ಪಂಜು ಕಾವ್ಯಧಾರೆ

ಕಾಗದದ ನಾವೆ

ತೇಲಿ ಬಿಟ್ಟಿವೆ ದೋಣಿಗಳ
ಪುಟ್ಟ ಕನಸು ಕೈಗಳು
ತೇಲಿ ಸಾಗಿದಷ್ಟೂ ಹರುಷ ಕಂಗಳಲಿ
ಪ್ರತಿಫಲಿಸುವ ತಿಳಿನೀರು

ಗಾಳಿಗೆ ಹೊಯ್ದಾಡುತ್ತ ಸಾಗುತಿವೆ
ಕಾಗದದ ನಾವೆಗಳು
ಅರಿಯದ ಗುರಿಯೆಡೆಗೆ
ಹೊಳೆಯ ಹರಿವಿನೆಡೆ ಮೌನ ಪಯಣ

ಅಂದು ನಾನೂ ಕಳಿಸಿದ್ದೆ ದೋಣಿಗಳ
ಹೊಳೆಗುಂಟ ಸಾಗಿ ಅದರ ಹಿಂದಿಂದೆ
ಕಲ್ಲುಗಳ ತಡವಿ ಗಿಡಗಂಟಿಗಳ ದಾಟಿ
ದೂರ ದೂರ ಯಾನ

ಕೆಲವು ಮುಳುಗಿ ಕೆಲವು ತೇಲಿ 
ಕಣ್ ಹಾಯ್ದಷ್ಟು ದೂರ ನೋಡಿ
ಮತ್ತಷ್ಟು ದೋಣಿಗಳು ಹೆಗಲ ಚೀಲದಲ್ಲಿ
ನಾಳೆಯ ಪಯಣಕೆ ಸಜ್ಜಾಗಿ

ಹೊಸ ದೋಣಿ ಹೊಸ ಬೆರಗು
ಸಾಗುವ ದಾರಿ ಅದೇ ಹೌದು
ಮತ್ತದೇ ಕಾತರದ ಹೊಳಪುಗಣ್ಣು
ಮೊದಲ ಜೀವಯಾನದ ಪಾಠ

ಮತ್ತೆ ಮತ್ತೆ ಕಾಡುವ ಬಾಲ್ಯ
ಈಸು ಬಿದ್ದ ಗುಂಡಿ
ಕಪ್ಪೆಯಂತೆಸೆದ ಕಲ್ಲು,ಹಿಡಿದ ಮೀನು
ತೇಲುತಿವೆ ಕಾಗದದ ದೋಣಿಗಳಾಗಿ ಮನದಲಿ

ಗಾಯತ್ರೀ ರಾಘವೇಂದ್ರ, ಶಿರಸಿ

gayatri-raghavendra

 

 

 

 


*ಹೂಬಳ್ಳಿ*

ಮನೆಯ ಕೈತೋಟದಲಿ
ಹಚ್ಚ ಹಸಿರಾಗಿ ಹಬ್ಬಿ  
ನನ್ನಯ ಭಾವನೆಗಳನು ತಬ್ಬಿ 
ಬೆಳೆಯುತ್ತಿತ್ತೋಂದು ಹೂಬಳ್ಳಿ

ನೋಡಿದರೆ ಬಾಚಿ ತಬ್ಬುವ
ಬಾನೆತ್ತರಕೆ ಸೋಗಸಾಗಿ ಹಬ್ಬುವ 
ಬೆಳೆದ ನೆಲಕೆ ಹಸಿರು ತರುವಂತ ಹೂಬಳ್ಳಿ

ದಿನಪ್ರತಿ ಹಲವು ಪಕಳೆಯರಳಿಸಿ
ಸುಗಂಧದ ವಾಸನೆ ಸೂಸಿ
ಘಮ ಘಮಿಸುತ್ತಿತ್ತು ‌ಪುಷ್ಪ

ಯಾವ ಗಳಿಗೆಯಲಿ ಬೀಸಿತೋ ಬಿರುಗಾಳಿ 
ಬಾಡಿ ನಿಂತವು ಹೂಗಳು 
ಎದೆಯೆತ್ತರ ಅರಳಿನಿಂತ ಬಳ್ಳಿ 
ಒಣ ಎಲೆಯ ಸುರಿಸುತಿಹುದಿಂದು….

