು, ತಮ್ಮ ಜಿಲ್ಲೆಯ ಖೋ ಖೋ ಟೀಮಿನಲ್ಲಿಯೂ ರಶ್ಮಿಯನ್ನು ಸೇರಿಸಿ ಕೊಂಡರು.  ರಶ್ಮಿ ಖೋ ಖೋ ಆಟಗಾರ್ತಿ ಕೂಡಾ ಪ್ರಾಥಮಿಕ ಶಾಲೆಯಲ್ಲಿ. ಖುಷಿಯಿಂದಲೇ ಸೇರಿಕೊಂಡಳು. ಇವಳ ಆಟ ಆ ಗುಂಪಿನವರಿಗೆ ಹೊಂದಿಕೆಯಾಯಿತು ಹಾಗೂ ಇಷ್ಟವಾಯಿತು ಕೂಡಾ. ತಂಡ ಉತ್ತಮವಾಗಿ ಆಡುತ್ತಿತ್ತು. ಫೈನಲ್ ಪಂದ್ಯದಲ್ಲಿ ಮೊದಲಿಗೆ ಓಡಲು ರಶ್ಮಿ ಹಾಗೂ ಇನ್ನಿಬ್ಬರು ಬಂದರು. ಪಾಪ ಎದುರಾಳಿ ತಂಡದ ದುರ್ದೈವವಿರಬೇಕು. ಅವರು ಮೊದಲು ಮುಟ್ಟಲು ಬೆನ್ನು ಹತ್ತಿದವಳೇ ರಶ್ಮಿ. ರಶ್ಮಿ ತಪ್ಪಿಸಿಕೊಳ್ಳುವುದರಲ್ಲಿ ಎತ್ತಿದ ಕೈ.  ಪೂರ್ಣಾವಧಿವರೆಗೂ ರಶ್ಮಿಯನ್ನು ಹಿಡಿಯಲು ಅವರಿಂದಾಗಲಿಲ್ಲ. ಅರ್ಧ ಅವಧಿ ಮುಗಿದೊಡನೆ ಇದನ್ನು ಅರ್ಥ ಮಾಡಿಕೊಂಡು, ಇನ್ನೊಬ್ಬಳನ್ನು ಹಿಂಬಾಲಿಸಿದರು, ಆದರೆ ಪುನಃ ರಶ್ಮಿಯ ಬೆನ್ನು ಬಿದ್ದರು. ಆಟ ಮುಗಿದಾಗ ರಶ್ಮಿಯಿಂದಾಗಿ ಇಂದಿನ ಫೈನಲ್ ಮ್ಯಾಚ್ ಗೆದ್ದೆವು          ಎನ್ನುವುದಕ್ಕಿಂತ, ಈ ಪಂದ್ಯದ ಗೆಲುವಿನಲ್ಲಿ ರಶ್ಮಿಯ ಪಾತ್ರ ಅತೀ ಮುಖ್ಯ ಎಂದೆನಿಸಿತ್ತು.

ಉತ್ತಮ ಅಂಕಗಳೊಡನೆ ವೈಯಕ್ತಿಕ ವೀರಾಗ್ರಣಿ ಹಾಗೂ ಖೋ ಖೋ ದಲ್ಲಿ ಉತ್ತಮ ಆಟಗಾರ್ತಿ ಬಹುಮಾನಕ್ಕೆ ರಶ್ಮಿ ಭಾಜನಳಾದಳು. ಮರುದಿನ ಬೆಳಿಗ್ಗೆ ಸಮಾರೋಪ ಸಮಾರಂಭ. ಮುಗಿದರೆ ಎಲ್ಲ ಮುಗಿದಂತೆ. ಊರಿಗೆ ಮರಳಬಹುದು. ರಶ್ಮಿಯ ಓಟದ ಬಹುಮಾನಗಳು ಈಗಾಗಲೇ ದೊರಕಿದ್ದವು.  ಅವುಗಳು ಆಟದ ಮುಕ್ತಾಯದಲ್ಲೇ ಸಿಕ್ಕಿದ್ದರಿಂದ ಫೋಟೋ ಮುಂತಾಗಿ ಇರಲಿಲ್ಲ. ಆದ್ದರಿಂದ ಅವಳು ಸಭೆಯಲ್ಲಿ ದೊರೆಯಬಹುದಾದ ಬಹುಮಾನಕ್ಕೆ ಉತ್ತಮ ರೀತಿಯಲ್ಲಿ ಬಟ್ಟೆಗಳನ್ನು ಧರಿಸಿ, ಅಲಂಕರಿಸಿಕೊಂಡು ಬಹುಮಾನ ಪಡೆಯಲು ಹಾಗೂ ಅವುಗಳ ಫೋಟೋ ಪಡೆಯಲು ಬಯಸಿದಳು.

