ಕರಾಳ ಶುಕ್ರವಾರ: ಪ್ರಸಾದ್ ಕೆ.

prasad-naik

ಕಳೆದ ಹನ್ನೆರಡು ವರ್ಷಗಳಿಂದ ನಿನ್ನ ಹೊಟ್ಟೆಪಾಡಿಗೆಂದಿದ್ದ ಮೆಕ್ಯಾನಿಕ್ ಉದ್ಯೋಗವೂ ಈಗ ಕಳೆದುಹೋಗಿದೆ. ಒಳ್ಳೆಯ ಉದ್ಯೋಗವಾಗಿತ್ತದು. ಒಳ್ಳೆಯ ಬಾಸ್ ಕೂಡ ಇದ್ದ. ನಿನ್ನ ಬಾಸ್ ನಿನ್ನ ಉದ್ಯೋಗದ ಬಗ್ಗೆ ಹೇಳುತ್ತಾ ಇದಕ್ಕೇನೂ ಭದ್ರತೆಯಿಲ್ಲವೆಂದೂ ಮತ್ತು ಇದು ದೇಶದ ಆಥರ್ಿಕತೆಯದ್ದೇ ಸಮಸ್ಯೆಯೆಂದೂ ಹೇಳಿದ್ದ. ಅವನ ಮಾತುಗಳ ಪ್ರಕಾರ ನಿನ್ನ ಬಗ್ಗೆ ಅವನಿಗೆ ಕಾಳಜಿಯಿತ್ತು. ವಿಚಿತ್ರವೆಂದರೆ ಅವನ ಮಾತನ್ನು ನೀನು ನಂಬಿಯೂ ಬಿಟ್ಟೆ. 

ಇದ್ದ ಒಂದು ಉದ್ಯೋಗವನ್ನು ಕಳೆದುಕೊಂಡ ನಂತರವಂತೂ ಭಾರವಾದ ಹೃದಯವನ್ನು ಮತ್ತು ಚುರುಗುಟ್ಟುವ ಹೊಟ್ಟೆಯನ್ನು ಸಂಭಾಳಿಸುತ್ತಾ ಅಷ್ಟಕ್ಕೂ ಆಗಿದ್ದೇನು ಎಂದು ತಿಳಿಯುವುದಕ್ಕೇ ನಿನಗೆ ನಾಲ್ಕು ದಿನಗಳು ಬೇಕಾದವು. ಮನದ ಭಾರವನ್ನು ಇಳಿಸಬೇಕಾದರೆ ಮನಬಿಚ್ಚಿ ಮಾತಾಡಬೇಕು ಎಂದು ನಿನ್ನ ಪತ್ನಿ ಹೇಳುತ್ತಿರುತ್ತಾಳೆ. ಆದರೆ ನೀನು ಯಾವತ್ತಾದರೂ ಕೇಳಿದ್ದುಂಟೇ?

ಹಳೇ ಬಾಸ್ ಕೊಟ್ಟ ಶಿಫಾರಸ್ಸು ಪತ್ರವನ್ನು ಹಿಡಿದುಕೊಂಡು ಹೊಸ ಉದ್ಯೋಗಕ್ಕಾಗಿ ಅಲೆಯುವುದೇ ನಿನ್ನ ಪಾಡಾಗಿಬಿಟ್ಟಿದೆ. ನೀನು ಬುದ್ಧಿವಂತ. ನಿನ್ನ ಕೈಗಳು ಚುರುಕಾಗಿವೆ, ಯಂತ್ರಗಳೊಂದಿಗೆ ಸಲೀಸಾಗಿ ಕೆಲಸ ಮಾಡುತ್ತವೆ. ಆದರೆ ಅಚಾನಕ್ಕಾಗಿ ಯಾರಿಗೂ ನಿನ್ನ ಈ ಪರಿಣತಿಗಳು ಬೇಕಿಲ್ಲವೆಂಬಂತಾಗಿದೆ. ಎಲ್ಲರೂ ಸೌಜನ್ಯದಿಂದಲೇ ನಿನ್ನ ಶಿಫಾರಸು ಪತ್ರವನ್ನು ಓದುತ್ತಾರೆ. ಆದರೂ ಯಾರೂ ಉದ್ಯೋಗವನ್ನು ಕೊಡುವಂತೆ ಕಾಣುತ್ತಿಲ್ಲ. ಈ ಜಂಜಾಟದಲ್ಲೇ ಕೆಲ ತಿಂಗಳುಗಳು ಕಳೆದುಹೋಗಿವೆ. ನೀನು ನಿನ್ನ ಗೆಳೆಯರಿಗೆಲ್ಲಾ ಕರೆ ಮಾಡಿ ಸಂಬಳವನ್ನೂ ವಿಚಾರಿಸದೆ ಸಿಕ್ಕ ಕೆಲಸವನ್ನು ಮಾಡುತ್ತೇನೆ ಎಂಬು ಗೋಗರೆಯುತ್ತಿದ್ದೀಯ. 

ನಿನ್ನ ನಿರುದ್ಯೋಗದ ವಿಮೆಯ ಖಾತೆಯು ಈಗಾಗಲೇ ಖಾಲಿಯಾಗಿದೆ. ನನ್ನನ್ನೂ ನನ್ನ ಹತ್ತು ವರ್ಷದ ಮಗುವನ್ನೂ ವಾಪಾಸು ಪೋಟರ್ೆರಿಕೋಗೆ ಕಳಿಸು ಎಂದು ನಿನ್ನ ಪತ್ನಿ ದಿನವೂ ಗೊಣಗುತ್ತಿದ್ದಾಳೆ. ಹೆಂಡತಿಯ ಈ ಸಲಹೆಯನ್ನು ನೀನು ತನಗಾದ ಸೋಲು ಎಂದು ಭಾವಿಸುತ್ತಿರುವೆ. ತನ್ನ ಕುಟುಂಬವನ್ನು ಪೋಷಿಸಲೂ ತಾನು ನಾಲಾಯಕ್ಕು ಎಂಬ ಭಾವನೆಗಳು ಅವಳ ಮಾತುಗಳಿಂದ ನಿನ್ನಲ್ಲಿ ಮೊಳೆತಿವೆ. ನಿನ್ನ ಮಗನಿಗೆ ಇಂಗ್ಲಿಷ್ ಅಲ್ಪಸ್ವಲ್ಪ ಅರ್ಥವಾಗುತ್ತದೆ ಎಂಬ ಕಾರಣಕ್ಕಾಗಿ ಈ ವಿಷಯದ ಬಗ್ಗೆ ಸ್ಪ್ಯಾನಿಷ್ ಭಾಷೆಯಲ್ಲಿ ನೀನು ಹೆಂಡತಿಯೊಂದಿಗೆ ಜಗಳವಾಡುತ್ತಿರುವೆ. ಮಗನ ಶಾಲೆ, ಅವನ ಸಂತಸ, ಶಾಲೆಯ ಚಿಣ್ಣರ ಬೇಸ್ ಬಾಲ್ ಲೀಗಿನ ತಂಡದಲ್ಲಿ ಅವನಿಗಿರುವ ಜನಪ್ರಿಯತೆ ಇತ್ಯಾದಿಗಳನ್ನು ನೀನು ಕಸಿದುಕೊಳ್ಳಲು ತಯಾರಿಲ್ಲ. ನಿನ್ನ ದನಿಯು ಜೋರಾಗುತ್ತಿದ್ದಂತೆಯೇ ನಿನ್ನ ಹೆಂಡತಿ ಬಿಕ್ಕುತ್ತಿದ್ದಾಳೆ. ಅವಳ ಕಣ್ಣುಗಳಿಂದ ಹನಿಗಳು ಬೀಳುತ್ತಲೇ ಇವೆ.

