ಪುನೀತಭಾವ: ಸತೀಶ್ ಶೆಟ್ಟಿ ವಕ್ವಾಡಿ.

satish-kumar-shetty
 

ಸೂರ್ಯನಿಗೆ ಆಗಷ್ಟೇ ಬೆಳಗಾಗಿತ್ತು. ಹಕ್ಕಿಗಳ ಚಿಲಿಪಿಲಿ ಇಲ್ಲದ್ದಿದ್ದರೂ ಡಿಸೆಂಬರ್ ತಿಂಗಳ ಚುಮು ಚುಮು ಚಳಿಗೆ ಮುಂಜಾನೆ ಆಹ್ಲಾದಕರವಾಗಿತ್ತು. ಶೀತಗಾಳಿಗೆ ಮೈಯೊಡ್ಡಿ ಮಂಜಿನಹನಿಗಳನ್ನು ಹೊತ್ತ ಹುಲ್ಲಿನ ಮೇಲೆ ಬರಿಗಾಲಿನಲ್ಲಿ  ನೆಡೆಯುವುದೇ ಒಂದು ಅನನ್ಯ ಅನೂಭೂತಿ.  ಹಾಗೆ ಹಲ್ಲಿನ ಜೊತೆ ಜಗಳಕ್ಕೆ ಬಿದ್ದ ಬ್ರಷ್ ನೊಂದಿಗೆ ಕಾದಾಡುತ್ತ ಮನೆ ಎದುರಿನ ಗದ್ದೆಯ ಅಂಚಿನಲ್ಲಿ ಹೆಜ್ಜೆಹಾಕುತ್ತಿದ್ದೆ.  ಬೆಂಗಳೂರಿನಂತೆ ಇಲ್ಲಿ ತರಕಾರಿಯವನ ಬೊಬ್ಬೆ ಇಲ್ಲ.  ಕಸದವಳ ಶೀಟಿ ಸ್ವರವಿಲ್ಲ, ಸ್ಕೂಲ್ ವ್ಯಾನಿನ ಕರ್ಕಶ ಹಾರ್ನಿನ ಮಾರ್ಧನಿ ಇಲ್ಲ. ಆಗಷ್ಟೇ ಕೊಯ್ಲು ಮಾಡಿದ ಗದ್ದೆಯಲ್ಲಿ ಮೇಯಲು ಕಟ್ಟಿಹಾಕಿದ ದನಗಳ ಕೊರಳ ಗಂಟೆಯ ಸಡ್ಡು ಬಿಟ್ಟರೆ ಬೇರೆಲ್ಲ ಮೌನ ಮೌನ.

ಹೌದಲ್ಲ ಈ ವಾತಾವರಣದಲ್ಲಿ ಏನೋ ಮಿಸ್ಸಾಗಿದೆಯಲ್ಲ, ಏನದು ? ನಮ್ಮ ಹಳ್ಳಿಯ ಮುಂಜಾವು ಪರಿಪೂರ್ಣವಾಗಲು ಯಾವುದೋ ಒಂದರ ಗೈರು ಎದ್ದು ಕಾಣುತ್ತಿತ್ತು.  ಮನಸ್ಸಿನ ಯೋಚನೆಯ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದು ಮನೆಹತ್ತಿರದ ನಂದಿಕೇಶ್ವರ ದೈವಸ್ಥಾನದ ಮೈಕು. ಹೌದಲ್ಲ ಮೈಕು ಇಂದು ಸ್ತಬ್ದವಾಗಿದೆ, ಬೆಳಗಿನ ಈ ಹೊತ್ತು ಅಲ್ಲಿ ಭಕ್ತಿಗೀತೆ ಮೊಳಗಲೇಬೇಕಾಗಿತ್ತು, ಈಗೇಕೆ ನಿಂತು ಹೋಗಿದೆ ? ಎಂತಹ ಪರಿಸ್ಥಿತಿಯಲ್ಲೂ ದೈವಸ್ಥಾನದ ಬೆಳಗಿನ ಸುಪ್ರಭಾತ ಮತ್ತು ಭಕ್ತಿಗೀತೆ ನಿಂತ ನೆನೆಪಿಲ್ಲ. ನಾವು ಚಿಕ್ಕವರಿದ್ದಾಗ ನಮ್ಮನ್ನು  ಎಬ್ಬಿಸುತ್ತಿದ್ದುದು ದೈವಸ್ಥಾನದ ಮೈಕೇ !. ಬಹುಶ: ಮೈಕು ಹಾಳಾಗಿರಬಹುದು, ಸಂಜೆ ರೆಪೇರಿಮಾಡಿದರಾಯಿತು ಅಂದುಕೊಂಡು, ಹಾಗೆ ಮಂಜಿನ ಹನಿಗಳೊಡನೆ ಚೆಲ್ಲಾಟವಾಡುತ್ತ ಹೆಜ್ಜೆ ಹಾಕುತ್ತಿದ್ದೆ.
" ಪುನೀತಾ ಯಾವಾಗ ಬಂದಿದ್ದು " ಅಂತ ದನ ಮೇಯುಸುತ್ತಿದ್ದ ಪಕ್ಕದಮನೆ ಸುಬ್ಬಜ್ಜಿ ಪ್ರಶ್ನೆಗೆ "ಬೆಳ್ಳಿಗ್ಗೆ" ಅಂತ ಉತ್ತರಿಸಿ ಕೆರೆದಂಡೆ ಹತ್ತಿರ ಬಂದಾಗ ನಮ್ಮನೆ ಕೆಲಸದ ರಾಮ ಎದುರು ಪ್ರತ್ಯಕ್ಷನಾದ.  ನನ್ನನ್ನು ನೋಡಿದವನೇ ಕನ್ನಡದ ಕೋಟ್ಯಾಧಿಪತಿಯಲ್ಲಿ ಕೋಟಿಗೆದ್ದವನಂತೆ, "ಒಹ್ ಪುನೀತಣ್ಣ, ಏನು ಸಡನ್ನಾಗಿ ಬಂದದ್ದು, ಬರೋ ವಿಸ್ಯ ಮನೆಯಲ್ಲಿ ಯಾರು ಹೇಳಲೇ ಇಲ್ಲ.  ಮತ್ತೆ ಎಷ್ಟು ದಿನ ಊರಲ್ಲಿ ಟೆಂಟು ನಿಮ್ಮದು " ಅಂತ ಲೆಕ್ಕಾಚಾರದ ಪ್ರಶ್ನೆ ಹಾಕಿದ. ಅವನಿಗೆ ನಾನು ಊರಿನಲ್ಲಿ ಇದ್ದಷ್ಟು ದಿನ ಹಬ್ಬ. 

