ಪ್ರೇಮ ಪತ್ರಗಳು

“ಒಲವಿಗೊಂದು ನೆನಪಿನೋಲೆ”: ಶಿವಾನಂದ ಆರ್ ಉಕುಮನಾಳ

Shivanand Ukumanala

ಒಂದು ಸುಂದರ ಮುಂಜಾವು ಮೈಸೂರಿನ ಮೈ ಕೊರೆವ ಚಳಿಯಲ್ಲಿ ಮಾನಸ ಗಂಗೋತ್ರಿಗೆ ಹೊರಟಿದ್ದೆ ಅದು ಬಿ.ಕಾಂ. ಅಂತಿಮ ವರ್ಷದ ಮೊದಲ ದಿನ. ಎಲ್ಲಿಂದಲೋ ಹಾರಿಬಂದ ಪಾರಿವಾಳವೊಂದು ಭುಜದ ಮೇಲೆ ಕುಳಿತಿತು ಅದು ಯಾರದೆಂದು ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ. ಅದನ್ನೆತ್ತಿ ಮಣಿಕಟ್ಟಿನ ಮೇಲೆ ಕುಳ್ಳಿರಿಸಿ ನೋಡಲು ಅದರ ಎದೆಯ ಮೇಲೆ ನಯನಾ ಎಂಬ ಹೆಸರು ಮತ್ತೆ ಅತ್ತಿತ್ತ ನೋಡಲಾಗಿ ದೂರದಲ್ಲಿ ಕಂಡವಳೇ ನೀನು (ನಯನಾ).

ಹತ್ತಿರಕ್ಕೆ ಬಂದು ಅದೇನನ್ನೋ ಹೇಳಿ ಆ ಪಾರಿವಾಳವನ್ನೆತ್ತಿಕೊಂಡು ಹೊರಟೇ ಹೋದೆ ಆದರೆ ನಾನು ನಿಂತಲ್ಲೆ ನಿಂತಿದ್ದೆ. ಅದೇನಾಯಿತು ಎಂಬುದರ ಅರಿವೇ ಇರಲಿಲ್ಲ. ಮನದಲ್ಲಿ ಕವಿಯಾದ ಅನುಭವ.

ಕಂಡೊಡನೆ ಕೆಣಕಿದವು ಕಾಡಿಗೆಯ ಕಣ್ಣು

ಮರುಕ್ಷಣವೇ ನಾಚಿದವು ಮಲ್ಲಿಗೆಯ ದಂಡು

ಚಿತ್ತಕ್ಕೆ ಸೆರೆಯಾಯ್ತು ಮುಂಗುರುಳ ಗುಂಗು

ಚಿತ್ತ ವೃತ್ತಿಯ ಕಂಡು ನನಗಾಯ್ತು ದಿಗಿಲು

ಸೌಂದರ್ಯ ರಾಶಿಯದು ಅದಕಾಗಿ ಸೋತೆ

ದಿಕ್ಕು ತೋಚದೆ ನಾನು ದಂಗಾಗಿ ನಿಂತೆ    

ಇವು ನಿನ್ನನ್ನು ಕಂಡ ಕ್ಷಣ ಎದೆಯಾಳದಲ್ಲಿ ಅವತರಿಸಿದ ಕವನದ ಸಾಲುಗಳು. ಆ ಪಾರಿವಾಳದ ಎದೆಯ ಮೇಲಿದ್ದ  ಹೆಸರನ್ನು ನನ್ನ  ಎದೆಯ ಮೇಲೆ ಅಚ್ಚೊತ್ತಿಕೊಂಡು  ನಿನಗಾಗಿ ಹಾತೊರೆಯುವುದೇ  ಪರಿಪಾಠವಾಯ್ತು.  ನೀನು ಯಾರು? ಯಾವ ಊರು? ಎಂದೆಲ್ಲ  ತಿಳಿಯುವ ಮೊದಲೇ ನೀನು ಅಲ್ಲಿರಲಿಲ್ಲ ಕಣ್ಮರೆಯಾದಳಲ್ಲ ಎಂದು ಹತಾಶನಾಗಿ ಕಾಲೇಜಿಗೆ ಹೋಗುವುದನ್ನು ಬಿಟ್ಟು ನಿನಗಾಗಿ  ಎಲ್ಲೆಂದರಲ್ಲಿ ಅಲೆದು ಸುಸ್ತಾದೆ. ಆದರೆ ನಾನು  ಎಷ್ಟು ದಡ್ಡನೆಂದು ಮರುದಿನ ನಿನ್ನನ್ನು ಕಾಲೇಜಿನಲ್ಲಿ ಕಂಡಾಗಲೇ ಅರಿವಾದದ್ದು ಬಲ್ಲ ಮೂಲಗಳಿಂದ ನೀನು ಬಿ.ಕಾಂ. ಮೊದಲ ವರ್ಷದ ವಿದ್ಯಾರ್ಥಿಯೆಂದು ತಿಳಿಯಿತು .    