ನಿನಗೆ ಅಮೆರಿಕಾ ಅಂದರೆ ಪ್ರೀತಿ. ಅಮೆರಿಕಾ ತನ್ನನ್ನು ಚೆನ್ನಾಗಿಯೇ ನೋಡಿಕೊಂಡಿದೆ, ಮುಂದೆಯೂ ನೋಡಿಕೊಳ್ಳಲಿದೆ ಎಂಬ ವಿಶ್ವಾಸ ನಿನಗೆ. ಅಲ್ಲದೆ ನೀನೊಬ್ಬ ಸ್ವಾಭಿಮಾನಿ ಗಂಡಸು. ನೀನು ಬಡತನವನ್ನು ನೋಡಿದ್ದಷ್ಟೇ ಅಲ್ಲ, ಅನುಭವಿಸಿದ್ದೂ ಸತ್ಯ. ನವೆಂಬರ್ ತಿಂಗಳಿನಲ್ಲಿ ಸ್ಥಳೀಯ ಮೆಗಾ ಸ್ಟೋರ್ ಒಂದು ಸಹಾಯಕನ ಹುದ್ದೆಯೊಂದು ನಮ್ಮಲ್ಲಿ ಖಾಲಿಯಿದೆ ಎಂಬ ಜಾಹೀರಾತನ್ನು ಹೊರತೆಗೆದಾಗ ಮುಂಜಾನೆಯೇ ಎದ್ದು ಅವರ ಆಫೀಸಿಗೆ ಸಂದರ್ಶನಕ್ಕೆಂದು ನೀನು ಹೋಗಿರುವೆ. ಅಂತೂ ಯಾವುದೇ ಭದ್ರತೆ ಅಥವಾ ಇತರೆ ಸೌಲಭ್ಯಗಳಿಲ್ಲದ, ಕನಿಷ್ಠ ವೇತನದ ಆ ಹುದ್ದೆಯು ಹೇಗೋ ನಿನಗೆ ಸಿಕ್ಕಾಗಿದೆ. ಮುಂಜಾನೆಯ ನಾಲ್ಕರಿಂದ ಮಧ್ಯಾಹ್ನದವರೆಗಿನ ಪಾಳಿಯ ತಾತ್ಕಾಲಿಕ ಉದ್ಯೋಗವದು. 

ನೀನು ಮೆಗಾ ಸ್ಟೋರಿನ ಉದ್ಯೋಗಿಯಾಗಿರುವುದರಿಂದ ಸ್ಟೋರಿನಲ್ಲಿರುವ ಎಲ್ಲಾ ಉತ್ಪನ್ನಗಳ ಖರೀದಿಗೂ ಹತ್ತು ಪ್ರತಿಶತದ ಕಡಿತವನ್ನು ಇತರ ಉದ್ಯೋಗಿಗಳಿಗೆ ಕೊಟ್ಟಂತೆಯೇ ನಿನಗೂ ಕೊಟ್ಟಿದ್ದಾರೆ. ಏನಾದರೂ ಖರೀದಿಸಬೇಕೆಂದಾಗಲೆಲ್ಲಾ ನಿನಗೆ ನಿನ್ನ ಹತ್ತು ವರ್ಷ ಪ್ರಾಯದ ಮುದ್ದಿನ ಮಗನ ನೆನಪಾಗುತ್ತದೆ. ತನ್ನ ವಯಸ್ಸಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಎತ್ತರದ ನಿಲುವಿನ ಹುಡುಗ ಅವನು. ಪುಟ್ಟದಾದರೂ ಅಗಲವಾದ ಕೈಗಳು. ಮುಂಜಾನೆ ಕೆಲಸಕ್ಕೆಂದು ತೆರಳುವ ಮುನ್ನವೇ ಬೇಸ್ ಬಾಲ್ ಅಭ್ಯಾಸದ ನೆಪದಲ್ಲಿ ನೀನೂ ಅವನ ಜೊತೆ ಕೊಂಚ ಆಡುವೆ. ಈ ಬಾರಿಯ ಕ್ರಿಸ್ಮಸ್ ಹಬ್ಬಕ್ಕೆಂದು ಒಂದೊಳ್ಳೆ ಗುಣಮಟ್ಟದ ಬೇಸ್ ಬಾಲ್ ಕೈಗವಚವನ್ನು ಅವನಿಗೆ ಉಡುಗೊರೆಯಾಗಿ ಕೊಡಬೇಕು ಎಂಬ ಆಸೆಯು ನಿನಗಿದೆ. ಇಲ್ಲಿ ಮಾರಾಟಕ್ಕಿಟ್ಟಿರುವ ಕೈಗವಚಗಳು ಗಾತ್ರದಲ್ಲಿ ದೊಡ್ಡದಾಗಿವೆ. ಆದರೆ ಇವುಗಳನ್ನು ಆತ ಹಲವು ವರ್ಷಗಳವರೆಗೆ ಬಳಸಬಲ್ಲ. ಕೊಂಚ ದುಬಾರಿಯೂ ಹೌದೆನ್ನಿ. ದರಗಳು ಶುರುವಾಗುವುದೇ ನೂರು ಡಾಲರುಗಳಿಂದ. ಆದರೂ ಮೆಗಾಸ್ಟೋರಿನ ಉದ್ಯೋಗಿಗಳಿಗೆ ಕೊಡಲಾಗುವ ಕಡಿತವನ್ನು ಬಳಸಿಕೊಂಡು ಅವುಗಳನ್ನು ಖರೀದಿಸಬೇಕು ಎಂದು ನೀನು ಲೆಕ್ಕಹಾಕುತ್ತಿರುವೆ. 

ಮೆಗಾ ಸ್ಟೋರಿನ ಉದ್ಯಾನದ ನಿರ್ವಹಣೆಗೆಂದು ಬರುವ ಎಲ್ಲಾ ವಸ್ತುಗಳನ್ನು ಇಡಲೆಂದು ಮಾಡಲಾಗಿರುವ ಪುಟ್ಟ ಗೋದಾಮನ್ನು ನೋಡಿಕೊಳ್ಳುವ ಜವಾಬ್ದಾರಿಯು ನಿನ್ನದು. ಗೋದಾಮು ಗಲೀಜಾಗಿದ್ದರೂ, ಈ ಶ್ರಮದ ಕೆಲಸವು ನಿನ್ನೆಲ್ಲಾ ಶಕ್ತಿಯನ್ನು ಹೀರುತ್ತಿದ್ದರೂ ಬಲು ಆಸ್ಥೆಯಿಂದ ನೀನು ನಿನ್ನ ಕೆಲಸವನ್ನು ಮಾಡುತ್ತಿರುವೆ. ಯಾಕೆಂದರೆ ಈ ಉದ್ಯೋಗವು ನಿನಗೆ ಅನ್ನವನ್ನೂ, ಮನೆಯಲ್ಲಿ ಕೊಂಚ ಶಾಂತಿಯನ್ನೂ ಕರುಣಿಸಿದೆ. 