'ಅದ್ಸರಿ, ದೈದ್ಮನಿ ಮೈಕಿಗೆ ಎನಿತೋ, ಸುಪ್ರಭಾತ ಬರ್ತಾ ಇಲ್ಲ" ಅಂತ ರಾಮನ ಹತ್ತಿರ ನೇರ ವಿಷೆಯಕ್ಕೆ ಬಂದೆ. " ಓ ಅದಾ, ನಿಮಗೆ ವಿಷ್ಯ ಗೊತ್ತಿಲ್ವ " ಅಂದ ರಾಮ ಅದೇನೋ ರಹಸ್ಯ ಬಿಚ್ಚಿಡುವವಂತೆ ಪೀಠಿಕೆ ಹಾಕಿದ. " ಗೊತ್ತಿದ್ರೆ ನಿನ್ಹತ್ರ ಕೇಳ್ತಿದ್ದನ ? " ಅಂತ ನನ್ನ ಎಂದಿನ ಗಡಸು ಧ್ವನಿಯ ಮಾತಿಗೆ ರಾಮ " ಸರಿ ಬಿಡಿ, ಬೆಳ್ಬೆಳಿಗ್ಗೆ ಯಾಕೆ ಬಿಪಿ ಜಾಸ್ತಿ ಮಾಡ್ಕೊಳ್ತಿರಾ, ಅದು ನಮ್ಮ ಸಂಜು ಶೆಟ್ರು ಮನೆ ಹೊರಕ್ಕೆ ಕಾಲು ಹಾಕದೆ ತಿಂಗಳಾಯಿತು, ಅದಕ್ಕೆ ಮೈಕಿಕೆ ಈಗ ಸಾರ್ವತ್ರಿಕ ರಜೆ " ಅಂದ. ಆತನ ಉತ್ತರ ನನ್ನನ್ನು ಆತಂಕಗೊಳಿಸಿತು.  ಏನಾಯಿತು  ಸಂಜು ದೊಡ್ಡಪ್ಪಗೆ ? ಯಾರು ಇಲ್ಲಿತನಕ ಯಾರು ಏನು ಹೇಳಿಲ್ಲವಲ್ಲ ?  "ಅದ್ಸರಿ ರಾಮ, ಅವ್ರು ಚೆನ್ನಾಗೆ ಇದ್ದರಲ್ಲ ಏನಾಯಿತೋ " ಅಂತ  ಮರು ಪ್ರಶ್ನೆ ಎಸೆದೆ. ಆಗ ರಾಮ ಸಾವಕಾಶವಾಗಿ " ಹಂಗೇನಿಲ್ಲ, ಅಪ್ಪ ಮಕ್ಕಳ ಜಗಳ, ಸಂಜು ಶೆಟ್ರ ಅಸಹಕಾರ, ಮನೆಯಲ್ಲಿ ಮುಷ್ಕರ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅಪ್ಪಯ್ಯನವರನ್ನು ಕೇಳಿ, ನನ್ನ ಹೊಟ್ಟೆ ತಾಳಹಾಕ್ತಾ ಇದೆ. ತಡ ಮಾಡಿದ್ರೆ ನಿಮ್ಮ ಅಮ್ಮನ ಹತ್ತಿರ ಬೈಸಿಕೊಳ್ಳ ಬೇಕು ತಿನ್ನೊಕ್ಕು ಲೇಟಾಗಿ ಬರ್ತಿಯಲ್ಲ ಅಂತ, ಸಂಜೆ ಸಿಗೋಕೆ ಮರೀಬೇಡಿ, ಈ ಬಡವನ ನೋವು ತಿಳಿದಿರಲಿ " ಅಂದವನೇ ಸಂಜೆಯ ಎಣ್ಣೆಗೆ ನನಗೊಂದು ಜ್ಞಾಪನ ನೋಟಿಸ್ಸು  ನೀಡಿ ಬಿರಬಿರನೆ ನಮ್ಮನೆಯತ್ತ ಓಡತೊಡಗಿದ. 

ದೊಡ್ಡಪ್ಪನ ವಿಷಯ ಕೇಳಿದಮೇಲೆ ಮನಸ್ಸು ಕಲ್ಲುಬಿದ್ದ ಕೊಳದಂತಾಯಿತು. ಕೆರೆಯ ನೀರಲ್ಲಿ ಮುಖತೊಳೆದುಕೊಂಡು ಮನೆಯತ್ತ ಹೆಜ್ಜೆಹಾಕಿದೆ. ಅಂದಹಾಗೆ ಸಂಜೀವ ಶೆಟ್ರು ನಮ್ಮ ದೂರದ ಸಂಬಂದಿ. ಅಪ್ಪನಿಗೆ ವರಸೆಯಲ್ಲಿ ಅಣ್ಣ ಆಗಬೇಕು, ಹಾಗಾಗಿ ನಮಗೆ ದೊಡ್ಡಪ್ಪ. ಊರಿಗೆಲ್ಲ ಬೇಕಾದ ಮನುಷ್ಯ. 10 ವರ್ಷ ನಮ್ಮೂರ ಗ್ರಾಮಪಂಚಾಯಿತ್ ಅಧ್ಯಕ್ಷರಾಗಿದ್ದರು, ನಮ್ಮ ನಂದಿಕೇಶ್ವರ ದೈವಸ್ಥಾನದ ಮುಖ್ಯಸ್ಥರು. ಹುಲ್ಲಿನ ದೇವಸ್ಥಾನ ಈಗ ದೊಡ್ಡ ಕಾಂಕ್ರೀಟ್ ಮಟ್ಟಕ್ಕೆ ಏರಿದ್ದು ಇವರ ಶ್ರಮದಿಂದಲೇ. ನಾನು ಬುದ್ದಿಬಂದಾಗಿನಿಂದ ನೋಡುತ್ತಿದ್ದೇನೆ, ದಿನಾ ತಾವೇ ಸ್ವತಃ ಇಡೀ ದೈವಸ್ಥಾನವನ್ನು ಗುಡಿಸಿ, ತೂಳೆದ ಮೇಲೇನೆ ತಮ್ಮ ಬೇರೆ ಕೆಲಸ ಮಾಡೋದು. ಮೈಕಿಗೆ ಕ್ಯಾಸೆಟ್ಟು ತುರುಕಿ ಸುಬ್ಬಲಕ್ಷ್ಮಿಯ ಬಾಯಿಂದ ಸುಪ್ರಭಾತ ಹಾಡಿಸುವುದನ್ನು ಅವರು ಎಂದು ತಪ್ಪಿಸಿರಲಿಲ್ಲ. ಒಂದು ತಿಂಗಳಿಂದ ದೊಡ್ಡಪ್ಪ ದೈವಸ್ಥಾನದ ಕಡೆಗೆ ಹೋಗಿಲ್ಲ ಎಂದರೆ ಏನೋ ದೊಡ್ಡ ರಾದ್ದಂತವಾಗಿರಲೇ ಬೇಕು, ಯಾಕೋ ಮನಸಿಗ್ಗೆ ಎಲ್ಲಿಂದಲೋ ಕಲ್ಲು ಬಂದು ಬೀಳುತಿತ್ತು.

