ವೇದಾವತಿ ಹೆಚ್.ಎಸ್. ಅಂಕಣ

ವೆಜ್ ಬಿರಿಯಾನಿ ಮತ್ತು ತರಕಾರಿ ರಾಯಿತಾ: ವೇದಾವತಿ ಹೆಚ್.ಎಸ್.

1.ವೆಜ್ ಬಿರಿಯಾನಿ.

ಬೇಕಾಗುವ ಸಾಮಾಗ್ರಿಗಳು:
ತುಪ್ಪ ನಾಲ್ಕು ಚಮಚ
ಪಲಾವ್ ಎಲೆ ಎರಡು
ಚಕ್ಕೆ ಒಂದಿಂಚು
ಸ್ಟಾರ್ ಅನೈಸ್ ಒಂದು
ಲವಂಗ ಆರು
ಏಲಕ್ಕಿ ನಾಲ್ಕು
ಕಾಳುಮೆಣಸು ಒಂದು ಚಮಚ
ಜೀರಿಗೆ ಒಂದು ಚಮಚ
ಈರುಳ್ಳಿ ಎರಡು/ಕತ್ತರಿಸಿ ಕೊಳ್ಳಿ.
ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ
ಹುರುಳಿ ಕಾಳಿ ಆರು/ಒಂದಿಂಚಿಗೆ ಕತ್ತರಿಸಿ ಕೊಳ್ಳಿ
ಹೂಕೋಸು ಹತ್ತು ಎಸೆಳು
ಬಟಾಣಿ ಅರ್ಧ ಕಪ್
ಕ್ಯಾರೆಟ್ ಒಂದು/ಒಂದಿಂಚಿಗೆ ಕತ್ತರಿಸಿ.
ಆಲೂಗಡ್ಡೆ ಎರಡು/ಒಂದಿಂಚಿಗೆ ಕತ್ತರಿಸಿ
ಪನ್ನೀರ್ 200ಗ್ರಾಂ/ಚೌಕಾಕಾರವಾಗಿ ಒಂದೇ ರೀತಿಯಲ್ಲಿ ಕತ್ತರಿಸಿ.
ಸಿಹಿ ಮೊಸರು ಒಂದು ಕಪ್
ಅರ್ಧ ಚಮಚ ಅರಶಿನ
ಖಾರದ ಪುಡಿ ಒಂದು ಚಮಚ
ಜೀರಿಗೆ ಪುಡಿ ಕಾಲು ಚಮಚ
ಬಿರಿಯಾನಿ ಮಸಾಲೆ ಮೂರು ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ಪುದೀನ ಸೊಪ್ಪು ಸ್ವಲ್ಪ
ಈರುಳ್ಳಿ ಕೆಂಬಣ್ಣಕ್ಕೆ ಹುರಿದಿದ್ದು ಸ್ವಲ್ಪ
ಬಾಸುಮತಿ ಅಕ್ಕಿ ಒಂದೂವರೆ ಕಪ್
ಕೇಸರಿ ದಳ ಸ್ವಲ್ಪ/ ಎರಡರಿಂದ ಮೂರು ಚಮಚಬಿಸಿ ನೀರಿನಲ್ಲಿ ನೆನೆಸಿ
ಕೊಳ್ಳಿ
ನೀರು ಎರಡು ಕಪ್.
ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ:
ಮೊದಲು ಕುಕ್ಕರಿನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಕೊಳ್ಳಿ. ನಂತರ ಕಾಳುಮೆಣಸು, ಜೀರಿಗೆ,ಲವಂಗ, ಚಕ್ಕೆ, ಪಲಾವ್ ಎಲೆ, ಸ್ಟಾರ್ ಅನೈಸ್ ಹಾಕಿ. ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವರೆಗೆ ಹುರಿಯಿರಿ. ನಂತರ ಪನ್ನೀರ್ ಹಾಕಿ ಒಂದು ನಿಮಿಷ ಹುರಿಯಿರಿ. ಹೆಚ್ಚಿಕೊಂಡ ತರಕಾರಿಗಳನ್ನು ಹಾಕಿ ಸ್ವಲ್ಪ ಸಮಯ ಹುರಿದು ಕೊಳ್ಳಿ. ಸ್ವಲ್ಪ ಬಾಡಲಿ. ಕುಕ್ಕರ್ ಉರಿಯನ್ನು ಸಣ್ಣದಾಗಿ ಮಾಡಿ ಮೊಸರನ್ನು ಹಾಕಿ. ದೊಡ್ಡ ಉರಿಯಿದ್ದರೆ ಮೊಸರು ಒಡೆದು ಹೋಗುತ್ತದೆ. ಅದಕ್ಕೆ ಅರಶಿನ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಬಿರಿಯಾನಿ ಪೌಡರ್,ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಿ. ಸಣ್ಣ ಉರಿಯಲ್ಲಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಬೇಯಿಸಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಪುದೀನ ಸೊಪ್ಪನ್ನು ಹಾಕಿ. ಕೆಂಬಣ್ಣಕ್ಕೆ ಹುರಿದು ಕೊಂಡ ಈರುಳ್ಳಿಯನ್ನು ಸ್ವಲ್ಪ ಹಾಕಿ. ಎಲ್ಲವನ್ನೂ ಸಮತಟ್ಟಾಗಿ ಮಾಡಿ ಕೊಳ್ಳಿ.

