ಕಥಾಲೋಕ

ಅಮ್ಮಾ ಕ್ಷಮಿಸು: ನಂದಾ ಹೆಗಡೆ

nanda-hegde

ದಿನಪತ್ರಿಕೆಯೊಂದಕ್ಕೆ ನನ್ನ ಅತ್ತೆಯವರ ಅಡಿಗೆ ರೆಸಿಪಿಯನ್ನ ಕಳುಹಿಸಿದ್ದೆ. ಆದರೆ ಈಗ ಆರು ತಿಂಗಳಿನಿಂದಲೂ ಪ್ರತೀ ವಾರ ಕಾಯುತ್ತಲೇ ಇದ್ದೇನೆ. ಆದರೆ ಅದು ಪ್ರಕಟವಾಗಲೇ ಇಲ್ಲ. 83 ವರ್ಷದ ನನ್ನ ಅತ್ತೆಯವರ ಜೀವನೋತ್ಸಾಹದ ಬಗ್ಗೆ ಚಿಕ್ಕ ಮಾಹಿತಿಯನ್ನೂ ಕೂಡ ಬರೆದು ಒಪ್ಪವಾಗಿಯೇ ಕಳುಹಿಸಿದ್ದೆ ಅಂದುಕೊಂಡಿದ್ದೆ. ಆದರೂ ಯಾಕೋ ಪ್ರಕಟವಾಗಲಿಲ್ಲ. . . . . . . . . ಅವರ ಮಾನದಂಡವೇನೋ. . . . . . . . ಅಂದುಕೊಳ್ಳುತ್ತಿರುವ ಹಾಗೇ ನನ್ನ ಉದ್ಯೋಗದ ಸೇವಾದಿನಗಳ ಒಂದು ಕಹಿ ಘಟನೆಯ ನೆನಪು ಮರುಕಳಿಸಿತು. 

ನಾನಾಗ ಸಕಲೇಶಪುರದಲ್ಲಿ ಸೇವೆಯಲ್ಲಿದ್ದೆ. (ನಾನಾಗ ಟೆಲಿಫೋನ್ ಆಪರೇಟರ್) ಒಂದು ದಿನ ನನ್ನ ಡ್ಯೂಟಿಯ ಸಮಯದಲ್ಲಿ ಒಂದು ಕಾಲ್ ಬುಕ್ ಆಯಿತು. ಅರೇಹಳ್ಳಿಯಿಂದ ತೀರ್ಥಹಳ್ಳಿಗೆ. ಕಾಲ್ ಬುಕ್ ಮಾಡಿದ ಯಜಮಾನರು
"ನೋಡಿ ಮೇಡಮ್ ತುಂಬಾ ಅರ್ಜೆಂಟ್ ಇದೆ ಬೇಗ ಕೊಡಿ" ಅಂದರು. 
ನಾನು ಎಲ್ಲರೂ ಹೀಗೇ ಹೇಳುತ್ತಾರೆ ಅಂದುಕೊಂಡು ಮೊದಲೇ ಬುಕ್ ಆಗಿದ್ದ ಇತರ ರಾಶಿ ರಾಶಿ ಕಾಲ್ ಗಳತ್ತ ಗಮನಹರಿಸಿದೆ. ಹತ್ತು ನಿಮಿಷಕ್ಕೆ ಮತ್ತೆ ಆ ಯಜಮಾನರು "ಮೇಡಮ್ ತುಂಬಾ ಅರ್ಜೆಂಟ್ ಇದೆ ಕಾಲ್ ಬೇಗ ಕೊಡಿ"ಅಂದರು. 
ನಾನು "ನೋಡಿ ಸಾರ್, ತೀರ್ಥಹಳ್ಳಿ ಕಾಲ್ ಅಂದರೆ ಇಲ್ಲಿಂದ ಹಾಸನ-ಹಾಸನದಿಂದ ಶಿವಮೊಗ್ಗ-ಶಿವಮೊಗ್ಗದಿಂದ ತೀರ್ಥಹಳ್ಳಿ ಹೀಗೆ ಲೈನ್ ಟ್ರ್ಯೆ ಮಾಡಬೇಕಾಗುತ್ತದೆ. ಇವತ್ತು ಬೇರೆ ಎಲ್ಲಾ ಅರ್ಜೆಂಟ್ ಕಾಲ್ ಗಳೇ ಇದ್ದಾವೆ. ನಾನೇನ್ ಮಾಡ್ಲಿ" ಅಂದೆ. 
ಅವರು “ಅರ್ಜೆಂಟ್ ಕಾಲ್ ಸಿಗೋದಾದ್ರೆ ಏನ್ ಮಾಡ್ಬೇಕು ಮೆಡಮ್" ಅಂದರು. 

