ಬೆಳಕು ಕಂಡ ಕಣ್ಣು: ಅನಂತ ರಮೇಶ್

Ananth Ramesh


ಉಪಗ್ರಹದಿಂದ ಬರುವ ಛಾಯಾ ಚಿತ್ರಗಳು ವಿನೀತನ ಮನಸ್ಸನ್ನು ತುಂಬಾ ಸೆಳೆಯುತ್ತವೆ. ಆಗಾಗ ಅಂತರ್ಜಾಲದಲ್ಲಿ ಭೂಮಿಯ ವೈವಿಧ್ಯದ ಚಿತ್ರಗಳನ್ನು ಅವನು ಅಪ್ಪನ ಜೊತೆ ಕುಳಿತು ನೊಡುತ್ತಿರುತ್ತಾನೆ. ಬಣ್ಣದ ಓಕುಳಿಯಲ್ಲಿ ಈಜುವಂತೆ ಕಾಣುವ ಭೂಮಿಯನ್ನು ನೋಡಲು ಅವನಿಗೆ ತುಂಬಾ ಇಷ್ಟ. 

"ಅಪ್ಪಾ.. ನಮ್ಮ ದೇಶದ ಕಡೆ ಜೂಮ್ ಮಾಡು. ಎಷ್ಟೊಂದು ಹಸಿರು ಕಾಣುತ್ತೆ ಅಲ್ವ !   ಈ ಥರ ಹಸಿರು ನಾನು ನೋಡೆ ಇಲ್ಲ "

"ನಾಗರಹೊಳೆ ಅಥವ ಅಗುಂಬೆ ಕಡೆಗೆ ಈ ರಜಾದಲ್ಲಿ ಹೋಗೋಣ…. ಹಸಿರು ಕಾಡಿಗೆ"

"ಹೋದ ವರ್ಷ ಊಟಿಗೆ ಹೋಗಿದ್ದು ತುಂಬಾ ಮಜಾ ಇತ್ತು. ಅಲ್ಲಿನ ಥರವೇನಾ?"

"ಹೌದು.. ನಿನ್ನ ಪಾಠದ ಪುಸ್ತಕಗಳಲ್ಲಿ ಕಾಡು ನಾಶ ಆಗ್ತಾ ಇರೊ ಬಗ್ಗೆ.. ಬಹಳ ಕಾಡು ಪ್ರಾಣಿಗಳು ನಶಿಸಿ ಹೋಗ್ತಿರೋದ್ರ ಬಗ್ಗೆ ಏನಾದ್ರು ವಿಷಯ ಇದೆಯ ?"

"ಪಾಠದ ಪುಸ್ತಕಕ್ಕಿಂತ ಹೆಚ್ಚು ವಿಷಯ ನಮ್ಮ ಟೀಚರ್ ಹೇಳ್ತಾರೆ. ಪ್ರಪಂಚದ ಕಾಡು ಕಡಿಮೆ ಆಗ್ತಾ ಇರೋದು.. ಹಾಗೆಯೇ ಕಾಡಿನ ಮೃಗ ಪಕ್ಷಿಗಳು ಕಡಿಮೆ ಆಗ್ತಾ ಇರೋದು. ಭೂಮಿ ತಾಪಮಾನ ಜಾಸ್ತಿ ಆಗ್ತಾ ಇರೋದು. ಒರಾಂಗುಟನ್ ಗೊತ್ತ? ಆಫ಼್ರಿಕದಲ್ಲಿ ಅವು ಕೂಡ ಕಡಿಮೆ ಆಗ್ತಾ ಇವೆ " ವಿನೀತ ಹೇಳಿದ.

"ಒರಾಂಗುಟಾನ್ ಕಾಡಿನ ಮನುಷ್ಯನೆ. ಅದು ನಮ್ಮ ಪೂರ್ವಜ. ನಾವು ಮನುಷ್ಯರೇ ಒಂದಾಗಿ ಸಹಜೀವನ ನಡೆಸೊಲ್ಲ. ಇನ್ನು, ನಮ್ಮ ಪೂರ್ವಜನ ಸಂತಾನದ ಬಗ್ಗೆ ತಲೆ ಕೆಡ್ಸಿಕೊಳ್ತೀವ.. " ಅಪ್ಪ ಹೇಳ್ತಾನೆ ಇದ್ದರು. 