ಅಕ್ಷಯಕುಮಾರ ಜೋಶಿ (ಅಕ್ಷು)

akshay-joshi

 

 

 

 


 ರೂಕ್ಷ

ಕಣ್ಣಿನ ಬದಲು ನಾಲಿಗೆಯಿಂದ
ನೋಡುವಂತಿದ್ದರೆ
ನಿನ್ನ ನೋಟ ಹೇಗಿದ್ದೀತು 

ಮೂಸುವ, ಮುಟ್ಟುವ,
ಕೇಳುವ, ನೆಕ್ಕುವ-
ಒಳಹರಿವೇ ಇರದೆ ಕೇವಲ
ಕಣ್ಣಿಗೇ ತೆತ್ತುಕೊಂಡ
ರೂಕ್ಷ ಲೋಕ

ಕಾಣುವ ನೋಟದ ಹಿಂದೆ
ಪಿಸು ನುಡಿವ ಅಲೆ
ಹೌದೋ ಅಲ್ಲವೋ ಎಂಬಂಥ
ನರುಗಂಪು
ಇಳಿದ ಬೆವರಿನ ಉಪ್ಪು 

ಬದಲು
ಚಪ್ಪಟೆ ಲೋಕದಲ್ಲಿ
ಬಣ್ಣಗಳ ದಾಖಲಿಸುವ
ಕ್ಯಾಮರಾ- ಕಣ್ಣು 

ಎಲ್ಲಿ
ಹನಿ ನೀರನೂ ಚಿಗುರಿಸುವ
ಮಣ್ಣು ?

 ***

ಜರೂರು

ಹಿಂಡುವ ನೋವಿನ 
ನಿರಿಗೆಗಳಿಗೆ
ನಗುವಿನ ಮುಲಾಮು
ಸವರಿ
ನೇರಗೊಳಿಸುವ
ಹವಣಿನಲ್ಲಿರುವೆ

ಕಂಡವರಿಗೆ ಹಲ್ಲು
ಕಿರಿದು
ನಗುವಿನ ಹೆಣವನ್ನಾದರೂ
ಕಾಣಿಸಬೇಕಲ್ಲ

ತಿಳಿಯುತ್ತಿಲ್ಲ
ರಚ್ಚೆ ಹಿಡಿದ ಮನಸನ್ನು
ಹೇಗೆ ಸಂತೈಸಲಿ
ಯಾವ ಗಿಲಕಿ ಇಡಲಿ
ಕೈಯಲ್ಲಿ

***
ದಿವ್ಯ

ಎಂಥದೋ ತೊಳಲಿಕೆಯ
ವಿಧ್ವಸ್ತ ಮನದಲ್ಲಿ
ಮನೆ ತಲುಪಿದೆ

ಒಂದು ಕೈಯಲ್ಲಿ ವಾಕರ್
ಇನ್ನೊಂದರಲ್ಲಿ ಪೈಪು
ಹಿಡಿದು
ಸಸಿ ಮಕ್ಕಳಿಗೆ ನೀರು
ಹನಿಸುತ್ತಿರುವ

ಅಮ್ಮನನ್ನು ಕಂಡಿದ್ದೇ
ಈಗ ಎಲ್ಲದಕ್ಕೂ
ಬೇರೆಯದೇ ಬಣ್ಣ
ಬಂದಿದೆ

***

ನಗು ನೀನು

ಎಲ್ಲ ಮರೆತಿರೆ ನೀನು
ಇನ್ನು ಕಾಡುವುದಿಲ್ಲ
ಮೇಘ, ಕಪೋತ
ಸಂದೇಶಗಳ ತರುವ
ನಿರೀಕ್ಷೆಯಿಲ್ಲ

ಎದೆಯೆ ಬತ್ತಿರುವಾಗ
ಕಣ್ಣಿಗೆ ಹೊಳಪಿಲ್ಲ
ಭಾವ ಸತ್ತಿರುವಾಗ
ನುಡಿಯಲೇನೂ ಇಲ್ಲ

ಇಲ್ಲಗಳ ಸಂತೆಯಲಿ
ಇನ್ನು ಕೇಳುವುದೇನು

ನಂಜು ನುಂಗುವೆ ನಾನು
ನೋವ ಸಂಕಲೆ ಮುರಿದು
ನಗು ನೀನು
ನನ್ನನೂ ಮರೆತು ನಿನ್ನ ನೀ
ಮರೆತು
ನಗು ನೀನು !
*** ಡಾ. ಗೋವಿಂದ ಹೆಗಡೆ

govind-hegade

 

 

 

 


ಬುದ್ಧ ನ ಕೊನೆಯ ಊಟ

ಬುದ್ಧನ ಸಾವು
ಅದು ಸಾವಲ್ಲ
ಜಗಕ್ಕೆ ಸಾರಿದ ಬದುಕ ಪಾಠ
ಬದುಕ ಗೇಯತೆ ಓಘ ಮೀರದೆ ಸಾಗಿ
ಹಂತ ಹಂತವ ದಾಟಿ
ಸಾವಕಾಶದ ನಿಲುಗಡೆ.

ನಿಷ್ಕಲ್ಮಶ ಮನದಿ ಅತಿಥ್ಯವ ನೀಡಿ
ತನಗೆ ತಿಳಿಯದೆ ವಿಷವ ಉಣಿಸಿ
ತಾನೆ ಸತ್ತಂತಾದ ಆ ಬಡ ಭಿಕ್ಷು.
ವಿಷ ಅಣಬೆಯ ಊಟ ಪಡೆದ ಬುದ್ಧಿ
ಕೃತಜ್ಞತೆಯ ನೋಟ ಬೀರಿ ವಾಪಾಸಾದ

ಕೊಂಚ ಹೊತ್ತು ಸರಿದು ಇದ ತಿಳಿದ ಬಡವ
ಕಂಗಲಾಗಿ ಓಡೋಡಿ ಬಂದ ಬುದ್ಧನ ಬಳಿ
ತಪ್ಪಾಯ್ತು ಗುರುದೇವ 'ತನಗೆ ತಿಳಿಯದೆ
ವಿಷ ಅಣಬೆಯ ಪದಾರ್ಥ ಮಾಡಿ ಬಡಿಸಿಬಿಟ್ಟೆ'
ಎನ್ನ ಮಹಾಪರಾಧವ ಮನ್ನಿಸಿ.
ಸಾವಿಗೆ ಖುಷಿಪಟ್ಟ ಆ ಧೀರ
ಎಳ್ಳಷ್ಟೂ ವಿಚಲಿತನಾಗದೆ ಹೀಗೆಂದ-

ತನ್ನ ಹೆತ್ತಾಗ ತಾಯಿ ನಿಷ್ಕಲ್ಮಶ ಮನದಿ 
ಹಾಲೂಡಿ ಹೊಟ್ಟೆ ತುಂಬಿಸಿದ್ದಾಳೆ
ಈಗಲೂ ಅಷ್ಟೆ ನೀನು ನನ್ನ ಹಸಿವು ತಣಿಸಲು
ನಿಷ್ಕಲ್ಮಶ ಮನದಿ ಆತಿಥ್ಯ ನೀಡಿರುವೆ
ಅದು ವಿಷ ಆಗಿದ್ದಲ್ಲಿ ನಿನ್ನ ತಪ್ಪಿಲ್ಲ
ತಿಳಿಯದೆ ಆಗಿದ್ದಕ್ಕೆ ನೀನು ಹೊಣೆಯಲ್ಲ
ಹುಟ್ಟುವಾಗ ತಾಯಿ ಹೇಗೆ ಉಣಿಸಿದಳೋ
ಅದೇ ಭಾವದಿ ಈಗ ನೀನು ಉಣಿಸಿರುವೆ
ಹೊಟ್ಟೆ ತುಂಬಾ ಉಂಡು ಸಾಯುವ ನಾನು ಧನ್ಯ.