ನನ್ನ ಮನದ ಮನದ ಇಂಗಿತವನ್ನು ನಿನಗೆ ಹೇಳಬೇಕೆಂದು ಎದುರಿಗೆ ಬಂದಾಗಲೆಲ್ಲ ಆ ಹೊಳಪು ಕಂಗಳು, ನನ್ನನ್ನೇ ತಿವಿಯುವಂತೆ ಹುಡುಕುತ್ತಿರುವ ಅದರ ಅಂಚು, ನವಿರಾದ ಹುಬ್ಬು, ನೀಳವಾದ ಮೂಗು, ಎದೆಯುಬ್ಬಿಸಿ ನಿಂತ ಬಿಲ್ಲಿನಾಕಾರದ ಕೆಂದುಟಿಗಳು, ಮೊಗದ ಮೇಲೆ  ಅತ್ತಿಂದಿತ್ತ  ವಾರ್ಮ್ ಅಪ್ ಮಾಡುತ್ತಿರುವ ಮುಂಗುರುಳು, ಆಗಾಗ ಆ ಮುಂಗುರುಳನ್ನು ಹೆಗಲ ಮೇಲೆ  ಹೊತ್ತು  ನಿಲ್ಲುವ ಸೊಂಪಾದ ಕಿವಿಗಳು. ಇವು ನನ್ನನ್ನು ಮೂಖವಿಸ್ಮಿತನನ್ನಾಗಿ ಮಾಡಿಬಿಡುತ್ತವೆ. ನೀನು ಓರೆಗಣ್ಣಲ್ಲಿ ನನ್ನತ್ತ ನೋಡಿ ನಸುನಕ್ಕು ಮುಂದಡಿಯಿಟ್ಟಾಗ ಎದೆಯೊಳಗಿನ ತಮಟೆ ತಾಳ ಹಾಕುವುದಂತು ನಿಜ.

ನನ್ನ ಒಲವನ್ನು ವ್ಯಕ್ತಗೊಳಿಸುವ ಬಗೆ ಹೇಗೆ ಎಂದು ಯೋಚಿಸುತ್ತಿರಬೇಕಾದರೆ ಒಂದು ಸುಸುದ್ಧಿ ಕೇಳಿಬಂತು. ಅದೇನೆಂದರೆ ಕಾಲೇಜಿನಿಂದ ಏರ್ಪಡಿಸಿದ್ದ ಎರಡು ದಿನದ ಶೈಕ್ಷಣಿಕ ಪ್ರವಾಸಕ್ಕೆ ನೀನೂ ಹೊರಟಿರುವಿ ಎಂದು ತಿಳಿಯಿತು. ಇದೇ ಸರಿಯಾದ ಸಮಯ ಅಲ್ಲಿಯೇ ನಿನ್ನ ಪ್ರೀತಿಯನ್ನು ಪ್ರಸ್ತಾಪಿಸುವಿಯಂತೆ ಅದಕ್ಕೆ ನಾವೂ ಸಪೋರ್ಟ್ ಮಾಡುತ್ತೇವೆಂದು ಸ್ನೇಹಿತರೆಲ್ಲ ಸಲಹೆ ನೀಡಿದರು ಅದರಂತೆ ಪ್ರವಾಸಕ್ಕೆ ಅಣಿಯಾದೆವು.