ಎರಡು ವಾರಗಳ ನಂತರ ಮ್ಯಾನೇಜರ್ ನಿನ್ನನ್ನು ಕರೆದು ನಿನ್ನ ಕೆಲಸದ ಬಗ್ಗೆ ಮೆಚ್ಚಿ ಹೊಗಳುತ್ತಾನೆ. ಜೊತೆಗೇ ಈ ಶುಕ್ರವಾರವು ಅತ್ಯಂತ ಮುಖ್ಯವಾದ ದಿನವೆಂದೂ, ಆ ದಿನ ಗ್ರಾಹಕರಿಗಾಗಿ ದೊಡ್ಡ ಮಟ್ಟಿನ ಕಡಿತಗಳೊಂದಿಗೆ ಪುಟ್ಟ ವ್ಯಾಪಾರಮೇಳದಂತಿನ ವ್ಯವಸ್ಥೆಯನ್ನು ಆಯೋಜಿಸಬೇಕೆಂದು ಸಂಸ್ಥೆಯು ನಿರ್ಧರಿಸಿದೆಯೆಂದೂ ಹೇಳುತ್ತಾನೆ. ಈ ದಿನಕ್ಕೆ “ಬ್ಲ್ಯಾಕ್ ಫ್ರೈಡೇ'' ಎಂದು ಆತ ಹೆಸರನ್ನೂ ಇಟ್ಟಿದ್ದಾನೆ. ಆ ದಿನ ಗೋದಾಮಿನ ಕೆಲಸದ ಬದಲು ಕೆಳಮಹಡಿಯಲ್ಲಿ ಜನರ ಮತ್ತು ವಾಹನದ ಸಂಚಾರದ ನಿರ್ವಹಣೆಯನ್ನು ನೀನು ನೋಡಿಕೊಳ್ಳಬೇಕೆಂದು ಆತ ನಿನಗೆ ಆಜ್ಞಾಪಿಸುತ್ತಿದ್ದಾನೆ. ಆ ದಿನ ಮೆಗಾ ಸ್ಟೋರಿನಲ್ಲಿ ಬಹಳಷ್ಟು ಜನರು ಸೇರಲಿದ್ದಾರೆಂದೂ, ಅದೆಷ್ಟೇ ನೂಕುನುಗ್ಗಲುಗಳಾದರೂ ಎಲ್ಲರೊಂದಿಗೂ ಸೌಮ್ಯವಾಗಿಯೇ ವರ್ತಿಸಬೇಕೆಂದೂ ಆತ ನಿನಗೆ ಹೇಳುತ್ತಿದ್ದಾನೆ. ನಿನಗೆ ನೆಟ್ಟಗೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲವಾದರೂ ನಿನ್ನ ಮೇಲೆ ನಂಬಿಕೆಯಿಟ್ಟು ಆತ ನಿನ್ನನ್ನು ಈ ಕೆಲಸಕ್ಕಾಗಿ ನೇಮಿಸಿದ್ದರಿಂದ ನಿನಗೆ ಸಂತಸವಾಗಿದೆ. ಯಾರಿಗೆ ಬೇಕು ಆ ಹಾಳು ಗೋದಾಮು! ಈ ಶುಕ್ರವಾರವು ಚೆನ್ನಾಗಿ ಕಳೆದರೆ ಮೆಗಾ ಸ್ಟೋರಿನ ಮಾರಾಟ ವಿಭಾಗದಲ್ಲಿ ಒಂದು ಉದ್ಯೋಗವನ್ನು ಕೇಳಲೂಬಹುದು ಎಂದು ನೀನು ಮನದಲ್ಲೇ ಮಂಡಿಗೆ ಮೆಲ್ಲುತ್ತಿರುವೆ.  

*************

ಅಂತೂ ಶುಕ್ರವಾರವು ಬಂದಾಗಿದೆ. ಮೆಗಾ ಸ್ಟೋರ್ ಎಂದಿನಂತೆ ಒಂಭತ್ತಕ್ಕೆ ತೆರೆಯುವ ಬದಲು ಮುಂಜಾನೆಯ ಆರಕ್ಕೇ ಬಾಗಿಲು ತೆರೆದಿದೆ. ಮುಂಜಾನೆಯ ಈ ಅವಧಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನೀಡಲಾಗುವ ವಿಶೇಷ ಕಡಿತದ ಸೌಲಭ್ಯವನ್ನು ಬಳಸುವ ಬಗ್ಗೆ ನೀನು ಈ ಬಾರಿ ಯೋಚಿಸುತ್ತಿರುವೆ. ಅಂದಹಾಗೆ ಆ ಬೇಸ್ ಬಾಲ್ ಕೈಗವಚದ ಅಸಲಿ ದರ ನೂರಾಎಪ್ಪತ್ತೈದು ಡಾಲರುಗಳು. ವ್ಯಾಪಾರಮೇಳದ ಕಡಿತದಿಂದಾಗಿ ದರವು ಎಪ್ಪತ್ತೊಂಭತ್ತು ಡಾಲರುಗಳಿಗೆ ಇಳಿದಿದೆ. ಇನ್ನು ಈ ವಿಶೇಷ ಸೌಲಭ್ಯವನ್ನು ಬಳಸಿದ್ದೇ ಆದಲ್ಲಿ ಎಪ್ಪತ್ತೊಂದು ಡಾಲರಿನ ದರ ಮತ್ತು ಆರು ಡಾಲರಿನ ತೆರಿಗೆಯೊಂದಿಗೆ ಎಪ್ಪತ್ತೇಳು ಡಾಲರಿನಲ್ಲೇ ನೀನದನ್ನು ಖರೀದಿಸಬಹುದು. ಒಳಗೊಳಗೇ ಖುಷಿಯಾದ ನೀನು ತಡಮಾಡದೆ ಆ ಕೈಗವಚವನ್ನು ಖರೀದಿಸಿಯಾಗಿದೆ. ಕೈಗವಚವನ್ನು ಒಂದು ಕೈಗೆ ಧರಿಸಿ ಇನ್ನೊಂದು ಕೈಯ ಮುಷ್ಟಿಯನ್ನು ಅದಕ್ಕೆ ಗುದ್ದಿ ಹೆಮ್ಮೆಯಿಂದ ನೀನು ಆ ಕೈಗವಚವನ್ನು ನೋಡುತ್ತಿರುವೆ. ನಂತರ ಅದನ್ನು ತನ್ನ ತೆರೆದ ಲಾಕರಿನೊಳಗೆ ಇಡುವ ಮನಸ್ಸಾಗದೆ ಮರಳಿ ಕೈಚೀಲದಲ್ಲೇ ಇರಿಸಿ ಸ್ಟೋರಿನ ಮಹಿಳಾ ವಿಭಾಗದ ಕೌಂಟರಿನೊಳಗೆ ನೀನು ಸುರಕ್ಷಿತವಾಗಿ ಬಚ್ಚಿಟ್ಟಿರುವೆ. 