ಅರ್ಧ ಗಂಟೆ ನೆನೆಸಿಟ್ಟುಕೊಂಡ ಬಾಸುಮತಿ ಅಕ್ಕಿಯನ್ನು ಮಸಾಲೆ ಪದಾರ್ಥಗಳ ಮೇಲೆ ಸಮತಟ್ಟಾಗಿ ಹರಡಿ. ಅದರ ಮೇಲೆ ಸ್ವಲ್ಪ ಬಿರಿಯಾನಿ ಪೌಡರನ್ನು ಒದುರಿಸಿ. ನಂತರ ಕೆಂಬಣ್ಣಕ್ಕೆ ಹುರಿದು ಕೊಂಡ ಈರುಳ್ಳಿಯನ್ನು ಪೂರ್ತಿ ಹಾಕಿ. ಕೊತ್ತಂಬರಿ ಸೊಪ್ಪು ಮತ್ತು ಪುದೀನ ಸೊಪ್ಪನ್ನು ಸುತ್ತಲೂ ಹರಡಿ. ನಂತರ ನೆನೆಸಿ ಕೊಂಡ ಕೇಸರಿ ಮತ್ತು ಅದರ ನೀರನ್ನು ಸುತ್ತಲೂ ಹರಡಿ. ಚಿಟಿಕೆ ಉಪ್ಪು ಸುತ್ತಲೂ ಹಾಕಿ. ಎರಡು ಚಮಚ ತುಪ್ಪವನ್ನು ಸುತ್ತಲೂ ಹಾಕಿ. ನಂತರ ಎರಡು ಕಪ್ ನೀರನ್ನು ಕುಕ್ಕರ್ ಕೊನೆಯ ಬದಿಯ ಸುತ್ತಲೂ ಹಾಕಿ. ಏಕೆಂದರೆ ಹಾಕಿರುವ ಪದಾರ್ಥಗಳನ್ನು ಸಮತಟ್ಟಾಗಿ ಇರಬೇಕು. ನಂತರ ಕುಕ್ಕರ್ ವಿಷಲ್ ಹಾಕಿ ಮುಚ್ಚಿ ಇಪ್ಪತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ವಿಷಲ್ ಬರಬೇಕೆಂದಿಲ್ಲ. ರುಚಿಯಾದ ವೆಜ್ ಬಿರಿಯಾನಿಯನ್ನು ರಾಯಿತಾದೊಂದಿಗೆ ಸವಿಯಿರಿ.

2.ತರಕಾರಿ ರಾಯಿತಾ.

ಬೇಕಾಗುವ ಸಾಮಾಗ್ರಿಗಳು:
ಗಟ್ಟಿ ಮೊಸರು ಅರ್ಧ ಲೀಟರ್
ಟೊಮೆಟೊ ಚಿಕ್ಕದಾಗಿ ಹೆಚ್ಚಿದ್ದು ಒಂದು
ಸೌತೆಕಾಯಿ ಚಿಕ್ಕದಾಗಿ ಹೆಚ್ಚಿದ್ದು ಒಂದು
ಈರುಳ್ಳಿ ಚಿಕ್ಕದಾಗಿ ಹೆಚ್ಚಿದ್ದು ಒಂದು
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ ಎರಡು
ಖಾರದ ಪುಡಿ ಅರ್ಧ ಚಮಚ
ಕಾಳುಮೆಣಸಿನ ಪುಡಿ ಅರ್ಧ ಚಮಚ
ಜೀರಿಗೆ ಪುಡಿ ಅರ್ಧ ಚಮಚ
ಬ್ಲಾಕ್ ಸಾಲ್ಟ (black salt)ಅರ್ಧ ಚಮಚ
ಕ್ರೀಮ್ ಕಾಲು ಕಪ್
ಉಪ್ಪು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:
ಒಂದು ಬೌಲ್ಗೆ ಮೊಸರನ್ನು ಮತ್ತು ತರಕಾರಿಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಚಿಕ್ಕದಾಗಿ ಕತ್ತರಿಸಿ ಕೊಂಡ ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ. ನಂತರ ಮಸಾಲೆ ಪದಾರ್ಥಗಳನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಕಾಲು ಕಪ್ ಕ್ರೀಮ್ ಹಾಕಿ ಮಿಶ್ರಣ ಮಾಡಿ. ರುಚಿಯಾದ ರಾಯಿತಾವನ್ನು ಬಿರಿಯಾನಿ, ಪಲಾವುಗಳೊಂದಿಗೆ ಸವಿಯಿರಿ.

ವೇದಾವತಿ ಹೆಚ್. ಎಸ್.