ಮತ್ತೆ ಮಳೆಯಾಗಿದೆ: ಪ್ರಶಸ್ತಿ

prashasti

ಮಳೆಗಾಲ ಮುಗೀತು. ಇನ್ನೇನು ಚಳಿಗಾಲ ಬರ್ಬೇಕಿತ್ತಲ್ಲ ಅಂತ ಕಾಯ್ತಾ ಇದ್ದವರಿಗೆ ಡಿಸೆಂಬರ್ ಐದಾದರೂ ಚಳಿಯ ದರ್ಶನವಾಗಿರಲಿಲ್ಲ. ಕಡಿಮೆಯೆಂದರೆ ಹದಿನೈದು , ಹೆಚ್ಚೆಂದರೆ ಇಪ್ಪತ್ತೈದು ಡಿಗ್ರಿಯಿರುತ್ತಿದ್ದ ದಿನಗಳಲ್ಲಿ ಗ್ಲಾಸ ಕಿಟಕಿಯ ಪಕ್ಕದಲ್ಲಿ ಕುಳಿತು ಕೆಲಸ ಮಾಡೋದೊಂತರ ಖುಷಿ. ಎದುರಿಗಿರೋ ಬೆಟ್ಟಗಳ ಮೇಲೆ ಕವಿಯುತ್ತಿದ್ದ ಮೋಡಗಳು, ಪಕ್ಕದ ಗಗನಚುಂಬಿಗಳ ನಡುವೆ ಕೂಕೆನ್ನುತ್ತಾ ಸಂಜೆ ಕಳೆಯೋ ಮುಳುಗುರವಿ, ಡಿಸೆಂಬರ್ ಬಂತೆಂದು ನೆನಪಿಸುತ್ತಾ ರಸ್ತೆಯಲ್ಲಿ ಆಗಾಗ ಕಾಣುವ ಮೆರವಣಿಗೆಗಳು ಕ್ರಿಸ್ ಮಸ್ ರಜೆ ಬರುತ್ತಿರೋ ಸೂಚನೆ ಕೊಡುತ್ತಿದ್ದವು. ಆಗಾಗ ಎದುರಿಗಿರೋ ಪರ್ವತಗಳನ್ನೇ ಮುಚ್ಚುವಂತಹ ಮಂಜು ಮೂಡಿ ಒಂಚೂರು ಚಳಿಯ ನಡುಕುಗಳ ತಂದಿತ್ತರೂ ದಿನವೂ ಸ್ವೆಟರ್ ತರೋ ಅನಿವಾರ್ಯತೆಯಿರಲಿಲ್ಲ.ಮುಂಚೆಯೆಲ್ಲಾ ಎಂಟೂವರೆ ಒಂಭತ್ತವರೆಗೆ ಇರುತ್ತಿದ್ದ ಬೆಳಕೀಗ ಐದೂವರೆ ಆರಕ್ಕೇ ಖಾಲಿಯಾದರೂ ಆಫೀಸ ಸಮಯಗಳು ಬದಲಾಗದೇ ದಿನದ ಅವಧಿಗಳೇ ಸಾಕಾಗದೆನಿಸುತ್ತಿದ್ದವು. ಸಂಜೆಯ ಜಾಗಿಂಗಿನ ವೇಳೆ ಒಂದಿಷ್ಟು ಚಳಿಯೆನಿಸೋದು ಬಿಟ್ಟರೆ ಇಲ್ಲಿಯ ಚಳಿಗಾಲವಿಷ್ಟೇ. ಭಯಾನಕ ಚಳಿಯಿರುತ್ತೆ ಅಂತ ಭಾರತದಿಂದ ತಂದ ಥರ್ಮಲ್ ವೇರು, ಸ್ವೆಟರುಗಳೆಲ್ಲಾ ವ್ಯರ್ಥವಾಯಿತು. ಅಷ್ಟು ಭಾರ ಹೊತ್ತಿದ್ದೇ ಬಂತೆಂಬ ಬೇಜಾರು ಕಾಡತೊಡಗಿತ್ತು. ಇನ್ನೂರು ಮೈಲಿ ದೂರದಲ್ಲೇ ಇರುವ ಗಡಿಯಾಚೆಗಿನ ಟ್ರಂಪ್ ನೆಲದಲ್ಲಿ ಹಿಮಪಾತವಾಗುತ್ತಿದೆ , ಇಲ್ಲಿ ಅಂತದ್ದೇನೂ ಇಲ್ಲವೆನ್ನೋ ಬೇಸರ ಬೇರೆ. 