ಮುಂಜಾನೆಯ ನಾಲ್ಕೂ ಮೂವತ್ತರ ವೇಳೆಗೆ ಈ ಮಾರಾಟಮೇಳದ ಜಾಹೀರಾತಿನ ಸ್ಟಿಕ್ಕರೊಂದನ್ನು ಟೆಲಿವಿಷನ್ ಪರದೆಗೆ ಅಂಟಿಸುತ್ತಿರುವಂತೆಯೇ ಮುಖ್ಯ ಬಾಗಿಲಿನ ಹೊರಗೆ ಸೇರುತ್ತಿರುವ ಜನಸಂದಣಿಯು ನಿನಗೆ ಕಾಣುತ್ತಿದೆ. ಘಂಟೆಯು ಐದಾಗುತ್ತಿದ್ದಂತೆಯೇ ಬಹಳಷ್ಟು ಜನರು ಮುಖ್ಯ ಬಾಗಿಲಿನ ಬಳಿ ಗುಂಪುಕಟ್ಟಿ ನಿಂತಾಗಿದೆ. ಅವರ ಮೂಖ, ಮೂತಿಗಳು ಆ ಗಾಜಿನ ಬಾಗಿಲಿಗೆ ಅಂಟಿಕೊಂಡಂತೆ ಅವರುಗಳು ಒಳಗೆ ಬರುವ ಕಾತರ ಮತ್ತು ಅವಸರದಲ್ಲೇ ಕಾಯುತ್ತಿದ್ದಾರೆ. ಯಾವೊಬ್ಬನ ಮುಖದಲ್ಲೂ ಸಮಾಧಾನವಿದ್ದಂತಿಲ್ಲ. ಎಲ್ಲರಿಗೂ ಆದಷ್ಟು ಬೇಗ ಒಳಬರುವ ತವಕ. ಕೆಲವರ ಮುಖಗಳಂತೂ ತಾಳ್ಮೆಗೆಟ್ಟು ಕೆಂಪಾಗಿದೆ. ಒಬ್ಬನಂತೂ ಆಗಲೇ ಮತ್ತೊಬ್ಬನ ಕೆನ್ನೆಗೆ ಜೋರಾಗಿ ಬಾರಿಸಿದ್ದಾನೆ. ಪೆಟ್ಟು ತಿಂದಾತ ಕುಸಿದು ನೆಲಕ್ಕೆ ಬಿದ್ದಿದ್ದಾನೆ. ಇದರೊಂದಿಗೇ ಬಾಗಿಲ ಹೊರಗೆ ಕೇಳುತ್ತಿದ್ದ ನೂಕುನುಗ್ಗಲಿನ ಗಲಾಟೆಯು ಮತ್ತಷ್ಟು ಹೆಚ್ಚಾದಂತೆ ಕಾಣುತ್ತಿದೆ. “ಶಾಂತಿ, ಸಂಯಮ… ಶಾಂತಿ, ಸಂಯಮ…'', ಎಂದು ನೀನು ಸ್ವತಃ ಹೇಳುತ್ತಾ ತನ್ನನ್ನು ತಾನೇ ಶಾಂತಗೊಳಿಸಲು ಪ್ರಯತ್ನಿಸುತ್ತಿರುವೆ. 

ಅಷ್ಟರಲ್ಲಿ ಪಕ್ಕದ ಕೋಣೆಯಿಂದ ಈಚೆ ಬರುತ್ತಿರುವ ಸಹೋದ್ಯೋಗಿಯೊಬ್ಬನನ್ನು ನೀನು ನೋಡಿರುವೆ. ಅವನು ನಿನಗೆ ತನ್ನತ್ತ ಬರುವಂತೆ ಕೈಸಂಜ್ಞೆಯನ್ನು ಮಾಡುತ್ತಿರುವಂತೆಯೇ ನೀನು ಅವನ ಬಳಿ ಲಗುಬಗೆಯಿಂದ ತೆರಳಿ ಇದೇ ಮೊದಲಬಾರಿಗೆ ತಾನು ಕೆಳಮಹಡಿಯಲ್ಲಿ ಪಾಳಿಗೆ ಬಂದಿರುವೆನೆಂದೂ, ಈ ನೂಕುನುಗ್ಗಲನ್ನು ಸಂಭಾಳಿಸಬಹುದೇ ಹೇಗೆ ಎಂಬ ಆತಂಕದಿಂದ ಕೇಳುತ್ತಿರುವೆ. ಈ ಜನಸಂದಣಿಯನ್ನು ನಿಯಂತ್ರಿಸಲು ಹೆಚ್ಚಿನ ಜನರು ಬೇಕಾಗಬಹುದಲ್ಲವೇ ಎಂದೂ ನೀನು ಅವನಲ್ಲಿ ಕೇಳುತ್ತಿರುವೆ. ಅವನ ದಪ್ಪನೆಯ ಮುಖದಲ್ಲಿ ಅಂಟಿಸಿಟ್ಟಂತಿದ್ದ ಪುಟ್ಟ ತುಟಿ ಮತ್ತು ಅವನ ಮುಗುಳ್ನಗೆಯು ನಿನಗೆ ಕೊಂಚ ತಮಾಷೆಯೆನಿಸುತ್ತಿದೆ. ಹೆಚ್ಚಿನ ಜನರು ಸಹಾಯಕ್ಕಾಗಿ ಬರಲು ಇನ್ನೂ ಹದಿನೈದು ನಿಮಿಷಗಳಾಗಬಹುದು ಅಂದು ಅವನು ನಿನ್ನಲ್ಲಿ ಹೇಳುತ್ತಾನೆ. ಅವನ ಕಣ್ಣುಗಳಲ್ಲಿರುವ ಗಾಬರಿಯೂ, ಹಣೆಯಲ್ಲಿ ಮಣಿಗಳಂತೆ ಸಾಲುಗಟ್ಟಿರುವ ಬೆವರಹನಿಗಳೂ ನಿನಗೀಗ ಸ್ಪಷ್ಟವಾಗಿ ಕಾಣುತ್ತಿವೆ.  

ಅಷ್ಟರಲ್ಲಿ ತನ್ನ ಕೈಯಲ್ಲಿದ್ದ ಧ್ವನಿವರ್ಧಕವೊಂದನ್ನು ಆತ ಈಗ ನಿನ್ನ ಕೈಗೆ ಹಸ್ತಾಂತರಿಸಿದ್ದಾನೆ. ಇದನ್ನೇಕೆ ಕೊಟ್ಟನೆಂದು ನಿನಗೆ ತಿಳಿದಿಲ್ಲವಾದರೂ ಮರುಮಾತಿಲ್ಲದೆ ನೀನು ತೆಗೆದುಕೊಂಡಿರುವೆ. ತನಗೆ ಮೂರನೇ ಮಹಡಿಯಲ್ಲಿ ಬಹುಮುಖ್ಯವಾದ ಕೆಲಸವೊಂದನ್ನು ಮುಗಿಸಲು ಹೋಗಬೇಕಾಗಿದೆ ಎಂದು ಹೇಳುವ ಆತ ತನಗೆ ಪುಟ್ಟ ಸಹಾಯವನ್ನು ಮಾಡಬೇಕೆಂದು ನಿನ್ನಲ್ಲಿ ಕೇಳಿಕೊಳ್ಳುತ್ತಿದ್ದಾನೆ. ಧ್ವನಿವರ್ಧಕವನ್ನು ಹೇಗೆ ಆನ್ ಹೇಗೆ ಮಾಡುವುದೆಂದು ಹೇಳಿಕೊಡುವುದರ ಜೊತೆಗೇ ಮೆಗಾ ಸ್ಟೋರಿನ ಮುಖ್ಯದ್ವಾರದ ಬಳಿ ತೆರಳಿ ಜನರನ್ನು ನಿಯಂತ್ರಿಸಲು ಕೆಲ ಮಾತುಗಳನ್ನು ಹೇಗೆ ಆಡಬೇಕೆಂದು ನಿನಗೆ ಆತ ಹೇಳಿಕೊಟ್ಟಿದ್ದಾನೆ. “ಸಮಯ ಇನ್ನೂ ಐದೂ ಕಾಲು ಆಗಿದೆಯಷ್ಟೇ… ಸ್ಟೋರ್ ತೆರೆಯಲು ಇನ್ನೂ ಸಮಯವಿದೆ… ದಯವಿಟ್ಟು ಮುಂಭಾಗದಲ್ಲಿ ಸ್ವಲ್ಪ ಜಾಗವನ್ನು ಮಾಡಿಕೊಳ್ಳಿ… ಅವಸರ ಬೇಡ, ಎಲ್ಲರಿಗೂ ಸಾಕಾಗುವಷ್ಟು ಸಾಮಾನುಗಳಿವೆ… ಹೀಗೆ ಏನಾದರೂ ಹೇಳಿ ಇವರನ್ನು ಸಂಭಾಳಿಸಲಾಗುತ್ತಾ ನೋಡು'', ಎಂದು ಆತ ನಿನಗೆ ಸಲಹೆಯನ್ನು ಕೊಡುತ್ತಿದ್ದಾನೆ. ಅಂತೂ ನೀನು ಯೋಚಿಸಿ ಒಪ್ಪಿಕೊಳ್ಳುವುದರ ಮೊದಲೇ ನಿನ್ನ ಕೈಯಲ್ಲಿ ಆ ಧ್ವನಿವರ್ಧಕವನ್ನಿಟ್ಟು, ನಿನಗೊಂದು ಧನ್ಯವಾದವನ್ನೂ ಕೊಟ್ಟು ಅವನು ಮರೆಯಾಗಿಬಿಟ್ಟಿದ್ದಾನೆ. 