ರಶ್ಮಿಯ ಬಳಿ ಉತ್ತಮ ಸಮಾರಂಭಗಳಿಗೆ ಧರಿಸುವ ಬಟ್ಟೆಗಳಿರಲಿಲ್ಲ. ಆದ್ದರಿಂದ ಹಾಗೂ ಬೆಂಗಳೂರಿಗೆ ಬಂದ ಕುರುಹಾಗಿ ಒಂದು ಸುಂದರ ಡ್ರೆಸ್ ಖರೀದಿಸ ಬಯಸಿದಳು. ಅವಳ ಖೋ ಖೋ ಗೆಳತಿಯರು ಹತ್ತಿರದಲ್ಲೇ ಇದ್ದ ಶಾಪಿಂಗ್ ಮಾಲ್ ನಲ್ಲಿ ರಶ್ಮಿಗೆ ಸುಂದರ ಡ್ರೆಸ್ ನ್ನು ಡಿಸ್ಕೌಂಟ್ ನಲ್ಲಿ ಕೊಡೆಸಿದರು.

ರಶ್ಮಿ ಕೋಣೆಗೆ ಬಂದು ಎಷ್ಟೋ ಹೊತ್ತಿನ ಮೇಲೆ, ಸೌಮ್ಯ ಬಂದಳು. “ಅಯ್ಯೋ, ನಿನ್ನ ಆಟವೆಲ್ಲಾ ಮುಗಿದಿರಬಹುದು ಎಂದು ತಿಳಿದು, ಇನ್ನು ಬಿಸಿಲಲ್ಲಿ ಯಾರು ಕಾಯುತ್ತಾರೆ ಅಂತ ಬೆಂಗಳೂರು ಸುತ್ತಲು ಹೋಗಿದ್ದೆ. ಸಮಯವಾಗಿದ್ದೇ ತಿಳಿಯಲಿಲ್ಲ. ಖೋ ಖೋ ಹಾಗೂ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಭಿನಂದನೆಗಳು.” ಎಂದಳು.

ಇವಳ ಸ್ವಭಾವನ್ನು ತಿಳಿದಿದ್ದ ರಶ್ಮಿ, ಅವಳನ್ನೇನೂ ದೂಷಿಸಲಿಲ್ಲ. ‘ಹೋಗಲಿ ಬಿಡು’ ಎಂದು ಸಮಾಧಾನ ಮಾಡಿಕೊಂಡಳು. ಇಬ್ಬರೂ ಮರುದಿನದ ಸಮಾರಂಭಕ್ಕೆ ಬರಲಿರುವ ಕ್ರಿಕೆಟರ್ ಹಾಗೂ ಚಲನಚಿತ್ರ ನಟಿಯ ಬಗ್ಗೆ ಮಾತನಾಡಿ ಕೊಂಡರು. ಸೌಮ್ಯಳ ಗೆಳತಿ, ಮರುದಿನ ಬೇಗ ಬಂದರೆ, ಮುಂದೆ ಪ್ರಮುಖರಿಗಾಗಿ ಮೀಸಲಿಟ್ಟ ಆಸನಗಳಲ್ಲಿ ಕೂಡ್ರಿಸುವುದಾಗಿಯೂ, ಚಲನಚಿತ್ರ ನಟಿಯನ್ನು ಪರಿಚಯಿಸುವುದಾಗಿಯೂ ತಿಳಿಸಿದ್ದಾಳೆಂದೂ, ಸಾಧ್ಯವಾದರೆ ತಾನು ಆ ನಟಿಯೊಂದಿಗೆ ಒಂದು ಸೆಲ್ಫೀ ತರುವುದಾಗಿಯೂ ತಿಳಿಸಿದಳು.

