ಪ್ರೇಮ ಪತ್ರಗಳು

ಕಾದಿರುವೆ ನಿನಗಾಗಿ: ಜಯಶ್ರೀ. ಜೆ. ಅಬ್ಬಿಗೇರಿ

ಪ್ರಿಯ ಹೃದಯದರಸಿಗೆ,

ಕುರುಚಲು ಗಿಡದಂತೆ ಬೆಳೆದ ನನ್ನ ಗಡ್ಡ, ಕೆದರಿದ ಕೂದಲು, ನಿಸ್ತೇಜ ಕಣ್ಣುಗಳು ಭಗ್ನಪ್ರ್ರೇಮಿಯಂತಾಗಿರುವ ನನ್ನ ಗುರುತು ನಿನಗೆ ಸಿಗಲಿಲ್ಲ ಅಂತ ಅನಿಸಿತು. ನಿನ್ನ ಸವಿನೆನಪುಗಳೇ ನನ್ನ ಜೀವನಕ್ಕೆ ಆಧಾರ ಎಂದು ಭಾವಿಸಿ, ಬಾಲಂಗೋಚಿಯಿಲ್ಲದ ಗಾಳಿಪಟದಂತೆ ಗೊತ್ತು ಗುರಿಯಿಲ್ಲದ ಬದುಕು ದೂಡುತ್ತಿದ್ದ ನನ್ನ ಪಾಡು ಕಂಡ ಅಪ್ಪ,ಅವ್ವ, ಗೆಳೆಯರು, ಸಂಬಂಧಿಕರು `ಒಳ್ಳೆಯ ಕೆಲಸವಿದೆ ಕೈ ತುಂಬಾ ಸಂಬಳವಿದೆ ಯಾಕ ಸೊರಗಿ ಶುಂಠಿಯಾಗಿ? ಮದುವೆಯಾಗಿ ಆರಾಮ ಇರು`. ಎಂದು ಎಷ್ಟು ಪೀಡಿಸಿದರೂ ಜಗ್ಗಿರಿರಲಿಲ್ಲ.

ಈ ಜೀವಮಾನದಲ್ಲಿ ನಿನ್ನ ದರುಶನ ನನಗಾಗಲು ಸಾಧ್ಯವಿಲ್ಲ ಎಂದುಕೊಡಿದ್ದೆ ಮೊನ್ನೆ ನಿನ್ನ ಕಂಡ ಕಣ್ಣುಗಳು ಅರಳಿದವು ಕ್ಷಣಾರ್ಧದಲ್ಲಿ ಕುಂಕುಮವಿಲ್ಲದ ಹಣೆ ಕಂಡು ಕಣ್ಣೀರು ಸುರಿಯತೊಡಗಿದವು. ನಿನ್ನ ಪ್ರತಿರೂಪವನ್ನು ಮಡಿಲಲ್ಲಿ ಹೊತ್ತು ನಿರ್ಭಾವ ವದನಳಾಗಿ, ಭಾರವಾದ ಹೆಜ್ಜೆಯನ್ನು ಹಾಕುತ್ತಾ ಹೋದುದ ನೋಡಿ ಕರಳು ಹಿಂಡಿದಂತಾಯಿತು. ನಿನ್ನನ್ನು ಮಾತನಾಡಿಸಲು ಗೊತ್ತಾಗದೇ ಮಂಕು ಬಡಿದವನಂತೆ ನಿಂತು ಬಿಟ್ಟೆ.

ನಾನು ನಿನ್ನ ಪ್ರೇಮದ ಬಲೆಯಲ್ಲಿ ಬಿದ್ದಿದ್ದು ಒಂದು ವಿಚಿತ್ರ ಘಟನೆಯೇ ಸರಿ. ಎಂದಿನಂತೆ ಕಾಲೇಜು ಮುಗಿಸಿ ಮನೆಯೆಡೆಗೆ ಹೆಜ್ಜೆ ಹಾಕುತ್ತಿದ್ದೆ. ಬಾನಂಗಳದಲ್ಲಿ ನೇಸರ ಬಂಗಾರ ಬಣ್ನ ಬಳಿಯುತ್ತಾ ತನ್ನ ಮನೆಯತ್ತ ಮುಖ ಮಾಡುತ್ತಿದ್ದ. ಮಬ್ಬು ಕವಿಯುತ್ತಿತ್ತು ಆಕಾಶದಿಂದ ದಿಢೀರನೆ ಮಿಂಚೊಂದು ಹರಿದು ನನ್ನ ಬಳಿ ನಿಂತಂತಾಯಿತು. ಅಂಥ ಸೌಂದರ್ಯ ರಾಶಿಯನ್ನು ಪ್ರಥಮ ಬಾರಿ ಕಂಡೆ. ಮೊದಲ ನೋಟದಲ್ಲೇ ನಿನ್ನ ಮೋಹಕ ನಗೆ ನನ್ನನ್ನು ಸಮ್ಮೋಹಕ ಶಕ್ತಿಯಂತೆ ಸೆಳೆದಂತಾಯಿತು.

ಪ್ರೀತಿ ಪ್ರೇಮದ ವಿಷಯದ ಬಗ್ಗೆ ಓದಿನ ಸಮಯದಲ್ಲಿ ತಲೆ ಕೆಡಿಸಿಕೊಳ್ಳಬಾರದೆಂದು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದೆ. ನನ್ನ ಗೆಳೆಯರಿಗೆಲ್ಲ `ಪ್ರೀತಿಯ ಬಲೆಯಲ್ಲಿ ಬಿದ್ದು ಭವಿಷ್ಯ ಹಾಳು ಮಾಡಿಕೊಳ್ಳ ಬೇಡಿ ಎಂದು ವಯಸ್ಸಾದ ಮುದುಕನಂತೆ ಉಪದೇಶಿಸುತ್ತಿದ್ದೆ. ಕಾಲೇಜಿನಲ್ಲಿ ಎಲ್ಲರೂ ನನ್ನನ್ನು `ವಿಶ್ವಾಮಿತ್ರ’ ಎಂದು ಛೇಡಿಸುತ್ತಿದ್ದರು. ಪ್ರೀತಿ ಮುಳ್ಳಿನ ಹಾಸಿಗೆ ರೀತಿ ಎತ್ತ ಹೊರಳಾಡಿದರೂ ಚುಚ್ಚುತ್ತೆ ಅದರ ಜಾಲದಲ್ಲಿ ಬಿದ್ದವರಿಗೆ ದೊಡ್ಡ ಸಾಧನೆ ಸಾಧ್ಯವಿಲ್ಲ ಎಂಬ ಹಿರಿಯರ ಮಾತು ನನ್ನ ಮೇಲೆ ಅಗಾಧವಾದ ಪರಿಣಾಮ ಬೀರಿತ್ತು.

ಆದರೆ ಇದೇನು ಇಂದು ಹೊಸ ಅನುಭವ ಹೃದಯದಲ್ಲೇನೋ ಪುಳಕ ಎದೆಯಲ್ಲೇನೋ ನಡುಕ ಉಂಟಾಯಿತು ಭಯಭೀತನಾಗಿ ಬೆವರಿದೆ. ಅದಷ್ಟೋ ದಿನಗಳಿಂದ ಕನಸಿನ ನೀರು, ಮಮತೆಯ ಗೊಬ್ಬರ ಹಾಕಿ ಬೆಳೆಸಿದ ಪ್ರೇಮದ ಜಾಲದಲ್ಲಿ ಬೀಳಬಾರದೆಂಬ ಗಿಡ ಇನ್ನೇನು ಹಣ್ಣು ಬಿಡುವ ಕಾಲ ಅದಾಗಿತ್ತು, ನನ್ನ ರೂಪಕ್ಕೆ ಮರುಳಾಗಿ ತಮ್ಮ ಶ್ರೀಮಂತಿಕೆಯಿಂದ ನನ್ನ ಬಡತನಕ್ಕೆ ಪರಿಹಾರ ಸೂಚಿಸಿ ಬಂದ ಹುಡುಗಿಯರಿಗೂ ಮನಸ್ಸು ಅಲುಗಾಡಿರಲಿಲ್ಲ ಆದರೆ ಇಂದು ನಿನ್ನ ಹಿತವಾದ ಪ್ರೀತಿಯ ತಂಗಾಳಿಗೆ ನನ್ನ ಅಂತರಂಗದ ಭಾವದ ಬೇರುಗಳೇ ಸಡಿಲವಾದಂತೆ ಭಾಸವಾಗತೊಡಗಿತು. ದಾರಿ ತಪ್ಪಿದ ನಾವಿಕನಾದೆನೇನೋ ಎಂಬ ಭಯ ಕಾಡ ಹತ್ತಿತು.