ನಿನಗೀಗ ನಿಜಕ್ಕೂ ಭಯವಾಗಿದೆ. ನಿನ್ನಿಂದಾಗುವ ಕೆಲಸವೇ ಇದು? ನೀನು ಈ ಹುಚ್ಚೆದ್ದ ಗುಂಪನ್ನು ನಿಯಂತ್ರಿಸಬಲ್ಲೆಯಾ? ಪುಟ್ಟ ಮಗನನ್ನು ಆಗೊಮ್ಮೆ ಈಗೊಮ್ಮೆ ಸಂಭಾಳಿಸಿದ್ದು ಬಿಟ್ಟರೆ ಇಂಥಾ ಕೆಲಸಗಳನ್ನು ಮಾಡಿ ಗೊತ್ತಿರುವವನಲ್ಲ ನೀನು. ಬಹಳಷ್ಟು ಯೋಚಿಸಿದ ಮೇಲೆ ಮುಚ್ಚಿದ ಬಾಗಿಲ ಹಿಂದೆಯೇ ನಿಂತು ಆತ ಹೇಳಿಕೊಟ್ಟಿದ್ದಂತೆ ಏನಾದರೂ ಹೇಳುತ್ತಾ ಸಹಾಯಕ್ಕೆ ಮತ್ತಷ್ಟು ಸಹೋದ್ಯೋಗಿಗಳು ಬರುವವರೆಗೆ ಹದಿನೈದು ನಿಮಿಷಗಳನ್ನು ಕಳೆಯುವೆ ಎಂದು ನೀನು ನಿರ್ಧರಿಸಿಯಾಗಿದೆ. “ಇನ್ನೂ ಐದೂ ಕಾಲು ಆಗಿದೆಯಷ್ಟೇ… ಸ್ಟೋರ್ ತೆರೆಯಲು ಇನ್ನೂ ಸಮಯವಿದೆ…'', ಅಂತೆಲ್ಲಾ ಹೇಳುವುದು ದೊಡ್ಡ ಸಂಗತಿಯೇ? ನೀನು ಈ ಜನರನ್ನು ಸಂಭಾಳಿಸಿದ್ದೇ ಆದರೆ ಮ್ಯಾನೇಜರ್ ಖುಷಿಯಾಗುತ್ತಾನೆ. ಆಗದಿದ್ದರೂ ಅಂಥಾ ತೊಂದರೆಯೇನಿಲ್ಲ. ಏಕೆಂದರೆ ಇದು ನಿಜಕ್ಕೂ ನನ್ನ ಕೆಲಸವೇ ಅಲ್ಲವಲ್ಲಾ! ಮೂರನೇ ಮಹಡಿಗೆ ಹೋದ ಆ ದೊಡ್ಡ ಮುಖದವನ ಬದಲಿಗೆ ನಾನಿಲ್ಲಿ ಕೆಲ ನಿಮಿಷಗಳ ಕಾಲ ನಿಂತಿರುವೆನಷ್ಟೇ ಎಂದು ನೀನು ನಿನ್ನನ್ನೇ ಸಂತೈಸುತ್ತಿರುವೆ. 

ಧ್ವನಿವರ್ಧಕವನ್ನು ಹಿಡಿದುಕೊಂಡು ಕೋಣೆಯ ಮುಂಭಾಗದಿಂದ ಬಲಕ್ಕೆ ತೆರಳಿ ಮುಖ್ಯ ಬಾಗಿಲ ಬಳಿ ನೀನು ಬಂದಾಗಿದೆ. ತಕ್ಷಣ ಮಗನಿಗಾಗಿ ಖರೀದಿಸಿದ ಬೇಸ್ ಬಾಲ್ ಕೈಗವಚವು ಮನದಲ್ಲಿ ಬಂದು ಅದನ್ನು ನೀನು ಸುರಕ್ಷಿತವಾಗಿಟ್ಟಿರುವೆ ಎಂಬುದು ನೆನಪೂ ಆಗಿ ನಿನಗೆ ಸಂತಸವಾಗಿದೆ. ಗಾಜಿನ ಬಾಗಿಲ ಬಳಿ ನೀನು ಬರುತ್ತಿರುವಂತೆಯೇ ಪಾರ್ಕಿಂಗ್ ಸ್ಥಳದವರೆಗೂ ಹಿಗ್ಗಿರುವ ಜನಸ್ತೋಮವು ನಿಂತಲ್ಲೇ ಮೆಲ್ಲನೆ ಅತ್ತಿತ್ತ ಸರಿಯುತ್ತಾ ದಪ್ಪನೆಯ ಮಹಾಸರ್ಪವೊಂದು ಉಸಿರಾಡುತ್ತಿರುವಂತೆ ನಿನಗೆ ಕಾಣುತ್ತಿದೆ. ಇಬ್ಬರಂತೂ ಜೋರಾಗಿ ಗಾಜಿನ ಬಾಗಿಲಿನ ಮೇಲೆ ತಮ್ಮ ಕೈಗಳಿಂದ ಹೊಡೆಯುತ್ತಿದ್ದಾರೆ. ಒಬ್ಬನ ಕೈಯಲ್ಲಿ ಉದ್ದನೆಯ ಲೋಹದಂತಿರುವ ವಸ್ತುವೊಂದು ನಿನಗೆ ಕಾಣುತ್ತಿದೆ. 

