ನಮ್ಮ ನಡುವಿನ ಗೋಮುಖವ್ಯಾಘ್ರರು: ಪ್ರಸಾದ್ ಕೆ.

prasad-naik

“ಹೌದು, ಕಳೆದ ಕೆಲ ವರ್ಷಗಳಿಂದ ಈ ಕೃತ್ಯಗಳನ್ನು ಮಾಡುತ್ತಾ ಬಂದಿದ್ದೇನೆ. ಅವುಗಳೆಲ್ಲಾ ಹತ್ತರಿಂದ ಹದಿನೈದು ವರ್ಷದ ಮಕ್ಕಳು'' 

ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡು ಹೇಳುತ್ತಾ ಹೋಗುತ್ತಿದ್ದ ಆತನನ್ನು ನೋಡಿ ನನಗೆ ದಿಗಿಲಾಗಿದ್ದು ಸತ್ಯ. ಈಗಷ್ಟೇ ಹತ್ತನೇ ತರಗತಿಯ ಕ್ಲಾಸಿನಿಂದ ಬಂಕ್ ಮಾಡಿಕೊಂಡು ಬಂದವನೇನೋ ಎಂಬಂತಿದ್ದ, ಇವನಿಗೇನಾದರೂ ಪೋಲೀಸರು ಎರಡೇಟು ಬಿಟ್ಟರೆ ಸತ್ತೇಹೋಗುವನೇನೋ ಎಂಬಂತಿದ್ದ ಈ ನರಪೇತಲನನ್ನು ನೋಡಿ ನಾನು ಒಂದು ಕ್ಷಣ ನಕ್ಕೂ ಬಿಟ್ಟಿದ್ದೆ. ವಿಪಯರ್ಾಸವೆಂದರೆ ಈತನ ಕೃತ್ಯಗಳನ್ನು ಟೆಲಿವಿಷನ್ ವರದಿಯಲ್ಲಿ ನೋಡಿದ ನಂತರ ನಾನು ನಗುವ ಸ್ಥಿತಿಯಲ್ಲಿರಲಿಲ್ಲ. ಈತನೇ ಹೇಳಿದಂತೆ ಒಂದಲ್ಲ, ಎರಡಲ್ಲ, ನೂರಕ್ಕೂ ಹೆಚ್ಚು ಅಮಾಯಕ ಮುಗ್ಧಜೀವಗಳು ಈತನ ವಿಕೃತ ಕಾಮತೃಷೆಗೆ ಬಲಿಯಾಗಿದ್ದವು. ಪೋಲೀಸ್ ಇಲಾಖೆಯು ಈತನ ಬೇಟೆಗಾಗಿ ಅದ್ಯಾವ ಮಟ್ಟದ ಜಾಲವನ್ನು ಹೆಣೆದಿತ್ತೋ ಏನೋ. ಕೊನೆಗೂ ಭಯಾನಕ ಪೀಡೋಫೈಲ್ ಒಬ್ಬನನ್ನು ಬಂಧಿಸುವಲ್ಲಿ ಇಲಾಖೆಯು ಯಶಸ್ವಿಯಾಗಿದೆ. ಆತನ ಹೆಸರು ಸುನಿಲ್ ರಸ್ತೋಗಿ. 

********

ಮನವು ಮತ್ತೆ ಹಿಂದಕ್ಕೋಡಿತ್ತು. ದಪ್ಪನೆಯ ಒಂದು ಬಯಾಗ್ರಫಿ, ರಾಶಿ ಹಾಕಿದ ಫಾರೆನ್ಸಿಕ್ ವರದಿಗಳು, ಅಮೇರಿಕಾದ ಭೂಪಟ, ಕೇಸ್ ಸ್ಟಡೀಸ್, ಇನ್ನೂ ಏನೇನೋ… ಇವೆಲ್ಲವನ್ನೂ ಗುಡ್ಡೆ ಹಾಕಿಕೊಂಡು ಕೆಲ ವಾರಗಳನ್ನೇ ನಾನು ಕಳೆದಿದ್ದೆ. ನಿದ್ದೆ ಮಾಡಿದರೆ ಕನಸಿನಲ್ಲೂ ಹೆಣಗಳು ಕಾಣುತ್ತಿದ್ದವು. ಎದ್ದರೆ ಮುಗಿಯದ ಪ್ರಶ್ನೆಗಳು. ಈ ಹುಚ್ಚು ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ ಪೋಸ್ಟ್-ಮಾರ್ಟಮ್ ಅನ್ನು ಖುದ್ದಾಗಿ ನೋಡುವಂತಹ ವ್ಯವಸ್ಥೆ ಮಾಡಲಾಗಬಹುದೇ ಎಂದು ವೈದ್ಯಮಿತ್ರನೊಬ್ಬನಲ್ಲಿ ಗುಟ್ಟಾಗಿ ಪೆದ್ದನಂತೆ ಕೇಳಿದ್ದೆ. ಸ್ಪಷ್ಟವಾಗಿ `ಆಗಲ್ಲ' ಎಂದಿದ್ದ ಆತ, ಶವ ಕುಯ್ಯುವುದನ್ನು ನೋಡುವುದೆಲ್ಲಾ ಅಷ್ಟು ಸುಲಭದ ಮಾತಲ್ಲ ಮಾರಾಯ ಎಂದು ಹೇಳಿ ನನ್ನ ಉತ್ಸಾಹಕ್ಕೆ ತಣ್ಣೀರೆರಚಿದ್ದ. ಅಂತೂ ಮರಳಿ ಪುಸ್ತಕಗಳಲ್ಲೇ ಮುಳುಗಿಹೋಗುವ ಹೊರತು ನನಗೆ ಬೇರೆ ಆಯ್ಕೆಗಳಿರಲಿಲ್ಲ. 

