ಸ್ತ್ರೀ ವ್ಯಕ್ತಿತ್ವ ವಿಕಸನದ ಅಡೆತಡೆಗಳು ವಸ್ತ್ರ ಸಂಹಿತೆ- ಗೋಷಾ ಪದ್ಧತಿ: ನಾಗರೇಖಾ ಗಾಂವಕರ


ಬದಲಾವಣೆಯ ಕಾಲಘಟ್ಟದಲ್ಲಿ ಹೆಣ್ಣು ಮತ್ತಾಕೆಯ ಸ್ಥಿತಿಗತಿಗಳ ಬಗ್ಗೆ ಸಮಾನತೆಯ ಬಗ್ಗೆ ಚರ್ಚಿಸುವ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಉಚ್ಚ್ರಾಯ ಕಾಲವಿದು. ಆದರೆ ಅದರೊಂದಿಗೆ ಆಕೆಯ ಮೇಲಾಗುತ್ತಿರುವ ದೌರ್ಜನ್ಯಗಳ ಪ್ರಮಾಣಗಳೂ ಅಧಿಕವಾಗುತ್ತಿರುವ ಸಂದರ್ಭದಲ್ಲಿ ಧರ್ಮ ಕಾಲ ದೇಶಗಳ ವೈತ್ಯಾಸವಿರದೇ ಇಡೀ ಜಗತ್ತಿನಾದ್ಯಂತ ಈ ಶೋಷಣೆಗಳು ನಡೆಯುತ್ತಲೇ ಇರುವುದು ಕೂಡಾ ದಿನನಿತ್ಯದ ಸಂಗತಿ. ಸ್ತ್ರೀ ಶೋಷಣೆ ಎಂಬ ವಿಚಾರ ಬರಿಯ ಭಾರತದ ಮತ್ತು ಕೇವಲ ಹಿಂದೂ ಧರ್ಮದ ಆಚರಣೆಗಳಲ್ಲಿ ಮಾತ್ರ ಸೀಮಿತವಾಗಿರದೇ ಅದು ವಿಶ್ವವ್ಯಾಪಿಯಾದ ವಿಚಾರ. ಮಹಿಳಾ ಸ್ವಾತಂತ್ರ್ಯಕ್ಕೆ ಆಕೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಗತಿಗೆ ಧಕ್ಕೆ ತರುವಂತಹ ಆಕೆಯ ವರ್ತನೆಯನ್ನು ನಿಯಂತ್ರಿಸುವಂತಹ ಕ್ರಮಗಳು ಎಲ್ಲ ದೇಶಗಳಲ್ಲಿ ಧರ್ಮಗಳಲ್ಲಿ ಹೇರಳ ದೃಷ್ಟಾಂತಗಳೊಂದಿಗೆ ಕಾಣಸಿಗುತ್ತವೆ.