ಅಳುಕಿನಿಂದಲೇ ಧ್ವನಿವರ್ಧಕದ ಸ್ವಿಚ್ ಅನ್ನು ಆನ್ ಮಾಡಿರುವ ನೀನು ಅದನ್ನು ನಿನ್ನ ತುಟಿಯ ಬಳಿ ತಂದಾಗಿದೆ. “ಮೆಗಾಸ್ಟೋರಿಗೆ ನಿಮಗೆಲ್ಲರಿಗೂ ಸ್ವಾಗತ'', ಎಂದು ನೀನು ಮೆಲ್ಲಗೆ ಮಾತನ್ನಾರಂಭಿಸಿದ್ದೀಯಾ. ನಿನ್ನ ಧ್ವನಿಯ ತೀವ್ರತೆಯು ದಪ್ಪನೆಯ ಗೋಡೆಗಳನ್ನೂ ದಾಟಿ ಹೋಗುತ್ತಿರುವುದನ್ನು ಕಂಡ ನಿನಗೆ ಈ ಬಾರಿ ನಿಜಕ್ಕೂ ಅಚ್ಚರಿಯಾಗಿದೆ. 

ಸ್ವಾಗತದಂತಿರುವ ನಿನ್ನ ಹಟಾತ್ ಘೋಷಣೆಯ ಸ್ವರದಿಂದ ಕೊಂಚ ಬದಲಾವಣೆಯಂತೂ ಆಗಿದೆ. ಆದರೆ “ಸ್ಟೋರ್ ತೆರೆಯಲು ಇನ್ನೂ ನಲವತ್ತೈದು ನಿಮಿಷಗಳಿವೆ'' ಎಂದು ನೀನು ಹೇಳುವಷ್ಟರಲ್ಲೇ ನಿನ್ನೆದುರಿಗಿದ್ದ ಗಾಜಿನ ಬಾಗಿಲು ದೊಡ್ಡದಾಗಿ ಸದ್ದು ಮಾಡುತ್ತಾ ಚೂರಾಗಿ, ಜನಸಮೂಹವು ದೈತ್ಯಅಲೆಯೊಂದರಂತೆ ನಿನ್ನತ್ತ ಮುನ್ನುಗ್ಗಿದೆ. “ಸ್ನೇಹಿತರೇ, ದಯವಿಟ್ಟು ಶಾಂತರಾಗಿರಿ'', ಎಂದು ನೀನು ಮಾತನಾಡುತ್ತಿರುವಂತೆಯೇ ಈ ಮಹಾಮಾನವ ಅಲೆಯು ನಿನ್ನ ಮೇಲೆ ಏರಿಬಂದಾಗಿದೆ. ನಿನ್ನ ಮೇಲೆ, ನಿನ್ನ ಸುತ್ತಲೂ ಹೀಗೆ ಎಲ್ಲೆಲ್ಲೂ ಜನರೇ. ನಿನ್ನ ದೇಹವೂ, ತಲೆಯೂ ನೆಲಕ್ಕೆ ಅಪ್ಪಚ್ಚಿಯಾಗುವಂತೆ ನೆಲಕ್ಕಂಟಿಕೊಂಡು ಒದ್ದಾಡುತ್ತಿದೆ. 

ಬಿದ್ದ ಭಂಗಿಯಲ್ಲೇ ಪ್ರಖರವಾದ ಬೆಳಕಿನ ಮಿಂಚೊಂದನ್ನು ಕಂಡಂತೆ ನಿನಗೆ ತಕ್ಷಣ ಭಾಸವಾಗಿದೆ. ಮೆಲ್ಲಗೆ ತನ್ನ ಕೈಯನ್ನು ಸರಿಸಿ ತಲೆಯತ್ತ ತರುವ ನಿನಗೆ ಕೈಗಳು ರಕ್ತದಿಂದ ಒದ್ದೆಯಾಗುತ್ತಿರುವ ಅನುಭವವಾಗುತ್ತಿದೆ. ಹೇಗೋ ಮೊಣಕಾಲಿನ ಮೇಲೆ ನಿಂತು ನೀನು ನಿಲ್ಲಲು ಪ್ರಯತ್ನಿಸುತ್ತಿರುವಂತೆಯೇ ಮತ್ತೋರ್ವ ನಿನ್ನನ್ನು ಝಾಡಿಸಿ ನೆಲಕ್ಕೆ ಒದ್ದು ಮುನ್ನಡೆದಿದ್ದಾನೆ. ನಂತರ ಎಲ್ಲರ ತುಳಿತಗಳೇ ನಿನ್ನನ್ನು ಅಪ್ಪಚ್ಚಿ ಮಾಡಿಹಾಕುತ್ತಿವೆ. ನಿನ್ನ ತಲೆ, ನಿನ್ನ ಎದೆ, ನಿನ್ನ ಪೃಷ್ಠ… ಹೀಗೆ ಎಲ್ಲೆಲ್ಲೂ ತುಳಿತವೇ. ಈ ಮಧ್ಯೆಯೇ ನಿನ್ನ ಎದೆಯ ಭಾಗದಲ್ಲಿ ಏನೋ ಅಚಾನಕ್ಕಾಗಿ ಬಿರಿದ ಸದ್ದಾದಂತೆ ನಿನಗೆ ಭಾಸವಾಗಿದೆ. ಅದು ಪಕ್ಕೆಲುಬಿರಬಹುದೆಂದು ನೀನು ಪ್ರಯಾಸದಿಂದಲೇ ಯೋಚಿಸುತ್ತಿರುವೆ. ನಂತರದ ಕೆಲಕ್ಷಣಗಳಲ್ಲೇ ಬಲವಾದ ಹೊಡೆತವೊಂದು ತನ್ನ ತಲೆಯ ಹಿಂಭಾಗಕ್ಕೆ ಬಿದ್ದಂತೆ ನಿನಗೆ ಅನುಭವವಾಗುತ್ತದೆ. ಜೊತೆಗೇ ಈ ಹೊಡೆತದ ಹಿಂದೆಯೇ ಬಂದ ಅಗಾಧವಾದ ನೋವೂ ಕೂಡ. 

*****************

ಅದು ಡಿಸೆಂಬರ್ ನಾಲ್ಕನೇ ತಾರೀಖಿನ ಮುಂಜಾವು. 

ಮೆಗಾ ಸ್ಟೋರಿನ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಧ್ಯವಯಸ್ಸಿನ ವಿಚ್ಛೇದಿತ ಮಹಿಳೆಯೊಬ್ಬಳು ಕೌಂಟರಿನ ಬಳಿ ಎಂದಿನಂತೆ ತನ್ನ ಕೆಲಸವನ್ನು ಮಾಡುತ್ತಿದ್ದಾಳೆ. ಹೀಗೆ ಕೆಲಸದ ಮಧ್ಯದಲ್ಲೇ ಅವಳ ಕಿವಿಯ ಓಲೆಯು ನೆಲಕ್ಕೆ ಬಿದ್ದ ಪರಿಣಾಮವಾಗಿ ಬಗ್ಗಿ ಅದನ್ನು ಹೆಕ್ಕುವ ಆಕೆಗೆ ಕೌಂಟರಿನ ಮೂಲೆಯೊಂದರಲ್ಲಿ ಇಟ್ಟಿದ್ದ ಚಿಕ್ಕ ಕೈಚೀಲವೊಂದು ಕಣ್ಣಿಗೆ ಬೀಳುತ್ತದೆ. ಆ ಪುಟ್ಟ ಚೀಲವನ್ನು ತೆರೆದು ನೋಡಿದರೆ ಅವಳಿಗೆ ಕಾಣಸಿಗುವುದು ಬೇಸ್ ಬಾಲ್ ಕೈಗವಚ. ಅಲ್ಲದೆ ಆ ಚೀಲದೊಳಗೆ ನವೆಂಬರ್ ಇಪ್ಪತ್ತೆಂಟರ ದಿನಾಂಕದ ಒಂದು ರಸೀದಿಯೂ ಇದೆ. ಮೆಗಾ ಸ್ಟೋರಿನ ಆ ರಸೀದಿಯಲ್ಲಿ ನೂರಾಮೂವತ್ತೈದು ಡಾಲರಿನ ಆ ಕೈಗವಚವು ಕಡಿತದ ದರದಲ್ಲಿ ಎಪ್ಪತ್ತೊಂಭತ್ತು ಡಾಲರಾಗಿದ್ದೂ, ಜೊತೆಗೇ ಉದ್ಯೋಗಿಗಳಿಗೆ ಕೊಡಲಾಗುವ ವಿಶೇಷ ಕಡಿತವನ್ನು ಉಪಯೋಗಿಸಿಕೊಂಡು ಅದನ್ನು ಖರೀದಿಸಿದ ದಾಖಲೆಯೂ ಇದೆ. ರಸೀದಿಯ ಮೇಲೆ ನಮೂದಿಸಿದ್ದ ಹೆಸರಿನಿಂದ ಆ ಕೈಚೀಲವು ನಿಜಕ್ಕೂ ಯಾರಿಗೆ ಸೇರಬೇಕಾಗಿದ್ದಿದು ಎಂಬುದು ಅವಳಿಗೆ ತಿಳಿಯುತ್ತದೆ. 