ಈ ಸುನಿಲ್ ರಸ್ತೋಗಿಯ ನಿಭರ್ಾವುಕ ಮಾತುಗಳನ್ನು ಕೇಳಿದಾಕ್ಷಣ ನನಗೆ ನೆನಪಿಗೆ ಬಂದಿದ್ದು ಇನ್ಯಾರೂ ಅಲ್ಲ. ಟೆಡ್ ಬಂಡಿ ಎಂದೇ ಕುಖ್ಯಾತನಾಗಿದ್ದ ಸರಣಿಹಂತಕ ಥಿಯೊಡೋರ್ ರಾಬಟರ್್ ಬಂಡಿ. ಕ್ಯಾಂಪಸ್ ಕಿಲ್ಲರ್, ರಾಕ್ ಸ್ಟಾರ್ ಆಫ್ ಸೀರಿಯಲ್ ಕಿಲ್ಲರ್ಸ್, ಏಂಜಲ್ ಆಫ್ ಡಿಕೇ… ಹೀಗೆ ಹತ್ತು ಹಲವು ಬಿರುದುಗಳನ್ನು ಮಾಧ್ಯಮಗಳೇ ಆತನಿಗೆ ಕೊಟ್ಟಿದ್ದವು. ಖ್ಯಾತ ಲೇಖಕಿ ಆನ್ ರೂಲ್ ರ “ದ ಸ್ಟ್ರೇಂಜರ್ ಬಿಸೈಡ್ ಮೀ'' ಕೃತಿಯು ಈ ಬಂಡಿಯದ್ದೇ ಕಥೆ. ಅದ್ಹೇಗೋ ಈ ಕೃತಿಯು ನನ್ನನ್ನು ಆಕಷರ್ಿಸಿತ್ತು. ತಡಮಾಡದೆ ಆನ್ಲೈನ್ ಆರ್ಡರ್ ಕೊಟ್ಟು ತರಿಸಿಕೊಂಡಿದ್ದೆ. ಅಪರಾಧಗಳ, ಅಪರಾಧಿಗಳ ಲೋಕಕ್ಕೆ ನನ್ನನ್ನು ಗಂಭೀರವಾಗಿ ಕರೆದುಕೊಂಡು ಹೋಗಿದ್ದು ಈ ಕೃತಿಯೇ. ಮನಃಶಾಸ್ತ್ರ, ಕ್ರೈಂ ರಿಪೋಟರ್ಿಂಗ್, ಅಪರಾಧ ಪತ್ತೆ, ಪರ್ಸನಾಲಿಟಿ ಡಿಸಾರ್ಡರುಗಳು, ಸರಣಿ ಹಂತಕರು, ಅವರ ವಿಲಕ್ಷಣತೆಗಳು… ಹೀಗೆ ಹತ್ತು ಹಲವು ಬಾಗಿಲುಗಳನ್ನು ಈ ಒಂದು ಕೃತಿಯು ನನ್ನೆದುರು ತೆರೆದಿಟ್ಟಿತ್ತು. ಪರಿಣಾಮವಾಗಿ ಹಿಂದೆಂದೂ ಕೇಳಿರದಿದ್ದ ಒಡೊಂಟಾಲಜಿ, ಟ್ಯಾಟ್ ಟೆಸ್ಟ್ ಇತ್ಯಾದಿ ವಿಷಯಗಳ ಅಧ್ಯಯನ ಸಂಬಂಧಿ ವಸ್ತುಗಳು ನನ್ನ ಪುಟ್ಟ ಮೇಜಿನಲ್ಲಿ ರಾಶಿಬಿದ್ದಿದ್ದವು. 

ಟೆಡ್ ಬಂಡಿಯ ನಂತರ ಎಡ್ ಗೀನ್, ಕಾಲರ್ಾ ಹೊಮೋಲ್ಕಾ-ಪೌಲ್ ಬನರ್ಾಡರ್ೊ, ಡಾಹ್ಮರ್, ಬಿ.ಟಿ.ಕೆ, ಐಲೀನ್ ವುನರ್ೋಸ್… ಹೀಗೆ ಬಹಳಷ್ಟು ಅತ್ಯಾಚಾರಿಗಳ, ಸರಣಿಹಂತಕರ ಬಗ್ಗೆ ಮುಗಿಬಿದ್ದು ಓದಿದೆ. ಒಂದಿಷ್ಟು ಬರೆದದ್ದೂ ಆಯಿತು. ಆದರೂ ಈ ಟೆಡ್ ಬಂಡಿಯೆಂಬ ವ್ಯಕ್ತಿ ಇಂದಿಗೂ ನನ್ನನ್ನೇಕೆ ಕಾಡುತ್ತಾನೆ ಎಂಬುದು ಇನ್ನೂ ಬಗೆಹರಿಯದ ಪ್ರಶ್ನೆ. 

