ಅಂದಿನ ಆ ಕರಾಳ ರಾತ್ರಿ: ನಂದಾ ಹೆಗಡೆ

ಎಪ್ಪತ್ತರ ಇಳಿವಯಸ್ಸಿನಲ್ಲಿ ನಾನು ನನ್ನ ಹಿಂದಿನ ಬದುಕಿನ ಬಗ್ಗೆ ಒಂದು ಸಿಂಹಾವಲೋಕನ ಮಾಡಿದಾಗ—————–

ನನ್ನ ಬದುಕು ನಾನಂದುಕೊಂಡಂತೆಯೇ ನಡೆಯಿತು. ಎಷ್ಟೋ ಜನ ಹೇಳುತ್ತಾರೆ, ಬದುಕು ನಾನಂದುಕೊಂಡಂತೆ ನಡೆಯಲೇ ಇಲ್ಲ. ನಾನಂದುಕೊಂಡಿದ್ದೇ ಒಂದು, ಬದುಕು ನಡೆದದ್ದೇ ಬೇರೆ, ನಾನೇನೇನೋ ಕನಸು ಕಂಡಿದ್ದೆ. ಆದರೆ ನನ್ನ ಯಾವ ಕನಸೂ ನನಸಾಗಲಿಲ್ಲ. . . . . . . . . ಹೀಗೇ ಏನೇನೋ . . . . . . . . . . .
ಆದರೆ ನಾನು ಚಿಕ್ಕಂದಿನಲ್ಲಿ ಏನೇನು ಕನಸು (ಅದು ಕನಸಲ್ಲ, ನನಗೆ ನಾನೇ ಹಾಕಿಕೊಂಡ ಕಟ್ಟುಪಾಡುಗಳು) ಕಂಡಿದ್ದೆನೋ ಅವೆಲ್ಲ ನಿಜವಾದವು. ನನಗೆ ಸದ್ಯ ಸಮಾಜದಲ್ಲಿ ಒಳ್ಳೆಯ ಹೆಸರಿದೆ. ಕಲಾರಾಧಕನಾದ್ದರಿಂದ ಸಭೆ ಸಮಾರಂಭಗಳಲ್ಲಿ ನನಗೆ ಮನ್ನಣೆಯಿದೆ. ಹಾಗೆ ಒಂದೆರಡು ಪ್ರಶಸ್ತಿಗಳೂ ಅರಸಿಕೊಂಡು ಬಂದಿವೆ.

ಹೌದು ನಾನು ಚಿಕ್ಕಂದಿನಲ್ಲಿ ಇಂಥದೇ ಜೀವನದ ಕನಸು ಕಂಡಿದ್ದೆ. ಆದರೆ ನಾನು ಕಂಡಿದ್ದು ಕನಸಲ್ಲ, ನನಗೆ ನಾನೇ ಹಾಕಿಕೊಂಡ ಕಟ್ಟುಪಾಡುಗಳು ಅಂತ ಹೇಳಿದೆನಲ್ಲವೇ. ಅದೇ ನನ್ನ ಬದುಕಿನ ದುರಂತ. ಎಲ್ಲರ ಹಾಗೆ ನಾನು ನನ್ನ ಹದಿಹರೆಯದಲ್ಲೋ, ನಂತರದ ವಿದ್ಯಾಭ್ಯಾಸದ ಸಮಯದಲ್ಲೋ ಈ ನಿರ್ಧಾರ ತೆಗೆದುಕೊಂಡಿದ್ದಲ್ಲ. ನಾನು ನನ್ನ 12 ನೆಯ ವಯಸ್ಸಿನಲ್ಲಿ ತೆಗೆದುಕೊಂಡ ನಿರ್ಧಾರ ಅಥವಾ ನನಗೆ ನಾನು ವಿಧಿಸಿಕೊಂಡ ಕಟ್ಟುಪಾಡು.