ವಿನೀತ ಹೇಳಿದ, "ಹೀಗೇ ಆದ್ರೆ.. ಭೂಮಿ ಬೋರ್ ಅನ್ಸತ್ತೆ ಅಲ್ವ ? "

ಅಮ್ಮ ಕರೆದದ್ದು ಕೇಳಿಸಿತು. ಇಬ್ಬರೂ ಕೋಣೆಯಿಂದ ಹೊರಗೆ ಬಂದರು.  "ತಿಂಡಿ ತಿನ್ನೋದು ಮರ್ತೇ ಹೋಗಿತ್ತಾ ನಿಮಗೆ " ಅಂತ ನಕ್ಕಳು. " ನಾಡಿದ್ದು ದೀಪಾವಳಿ ಬಂತಲ್ಲ. ಪಟಾಕಿ ತರೊ ಪ್ಲಾನ್ ಮಾಡ್ತಿದ್ರಾ?" ಕೇಳಿದಳು.

ವಿನೀತನಿಗೆ ಗೊತ್ತು. ಅಮ್ಮನಿಗೆ ಪಟಾಕಿ ಶಬ್ಧ ಅದರ ಹೊಗೆ ಆಗಲ್ಲ. ಕಳೆದ ವರ್ಷ ಅಕ್ಕಪಕ್ಕದ ಮನೆಯವರು ಹೆಚ್ಚು ಪಟಾಕಿ ಸುಟ್ಟಿದ್ದರಿಂದ ಅಮ್ಮನಿಗೆ ಆರೋಗ್ಯ ಕೆಟ್ಟಿತ್ತು. 

 "ಅಮ್ಮ.. ನಿನಗೇ ಏಕೆ ಈ ಥರ..? ಅಪ್ಪ, ನಾನು, ನಮ್ಮ ಪಕ್ಕದ ಮನೆಯವೆರೆಲ್ಲ ದೀಪಾವಳಿಯಲ್ಲಿ ಆರೋಗ್ಯವಾಗೆ ಇರ್ತೀವಲ್ಲ ? " 

ವಿನೀತನ ಈ ಪ್ರಶ್ನೆಗೆ ಅಮ್ಮ ಹೇಳಿದ್ದಳು.  "ಕೆಲವರಿಗೆ ತಕ್ಷಣ ಏನಾಗದಿದ್ದರೂ, ಪಟಾಕಿಯಿಂದ ನಿಧಾನಕ್ಕಾದರು ಆರೋಗ್ಯದ ಮೇಲೆ ಪರಿಣಾಮ ಇರುತ್ತೆ. ವಿನೂ, ನಿನಗೆ ಮರೆತುಹೋಯ್ತಾ, ಹೋದವರ್ಷದ ದೀಪಾವಳಿಯಲ್ಲಿ ನಮ್ಮ ಮನೆ ಬೀದಿಯ ಮೂರು ನಾಯಿಗಳು, ಬೆಕ್ಕುಗಳು  ಹದಿನೈದು ದಿನ ಓಡಿಹೋಗಿದ್ದು? "

ವಿನೀತನಿಗೆ ಎಲ್ಲ ನೆನಪಾಯಿತು. ಈ ಬಾರಿ ಪಟಾಕಿ ಹೊಡೆದು ಶಬ್ಧ ಮಾಡಬಾರದು. ಬರಿಯ ಭೂಚಕ್ರ, ನಕ್ಷತ್ರಕಡ್ಡಿ ಮಾತ್ರ ಹಚ್ಚಬೇಕು. ಅಮ್ಮನಿಗೆ ಇವುಗಳ ಹೊಗೆಯೂ ಆಗುವುದಿಲ್ಲ. ಆದಷ್ಟು ಕಡಿಮೆ ತಂದರಾಯಿತು ಅಂದುಕೊಡ. 