ಅಸಲಿಗೆ ಟೆಡ್ ಬಂಡಿ ನನ್ನನ್ನಷ್ಟೇ ಅಲ್ಲ, ಬಹುತೇಕ ಎಲ್ಲರನ್ನೂ ಕಾಡಿದ. ಇದೇ ತನ್ನ ಶಕ್ತಿ ಎಂಬುದು ಸ್ವತಃ ಬಂಡಿಗೂ ಗೊತ್ತಿತ್ತು. ತನ್ನ ರೂಪವೋ, ಬುದ್ಧಿವಂತಿಕೆಯೋ, ಚಾಣಾಕ್ಷತನವೋ, ವಾಕ್ಚಾತುರ್ಯವೋ, ಭಂಡಧೈರ್ಯವೋ… ಸರೆಮನೆಯ ಒಳಗಿದ್ದರೂ ಹೊರಗಿದ್ದರೂ ತಾನೊಬ್ಬ ಸೂಪರ್ ಸ್ಟಾರ್ ಎಂದು ಅವನಿಗೆ ತಿಳಿದಿತ್ತು. ಅದಕ್ಕೆ ತಕ್ಕಂತೆಯೇ ತನ್ನನ್ನು ತಾನು ಪ್ರಸ್ತುತಪಡಿಸಿದ. ಕೈಕೋಳ ಹಾಕಿ ನಿಂತಿದ್ದರೂ ಗತ್ತಿನಿಂದ ಕ್ಯಾಮೆರಾದೆದುರು ನಿಂತ. ಹಾಲಿವುಡ್ ನಟನೊಬ್ಬ ಆಸ್ಕರ್ ಪುರಸ್ಕಾರವನ್ನು ಪಡೆದುಕೊಳ್ಳಲು ಬರುತ್ತಿರುವಂತೆ ಜುಮ್ಮನೆ ಸೂಟುಬೂಟು ಧರಿಸಿ ನ್ಯಾಯಾಲಯದ ಕೊಠಡಿಯೊಳಕ್ಕೆ ಬರುತ್ತಿದ್ದ. ಅವನ ಕುಖ್ಯಾತಿಯು ಆಗಲೇ ಜಗತ್ತಿನೆಲ್ಲೆಡೆ ವ್ಯಾಪಿಸಿದ್ದರಿಂದ ಇವನನ್ನು ನೋಡಲು ಹೆಂಗಳೆಯರು ಎಲ್ಲೆಲ್ಲಿಂದಲೋ ಬಂದು ನ್ಯಾಯಾಲಯದ ಆವರಣದಲ್ಲಿ ಸೇರುತ್ತಿದ್ದರು. ಅವರೆಲ್ಲರಿಗೂ ಕೈಬೀಸುತ್ತಾ ಮೋಹಕ ನಗೆಯೊಂದಿಗೆ ಸೆಲೆಬ್ರಿಟಿಯಂತೆ ಪೋಸನ್ನು ಕೊಡುತ್ತಿದ್ದ. 

ಟೆಡ್ ಬಂಡಿಯ ಕೃತ್ಯಗಳ ಬಗ್ಗೆ ಪ್ರತ್ಯೇಕವಾಗಿಯೇ ಮಾತನಾಡೋಣ. ಆದರೆ ಈತನ ಮ್ಯಾನರಿಸಂ!? ಎರಡೆರಡು ಬಾರಿ ತನ್ನದೇ ವಕೀಲರನ್ನು ಗಂಟೆಮೂಟೆ ಕಟ್ಟಿ ಹೊರನಡೆಯುವಂತೆ ಮಾಡಿದ. ದಂಡಿಗಟ್ಟಲೆ ಕಾನೂನು ಪುಸ್ತಕಗಳನ್ನು ಓದಿದ. ಓವರ್ ಕಾನ್ಫಿಡೆನ್ಸ್ ಎಂದರೂ ಸರಿಯೇ, ಕಾನೂನನ್ನು ಅರೆದು ಕುಡಿದವನಂತೆ ತನ್ನ ವಾದವನ್ನು ತಾನೇ ಮಂಡಿಸಿದ. ನ್ಯಾಯಾಲಯದ ತಾರೀಕುಗಳೊಂದಿಗೆ ಆಟವಾಡಿದ. ಮನಃಶಾಸ್ತ್ರಜ್ಞರನ್ನು, ಜೈಲು ಸಿಬ್ಬಂದಿಗಳನ್ನು, ಇಲಾಖೆಯ ಅಧಿಕಾರಿಗಳನ್ನು ಬೇಕಾಬಿಟ್ಟಿ ಯಾಮಾರಿಸಿದ. ಎರಡು ಬಾರಿ ಜೈಲಿನಿಂದ ಪರಾರಿಯಾದ. ಒಮ್ಮೆಯಂತೂ ದೇಹದ ತೂಕವನ್ನು ಹದಿನೈದು ಕೇಜಿಗೂ ಹೆಚ್ಚು ಇಳಿಸಿಕೊಂಡು ಸೆರೆಮನೆಯ ಮೇಲ್ಛಾವಣಿಯಿಂದ ಇಲಿಯಂತೆ ನುಸುಳಿ ಕತ್ತಲೆಯಲ್ಲಿ ಮರೆಯಾದ. ಅಮೆರಿಕಾದ ಫ್ಲೋರಿಡಾ, ಮಿಚಿಗನ್, ಕೊಲಾರಡೋ, ಯೂಟಾಹ್ ಗಳೆನ್ನದೆ ಅಲೆಮಾರಿಯಂತೆ ಸಾಗಿ ಹೆಜ್ಜೆಯಿಟ್ಟಲ್ಲೆಲ್ಲಾ ಹೆಣಗಳನ್ನು ಬೀಳಿಸುತ್ತಲೇ ಹೋದ. ಸಹಜವಾಗಿಯೇ ಬಿಟ್ಟುಹೋದ ಅವನ ಹೆಜ್ಜೆಗುರುತುಗಳಲ್ಲಿ ರಕ್ತದ ಕಲೆಗಳಿದ್ದವು. ಇಷ್ಟಿದ್ದರೂ ಸಾಯಲು ಕೆಲವೇ ಘಂಟೆಗಳು ಬಾಕಿಯಿರುವವರೆಗೂ ತಾನು ಏನೂ ಮಾಡಿಲ್ಲವೆಂದೇ ವಾದಿಸಿದ.   

