ಐದ್ಸಾವರ ಫ್ರೆಂಡ್ಸು ಮತ್ತು ನಾವು: ಪ್ರಶಸ್ತಿ

prashasti

ಈ ಫೇಸ್ಬುಕ್ಕಿನ ಸಾಹಿತಿಗಳೆಲ್ಲಾ, ಅಥವಾ ಬೇರೆಡೆ ಸಾಹಿತ್ಯ ಬರೆಯುತ್ತಿದ್ದು ಸದ್ಯ ಫೇಸ್ಬುಕ್ಕಿನಲ್ಲಿ ಸಕ್ರಿಯರಾಗಿರೋ ಸ್ನೇಹಿತರೆಲ್ಲಾ ಯಾವುದೋ ಪಕ್ಷದ ವಕ್ತಾರರಂತೆ, ಮತ್ಯಾವುದೋ ಕೋಮಿನ ಹರಿಕಾರರಂತೆ ಯದ್ವಾ ತದ್ವಾ ಪೋಸ್ಟುಗಳನ್ನ ಹರಿಬಿಡೋದನ್ನು ನೋಡಿದಾಗ ಖೇದವಾಗುತ್ತೆ. ಮೋದಿಯೊಬ್ಬ ಸರ್ವಾಧಿಕಾರಿಯೆಂದಾಗ್ಲೋ, ಟಿಪ್ಪು ಜಯಂತಿ ಬೇಡವೆನ್ನುವವರಿಗೆ ಬುದ್ಧಿಯಿಲ್ಲವೆಂದಾಗ್ಲೋ , ಉರುಳು ಸೇವೆಗೋ, ಉಡುಪಿ ಚಲೋಗೋ ಪ್ರಶಂಸೆ, ಧಿಕ್ಕಾರಗಳನ್ನ ಬರೆದಾಗಾದ ಬೇಸರವಲ್ಲವದು. ಆದರೆ ಎಡವೇ ಸರಿಯೆಂದೋ, ಬಲವೇ ಸರ್ವೋತ್ತಮವೆಂದೋ ದಿನಂಪ್ರತಿ ಜಗಳ ಕಾಯೋ ಪರಿಗೆ ಕಸಿವಿಸಿಯಾಗುತ್ತೆ. ವೈಯುಕ್ತಿಕವಾಗಿ ಇಷ್ಟವಾಗೋ ಅವರು ಫೇಸ್ಬುಕ್ಕಿಗೆ ಬಂದಾಗ ಹಿಂಗ್ಯಾಕೆ ಅನ್ನೋದು ಎಂದೂ ಬಗೆಹರಿಯದ ಪ್ರಶ್ನೆಯಾಗುಳಿಯುತ್ತೆ. ಬರಹಗಾರನೊಬ್ಬನಿಗೆ ನಿಲುವುಗಳಿರಬಾರದೆಂದೋ, ಸಾಮಾಜಿಕ ಘಟನೆಗಳಿಗೆ ಆತ ಸ್ಪಂದಿಸಬಾರದೆಂದೋ ಅಲ್ಲ. ಆದರೆ ನೋಟು ಬ್ಯಾನಿನಿಂದ ದೇಶಾದ್ಯಂತ ಜನರಿಗೆ ಆಗುತ್ತಿರೋ ಕಷ್ಟಗಳ ಬಗ್ಗೆ ಇದ್ದಷ್ಟೇ ಕಳಕಳಿ, ಕಾಶ್ಮೀರದಲ್ಲಿ ದಿನಂಪ್ರತಿ ಬಂದಿನಿಂದ ಬೇಸತ್ತಿರೋ ಜನರ ಬದುಕ ಬಗ್ಗೆಯಾಗಲೀ, ಕಾವೇರಿ, ಮಹದಾಯಿಗಳ ನೀರಿಗೆ ಬವಣೆ ಪಡುತ್ತಿರೋ ರೈತರ ಬಗ್ಗೆಯಾಗಲೀ, ಗಡಿ ಕಾಯೋ ಸೈನಿಕರ ಕಷ್ಟಗಳ ಬಗ್ಗೆಯಾಗಲೀ, ಅವರ ಕುಟುಂಬಗಳಿಗೆ ಇನ್ನೂ ಸಿಗದಿರೋ ಏಕರೂಪ ಪಿಂಚಣಿ ಯೋಜನೆ ಬಗ್ಗೆಯಾಗಲೀ ಇರದಿರುವುದು ವಿಚಿತ್ರವೆನಿಸುತ್ತದೆ ! ಹಗರಣವೆಂದರೆ ಕರ್ನಾಟಕದ ಡಿನೋಟಿಫಿಕೇಶನ್ ನೆನಪಾಗೋ ಇವರಿಗೆ , ವಾಚ್ ಉಡುಗೊರೆ ಪ್ರಕರಣವೋ, ಅಮ್ಮನ ಬೀರು ಬೀರು ಸೀರೆಗಳಿಗೆ ಬಂದ ಹಣದ ಮೂಲದ ಬಗ್ಗೆಯಾಗಲೀ, ೨ಜಿ, ೩ಜಿಗಳ ರೂವಾರಿಗಳ ಬಗ್ಗೆಯಾಗಲೀ ಅರಿವಿರದಿರುವುದು ಆಶ್ಚರ್ಯವೆನಿಸುತ್ತದೆ. ಇರೋ ಕಳ್ಳರ ನಡುವೆಯೇ ಕಮ್ಮಿ ಕಳ್ಳ ಯಾರು ಎಂದು ಆರಿಸಬೇಕಾಗಿರೋ ಪರಿಸ್ಥಿತಿಯಲ್ಲಿ ವಾಸ್ತವದಲ್ಲಿ ಏನಾಗಿದೆ. ಅದನ್ನು ಪರಿಹರಿಸುವುದರಲ್ಲಿ ನಾವೇನಾದರೂ ಮಾಡಬಹುದೇ ಎಂಬ ವಿಚಾರ ಮಂಥನದಲ್ಲಿ ತಮ್ಮ ವಿಚಾರಧಾರೆಯನ್ನೋ, ಬುದ್ಧಿ ಮತ್ತೆಯನ್ನೋ ಹರಿಸಬೇಕಾದವರು ತಮ್ಮ ಬರಹಗಳ ಮೂಲಕ ಆಗಲೇ ಒಡೆದು ಛಿದ್ರ ಛಿದ್ರವಾಗುತ್ತಿರೋ ಸಮಾಜದಲ್ಲಿ ಇನ್ನೊಂದಿಷ್ಟು ಬಿರುಕು ಮೂಡಿಸುವುದು, ಜನ ಜನಗಳ ನಡುವೆ ಜಗಳ ಹುಟ್ಟಿಹಾಕೋದನ್ನೂ ಕಂಡು ಅಸಾಧ್ಯ ಸಿಟ್ಟೂ ಬರುತ್ತದೆ. ಇಂತಾ ಸಾಹಿತಿಗಳ ಐದ್ಸಾವರ ಸ್ನೇಹಿತರಲ್ಲಿ ಒಬ್ಬನಾಗಿರೋ ಬದಲು ಆತ್ಮೀಯ ಐವತ್ತೇ ಗೆಳೆಯರನ್ನ ಹೊಂದಿರುವುದು ಮೇಲು ಅನಿಸುತ್ತೆ !

ಅಷ್ಟರಲ್ಲೂ ಫೇಸ್ಬುಕ್ಕಿಗೆ ಬರೋದು ಯಾಕೆ ? ಇದೆಂತಾ ಪ್ರಶ್ನೆನಪ್ಪಾ ಅಂದ್ರಾ ? ಈ ಪ್ರಶ್ನೆಗೆ ಉತ್ತರ ಉತ್ತರಿಸೋ ವ್ಯಕ್ತಿಯ ಮೇಲೆ ಬೇರೆಯಾಗಬಹುದು. ಕೆಲವರಿಗೆ ಇದು ಬರೀ ಟೈಂ ಪಾಸಾದರೆ, ಕೆಲವರಿಗೆ ಇದು ತಮ್ಮ ಸಾಧನೆಗಳ, ಸುಖ, ದುಃಖಗಳನ್ನ ಸಮಾಜದೊಂದಿಗೆ ಹಂಚಿಕೊಳ್ಳೋ ವೇದಿಕೆಯಾಗಿರಬಹುದು. ಇನ್ನು ಕೆಲವರಿಗೆ ಇದು ನೆಂಟರಿಷ್ಟರೊಂದಿಗೆ, ಗೆಳೆಯರೊಂದಿಗೆ ಸಂಪರ್ಕದಲ್ಲಿರೋ ಸೇತುವೋ, ಸಮಾಜದಲ್ಲಿ ಏನೇನಾಗ್ತಿದೆ ಅಂತ ತಿಳಿದುಕೊಳ್ಳೋಕೊಂದು ಮಾಧ್ಯಮವೂ ಆಗಿರಬಹುದಿದು ಕೆಲವರಿಗೆ. ದಿನಾ ಫೇಸ್ಬುಕ್ಕಿಗೆ ಲಾಗಿನ್ ಆದಾಗ್ಲೂ ಇವ್ರು ನಿಮಗೆ ಗೊತ್ತಾ, ಇವ್ರು ಗೊತ್ತಿರಬಹುದು ಅಂತ ಅದೊಂದಿಷ್ಟು ಜನರನ್ನ ತೋರಿಸ್ತಿರುತ್ತೆ. ಅದನ್ನೆಲ್ಲಾ ಸರಿಯಂತ ಒಪ್ಕೊಳ್ಳೋ ಮೊದಲು ಅದರ ಅಗತ್ಯ ಇದೆಯಾ ಅಂತ ಯೋಚನೆ ಮಾಡಲೇ ಬೇಕು.  ನಮ್ಮ ಗೆಳೆತನದಲ್ಲಿರೋ ಜನ ೫೦೦೦ವರೆಗೂ ಇರ್ಬೋದು ಅಂತ ಫೇಸ್ಬುಕ್ಕು ಅನುಮತಿ ಕೊಟ್ಟಿದ್ರೂ ಒಂದಂತೂ ಸತ್ಯ. ಗೆಳೆಯರು ಹೆಚ್ಚುತ್ತಾ ಹೋದಂತೆ ಅವ್ರ ಪೋಸ್ಟುಗಳೂ ಹೆಚ್ಚುತ್ತೆ. ದಿನಕ್ಕೊಂದು ಹತ್ತು ಬರೆಯೋರ ಮಧ್ಯ ಹತ್ತು ದಿನಕ್ಕೊಂದು ಪೋಸ್ಟು ಹಾಕೋರೂ ಇರ್ತಾರೆ. ಫೇಸ್ಬುಕ್ಕಿನಲ್ಲಿ ಹಾಕಿದ ಪೋಸ್ಟೊಂದು ಫ್ರೆಂಡ್ ಲಿಸ್ಟಲ್ಲಿರ ಎಲ್ಲರಿಗೂ ತಲುಪಬೇಕು ಅಂತೇನು ಇಲ್ಲ. ಆ ಸಮಯದಲ್ಲಿ ಆನ್ ಲೈನ್ ಇರುವ ಗೆಳೆಯರಲ್ಲಿ, ಅವರ ಇನ್ನಿತರ ಗೆಳೆಯರ ಪೋಸ್ಟುಗಳ ಮಧ್ಯದ ಪೈಪೋಟಿಯಲ್ಲಿ ಗೆದ್ದ ಕೆಲವು ಪೋಸ್ಟುಗಳು ಅವರಿಗೆ ಸಿಕ್ಕಿರುತ್ತೆ ಅಷ್ಟೆ! ಮತ್ತೆ ನಾವು ದಿನದ ೨೪ ಘಂಟೆ ಫೇಸ್ಬುಕ್ಕಲ್ಲಿರೋದಿಲ್ಲವಲ್ಲ. ಹಾಗಾಗಿ ದಿನಕ್ಕೆ ಹತ್ತು ಬಾರಿ ಅಳುವವರ ಮಧ್ಯೆ ಹತ್ತು ದಿನಕ್ಕೊಮ್ಮೆಯವರ ಅಪರೂಪದ ನಗು ಕಳೆದುಹೋಗುತ್ತೆ !