ಈ ನಿರ್ಧಾರ ನಾನು ಅಷ್ಟು ಚಿಕ್ಕ ವಯಸ್ಸಿನಲ್ಲೇ ತೆಗೆದುಕೊಂಡ ಕಾರಣ ಮತ್ತು ಸಂದರ್ಭ ಮಾತ್ರ ದಯನೀಯ ಮತ್ತು ಘೋರವಾಗಿತ್ತು.
ಆ ಕತ್ತಲೆಯ ರಾತ್ರಿಯಲ್ಲಿ ನಾನು ಮತ್ತು ನನ್ನ ತಮ್ಮ ಓಡಿ. . . ಓಡಿ. . . ಓಡಿ ಹತ್ತಿರದ ಪೇಟೆಯನ್ನು ಸೇರುವಾಗ ಬೆಳಗಾಗಿತ್ತು. 30 ಕಿಲೋಮೀಟರ್ 12 ವರ್ಷದ ನಾನು ಮತ್ತು 10 ವರ್ಷದ ನನ್ನ ತಮ್ಮ ಅದು ಹೇಗೆ ಓಡಿದೆವೋ ದೇವರಿಗೇ ಗೊತ್ತು. ದೇವಸ್ಥಾನವೊಂದರ ಚಂದ್ರಶಾಲೆಯಲ್ಲಿ ತಲೆ ಊರಿದ್ದೊಂದು ಗೊತ್ತು. ಸಂಜೆಯ ಪೂಜೆಗೆ ಬಂದ ಭಟ್ಟರು ನಮ್ಮನ್ನು ತಟ್ಟಿ ಎಬ್ಬಿಸಿದಾಗಲೇ ಎಚ್ಚರವಾಗಿದ್ದು. ದಯಾಳುವಾದ ಭಟ್ಟರು ಮುಂದೆ ನಮ್ಮ ಪಾಲಿಗೆ ತಂದೆ ತಾಯಿ ಬಂಧು ಬಳಗ ಎಲ್ಲವೂ ಆಗಿದ್ದರು. ಅವರ ಹೆಂಡತಿ ನಮಗೆ ಅಮ್ಮನಾಗಿಯೂ, ಮಕ್ಕಳು ನಮಗೆ ಅಕ್ಕ ತಮ್ಮಂದಿರಾಗಿಯೂ ಆದರಿಸಿದ್ದರಿಂದ ನಾವೀರ್ವರು ಅವರ ನಾಲ್ಕು ಜನರ ಸಂಸಾರದಲ್ಲಿ ಒಂದಾಗಿ ಬೆಳೆದೆವು. ನಾನು ಮತ್ತು ನನ್ನ ತಮ್ಮ ಆಗಾಗ ಯಾರಿಗೂ ಕಾಣದಂತೆ ನಾವೀರ್ವರು ಸಾಕ್ಷಿಯಾದ ಆ ಭಯಾನಕ ಘಟನೆಯನ್ನು ನೆನೆ ನೆನೆದು ಭಯಪಟ್ಟುಕೊಳ್ಳುತ್ತಿದ್ದೆವು. ಕಣ್ಣೀರು ಹಾಕುತ್ತಿದ್ದೆವು. ಆದರೆ ಯಾರೊಂದಿಗೂ ಅದನ್ನ ಬಾಯಿ ಬಿಡದೇ ಇಂದಿಗೂ ಕೂಡ ಗುಟ್ಟು ಕಾದಿಟ್ಟುಕೊಂಡಿದ್ದೇವೆ. ಈಗಲೂ ನಮಗೆ ಆ ಘಟನೆಯನ್ನು ನೆನೆದರೆ ಎದೆ ಝಲ್ ಎನ್ನುತ್ತದೆ.

