ಹೊಸ ಚೈತನ್ಯ ನೀಡುವ ಹಬ್ಬ ಯುಗಾದಿ: ಡಾ. ಶಿವಕುಮಾರ ಎಸ್‌. ಮಾದಗುಂಡಿ

ಪ್ರಾಚೀನ ರೋಮನ್ ಕವಿ ಓವಿಡ್ ಒಮ್ಮೆ ಜ್ಯೋತಿಷಿ ಜಾನುಸ್ನನ್ನು ಕೇಳಿದ: ‘ಹೊಸ ವಷ೯ ಜನವರಿಯಿಂದಲೇ ಏಕೆ ಆರಂಭವಾಗಬೇಕು’? ಎಂದು. ಅದಕ್ಕೆ ಜ್ಯೋತಿಷಿ ಹೇಳಿದರೂ ಜನವರಿ ತಿಂಗಳಿನಲ್ಲಿ ಸೂರ್ಯ ಮಕರ ರಾಶಿ ಪ್ರವೇಶಿಸುತ್ತಾನೆ. ಅಂದಿನವರೆಗೆ ಹಿಮದಿಂದ ಮಂಕಾಗಿದ್ದ ಜಗತ್ತು ಅಂದಿನಿಂದ ಸ್ವಚ್ಛವಾಗಿ ಜನತೆಯಲ್ಲಿ ಹೊಸ ಉತ್ಸಾಹ, ನವೋದಯ ಆರಂಭವಾಗುವುದರಿಂದ ಅಂದಿನಿಂದ ಹೊಸವರ್ಷದ ಆರಂಭ ಎಂದು ಹೇಳಿದರು. ಆದರೆ, ಸಾಮಾನ್ಯವಾಗಿ ಹೊಸ ವರ್ಷ ಎಂದರೆ ಜಗತ್ತಿನಲ್ಲಿ ಜನವರಿ ಒಂದು ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ, ಆ ದಿನ ಮನೆಯ ಗೋಡೆಯ ಮೇಲೆ ಮಾತ್ರ ಕ್ಯಾಲೆಂಡರ್ ಸಂಪೂರ್ಣವಾಗಿ ಬದಲಾಗಿರುತ್ತದೆ ವಿನಹ. ನಮ್ಮ ಜೀವನದಲ್ಲಿ ನಮಗೆ ಹೊಸ ದಿನ ಎಂದರೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವಷ೯ ಎಂದರೆ ಯುಗಾದಿ. “ಯುಗಾದಿ” ಹೆಸರೇ ಸೂಚಿಸುವಂತೆ ಯುಗದ ಆದಿ. ಯುಗಾದಿ ಎಂದರೆ ಸೃಷ್ಟಿಯ ಆರಂಭ ಅಥವಾ ಹೊಸ ಸಂವತ್ಸರ ಎಂದು ಮನೆಯ ಹಿರಿಯರು ಹೇಳುತ್ತಾರೆ. ಯುಗಾದಿ ಚೈತ್ರ ಮಾಸದ ಮೊದಲನೆಯ ದಿನ. ನಮ್ಮ ದೇಶದ ಅನೇಕ ಕಡೆಗಳಲ್ಲಿ ಈ ಶುಭ ದಿನ ಹೊಸ ವರ್ಷದ ಮೊಟ್ಟಮೊದಲ ದಿವಸ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಭಾರತೀಯರೆಲ್ಲರೂ ಸಂತೋಷದಿಂದ ಆಚರಿಸಲಾಗುತ್ತದೆ. ಯುಗಾದಿ ಪದದ ಶಬ್ದಶಹ ಅಥ೯ ಯುಗ+ಆದಿ=ಹೊಸ ಯುಗದ ಆರಂಭ ಎಂದೇ ಕರೆಯಹುದು. ಇಂದಿನ ದಿನದಿಂದ ವಸಂತ ಮಾಸ ಪ್ರಾರಂಭವಾಗಿ ತರುಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಎಲ್ಲೆಡೆ ತನ್ನ ಪರಿಮಳವನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ.