ಮರು ದಿನ ತಾನು ಹಾಕಿಕೊಳ್ಳಲು ಉತ್ತಮ ಡ್ರೆಸ್ ಯಾವುದೂ ಇಲ್ಲ, ಮುದ್ದೆ ಮುದ್ದೆಯಾದ ಡ್ರೆಸ್ ನ್ನು ಇಲ್ಲೇ ಹತ್ತಿರದಲ್ಲಿ ಯಾವುದಾದರೂ ಇಸ್ತ್ರೀ ಮಾಡುವ ಅಂಗಡಿ ಇದ್ದರೆ, ಮಾಡಿಸಿಕೊಂಡು ಬರೋಣ ಬಾ  ರಶ್ಮಿಯನ್ನು ಕರೆದಳು. ತುಂಬಾ ಸುಸ್ತಾಗಿತ್ತು ರಶ್ಮಿಗೆ, ಖೋ ಖೋ ಓಡಿದ ಕಾಲಿನ ನೋವು ಇತ್ತು. ಆದರೂ ಬದಲು ಹೇಳದೇ ರಶ್ಮಿಯೊಂದಿಗೆ ಹೊರಟಳು. ಎಷ್ಟು ದೂರ ಹೋದರೂ ಐರನ್ ಅಂಗಡಿ ಸಿಗಲಿಲ್ಲ, ಬರೀ ನಡೆದು ಸುಸ್ತಾಯಿತಷ್ಟೇ. ಈಗಾಗಲೇ ಅಂಗಡಿ ಮುಚ್ಚುವ ಸಮಯವಾದ್ದರಿಂದ ಸುಮ್ಮನೇ ಹಿಂದಿರುಗಿದರು. ರಶ್ಮಿಗಂತೂ ಕಾಲು ನೋವಿನಿಂದ ಕೋಣೆ ಸೇರಿದರೆ ಸಾಕೆನಿಸಿತ್ತು. ಆದರೂ ಪಾಪ ಸೌಮ್ಯ ಆಸೆ ಪಟ್ಟಿದ್ದಳಲ್ಲ ಎಂದುಕೊಂಡು, “ಇದೇ ಬಟ್ಟೆಯನ್ನೇ ನೀಟಾಗಿ ಮಡೆಸಿ, ದಿಂಬಿನ ಕೆಳಗಿಟ್ಟು ಮಲಗಿಕೋ ಸರಿ ಹೋಗುತ್ತದೆ.” ಎಂದಳು. ಅಲ್ಲದೇ ತಾನು ನಾಳೆಯ ಸಮಾರಂಭಕ್ಕಾಗಿ ಹೊಸ ಡ್ರೆಸ್ ಖರೀದಿಸಿರುವುದನ್ನೂ ತಿಳಿಸಿದಳು.

ಕೋಣೆಗೆ ವಾಪಸು ಬಂದೊಡನೇ, ಹೊಸ ಬಟ್ಟೆಯನ್ನು ತೋರಿಸಲು ಕೇಳಿದ ಸೌಮ್ಯ ತಾನೇ ರಶ್ಮಿಯ ಚೀಲದಿಂದ ಬಟ್ಟೆ ಎಳೆದಳು. ಈ ಡ್ರೆಸ್ ನೋಡಿದ ಕೂಡಲೇ ಅವಳ ಕಣ್ಣರಳಿಸಿದಳು. “ತುಂಬಾ ಚನ್ನಾಗಿದೆ ಡ್ರೆಸ್. ನಿಜವಾಗಲೂ ಈ ರೀತಿಯ ಡ್ರೆಸ್ ತೊಡಬೇಕೆಂದು ಬಹಳ ದಿನದಿಂದ ನನಗೆ ಆಸೆಯಿತ್ತು. ನಾಳೆಯ ಸಮಾರಂಭಕ್ಕೆ ಈ ರೀತಿಯ ಡ್ರೆಸ್ ತುಂಬಾ ಆಕರ್ಷಣೀಯವಾಗಿರುತ್ತದೆ.” ಎಂದು ತುಂಬು ಮನದಿಂದ ಹೊಗಳಿದಳು. “ರಶ್ಮಿ, ನನಗೆ ತುಂಬಾ ಸುಸ್ತಾಗಿದೆಯಮ್ಮ ತಿರುಗಾಡಿ, ಪ್ಲೀಸ್, ನನ್ನ ಬಟ್ಟೆಯನ್ನು ನೀಟಾಗಿ ಮಡೆಸಿ, ದಿಂಬಿನ ಕೆಳಗಿಟ್ಟರೆ ಸರಿ ಹೋಗುತ್ತದೆಯಂದೆಯಲ್ಲಾ, ಮಡಿಸಿಟ್ಟು ಬಿಡೇ.” ಎಂದವಳೇ ಹಾಸಿಗೆಯ ಮೇಲೆ ಉರುಳಿದಳು. ರಶ್ಮಿಯ ಡ್ರೆಸ್ ಎಳೆದದ್ದು, ಇನ್ನೊಂದು ಹಾಸಿಗೆಯ ಮೇಲೆ ಹೊರಳಾಡುತ್ತಿತ್ತು.