ಅವನ ಕ್ಲಾಸ್ ಮೇಟ್ ಶ್ರವಣ್ ಕಳೆದ ವರ್ಷದ ದೀಪಾವಳಿ ಮುಗಿಸಿ ತರಗತಿಗೆ ಬಂದಾಗ ಕೈಗೆ ದೊಡ್ಡ ಬ್ಯಾಂಡೇಜ್ ಹಾಕಿಕೊಂಡಿದ್ದ. ಹೂಕುಂಡ ಹಚ್ಚುವಾಗ ಆಗಿದ್ದಂತೆ. ಎರಡು ಮೂರು ಸಲ ಬೆಂಕಿ ತಾಕಿಸಿದರೂ ಹೂಕುಂಡ ಹತ್ತಲಿಲ್ಲವಂತೆ. ಏಕಿರಬಹುದು ಅಂತ ಅದನ್ನು ಕೈಯಲ್ಲಿ ಹಿಡಿದು ಪರೀಕ್ಷಿಸುವಾಗ ಭರ್ರನೆ ಅದು ಹೊತ್ತಿಬಿಟ್ಟು ಅವನ ಬಲಗೈ ಸುಟ್ಟುಬಿಟ್ಟಿದೆ. ಸದ್ಯ.. ಕಣ್ಣಿಗೆ ಕಿಡಿ ಹೋಗಿದ್ದರೆ ಏನು ಗತಿ ಅನ್ನುತ್ತಿದ್ದ.

ಮೊನ್ನೆ ವಿನೀತನ ಕ್ಲಾಸಲ್ಲಿ ದೀಪಾವಳಿ ಹೇಗೆ ಆಚರಿಸಬೇಕು ಅನ್ನುವುದರ ಬಗೆಗೆ ಕನ್ನಡ ಟೀಚರ್ ಒಂದು ಚರ್ಚೆ ಇಟ್ಟುಬಿಟ್ಟಿದ್ದರು. ಅವರು ಹೊಸ ಕನ್ನಡ ಟೀಚರ್. ಈ ವರ್ಷವಷ್ಟೇ ನಮ್ಮ ಶಾಲೆಗೆ ಸೇರಿದ್ದು. ಈ ಹೊಸ ಟೀಚರ್ ತಮ್ಮ ಕಣ್ಣುಗಳಲ್ಲಿ ಏನೋ ಹೊಳಪು ಇಟ್ಟುಕೊಂಡು ಮಾತಾಡುತ್ತಾರೆ. ಕ್ಲಾಸಲ್ಲಿ ಯಾರಾದರು ಹಾಡಿದರೆ, ಕತೆಗಳನ್ನು ಹೇಳಿದರೆ,  ಕೇಳಿದ ಪ್ರಶ್ನೆಗಳಿಗೆ ಸರಿ ಉತ್ತರ ಕೊಟ್ಟರೆ, ಅವರ ಕಣ್ಣು ಮತ್ತಷ್ಟು ಹೊಳೆಯುತ್ತವೆ, ಹಾಗೆಯೆ ನಗುತ್ತವೆ ಅಂತ ವಿನೀತನಿಗೆ ಅನ್ನಿಸುತ್ತಿರುತ್ತೆ.

ಅವನ ಬಹಳ ಜನ ಗೆಳೆಯರು ಎರಡು ಮೂರು ವರ್ಷಗಳಿಂದ ಪಟಾಕಿ ಹಚ್ಚುತ್ತಿಲ್ಲವಂತೆ. ಮತ್ತೆ ಹಾಗಂತ ಪ್ರತಿಜ್ಞೆ ಮಾಡಿದ್ದೇವೆ ಅನ್ನುತ್ತಿದ್ದರು. ಇದನ್ನು ಕೇಳಿದಾಗ ಕನ್ನಡ ಟೀಚರಿನ ಕಣ್ಣುಗಳು ನಕ್ಷತ್ರಗಳಂತೆ ಹೊಳೆಯುತ್ತಿದ್ದವು. ಇನ್ನು ಮೂರು ನಾಲ್ಕು ಜನ ಸ್ನೇಹಿತರು ’ನಾವು ಕೂಡ ಪಟಾಕಿ ಹಚ್ಚಲ್ಲ, ಬರೀ ಚಿನಕುರುಳಿ ಹಚ್ತೀವಿ’ ಅಂದರು.  ಅದಕ್ಕೆ ಎಲ್ಲರು ತುಂಬಾ ನಕ್ಕಿದ್ದರು.