ಮನೆಯಲ್ಲಿ ಅಪ್ಪ ತಾನು ತಿಂಡಿ ತಿಂದು ರಾಮನ ಜೊತೆ ತೋಟದ ವಿಷಯ ಮಾತಾಡುತ್ತಿದ್ದರು.  ಅಮ್ಮ ತಂದಿಟ್ಟ ಹೆಸರುಕಾಳು ಉಪ್ಪಿಟ್ಟು ಯಾಕೋ ಮೊದಲಬಾರಿಗೆ ರುಚಿಸುತ್ತಿರಲಿಲ್ಲ. ದೊಡ್ಡಪ್ಪನ ಜೀವನವನ್ನೇ ಮುಂದಿಟ್ಟುಕೊಂಡು ನನ್ನ ಜೀವನವನ್ನು ರೂಪಿಸಿಕೊಂಡಿದ್ದೆ. ಎಂಬಿಎ ಆದ ಮೇಲೆ ಎಲ್ಲರು  ಕೆಲಸಕ್ಕೆ ಸೇರಿಕೊಳ್ಳು ಅಂತ ಒತ್ತಾಯಿಸುತ್ತಿದ್ದರೆ, ದೊಡ್ಡಪ್ಪಮಾತ್ರ ನಿನ್ನಲಿ ರಾಜನ ಗುಣವಿದೆ, ನೀನು ಇತರರನ್ನು ಆಳಬೇಕೆ ಹೊರತು ಆಳಾಗಬಾರದು, ಹೋಗಿ ಏನಾದರೂ ವ್ಯವಹಾರ ಮಾಡು ಅಂತ ನನ್ನನ್ನು ಬಿಸಿನೆಸ್ ಮಾಡಲು ಪ್ರೇರಣೆ ನೀಡಿದ್ದು. ಇದು ನನ್ನೊಬ್ಬನ ವಿಷಯವಲ್ಲ. ಅವರವರ ಸಾಮರ್ಥ್ಯ ನೋಡಿ ನೀನು ಜೀವನದಲ್ಲಿ ಏನುಮಾಡಬೇಕು ಎಂದು ದಾರಿತೋರಿಸುತ್ತಿದ್ದರು. ಪಿತ್ರಾಜ್ಜಿತವಾಗಿ ಏನು ಬಂದಿಲ್ಲದ್ದಿದ್ದರೂ, ತಾವೇ ಕಷ್ಟಪಟ್ಟು ಸಂಪಾದಿಸಿದ 3 ಎಕ್ರೆ ಜಮೀನಲ್ಲಿ ತಮ್ಮ ಬದುಕು ಕಂಡುಕೊಂಡವರು. ಮಕ್ಕಳಾದ ನವೀನ ಮತ್ತು ನಯನಗೆ ಒಳ್ಳೆ ಶಿಕ್ಷಣಕೊಡಿಸಿ, ಉದ್ಯೋಗಕೊಡಿಸಿ  ಒಳ್ಳೆಯ ಕಡೆ ಮದುವೆಯನ್ನು ಮಾಡಿಸಿದ್ದರು. ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ  ಬದುಕು ಕಂಡುಕೊಂಡರೆ, ಸಂಜು ದೊಡಪ್ಪ, ದೊಡ್ಡಮನ ಜೊತೆ ಎಪ್ಪತ್ತರ ಈ ವಯಸ್ಸಲ್ಲೂ ಬೇಸಾಯ ಮಾಡಿಕೊಂಡಿದ್ದಾರೆ. 

ವೈಯ್ಯಕ್ತಿಕವಾಗಿ ನನಗೆ ಅವರೆಂದ್ರೆ ಪಂಚಪ್ರಾಣ, ಅವರಿಗೆ ನಾನೆಂದೆರೆ ಕೂಡ ಅಷ್ಟೇನೆ.  ಚಿಕ್ಕವನಿದ್ದಾಗ ಚಾಕಲೇಟು ನೀಡುವುದರಿಂದ ಹಿಡಿದು, ಬಿಸಿನೆಸ್ ಮಾಡ್ತೀನಿ ಎಂದಾಗ ಯಾರಿಗೆ ಗೊತ್ತಿಲ್ಲದ ಹಾಗೆ 30  ಸಾವಿರ ನೀಡಿದ ಅವರ ದೊಡ್ಡ ಋಣ ನನ್ನ ಮೇಲಿದೆ.  ಕಾಲೇಜು ಓದಿನ ಕಷ್ಟದ ದಿನಗಳಲ್ಲಿ ಆಗಾಗ ಕಿಸೆಗೆ ನೂರೋ, ಐವತ್ತೋ ತುರುಕಿದ ದುಡ್ಡಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ !. ಅಂತಹ ದೊಡ್ಡಪ್ಪ ಇಂದು ಎಲ್ಲ ಬಿಟ್ಟು ಮನೆಯಿಂದ ಹೊರಗೆ ಕಾಲಿಡಲಾಗದ ಪರಿಸ್ಥಿತಿ ಯಾಕಾಯಿತು ಅಂತ ಮನಸ್ಸು ಯೋಚನೆಗಳ ಸುಳಿಯಲ್ಲಿ ಒದ್ದಾಡುತ್ತಿತ್ತು.