ನಮ್ಮಪ್ಪ ನಮ್ಮಮ್ಮನಿಗೆ ನಾನು ಮೊದಲನೆಯ ಮಗ. ನಾನು ಹುಟ್ಟಿ ಎರಡು ವರ್ಷಕ್ಕೆ ನನ್ನ ತಮ್ಮ ಹುಟ್ಟಿದಾಗ ನನ್ನಮ್ಮ ಬಾಣಂತಿ ಜ್ವರದಿಂದ ತೀರಿಕೊಂಡುಬಿಟ್ಟಳು. ಅದಾಗಿ ಒಂದು ವರ್ಷಕ್ಕೆ ನಮ್ಮಪ್ಪ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟ ಎಂದು ಇನ್ನೊಂದು ಮದುವೆ ಮಾಡಿಕೊಂಡರು. ಆಗಿನಿಂದ ನನಗೆ ನನ್ನ ತಮ್ಮನ ಆರೈಕೆ ಮತ್ತು ನನ್ನ ಅಪ್ಪನಿಗೆ ಚಿಕ್ಕಮ್ಮನ ಓಲೈಕೆ ಮಾಮೂಲಾಯಿತು. ಆರನೇ ವರ್ಷಕ್ಕೆ ನಾನು ಶಾಲೆಗೆ ಸೇರಿದೆನಾದರೂ ಅರ್ಧಕ್ಕರ್ಧ ದಿನ ಮನೆಯ ಕೆಲಸ ಎಂದು ನಾನು ಶಾಲೆಗೆ ಹೋಗಲು ಆಗುತ್ತಿರಲಿಲ್ಲ. ಹಾಗೂ ಹೀಗೂ ನಾಲ್ಕನೆಯ ತರಗತಿಯವರೆಗೆ ಓದುವ ಹೊತ್ತಿಗೆ ನನ್ನ ಶಾಲೆ ಮುಗಿಯಿತು. ನಾನು ಮನೆಯಲ್ಲಿದ್ದು ತಮ್ಮನಿಗೆ ಶಾಲೆಗೆ ಹೋಗುವಂತೆ ಒತ್ತಾಯಿಸಿ ಕಳುಹಿಸುತ್ತಿದ್ದೆ. ನಮ್ಮಪ್ಪನಿಗೆ ಚಿಕ್ಕದೊಂದು ಮನೆ ಜೊತೆಗೆ ಅರ್ಧ ಎಕರೆ ಅಡಿಕೆ ತೋಟ ಇಷ್ಟೇ ಇದ್ದದ್ದು. ಹಾಗಾಗಿ ಅಪ್ಪ ನಮ್ಮ ಮನೆಯ ಕೆಲಸ ಯಾವುದೂ ಇಲ್ಲದಿರುವಾಗ ಬೇರೆಯವರ ಮನೆಯ ತೋಟದ ಕೆಲಸಕ್ಕೆ ಹೋಗುತ್ತಿದ್ದರು.

ಹೀಗಿರುವಾಗ ಅಪ್ಪ ಊರಿನ ದೊಡ್ಡ ಪಟೇಲರ ಮನೆಯ ತೋಟಕ್ಕೆ ಮಣ್ಣು ಹೊಯ್ಯುವ ಗುತ್ತಿಗೆ ಕೆಲಸಕ್ಕೆ ಹೋಗತೊಡಗಿದರು. ಕೆಲಸ ಕಷ್ಟದ್ದಾದರು ಕೆಲಸದ ಗುತ್ತಿಗೆ ಹಿಡಿದ ಶೇರುಗಾರ ಕೊಡುವ ಪಗಾರ ಮಳೆಗಾಲದ ಖರ್ಚಿಗಾಗುತ್ತದೆ ಎಂದು ಸುಮಾರು ಎರಡು ತಿಂಗಳಾಗುವ ಕೆಲಸಕ್ಕೆ ಹೋಗಲು ಒಪ್ಪಿದ್ದರು. ಮನೆಯಲ್ಲಿ ಅಪ್ಪ ಇಲ್ಲ ಎಂದರೆ ನನಗೆ ಮತ್ತು ತಮ್ಮನಿಗೆ ಭಯ ಯಾಕೆಂದರೆ ಆ ಸಮಯ ನೋಡಿ ಚಿಕ್ಕಮ್ಮ ಕೊಡುವ ಹಿಂಸೆ ಅಸಹನೀಯವಾಗಿರುತ್ತಿತ್ತು. ಈಗ ಎರಡು ತಿಂಗಳಿನ ದಿನ ಅಪ್ಪ ಇಲ್ಲದಿರುವುದನ್ನು ನೆನೆದು ನಾವು ತುಂಬಾ ಭಯಭೀತರಾಗಿದ್ದೆವು. ಆದರೆ ಆಶ್ಚರ್ಯವೆಂಬಂತೆ ಹಾಗೇನೂ ಆಗಲಿಲ್ಲ. ದಿನಾಲೂ ಅಪ್ಪ ತೋಟಕ್ಕೆ ಹೋದ ಮೇಲೆ ಮನೆಗೆ ಶೇರೂಗಾರ ಬರುತ್ತಿದ್ದ. ಚಿಕ್ಕಮ್ಮ ಮತ್ತು ಆತ ಚಹಾ ಕುಡಿಯುತ್ತ ಒಳಕೋಣೆಯಲ್ಲಿ ಇರುತ್ತದ್ದರು. ಚಿಕ್ಕಮ್ಮ ನನ್ನನ್ನು ಕರೆ ದು ನೀನು ಹೊರಗೆಲ್ಲಾದರೂ ಆಡಿಕೊ ಅಥವಾ ದನ ಕಾಯಿ ಎಂದು ಹೇಳುತ್ತಿದ್ದಳು. ನಾನು ಮತ್ತು ಶಾಲೆಗೆ ರಜವಿದ್ದಾಗ ನನ್ನ ತಮ್ಮ ಆ ದಿನಗಳಲ್ಲಿ ತುಂಬಾ ಮಜವಾಗಿದ್ದೆವು. ಈ ನಡುವೆ ಅಪ್ಪ ಕುಡಿದು ಮನೆಗೆ ಬರಲು ಶುರುವಿಟ್ಟುಕೊಂಡಿದ್ದು, ಅವರು ಕುಡಿದು ಬಂದು ಶೇರೂಗಾರನ ಹೆಸರಿಡಿದು ಕೂಗಾಡಿದರೂ ಚಿಕ್ಕಮ್ಮ ಒಳಗೊಳಗೇ ನಗುತ್ತಾ ಸುಮ್ಮನಿರುವುದು ನಮಗೆ ಸೋಜಿಗವೆನಿಸುತ್ತಿತ್ತು.