ವಿನೀತ ಟೀಚರ್ ಗೆ ಹೇಳಿದ್ದ. ತಾನು ಬರೀ ನಕ್ಷತ್ರಕಡ್ಡಿ ಹಚ್ಚೋದು ಅಂತ. ಟೀಚರಿಗೆ ಏನೋ ಅಸಮಾಧಾನ. ಕೊನೆಯಲ್ಲಿ ಅವರು ಹೇಳಿದ್ದರು, " ಹಬ್ಬದಲ್ಲಿ ಹೊಸ ಬಟ್ಟೆ ಹಾಕಿಕೊಳ್ಳಿ. ಹೋಳಿಗೆ ಊಟ ಮಾಡಿ. ರಾತ್ರಿ ಮನೆ ಮುಂದೆ, ಮನೆ ಒಳಗೆ ದೀಪ ಹಚ್ಚಿ ಅಥವ ಮೇಣದಬತ್ತಿಗಳನ್ನು ಹಚ್ಚಿ. ಪಟಾಕಿ ಶಬ್ಧ ಆದಷ್ಟು ಕಡಿಮೆ ಮಾಡಿ ದೀಪಾವಳಿ ಆಚರಿಸಿ. ಆವಾಗ ನೋಡಿ ಎಷ್ಟು ಖುಶಿಯಿರುತ್ತೆ" ಅಂತ.

ಎಲ್ಲರಿಗೂ ಬೇಜಾರು ಏನೆಂದರೆ ಈ ಕನ್ನಡ ಟೀಚರ್ ಮಕ್ಕಳಿಗೆ ಪಟಾಕಿ ಹಚ್ಚಬೇಡಿ ಅನ್ನೋದು.

ಮರುದಿನ ಬೆಳಿಗ್ಗೆ ವಿನೀತ ಬೇಗನೆ ಎದ್ದ. ತನ್ನ ಉಳಿತಾಯದ ಗೋಲಕವನ್ನು ಮೆಲ್ಲನೆ ತೆರೆದ. ಅದರಲ್ಲಿ ಸುಮಾರು ದಿನಗಳಿಂದ ಉಳಿಸಿಟ್ಟ ಹಣವನ್ನು ಎಣಿಸತೊಡಗಿದ. ಸುಮಾರು ಒಂಭತ್ತುನೂರು ರೂಪಾಯಿ! ಅವನಿಗೊಂದು ಹೊಸ ಯೋಚನೆ ಬಂತು. ಅಪ್ಪನ ಬಳಿ ಓಡಿದ. 

"ನೂರು ರೂಪಾಯಿ ಇವತ್ತು ನನಗೆ ಕೊಡಬೇಕು "  ಕೇಳಿದ. 
"ಬರಿಯ ನೂರು ರುಪಾಯಿ .. ಅಷ್ಟೇ ಪಟಾಕಿಯಾ ಈ ವರ್ಷ? " ತಂದೆ ಕೇಳಿದರು.
"ಈ ವರ್ಷದಿಂದ ಪಟಾಕಿ ಬೇಡಪ್ಪ. ನೀವು ನೂರು ಕೊಟ್ಟರೆ, ನನ್ನ ಹಣವೂಸೇರಿಸಿದರೆ ಒಟ್ಟು ಒಂದು ಸಾವಿರ ಆಗುತ್ತೆ. ನಾವು ಬೆಳಕ ಹಬ್ಬ ಬೇರೆ ರೀತಿ ಆಚರಿಸೋಣ"  
"ಏನು ವಿನೂ.. ಹೊಸ ಯೋಚನೆ..?"  
"ನಾನು, ನೀವು, ಅಮ್ಮ ಎಲ್ಲ ನಾಡಿದ್ದು ಭಾನುವಾರ ಅನಾಥಶ್ರಮವಿದೆಯಲ್ಲ ಅಲ್ಲಿ ಹೋಗೋಣ, ಹಣ್ಣು, ಸಿಹಿ ಮತ್ತು ಮತ್ತೇನಾದರು ಉಪಯೋಗವಾಗುವ ಉಡುಗೊರೆ ಅಲ್ಲಿ ಕೊಡೋಣ" 
 