" ಅದೇ ಅಪ್ಪ ಮಕ್ಕಳ ಜಗಳ. ನೀವಿದ್ದಿರಲ್ಲ ಮಕ್ಕಳು ಎಲ್ಲಿ ಹೆತ್ತವರನ್ನು ನೆಮ್ಮದಿಯಾಗಿರಲು ಬಿಡ್ತಿರಿ " ಅಪ್ಪ ಕುಹಕದಿಂದ ಮಾತು ಆರಂಭಿಸಿದರು. ನವೀನ ಮತ್ತು ನಯನ ಬೆಂಗಳೂರಿನಲ್ಲಿ ಹೊಸ ಮನೆ ಕಟ್ಟುತ್ತಿದ್ದರಂತೆ, ಅದಕ್ಕೆ ದುಡ್ಡಿಗಾಗಿ ಸಂಜುಅಣ್ಣನ ಹತ್ತಿರ 3  ಎಕ್ರೆ ಜಾಗ ಮಾರಿ ಬರುವ ದುಡ್ಡಲ್ಲಿ ಪಾಲು ಕೇಳುತ್ತಿದ್ದಾರೆ. ಅದಕ್ಕೆ ಅಣ್ಣ ಒಪ್ಪುತ್ತಿಲ್ಲ.  ಜೀವ ಸವೆಸಿ ಗಳಿಸಿದ ಆಸ್ತಿ ಅದು. ಮಾರಲು ಹೇಗೆ ಮನಸ್ಸು ಬರುತ್ತದೆ ಹೇಳು. ಕಳೆದ ತಿಂಗಳು ಮನೆಗೆ ಬಂದ ಮಕ್ಕಳ ಜೊತೆ ಇದೆ ವಿಷಯಕ್ಕಾಗಿ ದೊಡ್ಡ ಜಗಳವೇ ನೆಡೆದು ಹೋಯಿತು.  ಇತ್ತ ಮಕ್ಕಳು ಕೇಳುತ್ತಿಲ್ಲ, ಅವರದ್ದು ಒಂದೇ ಹಠ, ಆಸ್ತಿ ಮಾರಿ ದುಡ್ಡು ಕೊಡಿ ಅಂತ.  ಒಳ್ಳೆ ಜಾಗ ಬೇರೆ. ಮೂರು ಎಕ್ರೆಗೆ 50 ರಿಂದ 60 ಲಕ್ಷ ಸಿಗುತ್ತೆ, ಹೆಚ್ಚುಕಡಿಮೆ ತಿಮ್ಮಣ್ಣ ಭಟ್ರ ಮಗ ರಘು ಜೊತೆಗೆ ಅಕ್ಕ ತಮ್ಮ ವ್ಯವಹಾರ ಕುದುರಿಸಿದಂತಿದೆ. ರಘು ಬೇರೆ ರಿಯಲ್ ಎಸ್ಟೇಟ್ ಕುಳ, ನಾಳೆ ಎಲ್ಲ ಸೈಟ್ ಮಾಡಿ ಮಾರುತ್ತಾನೆ. ಪಾಪ ಸಂಜು ಅಣ್ಣ ತುಂಬ ಕುಗ್ಗಿ  ಹೋಗಿದ್ದಾರೆ. ಹೆಚ್ಚುಕಡಿಮೆ ಒಂದು ತಿಂಗಳಾಯಿತು ಅಣ್ಣ ಮಂಕಾಗಿ, ಯಾರ ಹತ್ರಾನೂ ಮಾತಿಲ್ಲ ಕಥೆಯಿಲ್ಲ ".  ಅಪ್ಪನ ಸುಧೀರ್ಘ ವಿವರಣೆಗೆ ಅಮ್ಮ ಉಪಸಂಹಾರ ಮಾಡಿದಳು " ಬ್ಯಾಂಕಲ್ಲಿ ಸಾಲಮಾಡಿ ಮನೆ ಕಟ್ಟಿ ಅಂದ್ರೆ, ಅವರು ಒಪ್ಪುತ್ತಿಲ್ಲ, ಸಾಲಮಾಡಿ ಯಾಕೆ ಬಡ್ಡಿ ಕಟ್ಟಬೇಕು, ಅಪ್ಪನಿಗೆ ವಯಸ್ಸಾಗಿದೆ, ಇನ್ನೇನು ಬೇಸಾಯ ಮಾಡ್ತಾರೆ, ಅಪ್ಪನ ಕಾಲದ ಮೇಲೆ ಆ ಜಾಗ ನಮಗೆ ತಾನೇ ? ಆದ್ದರಿಂದ ಜಾಗ ಮಾರಿ ಪಾಲು ಕೊಟ್ಟರೆ ನಾವು ನೆಮ್ಮದಿಯಾಗಿ ಬದುಕಬಹುದು. ಅಪ್ಪ ಅಮ್ಮ ಬೇಕಾದರೆ ಬೆಂಗಳೂರಿಗೆ ಬರಲಿ ಅಥವಾ ಊರಲ್ಲೇ ಇರಲಿ. ಖರ್ಚಿಗೆ ನಾವಿದ್ದೇವೆ ಅಂತ ನಯನ ಮತ್ತು ನವೀನರ  ವಾದ, ಏನ್ ಮಕ್ಕಳೋ, ಸಾಲಮಾಡಿ ಮನೆ ಕಟ್ಟಬಾರದಾ ? ಇಬ್ಬರಿಗೂ ಒಳ್ಳೆ ದುಡಿಮೆ ಇದೆ " ಮಾತು ಮುಗಿಸಿದ ಅಮ್ಮನಲ್ಲಿ ರೋಷ ತಾಂಡವವಾಡುತ್ತಿತ್ತು.

ಹೆಜ್ಜೆಗಳು ಯಾಕೋ ಭಾರ ಅನಿಸುತ್ತಿತ್ತು, ಯಾವತ್ತೂ ಹೀಗಾಗಿರಲಿಲ್ಲ. ಊರಿಗೆ ಬಂದಾಗೆಲ್ಲ ಸಂಜು ದೊಡ್ಡಪ್ಪನ ಮನೆಗೆ ಅವರದ್ದೇ ಜಮೀನಿನಲ್ಲಿ ಹಾದುಹೋಗುವಾಗ ಆಗುತ್ತಿರುವ ಅನುಭೂತಿಯೇ ಬೇರೆ.  ಮಕ್ಕಳಿಗಿಂತ ಹೆಚ್ಚಾಗಿ ದೊಡ್ಡಪ್ಪ ಈ ಜಮೀನನ್ನು ನೋಡಿಕೊಂಡಿದ್ದರು, ಊರಲ್ಲಿ ಯಾರಿಗೂ ಸಾಧ್ಯವಾಗದ ವರ್ಷಕ್ಕೆ ಮೂರು ಬೆಳೆ ಇವರ ಜಮೀನಿನಲ್ಲೂ ಮಾತ್ರ ನಿರಾತಂಕವಾಗಿ ಆಗುತ್ತಿತ್ತು. ಖಾಲಿ  ಗುಡ್ಡವಾಗಿದ್ದ ಒಂದು ಎಕ್ರೆ ಜಾಗವನ್ನು ಸುಬ್ಯಯ ಆಚಾರರಿಂದ ಖರೀದಿಸಿ ಎರಡು ವರ್ಷ ಸತತವಾಗಿ ಕಡಿದು ಗದ್ದೆಯಾಗಿಸಿದ ಸಾಹಸ  ಇಡೀ ತಾಲ್ಲೂಕಿಗೆ ಸುದ್ದಿಯಾಗಿತ್ತು. ಅದಕ್ಕಾಗಿ ಅವ್ರಿಗೆ ಜಿಲ್ಲಾ ಮಟ್ಟದ ಕೃಷಿಕ ಪ್ರಶಸ್ತಿ ಕೂಡ ಬಂದಿತ್ತು.  ಈಗ ಅದೇ ಜಾಗದಲ್ಲಿ ಅವರು ಬೆಳೆಸಿದ ತೆಂಗು ಮತ್ತು ಅಡಿಕೆ ಮರಗಳ ನಡುವೆ ನೆಡೆದು ಹೋಗುವಾಗ ಯುದ್ಧದಲ್ಲಿ  ಸೋತು ಶರಣಾದ ಅಸಹಾಯಕ ಸೈನಿಕರ ನಡುವೆ ಹೆಜ್ಜೆ ಹಾಕಿದಂತಹ ಅನುಭವ ನನ್ನ ಪಾಲಿಗೆ. ಆದರೆ ದೊಡ್ಡಪ್ಪನ ಮನೆ ಎದುರಿನ ಮೂರು ಎಕ್ರೆ ಜಮೀನು ಇಷ್ಟೆಲ್ಲ ರಾದ್ದಂತದ ನಡುವೆಯೂ ಹಸುರಿನಿಂದ ಕಂಗೊಳಿಸುತ್ತಿತ್ತು.

"ಏನೋ ಪುನೀತ, ಬೆಳ್ಳಿಗೆ ಬಂದದ್ದಾ, ಕಾರು ತಂದಂಗಿಲ್ಲ, ಬಸ್ಸಲ್ಲಿ ಬಂದ್ಯಾ " ಎಂದು ಪಾರು ದೊಡ್ಡಮ್ಮ  ಸ್ವಾಗತಿಸಿದರು. 
"ಹಾಂ, ಇಲ್ಲಿ ಉಡುಪಿಯಲ್ಲಿ ಒಂದು ಆಫೀಸ್ ಮಾಡೋಣ ಅಂತ ಡಿಸೈಡ್ ಮಾಡಿದ್ದೆ. ಅದಕ್ಕೆ ಜಾಗ ನೋಡಲು ಬಂದಿದ್ದೆ. ಅಂತ ಹೇಳಿ ಸೀದಾ ಸಂಜು ದೊಡ್ಡಪ್ಪನ ರೂಮಿನತ್ತ ಹೆಜ್ಜೆ ಹಾಕಿದೆ.  