ಡಿಸೆಂಬರ್ ಆರು ಬಂದಿದ್ದೇ ತಡ ಹವಾಮಾನ ಊಸರವಳ್ಳಿಯ ಬಣ್ಣದಂತೆ ಬದಲಾಗತೊಡಗಿತ್ತು. ಬೆಳಗ್ಗೆ ಆಫೀಸಿಗೆ ಹೋಗೋ ಹೊತ್ತಿಗೆ ಕೊಂಚ ಚಳಿ ಕಾಡತೊಡಗಿತ್ತು. ಮಧ್ಯಾಹ್ನದ ಹೊತ್ತಿಗೆ ಹದಿನೈದು ತೋರಿಸ್ತಿದ್ದ ತಾಪಮಾಪಕ ಹನ್ನೆರಡಕ್ಕೆ ಇಳಿದಿತ್ತು. ಪಕ್ಕದ ಟೀಮಿನಲ್ಲಿದ್ದ ಮೆಕ್ಸಿಕೋದವರೆಲ್ಲಾ ಚೆಚ್ಚಬೆಚ್ಚನೆಯ ಜರ್ಕೀನು ಹೊದ್ದು ತಿರುಗುತ್ತಿದ್ದರೆ ಬರೀ ಶರ್ಟಿನಲ್ಲಿದ್ದ ನಾವು ಬೆಪ್ಪು ತಕ್ಕಡಿಗಳಂತೆ ಆಫೀಸೊಳಗೆ ಕೂತಿದ್ದೆವು. ಆಫೀಸಿಂದ ಮನೆಗೆ ಬರೋ ಹೊತ್ತಿಗೆ ಮೊಬೈಲಲ್ಲಿ ಮಾರನೇ ದಿನದ ಬಗ್ಗೆ ನೋಡುತ್ತಾ ನಾಳೆ ಮೂರರವರೆಗೆ ಇರುತ್ತಂತೆ, ಹೆಚ್ಚಂದರೆ ೭ ಡಿಗ್ರಿ ಬರಬಹುದು ಅಂತ ಗೆಳೆಯರು ಮಾತಾಡುತ್ತಿದ್ದರೆ ನಾನು ಮೂರು ಡಿಗ್ರಿಯಾ ? ಒಂದೇ ದಿನದಲ್ಲಿ ಅಷ್ಟೆಲ್ಲಾ ಬದಲಾವಣೆಯಾಗೋದು ಸಾಧ್ಯವಾ ಅಂತ ಅವರನ್ನು ಗೇಲಿ ಮಾಡುತ್ತಿದ್ದೆ. ಆದರೆ ಅಂದು ಸಂಜೆಯ ಹೊತ್ತಿಗೇ ತಾಪಮಾನ ೭ ಡಿಗ್ರಿಗೆ ಇಳಿದಿದ್ದರೂ ಮನೆಯೊಳಗಿದ್ದ ನಮಗೆ ಅದರ ಅರಿವಾಗಿರಲಿಲ್ಲ. 

