ಕುವೆಂಪು ಮತ್ತು ಕನ್ನಡ: ದೊರೇಶ್

doresha-bilikere

 ಡಿಸೆಂಬರ್ 29 ಕುವೆಂಪು ಅವರ ಹುಟ್ಟುಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಆದಿಕವಿ ಪಂಪನಿಂದ ಸಶಕ್ತ ಕಾವ್ಯ ಮಾರ್ಗವನ್ನು ಕಂಡುಕೊಂಡ ಕನ್ನಡ ಸಾಹಿತ್ಯವು ಅಗಾಧವಾಗಿ ಬೆಳೆದಿರುವುದಷ್ಟೇ ಅಲ್ಲದೆ ಅನುಪಮ ಕೊಡುಗೆಯನ್ನು ವಿಶ್ವ ಸಾಹಿತ್ಯಕ್ಕೆ ನೀಡಿದೆ. ಈ ಕನ್ನಡದ ಸಾಹಿತ್ಯ ನದಿಯು ತನ್ನ ಸುದೀರ್ಘ ಪಯಣದಲ್ಲಿ ಆಚೀಚೆಯಿಂದ ಜಲದ್ರವ್ಯಗಳನ್ನು ಪಡೆದು ಮುಂದೆ ಸಾಗಿ ಸಾಗರವಾಗಿ ರೂಪುಗೊಂಡಿತು. ಆ ಸಾಗರದಲ್ಲಿ ಮುತ್ತುರತ್ನಗಳು ನಿರ್ಮಾಣವಾದವು. ಅದರಲ್ಲೊಂದು ಅದ್ಭುತ ಮುತ್ತು ಕುವೆಂಪು.ಅವರ ಸಾಧನೆಯ ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡ ಸಂಸ್ಕೃತಿಯ ದರ್ಶನವಾಗುತ್ತದೆ. ಕುವೆಂಪು ಅವರಷ್ಟು ಕನ್ನಡದ ಪರವಾಗಿ ಕವಿತೆಗಳನ್ನು ರಚಿಸಿದ ಉದಾಹರಣೆ ನವೋದಯ ಕವಿಗಳಲ್ಲಿ ಸಿಗುವುದಿಲ್ಲ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ತೊಡಗಿದ ಬಹಳ ಮಂದಿ ಸಾಹಿತಿಗಳು ಭಾಷಣಗಳಲ್ಲಿ ಕನ್ನಡಿಗರ ಪರವಾಗಿ ಪ್ರಸ್ತಾಪಗಳನ್ನು ಹೇರಳವಾಗಿ ಮಾಡಿದರಾದರೂ ಕವನಗಳ ಮೂಲಕ ಕನ್ನಡಿಗರನ್ನು ಜಾಗೃತಿಗೊಳಿಸುವ ಕಾರ್ಯವನ್ನು ಆ ಪ್ರಮಾಣದಲ್ಲಿ ನಡೆಸಲಿಲ್ಲ. ಆ ಕಾಲದ ಎಲ್ಲಾ ಕವಿಗಳು ಶಾಸ್ತ್ರಕ್ಕೆಂಬಂತೆ ಒಂದೆರಡು ಕನ್ನಡಪರವಾದ ಗೀತೆಯನ್ನು ಪ್ರಕಟಿಸಿದ್ದಾರಾದರೂ ಅವು ಹೆಚ್ಚು ಪರಿಣಾಮವನ್ನು ಬೀರಲು ಶಕ್ತವಾಗಲಿಲ್ಲ ಎನಿಸುತ್ತದೆ. ಆದರೆ ಕುವೆಂಪು ಅವರು ಕನ್ನಡದ ಪರವಾಗಿ ಇತರರಿಗಿಂತ ಭಿನ್ನವಾಗಿ ಕವಿತೆಗಳನ್ನು ರಚಿಸಿ ಹೊಸ ಎಚ್ಚರವನ್ನು ಮೂಡಿಸಿದರು. ಕುವೆಂಪು ಅವರಿಗೆ ಕನ್ನಡ ಎಂದರೆ ಎಲ್ಲಿಲ್ಲದ ಹಿಗ್ಗು. ಕನ್ನಡಮ್ಮನ ಹರಕೆ (1936) ಕವಿತೆಯಲ್ಲಿ ಅವರು "ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು" ಎಂದಿದ್ದಾರೆ. ಕವಿಗೆ ಇಷ್ಟವಾಗಿರುವ ಕನ್ನಡವು ಸವಿಗನ್ನಡವಾಗಿದೆ. ತಾವು ಕನ್ನಡ ಭಾಷೆಯನ್ನು ಮೆಚ್ಚಿಕೊಂಡಿರುವುದು ಮಾತ್ರವಲ್ಲ. ಹರಿ, ಹರ ಇಬ್ಬರಿಗೂ ಕನ್ನಡ ಪ್ರಿಯವಾಗುವುದೆಂದು ಕುವೆಂಪು ಪ್ರತಿಪಾದಿಸುತ್ತಾರೆ. ಕನ್ನಡದಲ್ಲಿ ಬಿನ್ನಹ ಮಾಡಿಕೊಂಡರೆ ಹರಿ ವರಗಳ ಮಳೆ ಕರೆಯುತ್ತಾನೆ. ಹರ ಮುನಿಯದೆ ಪೊರೆಯುತ್ತಾನೆ ಎನ್ನುವ ಕುವೆಂಪು ಅವರು ದೇವರ ಪೂಜೆಗೆ ಕನ್ನಡವನ್ನು ಬಳಸಬೇಕೆಂಬುದನ್ನು ಪರೋಕ್ಷವಾಗಿ ಹೇಳಲು ತೊಡಗಿದ್ದಾರೆ ಎನಿಸುತ್ತದೆ. ತನಗಿಷ್ಟವಾಗಿರುವ ಭಾಷೆಯು ದೇವರಿಗೂ ಇಷ್ಟವಾಗಬೇಕೆಂಬುದು ಅವರ ವಾದ.ತಾಯಿ ನುಡಿಯು ತಾಯಿಯ ಹಾಲಿನಷ್ಟೇ ಸತ್ವಶೀಲವಾದುದು. ಅದರ ತಿರುಳನ್ನು ಅರಿತವರಿಗೆ ಅನಾರೋಗ್ಯದ ಭಯ ಇರುವುದಿಲ್ಲ. ಕವಿ ಕುವೆಂಪು ಅವರು ತಾಯಿಯ ಸ್ಥಾನದಲ್ಲಿ ನಿಂತು ಕನ್ನಡದ ಕಂದಮ್ಮನಿಗೆ ಬುದ್ಧಿಹೇಳುವುದುಹೀಗೆ:

"ಕನ್ನಡಕೆ ಹೋರಾಡು ಕನ್ನಡದ ಕಂದ, 
ಕನ್ನಡವ ಕಾಪಾಡು ನನ್ನ ಆನಂದ, 
ಜೋಗುಳದ ಹರಕೆಯಿದು ಮರೆಯದಿರು ಚಿನ್ನ, 
ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ"

ಇದರಿಂದ ಕುವೆಂಪು ಹಾಗೂ ಕನ್ನಡದ ಸಂಬಂಧದ ಬೆಸುಗೆಯನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ಅದು ಬಿಡಿಸಲಾಗದ ತಾಯಿ ಮಗುವಿನ ಸಂಬಂಧದಂತೆ ಗಟ್ಟಿಯಾದುದು. ಕುವೆಂಪು ಕನ್ನಡ ಕಾವ್ಯ ಪರಂಪರೆಯನ್ನು ಬಹುವಾಗಿ ಪ್ರೀತಿಸುತ್ತಾರೆ. ರನ್ನಪಂಪರ ಮಾತು, ಬಸವಣ್ಣನ ಜನಪ್ರೀತಿ, ಹರಿಹರ, ನಾರಣಪ್ಪನ ಕೆಚ್ಚು ಅವರಿಗೆ ಇಷ್ಟವಾಗುತ್ತದೆ. ಇವರನ್ನು ಕನ್ನಡದ ಮಗು ಸಹ ಅರಿಯಬೇಕು. ಅವರುಗಳ ಸಾಹಿತ್ಯದ ಸಾಧನೆಯನ್ನು ಅರ್ಥಮಾಡಿಕೊಳ್ಳಬೇಕು. ಇವರನ್ನು ಮರೆತರೆ ನೀನು ಕನ್ನಡವನ್ನು ಕೊಂದಂತೆ. ಹಾಗೆ ಕನ್ನಡವನ್ನು ಕೊಲ್ಲುವ ಮೊದಲು ನನ್ನನ್ನು ಕೊಂದುಬಿಡು ಎನ್ನುತ್ತಾಳೆ ಕುವೆಂಪು ಅವರ ಕನ್ನಡದ ತಾಯಿ.ಕನ್ನಡಮ್ಮನ ಹರಕೆ ಪದ್ಯವನ್ನು ತಾಯಿ ತನ್ನ ಮಗನಿಗೆ ಹೇಳಿದಂತೆ ಕಲ್ಪಿಸಿಕೊಂಡು ರಚಿಸಿರುವ ಕುವೆಂಪು ಅವರು, "ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ"(1935) ಕವನವನ್ನು ತಂದೆಯೊಬ್ಬ ತನ್ನ ಮಕ್ಕಳನ್ನು ಉದ್ದೇಶಿಸಿ ಹೇಳಿದಂತಿದೆ. ಇದರಲ್ಲಿ 'ದಮ್ಮಯ್ಯ' ಎನ್ನುವ ಪದಬಳಕೆಯಿದೆ. ಹಾಗಂತ ತಂದೆ ತನ್ನ ಮಕ್ಕಳನ್ನು ಬೇಡಿಕೊಳ್ಳುವುದಿಲ್ಲ. ಬದಲಾಗಿ ನಿಮ್ಮ ಕನ್ನಡ ನುಡಿಗೆ ಇಂಥ ಗಂಡಾಂತರ ಬಂದೊದಗಿದೆ. ಅದನ್ನು ನಿವಾರಿಸಿಕೊಳ್ಳಲು ಸನ್ನದ್ದರಾಗಿ ಎಂಬ ಆದೇಶವಿದೆ.