ನಿಸ್ತೇಜ ಮುಖ ಹೊತ್ತು ಕುಳಿತಿದ್ದ ದೊಡ್ಡಪ್ಪನಿಗೆ ನನ್ನ ನೋಡುತ್ತಿದ್ದಂತೆ ಅಳುತಡೆಯಲಾಗಲಿಲ್ಲ. ಚಿಕ್ಕಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದರು. ಒಂದಷ್ಟು ಹೊತ್ತು ನಾನು ಮೌನವಾಗಿದ್ದೆ. ದೊಡ್ಡಪ್ಪ ಉಕ್ಕಿಬರುತ್ತಿದ್ದ ಅಳುವಿನ ಪ್ರವಾಹಕ್ಕೆ ತಡೆಯೊಡ್ಡುವ ಸಾಹಸಕ್ಕೆ ಇಳಿದಾಗ ನಾನು ಬಾಯಿತೆರೆದೆ. " ಬಿಟ್ಟು ಬಿಡಿ ದೊಡ್ಡಪ್ಪ, ನಿಮ್ಮ ಮಕ್ಕಳು ತಾನೇ, ಎಷ್ಟು ವರ್ಷ ಕಷ್ಟ ಪಡ್ತಿರಾ, ಇನ್ನಾದರೂ ಆರಾಮವಾಗಿರಿ, ಮಕ್ಕಳು ನೋಡಿಕೊಳ್ಳುತ್ತಾರೆ, ನಿಮ್ಮ ಕಾಲಾನಂತರ ಹೇಗಿದ್ದರೂ ಇದೆಲ್ಲ ಅವರಿಗೆ ತಾನೇ. ಮನಸ್ಸು ಗಟ್ಟಿಮಾಡಿಕೊಳ್ಳಿ. "  ನನ್ನ ಮಾತು ಮುಗಿಯುವ ಮೊದಲೇ ನನ್ನಿಂದ ಈ ಮಾತು ನಿರೀಕ್ಸಿಸದ ದೊಡ್ಡಪ್ಪನ ಪಿತ್ತ ನೆತ್ತಿಗೇರಿತು. " ನೀನು ಅವರ ಪರನಾ… ನೀವೆಲ್ಲ ಒಂದೇ ಕಣೋ,ಹೇಗೋ ಮಾರಲಿ ಇದೆಲ್ಲಾ.  ನನ್ನ ಮಕ್ಕಳು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಅದಕ್ಕೆ ಕಾರಣ ಈ ಭೂತಾಯಿ ನೀಡಿದ ಭಿಕ್ಷೆ.  ಈಗ ನಮ್ಮ ಸುಖಕ್ಕಾಗಿ ಬದುಕು ನೀಡಿದ ಭೂಮಿಯನ್ನು ಕೊಲ್ಲಬೇಕಾ ? ನನ್ನನು ನಂಬಿಕೊಂಡು ಆಕಾಶದೆತ್ತರಕ್ಕೆ ಕೈಚಾಚಿ ನಿಂತಿರುವ ಆ ಅಡಿಕೆ ತೆಂಗು ಮರವನ್ನು ನೋಡು.  ಅವುಗಳಿಗೆ ನಾನು ಮೋಸಮಾಡಬೇಕಾ ? ನಾನು ಬದುಕಿರುವವರೆಗೂ ಜಾಗ ಮಾರಲು ಬಿಡೋಲ್ಲ, ಹಾಗೇನಾದರು ಬಲವಂತವಾಗಿ ಜಾಗ ಮಾರಿದರೆ ನನ್ನ ಹೆಣ ನೋಡಬೇಕಾಗಿತ್ತೆ. ಹೇಳು ನಿನ್ನ ಫ್ರೆಂಡ್ಗೆ " ಯಕ್ಷಗಾನದ ಗಧಾಯುದ್ದ ಪ್ರಸಂಗದ ಭೀಮನ ಘರ್ಜನೆಯೆಂತಿತ್ತು ದೊಡ್ಡಪ್ಪನ ಮಾತು.  ನನಗೆ ಮಾತಾಡಲು ಏನು ಉಳಿದಿರಲಿಲ್ಲ.  ನನ್ನ ಮಾತಿನ ಮೇಲೆ ನನಗೆ ಬೇಜಾರಾಯಿತು..  ಆಧುನಿಕ ಮನಸ್ಥಿತಿಯ ನಾವು ನಮ್ಮ ಹಿರಿಯ ತಲೆಮಾರಿನ ಕನಿಷ್ಠ ನಿರೀಕ್ಷೆಗಳಿಗೂ ಬೆಲೆ ನೀಡುತ್ತಿಲ್ಲವಲ್ಲ.  ಇಂದಿನ ಜೀವನ ವ್ಯವಸ್ಥೆಯಲ್ಲಿ ನಾವೆಷ್ಟು ಕ್ರೂರಿಗಳಲಾಗುತ್ತಿದ್ದೆವೆ. ಹಣ, ಯಶಸ್ಸು ಮತ್ತು ಸುಖದ ಬೆನ್ನೇರಿರುವ ನಮಗೆ ಮಾನವೀಯಸಂಭಂದಗಳು ಬರಿ ಮಾತಿಗಷ್ಟೇ ಸೀಮಿತವಾಗಿದೆ.

"ನೋಡು ಪುನೀತ, ಮಾತೆತ್ತಿದರೆ ಸಾಯುವ ಮಾತಾಡುತ್ತಾರೆ. ಹೆತ್ತವರಿಗೆ ಬೆಲೆ ಕೊಡದ ಮಕ್ಕಳು ಇರುವ ಲೋಕದಲ್ಲಿ ನಾವ್ಯಾಕೆ ಬದುಕಬೇಕು ಅಂತಾರೆ. ನಂಗ್ಯಾಕೋ ಹೆದ್ರಿಕೆ ಆಕ್ತಿದೆ. ಏನೋ ಒಂದು ಮಾಡೋ " ದೊಡ್ಡಮ್ಮನ ಮಾತು ಕಣ್ಣಲಿ ನೀರುಜಿನುಗುವಂತೆ ಮಾಡಿತು. "ಸರಿ ದೊಡ್ಡಮ್ಮ ಏನೋ ಒಂದು ಮಾಡ್ತೇನೆ.  ನಾಳೆ ಬರ್ತೀನಿ " ಅಂದವನೇ ಮನೆ ಕಡೆ ಹೆಜ್ಜೆ ಹಾಕಿದೆ.

