ಎರಡು ಮನಸ್ಸುಗಳ ಮಧ್ಯೆ (ಸಣ್ಣ ಕಥೆ): ಹೆಚ್ ಯಸ್ ಅರುಣ್ ಕುಮಾರ್

hs arun kumar

ವಾಸಂತಿ ಮಗಳು  ಮೃದುಲಾ ಗೆ ಫೋನ್ ಮಾಡಿದಳು. "ನಿನ್ನ ಅಣ್ಣ ನ ಲಗ್ನ ನಿಶ್ವಯವಾಗಿದೆ " ಒಂದು ವಾರದ ಮುಂಚೆಯೇ ಬರುವಂತೆ ಆಗ್ರಹ ಮಾಡಿದಳು. ಮೃದುಲಾ  ಬಂದರೆ ಅಮ್ಮ ಅಮ್ಮ ಅಂತ ಹಿಂದೆ  ಮುಂದೆ ಸುತ್ತುತ್ತ ಕೆಲಸಕ್ಕೆ ಸಹಾಯ ಮಾಡುತ್ತಾಳೆ ಎನ್ನಿಸಿತ್ತು. ಅವಳು ಮದುವೆಯಾಗಿ ಹೊರಟುಹೋದ ಮೇಲೆ ಒಂಟಿತನ ಕಾಡುತಿತ್ತು. ಅವಳ ಮದುವೆಯಾಗಿ ಎರಡು ವರ್ಷವಾಗಿದ್ದರೂ ಕೇವಲ ಒಂದುಸಾರಿ ಮನೆಗೆ ಬಂದಿದ್ದಳು. ದೂರದ ಹಳ್ಳಿ. ಬೇಸಾಯದ ಕುಟುಂಬ. ಬಿತ್ತನೆ ಕಾಲ,ಕೊಯ್ಲಿನ ಕಾಲ ಹೀಗೆ ಬಿಡುವಿಲ್ಲದ ಜೀವನ ಅವಳದು ಪಾಪ ಎಂದು ಪರಿತಾಪವಿತ್ತು. ಅಣ್ಣನ ಮದುವೆ ಎಂದರೆ ಅವಳಿಗೂ ಸಂಭ್ರಮವೇ.

ಮೃದುಲಾ ಮೂರು ದಿನ ಮುಂಚೆಯೇ ತವರಿಗೆ ಬಂದಿಳಿದಳು. ಅಣ್ಣ ರಾಜೇಶ್ ಎಂದರೆ ಅವಳಿಗೆ ತುಂಬು ಅಭಿಮಾನ. ಮದುವೆಯ ಸಂಭ್ರಮ ಮನೆಯಲ್ಲಿ ತುಂಬಿತ್ತು. ಅಲಕಾ ಅಣ್ಣನಿಗೆ ತಕ್ಕ ಜೋಡಿ ಎನಿಸಿತ್ತು. ಮದುವೆಯ ಜವಳಿ ಒಡವೆಗಳ ಖರೀದಿ ಭಾರಿಯಾಗಿತ್ತು.

ರಾಜೇಶ್ ತುಂಬಾ ವಿದ್ಯಾವಂತ. ಅದರಿಂದ ಒಳ್ಳೆಯ ಸಂಬಂಧವೇ ಸಿಕ್ಕಿತ್ತು. ಜೊತೆಗೆ ಅಪ್ಪನ ವರಮಾನ ಆರ್ಥಿಕ ಸ್ಥಿತಿಯೂ ತುಂಬಾ ಸುಧಾರಿಸಿತ್ತು.ಮದುವೆಯ ಸಮಯದಲ್ಲಿ ಅಮ್ಮನ ಸಂಭ್ರಮ ಹೇಳತೀರದು. ಅಮ್ಮ ಮದುವೆಯಲ್ಲಿ  ಸೊಸೆಗೆ ಇಟ್ಟ ಒಡವೆ ವಸ್ತ್ರಗಳನ್ನು ನೋಡಿ  ಮೃದುಲಾಗೆ  ಸಂತೋಷವಾದರೂ ಮನದ ಮೂಲೆಯಲ್ಲಿ ಪಿಚ್ಚೆನಿಸಿತು.

ಮಗಳೇ ಬೇರೆ,ಸೊಸೆಯೇ ಬೇರೆ ಎಂಬ ಆಂತರ್ಯದ ಯೋಚನೆ ಅವಳನ್ನು ನೋಯಿಸಿತು. ತನ್ನ ಕುತ್ತಿಗೆಯಲ್ಲಿದ್ದ ತವರಿನ ಒಂದೆಳೆ ಕರಿ ಮಣಿ ಸರದತ್ತ ಕೈಯಾಡಿಸಿದಳು. ತಾನು ಉಟ್ಟ ಸಾದಾರಣ ಸೀರೆ ತನ್ನ ಮದುವೆಯದೆ ಎನ್ನಿಸಿ ಅಲಕಾ ರಿಸೆಪ್ಶನ್ ನಲ್ಲಿ ಉಟ್ಟ ಭಾರಿ ಸೀರೆಯ ಜೊತೆಗೆ ತೂಗಿನೋಡಿದಳು. ಇನ್ನು ಈ ಮನೆಯಲ್ಲಿ ಇರುವುದು ಅಸಹನೀಯ ಎನ್ನಿಸಿ ಗಂಡನನ್ನು ಆತುರ  ಆತುರವಾಗಿ ಹೊರಡಿಸಿ ಹೊರಟು  ನಿಂತಳು. ತಾಯಿಯ ಅಣ್ಣನ ಬೇಡಿಕೆಯ ಮಾತು ಅವಳಿಗೆ ನಾಟಕೀಯ ಎನಿಸಿತು. ಅಮ್ಮ ಕೊಟ್ಟ ರೇಶಿಮೆಯ ಸೀರೆ ತೀರಾ ಸಾದಾರಣ ಅನ್ನಿಸಿ ಉಡುಗೊರೆ ಯನ್ನು ನಿರ್ಲಕ್ಷದಿಂದ ಬ್ಯಾಗ್ನಲ್ಲಿ ತುರುಕಿದಳು. ಅದನ್ನು ವಾಸಂತಿಯ ಸೂಕ್ಷ್ಮ ಕಣ್ಣುಗಳು ಗಮನಿಸಿ ಕಣ್ಣುಗಳು ತೇವವಾದವು.