ಹಾಗೆ ನೋಡಿದರೆ ಟೆಡ್ ಬಂಡಿಯ ಬದುಕೇ ವಿಚಿತ್ರ. ಚಿಕ್ಕ ಪ್ರಾಯದಲ್ಲೇ ಗರ್ಭಧರಿಸಿದ ಹೆಣ್ಣುಮಗಳೊಬ್ಬಳು ಅವಿವಾಹಿತ ತಾಯಂದಿರ ಕ್ಯಾಂಪೊಂದಕ್ಕೆ ಹೋಗಿ ಗುಟ್ಟಾಗಿ ಮಗುವೊಂದಕ್ಕೆ ಜನ್ಮ ಕೊಟ್ಟಳು. ನಂತರ ಮಗುವಿನೊಂದಿಗೆ ಬಂದು ತನ್ನ ಹೆತ್ತವರ ಜೊತೆಗೆ ಬಾಳತೊಡಗಿದಳು. ತಾಯಿಯೆಂದು ತನ್ನನ್ನು ಕರೆದುಕೊಳ್ಳುವ ಬದಲು ತಾನು ನಿನ್ನ ಹಿರಿಯಕ್ಕನೆಂದು ಮಗುವಿನಲ್ಲಿ ಹೇಳಿಕೊಂಡಳು. ಅಜ್ಜ, ಅಜ್ಜಿಯರನ್ನೇ ತಂದೆ-ತಾಯಿಗಳೆಂದು ನಂಬಿಸಿ ಮಗುವನ್ನು ಬೆಳೆಸಿದಳು. ಮುಂದೆ ಮತ್ತೋರ್ವ ವ್ಯಕ್ತಿಯನ್ನು ವಿವಾಹವೂ ಆದಳು. ಈತನ ಕೃಪೆಯಿಂದಾಗಿ ಬೇರೇನಿಲ್ಲದಿದ್ದರೂ `ಬಂಡಿ' ಎನ್ನುವ ಸೆಕೆಂಡ್ ನೇಮ್ ಬಾಲಕನಿಗೆ ಬಳುವಳಿಯಾಗಿ ಸಿಕ್ಕಿತು. ತನ್ನ ಹಿರಿಯಕ್ಕನೇ ತನ್ನ ತಾಯಿ ಎಂದು ಮುಂದೆ ಈ ಬಾಲಕನಿಗೆ ತಿಳಿದಾಗ ಆಗಿದ್ದು ಚೇತರಿಸಿಕೊಳ್ಳಲಾಗದ ಆಘಾತ. ತಾನೋರ್ವ `ಅನೈತಿಕ ಸಂತಾನ'ವೆಂಬ ಹತಾಶೆಯೊಂದಿಗೆ ತಾಯಿಯೆಡೆಗಿನ ದ್ವೇಷವೂ ಹೆಚ್ಚುತ್ತಲೇ ಹೋಗಿತ್ತು. 

ಆದದ್ದಾಯಿತು. ಹಲವು ಏಳುಬೀಳುಗಳಿದ್ದರೂ ಬಾಲಕ ಚೆನ್ನಾಗಿ ಬೆಳೆದು ಸ್ಫುರದ್ರೂಪಿ ಯುವಕನಾದ. ಆದರೆ ವಿದ್ಯೆಯು ನೆಟ್ಟಗೆ ತಲೆಗೆ ಹತ್ತಲಿಲ್ಲ. ಈ ಯುವಕನಿಗೆ ಜೀವನದಲ್ಲಿ ಸ್ಪಷ್ಟವಾದ ಗುರಿಯೇ ಇಲ್ಲವೆಂಬುದನ್ನು ತಿಳಿದು ಭ್ರಮನಿರಸನಗೊಂಡು ಇದ್ದೊಬ್ಬ ಪ್ರೇಯಸಿಯೂ ಕೈಬಿಟ್ಟು ಹೋದಳು. ಆದರೆ ಟೆಡ್ ಬಂಡಿಯ ಹಟವು ಅದೆಷ್ಟು ಕೆಟ್ಟದ್ದಾಗಿತ್ತೆಂದರೆ ಅವಳು ಬಿಟ್ಟು ಹೋದಳು ಎಂಬ ಹತಾಶೆಯಲ್ಲೇ ಚೆನ್ನಾಗಿ ಓದಿದ. ಮನಃಶಾಸ್ತ್ರ ಮತ್ತು ಕಾನೂನಿನ ಡಿಗ್ರಿಗಳನ್ನು ಪಡೆದ. ರಾಜಕೀಯ ವಲಯದಲ್ಲಿ ಉತ್ತಮ ನೌಕರಿಯೂ ದೊರಕಿತು. ನೋಡನೋಡುತ್ತಿದ್ದಂತೆಯೇ ಅರಳು ಹುರಿದಂತೆ ಮಾತನಾಡುತ್ತಿದ್ದ, ವಿದ್ಯಾವಂತ, ಸ್ಫುರದ್ರೂಪಿ ತರುಣನು ಸಹಜವಾಗಿಯೇ ಎಲ್ಲರ ಕಣ್ಮಣಿಯಾಗಿ ಬಿಟ್ಟ. `ಈಗ ತಾನು ರೆಡಿ' ಎಂದು ಅರಿವಾದೊಡನೆಯೇ ಬಿಟ್ಟುಹೋದ ಪ್ರೇಯಸಿಯನ್ನು ಹೇಗೋ ಹುಡುಕಿ ಅವಳ ಕಣ್ಣೆದುರು ಗತ್ತಿನಿಂದ ನಿಂತ. ಈ ಹಿಂದೆ ಪೆದ್ದನಂತಿದ್ದ ಮಾಜಿ ಪ್ರಿಯಕರನ ಯಶಸ್ಸನ್ನು ಕಂಡು ಅವಳಿಗೆ ಖುಷಿ, ಅಚ್ಚರಿ ಎಲ್ಲವೂ. ಮರುಮಾತಿಲ್ಲದೆ ಅವನನ್ನು ಸ್ವೀಕರಿಸಿದಳು. ಇದಕ್ಕೇ ಹೊಂಚುಹಾಕುತ್ತಿದ್ದನೋ ಎಂಬಂತೆ “ಹೋಗೇ… ನಿನ್ನಂಥವಳನ್ನೆಷ್ಟು ನೋಡಿಲ್ಲ'' ಎಂಬ ಧಾಟಿಯಲ್ಲಿ ಅಂದುಬಿಟ್ಟ ಟೆಡ್. ಸಂಬಂಧವು ಮುರಿದುಬಿದ್ದಿತ್ತು. ಸೇಡು ತೀರಿತ್ತು. `ಹಾವಿನ ದ್ವೇಷ, ಹನ್ನೆರಡು ವರುಷ' ಎಂಬಂತೆ!