ಅಂತೂ ಮಧ್ಯಾಹ್ನವಾಯ್ತು. ಸ್ವಲ್ಪ ಬಿಸಿಲು ಹೊರಡಬಹುದು ಅಂತಂದುಕೊಂಡ್ರೆ ಬಿಸಿಲ ಯಾವ ಲಕ್ಷಣಗಳೂ ಇಲ್ಲ. ರಚ್ಚೆ ಹಿಡಿದಂತೆ ಜಿಮುರುತ್ತಿದ್ದ ಮಳೆ, ಇಳಿಯುತ್ತಲೇ ಸಾಗಿದ್ದ ತಾಪ ಗ್ಲಾಸ ಕಿಟಕಿಯ ಪಕ್ಕ ಕೂತಿದ್ದ ನಮಗೆ ಬಜ್ಜಿ , ಬೋಂಡಾಗಳ ನೆನಪು ತರಿಸುತ್ತಿತ್ತು. ತಾಪ ಮೂರಕ್ಕಿಳಿದು ಆಫೀಸ ಒಳಗೆ ಎರಡು ಸ್ವೆಟರುಗಳ ಒಳಗಿದ್ದವರಿಗೂ ನಡುಕ ಹುಟ್ಟಿಸುತ್ತಿದ್ದರೆ ತೆಳ್ಳಗೊಂದು ಸ್ವೆಟ್ ಜಾಕೆಟ್ ಹಾಕಿಕೊಂಡು ಬಂದವರ ಕತೆಯೇನಾಗಬೇಡ ? ಮುಂಚೆಯೆಲ್ಲಾ ದಿನಕ್ಕೆ ಎರಡು ಬಾಟಲಾದರೂ ಖಾಲಿಯಾಗುತ್ತಿದ್ದ ನೀರು ಇಂದು ಒಂದು ತೊಟ್ಟೂ ಖಾಲಿಯಾಗದಂತೆ ಕುಳಿತಿತ್ತು. ಮುಖ ತೊಳೆಯೋಣವೆಂದು ನೀರಿಗೆ ಕೈಯಿಟ್ಟರೆ ಐಸ ಮುಟ್ಟಿದಂತೆ. ಟಾಯ್ಲೇಟ ಸೀಟಿನ ಮೇಲೆ ಕೂರೋ ಸಾಹಸವನ್ನು ವರ್ಣಿಸದಿರೋದೇ ಮೇಲು ! ಮಧ್ಯಾಹ್ನ ಬಿಸಿ ಮಾಡಿ ತಿಂದ ಅನ್ನ, ಆಲೂ ಪಲ್ಯ ಸ್ವಲ್ಪ ಚೈತನ್ಯವಿತ್ತರೂ ಊಟವಾದ ಸ್ವಲ್ಪ ಹೊತ್ತಿಗೇ ಯಾವಾಗ ಮನೆಗೆ ಹೋಗುತ್ತೀನೋ, ಬಿಸಿ ಬಿಸಿ ಚಹಾ ಹೀರುತ್ತೀನೋ ಎಂಬ ಕನವರಿಕೆ ಪ್ರಾರಂಭವಾಗಿತ್ತು. ಆಫೀಸಲ್ಲೇನೂ ಕಾಫಿ ಡಿಕಾಕ್ಷನ್ ಇಟ್ಟಿರುತ್ತಾರೆ. ಆದರೆ ಅಲ್ಲಿನ ಮೆಕ್ಸಿಕೋ ಕಾಫಿ ಮತ್ತು ಹಾಲಿನ ಪುಡಿಯ ಊರಲ್ಲಿನ ಚಹಾದ ಮಜಾ ಕೊಡುತ್ತಿರಲಿಲ್ಲ. ಅದು ಹೋಗಲಿ ಇಲ್ಲೇ ಮನೆಯಲ್ಲಿ ಬೆಚ್ಚ ಬೆಚ್ಚಗೆ ಹಾಲು ಕಾಯಿಸಿಕೊಂಡು ಬ್ರೂನೋ, ನೆಸ್ ಕಾಫಿಯೊಂದಿಗೋ ಕುಡಿಯೋ ಖುಷಿಯನ್ನೂ ಕೊಡುತ್ತಿರಲಿಲ್ಲ. ಹಿಂದಿನ ವರ್ಷದ ಚಳಿಯ ದಿನಗಳಲ್ಲಿ ಸಿ.