ರಶ್ಮಿಯ ಜೊತೆಗಾತಿಯಾಗಿ ಅವಳ ಸಹಕಾರಕ್ಕಾಗಿ ಬಂದಿದ್ದ ಸೌಮ್ಯಳ ಕೆಲಸಗಳನ್ನೇ ರಶ್ಮಿ ಮಾಡಬೇಕಾಯಿತು. ಪಾಪ, ನೀಟಾಗಿ ಮಡೆಸಿಟ್ಟರೆ ಚನ್ನಾಗಿರುತ್ತದೆ ಎಂದು ಹೇಳಿದ್ದು ರಶ್ಮಿಯಲ್ಲವೇ, ಅದಕ್ಕೇ ಅವಳೇ ಮಡಿಸಿಡ ಬೇಕು ಎಂಬುದು ಸೌಮ್ಯಳ ಆಶಯ. ಹೇಗೋ ಏನೋ ಬಿಟ್ಟರೆ, ನಾಳೆಗೆ ಸೌಮ್ಯಳಿಗೆ ಹಾಕಿಕೊಳ್ಳಲು ಬಟ್ಟೆಯಿಲ್ಲವಲ್ಲ ಎಂದುಕೊಂಡು, ತನಗೆ ಆಟವಾಡಿ ಎಷ್ಟೇ ಸುಸ್ತಾಗಿದ್ದರೂ, ಸೌಮ್ಯಳು ಎಳೆದಾಡಿದ ತನ್ನ ಹೊಸಾ ಬಟ್ಟೆಯನ್ನು ಮಡಿಸಿಟ್ಟು, ಸೌಮ್ಯಳಿಗಾಗಿ, ಅವಳ ನಾಳೆ ಹಾಕಿಕೊಳ್ಳ ಬೇಕಾಗಿದ್ದ ಬಟ್ಟೆಯನ್ನು ಮಡಿಸಿಟ್ಟು ಮಲಗಿದಳು.

ಆಟದ ಸುಸ್ತಿಗೋ, ಊರಿಂದ ಆಟಕ್ಕೇಂತ ಬಂದು, ಆಡಿ, ಬಹುಮಾನ ಗೆದ್ದ ಸಮಾಧಾನದ ಮನಸ್ತಿತಿಗೋ ಅಥವಾ ತನ್ನ ಸಾಧನೆಗೆ ಆನಂದದಿಂದಲೂ ಅಂತೂ ರಶ್ಮಿಗ್ಯಾಕೋ ತುಂಬಾ ಹೊತ್ತು ರಾತ್ರಿ ನಿದ್ದೆಯೇ ಬಂದಿರಲಿಲ್ಲ. ನಿದ್ರೆ ಬಂದಾಗ ರಾತ್ರಿ ಹನ್ನೆರಡೋ ಒಂದೋ. ಅದಕ್ಕೇ ಬೆಳಿಗ್ಗೆ ಎದ್ದಾಗ ಬೆಳ್ಳಗೆ ಬೆಳಕಾಗಿತ್ತು. ಹಳ್ಳಿ ಹುಡುಗಿ. ದನಕರುಗಳ ಸಾಕಣೆ ರೈತಾಪಿ ಮನೆತನದ ಹುಡುಗಿ ಸೂರ್ಯ ಮೂಡುವವರೆಗೆ ಮಲಗಿದ್ದೇ ಇಲ್ಲ. ಎದ್ದೊಡನೇ ಬೆಳಕಾಗಿದ್ದು ನೋಡಿ, ತನಗೇ ನಾಚಿಕೆಯಾಗಿತ್ತು. ‘ಎಂಟು ಗಂಟೆಗೇ ಹೊರಟರೆ, ಸಮಾರಂಭ ಒಂಭತ್ತು ಗಂಟೆಗೆ ಇರುವುದರಿಂದ, ಮುಂದೆ ಕೂಡಲು ಸ್ಥಳ ದೊರೆಯಬಹುದು, ಮುಂದೆ ಕುಳಿತರೆ ಬಹುಮಾನ ಪಡೆಯಲು ಸುಲಭವಾಗುತ್ತದೆ. ಅಷ್ಟರೊಳಗಾಗಿ, ಯಾರಾದರೂ ಇಬ್ಬರಿಗೆ ತನ್ನ ಬಹುಮಾನದ ಫೋಟೋ ಮೊಬೈಲಿನಲ್ಲಿ ತೆಗೆಯಲು ಹೇಳಬೇಕು.  ಸಾದ್ಯವಾದರೆ  ಫೋಟೋಗ್ರಾಫರನಿಗೂ ಫೋಟೋಗೆ ಹೇಳಬೇಕು.’ ಎಂದೆಲ್ಲಾ ವಿಚಾರಿಸುತ್ತಾ ಹಾಸುಗೆ ಮಡಿಸಿಡುವಾಗ ಪಕ್ಕಕ್ಕೆ ಸೌಮ್ಯಳನ್ನು ನೋಡಿದರೆ, ಸೌಮ್ಯಳಾಗಲೇ ಎದ್ದು ಬಿಟ್ಟಿದ್ದಳು. ಪ್ರತಿದಿನ ಎಂಟು ಹೊಡೆದರೂ ಏಳದಿದ್ದವಳು, ಈ ದಿನ ಸಿನೆಮಾ ತಾರೆಯ ಆಕರ್ಷಣೆಗಾಗಿ ಬೇಗ ಎದ್ದಿದ್ದಾಳೆ ಎಂದು ನೆನಪಾಗಿ ನಕ್ಕಳು. ಮುದ್ದೆಯಾಗಿದ್ದ ಹಾಸಿಗೆ ಹಾಗೇ ಬಿದ್ದಿತ್ತು. ‘ಪಾಪ, ಅವಳೂ ಬೇಗ ಹೋಗಬೇಕೆಂದಿದ್ದಳು, ಬಾತ್ ರೂಮಿನಲ್ಲಿರಬೇಕು,’  ಎಂದುಕೊಂಡು ಅವಳ ಹಾಸಿಗೆಯನ್ನೂ ಮಡಿಸಿಟ್ಟು ಕಾಯುತ್ತಾ ಕುಳಿತಳು. ತುಂಬಾ ಹೊತ್ತು ಕಾಯ್ದರೂ ಬಾತ್ ರೂಮಿನಿಂದ ಯಾವುದೇ ಶಬ್ದವಿಲ್ಲ. ಮೆಲ್ಲಗೆ ಬಾಗಿಲು ನೂಕಿ ನೋಡಿದರೆ, ಬಾತರೂಮಿನಲ್ಲಿ ಯಾರೂ ಇಲ್ಲ. ‘ಅರೆ ಸೌಮ್ಯ ಎಲ್ಲಿ ಹೋದಳು.’  ಎಂದು ಕೊಳ್ಳುತ್ತಲೇ ತಾನು ರೆಡಿಯಾಗಲು ಹೋದಳು.