ನಮ್ಮ ನಡುವೆ ಇನ್ನೂ
ಜೀವಂತವಾಗಿರುವ ಬುದ್ಧಿ ನಿಗೆ
ಇಲ್ಲಿಗೆ ಬದುಕು ಕೊನೆಯಾಗಲಿಲ್ಲ
ಬದುಕು ಪ್ರಾರಂಭವಾಯಿತು ಅಷ್ಟೇ! 

ಸಂಗೀತ ರವಿರಾಜ್

Sangeetha

 

 

 

 

 



ಏನು ಗೊತ್ತು…?

ಎದೆಯ ಅಳಲನ್ನೆಲ್ಲ
ಹೀರಿ ಹರಿದು
ಹಗುರಾಗಿದ್ದೇನೆಂದು
ಬೀಗುವ ಮಳ್ಳು ಕಣ್ಣಿಗೇನು  ಗೊತ್ತು
ಎದೆಯೊಳಗಿನ ಗುಡ್ಡೆ 
ಹರಿವಾದರೆ 
ಪ್ರಳಯವಾಗುವ ಗುಟ್ಟು

ಮುಚ್ಚಿಮುಚ್ಚಿ ತೆರೆದು
ಅಂದಗೊಳ್ಳುವೆನೆಂದುಕೊಂಡ
ಮುಗ್ಧ ರೆಪ್ಪೆಗಳಿಗೇನು ಗೊತ್ತು
ಕುಕ್ಕುವ ಕೊಕ್ಕುಗಳಿವೆ
ಲೆಕ್ಕವಿಲ್ಲದಷ್ಟು

ನಾ ನಿದ್ದೆಗಳನ್ನೆಲ್ಲ ಬಳಿದು
ನೆನಪ ಮೂಟೆಯ ಕೆಳಗೆ
ಅಡವಿಟ್ಟಿದ್ದೇನೆಂದು
ಇರುಳು ಹೆಣೆದುಕೋಂಡು
ಮಲಗಿಸಿದೆನೆಂದು
ಬೆನ್ನುತಟ್ಟಿಕೊಳ್ಳುವ
ಎವೆಗಳಿಗೇನು ಗೊತ್ತು..?

-ಪ್ರೇಮಾ ಟಿ ಎಮ್ ಆರ್


ನನ್ನವಳು ನನ್ನವಳು
ವಯಸ್ಸಿನಲಿ ಸಮನಿವಳು
ನನ್ನನು ಕಂಡರೆ ಮುದ್ದಿಸುವಳು
ದಿನ ತಪ್ಪದೇ ನನ್ನ ಆಲಂಗಿಸುವಳು

ಕ್ಲಾಸಲಿ ಆಗಾಗ ಹತ್ತಿರ ಬರುವಳು
ಒಡನೇ ಗುರುಗಳ ಮಾತಿಗೆ ಓಡುವಳು
ರಾತ್ರಿಯ ಮೆಸೇಜಿಗೆ ಹತ್ತಿರ ಸುಳಿಯಳು
ಬೆಳಗಿನ ಜಾವ ಬಿಟ್ಟೇ ಹೋಗಳು