ಅಪ್ಪನಿಗೆ ಖುಷಿ. "ಅಮ್ಮ ಮತ್ತು ನಾನು ಎರಡು ಸಾವಿರ ಕೊಡ್ತೀವಿ. ನೀನು ಹೇಳಿದ ಹಾಗೇ ಅಲ್ಲಿಗೆ ಹೋಗೋಣ" ಅಂದರು.

ವಿನೀತ ಶಾಲೆಗೆ ಎಂದಿನಂತೆ ಹೊರಟ. ಆ ದಿನ ಪ್ರಾರ್ಥನೆ ಸಮಯದಲ್ಲಿ ಹೆಡ್ ಮಿಸ್ ಹೇಳಿದರು, " ಮಕ್ಕಳೇ, ಈ ದಿನ ನಮ್ಮ ಕನ್ನಡದ ಹೊಸ ಟೀಚರ್ ದೀಪಾವಳಿ ಬಗೆಗೆ ಒಂದು  ಪುಟ್ಟ ಭಾಷಣ  ಕೊಡುತ್ತಿದ್ದಾರೆ. ಅವರ ಮಾತನ್ನು ಈಗ ನಾವೆಲ್ಲ ಕೇಳೋಣವ? ". 

ವಿನೀತ ಮನಸ್ಸಿನಲ್ಲೆ ಅಂದುಕೊಂಡ, ’ಮತ್ತೆ ಪಟಾಕಿ ಸುಡಬೇಡಿ ಅಂತ ಉಪದೇಶ ಕೊಡುತ್ತಾರೊ ಏನೊ..’ 

ಕನ್ನಡದ ಟೀಚರ್ ಮುಂದೆ ಬಂದರು. ನಗುತ್ತಾ ತಮ್ಮ ಮಾತು ಪ್ರಾರಂಬಿಸಿದರು.

"ಮಕ್ಕಳಿಗೆಲ್ಲ ದೀಪಾವಳಿಯ ಶುಭಾಶಯ ಇವತ್ತೇ ಹೇಳುತ್ತೀನಿ. ದೀಪಾವಳಿಯ ದಿನ ದೀಪ ಹಚ್ಚಿ, ಆದರೆ ಪಟಾಕಿ ಸುಡಬೇಡಿ ಅಂತ ನಾನು ಈಗಾಗಲೆ ಎಲ್ಲ ಕ್ಲಾಸಿನಲ್ಲಿ ನಿಮಗೆಲ್ಲ ಹೇಳಿದ್ದೀನಿ ಅಲ್ವ? ಆದರೂ ಬಹಳ ಮಕ್ಕಳಿಗೆ ನಾನು ಹೇಳಿದ್ದು ಇಷ್ಟ ಆಗಿಲ್ಲ ಅಂತ ಗೊತ್ತು. ಆದರೆ ಮಕ್ಕಳೆ.. ನಾನು ಹೀಗೆ ಹೇಳಲು ಕಾರಣವಿದೆ. ನೀವೆಲ್ಲ ನನ್ನ ಥರ ಪಟಾಕಿ ಹುಚ್ಚಿನಿಂದ ಮಾಡಿಕೊಂಡ ಅನಾಹುತ ನೀವು ಮಾಡಿಕೊಬಾರದು ಅನ್ನೋದು ನನ್ನ ಆಸೆ. ಅದಕ್ಕೆ ಕಾರಣ ಇದೆ. ಆ ವಿಷಯ ಈಗ ನಿಮಗೆಲ್ಲೆ ಹೇಳ್ತೀನಿ.