ಎರಡು ವರ್ಷ ಕಳೆದರೂ  ಮೃದುಲಾ ತವರಿನತ್ತ ಮುಖ ಮಾಡಿರಲಿಲ್ಲ. ವಾಸಂತಿ ಪದೇ ಪದೇ ಫೋನ್ ಮಾಡಿ ಕರೆಸಿಕೊಳ್ಳಲು ಮಾಡಿದ ಯತ್ನ ವಿಫಲವಾಗಿತ್ತು. ಅಲಕಾ ತಾಯಿಯಾಗುವ ವಿಚಾರ ಸಂತಸವಾಗಿದ್ದರೂ ಮೃದುಲಾಗೆ ಮನಸಿನ ಬಿಗು ಕಡಿಮೆಯಾಗಿರಲಿಲ್ಲ. ಅಣ್ಣ ಫೋನ್ ಮಾಡಿದ್ದ " ಮೃದುಲಾ ನೀನು ಅತ್ತೆಯಾದೆ, ನಿನ್ನ ಸೋದರ ಸೊಸೆ ನಿನ್ನ ತರಾನೇ  ನಿನ್ನದೇ ಪಡಿಯಚ್ಚು ಅಂತ ಅಮ್ಮ ಹೇಳುತ್ತಿದ್ದಾಳೆ ಬೇಗ ಬಂದು ಬಿಡು "  ಮೃದುಲಾ ಮನಸಿನಲ್ಲಿ ಮತ್ತೆ ಸಂಭ್ರಮ ಮೂಡಿಬಂತು. ತನ್ನೆದೇ  ಪಡಿಯಚ್ಚು ಎಂಬ  ಮಾತು ಅವಳನ್ನು ನಿಂತ ನಿಲುವಿನಲ್ಲಿ ಹೊರಡಿಸಿತು. ಇದ್ದ ಜವಾಬ್ದಾರಿ ಗಂಡನಿಗೆ ಒಪ್ಪಿಸಿ ಹೊರಟು ಬಂದಳು.

ಮೃದುಲಾಳ  ಆಗಮನ ವಾಸಂತಿಗೆ ಸಂತಸ ತಂದಿತ್ತು. ಮೃದುಲಾ ಇದ್ದ ಎರಡು ದಿನಗಳೂ ತುಂಬಾ ಸಂತೋಷಕರವಾಗಿತ್ತು.ತಾಯಿಯ ಮನೆ ಊಟ ತವರಿನ ಅತ್ಮೀಯತೆ ಆಪ್ಯಾಯಮಾನ ವಾಗಿತ್ತು. ಸೋದರ ಸೊಸೆಯನ್ನು ಎಷ್ಟು ಮುದ್ದಿಸಿದರೂ ಸಾಲದು. ಹೊರಡುವ ದಿನ ಅಣ್ಣ ಕಾರಿನಲ್ಲಿ ಬಸ್ಟ್ಯಾಂಡ್ ಗೆ ಬಿಟ್ಟು ಬರಲು ಅನುವಾಗುತ್ತಿದ್ದ.

ವಾಸಂತಿ ಮಗಳ ಬ್ಯಾಗ್ನಲ್ಲಿ ಬಟ್ಟೆ ತಿಂಡಿಗಳನ್ನು ತುಂಬುತ್ತಿದ್ದಳು. ಅದಕ್ಕೆ ಎರಡು ವರ್ಷದಿಂದ ಉಳಿಸಿಟ್ಟ ಹಣದ ಬಳಕೆಯಾಗಿತ್ತು. ಮೃದುಲಾ ಕುತೂಹಲದಿಂದ ನೋಡಿದಳು. ಒಂದು ರೇಷ್ಮೆಯ ಸೀರೆ ಮತ್ತು ಎರಡು ಎಳೆ ಚಿನ್ನದ ಸರ ಕಣ್ಣಿಗೆ ಬಿತ್ತು. "ಏನೂ, ನಿನ್ನ ಮದುವೆ ಸಮಯದಲ್ಲಿ ಸಾಧ್ಯವಾಗಿರಲಿಲ್ಲ ನಿನ್ನ ತಂದೆಯ ಸ್ಥಿತಿ ನಿನಗೆ ಗೊತ್ತಿತ್ತಲ್ಲ " ತಾಯಿಯ ಮಾತು ಮುಗಿಯುವ ಮುನ್ನವೇ ಮೃದುಲಾಳ ಕಣ್ಣಲ್ಲಿ ನೀರಾಡಿತು. ಅವಳು ಬರುವಾಗ ಉಟ್ಟಿದ್ದ  ಅಣ್ಣನ ಮದುವೆಯ ಸೀರೆ ತುಂಬಾ ಚನ್ನಾಗಿಯೇ ಇದೆ ಅನಿಸಿತು. ಭಾವನೆಗಳು ತುಂಬಿ ಬಂದು ತಾಯಿಯನ್ನು  ಅಪ್ಪಿಕೊಂಡಳು. ಎರಡು ಮನಸ್ಸುಗಳ ನಡುವಿನ ಅಂತರ ಇಲ್ಲವಾಗಿತ್ತು.   


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x