ಅದರಲ್ಲೂ ಭಾರತದ ಹಿಂದಿನ ಜನಜೀವನ ವಿಧಾನದಲ್ಲಿ ಕಂಡುಬರುತ್ತಿದ್ದ ಸಹಗಮನ ಬಾಲ್ಯವಿವಾಹ, ಪರ್ದಾ ಪದ್ಧತಿ, ಹಿಂದೂ ಧರ್ಮದಲ್ಲಿ ಮಾತ್ರ ಇತ್ತೆಂದು ಹೇಳಲಾಗದು. ಪರ್ದಾ ಪದ್ಧತಿ ಅಥವಾ ಗೋಷಾ ಪದ್ಧತಿಯಂತೂ ಮುಸ್ಲಿಂ ದೊರೆಗಳು ಭಾರತದ ಮೇಲೆ ಆಕ್ರಮಣಮಾಡಿದಾಗ ಅವರ ಆಗಮನದ ನಂತರವೇ ಬಂದಿದ್ದು, ಅವಕುಂಟನವೆಂಬ ಹೆಸರಿನಿಂದ ಹಿಂದೂಗಳಲ್ಲಿ ಪ್ರಸಿದ್ದವಾಯ್ತು. ಸ್ತ್ರೀಯರು ದೇಹತುಂಬಾ ಬಟ್ಟೆ ಧರಿಸುವ, ತಲೆಯನ್ನು ಮುಚ್ಚಿಕೊಂಡಿರುವ ಆ ಮೂಲಕ ಆಕೆಯ ಪ್ರತಿಹೆಜ್ಜೆಯಲ್ಲೂ ಪುರುಷನ ಹೆಸರಿನಿಂದಲೇ ಗುರುತಿಸಲ್ಪಡುವ ನಿಯಮಗಳು ಮುಸ್ಲಿಂ ಸಮುದಾಯದಲ್ಲಿ ಯಥೇಚ್ಛವಾಗಿ ಸಿಗುತ್ತವೆ. ವಿವಾಹಿತ ಸ್ತ್ರೀ ತಲೆ ತುಂಬಾ ಸೆರಗು ಇಲ್ಲವೇ ಗೋಷಾ ಹೊದ್ದು ಕೊಳ್ಳಬೇಕೆಂಬ ಕಡ್ಡಾಯದ ನಿಯಮ ಅಲ್ಲಿದೆ. ಹೆಣ್ಣನ್ನು ವರಿಸಿದ ಪುರುಷನಿಗೆ ಆಕೆ ಸಂಪೂರ್ಣ ವಿನಯಳಾಗಿ ಇದ್ದು, ಆಕೆಗೆ ಯಾವೊಂದು ಸ್ವಾತಂತ್ರ್ಯದ ಅವಕಾಶಗಳಿಲ್ಲದೇ ಬದುಕಬೇಕಾದ ಅನಿವಾರ್ಯತೆ. ಆತ ಮಾತ್ರ ಹಲವು ವಿವಾಹಗಳ ಹೊಂದಲು ಅವಕಾಶವನ್ನು ದೀನೋದ್ಧಾರದ ನೆಪದಲ್ಲಿ ನಿಯಮಬದ್ಧಗೊಳಿಸಲಾಗಿದೆ. ಹೀಗಾಗಿ ಆಕೆ ಒಂದು ವಸ್ತುವೆಂದೇ ಪರಿಗಣಿಸಲ್ಪಡುತ್ತ ಹೋದಳು.

ಇನ್ನು ರಾಜಪ್ರಭುತ್ವದ ಕಾಲದಲ್ಲಿ ಹಿಂದೂ ದೊರೆಗಳು ಹಲವು ವಿವಾಹಗಳನ್ನು ಹೊಂದುತ್ತಿದ್ದು ಅವರ ಅಂತಃಪುರದಲ್ಲಿ ರಾಣಿವಾಸದ ವ್ಯವಸ್ಥೆ ಬಹು ಗೌಪ್ಯವಾಗಿದ್ದವು. ರಾಣಿಯರು ಅವಕುಂಟನ ಧರಿಸುತ್ತಿದ್ದುದ್ದು ಕಡ್ಡಾಯವಾಗಿತ್ತು. ರಾಜ ಹಲವು ವಿವಾಹಗಳನ್ನು ಮಾಡಿಕೊಳ್ಳುತ್ತಿದ್ದ ದೇಶದ ಸಂಪತ್ತಿನ ಒಂದಿಷ್ಟು ಈ ರಾಣಿವಾಸ ಐಶಾರಾಮದ ಖರ್ಚುಗಳಿಗೆ ಬಹುತೇಕ ರಾಜರು ವ್ಯಯಿಸುತ್ತಿದ್ದರು. ರಾಣಿವಾಸವು ಒಂದು ಬಗೆಯಲ್ಲಿ ಹೊರಜಗತ್ತಿನಿಂದ ದೂರವಿರುತ್ತಿತ್ತು. ಅಲ್ಲಿಯ ಹೆಣ್ಣುಗಳಿಗೆ ವಂಶೋಭಿವೃದ್ಧಿಯ ಕಾಯಕವಷ್ಟೇ ಸೀಮಿತವಾಗಿತ್ತು. ಒಂದು ಬಗೆಯಲ್ಲಿ ಸ್ತ್ರೀಯರ ಸಂಪೂರ್ಣ ವ್ಯಕ್ತಿತ್ವದ ಕಗ್ಗೋಲೆಯ ಕಾರಸ್ಥಾನವೂ ಆಗಿದ್ದು, ಅಲ್ಲಿಯ ರಾಣಿವಾಸದ ಸೇವೆಗೆ ನಿಯಮಿಸಿದ ಹೆಂಗಳೆಯರು ವಿಚಿತ್ರವಾದ ಬದುಕನ್ನು ಸಾಗಿಸುವಂತಾಗಿತ್ತು. ಅವರಿಗೆ ದಾಂಪತ್ಯದ ಸೌಖ್ಯವಿರಲಿಲ್ಲ. ಅವರ ದೈಹಿಕ ಬಯಕೆಗಳನ್ನು ಹಲವು ಬಾರಿ ದಮನಿಸಿಕೊಂಡೇ ಜೀವಿಸುವ ಸಂದರ್ಭವಿತ್ತು. ಸಾಂಸಾರಿಕ ಕೌಟಂಬಿಕ ಆಸೆ ಇದ್ದರೂ ಅದನ್ನು ಈಡೇರಿಸಿಕೊಳ್ಳುವಂತಿರಲಿಲ್ಲ. ಕೆಲವೊಮ್ಮೆ ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು.