ತನ್ನ ಹೊಸ ಡ್ರೆಸ್ ನಿಜವಾಗಲೂ ಚನ್ನಾಗಿದೆ ಅಂತ ಸೌಮ್ಯ ಹೇಳಿದಳು. ಆ ಡ್ರೆಸ್ ನಲ್ಲಿ ನಾನು ಮೊಬೈಲ್ ನಲ್ಲಿ ಒಂದಿಷ್ಟು ಫೋಟೋ ತೆಗೆದುಕೊಳ್ಳ ಬೇಕು ಎಂದು ಸ್ನಾನ ಮಾಡಿ ಬಂದು ಹೊಸ ಬಟ್ಟೆಯನ್ನು ಹಾಕಿ ಕೊಳ್ಳಲೆಂದು ತನ್ನ ಚೀಲದಲ್ಲಿ ನೋಡಿದರೆ, ಅಲ್ಲಿ ರಶ್ಮಿಯ ಬಟ್ಟೆಯಿರಲಿಲ್ಲ. ಆಶ್ಚರ್ಯವಾಯಿತು. ಇಲ್ಲೇ ಇಟ್ಟಿದ್ದೆನಲ್ಲಾ. ಎಂದು ಕೊಳ್ಳುತ್ತಲೇ ಅಕ್ಕ ಪಕ್ಕ ಹುಡುಕಿದ್ದರೆ ಎಲ್ಲೂ ಕಾಣಲಿಲ್ಲ. ಸೌಮ್ಯಳನ್ನು ಕೇಳೋಣವೆಂದರೆ, ಸೌಮ್ಯಳೂ ಇಲ್ಲ. ಕಳ್ಳತನವಾಗಿರಬಹುದೇ, ಅಪರಿಚಿತ ಜಾಗೆಯಂದರೆ, ಇನ್ನುಳಿದ ಎಲ್ಲಾ ವಸ್ತುಗಳು, ಚೀಲಗಳೂ ಹಾಗೇ ಇವೆ.