ಮಾನವನ ಬುದ್ಧಿಮತ್ತೆಯ ವೈಪರೀತ್ಯಗಳನ್ನೂ ನೋಡಿ. ಬುದ್ಧಿವಂತಿಕೆಯ ಅಳತೆಗೋಲಿನ ಪಾಸಿಟಿವ್ ತುದಿಯಲ್ಲಿ ಐನ್ಸ್ಟೈನ್ ನಂತಹ ಅದ್ಭುತವಿದ್ದರೆ, ನೆಗೆಟಿವ್ ತುದಿಯಲ್ಲಿ ಬಂಡಿ, ದಾವೂದ್ ನಂತಹ ಶಾಪಗಳು. ಹೆತ್ತ ತಾಯಿ ಮತ್ತು ಪ್ರೇಯಸಿಯ ವಂಚನೆಗಳು ಟೆಡ್ ಬಂಡಿಗೆ ನಿಜಕ್ಕೂ ದೊಡ್ಡ ಟ್ವಿಸ್ಟ್ ಗಳಾಗಿದ್ದವು. ಆದರೂ ಬಾಲ್ಯದಲ್ಲೇ ಪಕ್ಕದ ಮನೆಯ ಬಾಲಕಿಯೊಬ್ಬಳನ್ನು ಹರೆಯದ ಟೆಡ್ ಮುಕ್ಕಿ ಮುಗಿಸಿರಬಹುದು ಎಂಬ ಶಂಕೆಯಿದೆ. ಆ ಬಾಲಕಿಯು ಏನಾದಳೆಂಬುದು ಕೊನೆಗೂ ಬಿಡಿಸಲಾರದ ಒಗಟಾಗಿಯೇ ಉಳಿಯಿತು. ಮುಂದೆ ನಡೆದ ಅತ್ಯಾಚಾರಗಳು ಮತ್ತು ಬರ್ಬರ ಕೊಲೆಗಳಾದರೂ ಎಷ್ಟು? ಮೂವತ್ತೋ, ಐವತ್ತೋ, ನೂರೋ, ಅಥವಾ ನೂರಕ್ಕೂ ಹೆಚ್ಚೋ? ಸ್ವತಃ ಬಂಡಿಯೂ ಲೆಕ್ಕವಿಟ್ಟುಕೊಂಡಿಲ್ಲ ಅನಿಸುತ್ತೆ. ವಿಪಯರ್ಾಸವೆಂದರೆ ಪೋಲೀಸ್ ಇಲಾಖೆಗೂ ಸೇರಿದಂತೆ ಸರಿಯಾದ ಸಂಖ್ಯೆಯು ಕೊನೆಗೂ ಪ್ರಪಂಚಕ್ಕೆ ತಿಳಿಯಲಿಲ್ಲ.      

“ಏಕೆ?'' ಎಂದು ಚಿಂತಿಸತೊಡಗಿದರೆ ಕಣ್ಣೆದುರು ಬರುವುದು ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯಷ್ಟೇ. ಟೆಡ್ ಬಂಡಿಯ ಪ್ರಕರಣಗಳಲ್ಲಿ ಬೆರಳೆಣಿಕೆಯ ಶವಗಳಷ್ಟೇ ಸಿಕ್ಕವು. ಸಿಕ್ಕ ಕೆಲ ಶವಗಳನ್ನು ಗುರುತು ಹಿಡಿಯುವುದಿರಲಿ, ಅವುಗಳು ಬಹುತೇಕ ಮಣ್ಣಿನೊಂದಿಗೆ ಸೇರಿಹೋಗಿದ್ದವು. ಲೆಕ್ಕವಿಲ್ಲದಷ್ಟು ಯುವತಿಯರು ಜಾದೂಗಾರನೊಬ್ಬ ತನ್ನ ಮಂತ್ರದಂಡವನ್ನು ಆಡಿಸಿದಂತೆ ಅಕ್ಷರಶಃ ಮಂಗಮಾಯವಾಗಿದ್ದರು. ಯಾವ ಸಾಕ್ಷಿಗಳೂ, ಲೆಕ್ಕಾಚಾರಗಳೂ, ತನಿಖೆಗಳೂ ಈ ನಾಪತ್ತೆ ಪ್ರಕರಣಗಳನ್ನು ದಡಮುಟ್ಟಿಸಲಿಲ್ಲ. ತಮ್ಮ ಹರೆಯದ ಹೆಣ್ಣುಮಕ್ಕಳ ಶವವನ್ನೂ ನೋಡಲಾಗದೆ ಅದೆಷ್ಟು ಹೆತ್ತಜೀವಗಳು ಮರುಗಿದವೋ| ಕೊನೆಗೂ ದೃಢಪಟ್ಟ ಪ್ರಕರಣಗಳಲ್ಲಿ ಮೃತಪಟ್ಟ ಹೆಣ್ಣುಮಕ್ಕಳ ಚಿತ್ರಗಳನ್ನು ಸಾಲಾಗಿ ಇರಿಸಿದರೆ ಕಣ್ಣಿಗೆ ರಾಚುವುದು ಇವಿಷ್ಟು: ಎಲ್ಲಾ ಹೆಣ್ಣುಮಕ್ಕಳೂ ಪ್ರತಿಭಾವಂತರು, ಕ್ಯಾಶುವಲ್ ದಿರಿಸನ್ನು ಧರಿಸಿದ್ದವರು, ಕಾಲೇಜು ವಿದ್ಯಾಥರ್ಿಗಳು… ಎಲ್ಲದಕ್ಕಿಂತಲೂ ಮುಖ್ಯವಾಗಿ ಸ್ಫುರದ್ರೂಪಿಗಳು, ಉದ್ದನೆಯ ಕೂದಲನ್ನು ಹೊಂದಿದ್ದವರು ಮತ್ತು ನೆತ್ತಿಯಲ್ಲೇ ಬೈತಲೆಯನ್ನು ತೆಗೆದಿದ್ದವರು… ಒಟ್ಟಾರೆಯಾಗಿ ಹೇಳುವುದಾದರೆ ಟೆಡ್ ಬಂಡಿಯ ಮೊಟ್ಟಮೊದಲ ಪ್ರೇಯಸಿಯಂತೆಯೇ ಕಾಣುತ್ತಿದ್ದವರು!   