ಕನ್ನಡಕ್ಕೆ ಹೊರ ಭಾಷೆಗಳಿಂದ ಆಗುತ್ತಿರುವ ಅನಾಹುತ ಒಂದೆಡೆಯಾದರೆ, ಅದನ್ನು ನೋಡಿಯೂ ನೋಡದವರಂತೆ ಇರುವವರು ಮತ್ತೊಂದೆಡೆ ಇದ್ದಾರೆ. ಮಗದೊಂದು ಕಡೆಯಿಂದ ಕನ್ನಡಿಗರೇ ಕನ್ನಡಮ್ಮನ ಬಾಯಿ ಮುಚ್ಚುವ, ತಾಯಿಯನ್ನು ಕೊಲ್ಲುವ ಕಾರ್ಯದಲ್ಲಿ ನಿರತರಾಗಿದ್ದಾರೆಂಬ ಆರೋಪವನ್ನು ಕುವೆಂಪು ಅವರು ಮಾಡುವುದು ಕೇವಲ ಕಲ್ಪನೆಯಿಂದಲ್ಲ. ಅನುಭವದ ನೆಲೆಯಲ್ಲಿ. ಕನ್ನಡ ಭಾಷೆಯನ್ನು ವಿಶ್ವವಿದ್ಯಾಲಯದ ಹಂತದಲ್ಲಿ ಶಿಕ್ಷಣ ಮಾಧ್ಯಮದ ಭಾಷೆಯನ್ನಾಗಿ ಮಾಡಲು ಕುವೆಂಪು ಅವರು ಪ್ರಯತ್ನಪಟ್ಟಾಗ ಅದನ್ನು ವಿರೋಧಿಸಿದವರು ಕನ್ನಡಿಗರೇ ಅಲ್ಲವೇ? ಆಡಳಿತದಲ್ಲಿ ಕನ್ನಡವನ್ನು ಜಾರಿಗೊಳಿಸಬೇಕೆಂಬ ಒತ್ತಾಯ ಮಾಡುವುದಾದರೂ ಏತಕ್ಕಾಗಿ? ನಮ್ಮ ಜನಪ್ರತಿನಿಧಿಗಳೇ ನಮ್ಮನ್ನು ಆಳುತ್ತಿರುವಾಗ ಕನ್ನಡವನ್ನು ಜಾರಿಗೊಳಿಸಲು ಯಾರು ಅಡ್ಡಿಯಾಗಿದ್ದಾರೆ? ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಹುನ್ನಾರವನ್ನು ಮಾಡುತ್ತಿರುವವರು ಕನ್ನಡಿಗರಲ್ಲವೇ?ಕನ್ನಡಿಗರ ಪರಭಾಷಾ ಮೋಹವನ್ನು ಕಂಡು ಸಿಡಿಮಿಡಿಗೊಳ್ಳುವ ಕುವೆಂಪು ಅವರು ತಾಯಿನುಡಿಯ ಮಹತ್ವವನ್ನು ನಯವಾಗಿಯೇ ಕನ್ನಡಿಗರಿಗೆ ತಿಳಿಸಿದ್ದಾರೆ. "ಮೊಲೆವಾಲಿನೊಡಗೂಡಿ ಬಂದ ನುಡಿ ತಾಯಿಗುಡಿ, ಕೊಲೆಗೈದರಮ್ಮನನೆ ಕೊಲಿಸಿದಂತೆ". ಕನ್ನಡ ತಾಯಿಯ ಹಾಲನ್ನು ಕುಡಿದು ಬೆಳೆದ ಕಂದಮ್ಮಗಳು ತಾಯಿಯನ್ನು ಕೊಂದಂತೆ ಕನ್ನಡವನ್ನು ಕೊಲ್ಲುತ್ತಿರುವರೆಂಬ ಆಕ್ರೋಶವನ್ನು ಅವರು ವ್ಯಕ್ತಮಾಡುತ್ತಾರೆ. ತಾಯಿ ಮಗುವಿನ ನಡುವೆ, ಪತಿ ಪತ್ನಿಯರ ಸಂಗಡ, ತಂದೆ ಮಕ್ಕಳ ಜೊತೆಗಿನ ವಾತ್ಸಲ್ಯ, ಒಲವು, ಅಕ್ಕರೆಗಳು ಬೇರೆ ಭಾಷೆಯಲ್ಲಿ ಮೂಡಿದವಾದರೆ ಅವು ಕೃತಕವಾಗುತ್ತವೆಯೇ ಹೊರತು ಸಹಜವಾಗಿರುವುದಿಲ್ಲ. ಸಹಜವಾಗಿರಬೇಕಾದರೆ ಅವು ತಾಯಿನುಡಿಯಾದ ಕನ್ನಡದಲ್ಲಿ ಮಾತ್ರ ಇರಬೇಕೆಂದು ಕುವೆಂಪು ತಿಳಿಸಬಯಸುತ್ತಾರೆ.