ಇದು ಮುಸ್ಲಿಂ ದೊರೆಗಳ ಆಳ್ವಿಕೆಯಲ್ಲೂ ಇತ್ತು. ಮೊಗಲ ಸಾಮ್ರಾಟ ಶ್ರೇಷ್ಟ ಅಕ್ಬರ ತನ್ನ [ರಾಣಿವಾಸದಲ್ಲಿ ] ಜನಾನಾದಲ್ಲಿ 5000 ಹೆಂಗಳೆಯರಿದ್ದರಂತೆ. ಅದೊಂದು ದೊರೆಯ ಶಾರೀರಿಕ ಸಾಮಥ್ರ್ಯಕ್ಕೆ ರಾಸಲೀಲೆಗಳಿಗೆ ಒಂದು ಕಸರತ್ತು ಖಾನೆಯಾಗಿತ್ತಂತೆ.ಆದರೆ ಅಲ್ಲಿಯ ಸೇವಕಿಯರಿಗೆ ರಕ್ಷಣಾ ಕಾವಲುಗಾರ ಮಹಿಳೆಯರಿಗೆ ಬದುಕು ತೀರಾ ದುರ್ಭರವಾಗಿತ್ತೆಂದು ಉಲ್ಲೇಖವಿದೆ. ಅವರೆಲ್ಲರಿಗೂ ಕಡ್ಡಾಯದ ಪರ್ಧಾ ಇರುತ್ತಿತ್ತು.
ಆದರೆ ಈ ಜನಾನಾ ಅಥವಾ ಗೋಷಾ ಇಲ್ಲವೇ ಅವಕುಂಟನ ಪದ್ಧತಿಗಳು ಒಂದಾನೊಂದು ಕಾಲದ ಪಳಿಯುಳಿಕೆಗಳು. ಮಧ್ಯಯುಗದ ಬೀಳಲುಗಳು ಅವುಗಳಿಂದ ಆಧುನಿಕ ಜಗತ್ತಿನ ಅಭಿವೃದ್ದಿಯ ಮೇಲೆ ಸುಧಾರಣೆಗಳ ಮೇಲೆ ವೀಪರೀತ ದೋಷ ಉಂಟಾಗುತ್ತದೆ. ದೇಶÀವೊಂದರ ಅರ್ಧದಷ್ಟಿರುವ ಸ್ತ್ರೀ ಸಂಕುಲ ದೇಶದ ಆರ್ಥಿಕ, ರಾಜಕೀಯ ಸಾಂಸ್ಕ್ರತಿಕ ಪ್ರತಿನಿಧಿಗಳು ಆಗಿರುತ್ತಾರೆ. ಆದರೆ ಈ ಆಚರಣೆಯಿಂದ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುವ,ಮಾನಸಿಕ ಕೀಳಿರಿಮೆಯನ್ನು ಹೆಣ್ಣುಮಕ್ಕಳಳಲ್ಲಿ ಮೂಡಿಸುವ, ಭೌತಿಕ ಬೆಳವಣಿಗೆಯಲ್ಲಿ ಹತ್ತಾರು ನ್ಯೂನ್ಯತೆಗಳನ್ನು ಮೂಡಿಸುವ, ನಿರರ್ಥಕ ಸಮಾಜವನ್ನು ನಿರ್ಮಿಸುವಂತಹ ಸ್ತ್ರೀ ಸಮುದಾಯವನ್ನು ಸೃಷ್ಟಿಸುತ್ತದೆ.