ಟೆಡ್ ಬಂಡಿಯ ಆರಂಭದ ದಿನಗಳಲ್ಲಿ ಸೂಸೈಡ್ ಕ್ರೈಸಿಸ್ ಸೆಂಟರೊಂದರಲ್ಲಿ ಅವನೊಡನೆ ಕೆಲಸ ಮಾಡುತ್ತಿದ್ದವರೇ ಆನ್ ರೂಲ್. “ಟೆಡ್ ನೊಂದಿಗೆ ನನಗ್ಯಾವತ್ತೂ ಅಸುರಕ್ಷಿತಳೆಂಬ ಭಾವನೆಯೇ ಬರಲಿಲ್ಲ'', ಎಂದಿದ್ದರು ಆನ್. ಆ ದಿನಗಳಲ್ಲಿ ಉದಯೋನ್ಮುಖ ಕ್ರೈಂ ವರದಿಗಾತರ್ಿಯಾಗಿದ್ದ ಆನ್ ಟೆಡ್ ಬಂಡಿಯೊಂದಿಗೆ ಈ ಕೌನ್ಸೆಲಿಂಗ್ ಸೆಂಟರಿನಲ್ಲಿ ರಾತ್ರಿಪಾಳಿಗಳಲ್ಲೂ ದುಡಿದವರು. ಮುಂದೆಯೂ ಹಲವು ವರ್ಷಗಳ ಕಾಲ ಇವರಿಬ್ಬರ ಮಧ್ಯೆ ಪತ್ರವ್ಯವಹಾರವಿತ್ತು. ಪ್ರತೀ ಅತ್ಯಾಚಾರ, ಕೊಲೆ ಮತ್ತು ನಾಪತ್ತೆ ಪ್ರಕರಣಗಳಲ್ಲಿ ತೇಲಿ ಬರುತ್ತಿದ್ದ “ಟೆಡ್'' ಎಂಬ ಹೆಸರು ಒಂದು ಕಾಲದ ನನ್ನ ಆತ್ಮೀಯ ಸಹೋದ್ಯೋಗಿಯೇ ಎಂದು ತಿಳಿದಾಗ ಅವರಿಗೆ ಆಕಾಶವೇ ಕಳಚಿ ಬಿದ್ದಂತಾಗಿದ್ದು ಮಾತ್ರ ಸತ್ಯ. ಟೆಡ್ ಆ ಶಂಕಿತ ಸೈಕೋಪಾತ್ ಆಗಿರಲು ಸಾಧ್ಯವೇ ಇರಲಿಲ್ಲ, ಸರಣಿ ಹಂತಕ? ದೂರದ ಮಾತು, ಪೋಲೀಸ್ ಇಲಾಖೆಗೆ ಮತಿಭ್ರಮಣೆಯಾಗಿದೆಯಷ್ಟೇ ಎಂದು ಲೆಕ್ಕಹಾಕಿದ ಹಲವು ಜನರಲ್ಲಿ ಆನ್ ಕೂಡ ಒಬ್ಬರು. 

ಇದು ಒಂದು ಮಟ್ಟಿಗೆ ಸತ್ಯವೂ ಆಗಿತ್ತು. ಆಪ್ತರಿಗಾಗಲೀ, ಆಗಂತುಕರಿಗಾಗಲೀ ಟೆಡ್ ನಿಜಕ್ಕೂ ಆ ಪರಿಯ ಮೋಡಿಯನ್ನು ಮಾಡಬಲ್ಲವನಾಗಿದ್ದ. ಕೈಗೆ ಫ್ರಾಕ್ಚರ್ ಮಾಡಿಕೊಂಡು ಅಂಗವಿಕಲನಂತೆ ಕಾಣಿಸುತ್ತಿದ್ದ, ಪುಸ್ತಕಗಳನ್ನು ಹೇರಿಕೊಂಡು ಇನ್ನೇನು ಬಿದ್ದೇ ಬಿಡುವೆ ಎಂದು ಹೆಣಗಾಡುತ್ತಿದ್ದ, ವಿದ್ಯಾವಂತನಂತೆ ಕಾಣುವ, ಸೌಮ್ಯ ಸ್ವಭಾವದ, ಸ್ಫುರದ್ರೂಪಿ ಯುವಕನ ನೆರವಿಗೆ ಯಾರು ತಾನೇ ಧಾವಿಸಲಾರರು? ಆದರೆ ಈತನ ಚಿಕ್ಕಪುಟ್ಟ ಸಾಮಾನುಗಳನ್ನು ಈತನ ವೋಕ್ಸ್-ವ್ಯಾಗನ್ ಬಗ್ ವಾಹನದಲ್ಲಿರಿಸಲು ಜೊತೆಗೆ ಹೋದ ಯುವತಿಯರ್ಯಾರೂ ಮರಳಲಿಲ್ಲ. (ಟೆಡ್ ಬಂಡಿಯ ಸಿಗ್ನೇಚರ್ ಸ್ಟೈಲ್ ಎಂಬಂತೆ ಬಿಂಬಿತವಾದ ಆ ಕಾರಿನ ಮಾಡೆಲ್ ನಿಂದಾಗಿ ವೋಕ್ಸ್-ವ್ಯಾಗನ್ ಸಂಸ್ಥೆಯು ಅದೆಷ್ಟು ಬಾಯಿಬಡಿದುಕೊಂಡಿತೋ!) ಈ ಅಮಾಯಕ ಹೆಣ್ಣುಮಕ್ಕಳು ಲೋಕದ ದೃಷ್ಟಿಯಲ್ಲಿ ಅಕ್ಷರಶಃ ಅದೃಶ್ಯರಾಗಿಬಿಟ್ಟರು. ಬಹುತೇಕ ಎಲ್ಲಾ ಹೆಣ್ಣುಮಕ್ಕಳೂ ಶವವಾದರು. ಕೆಲವರು ಅತ್ಯಾಚಾರಕ್ಕೊಳಗಾದ ನಂತರ ಶವವಾದರೆ ಇನ್ನು ಕೆಲವರು ಶವವಾದ ನಂತರ ಅತ್ಯಾಚಾರಕ್ಕೊಳಗಾದರು. ಕೆಲವರಂತೂ ಮುಕ್ತಿಯೇ ಇಲ್ಲದವರಂತೆ ಸತ್ತ ಮೇಲೂ ಮತ್ತೆ ಮತ್ತೆ ಅತ್ಯಾಚಾರಕ್ಕೊಳಗಾದರು. ಕೆಲ ಯುವತಿಯರ ಕತ್ತರಿಸಿದ ತಲೆಗಳು ಟೆಡ್ ಬಂಡಿಯ `ಟ್ರೋಫಿ'ಗಳಾದವು. ಈ ನರಕದಿಂದ ಕೂದಲೆಳೆಯಲ್ಲಿ ಪಾರಾದವರು ಹಲವಾರು ವರ್ಷಗಳ ಕಾಲ ದೈಹಿಕ ಮತ್ತು ಮಾನಸಿಕ ಆಘಾತದಲ್ಲೇ ನರಳಿದರು. ನಡೆದಾಡುವ ಶವವಾಗಿಬಿಟ್ಟರು. 