ನಿಮ್ಮ ನುಡಿ ನಿಮ್ಮ ಗಂಡಸುತನಕೆ ಹಿರಿಸಾಕ್ಷಿ,
ಗೆಲವಿದ್ದರದಕೆ ನಿಮಗಿಹುದು ಶಕ್ತಿ.

ಎನ್ನುವ ಮೂಲಕ ಅವರು ಕನ್ನಡಿಗರ ರಕ್ತವನ್ನು ಕುದಿಯುವಂತೆ ಮಾಡುತ್ತಾರೆ. ಕನ್ನಡಿಗರು ಪರಾಕ್ರಮಿಗಳಾಗಿ ಹೋರಾಡಿ ತಮ್ಮ ತಾಯ್ನುಡಿಯನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ ಇದೆಅವರು ತಮ್ಮ ನಾಡಿನಲ್ಲಿ ಧೈರ್ಯದಿಂದ ಬದುಕಬೇಕೇ ಹೊರತು ನಾಯಿಯಂತೆ ಬಾಲ ಅಲ್ಲಾಡಿಸಿಕೊಂಡು ಪರಭಾಷೆಗಳ ದಾಸರಾಗುವುದು ಹೇಡಿತನ ಎಂದಿದ್ದಾರೆ.

Kuvempu

"ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು/

ದಕ್ಷಿಣದ ದೇಶಕದು ಕುದುರೆಯಹುದೆ?"

ಎಂಬ ಪ್ರಶ್ನೆ ಕುವೆಂಪು ಅವರಲ್ಲಿ ಏಳುವುದು ಹಿಂದಿಯ ಕಾರಣಕ್ಕಾಗಿ. ಉತ್ತರ ಭಾರತದವರಿಗೆ ದಕ್ಷಿಣದವರನ್ನು ಕಂಡರೆ ಅಷ್ಟಕ್ಕಷ್ಟೆ. ತಾವೇ ಶ್ರೇಷ್ಠ. ತಮ್ಮ ನುಡಿ ಹಿಂದಿಯೇ ಪರಮ ಪವಿತ್ರ ಎಂಬ ಹುಂಬತೆ ಇದೆ. ಅದನ್ನು ಅವರು ಹಠತೊಟ್ಟು ಸಾಧಿಸಲು ಮುಂದಾಗುತ್ತಾರೆ. ಹಿಂದಿಯ ದಬ್ಬಾಳಿಕೆಯಿಂದಾಗಿ ಹಲವಾರು ಭಾಷೆಗಳು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಇದನ್ನು ಮನಗಂಡಿದ್ದ ಕುವೆಂಪು ಅವರು ಉತ್ತರ ದೇಶದಲ್ಲಿರುವ ಕಾಶಿಯಲ್ಲಿ ಮುಳುಗಿದ ಕತ್ತೆಯೊಂದು ದಕ್ಷಿಣದ ಕನ್ನಡನಾಡಿಗೆ ಬಂದರೆ ಅದು ಕುದುರೆಯಾಗುವುದಿಲ್ಲ. ಹಾಗೆಯೇ ಹಿಂದಿಯಾಗಲಿ, ಹಿಂದಿಯನ್ನು ಮಾತನಾಡುವ ಮಂದಿಯಾಗಲಿ ಕರ್ನಾಟಕದಲ್ಲಿ ಸ್ಥಾನವನ್ನು ಪಡೆಯಲು ಬಿಡಬಾರದು. ಕರ್ನಾಟಕದಲ್ಲಿ ಕನ್ನಡಕ್ಕೇ ಸಾರ್ವಭೌಮ ಸ್ಥಾನವಿರಬೇಕು. ಕನ್ನಡಿಗನಿಗೇ ಸರ್ವ ಮನ್ನಣೆ ಸಲ್ಲಬೇಕೇ ಹೊರತು ಅನ್ಯ ಭಾಷೆಗಾಗಲಿ, ಜನರಿಗಾಗಲಿ ಅಲ್ಲ ಎಂಬುದು ಅವರ ಈ ಸಾಲುಗಳ ಹಿಂದಿರುವ ಅಭಿಪ್ರಾಯ.

"ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರಾ,

ಗರ್ಜಿಸುವುದನು ಕಲಿತು ಸಿಂಹವಾಗಿ

ನಖದಂಷ್ಟ್ರ ಕೇಸರಂಗಳ ಬೆಳೆಸಿ ಹುರಿಗೊಂಡು

ಶಿರವೆತ್ತಿ ನಿಂತು ಕುರಿತನವ ನೀಗಿ."

ಎಂದು ಹೇಳುತ್ತಾ ಕುವೆಂಪು ಕನ್ನಡಿಗರಿಗೆ ಕಣ್ಣು ತೆರೆಸುತ್ತಾರೆ. ನೀವು ಕನ್ನಡದ ಸಿಂಹಗಳಾಗಿ ಗರ್ಜಿಸುವುದನ್ನು ಕಲಿಯಬೇಕೆಂದು ಕರೆ ನೀಡುತ್ತಾರೆ. ಅದಕ್ಕಾಗಿ ನಿಮ್ಮ ದೇಹ ಮತ್ತು ಮನಸ್ಸನ್ನು ಸಶಕ್ತಗೊಳಿಸಬೇಕೆಂದೂ, ಹೊಸ ಚೈತನ್ಯದಿಂದ ಮುನ್ನುಗ್ಗಬೇಕೆನ್ನುತ್ತಾರೆ. ಕುರಿಯಂತೆ ಕನ್ನಡಿಗರು ತಲೆ ತಗ್ಗಿಸಿ ನಿಲ್ಲುವಂತಾಗಬಾರದು. ಅವರು ತಲೆ ನಿಮಿರಿ ನಿಲ್ಲುವಂತಾಗಬೇಕು. ಕುರಿಗಳಂತೆ ಬೇರೆಯವರ ಹಿಂದೆ ಹೋಗುವುದನ್ನು ಬಿಟ್ಟು ತಾವೇ ನಾಯಕರಾಗುವುದನ್ನು ಕಲಿಯಬೇಕು ಎಂದು ಕುವೆಂಪು ಅವರು ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ತುಂಬಲು ಪ್ರಯತ್ನಿಸಿದ್ದಾರೆ. ಕನ್ನಡದ ಬಗೆಗಿನ ಕುವೆಂಪು ಅವರ ಕವನಗಳನ್ನು ನೋಡಿದರೆ ಅವರು ಕನ್ನಡದ ಹೋರಾಟಗಾರರಾಗಿ ಕಂಡುಬರುತ್ತಾರೆ. ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಲುವಾಗಿ ಅವರು ರಚಿಸಿರುವ ಕವನಗಳ ಆಶಯಗಳನ್ನು ನಾವು ಅರ್ಥಮಾಡಿಕೊಳ್ಳುವ ಅಗತ್ಯ ಈಗ ಬಹಳ ಮುಖ್ಯವಾಗಿದೆ.. ಅದು ಯಾಂತ್ರಿಕವಾಗಿ ನಡೆಯದೆ, ಕುವೆಂಪು ಅವರ ಕನ್ನಡಪರ ಆಶಯವು ಈಡೇರುವಂತಾದರೆ ಅವರ ಹುಟ್ಟುಹಬ್ಬ ಆಚರಣೆಗೊಂದ ಅರ್ಥ ಬರುತ್ತದೆ. ಬರಬೇಕು ಎಂಬ ಆಶಯ ನಮ್ಮಲ್ಲಿರಲಿ.
-ದೊರೇಶ್


   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x