ಎಲ್ಲಿ ಹೋಗಿರಬೇಕು. ಅದೊಂದೇ ಡ್ರೆಸ್ ಮಾಯವಾಗಿರುವುದರ ಹಿನ್ನೆಲೆಯೇನು? ಎಂದು ಕೊಂಡರೆ ಹಾಗೇ ನಿಂತರೆ ಇನ್ನೂ ತಡವಾಗುತ್ತದೆ. ಈಗಾಗಲೇ ಒಂಬತ್ತು ಗಂಟೆಯ ಹತ್ತಿರದ ಸಮಯ ಎಂದವಳೇ ತನ್ನ ಹಳೆಯ ಡ್ರೆಸ್ ನ್ನೇ ಹಾಕಿಕೊಂಡು ಸಮಾರಂಭಕ್ಕೆ ಬಂದಳು.

ಬರುವುದು ತಡವಾಗಿದ್ದರಿಂದ ಈಕೆಯ ಖೋ ಖೋ ಗೆಳತಿಯರು, ಕೋಪ ಮಾಡಿಕೊಂಡರು. “ಒಂದೊಂದು ದಿನವೂ ಬೇಗನೇ ಎದ್ದು ಬರಕ್ಕಾಗಲ್ಚಾ?”  ಎಂದು ನಿಷ್ಟೂರ ಮಾಡಿದರು. ಅವಳಿಗಾಗೇ ಒಂದು ಸೀಟು ರಿಸರ್ವ ಮಾಡಿದ್ದರು. ಕುಳಿತು ಸುಧಾರಿಸಿ ಕೊಂಡ ಮೇಲೆ, ನೋಡುತ್ತಾರೆ, ರಶ್ಮಿ ನಿನ್ನೆ ಕೊಂಡ ಡ್ರೆಸ್ ಹಾಕಿಕೊಂಡಿಲ್ಲ. ಎಲ್ಲರೂ ಕೇಳುವವರೇ, ‘ಯಾಕೆ ಹೊಸಾ ಡ್ರೆಸ್ ಹಾಕಿಕೊಂಡಿಲ್ಲ, ಯಾಕೆ ಹೊಸಾ ಡ್ರೆಸ್ ಹಾಕಿಕೊಂಡಿಲ್ಲ” ಅವರ ಪ್ರೀತಿ ನೋಡಿ ಕಣ್ಣು ತುಂಬಿ ಬಂತು. ತನಗೆ ತಡವಾಗಿದ್ದಕ್ಕೆ ಕಾರಣ, ತನ್ನ ಹೊಸಾ ಡ್ರೆಸ್ ಕಾಣೆಯಾಗಿರುವುದು ಎಲ್ಲಾ ಹೇಳಿದಳು. ಎಲ್ಲರಿಗೂ ಆಶ್ಚರ್ಯವೇ. ರಾತ್ರಿ ಇಟ್ಟಿದ್ದ ಡ್ರೆಸ್ ಮಾಯವಾದ ಬಗ್ಗೆ.

ಅಷ್ಟರಲ್ಲೇ ಒಬ್ಬಳು ಹೇಳಿದಳು. “ಅಯ್ಯೋ, ಅಲ್ಲಿ ನೋಡು. ಅವಳು ನಿನ್ನ ಕಛೇರಿಯ ಸೌಮ್ಯ ಅಲ್ಲವಾ, ನೋಡು, ನಿನ್ನ ಡ್ರೆಸ್ ಹಾಕಿಕೊಂಡಿದ್ದಾಳೆ.” ಅಲ್ಲಿ ನೋಡಿದರೆ, ಸೌಮ್ಯ ಇವಳ ಹೊಸ ಡ್ರೆಸ್ ಹಾಕಿಕೊಂಡು ಗೆಳತಿಯರ ಗುಂಪಿನಲ್ಲಿ ನಗುತ್ತ ಮಾತನಾಡುತ್ತಿದ್ದಾಳೆ. ಮಿಂಚುತ್ತಿದ್ದಾಳೆ. ಅವಳಿಗೆ ತನ್ನ ಡ್ರೆಸ್ ಸರಿಯಾಗಿ ಹೊಂದಿಕೆಯಾಗಿದೆ.