ಆದರೆ ಆದೊಂದು ಕರಾಳ ರಾತ್ರಿ!!!

ಅಪ್ಪ ಚಿಕ್ಕಮ್ಮ ಜೋರಾಗಿ ಕಿರುಚಾಡಿಕೊಂಡು, ಅಪ್ಪ ತುಂಬಾ ಕುಡಿದಿದ್ದರಿಂದ ಚಿಕ್ಕಮ್ಮ ಅವರನ್ನು ಕೆಡವಿದ ಸದ್ದು ನಮಗೆ ಕೇಳಿತ್ತು. ಮುಂದೆ ಅಪ್ಪನಿಂದ ಯಾವ ಪ್ರತಿಕ್ರಿಯೆಯೂ ಬರದಿರಲು ನಾವೀರ್ವರೂ ಭಯದಿಂದಲೇ ನಿದ್ದೆ ಹೋಗಿದ್ದೆವು. ಆದರೆ ಮಧ್ಯರಾತ್ರಿಯಲ್ಲಿ ನನಗೆ ಪಕ್ಕನೆ ಎಚ್ಚರವಾಯಿತು. ಯಾರೋ ಗುಸು ಗುಸು ಮಾತನಾಡುತ್ತಿರುವಂತೆ ಅನಿಸಿತು. ಆಲಿಸಿ ಕೇಳಿದಾಗ “ಅವನ ಜೊತೆ ಆ ಮಕ್ಕಳೂ ಸುಟ್ಟು ಬೂದಿಯಾಗುತ್ತಾರೆ. ಮನೆಗೆ ಬೆಂಕಿ ಬಿದ್ದು ಬೆಂದು ಹೋದರು ಎಂದಾಗುತ್ತದೆ ಬಾ ಹೋಗೋಣ” ಎಂಬ ಮಾತು ಸ್ಪಷ್ಟವಾಗಿ ಕೇಳಿಸಿತು. ಹಾಗೇ ಯಾರೋ ಓಡಿ ಹೋದ ಸಪ್ಪಳವಾಯಿತು. ಆಗ ನನ್ನ ಮನಸ್ಸು ಜಾಗ್ರತವಾಯಿ. ಉಸಿರೆಳೆದುಕೊಂಡು ನೋಡಿದೆ. ಬೆಂಕಿ ಹೊಗೆಯ ವಾಸನೆ! ನಮ್ಮದು ಸೋಗೆಯ ಮನೆ. ಆಗಲೇ ಹೊತ್ತಿ ಉರಿಯಲು ಶುರುವಾಗಿತ್ತು!!ನಾನು ಅವಸರದಿಂದ ತಮ್ಮನನ್ನು ಏಳಿಸಿದೆ. ಓಡೋಡಿ ಹೋಗಿ ಒಳಕೋಣೆಯ ಕಡೆಗೆ ನೋಡಿದೆ. ಕತ್ತಲು, ಹೊಗೆ…. . ಬೆಂಕಿ…… ಏನೇನೂ ಕಾಣಿಸಲಿಲ್ಲ! ತಮ್ಮಾ ಓಡೋಣ ಬಾ ಎಂದು ಒಂದೇ ಸಮನೆ ಓಡಿ………ಓಡಿ……. ಓಡಿ……. ಮುಂದಿನದೆಲ್ಲಾ ದೇವರಿಚ್ಛೆಯೇನೋ. ಪಾಪದ ಅಪ್ಪ ಮಾಡಿದ ಪುಣ್ಯವೇನೋ. ನಾವೀರ್ವರೂ ಬದುಕಿ ಇಷ್ಟು ವರ್ಷ ಬಾಳಿದೆವು.