ಆರನೇ ಕ್ಲಾಸಿನಲ್ಲಿ ಓದುವಾಗ ನನಗೆ ತುಂಬಾ ಪಟಾಕಿ ಹುಚ್ಚಿತ್ತು. ಮೂರು ನಾಲ್ಕು ದಿನವೂ ಪಟಾಕಿಯ ಸಂಭ್ರಮದಲ್ಲಿ ಇರುತ್ತಿದ್ದೆ. ಹೆಚ್ಚು ಶಬ್ಧ ಮಾಡುವ ಪಟಾಕಿ ಅಂದ್ರೆ ನನಗೆ ತುಂಬಾ ಇಷ್ಟ. ಆದರೆ, ಮಕ್ಕಳೇ,  ಆ ವರ್ಷದ ದೀಪಾವಳಿಯ ಒಂದು ದಿನ ಒಂದೇ ಒಂದು ದೊಡ್ಡ ಪಟಾಕಿ ನನ್ನ ಜೀವನ ಹಾಳು ಮಾಡಿತು. ಆ ಪಟಾಕಿ ಭಾರಿ ಶಬ್ಧಮಾಡುತ್ತ ನನ್ನ ಮುಖಕ್ಕೆ ಬಡಿದು ಬಿಟ್ಟಿತು. ನನ್ನ ಎರಡೂ ಕಣ್ಣುಗಳನ್ನು ಸುಟ್ಟುಬಿಟ್ಟಿತು! "

ಇದ್ದಕ್ಕಿದ್ದಂತೆ ಎಲ್ಲ ಮಕ್ಕಳೂ ಒಂದು ನಿಮಿಷ ಗರಬಡಿದಂತೆ ಆ ಟೀಚರನ್ನೇ ನೋಡತೊಡಗಿದರು. ಕನ್ನಡ ಟೀಚರ್ ಮಾತು ಮುಂದುವರಿಸಿದರು. " ನನಗೆ ಗೊತ್ತು.. ನೀವೆಲ್ಲ ಏನು ಯೋಚನೆ ಮಾಡ್ತಾ ಇದೀರ ಅಂತ. ನನಗೆ ಕಣ್ಣು ಇವೆಯಲ್ಲ. ಮತ್ತೆ ಸುಟ್ಟು ಹೋಗಿದ್ದು ಹೇಗೆ ಅಂತ ಅಲ್ವಾ..? ಅದು ಕೂಡ ಒಂದು ದೊಡ್ಡ ಕಥೆಯೆ. ನಾನು ಎರಡು ವರ್ಷ ಕಣ್ಣು ಕಳೆದುಕೊಂಡು ಕತ್ತಲಿನ ಪ್ರಪಂಚದಲ್ಲಿದ್ದೆ. ಕುರುಡಿಯಾಗಿದ್ದೆ. ನನ್ನ ಬಣ್ಣದ ಲೋಕ ಮರೆಯಾಗಿಹೋಗಿತ್ತು. ಎಲ್ಲ ಕೆಲಸಗಳಿಗೂ ಬೇರೆಯವರ ಸಹಾಯ ಪಡೆಯತೊಡಗಿದೆ. ನನ್ನ ಶಾಲೆ, ಸ್ನೇಹಿತರು, ಆಟಗಳು ಎಲ್ಲ ನನ್ನಿಂದ ದೂರವಾದುವು. ಕಣ್ಣುಗಳ ಮಹತ್ವ ಆಗಲಷ್ಟೆ ನನಗೆ ತಿಳಿಯಿತು."

ಈಗ ಮಕ್ಕಳೆಲ್ಲ ಕನ್ನಡ ಟೀಚರಿನ ಕಣ್ಣುಗಳನ್ನೆ ಎವೆಯಿಕ್ಕದೆ ನೋಡತೊಡಗಿದರು.  ಅವರ ಕುತೂಹಲ ಹೆಚ್ಚಾಗತೊಡಗಿತು.