ಇಂತಿಪ್ಪ ಟೆಡ್ ಬಂಡಿ ಸಾಯಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ ಅನ್ನುವವರೆಗೂ ತಾನು ನಿರ್ದೋಷಿಯೆಂದೇ ವಾದಿಸಿದ. ಸತ್ಯದ ತಲೆಯ ಮೇಲೆ ಹೊಡೆದಂತೆ ಪೋಸು ಕೊಟ್ಟ, ಖುದ್ದಾಗಿ ವಾದಗಳನ್ನು ಮಂಡಿಸಿದ, ಆಗೊಮ್ಮೆ ಈಗೊಮ್ಮೆ ಕಣ್ಣೀರೂ ಇಟ್ಟ. ಟೆಡ್ ಕ್ಲೆಪ್ಟೋಮಾನಿಯಾಕ್ (ಅಂಗಡಿ, ಮನೆಗಳಿಂದ ಚಿಕ್ಕ ಪುಟ್ಟ ವಸ್ತುಗಳನ್ನು ಕದಿಯುವ ಖಯಾಲಿ ಹೊಂದಿರುವವರು) ಮತ್ತು ನೆಕ್ರೋಫಿಲಿಕ್ (ಶವಗಳೊಂದಿಗೆ ಲೈಂಗಿಕ ವಾಂಛೆಯನ್ನು ಹೊಂದಿರುವವರು) ಆಗಿದ್ದ. ಕೆಲ ಪರ್ಸನಾಲಿಟಿ ಡಿಸಾರ್ಡರುಗಳೂ ಜೊತೆಗಿದ್ದವು. ಹಾಗೆಂದು ಕುಂಟುನೆಪ ಹೇಳಿ ಎಷ್ಟೆಂದು ಜಾರಿಕೊಳ್ಳಬಹುದು? ನ್ಯಾಯಾಲಯದ ತಾರೀಕುಗಳು ಮುಂದೆ ಹೋದರೂ ಸಾವಿನ ಕುಣಿಕೆ ತಪ್ಪಲಿಲ್ಲ. ಸಾವಿನ ಭಯವು ಟೆಡ್ ನನ್ನು ತತ್ತರಿಸಿ ಹಾಕಿತ್ತು. ಆದರೆ ಚಾಣಾಕ್ಷ ದಾಳಗಳಿಗೇನೂ ಕಮ್ಮಿಯಿರಲಿಲ್ಲ. ತನಿಖಾಧಿಕಾರಿಗಳಲ್ಲಿ ಇದೇ ಮೊದಲ ಬಾರಿಗೆ ಹಲವು ಸಂಗತಿಗಳನ್ನು ಟೆಡ್ ಬಂಡಿ ಬಾಯಿ ಬಿಟ್ಟ, ಸುಮಾರು ಮೂವತ್ತು ಯುವತಿಯರ ಕೊಲೆ ಪ್ರಕರಣಗಳ ಸೂತ್ರಧಾರಿಯು ತಾನೇ ಎಂದೂ ಒಪ್ಪಿಕೊಂಡ.   