ಇವಳ ಗೆಳತಿಯರಿಗೆ ಸಿಕ್ಕಾಪಟ್ಟೆ ಕೋಪ ಬಂತು. ಒಬ್ಬಳಂತೂ ಎದ್ದು ಹೋಗಿ ಕೈ ಹಿಡಿದು ಎಳೆದುಕೊಂಡೇ ಬಂದಳು. ಇನ್ನೊಬ್ಬಳು ಕೋಪದಿಂದ ಕೇಳಿದಳು. “ಯಾಕೇ, ರಶ್ಮಿ ಡ್ರೆಸ್ ಹಾಕಿಕೊಂಡಿದೀಯ. ಅವಳು ಈ ಸಮಾರಂಭಕ್ಕೇಂತ ಆಸೆಪಟ್ಟು ಕೊಂಡುಕೊಂಡಿದ್ದಳು.” ಸೌಮ್ಯ, ಕೂಲಾಗಿ, “ಏನೀಗ, ಇದೇ ಸಮಾರಂಭಕ್ಕೆ ಅಂತ ತಾನೇ ಕೊಂಡುಕೊಂಡಿರೋದು. ಅವಳ ಬದಲಿಗೆ ನಾನು ಹಾಕಿಕೊಂಡಿದೀನಿ. ನನಗೆ ಯಾವುದೂ ಹೊಸ ಬಟ್ಟೆಯಿರಲಿಲ್ಲ. ಅದಕ್ಕೇ  ಹಾಕಿಕೊಂಡೆ. ನಾನೇನು ಈ ಸಾಮಾನ್ಯ ಡ್ರೆಸ್ ಕಾಣದೇ ಹಾಕಿಕೊಂಡಿದೀನಾ ಅಥವಾ ನಾನೇ ಇಟ್ಟುಕೊಳ್ಳುತ್ತೀನಾ? ಸಮಾರಂಭ ಮುಗಿದ ಮೇಲೆ ಅವಳ ಮುಖದ ಮೇಲೇ ಎಸೀತೀನಿ ಬಿಡಿ. ಯಾರಿಗೆ ಬೇಕು, ಈ ದಿಕ್ಕು ಕಾಣದಿರುವವರ ಸಹವಾಸ. ಏನು, ಗೆಳತಿಯರ ನಡುವೆ ಅಷ್ಟೂ ಸೌಹಾರ್ದತೆ ಬೇಡವೇ, ಕಾಣದೇ ಬಂದ ಬಿಕನಾಸಿ ತರ ಮಾಡುತ್ತಾಳೆ. ಯಾಕೇ ರಶ್ಮಿ ನೀನೇ ಕೇಳಿದ್ದರೆ ನಾನು ಹೇಳುತ್ತಿರಲಿಲ್ಲವೇ, ಇವರೊಂದಿಗೆ ಚಾಡಿ ಹೇಳಿದೆಯಾ?.” ಎಂದೆಲ್ಲಾ ನುಡಿಯುತ್ತಾ ಕೆಂಗಣ್ಣು ಬೀರಿದಳು.

ಅಲ್ಲಿಯೇ ಇದ್ದ ಹಿರಿಯರೊಬ್ಬರು. ರಶ್ಮಿಗೆ ‘ಏನಮ್ಮ ಇದು, ಹೊಂದಾಣಿಕೆ ಮಾಡಿಕೊಳ್ಳಬಾರದಾ. ಒಂದು ದಿನ ನಿನ್ನ ಡ್ರೆಸ್ ಅವಳು ಹಾಕಿಕೊಂಡರೆ ಅದೇನು ಹಾರಿ ಹೋಗುತ್ತಾ. ಈಗಿನ ಕಾಳದ ಹುಡುಗಿಯರಿಗೆ ತುಸುವೂ ಹೊಂದಾಣಿಕೆಯಿರುವುದಿಲ್ಲ.” ಎಂದು ಬಯ್ದರು. ತಲೆ ತಗ್ಗಿಸಿ ರಶ್ಮಿ, “ಸಾರಿ, ಸೌಮ್ಯ” ಎಂದಳು. ಕೋಪದಿಂದಲೇ ಸೌಮ್ಯ, “ಎಲ್ಲಾ ಆದ ಮೇಲೆ ಈಗೇನು ಸಾರಿ ಕೇಳುವುದು.” ಎಂದು ತನ್ನ ವೇಲ್ ಹಾರಿಸುತ್ತಾ ಬಿರಬಿರನೇ ನಡೆದಳು.