ಟೀಚರ್ ತಮ್ಮ ಮುಗುಳ್ನಗೆಯ ಮುಖದಲ್ಲಿ ಮಾತು ಮುಂದುವರಿಸಿದರು.

"ಆದರೆ ಮಕ್ಕಳೇ, ನನ್ನ ಭಾಗ್ಯ ಚೆನ್ನಾಗಿತ್ತು. ದೇವರು ನನ್ನ ಪಶ್ಚಾತ್ತಾಪವನ್ನು ನೋಡಿದರು ಅನ್ನಿಸುತ್ತೆ. ಒಂದು ದಿನ ನನಗೆ ಒಳ್ಳೆಯ ಸುದ್ದಿ ಕಾದಿತ್ತು.  ಒಬ್ಬ ಮಹಾನುಭಾವರು ತಾವು ನಿಧನರಾದಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಬೇಕೆಂದು ಹೇಳಿದ್ದರು. ಡಾಕ್ಟರುಗಳು ಆ ದಾನದ ಕಣ್ಣುಗಳನ್ನು ನನಗೆ ಇಟ್ಟು ಆಪರೇಷನ್ ಮಾಡಿದರು.  ನೇತ್ರ ದಾನ ಮಾಡಿದ ಆ ಮಹಾನುಭಾವರ ಕಣ್ಣುಗಳೇ   ಈಗ ನೀವು ನೋಡುತ್ತಿರುವುದು.  ಅವರು  ಕಣ್ಣುಗಳನ್ನು ಕೊಟ್ಟು ನನ್ನ ಜೀವನದ ಬೆಳಕಾದರು. ಮತ್ತೆ ನಾನು ಬೆಳಕನ್ನು ಕಾಣುವಂತೆ ಮಾಡಿದರು..! "

ಟೀಚರ್ ಭಾಷಣ ಮುಗಿಸುವಾಗ ಪಟಾಕಿ ಸುಡಬೇಡಿ ಎಂದು ಮತ್ತೆ ಹೇಳಲಿಲ್ಲ. ಹಾಗೆ ಹೇಳುವ ಅಗತ್ಯವೂ ಇರಲಿಲ್ಲ.

ಸ್ವಲ್ಪ ಹೊತ್ತು ಎಲ್ಲ ಕಡೆ ಮೌನ. ಎಲ್ಲ ಮಕ್ಕಳೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ವಿನೀತ ತಲೆ ಕೆಳಗಿಟ್ಟು ಯೋಚಿಸತೊಡಗಿದ. 

ಮೌನ ಮುರಿಯುತ್ತಾ ಹೆಡ್ ಮಿಸ್ ಚಪ್ಪಾಳೆ ತಟ್ಟಿದರು.  ಇದ್ದಕ್ಕಿದ್ದಂತೆ ಎಲ್ಲ ಕಡೆಯೂ ಚಪ್ಪಾಳೆಯ ಶಬ್ಧ ಮೊಳಗಿತು. 

ಮಕ್ಕಳಲ್ಲಿ ಹೊಸ ನಿರ್ಧಾರಗಳು ಚಿಗುರೊಡೆದವು. ಕನ್ನಡ ಟೀಚರ್ ಕಣ್ಣುಗಳು ನಕ್ಷತ್ರಗಳಂತೆ ಬೆಳಗಿದವು.

ವಿನೀತ ಈ ದೀಪಾವಳಿಗೆ ದೀಪವಷ್ಟೇ ಹಚ್ಚಿ ಟೀಚರಿಗೆ ಈ ವಿಷಯ ಹೇಳಬೇಕು ಅಂದುಕೊಂಡ. ಹಾಗೆ ತಾನು ಹೇಳುವಾಗ ಅವರ ಕಣ್ಣುಗಳಲ್ಲಿ ಬೆಳಕು  ಮಿಂಚುವ ಬಗೆಯನ್ನು ಊಹಿಸುತ್ತಾ ಖುಷಿಯಾದ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x