ಮತ್ತೆ, ನಮ್ಮ ಪಕ್ಕದ ಮನೆಯವರು ಫೇಸ್ಬುಕ್ಕಲ್ಲಿದ್ದಾರೆ ಅಂದ ಮಾತ್ರಕ್ಕೆ ಅವ್ರನ್ನ ಫ್ರೆಂಡ್ ಮಾಡಿಕೊಳ್ಳಲೇಬೇಕು ಅಂತೇನಿಲ್ಲವಲ್ಲಾ ?  ಅವ್ರು ನನ್ನ ನಿಜಜೀವನದಲ್ಲಿ ಫ್ರೆಂಡು ಗುರು. ದಿನಾ ಸಿಗ್ತಿರ್ತಾರೆ. ಮಾತಾಡ್ತಿರ್ವೀವಿ. ಫೇಸ್ಬುಕ್ಕಿನಲ್ಲಿ ಫ್ರೆಂಡಿಲ್ಲ ಅಂದ ಮಾತ್ರಕ್ಕೆ ಅವ್ರನ್ನ ನಿಜ ಜೀವನದಲ್ಲೂ ಮಾತಾಡಿಸಬಾರದು ಅಂತೇನಾದ್ರೂ ಇದೆಯಾ ? ! ಮ್ಯಾನೇಜರುಗಳನ್ನ ಫ್ರೆಂಡು ಮಾಡ್ಕೊಳ್ಳೋದೂ ಇನ್ನೊಂತರ ಡೇಂಜರ್ರು ! ಇದು ಅರ್ಥ ಆಗೋರಿಗೆ ಅಗಿರುತ್ತೆ. ಆಗದೆ ಇರೋರಿಗೆ ಹೇಳಿಯೂ ಪ್ರಯೋಜನವಿಲ್ಲ. 

ಹಂಗಂತಾ ನಿಜಜೀವನಕ್ಕೂ ಫೇಸ್ಬುಕ್ಕಿಗೂ ಸಂಬಂಧವಿರಬಾರದು ಅಂತಲ್ಲ. ಫೇಸ್ಬುಕ್ಕೆನ್ನೋದು ನಮ್ಮನ್ನು ನಾವು ವ್ಯಕ್ತಪಡಿಸಿಕೊಳ್ಳೋಕಿರೋ ಒಂದು ಮಾಧ್ಯಮವಷ್ಟೆ. ಅದೇ ಜೀವನವಲ್ಲ. ಬೆಳಗ್ಗೆ ಎದ್ದೆ, ಒಂದು ಗುಡ್ ಮಾರ್ನಿಂಗ್ ಹಾಕಿದೆ. ಮಧ್ಯಾಹ್ನಕ್ಕೊಂದು ಪೋಸ್ಟ್ ಹಾಕಿದೆ. ಮಲಗೋ ಮುಂಚೆ ಒಂದು ಹಣಾಹುಣಿ ಜಗಳದಲ್ಲಿ ಪಾಲ್ಗೊಂಡು ಒಂದಿಷ್ಟು ಜನರಿಗೆ ಹಿಗ್ಗಾಮುಗ್ಗಾ ಬೈದೆ ಅಂದರೆ ಅದು ಜೀವನವಲ್ಲ. ನಮ್ಮ ನಿಜ ಜೀವನದಲ್ಲಿ ನಾವು ಎದುರಾಗೋರ ಜೊತೆ ಈ ರೇಂಜಿಗೆಲ್ಲಾ ಜಗಳವಾಡುತ್ತೇವಾ ಅಂತ ಆಲೋಚಿಸಬೇಕೊಮ್ಮೆ. ಇಲ್ಲಾ ಅಂದ್ರೆ ಮತ್ತೆ ಇಲ್ಲಿ ಅದರ ಅಗತ್ಯ ಇದೆಯಾ ಅಂತಲೂ ಆಲೋಚಿಸಬೇಕು. ಸಮಯ ಯಾರಿಗೂ ಇಲ್ಲ ಸ್ವಾಮಿ. ಎಲ್ಲಾ ಇಲ್ಲಿಗೆ ಬರೋದು ಒಂದಿಷ್ಟು ಖುಷಿಯಾಗೋಣ ಅಂತ. ಆದ್ರೆ ರಾಜ್ಯ ಸಭಾ, ಲೋಕಸಭಾ ಚಾನಲ್ಗಳಲ್ಲಿ ರಾಜಕಾರಣಿಗಳು ಕಿತ್ತಾಡುವಂತೆ, ಯಾವುದೋ ಕುಸ್ತಿ ಪಂದ್ಯದಲ್ಲಿನ ಸ್ಪರ್ಧಾಳುಗಳಂತೆ ಇಲ್ಲೂ ನೀವು ಕಿತ್ತಾಡೋಕೆ ಶುರು ಮಾಡಿದ್ರೆ ಸೈಲೆಂಟಾಗಿ ನಿಮ್ಮನ್ನು ಅನ್ ಫ್ರೆಂಡ್ ಮಾಡದೆಯೋ, ನಿಮ್ಮ ನೋಟಿಫಿಕೇಷನ್ನುಗಳನ್ನು ಬಂದ್ ಮಾಡದೆಯೋ ನಿರ್ವಾಹವಿಲ್ಲ ಅಂತ ಅದೆಷ್ಟೋ ಬಾರಿ ಕೆಲವರಿಗೆ ಖುದ್ದಾಗಿ ಹೇಳಬೇಕೆಂದು ಅನಿಸಿದ್ದೂ ಇದೆ. ಆದರೆ ಸಾವಕಾಶವಾಗಿ ಅದನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನ ಅವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ದಿನಾ ಕೂಗುವವರಿಗೆ ಶಾಂತರೀತಿಯಿಂದ ಕಿವಿಗೊಡುವುದು ಕಷ್ಟದ ಕೆಲಸವೇ. ಅವರ ಈ ಗಲಾಟೆಯೇತರ ಬರಹಗಳಿಗೆ, ಸಾಹಿತ್ಯಕ್ಕೆ , ಪ್ರತಿಭೆಗೆ ನನ್ನ ಗೌರವವಿದ್ದೇ ಇದೆ. ಆದರೂ ಈ ರೀತಿಯ ದೈನಂದಿನ ಫೇಸ್ಬುಕ್ ಜಗಳಗಳಿಂದ ಅದು ಇಂಚಿಂಚೇ ಕಳೆದುಹೋಗಬಹುದಾ ಅನ್ನೋ ಅಳುಕೂ ಇದೆ. ಐದ್ಸಾವರದಲ್ಲೊಬ್ಬನಾಗೋಕೆ ಜಾಗ ಕೊಟ್ಟಿದ್ದಕ್ಕೆ ಇದ್ದ ಕೃತಜ್ಞತೆ ಯಾವುದೋ ಒಂದು ದಿನ ತಡೆಯಲಾರದ ಬೇಸರವಾಗಿ , ದೈನಂದಿನ ಗಲಾಟೆಗಳು ಈ ಮೇಲಿನ ಸ್ಪಾಮಂತಾಗಿ ,ನಿಜ ಜೀವನದ ಗೆಳೆತನವಿರಲಿ, ಫೇಸ್ಬುಕ್ಕಿಂದ ಅದನ್ನು ಹಾಳು ಮಾಡಿಕೊಳ್ಳದಿರೋಣ ಅನ್ನೋ ನಿರ್ಧಾರಗಳು ರೂಪುಗಳ್ಳೋಕೆ ಹೆಚ್ಚಿನ ಸಮಯ ಬೇಕಿಲ್ಲ. ಅರಚಾಟಗಳ ನಡುವೆ ಆತ್ಮೀಯರ ಅಪ್ ಡೇಟುಗಳು ಕಳೆದು ಹೋಗದಿರಲಿ ಅಂತ ಫ್ರೆಂಡ್ ಲಿಸ್ಟಿನ ಸ್ವಚ್ಛಭಾರತ ಆಂದೋಲನ ರೂಪುಗೊಂಡರೂ ಅಚ್ಚರಿಯಿಲ್ಲ. ಇಂತಹ ಅನುಭವಗಳೇ ಮುಂದಿನ ಕೋರಿಕೆಗಳ ಸ್ವೀಕಾರದ ಮುಂಚಿನ ಆಲೋಚನೆಗಳಾದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಫೇಸ್ಬುಕ್ಕಲ್ಲಿ ಗೆಳೆಯರಿರಲಿ. ಆದರೆ ತೀರಾ ಬೇಕಾದವರು, ಲವಲವಿಕೆಯನ್ನು ಉಂಟು ಮಾಡೋರು, ಜೀವನೋತ್ಸಾಹವನ್ನು ಉಂಟು ಮಾಡೋರು ಇರಲಿ. ಇಲ್ಲಿ ಮುಖ್ಯವಾಗೋದು ಎಷ್ಟಿದ್ದಾರೆ ಅನ್ನೋ ಸಂಖ್ಯೆಯಲ್ಲ. ಇದ್ದವರಲ್ಲಿ ಎಷ್ಟು ಜನರೊಟ್ಟಿಗೆ ಮಾತನಾಡೋಕೆ, ಒಡನಾಟವನ್ನು ಉಳಿಸಿಕೊಳ್ಳೋಕೆ ನಮಗೆ ಸಾಧ್ಯ ಅನ್ನೋದು. ಆ ಒಡನಾಟದಿಂದ ನಮ್ಮಲ್ಲಿ ಮತ್ತೆ ನವೋಲ್ಲಾಸ ಮೂಡೋತ್ತೆ ಅನ್ನೋದು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x