ಜೇನಿನಂಥ ನಿನ್ನ ನುಡಿಗಳಿಗೆ, ಸ್ನೇಹ ವಿಶ್ವಾಸ ಒಡನಾಟಕ್ಕೆ ಬೆರಗಾದೆ. ದಿನಗಳದಂತೆ ನಿನ್ನ ಪ್ರೀತಿಯತ್ತ ಸಂಪೂರ್ಣ ವಾಲಿದೆ. ಎದೆಯಲ್ಲೂ ನೀನೇ ಎದುರಲ್ಲೂ ನೀನೇ ಕಣ್ಣಲೂ ನೀನೇ ತುಂಬಿಕೊಡಿದ್ದೆ. ಹೀಗಾಗಿ ನಿದ್ದೆ ಕಣ್ಣುಗಳಿಂದ ಸರಿದು ಅದೆಷ್ಟೋ ದಿನಗಳಾಗಿದ್ದವು. ನನಗರಿವಿಲ್ಲದೇ ನೀನು ನನ್ನ ಹೃದಯದರಸಿಯಾಗಿ ಬಿಟ್ಟಿದ್ದೆ.

ಅದೊಂದು ದಿನ ನೀನು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ನನ್ನೆದೆಯಲ್ಲಿ ಅಂದದ ಮುಖವಿರಿಸಿ, `ನೀನಿದ್ದರೆ ನನಗೆ ಏನೂ ಬೇಡ. ನೀನಿಲ್ಲದ ಬಾಳು ನನಗೆ ಬೇಡವೇ ಬೇಡ. `ನೀನೇ ನನ್ನ ಉಸಿರು` ಎಂದು ಪದೇ ಪದೇ ಗುನುಗಿದಾಗ ಮೈಯೆಲ್ಲ ಜುಂ ಅಂತು. ಹೃದಯ ಇನ್ನೇನು ಸ್ಪೋಟಗೊಳ್ಳುತ್ತೇನೋ ಎನ್ನುವಂತೆ ಡವಗುಟ್ಟುತ್ತಿತ್ತು. ನೀನಾಡಿದ ಆ ಸವಿನುಡಿಗಳು ಸದಾ ಕಿವಿಯಲ್ಲಿ ಗುಯ್ಯಗುಟ್ಟಿ ನಿನ್ನನ್ನು ಸನಿಹಕ್ಕೆ ತಂದವು.

ಸುಳಿವು ನೀಡದೆ ಸಂಬಂಧಿಕರಲ್ಲೇ ನಿನಗೆ ಮದುವೆ ನಿಶ್ಚಯವಾದಾಗ ನನ್ನ ಗಂಟಲಿನ ನರಗಳು ಉಬ್ಬುಕೊಂಡವು. ನೀನು ಅತ್ತು ಅತ್ತು ಕಣ್ಣುಗಳನ್ನು ರಕ್ತದುಂಡೆಗಳನ್ನಾಗಿಸಿಕೊಂಡು, ಒಲ್ಲದ ಮನಸ್ಸಿನಿಂದ ತಾಳಿಗೆ ಕೊರಳು ಕೊಟ್ಟ ವಿಷಗಳಿಗೆ ನೆನೆದರೆ ಎದೆಯಲ್ಲಿ ತಣ್ಣೀರು ಸುರಿದಂತಾಗುತ್ತದೆ.

ವಿಧಿಯಾಟ ಬಲ್ಲವರಾರು? ಇದು ನಿನ್ನ ದೌರ್ಭಾಗ್ಯವೋ? ನನ್ನ ಸೌಭಾಗ್ಯವೋ? ವಿಧಿಯ ವಿಪರ್ಯಾಸವೋ? ಒಂದೂ ನಾನರಿಯೆ!. ಇದುವರೆಗೂ ನಿನ್ನ ಸವಿನೆನಪುಗಳ ಮೂಟೆ ಕಟ್ಟಿ ಮನದ ಮೂಲೆಯಲ್ಲಿಟ್ಟು ಹೃದಯದ ಬಾಗಿಲನ್ನು ಭದ್ರವಾಗಿ ಮುಚ್ಚಿ ಬೀಗ ಜಡಿದಿದ್ದೆ. ಇಂದು ನಿನಗಾಗಿ ತೆರೆದಿದೆ. ನಿನ್ನ ಪ್ರತಿರೂಪವನ್ನು ಕಣ್ಣಿನಂತೆ ಕಾಪಾಡುವ ಹೊಣೆಯೂ ನನ್ನದೆ. ಕಗ್ಗತ್ತಲು ಆವರಿಸಿರುವ ಬಾಳನ್ನು ಬೆಳಗಿಸಲು ನೀನು ಬಂದೇ ಬರುತ್ತಿಯ ಅಂತ ಕಾದಿರುವೆ ನಿನಗಾಗಿ

ಇಂತಿ
ನಿನ್ನ ಉಸಿರು