“ಋತೂನಾಂ ಕುಸುಮಾಕರಂ” ಎಂಬ ಗೀತಾಚಾಯ೯ರು ಹೇಳುವಂತೆ ಋತುರಾಜ ವಸಂತದ ಶುಭಾಗಮನದ ದಿನವೇ ಯುಗಾದಿ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸ್ವಾರಮಾನ ಎಂಬ ಎರಡು ಪ್ರಭೇದಗಳಿದ್ದು ಹಿಂದೂ ಧಮ೯ದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿಣ೯ಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯ ಗತಿಯಿಂದ ಎಣಿಕೆ ಮಾಡುವುದನ್ನು ಸ್ವಾರಮಾನ ಎನ್ನುತ್ತಾರೆ. ನಮ್ಮ ರಾಜ್ಯದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದಲೂ ರೂಢಿಯಲ್ಲಿದೆ. ನಮ್ಮ ದೇಶದಲ್ಲಿ ಹಬ್ಬ ಹರಿದಿನಗಳು ನಮ್ಮ ಬದುಕಿನ ಸಂತಸದಲ್ಲಿ ಹಾಸು ಹೊಕ್ಕಾಗಿವೆ. ಈ ದಿನದ ಹಬ್ಬದಲ್ಲಿ ಪ್ರಮುಖವಾಗಿ ಆಚರಣೆಗಳಲ್ಲಿ ಸೂರ್ಯ ನಮಸ್ಕಾರ, ಹೊಸ ಪಂಚಾಂಗದ ಪೂಜೆ ಹಾಗೂ ಬೇವು-ಬೆಲ್ಲ. ಸಮಾಜದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಸುಖ-ದು:ಖಗಳು, ಸಿಹಿ-ಕಹಿಗಳು,ಸೋಲು-ಗೆಲುವುಗಳು, ಹಸಿ-ಬಿಸಿ, ನಗುವುದು- ಅಳುವುದು ಮತ್ತು ರಾತ್ರಿ-ಹಗಲುಗಳೊಂದಿಗೆ ಬಾಳುತ್ತಾ ಬಂದಿದ್ದಾನೆ. ಬೇವು – ಬೆಲ್ಲ, ಹಗಲು-ರಾತ್ರಿ, ಪ್ರೀತಿ ದ್ವೇಷಗಳ ಸಂಕೇತ ಭಗವದ್ಗೀತೆಯ ವಾಕ್ಯದಂತೆ ಸುಖ-ದು:ಖಗಳ “ಸಮರಸವೇ ಜೀವನ”. ಯುಗಾದಿ ವರ್ಷದ ಮೊದಲ ದಿನವಾಗಿ ಆಚರಿಸುತ್ತೇವೆ. ಆದ್ದರಿಂದಲೇ ಜ್ಞಾನಪೀಠ ಪ್ರಶಸ್ತಿಯ ಪುರಸ್ಕೃತರು ಕನ್ನಡದ ವರಕವಿ ಡಾ॥ ದ.ರಾ. ಬೇಂದ್ರೆಯವರ ಯುಗಾದಿ ಬಗೆಗಿನ ಈ ಕವಿತೆ ಎಲ್ಲರ ನಾಲಿಗೆಯ ಮೇಲೆ ಪುಟಿದೇಳ್ತಾ ಇದೆ.

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ ॥

ಹೊಂಗೆ ಹೂವ ತೊಂಗಲಲ್ಲಿ ಭೃಂಗದ
ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ
ನಸುಗಂಪು ಸೂಸಿ ಜೀವಕಳೆಯ ತರುತಿದೆ॥

ಎಂಬ ಕವಿ ಬೇಂದ್ರೆಯವರ ಅಮೃತ ವಾಣಿಯಂತೆ ಹೊಸವರ್ಷ ಎಲ್ಲರ ಮನೆಯಲ್ಲಿ ಹಷ೯ದಾಯಕವಾಗಲೆಂದು ಅಭಿಲಾಷೆ. ಹಾಗೆಯೇ ಪ್ರತಿ ವರ್ಷ ಯುಗಾದಿ ಹಬ್ಬದ ದಿನ ಮೊದಲು ಪ್ರತಿಯೊಬ್ಬರ ಮನೆಯ ರೇಡಿಯೋ ಮತ್ತು ದೂರದರ್ಶನಲ್ಲಿ ಈ ಹಾಡು ಹೆಚ್ಚು ಪ್ರಸಾರವಾಗುತ್ತದೆ. ಈ ಹಾಡು ಎಷ್ಟೇ ಬಾರಿ ಕೇಳಿದರೂ ನಮಗೆ ತೃಪ್ತಿಯಾಗದೇ ಪುನಃ ಕೇಳಬೇಕೆನಿಸುವ ಸಾಹಿತ್ಯ ಈ ಹಾಡಿನಲ್ಲಿದೆ.