ಆದರೆ ಹೆಣ್ಣನ್ನು ತೀರಾ ಸಂಕುಚಿತವಾಗಿ ನೋಡುವ ಪುರುಷ ಮಾನಸಿಕ ಪ್ರವೃತ್ತಿಗಳು ಇನ್ನೂ ಬದಲಾಗಿಲ್ಲ. ಹಲವಾರು ಅತ್ಯಾಚಾರ ಪ್ರಕರಣಗಳಿಗೆ ಸ್ತ್ರೀ ತೊಡುವ ಪ್ರಚೋದನಾತ್ಮಕ ವೇಷಭೂಷಣಗಳೇ ಕಾರಣ ಎಂದು ವಾದಿಸುವವರಿದ್ದಾರೆ. ಆದರೆ ಇದು ಸತ್ಯಕ್ಕೆ ದೂರ. ಕಾರಣ ಸ್ತ್ರೀ ಪುರುಷರಿಬ್ಬರೂ ಮನುಷ್ಯರೇ. ಜೈವಿಕ ವಿಭಾಗದಲ್ಲಿ ಪ್ರಾಣಿವಿಭಾಗದಲ್ಲಿ ಗುರುತಿಸಿಕೊಂಡರೂ ಸಂವೇದನೆಗಳಿಂದ ಮಾನಸಿಕ ವ್ಯಾಪಾರಗಳಿಂದ ಮನುಷ್ಯರೆಂದು ಗುರುತಿಸಲ್ಪಡುತ್ತಾರೆ. ಪುರುಷ ಕೌಪೀನಧಾರಿಯಾಗಿದ್ದರೂ ಆ ಸಂಗತಿ ಹೆಣ್ಣಿಗೆ ಅಸಹಜವೆನ್ನಿಸದೇ ಸಹಜವೆಂಬಂತೆ ವ್ಯವಹರಿಸಿದರೆ ಪುರುಷ ಮಾತ್ರ ಅರೆಬರೆ ಬಟ್ಟೆ ತೊಟ್ಟ ಹೆಣ್ಣನ್ನು ನೋಡಿ ಪ್ರಚೋದನೆಗೆ ಒಳಗಾಗುವರೆಂಬ ವಾದದಲ್ಲಿ ಹುರುಳಿಲ್ಲ. ಕಾರಣ ಬುರ್ಖಾಧಾರಿ ಮಹಿಳೆಯ ಮೇಲೂ ಅತ್ಯಾಚಾರದ ಆಕ್ರಮಣ ನಡೆದಿದ್ದು, ಇವೆಲ್ಲವನ್ನೂ ಗೃಹಿಸಿದರೆ ಇದು ನಮ್ಮ ವಿಕೃತ ಮನಸ್ಥಿತಿಯೆಂದೆ ಹೇÀಳಬಹುದು. ವಿದೇಶಗಳಲ್ಲಿ ಸ್ತ್ರೀ ತನಗೆ ಬೇಕಾದಂತೆ ಬಟ್ಟೆ ತೊಟ್ಟರೂ, ಅರೆಬರೆ ಧರಿಸಿದರೂ ಅದೊಂದು ವಿಶೇಷ ಸಂಗತಿಯಲ್ಲ. ಇದರರ್ಥ ಕನಿಷ್ಟ ಬಟ್ಟೆ ತೊಡಲು ಈ ಮೂಲಕ ಪ್ರೋತ್ಸಾಹಿಸುತ್ತಿರುವ ಅಗತ್ಯವೂ ಈ ಬರವಣಿಗೆಯ ಉದ್ದೇಶವಲ್ಲ. ಬದಲಿಗೆ ನಮ್ಮ ಮಾನಸಿಕ ಸ್ಥಿಮಿತಕ್ಕೆ ಅದನ್ನು ಕಾಯ್ದುಕೊಳ್ಳಲಾಗದ ಪುರುಷ ವಿಕೃತಿಗೆ ಪುರುಷರು ಕೊಡುತ್ತಿರುವ ಅಭಾಸಕಾರಿ ಹೇಳಿಕೆ ಎಂದಷ್ಟೇ ಹೇಳಬಹುದೇನೋ? ನನ್ನ ಗುರುಗಳೊಬ್ಬರು ಹೇಳಿದಂತೆ ಧರ್ಮಭಿನ್ನತೆಯಿಲ್ಲದೇ ಭಾರತೀಯ ಸಮಾಜದ ಪುರುಷವರ್ಗ ಬೆಳೆಸಿಕೊಂಡು ಬಂದಿರುವ ಮನಸ್ಥಿತಿ ಇದಾಗಿರಬಹುದು. ಅದು ಬದಲಾಗಲು ಇನ್ನು ಶತಶತಮಾನಗಳು ಬೇಕಾಗಬಹುದು.

ಬುರ್ಖಾ, ಗೋಷಾ ಅವಕುಂಟನ ಇವೆಲ್ಲದರ ಮೂಲಕ ಸ್ತ್ರೀ ವಸ್ತ್ರ ಸಂಹಿತೆಯ ಮೂಲಕ ಹೀಗೆ ಆಕೆಯ ಬದುಕಿನ ಹೆಜ್ಜೆಹೆಜ್ಜೆಗಳನ್ನು ಪುರುಷ ತನ್ನ ರಿಮೋಟ್ ಮುಖಾಂತರವೇ ನಿಯಂತ್ರಸಬಯಸುವ ಜಾಯಮಾನ ಹೀನವೃತ್ತಿಯ ದ್ಯೋತಕ. ಈ ಸಂಗತಿಗಳು ಶಿಕ್ಷಣ ಆಧುನಿಕತೆಯ ಸರಾಗ ಓಟದಲ್ಲಿಯೂ ನಮ್ಮನ್ನು ಪದೇ ಪದೇ ಮುಗ್ಗರಿಸುವಂತೇ ಮಾಡುತ್ತಲೇ ಇವೆ. ಸ್ತ್ರೀ ದೌರ್ಜನ್ಯವೆನ್ನುವುದು ಒಂದು ಕ್ರೋನಿಕ್ ಡೀಸೀಸ್ ಇದ್ದ ಹಾಗೆ ಭಾರತದಲ್ಲಿ ಪರಿಹರಿಸಲಾಗದ ಸಮಸ್ಯೆಯೆಂಬಂತೆ ನಿರಂತರ ಹೆಚ್ಚುತ್ತಲೇ ಇದೆ.
ದೇಶದ ಸುಧಾರಣೆ ಬರಿಯ ಕಾಯಿದೆ ಕಾನೂನುಗಳಿಂದ ಸಾಧ್ಯವಿಲ್ಲ. ಅದು ಆ ದೇಶದ ಪ್ರತಿ ಪ್ರಜೆಯ ದ್ಯೇಯೋಧ್ದೇಶಗಳು, ವಿಚಾರ ವೈಖರಿ , ಅವರ ಬದುಕಿನ ರೀತಿನೀತಿಗಳು ಒಟ್ಟಾರೆ ಆ ಮೂಲಕ ಆಗುವಂತಹುದು. ಸಮಾಜದ ವಾಸ್ತವಿಕ ಪ್ರಜ್ಞೆ ಹಾಗೂ ಆ ಮಾರ್ಗದಲ್ಲಿ ಒಂದು ಸ್ಥಿತ್ಯಂತರ ಆಗಲೇ ಬೇಕಾಗಿದೆ. ಹೆಚ್ಚು ಹೆಚ್ಚಾಗಿ ಮಹಿಳೆಯರು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನಗಳಿಂದ ದೂರವಿರುತ್ತಾರೆ. ಇದು ಬೌಧ್ಧಿಕ ವಿಕಸನದ ಮಾರ್ಗದಲ್ಲಿ ತಡೆಯನ್ನುಂಟು ಮಾಡುತ್ತದೆ. ಪುರುಷ ಹೆಣ್ಣನ್ನು ಹೆಚ್ಚು ಹೆಚ್ಚು ಶೋಷಿಸಲು ಅವಕಾಶ ನೀಡುತ್ತದೆ. ಅದಕ್ಕಾಗಿ ಸ್ತ್ರೀಯರು ಸಮಾಜದ ಮುಂಚೂಣಿಯ ಇಲ್ಲ ಅಧಿಕಾರದ ಹುದ್ದೆಗಳನ್ನು ಹೆಚ್ಚು ಹೆಚ್ಚು ಅಲಂಕರಿಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಅಂತಹ ಸಂದರ್ಭಗಳು ಬಂದಾಗ ಅವುಗಳನ್ನು ಸಮರ್ಥವಾಗಿ ಸದ್ವಿನಿಯೋಗ ಮಾಡಿಕೊಳ್ಳಬೇಕು. ಆಗ ಹೆಣ್ಣು ಕೂಡಾ ಪುರುಷನ ಇಂತಹ ಆಪೇಕ್ಷಣೀಯ ಇರಾದೆಗಳನ್ನು ಅನುಭವಿಸುತ್ತಾ ದಾಸ್ಯವೆಂದು ನರಳಬೇಕಾದ ಅಗತ್ಯವೂ ಇಲ್ಲ.

-ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Dr. Raju bhat
Dr. Raju bhat
6 years ago

ಹೆಣ್ಣಿನ ಬಗ್ಗೆ ಒಳ್ಳೆಯ ಲೇಖನ. ಚೆನ್ನಾಗಿ ಬರೆದಿದ್ದೀರಿ

1
0
Would love your thoughts, please comment.x
()
x