ಇವಳ ಅತಿಯಾದ ಪ್ರೀತಿ ನನಗೆ ಫಜೀತಿ
ತಂದೆ ತಾಯಿ ಬೈಯ್ದರೂ ಕೇಳಳು
ಹಗಲಲಿ ಸುಳಿಯಳು ರಾತ್ರಿ ಮರೆಯಳು
ರಾತ್ರಿಯ ಕನಸಿಗೆ ಕಾರಣ ಇವಳು

ಪರೀಕ್ಷಾ ಸಮಯದಿ ಗದರುವೆನು
ಮತ್ತೆ ಅವಳಿಗೆ ಸೋಲುವೆನು
ನನ್ನಯ ಪ್ರೀತಿಯ ಹುಡುಗಿಯಿವಳು
ಅವಳೇ ನನ್ನಯ ಪ್ರೀತಿಯ "ನಿದ್ರಾದೇವಿ"
-ಚನ್ನಬಸಪ್ಪ ಶ ಉಪ್ಪಿನ

channabasappa-uppin

 

 

 

 


ನಿನಗಾಗಿ 
ಅಲಂಕಾರ ನಿನಗಾಗಿ 
ಈ ವೈಯಾರ ನಿನಗಾಗಿ 
ಕುಡಿನೋಟದ ಮಿಂಚು 
ಬೆಳಕು ಹರಡಿದೆ ನಿನಗಾಗಿ

ತಬ್ಬಿಬ್ಬಾಳಾದೆ ಮತ್ತೆ 
ತಬ್ಬಿಕೊಳ್ಳಲು ನೀನು 
ಮತ್ತೇರಿದಂತೆ ತಲ್ಲಣ 
ಮುತ್ತಿಡಲು ನೀನು

ಸೆರಗಿನ ಅಂಚು ನಾಚುತಿದೆ 
ಕೈಬಳೆ ಕಾಯುತಿದೆ 
ಮಲ್ಲಿಗೆ ಮೆಲ್ಲ ಪರಿಮಳ
ಬೀರಿದೆ  ನಿನಗಾಗಿ

ದೂರ ಕುಳಿತು ಕಣ್ಣಲಿ ಕರಿಯಲೇಕೆ
ಬರಬಾರದೇ ಸನಿಹಕ್ಕೆ 
ಇನ್ನೂ ಕಾಯಬೇಕೆ ಒಲವಿಗಾಗಿ 
ಸ್ವಾಗತಿಸಿದೆ ತನು ಮನ ನಿನಗಾಗಿ

ಜಹಾನ್ ಆರಾ

jahanara-hussain

 

 

 

 


*ಕ್ರೂರಿಯಲ್ಲ ಈ ಜಗದ ದೇವ*


ಸಂಜೆಯಾಗುವ ಮುನ್ನ
ಸಂಜೆಯಾಯಿತು ಜಗಕೆ,
ಕರಿಮೋಡ ಚಪ್ಪರವು ಹಾಸಿ..!
ಮೂಡಣ ದಿಕ್ಕಿಗೆ ತಂಪಿನರಿವಾಯ್ತು ಮೆಲ್ಲ
ಪಡುವಣದ ಮೆಲುಗಾಳಿ ಬೀಸಿ‌..!!

ಬಾಯ್ತೆರೆದು ಕೂತಿರುವ
ಹಕ್ಕಿಗಳು ಹಾರಿ,
ಹರುಷವನು ಸೂಸಿದವು
ಕೂಗಿ..!
ದಣಿದಿದ್ದ ಜೀವಿಗಳು
ಜಿಗಿದವು ಜಂಭದಿ,
ವರುಣ ದೇವನ ವರದ
ಸೂಚನೆಗೆ ಬೀಗಿ..!!
 