ಆದರೆ ಕೊನೇ ಕ್ಷಣದ ಕೊಡುಕೊಳ್ಳುವಿಕೆಯ ಕುತಂತ್ರದ ಆಟಗಳು ಬಂಡಿಯ ಉಪಯೋಗಕ್ಕೇನೂ ಬರಲಿಲ್ಲ. ಕಾಲವು ಮಿಂಚಿಹೋಗಿತ್ತು. ಫ್ಲೋರಿಡಾ ಸ್ಟೇಟ್ ಪ್ರಿಸನ್ನಿನ ಆ ಸರ್ಪಗಾವಲಿನ ಕೋಣೆಯಲ್ಲಿ ಕುಳಿತು ಮುಂದಿನ ಮುಂಜಾನೆ ಬರಲಿರುವ ಸಾವನ್ನು ಕಾಯುತ್ತಿದ್ದ ಬಂಡಿಯ ಮುಖದಲ್ಲಿ ಸಾವಿನ ಭಯವು ನಿಚ್ಚಳವಾಗಿತ್ತು. ಮುಚ್ಚಿಹಾಕಲು ನಿರ್ಲಿಪ್ತಭಾವದ ಮುಖವಾಡ. ತನ್ನ ಆ ಕೊನೆಯ ಸಂದರ್ಶನವೊಂದರಲ್ಲಿ ಎಂದಿನ ಬೇಜವಾಬ್ದಾರಿತನದ ಜೊತೆಗೆ ಕೊಂಚ ಭಾವುಕನೂ ಆದ ಟೆಡ್ ಬಂಡಿ. ಹಿಂಸಾತ್ಮಕ ನೀಲಿಚಿತ್ರಗಳು, ಲೈಂಗಿಕ ಸಾಹಿತ್ಯ, ಅದು-ಇದು ಅನ್ನುತ್ತಾ ಟಿಪಿಕಲ್ ಸೈಕೋಪಾತ್ ನಂತೆ ತನ್ನ ತಪ್ಪುಗಳೆಲ್ಲದಕ್ಕೂ ಕಾರಣಗಳನ್ನು ಎಳೆದು ತಂದು ನುಣುಚಿಕೊಳ್ಳಲು ಯತ್ನಿಸಿದ (ತನ್ನ ತಪ್ಪುಗಳನ್ನು ಒಪ್ಪಿಕೊಳ್ಳದಿರುವುದು, ಎಡೆಬಿಡದೆ ಸುಳ್ಳು ಹೇಳಿ ದಾರಿತಪ್ಪಿಸುವುದು ಮತ್ತು ಇತರರ ನೋವಿನ ಬಗ್ಗೆ ಕೊಂಚವೂ ಕಾಳಜಿಯಿಲ್ಲದಿರುವಿಕೆಗಳು ಸೈಕೋಪಾತಿಕ್ ಗುಣಗಳ ಮುಖ್ಯ ಅಂಶಗಳು ಎನ್ನುತ್ತದೆ ಮನೋವಿಜ್ಞಾನ). ಇದರ ಮರುದಿನವೇ ನ್ಯಾಯಾಲಯವು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ವಿದ್ಯುಚ್ಚಾಲಿತ ಕುರ್ಚಿಯಲ್ಲಿ ಬಂಡಿಯ ಪ್ರಾಣಪಕ್ಷಿಯು ಹಾರಿಹೋಗಿತ್ತು. ಫ್ಲೋರಿಡಾದ ಬೀದಿಗಳಲ್ಲಿ ಪಟಾಕಿಗಳು ಸಿಡಿದವು, ಮಿಠಾಯಿಗಳು ಹಂಚಲ್ಪಟ್ಟವು.   

ವಿಜ್ಞಾನಿಗಳಿಗೆ ಮಾನವ ಮೆದುಳೇ ಒಂದು ಬಿಡಿಸಲಾರದ ಬ್ರಹ್ಮಾಂಡವಾದರೆ ಅತ್ಯಾಚಾರಿಗಳ, ಸರಣಿಹಂತಕರದ್ದೇ ಒಂದು ನಿಗೂಢ ಲೋಕ. ವಿಲಕ್ಷಣತೆಗಳಿಗೆ, ಉತ್ತರವಿಲ್ಲದ ಪ್ರಶ್ನೆಗಳಿಗೆ ಇಲ್ಲಿ ಕೊರತೆಯಿಲ್ಲ. ನೆತ್ತರು ತೊಳೆದುಕೊಂಡ ಕೈಯಲ್ಲೇ ತುತ್ತನ್ನು ತಿನ್ನಿಸುತ್ತಿದ್ದ ಹಂತಕಿ ಐಲೀನ್ ವುನರ್ೋಸಳ ಜೀವದ ಗೆಳತಿಯೇ ಅವಳಿಗೆ ಮುಳುವಾದಳು. ಎಡ್ ಗೀನ್ ನ ಮನೆಯ ಮೇಲೆ ಪೋಲೀಸ್ ದಾಳಿ ನಡೆದಾಗ ಮಾನವ ಮೂಳೆ, ಮಾಂಸಗಳುಳ್ಳ ಕಸಾಯಿಖಾನೆಯೇ ದೊರಕಿತು. ಪೌಲ್ ಬನರ್ಾಡರ್ೋ-ಕಾಲರ್ಾ ಹೋಮೋಲ್ಕಾ ಜೋಡಿಯ ಅಮಾನುಷ ಕ್ರೌರ್ಯಗಳು ಇಡೀ ಕೆನಡಾವನ್ನೇ ನಡುಗಿಸಿದವು. ಶತಮಾನ ಕಳೆದರೂ ಕುಖ್ಯಾತ “ಜಾಕ್ ದಿ ರಿಪ್ಪರ್'' ಅಸಲಿಗೆ ಯಾರೆಂದೂ ತಿಳಿಯಲಿಲ್ಲ. ಟೆಡ್ ಬಂಡಿ ಇದ್ದಾಗಲೂ ಕಾಡಿದ್ದ, ಸತ್ತ ನಂತರವೂ ಮನೋವಿಜ್ಞಾನದ ವಿದ್ಯಾರ್ಥಿಗಳನ್ನು, ಸಂಶೋಧಕರನ್ನು, ಆಸಕ್ತರನ್ನು ಕಾಡುತ್ತಿದ್ದಾನೆ.   

ಟೆಡ್ ಬಂಡಿ ನೆನಪಿಸಿಕೊಳ್ಳಲೇಬೇಕಾದ ವ್ಯಕ್ತಿಯೇನೂ ಅಲ್ಲ. ಆದರೆ ತಣ್ಣಗಿನ ಕ್ರೌರ್ಯವೂ ಕೆಲವೊಮ್ಮೆ ಕಾಡುತ್ತದೆ. ವಿನಾಕಾರಣ ಎಲ್ಲರನ್ನೂ ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ. ಸುನಿಲ್ ರಸ್ತೋಗಿಯಂತಹ ನಮ್ಮ ನಡುವೆಯೇ ಇರುವ ರಾಕ್ಷಸರ ಬಗ್ಗೆ ದಿಗಿಲುಂಟಾಗುವುದರ ಜೊತೆಗೇ ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದ ಆ ನೂರು-ನೂರೈವತ್ತು ಮಕ್ಕಳ ನೆನಪಾದಾಗಲೆಲ್ಲಾ ಮನಸ್ಸು ಭಾರವಾಗುತ್ತದೆ.  



    
     

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x