ಅಷ್ಟಕ್ಕೂ ರಸೀದಿಯಲ್ಲಿ ನಮೂದಿಸಿದ್ದ ಆ ಹೆಸರನ್ನು ಅವಳು ಯಶಸ್ವಿಯಾಗಿ ಗುರುತುಹಿಡಿದಿದ್ದಳು. ಬಡವನಾಗಿದ್ದರೂ ಶ್ರಮಿಕನಾಗಿದ್ದ ಆತನ ನೆನಪಾಗಿ ಅವಳಿಗೆ ಮರುಕವೂ ಹುಟ್ಟುತ್ತದೆ. “ಬ್ಲ್ಯಾಕ್ ಫ್ರೈಡೇ'' ದಿನವೇ ಕೊನೆಯುಸಿರೆಳೆದ ಅಮಾಯಕ ಆತ. “ `ಚಿಕ್ಕ ವೈದ್ಯಕೀಯ ತುತರ್ು' ಪರಿಸ್ಥಿತಿಯೊಂದು ಮೆಗಾ ಸ್ಟೋರಿನಲ್ಲುಂಟಾಗಿದೆ, ಹೀಗಾಗಿ ಮೆಗಾ ಸ್ಟೋರನ್ನು ಒಂದು ದಿನದ ಮಟ್ಟಿಗೆ ಮುಚ್ಚಬೇಕಾಗುತ್ತದೆ ಎಂದಷ್ಟೇ ಮೆಗಾ ಸ್ಟೋರಿನ ಮಂಡಳಿಯು ಹೇಳಿದೆ'', ಎಂದು ಮರುದಿನದ ಪತ್ರಿಕೆಯಲ್ಲಿ ಘಟನೆಯ ಬಗ್ಗೆ ಪ್ರಕಟವಾಗಿತ್ತು. ಬ್ಲ್ಯಾಕ್ ಫ್ರೈಡೇ ದಿನದಲ್ಲಿ ಘಟಿಸಿದ ಕಾಲ್ತುಳಿತದ ಬಗ್ಗೆ ಯಾವ ಮಾಹಿತಿಯೂ ಪತ್ರಿಕೆಗಳಲ್ಲಿ ಬರದಂತೆ ಸಂಸ್ಥೆಯವರು ಉಪಾಯವಾಗಿ ಪ್ರಕರಣವನ್ನು ಮುಚ್ಚಿಹಾಕುವುದರಲ್ಲಿ ಯಶಸ್ವಿಯಾಗಿದ್ದರು. ಆದರೂ ಮೆಗಾಸ್ಟೋರಿನ ಎಲ್ಲಾ ಉದ್ಯೋಗಿಗಳಿಗೂ ಸತ್ಯವು ಏನೆಂಬುದು ತಿಳಿದಿತ್ತು ಅನ್ನುವುದು ಬೇರೆ ವಿಷಯ. ಯಾವುದಕ್ಕೂ ಇರಲಿ ಎಂದು ರಸೀದಿಯ ಮೇಲೆ ನಮೂದಿಸಿದ ಹೆಸರನ್ನು ಪುನಃ ಪರಿಶೀಲಿಸುವ ಆಕೆಗೆ ಅದು ಮೃತವ್ಯಕ್ತಿಯದ್ದೇ ಎಂಬುದು ಖಾತ್ರಿಯಾಗುತ್ತದೆ. ಆ ಕೈಗವಚವನ್ನು ಅಲ್ಲೇ ಇಡಲೇ ಅಥವಾ ಎತ್ತಿಕೊಳ್ಳಲೇ ಎಂಬ ಗೊಂದಲ ಅವಳಿಗೆ. ಏಕೆಂದರೆ ತನ್ನನ್ನು ತಾನು ಮಹಾಪ್ರಾಮಾಣಿಕಳೆಂದೇ ಭಾವಿಸಿದವಳು ಆಕೆ.              

ಆದರೂ ಅವಳ ಮನದಲ್ಲಿ ತರಹೇವಾರಿ ಯೋಚನಾಲಹರಿಗಳು. ಸತ್ತವನಂತೂ ಸತ್ತಾಯಿತು. ಇನ್ನು ಈ ಕೈಗವಚವನ್ನು ಅವನು ಏನು ತಾನೇ ಮಾಡಬಲ್ಲ? ಅಷ್ಟಕ್ಕೂ ಬೇಸ್ ಬಾಲ್ ಆಡುವ ವಯಸ್ಸೂ ಆತನದಾಗಿರಲಿಲ್ಲ. ಆದರೆ ಆ ಕೈಗವಚವನ್ನು ನೋಡುತ್ತಲೇ ಅವಳಿಗೆ ತನ್ನ ಹನ್ನೆರಡು ವರ್ಷದ ಮಗನ ನೆನಪಾಗುತ್ತದೆ. ಇದನ್ನು ಅವನಿಗಾದರೂ ಕೊಡಬಹುದಲ್ಲಾ ಎಂಬ ಯೋಚನೆ ಅವಳದ್ದು. ಶಾಲೆಯಲ್ಲಿ ನಡೆಸಲಾಗುತ್ತಿದ್ದ ಚಿಣ್ಣರ ಬೇಸ್ ಬಾಲ್ ಲೀಗಿನ ಸದಸ್ಯನೂ ಆಗಿದ್ದ ಅವಳ ಮುದ್ದುಮಗ. ಇನ್ನು ಈ ಕೈಗವಚವು ಆತನು ಖರೀದಿಸಿದ್ದೇ ಆಗಿರುವುದರಿಂದ ಇದನ್ನು ಮನೆಗೆ ಕೊಂಡೊಯ್ದರೂ ಕದ್ದಂತಾಗುವುದಿಲ್ಲ ಎಂದು ತನಗೆ ತಾನೇ ಸಾಂತ್ವನವನ್ನು ಹೇಳಿಕೊಂಡಳಾಕೆ. ಇವೆಲ್ಲದರ ಜೊತೆಗೇ ತನ್ನ ಮಾಜಿ ಪತಿಯ ನೆನಪೂ ಅವಳಿಗಾಯಿತು. ನಿಯಮಿತವಾಗಿ ಆತನಿಂದ ಬರಬೇಕಿದ್ದ ಹಣವೂ ಈಗೀಗ ಬರುತ್ತಿರಲಿಲ್ಲ. ಸಹಜವಾಗಿಯೇ ಅವಳು ಆತನ ಬೇಜವಾಬ್ದಾರಿಯಿಂದ ಸಿಡಿಮಿಡಿಗೊಂಡಿದ್ದಳು. ಕ್ರಿಸ್ಮಸ್ ಹಬ್ಬದ ಖರೀದಿಗಾಗಿ ಅವಳಿಗೆ ನಿಜಕ್ಕೂ ತುತರ್ಾಗಿ ಹಣದ ಅವಶ್ಯಕತೆಯಿತ್ತು.   