ಯುಗಾದಿ ಹಬ್ಬವು ನಮ್ಮ ದೇಶದ ಅತಿ ದೊಡ್ಡ ಹಬ್ಬ. ಈ ಹಬ್ಬವನ್ನ ಗುಜರಾತ್ ಮತ್ತು ಮರುಭೂಮಿಯ ರಾಜ್ಯವೆಂದೆ ಕರೆಯಲ್ಪಡುವ ರಾಜಸ್ಥಾನದ ಕೆಲವು ಭಾಗಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ರಾಜ್ಯಗಳಲ್ಲಿ ಆಚರಿಸುತ್ತಾರೆ. ಈ ಹಬ್ಬವನ್ನು ಹೆಚ್ಚಾಗಿ ಕನಾ೯ಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚು ಆಚರಿಸುವುದು ರೂಢಿಯಲ್ಲಿದೆ. ಆದರೆ ನಮ್ಮ ರಾಜ್ಯ ಮತ್ತು ಪಕ್ಕದ ಆಂಧ್ರಪ್ರದೇಶಗಳಲ್ಲಿ ಈ ಹಬ್ಬ ಯುಗಾದಿಯಾದರೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ “ಗುಡಿಪಾಡ್ವ” ಎಂದು ಆಚರಿಸುತ್ತಾರೆ. ಅಂದರೆ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೆ ಗುಡಿಪಾಡ್ವ. ಇದರಥ೯ ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ ಹೂವಿನ ಹಾರವನ್ನು ಏರಿಸಿ ಗುಡಿ ಎಂದು ಒಂದು ಮೂಲೆಯಲ್ಲಿ ಇರಿಸಲಾಗುತ್ತದೆ. ಇದು ಹೊಸವರ್ಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಪ್ರಮುಖ ಸಂಕೇತವಾಗಿದೆ. ಈ ಒಂದು ಪದ್ಧತಿ ಮೊದಲಿನಿಂದಲೂ ಆಚರಣೆಯಲ್ಲಿದೆ.

ಎಲ್ಲಾ ಹಬ್ಬಕ್ಕೂ ಒಂದು ವಿಶೇಷತೆ ಇದೆ. ಎನ್ನುವಂತೆ, ಪ್ರತಿಯೊಬ್ಬರ ಜೀವನದ ಜಗ್ಗಾಟದಲಿ, ೨೧ನೇ ಶತಮಾನದ ಯಾಂತ್ರಿಕ ಬದುಕಿನಲಿ ಹಬ್ಬ, ಹರಿದಿನಗಳನ್ನು ಪಾಲಿಸುವುದು ಒಂದು ಹೊಸ ಚೈತನ್ಯ, ಹೊಸ ಹುರುಪು ತರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ಮುಖದಲ್ಲಿ ಹೊಸ ಚೈತನ್ಯತರುವುದು ಸಹ ಇದೆ ಯುಗಾದಿ ಹಬ್ಬ.

ಯುಗಾದಿ ಹಬ್ಬದ ದಿನ ಮನೆಯ ಸದಸ್ಯರೆಲ್ಲರೂ ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆಯ ಹೂಗಳ ಗೊಂಚಲು) ಪ್ರತಿಯೊಬ್ಬರ ಮನೆಗಳ ಮುಂಬಾಗಿಲಿಗೆ ಮತ್ತು ತಮ್ಮ ಮನೆಯ ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವುದು ಒಂದು ವಿಶೇಷವಾಗಿರುತ್ತದೆ. ಇದರ ಜತೆಯಲ್ಲಿ ಮನೆಯ ಹೆಣ್ಣುಮಕ್ಕಳು ಮನೆಯ ಮುಂದೆ ಬಣ್ಣ ಬಣ್ಣದ ಚೆಲುವು ಚಿತ್ತಾರದ ರಂಗೋಲಿಯನ್ನಿಡುವುದು ಒಂದು ಸಂಪ್ರದಾಯ. ಹಾಗೆಯೇ ಈ ದಿನ ಮುಂಜಾನೆ ಆದಷ್ಟೂ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲಾ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆಯನ್ನು ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮನೆಯ ಎಲ್ಲಾ ಸದಸ್ಯರು ಅದನ್ನು ಶಾಂತಚಿತ್ತದಿಂದ ಆಲಿಸುವರು. ಇದರ ಜತೆಯಲ್ಲಿ ಮನೆಯ ಸೋದರಿಯರು ತಮ್ಮ ಸೋದರರಿಗೆ ಆರತಿ ಎತ್ತಿ ಶುಭ ಹಾರೄೆಸುತ್ತಾರೆ. ಇದೇ ದಿನ ತಮ್ಮ ಪ್ರೀತಿಯ ಸೋದರರು ಸೋದರಿಯರಿಗೆ ಪ್ರತಿಯಾಗಿ ಕಾಣಿಕೆಗಳನ್ನು ನೀಡುವುದರ ಮೂಲಕ ಸೋದರ ಸೋದರಿಯರ ಬಾಂಧವ್ಯ ಗಟ್ಟಿಯಾಗಿರುತ್ತದೆಂಬುದು ಒಂದು ವಿಶೇಷವಾಗಿದೆ.