ಎಂ.ಆರ್ ರಸ್ತೆಯ ಮಸಾಲೆ ಪುರಿ, ಗೋಬಿ, ಮಸಾಲೆ ದೋಸೆಗಳ ತಿಂತಿದ್ದಿದ್ದು, ಪೀಜಿಯ ಗೋಬಿ, ಕಾಬೂಲಿ ಕಡಲೆ ಸಬ್ಜಿಗಳು , ಬೆಳಬೆಳಗ್ಗಿನ ಚಹಾ ಮತ್ತು ಇಡ್ಲಿ ವಡೆ.. ಆಹಾ ಏನು ಸವಿಯಪ್ಪಾ ಅನಿಸುತ್ತಿದ್ದವು.  ಮೂರರಿಂದ ಶೂನ್ಯಕ್ಕಿಳಿಯುತ್ತಿದ್ದ ತಾಪಗಳಲ್ಲಿ ಡಾರ್ಜಿಲಿಂಗಿನ ಬೆಟ್ಟಗಳನ್ನು, ಹಿಮಾಚಲ, ನೇಪಾಳಗಳನ್ನು ಸುತ್ತಿದ್ದ ಹಿಂದಿನ ವರ್ಷದ ಡಿಸೆಂಬರೂ ನೆನಪಾಗಿತ್ತು. ಆದರೆ ಅಂದು ತಾಪ ಇಷ್ಟು ಕೆಳಗಿರುತ್ತೆ ಎಂಬ ಅಂದಾಜಿತ್ತು. ನಾಲ್ಕರಿಂದ ಐದು ಪದರ ಹೊದಿಕೆ ಬೇಕೆಂದು ಬ್ಲಾಗುಗಳಲ್ಲಿ ಓದಿ ತಯಾರಾದ ಮನಸ್ಥಿತಿಯಿತ್ತು. ಸ್ವತಃ ಬೇಯಿಸಿಕೊಳ್ಳೋ ಯಾವ ಅನಿವಾರ್ಯತೆಯೂ ಇಲ್ಲದೇ , ಕಂಡಲ್ಲಿ ಮಾತಾಡುವ, ಕಿವಿಯಾಗುವ, ಸಿಕ್ಕಿದ್ದಲ್ಲಿ ತಿನ್ನುವ ಸ್ವಾತಂತ್ರ್ಯವಿತ್ತು. ಆದರೆ ಈಗ ಭಾಷೆ ಬಾರದ ದೇಶದಲ್ಲಿ, ಎರಡೇ ದಿನದಲ್ಲಿ ವೈಪರೀತ್ಯಕ್ಕೆ ಬಂದ ಹವಾಮಾನದಲ್ಲಿ , ಕಾಡೋ ಊರ , ಊಟದ ನೆನಪುಗಳಲ್ಲಿ , ಹೊರಗಿನ ದನದ ಮಾಂಸ, ಹಂದಿಯ ಮಾಂಸಗಳ ತಿನ್ನಲಾಗದೇ ದಿನವೂ ಸ್ವತಃ ಅಡಿಗೆ ಮಾಡಿಕೊಳ್ಳೋ ಅನಿವಾರ್ಯತೆಯಲ್ಲಿ ಮಳೆ, ಚಳಿಯ ನೆನಪುಗಳು ಕಾಡುತ್ತಿದ್ದವು. 