ಒಣಗಿದ ಎಲೆಗಳು,
ಸೊರಗಿದ ತೊರೆಗಳು,
ಮರಳಿ ಪಡೆದವು ಕಳೆದ
ಸಮ್ರದ್ಧ ಜೀವ..!
ಕೋಟಿ ಜೀವಕು ಒಮ್ಮೆ
ದೈನ್ಯತೆಯು ಮೂಡಿತು,
ಕ್ರೂರಿಯಲ್ಲ ಈ ಜಗದ ದೇವ..!!

ಮುಸಕಿರುವ ಗುಡಿಸಲ
ಅನ್ನದಾತನು ಎದ್ದ,
ಮರೆತು ತಾ ಕಂಡ 
ಕನಸಿನ ತಾಣ..!
ಕಣ್ಣೆದುರೆ ಕಂಡ ಅವನ ಸ್ವರ್ಗವನು,
ಮಳೆದುಂಬಿದ ಭುವಿಯ ಸೌಂದರ್ಯ ಕ್ಷಣ..!!

ಎಲ್ಲುಂಟು ಈ ಸುಖ,
ಎಲ್ಲುಂಟು ಈ ಭವ,
ಜೀವ ಜಂತುಗಳು ಪಡೆದವು ಸಂತಸ..!
ಏಕಕಾಲದಿ ಈ ವರವನೀಡಿದ
ಆ ನಿಜದೇವರ ಶಕ್ತಿ
ಶಾಶ್ವತ..!!

ಗೌತಮೀಪುತ್ರ ಸುರೇಂದ್ರ ಗೌಡ (ಜಿಎಸ್ಜಿ)


   ಸಾಗಿಬಿಡು  ಸುಮ್ಮನಿರದೆ :-
ಹೆದರಿಸುವ  ಕತ್ತಲೆಗೆ 
ಬೆದರದಂತೆ  ನಡೆದುಬಿಡು 
ಕಂಗಳೊಳಗಿನ ಕನಸೇ  ದಾರಿ  ತೋರಿತು .

ಸಂಕಟವೆಂದು  ನರಳುವ 
ಮನಸನ್ನೊಮ್ಮೆ  ಒಳಗಣ್ಣ 
ತೆರೆದು  ನೋಡು  ಸಂತಸದ  ಝರಿಯೊಂದು  ಕಂಡೀತು .

ಬದುಕಿನ  ಹಾಳೆಯ ಮೇಲೆ 
ಈಗಾಗಲೇ  ಗೀಚಿದ  ಸಾಲುಗಳ 
ಮರೆತು  ನೋಡು  ಶುಭ್ರ  ಜೀವನದ  ಕಾನನ ಕಂಡೀತು .

ಅನ್ಯರ  ನೋಡಿ  ನರಳುವುದ  ಮರೆತು 
ಒಂಟಿ  ಎನ್ನುವ  ಭಾವ  ಮರೆತು 
ಬದುಕನ್ನೊಮ್ಮೆ  ಬಾಚಿ  ನೋಡು  ಬೆರಗಿನ 
ಹರುಷ  ತುಂಬಿದ  ಹಾಲುಬೆಳದಿಂಗಳು  ಇಣುಕಿತು .

ಬರೀ  ನೋವೊಂದೇ  ಇಲ್ಲ  ಜೀವನದಲ್ಲಿ 
ನೋವ  ನೀಡುವ  ಮುಳ್ಳುಗಳ 
ದಾಟಿ  ಮುಂದೆ  ನೋಡು 
ನಲಿವ  ಹರಡುವ  ಸುಮಗಳ ಸ್ಪರ್ಶ ತಾಕೀತು .

-ಪ್ರವೀಣಕುಮಾರ್  ಗೋಣಿ 

Praveen Goni

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
jahanara kolur
jahanara kolur
6 years ago

ಕಾವ್ಯಧಾರೆ ಸುಂದರವಾಗಿದೆ.

ನನ್ನ ಕವನ ಪ್ರಕಟಿಸಿದಕ್ಕೆ ಧನ್ಯವಾದಗಳು 

 

1
0
Would love your thoughts, please comment.x
()
x