ಮನಸ್ಸು ತುಂಬಾ ಕದಡಿ ಹೋಗಿತ್ತು. ಜನರೇಶನ್ ಗ್ಯಾಪ್ ಎಂಬ ಭೂತ ನಮ್ಮೆಲ್ಲರ ನೆಮ್ಮದಿಯನ್ನು ಹೇಗೆ ನಮಗೆ ಗೊತ್ತಿಲ್ಲದೇ ಹಾಳುಮಾಡಿಟ್ಟಿದೆ. ಉಡುಪಿಗೆ ಹೋಗಲು ಮನಸ್ಸಾಗಲಿಲ್ಲ. ಹಾಗೆ ಅಪ್ಪನ ಜೊತೆ ಸಂಜು ದೊಡ್ಡಪ್ಪನ ತೋಟಕ್ಕೆ ಬಂದು ಕುಳಿತೆ. ಒಂದಷ್ಟು ಹೊತ್ತು ಅಪ್ಪನ ಜೊತೆ ಮಾತಾಡಿನ ಮೇಲೆ ಮನಸ್ಸು ಒಂದು ಹಂತದ ನಿರ್ದಾರಕ್ಕೆ ಬಂತು. ನವೀನನಿಗೆ ಫೋನು ಮಾಡಿ. "ನಿಮ್ಮ ಜಾಗದ ವಿಷ್ಯ ಮಾತಾಡಬೇಕು, ನಾಳೇನೇ ಊರಿಗೆ ಬಾ" ಅಂದೇ. ಅದಕ್ಕೆ ಆತ " ಯಾಕೋ, ಏನೋ, ಏನಷ್ಟು ಅರ್ಜೆಂಟು, ಎಲ್ಲ ಡಿಸೈಡ್ ಆಗಿಹೋಗಿದೆ ಕಣೋ " ಅಂದೆಲ್ಲ ರಾಗಹಾಕತೊಡಗಿದ. ಮೊದಲೇ ನಾನು ಜಮದಗ್ನಿ.  " ಅದೆಲ್ಲ ಯಾಕೆ, ಬಾ ಅಂದ್ರೆ ಬರಬೇಕು ಅಷ್ಟೇ " ನನ್ನ ಏರಿದ ಧ್ವನಿ " ಸರಿ ಬರ್ತೇನೆ.  ಆದ್ರೆ ಜಾಗ ಮಾರಬೇಡಿ  ಅಂತ ನನಗೆ ಒತ್ತಾಯ ಮಾಡಬಾರದು" ಅಂತ ಫೋನ್ ಕಟ್ಟುಮಾಡಿದ, ದೊಡ್ಡಪ್ಪನ  ತೋಟದ ಹಸಿರು ನಕ್ಕಂತೆ ಬಾಸವಾಯಿತು.

ಪಾರು ದೊಡ್ಡಮ್ಮನ ಟೀ ಇಂದೇಕೋ ಅದ್ಭುತ ಅನ್ನಿಸುತ್ತಿತ್ತು. "ಈ  ಪಾರುಗೆ ಟೀ ಮಾಡೋಕೆ ಬರೋಲ್ಲ ಕಣೋ " ಅಂತ ಪಾರು ದೊಡ್ಡಮ್ಮನ ಕೆಟ್ಟ ಟೀ ಬಗ್ಗೆ ಊರಿಗೆಲ್ಲ ಡಂಗುರ ಸಾರುತ್ತಿದ್ದ ದೊಡ್ಡಪ್ಪ ಇಂದು ಮಾತನಾಡದೆ ದೊಡ್ಡಮ್ಮನ ಟೀ ಯನ್ನು ಮೌನವಾಗಿ ಸಹಿಸಿಕೊಂಡು ನಮ್ಮನೆಲ್ಲಾ  ಅನ್ಯ ಲೋಕದ ಜೀವಿಗಳ ತರಹ ನೋಡುತ್ತಿದ್ದರು. ಮನೆಯ ತುಂಬೆಲ್ಲ ಹರಡಿದ್ದ ಮೌನದ ನಡುವೆ ನಮ್ಮೆಲ್ಲರ ಟೀ ಹೀರುವ ಸದ್ದು, ಮಳೆಗಾಲದ ಮಧ್ಯರಾತ್ರಿಯ ಜೀರುಂಡೆಯ ಧ್ವನಿಯಂತೆ ಇಂಪಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮನಸ್ಸು ನೀರಾಳವಾಗಿತ್ತು.  ಪುನೀತನಾದ ಭಾವ ಮನದ ತುಂಬೆಲ್ಲ ಹರಿದಾಡುತ್ತಿತ್ತು. ನವೀನ ನನ್ನೆಲ್ಲಾ ಮಾತುಗಳಿಗೆ ಒಪ್ಪಿಗೆ ಸೂಚಿಸಿದ್ದ.

ಅಪ್ಪ ಮಾತು ಆರಂಭಿಸಿದರು.
 " ನೋಡು  ಅಣ್ಣ, ಜಾಗ ಮಾರೋಲ್ಲ ಅಂತ ಹಠ ಹಿಡಿಯಬೇಡ.  ಯಾರಿಗಾಗಿ ಮಾರಾಟ ಮಾಡ್ತಾ ಇದ್ದೀಯ, ನೀನೆ ಹುಟ್ಟಿಸಿದ ಮಕ್ಕಳಿಗಾಗಿ ತಾನೇ, ಆವಾಗ ನವೀನ, ಹೈಸ್ಕೂಲು ದೂರ, ಸೈಕಲು ಬೇಕು ಅಂದಾಗ, ನಿನ್ನ ಮೈಮೇಲೆ ಒಂದೇ ಒಂದು ಚಿನ್ನ ಅಂತ ಇದ್ದ ಉಂಗುರವನ್ನು ಮಾರಿ ಸೈಕಲು ಕೊಡಿಸಿದ್ದೀಯಾ, ಆವಾಗ ಒಂದು ಚಿಕ್ಕ ಮನೆ ಕಟ್ಟಿಕೊಳ್ಳಲು ಎಷ್ಟು ಒದ್ದಾಡಿದ್ಯ ನೀನು, ಸೊಸೈಟಿ ಸಾಲ ಕಟ್ಟಲಿಕ್ಕೆ ಆಗದೆ, ಮನೆ ಹರಾಜಿಗೆ ಬಂದಾಗ, ಅಲ್ಲಿ ಇಲ್ಲಿ ದುಡ್ಡಿಗಾಗಿ ಅಂಗಲಾಚಿದ್ದು ನೆನಪಿದೆಯಾ. ಮತ್ತೆ ನಿನ್ನ ಮಕ್ಕಳು ಆ ತರಹ ಕಷ್ಟ ಪಡಬೇಕಾ? ನಾವೆಲ್ಲಾ ಇಷ್ಟೆಲ್ಲ ಒದ್ದಾಡಿದ್ದು ಯಾಕೆ ಹೇಳು, ನಮ್ಮ ಮಕ್ಕಳು ಚೆನ್ನಾಗಿರಲಿ ಅಂತ ತಾನೇ, ನಯನ ಮತ್ತು  ನವೀನ ಸುಖವಾಗಿರ ಬೇಕು ಅಂದ್ರೆ ನೀನು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು ! " 