ಸಮಾರಂಭದ ಜನರ ಮಧ್ಯೆ ಖಳನಾಯಕಿಯಾದ ರಶ್ಮಿ, ಅಳುಮುಖದಲ್ಲಿ ಬಹುಮಾನ ಸ್ವೀಕರಿಸಿದಳು. ಯಾವ ಫೋಟೋ ತೆಗೆಸಿಕೊಳ್ಳುವ ಉತ್ಸಾಹವೂ ಇಲ್ಲದೇ.  ರೂಮಿಗೆ ಮರಳಿದ ಮೇಲೆ, ಸೌಮ್ಯ, ರಶ್ಮಿಯ ಡ್ರೆಸ್ ತೆಗೆದು ಕೋಣೆ ತುಂಬಾ ಎಸೆದು “ತೋಗೋಮ್ಮಾ ಮಹರಾಣಿ, ಯಾರೂ ಕಾಣದ ಡ್ರೆಸ್ ತರಹಾ ಮಾಡಿದೆಯಲ್ಲಾ, ನಾನೇನೂ ನಿನ್ನ ಡ್ರೆಸ್ ತಿಂದಿಲ್ಲ. ಒಂದು ಹುಕ್ ಕಿತ್ತಿದೆ. ಈ ಶೋ ಬಟನ್ ಸಹ ನಿನ್ನದೇ ಇದನ್ನೂ ಇಟ್ಟುಕೋ” ಎಂದು ಬೀಸಾಕಿದಳು. ಅಳು ತುಂಬಿ ಬಂದಿದ್ದರೂ ಅಳಲು ಕೂಡಾ ಬೇಜಾರೆನಿಸಿತ್ತು.

ಊರಿಗೆ ಮರಳುವಾಗ ರಶ್ಮಿಯೇ ಮುಂದಾಗಿ ಬಸ್ಸನ್ನೇರಿ ಹಿಡಿದ ಎರಡು ಸೀಟುಗಳಲ್ಲಿ ಒಂದರಲ್ಲಿ ಕುಳಿತು, ನಗುನಗುತ್ತ ಮಾತನಾಡುತ್ತಿರುವ ಸೌಮ್ಯಳನ್ನು ನೋಡಿದಾಗ, ಇಷ್ಟೊತ್ತು ನನಗೆ ಬೇಜಾರು ಮಾಡಿದವಳು ಇವಳೇನಾ? ಎನ್ನುವಂತಿತ್ತು. ಆದರೆ ರಶ್ಮಿ ಮಾತ್ರ ಪೆಚ್ಚಾಗಿ, ಎಲ್ಲೋ ನೋಡುತ್ತಾ ಕುಳಿತಿದ್ದಳು. ಯಾವ ಉತ್ಸಾಹವೂ ಇಲ್ಲದೇ.

ಮರುದಿನ ಕಛೇರಿಗೆ ಹೋಗುವಾಗ, ಆದಷ್ಟೂ ಉತ್ಸಾಹ ತುಂಬಿಕೊಂಡು ಬಂದ ರಶ್ಮಿಗೆ, ಬಂದೊಡನೆ ಮೇಲಾಧಿಕಾರಿಗಳಿಂದ ಬುಲಾವ್ ಬಂದಿತ್ತು. “ರಶ್ಮಿ, ನಿಮ್ಮ ನಡುವಳಿಕೆ ನನಗೆ ತುಂಬಾ ಬೇಜಾರಾಗಿದೆ. ನಿಮಗೆ ತೊಂದರೆಯಾಗ ಬಾರದೆಂದು, ಬಲವಂತ ಮಾಡಿ, ಸೌಮ್ಯರನ್ನು ನಿಮ್ಮೊಡನೆ ಕಳುಹಿಸಿದರೆ, ಅವರೊಡನೆ ಜಗಳಾಡಿಕೊಂಡು ಬಂದಿದ್ದೀರಲ್ಲ. ಈ ಬಾರಿಗೆ ಕ್ಷಮಿಸಿದೆ ಹಾಗೂ ಎಚ್ಚರಿಕೆ ನೀಡಿದೆ. ಯಾವುದೇ ನೋಟೀಸು ನೀಡಿಲ್ಲ. ಇನ್ನೊಮ್ಮೆ ಹೀಗಾಗದಂತೆ ಎಚ್ಚರಿಗೆ ವಹಿಸಲು ಸಹ ಹೇಳುತ್ತಿದ್ದೇನೆ.” ಮೇಲಾಧಿಕಾರಿಗಳ ಎಚ್ಚರಿಕೆ ನುಡಿ ರಶ್ಮಿಗಾಗಿ. ಬಹುಮಾನ ಗಳಿಸಿದುದಕ್ಕಾಗಿ ಯಾವುದೇ ಅಭಿನಂದನೆಗಳಿಲ್ಲ.

ಅಳಬೇಕೋ ನಗಬೇಕೋ ತಿಳಿಯದೇ ಸುಮ್ಮನೇ ಕುಳಿತಿದ್ದ ರಶ್ಮಿಯನ್ನು ನೋಡಿ, ಉಳಿದ ಸಹೋದ್ಯೋಗಿಗಳು ಏನಮ್ಮ “ಸೌಮ್ಯ ನಾಯಕಿಯ ಸ್ನೇಹ ಮಹೋತ್ಸವ.” ನಾ. ಎಂದರು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x