ಅಂತೂ ಸಂಜೆಯಾಯ್ತು. ಮನೆಗೆ ಹೊರಡೋ ಹೊತ್ತೂ ಆಯ್ತು. ಬುಕ್ಕಾದ ಉಬರ್ರು ಟ್ರಾಫಿಕಲ್ಲಿ ಸಿಕ್ಕಾಕಿಕೊಂಡು ಐದು ನಿಮಿಷದ ಬದಲು ಹದಿನೈದು ನಿಮಿಷ ತಗೊಂಡು ನಾವು ಕೊಟ್ಟ ಜಾಗದ ಬದಲು ಬೇರೊಂದು ಜಾಗಕ್ಕೆ ಹೋಗಿ ನಿಂತಿದ್ದ. ಮಳೆ ಬಿದ್ದರೆ ಜ್ಯಾಮಾಗೋದು ಬೆಂಗಳೂರು ಮಾತ್ರವಲ್ಲ ಅನ್ನೋದಕ್ಕೆ ಪುಷ್ಠಿ ಕೊಡುವಂತೆ ಜ್ಯಾಮಾಗಿದ್ದ ರಸ್ತೆಗಳಿಗೆ ಅಂದು ರಾತ್ರಿ ಎಂಟಕ್ಕೆ ಮಂಟರರಿಯಲ್ಲಿ ನಡೆಯುತ್ತಿದ್ದ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯವೂ ಕಾಣಿಕೆಯಿತ್ತಿತ್ತು ! ಹೊರಗೆ ಕಾಲಿಡೋಕೆ ಒದ್ದಾಡಿಸುವ ಮೂರು ಡಿಗ್ರಿ ಚಳಿಯಲ್ಲಿ , ಸುರಿಯುತ್ತಿರೋ ಮಳೆಯ ನಡುವೆ ಹೊರಾಂಗಣ ಕ್ರೀಡಾಂಗಣದಲ್ಲಿ ಫುಟ್ಬಾಲಾಡಿಸೋದಾದರೂ ಹೇಗೆಂಬ ಕುತೂಹಲದಲ್ಲೇ ಕ್ಯಾಬ್ ಹತ್ತಿದ ನಮಗೆ ಅಲ್ಲಿನ ಬೆಚ್ಚಗಿನ ಹವೆ ಕಂಡು ಸ್ವರ್ಗ ಸಿಕ್ಕ ಭಾವ! ಮನೆಗೆ ಎಷ್ಟೊತ್ತಾದರೂ ತಲುಪಿಸಲೆಂಬ ಭಾವದಿಂದ ನಾವು ಆರಾಮಾಗಿ ಕೂತಿದ್ದರೆ ಆತ ಆರಾಮಾಗೇ ತಲುಪಿಸಿದ್ದ. ಮೂರುವರೆ ಪಟ್ಟು ಹೆಚ್ಚು ಸಮಯ ಮತ್ತು ದುಡ್ಡೂ ಕಟ್ಟಾಗಿತ್ತೆಂಬ ಬೇಸರವಿದ್ದರೂ ಅಂತೂ ಮನೆ ಸೇರಿದೆವೆಂಬೋ ಖುಷಿಯೇ ದೊಡ್ಡದಾಗಿತ್ತು.  

ಭಾರತದಲ್ಲಿ ಮೆಕ್ಸಿಕೋವೆಂದರೆ ಹಾದಿಬೀದಿಯಲ್ಲಿ ಡ್ರಗ್ಸ್ ಮಾರೋ ದೇಶವೆಂಬೋ ಭಾವ ಹೆಂಗಿದೆಯೋ ಇಲ್ಲಿನ ಜನಕ್ಕೆ ಭಾರತದ ಬಗೆಗಿನ ಭಾವವೂ ಹಾಗೇ ಇದೆ! ನಮ್ಮ ಮುಖಚಹರೆ ನೋಡಿ ಇಲ್ಲಿಯವರೇ ಅಂತಂದುಕೊಂಡು ಸ್ಪಾನಿಷಿನಲ್ಲೇ ಶುರು ಹಚ್ಚಿಕೊಳ್ಳುವ ಇವರು ನಾವು ತಡವರಿಸುತ್ತಾ ತಟ್ಟು ಪಟ್ಟು ಸ್ಪಾನಿಷ್ ಮಾತಾಡೋದು ನೋಡುತ್ತಾ ನಾವೆಲ್ಲಿಯವರೆಂದು ಕೇಳುತ್ತಾರೆ. ಭಾರತವೆಂದಾಕ್ಷಣ ಕುತೂಹಲದಿಂದ ಇವರ ಮುಖವರಳುತ್ತದೆ. ನಮ್ಮ ಜೊತೆ ಬಿಂದಿಯಿಟ್ಟುಕೊಂಡು ಓಡಾಡೋ ಭಾರತೀಯ ವನಿತೆಯರ ಜೊತೆ ಸೆಲ್ಫಿ ತೆಗೆಸಿಕೊಳ್ಳೋಕೆ ಬರುತ್ತಾರೆ. ಭಾರತದಲ್ಲಿ  ಹಾದಿಬೀದಿಯಲ್ಲಿ ಹಾವಾಡಿಸುತ್ತಾ ಸಾಗುತ್ತಾರಂತೆ ಹೌದಾ ಅಂತ ಮಾತಾಡೋ ಅವರಿಗೆ ನಾವಿಲ್ಲಿ ಓದೋಕೆ ಬಂದಿದ್ದೀವಾ , ತಿರುಗಾಡೋಕೆ ಬಂದಿದ್ದೀವಾ ಅನ್ನೋ ಕುತೂಹಲ.  ನಾವು ಇಲ್ಲಿ ಬಂದು ಸಾಫ್ಟವೇರ್ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದೀವಿ ಅಂದರೆ ಅದೊಂದು  ಅಚ್ಚರಿ ! ಹಾವಾಡಿಸುವವರಿಗೆ ಕಂಪ್ಯೂಟರಿನ ಇಲಿಯಾಡಿಸೋಕೂ ಬರುತ್ತಾ ಅಂತ ಅಚ್ಚರಿಪಡುತ್ತಾ ಅವರು ಮಾತಾಡ್ತಿದ್ದರೆ ನಮಗೊಂತರ ಕಸಿವಿಸಿ. ಇಲ್ಲಿನ ನಾನ್ ವೆಜ್ಜಿಗಳ ಮಧ್ಯ ಒದ್ದಾಡುತ್ತಿರೋ ನಮಗೆ ಇಲ್ಲಿ ಸಿಗೋ ಕೆಲವೇ ಕೆಲ ವೆಜ್ ತಿಂಡಿಗಳಾದ ಆಲೂ ಪಾಪಾಸ್, ಬೀನ್ಸ್ ಚಿಲಾಕೆಲೇಸ್ ತುಂಬಾ ಖಾರವೆನಿಸುತ್ತಲ್ವಾ ಅನ್ನೋದು ಅವರ ಕಳಕಳಿ. ಈ ಖಾರ ಏನೇನೂ ಅಲ್ಲ ಗುರೂ, ನಮ್ಮಲ್ಲಿನ ಮೆಣಸಿನ ಚಟ್ನಿ, ಮಾವಿನ ಕಾಯಿ-ಸೂಜುಮೆಣಸಿನ ಗೊಜ್ಜುಗಳು ಸಖತ್ ಖಾರ ಇರುತ್ತೆ ಅಂದ್ರೆ ಮೆಕ್ಸಿಕೋಗಿಂತಲೂ ಖಾರ ತಿನ್ನುವವರಿದ್ದಾರಾ ಅನ್ನೋ ಆಶ್ಚರ್ಯವೂ ಆಗತ್ತೆ. ಊಟ ತಿಂಡಿಯ ಪ್ರಶ್ನೆಯಾದನಂತರ ಭಾರತದ ಭಾಷೆ ಯಾವುದು, ಅಲ್ಲಿನ ಒಂದಿಷ್ಟು ಪದ ಹೇಳಿಕೊಡಿ ಅಂತ ಕೂತಾಗ ನಾಲ್ಕೈದು ರಾಜ್ಯದವರಿರೋ ನಮ್ಮ ಗುಂಪಿಗೆ ಧರ್ಮಸಂಕಟ ಶುರುವಾಗುತ್ತೆ. ಭಾರತದಲ್ಲಿ ಒಂದೇ ಭಾಷೆಯಿಲ್ಲ. ನನ್ನದು, ಇವನದು, ಅವನದು, ಮತ್ತೊಬ್ಬನದು ಬೇರೆ ಬೇರೆ ಭಾಷೆಗಳಿವೆ ಅಂತ ಅವರಿಗೆ ಮತ್ತೊಂದಷ್ಟು ಆಶ್ಚರ್ಯ ಹುಟ್ಟಿಸಿ ಎಲ್ಲರ ಭಾಷೆಗಳದ್ದೂ ಒಂದೊಂದು ಪದ ಹೇಳಿಕೊಟ್ಟು ಆ ದಿನದ ಟೈಂಪಾಸಾಯಿತೆಂದು ಮನೆ ಸೇರಿಕೊಳ್ಳುತ್ತೀವಿ. 