ನಾನೂ ನನ್ನ ತಮ್ಮ ನಮಗೆ ನಮ್ಮ ಮಟ್ಟಿನ ತಿಳಿವಳಿಕೆ ಬಂದಾಗ ಒಮ್ಮೆ ಯಾರಿಗೂ ಕಾಣದಂತೆ ಒಂದು ದಿನ ಹತ್ತಿರದ ಬೆಟ್ಟ ಏರಿದೆವು. ಯಾರಿಗೂ ಹೇಳದೇ ಎದೆಯಲ್ಲಿ ಬಚ್ಚಿಟ್ಟ “ಆ” ವಿಷಯದ ಬಗ್ಗೆ ಮಾತನಾಡಿದೆವು. ಹರೆಯಕ್ಕೆ ಕಾಲಿಡಲಿದ್ದ್ಟ ನಮಗೆ ಅದು ಯಾಕೆ ಹಾಗಾಯಿತು ಎಂದು ಮನದಟ್ಟಾಯಿತು. ಅಂದೇ ನಾವಿಬ್ಬರೂ ಪ್ರತಿಜ್ಞೆ ಮಾಡಿದೆವು “ನಾವು ಎಂದಿಗೂ ಮದುವೆ ಆಗಬಾರದು. ಹೆಂಗಸರಿಂದ ದೂರ ಉಳಿಯಬೇಕು” ಎಂದು

ಈಗಲೂ ನನಗೆ ಆ ನಿರ್ಧಾರದ ಬಗ್ಗೆ ಬೇಸರವಿಲ್ಲ. ಆದರೂ ಒಮ್ಮೊಮ್ಮೆ………… ಹೆಂಡತಿ ಮಕ್ಕಳೊಂದಿಗೆ ಇಳಿ ವಯಸ್ಸಿನಲ್ಲಿ ನೆಮ್ಮದಿಯ ಜೀವನ ಕಳೆಯುತ್ತಿರುವವರನ್ನು ನೋಡಿದರೆ……………

ಎಷ್ಟೋ ಜನ ನನಗಾಗಿ ಊಟ ವಸತಿಯ ವ್ಯವಸ್ಥೆ ಮಾಡಿ ಅಭಿಮಾನದಿಂದ ಆದರಿಸಿದರೂ…
ಅವೆಲ್ಲ ಮಕ್ಕಳ ಮಮತೆಯ ಆದರಕ್ಕೆ ಸಮವಲ್ಲ ಎಂಬ ಕೊರಗು ಕಾಡುತ್ತದೆ
ಆದರೆ ನಾನೇನು ಮಾಡಲಿ?ಇದಕ್ಕೆ ಯಾರು ಹೊಣೆ?
-ನಂದಾ ಹೆಗಡೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Ranjana Hegde
Ranjana Hegde
5 years ago

nice narration 🙂

Nanda
Nanda
5 years ago
Reply to  Ranjana Hegde

Thank you

2
0
Would love your thoughts, please comment.x
()
x