ನಾನು “ಹಾಗಿದ್ರೆ ನೀವು ಅರ್ಜೆಂಟ್ ಕಾಲ್ ಬುಕ್ ಮಾಡಿ. ಚಾರ್ಜ ಡಬಲ್ ಆಗುತ್ತೆ”. 
“ಸರಿ ಮೇಡಮ್ ಹಾಗೇ ಮಾಡಿ. ಮತ್ತೇನ್ ಮಾಡೋದು”
ನಾನು ಟ್ಯೆಮ್ ನಮೂದಿಸಿ ಅರ್ಜೆಂಟ್ ಕಾಲ್ ಅಂತ ರೆಕಾರ್ಡ ಮಾಡಿದೆ. 
ಹಾಸನ ಲ್ಯೆನ್ ಗೆ ಪ್ಲಗ್ ಮಾಡಿ ಅವರು ಲೈನ್ ನಲ್ಲಿ ಬಂದ ಕೂಡಲೇ
"ಮೇಡಮ್ ಶಿವಮೊಗ್ಗ ಕೊಡಿ, ಅರ್ಜೆಂಟ್ ಕಾಲ್ ಇದೆ” ಅಂದೆ
ಶಿವಮೊಗ್ಗ–ಶಿವಮೊಗ್ಗ? ಅಂತ ಕೇಳುತ್ತಾ ಇತರ ಕಾಲ್ ಗಳ ಕಡೆ ಗಮನ ಹರಿಸುತ್ತಿದ್ದೆ
ಅಷ್ಟರಲ್ಲಿ ಮತ್ತೆ ಆ ಯಜಮಾನರು–
“ಮೇಡಮ್ ಇನ್ನೂ ಕಾಲ್ ಸಿಕ್ಕಿಲ್ವಾ, ಹೇಗಾದ್ರೂ ಮಾಡಿ ಬೇಗ ಕಾಲ್ ಕೊಡಿ ಪ್ಲೀಸ್, ಎಷ್ಟು ದುಡ್ಡಾದರೂ ಪರವಾಗಿಲ್ಲ” ಅಂತ ಗೋಗರೆದರು
ಸಾರ್, ನಾನೇನ್ ಮಾಡ್ಲಿ, ಹಾಸದಿಂದ ಮುಂದೆ ಲೈನ್ ಸಿಕ್ತಾನೇ ಇಲ್ಲ. ಪ್ರಯತ್ನ ಮಾಡ್ತಾ ಇದ್ದೀನಿ 
“ಮೇಡಮ್ ಏನ್ ಮಾಡೋದು ತುಂಬಾ ಅರ್ಜೆಂಟ್ ಇದೆ”
ಅವರ ಧ್ವನಿಯಲ್ಲಿದ್ದ ಆತಂಕ ನೋಡಿ ನಾನು
“ಲೈಟನಿಂಗ್ ಕಾಲ್ ಬುಕ್ ಮಾಡ್ತೀರಾ ಎಂಟು ಪಟ್ಟು ಆಗತ್ತೆ”
“ಹೌದಾ ಮೇಡಮ್, ಹಾಗಾದ್ರೆ ಹಾಗೆ, ಅದನ್ನೇ ಮಾಡಿ”
ನಾನು ಟೈಮ್ ನಮೂದಿಸಿ, ಸೂಪರ್ವೈಸರ್ ಅನುಮತಿ ಮತ್ತು ಅವರ ಸಹಿ ತೆಗೆದುಕೊಂಡು
ಹಾಸನ ಲೈನ್ ನಲ್ಲಿ ಮತ್ತೆ ಅವರ ಗಮನ ಸೆಳೆದು
ಮೇಡಮ್ ತೀರ್ಥಹಳ್ಳಿ ಕಾಲ್ ಲೈಟನಿಂಗ್ ಆಗಿದೆ ಅವರ ಸೂಪರ್ವೈಸರ್ ನಂಬರ್ ಆದ್ರೂ ಕೊಡಿ ಅಂದೆ
ತೀರ್ಥಹಳ್ಳಿ ಸೂಪರ್ವೈಸರ್ ಗೆ ಹಾಸನ ಸೂಪರ್ವೈಸರ್ ರಿಂದ ಕಾಲ್ ಮಾಡಿಸಿ
ಸರ್ ಲೈಟನಿಂಗ್ ಕಾಲ್ ಇದೆ, ನಿಮ್ಮ ಆಪರೇಟರ್ ಗೆ ಲೈನ್ ನಲ್ಲಿ ಬರೋಕೆ ಹೇಳಿ ಅಂದೆ
ಅಂತೂ ತೀರ್ಥಹಳ್ಳಿ ಲೈನ್ ಸಿಕ್ಕು ಮೇಡಮ್ ಲೈನ್ ನಲ್ಲಿ ಬಂದು ನಂಬರ್ ಡಯಲ್ ಮಾಡಿ ಕೊಟ್ಟರು