ಹಿಂದಿನ ದಿನ ಸಂಜೆ ಶುರುವಾದ ಮಳೆ ಇನ್ನೂ ನಿಂತಿಲ್ಲ. ಊರ ಬಜ್ಜಿ, ಬೋಂಡಾಗಳ ನೆನಪುಗಳೆಲ್ಲಾ ಕಾಡಿ ಬೇಸರಪಡುತ್ತಾ , ಭಾರತದಿಂದ ಬರಬೇಕಾಗಿದ್ದ ಗೆಳೆಯರ ವಿಮಾನ ಇಲ್ಲಿನ ಹವೆಯ ಕಾರಣದಿಂದ ೨೪ ಘಂಟೆ ತಡವಾದದ್ದಕ್ಕೆ ಅವರಿಗೆ ಸಮಾಧಾನ ಪಡಿಸುತ್ತಾ, ಯಾವಾಗ ಮರಳುತ್ತೀಯೆಂಬ ನೆಂಟರ ಕರೆಗಳಿಗೆ ಪ್ರತಿದಿನ ಉತ್ತರಿಸುತ್ತಿದ್ದರೆ ಹೊತ್ತುರುಳುತ್ತಿದೆ. ಸಂಜೆಯ ಖಾರ ಚಿತ್ರಾನ್ನ, ತೀಗಳು ಖಾಲಿಯಾಗಿ ಬೆಳಗಾದರೆ ಏನು ತಿಂಡಿ, ಮಧ್ಯಾಹ್ನಕ್ಕೇನೆಂಬ ಚಿಂತೆ ಕಾಡೋ ಮೊದಲು , ಹೊದ್ದ ಎರಡೆರಡು ಸ್ವೆಟರುಗಳನ್ನೂ ಬಿಚ್ಚಲು ಪುರುಸೊತ್ತಿಲ್ಲದಂತೆ ನಿದ್ದೆ ಕಣ್ಣೆಳಿಯುತ್ತಿದೆ. ಖಾಲಿಯಾದ ನೀರು ತರಲೆಂದು ಹೊರಗೆ ಹೆಜ್ಜೆಯಿಟ್ಟರೆ ನಾನುಸಿರಾಡೋ ಗಾಳಿಯೇ ಹಿಮವಾದಂತೆ ಭಾಸವಾಗುತ್ತೆ ! ಗೆಳೆಯನೊಬ್ಬ ಇಲ್ಲೂ ಹಿಮಪಾತವಾಗುತ್ತಿದೆ ಅಂತ ಫೋಟೋ ಕಳಿಸಿ ನಾಳೆ ನಾನು ಆಫೀಸಿಗೆ ಬರೋಲ್ಲ, ಮನೆಯಿಂದ್ಲೇ ಕೆಲಸ ಮಾಡ್ತೀನಿ ಅಂತಿದ್ದರೆ ನಾಳೆಯ ಹವಾಮಾನ ಮುನ್ಸೂಚನೆ ನೋಡೋ ಮನಸ್ಸಾಗುತ್ತೆ.  ನಾಳೆಯಾದ್ರೂ ಹಿಮ ಸಿಕ್ಕೀತೇನೋ,  ತಂದ ಬೆಚ್ಚನೆಯ ಬಟ್ಟೆಗಳ ಉಪಯೋಗವಾದೀತೇನೋ ಎಂಬ ನಿರೀಕ್ಷೆಯಲ್ಲಿ ಸದ್ಯಕ್ಕೊಂದು ವಿರಾಮ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x