ಹೀಗೆ ಯೋಚಿಸುತ್ತಿದ್ದಂತೆಯೇ ಆ ಕೈಗವಚವನ್ನು ಸುಮ್ಮನೆ ದಿಟ್ಟಿಸತೊಡಗಿದಳು ಆಕೆ. ಚೆನ್ನಾಗಿ ಪಾಲಿಷ್ ಮಾಡಿದಂತಿರುವ, ಹೊಳಪುಳ್ಳ, ನೋಡಲು ದುಬಾರಿಯಂತಿದ್ದ ಕೈಗವಚವದು. ಗಾತ್ರದಲ್ಲಿ ದೊಡ್ಡದಾಗಿದ್ದು ಅದು ವಯಸ್ಕನೊಬ್ಬನಿಗೆ ಹೊಂದುವಂತಿದ್ದರೂ ಬೆಳೆಯುತ್ತಿರುವ ಬಾಲಕನೊಬ್ಬನು ಕೆಲ ವರ್ಷಗಳ ಕಾಲ ಇದನ್ನು ಬಳಸಬಹುದು ಎಂದು ಲೆಕ್ಕ ಹಾಕಿದಳು ಆ ತಾಯಿ. ನಾನಿದನ್ನು ಉಡುಗೊರೆಯಾಗಿ ಕೊಟ್ಟರೆ ಮಗನ ಮುಖವು ಖುಷಿಯಿಂದ ಅದೆಷ್ಟು ಅರಳಬಹುದು ಎಂದು ಯೋಚಿಸುತ್ತಾ ಒಳಗೊಳಗೇ ಅವಳಿಗೆ ಖುಷಿಯಾಗಿತ್ತು. ಇನ್ನು ತನ್ನ ಮಾಜಿ ಗಂಡ ಏನು ಮಾಡಿದರೂ ಇಷ್ಟು ದುಬಾರಿ ಉಡುಗೊರೆಯನ್ನು ತನ್ನ ಮಗನಿಗೆ ತರಲಾರ ಎಂಬ ಸತ್ಯವು ಅವಳನ್ನು ಮತ್ತಷ್ಟು ಪುಳಕಿತಗೊಳಿಸಿತ್ತು. ಅಂತೂ ಆ ಬೇಸ್ ಬಾಲ್ ಕೈಗವಚವನ್ನು ಕ್ರಿಸ್ಮಸ್ ಉಡುಗೊರೆಯಾಗಿ ತನ್ನ ಮಗನಿಗೆ ನೀಡುವುದಾಗಿ ಅವಳು ನಿರ್ಧರಿಸಿದ್ದಳು. 
ಮತ್ತು ಈ ನಿಧರ್ಾರದೊಂದಿಗೇ ಆ ಕೈಗವಚವು ಅವಳ ಕಂಕುಳ ಕೆಳಗೆ ನೇತಾಡುತ್ತಿದ್ದ ಪುಟ್ಟ ಚೀಲವನ್ನು ಸೇರಿತ್ತು. 

***************

ಅದೇ ಹೊತ್ತಿನಲ್ಲಿ ಮೆಗಾ ಸ್ಟೋರಿನಿಂದ ಪಶ್ಚಿಮಕ್ಕೆ ಎಂಟು ಮೈಲುಗಳ ದೂರದಲ್ಲಿ, ನೋಡಲು ಪರವಾಗಿಲ್ಲ ಎಂಬಂತಿದ್ದ ಮನೆಯೊಂದರ ಹಿತ್ತಲಿನಲ್ಲಿ ಹತ್ತು ವರ್ಷದ ಬಾಲಕನೊಬ್ಬ ತನ್ನ ತಂದೆಯ ಹಳೆಯ ಬೇಸ್ ಬಾಲ್ ಕೈಗವಚವೊಂದರಲ್ಲಿ ತನ್ನ ಪುಟ್ಟ ಕೈಗಳನ್ನು ತೂರಿಸಿದ್ದ. ಅವನ ಮತ್ತೊಂದು ಕೈಯ ಬೆರಳುಗಳು ಮುಷ್ಟಿಯಾಗಿ ಕೈಗವಚವನ್ನು ತೊಟ್ಟು ದೊಡ್ಡದಾಗಿದ್ದ ಹಸ್ತವನ್ನು ಗುದ್ದುತ್ತಿದ್ದವು. ಅವನ ಕಣ್ಣಿನಿಂದ ಉದುರುತ್ತಿದ್ದ ಹನಿಗಳು ಅವನ ನುಣುಪಾದ ಕೆನ್ನೆಯನ್ನು ಒಂದೇ ಸಮನೆ ಒದ್ದೆ ಮಾಡುತ್ತಲೂ ಇದ್ದವು. 

“ಎಷ್ಟು ದೊಡ್ಡದಾಗಿದೆ ಈ ಕೈಗವಚ! ಇರಲಿ, ಇದಕ್ಕಾಗಿಯಾದರೂ ನಾನು ಬೇಗನೇ ದೊಡ್ಡವನಾಗುವೆ'', ಎಂದು ನಿಟ್ಟುಸಿರಾಗುತ್ತಾ ತನಗೇ ಹೇಳಿಕೊಂಡ ಆ ಬಾಲಕ. 

**************

ಮೂಲ ಲೇಖಕರು: ಡಾನ್ ಶಿಯಾ
ಅಮೆರಿಕನ್ ಲೇಖಕರಾದ ಡಾನ್ ಶಿಯಾ ತಮ್ಮ ಸಣ್ಣಕಥೆಗಳಿಂದ ಆಂಗ್ಲಭಾಷಾ ಸಾಹಿತ್ಯಲೋಕದಲ್ಲಿ ಖ್ಯಾತಿಯನ್ನು ಪಡೆದವರು. ಇವರ ಸಣ್ಣಕಥೆಗಳ ಸಂಗ್ರಹವಾದ “ಇಂಜುರೀಸ್ ಆಂಡ್ ಡಾಮೇಜಸ್'' ಕೃತಿಯು ಅಯೋವಾ ಶಾಟರ್್ ಫಿಕ್ಷನ್ ಪ್ರೈಝ್ ಗೆ ನಾಮಾಂಕಿತಗೊಂಡಿತ್ತು. ಆಕಸ್ಮಿಕವಾಗಿ ಬರೆಯುವ ಹುಚ್ಚು ನನಗೆ ಗಂಟುಬಿತ್ತು ಎನ್ನುವ ಇವರು ವಿಮರ್ಶಕರೂ, ತರಬೇತುದಾರರೂ ಹೌದು.  


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x