ತೀರ್ಥಹಳ್ಳೀ +++++++ ?
ಹೌದು ಮೇಡಮ್
ನೋಡಿ ನಿಮಗೆ ಅರೇಹಳ್ಳಿಯಿಂದ ಲೈಟನಿಂಗ್ ಕಾಲ್ ಇದೆ, ಲೈನ್ ನಲ್ಲಿ ಇರಿ -ಎಂದೆ
ಅರೇಹಳ್ಳಿ ಲೈನ್ ನಂಬರ್ ಡಯಲ್ ಮಾಡಿ
ತೀರ್ಥಹಳ್ಳಿ ಲೈಟನಿಂಗ್ ಕಾಲ್ ಬುಕ್ ಮಾಡಿದ್ರಲ್ಲಾ ಮಾತಾಡಿ -ಅಂದೆ
ಒಂದೇ ನಿಮಿಷದಲ್ಲಿ ಕಾಲ್ ಮುಗಿಯಿತು. 
ಮರುಘಳಿಗೆ ಯಜಮಾನರು ಲೈನ್ ನಲ್ಲಿ ಬಂದರು
“ಥ್ಯಾಂಕ್ಸ ಮೇಡಮ್, ಆದರೆ ಆವಾಗ್ಲೆ ಸಿಕ್ಕಿದ್ರೆ ಚೆನ್ನಾಗಿತ್ತು”
ನನಗೆ ಅವರ ನಮ್ರತೆ ತುಂಬಾ ಇಷ್ಟವಾಗಿತ್ತು
ಆಗ್ಲಿ ಈಗ್ಲಾದರೂ ಸಿಕ್ತಲ್ಲ ಸರ್ ಅಂದೆ
ಆದರೆ ಮುಂದೆ ಅವರಾಡಿದ ಮಾತು ಮನಮಿಡಿಯುವಂತಿತ್ತು.

“ಮೇಡಮ್, ಆಗ ನನ್ನ ತಾಯಿ ತಮ್ಮ ಕೊನೆಯುಸಿರು ಎಳೆಯುತ್ತಿದ್ದರು. ಅವರದ್ದು ಒಂದೇ ಹಠ. ತೀರ್ಥಹಳ್ಳಿಗೆ ನನ್ನ ತಂಗಿಯನ್ನು ಕೊಟ್ಟಿದ್ದೇವೆ. ಅವಳೊಂದಿಗೆ ಸಾಯೋದರೊಳಗೆ ಒಮ್ಮೆ ಮಾತಾಡ್ಬೇಕು ಅಂತ. ಆದ್ರೆ. . . . . . . . . . . . . . . . . . . . ಮೇಡಮ್. . . . . . . . . . . . . . . . ಕಾಲ್ ಸಿಗೊದ್ರೊಳಗೆ. . . . . . . . . . . . . . . . . . . . . . . . . . ಅವರ ಪ್ರಾಣ ಹೋಗಿಬಿಟ್ಟಿತ್ತು. . . . . . . . . . . . . ನಿನ್ನಮ್ಮ ಹೋಗಿಬಿಟ್ರು ಬಾ ಅಂತ ಹೇಳೋಕೆ ಫೋನ್ ಮಾಡ್ದ್ಹಾಂಗ್ ಆಯ್ತು. ಇರ್ಲಿ ನೀವಾದ್ರೂ ಏನ್ ಮಾಡ್ತೀರಾ”
ನಾನು ತುಂಬಾ ವಿಚಲಿತಳಾದೆ.

ಆದರೆ ಏನು ಮಾಡೋದು. ನಾವೆಲ್ಲ ಸಂಬಳಕ್ಕಾಗಿ, ಸಂಸ್ಥೆಗಾಗಿ ದುಡಿಯುವವರು. ಇಲ್ಲಿ ಲೈಟನಿಂಗ್ ಕಾಲ್ ಗೆ ಕೊಡುವ ಪ್ರಾಶಸ್ತ್ಯವನ್ನು ಆರ್ಡಿನರಿ, ಅಷ್ಟೇ ಏಕೆ ಅರ್ಜೆಂಟ್ ಕಾಲ್ ಗೂ ಕೂಡ ಕೊಡಲು ಸಾಧ್ಯವಿಲ್ಲ. ಹಾಗಾಗಿ ಇಂದಿಗೂ ಕೂಡ ನಾನು ಆ ಅಮ್ಮನ ಕೊನೆಯಾಸೆಯನ್ನ ತೀರಿಸಲು ಅಸಮರ್ಥಳಾದ ನನ್ನ ಅಸಹಾಯಕತೆಯ ಬಗ್ಗೆ ವೇದನೆ ಅನುಭವಿಸುತ್ತೇನೆ.

"ಅಮ್ಮಾ, ಕ್ಷಮಿಸು. . . . . . ನಾನು ಅಸಹಾಯಕಳು"

(ವಿ. ಸೂ.  ಪಾತ್ರಗಳು ಮತ್ತು ಘಟನೆ ಕಾಲ್ಪನಿಕ)