ಅಪ್ಪನ ಮಾತು ನೆರವಾಗಿತ್ತು. ಇಂದಿನ ಪರಿಸ್ಥಿತಿಯಲ್ಲಿ ದೊಡ್ಡಪ್ಪಗೆ ಮುಖ ಕೊಟ್ಟು ಮಾತಾಡುವ ಧೈರ್ಯ ಇದ್ದದ್ದು ಅಪ್ಪಗೆ ಮಾತ್ರ.  ಆದರೆ ಅಪ್ಪನ ಮಾತು ದೊಡ್ಡಣಿಗೆ ರುಚಿಸಲಿಲ್ಲ, ಕುಳಿತ್ತಿದ್ದಲ್ಲಿಂದ ಧಡಾರನೆ ಎದ್ದು " ನಾನು ಸಾಯುವ ತನಕ ಜಾಗ ಮಾರಲು ಬಿಡುವುದಿಲ್ಲ, ಆಮೇಲೆ ನೀವು ಏನ್ಬೇಕ್ರು ಮಾಡ್ಕೊಳ್ಳಿ, ಹೆಕ್ಕ ತಿಂಬನ್ ನನಗೆ ಮುಖ ತೋರಿಸಬೇಡ " ಅಂತ ಕೋಪದಿಂದ ಪಕ್ಕದಲ್ಲಿ ನಿಂತಿದ್ದ ನವೀನ ಮೇಲೆ ಚೀರಾಡಿ, ತಮ್ಮ ರೂಮಿನತ್ತ ಹೆಜ್ಜೆಹಾಕಿದರು. 

"ಅಣ್ಣ ಕೇಳು ಇಲ್ಲಿ, ನನ್ನ ಮಾತಿನ್ನೂ ಮುಗಿದಿಲ್ಲ, ಪುನೀತ ನವೀನನನ್ನು ಅರ್ಜೆಂಟಾಗಿ ಕರೆಸಿದ್ದು ಯಾಕೆ ಗೊತ್ತ? ನಿನ್ನ ಯಾತನೆಯನ್ನು ದೂರಮಾಡಲು, ಬೆಳಿಗ್ಗೆ ಪುನೀತ ಮತ್ತು ನವೀನ ಸೇರಿಕೊಡು ಒಂದು ನಿರ್ದಾರಕ್ಕೆ ಬಂದಿದ್ದಾರೆ, ಅದು ಏನು ಅಂತ ಕೇಳಿದರೆ ನೀನು ಖುಷಿಪಡ್ತೀಯ " ಅಂತ ಅಪ್ಪ ಮಾತು ಮುಗಿಸುವ ಮೊದಲೇ, ತಮ್ಮ ರೂಮಿನ ಬಾಗಿಲು ತೆಗೆಯುತ್ತಿದ್ದ ದೊಡ್ಡಪ್ಪ, ಆಶ್ಚರ್ಯ ತುಂಬಿದ ಗೊಂದಲದ  ಧ್ವನಿಯಲ್ಲಿ "ಏನೋ ಅದು, ಅವ್ರು ಮನೇನ ಬ್ಯಾಂಕಲ್ಲಿ ಸಾಲಮಾಡಿ ಕಟ್ಟೋಕ್ಕೋ ಒಪ್ಪಿಕೊಂಡ್ರ  " ಅಂದರು.
ಈಗ ಮಾತಾಡಬೇಕಾದ ಸರದಿ ನನ್ನದಾಗಿತ್ತು " ನೋಡಿ ದೊಡ್ಡಪ್ಪ, ನಿಮ್ಮ ಗದ್ದೆ, ತೋಟವೆಲ್ಲಾ ಹೇಗಿದೆಯೋ ಹಾಗೆ ಇರುತ್ತೆ, ನೀವು ನಿಮ್ಮ ಬದುಕಿನ ಉಳಿದ ದಿನವನ್ನು ಈ ಹಸಿರಿನ ಉಸಿರಾಡಬಹುದು, ನಿಮ್ಮ ಮಕ್ಕಳಿಬ್ಬರೂ ಈ ಮೂರು ಎಕರೆ ಜಾಗವನ್ನು ನನಗೆ ಮಾರಲು ಒಪ್ಪಿದ್ದಾರೆ, ತಿಮ್ಮಣ್ಣ ಭಟ್ರ ಮಗನ ರೇಟಿಗಿಂತ ಜಾಸ್ತಿನೇ ಕೊಡ್ತಿದ್ದೇನೆ, ಜಾಗವೇನೋ ನನ್ನ ಹೆಸರಲ್ಲಿ ಇರುತ್ತೆ, ಆದ್ರೆ ಇದು ನಿಮ್ಮದೇ, ನಿಮಗೆ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಈ ಜಮೀನಿನಲ್ಲಿ ನಿಮ್ಮಿಷ್ಟದಂತೆ ಬೇಸಾಯ ಮಾಡಿಕೊಂಡಿರಿ. ಈ ಆಸ್ತಿಯನ್ನು ನನಗೆ ಮಾರಲು ಇನ್ನು ನಿಮ್ಮ ಒಪ್ಪಿಗೆ ಬೇಕಷ್ಟೆ " ಮಾತು ಮುಗಿಸುವ ಹೊತ್ತಿಗೆ ನನ್ನ ಕಣ್ಣಾಲಿಗಳು ತುಂಬಿದ್ದವು, 

ದೊಡ್ಡಪ್ಪಗೆ ನನ್ನ ಮಾತು ಅನೀರೀಕ್ಷಿತ ಮತ್ತು ಆಪ್ಯಾಯಮಾನದಂತಿದೆ, ಹಾಗೇನೇ ಕುರ್ಚಿಯ ಮೇಲೆ ಕುಸಿದು ಕುಳಿತರು. ತನ್ನೆರಡು ಕೈಗಳನ್ನು ಮುಗಿದು " ಹೇಗೆ ನಿನ್ನ ಋಣ ತೀರಿಸಲಪ್ಪ ನೀನು ನನ್ನ ಪಾಲಿನ ದೇವರು ಕಣೋ " ಅಂತ ಜೋರಾಗಿ ಅಳತೊಡಗಿದರು. "ದೊಡ್ಡಪ್ಪ ಋಣ ಮಾತೆಲ್ಲಿ, ಹತ್ತು ವರ್ಷದ ಹಿಂದೆ ನಾನು ಬಿಸಿನೆಸ್ ಮಾಡ್ತೇನೆ ಅಂದಾಗ ನೀವು ಕೊಟ್ಟ ದುಡ್ಡಿನ ಋಣದ ಮುಂದೆ ಇದ್ಯಾವ ಸೀಮೆಯದು.  ದೊಡ್ಡಪ್ಪ ನಾನೀಗ ಮಾಡಿದ್ದು ನಿಮ್ಮ ಮಾನವೀಯ ಸಂಬಂಧ ಮತ್ತು ನಿಮ್ಮ ಮಕ್ಕಳ ಬದುಕಿನ ನೀರಿಕ್ಷೆಗಳ ನಡುವೆ ಸೇತುವೆ ಕಟ್ಟಿದ್ದು ಅಷ್ಟೇ "ಎಂದೇ." 