ಯುಗಾದಿಯ ದಿನ ಕಷ್ಟದ ಸಂಕೇತವಾದ ಬೇವನ್ನೂ ಮತ್ತು ಸುಖದ ಸಂಕೇತವಾದ ಬೆಲ್ಲವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಶಾಖವನ್ನು ಉಂಟು ಮಾಡಿದರೆ. ಬೇವು ಆ ಶಾಖವನ್ನು ಶಮನಕರಿ. (ಸೂರ್ಯನ ತಾಪ ಹೆಚ್ಚಿರುವ ಈ ಕಾಲದಲ್ಲಿ ಬೇವು ಬೆಲ್ಲ ತಿನ್ನುವುದರಿಂದ ಶರೀರ ವಜ್ರಕಾಯವಾಗುತ್ತದೆ ಎಂಬುದು ನಂಬಿಕೆ)ಬೇವು ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ.

ಶತಾಯು: ವಜ್ರದೇಹಾಯ ಸವ೯ ಸಂಪತ್ಕರಾಯಚ।
ಸವಾ೯ರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ।।

ಈ ಶ್ಲೋಕದ ನಿಜವಾದ ಅಥ೯ವೆಂದರೆ; ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆಂಬುದು. ಈ ದಿನ ಬೇರೆ ಬೇರೆ ಸೂರಿನಲ್ಲಿ ವಾಸಿಸುವ ಮನೆಯ ಸದಸ್ಯರು ಒಂದೇಡೆ ಸೇರಿ ಮನೆಯಲ್ಲಿ ಅಮ್ಮ ತಯಾರಿಸಿದ ಬಿಸಿ ಬಿಸಿ ಒಬ್ಬಟ್ಟು, ಕಡಬು ಹಾಗೂ ವಿವಿಧ ರೀತಿಯ ಮೃುಷ್ಟಾನ್ನ ಭೋಜನವನ್ನು ಸವಿಯುವುದು ಮತ್ತೊಂದು ವಿಶೇಷವಾಗಿದೆ. ಕನಾ೯ಟಕದ ಕೆಲವು ಪ್ರದೇಶಗಳಲ್ಲಿ ಯುಗಾದಿಯ ದಿವಸ ಜೂಜಾಡುವುದು ಒಂದು ಸಂಪ್ರದಾಯವಾಗಿ ಇಂದಿಗೂ ಬೆಳೆದುಬಂದಿದೆ ಎನ್ನಲಾಗುತ್ತದೆ. ಒಟ್ಟಾರೆಯಾಗಿ ಈ ಯುಗಾದಿ ಹಬ್ಬದಂದು ನಾಡಿನಾದ್ಯಂತ ಎಲ್ಲರಿಗೂ ಹೊಸ ಚೈತನ್ಯ, ಹೊಸ ಹುರುಪು, ಹೊಸ ಸಂತಸ, ಹೊಸ ಹೊಸ ವಿಚಾರಗಳು, ಶಾಂತಿ, ಸಮಾಧಾನಗಳು ಪ್ರೀತಿಯಿಂದ ತರಲಿ ಎಂದು ಶುಭ ಕೋರುತ್ತಾ ಸವ೯ರಿಗೂ ಯುಗ ಯುಗಾದಿಯ ಹಾದಿ೯ಕ ಶುಭಾಶಯಗಳು.

-ಡಾ. ಶಿವಕುಮಾರ ಎಸ್‌. ಮಾದಗುಂಡಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x