"ಏನೋ ಗೊತ್ತಿಲ್ಲ, ಆದ್ರೆ ನೀನು ಇಂದು ತುಂಬಾ ದೊಡ್ಡವನಾಗಿಬಿಟ್ಟೆ ನನ್ನ ರಾಜಕುಮಾರ " ಅಂತ ನನ್ನ ಎರಡು ಕೈಗಳನ್ನು ಗಟ್ಟಿಯಾಗಿ ಅದುಮಿದರು. ಇವತ್ತಿನ ನಮ್ಮ ಹಿರಿಯತಲೆಮಾರು ನಮ್ಮಿಂದ ನಿರೀಕ್ಷಿಸುಹುದು ಇದನ್ನೇ. ಪ್ರತಿ ಮನೆಯಲ್ಲೂ ಇಂದು ನಾನು ಇಲ್ಲಿ ಹಾಕಿದ ಮಾನವೀಯ ಸಂಬಂಧದ ಸೇತುವೆ ನಿರ್ಮಾಣವಾದರೆ ಜನರೇಶನ್ ಗ್ಯಾಪ್ ನಿಂದ ಬಳಲುತ್ತಿರುವ ನಮ್ಮ ಹಿರಿಯರಿಗೆ ಒಂದು ನೆಮ್ಮದಿಯ ಗೂಡು ಸಿಗಬಹುದು. 

" ಅಣ್ಣಾ, ನಾವು ಇಷ್ಟು ಮಾಡದಿದ್ದರೆ ಸಂಬಂಧಗಳಿಗೆ ಬೆಲೆ ಎಲ್ಲಿ. ಅದೆಲ್ಲ ಬಿಡು, ಬೇಗ ತಿಂಡಿ ತಿಂದು ರೆಡಿ ಆಗು, ಪುನೀತ ಉಡುಪಿಯಲ್ಲಿ ಆಫೀಸ್ ಮಾಡ್ತಾನಂತೆ, ಜಾಗನೋಡಿಕೊಂಡು ಬರೋಣ, " ಅಂತ ಅಪ್ಪ ದೊಡ್ಡಪ್ಪನನ್ನು ಹೊರಡಿಸಿದರು. "ಉಡುಪಿಗೆ ಆಮೇಲೆ ಹೊರೋಡೋಣವಂತೆ, ದೊಡ್ಡಪ್ಪ ಮೊದಲು ನೀವು  ದೈವದಮನೆಗೆ ಹೋಗಿ ಮೈಕು ಹಾಕಿ, ಪಾಪ ಅದು ನಿಮ್ಮ ಮೇಲೆ ಸಿಟ್ಟುಮಾಡಿಕೊಂಡಿದೆ " ಅಂತ ನಾನು ಈ ಮಾತುಕತೆಗೆ ಉಪಸಂಹಾರ ಮಾಡುವ ಮೊದಲೇ " ಹೌದಲ್ಲ ಇಗೋ ಹೊರಟೆ, ನವೀನ ಅಲ್ಲಿ ಬಾಗ್ಲಿಗೆ ಸಿಕ್ಸಿರುವ ಕೀ ಕೊಡು  " ಅಂತ ದೊಡ್ಡಪ್ಪ ಮಗನ ಮೇಲೆ ಸ್ವಲ್ಪ ಪ್ರೀತಿ ತೋರಿಸುತ್ತ ನವೀನ ಕೊಟ್ಟ ಕೀ ಇಸಿದುಕೊಂಡು ದೈವಸ್ಥಾನದತ್ತ ಹೆಜ್ಜೆ ಹಾಕಿದರು. ನಾನು ಮತ್ತು ನವೀನ ಅವರ ಆ ಹೆಜ್ಜೆಯನ್ನೇ ಹಿಂಬಾಲಿಸಿದೆವು. ದೊಡ್ಡಪ್ಪನ ಮನೆಯ ಎದುರಿನ ಹೂತೋಟದಲ್ಲಿ ಹೂವುಗಳಿಗೆ ಮುತ್ತಿಕ್ಕಿದ್ದ ಮಂಜನ ಹನಿಗಳು ಸೂರ್ಯನ ಸ್ಪರ್ಶದಿಂದ ಮುತ್ತಿನ ಹನಿಗಳಂತೆ ಪ್ರಕಾಶಿಸುತ್ತಿದ್ದವು.

ಸತೀಶ್ ಶೆಟ್ಟಿ ವಕ್ವಾಡಿ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Shaina Srinivas Shetty

ಕಥೆಯು ಕೊನೆಯವರೆಗೂ ಕುತೂಹಲವನ್ನು ಕಾಯ್ದುಕೊಂಡು ಹೋಗಿದ್ದು ಅದ್ಭುತ ವಾಗಿತ್ತು. ಕುಂದಾಪುರ ಕನ್ನಡದ ಸೊಗಡು, ಹಳ್ಳಿಯ ಬದುಕು, ಪ್ರೀತಿ, ಉಪಕಾರ ಸ್ಮರಣೆ ಮನಸೆಳೆಯಿತು. ಒಟ್ಟಾರೆ ಸುಂದರವಾದ ಕಥಾ ಹಂದರ. ಒಳ್ಳೆದಾಗಲಿ. ವಂದನೆಗಳು.

Ravi K
Ravi K
6 years ago

Dear Satish sir,

It is really an excellent writing to read. I was so much invoved in the fiction that i experenced the  maleynaadu thota & the felings of uncle Sanju asy own. Giving reader such an experience to rwader is th3 abilitlity of an good writer. Good story with nice message. Expecting more from ur words. Best wißhes.

With heartly wishes

Ravi palegar

Siddalingesh b s
Siddalingesh b s
6 years ago

ಧನಿವಾದಗಳು ಶೆಟ್ರೇ , ಒಂದು ಅದ್ಬುತ ಪರಿ ಕಲ್ಪನೆ , ಓದುತ್ತ್ತಾ ಓದುತ್ತ್ತಾನಮ್ಮಹಳೆಯ ನೆನಪಿನ ಲೋಕಕ್ಕೆ ಹೂಗುವ ಹಾಗೆ ಅನುಭವ , ಆಹಾ ಎಲ್ಲ ಪಾತ್ರಧಾರಿಗಳು ಎದುರಿಗೆ ಬಂದಾ ಹಾಗೆ, ಒಟ್ಟಿನಲ್ಲಿ ನಮ್ಮನ್ನು ಸುಂದರ ಪರಿಕಲ್ಪನೆಗೆ ಕರೆದೊಯ್ಯುವ ಹಾಗೆ., ನನ್ನ ಹೃತ್ಪೂರ್ವಕ ವಂದನೆಗಳು 

Girish
Girish
6 years ago

Idu bari katheyalla grameena jeevanvannu ele eleyagi hosediruva  ondu  sundaravada neija chitrana tumba uttamavad kruthi Mr sathish ede reetya lekanagalu ennu mundakku nimmininda navu nirikshisutteve 

Danyavadgalu nimma sahitya sevege

G Kumar

Rajashekar Kattimani
Rajashekar Kattimani
6 years ago

ಕಥೆ ಸೊಗಸಾಗಿದೆ . ಅಪರೂಪದ ಕಥಾವಸ್ತು ಮನಸ್ಸಿಗೆ ತಲುಪಿದೆ

Veena
Veena
6 years ago

Adhbuthavaadha mana muttuvanthaha kathe, ennashtu lekhanagalu nimmindha barali,,,,,,

Hruthpoorvaka vandhanegalu,,,,

6
0
Would love your thoughts, please comment.x
()
x