ಅದು ಪ್ರವಾಸದ ಮೊದಲ ದಿನ ಮೈಸೂರಿನಿಂದ ನೇರವಾಗಿ ಬಂಡಿಪುರ ಅರಣ್ಯಧಾಮ, ತಲಕಾವೇರಿ ನೋಡಿಕೊಂಡು ಆಗುಂಬೆಗೆ ಬಂದು ಅಲ್ಲಿನ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಾ ನಿಂತಿದ್ದ ನೀನು, ನಿನ್ನನ್ನೇ ದುರುಗುಟ್ಟಿಕೊಂಡು ನಿಂತಿದ್ದ ನಾನು, ಏಯ್!! ಹೋಗಿ ಹೇಳೋ ಎಂದು ಕಿವಿ ಹಿಂಡುತ್ತಿದ್ದ ಸ್ನೇಹಿತರು. ಆದರೂ ಸಾಧ್ಯವಾಗಲಿಲ್ಲ. ಆ ಕಣ್ಣುಗಳ ಪ್ರಖರತೆ ನನ್ನನ್ನು ಹಿಂದಕ್ಕೆ ದೂಡಿತು.  ಅಲ್ಲಿಂದ ಮುಂದೆ ಶಿವಮೊಗ್ಗ ಜಿಲ್ಲೆಯ ಜೋಗದ ಗುಂಡಿಗೂ ಇಣುಕಿ ಹಾವೇರಿ ಧಾರವಾಡ ಮಾರ್ಗವಾಗಿ ಸಿಗುವ ಎಲ್ಲಾ ಪ್ರವಾಸಿತಾಣಗಳು, ದೇವಸ್ಥಾನ, ಸ್ಮಾರಕಗಳನ್ನು ನೋಡಿಕೊಂಡು ಆ ದಿನ ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದೆವು.

ಮರುದಿನ ಬೆಳಿಗ್ಗೆ ಬೇಗ ಎದ್ದು ವಿಜಯಪುರ ಜಿಲ್ಲೆಯ ಆಲಮಟ್ಟಿಯ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಆಣೆಕಟ್ಟು ನೋಡಿದ್ದು ಆಯಿತು. ಸ್ನೇಹಿತರೆಲ್ಲಾ ಸೇರಿ ನೀನ್ ಅದೇನ್ ಮಾಡ್ತಿಯೋ ಗೊತ್ತಿಲ್ಲ ಇವತ್ತು ಹೇಗಾದ್ರೂ ಮಾಡಿ ಹೇಳಲೇ ಬೇಕು ಅಂತಾ ಕಟ್ಟಪ್ಪಣೆಯಿಟ್ಟರು. ಅಲ್ಲಿಂದ ನೇರವಾಗಿ ಹಾಗೂ ಅಂತಿಮವಾಗಿ ಗುಮ್ಮಟನಗರಿ ವಿಜಯಪುರಕ್ಕೆ ಪ್ರಯಾಣ ಬೆಳೆಸಿದೆವು. ಆ ಅದ್ಭುತ ಗುಮ್ಮಟದ ಪಿಸು ಮಾತಿನ ಗ್ಯಾಲರಿಯಲ್ಲಿ ಅದೆಷ್ಟು ಬಾರಿ ಚೀರಿ ನನ್ನ ಒಲವನ್ನು ಒಪ್ಪಿಸಿದೆನಾದರೂ ಅಷ್ಟು ಜನರ ಕೂಗಾಟ ಕಿರುಚಾಟದಲ್ಲಿ ನನ್ನ ಸದ್ದು ಅಡಗಿಹೋಗಿತ್ತು. ಅಲ್ಲಿಂದ ನಿರಾಸೆಗೊಂಡು ಬಂದು ನಿಂತದ್ದು 'ದಖನ್ನಿನ ತಾಜಮಹಲ್' ಎಂದೇ ಕರೆಯಲ್ಪಡುವ ಇಬ್ರಾಹಿಂ ರೋಜಾದ ಎದುರಿಗೆ ಆ ಸ್ಮಾರಕವನ್ನು ನೋಡುತ್ತಿದ್ದಂತೆಯೇ ಅದಾವ ಚೈತನ್ಯ ನನ್ನನ್ನು ಆವರಿಸಿತೋ ಗೊತ್ತಿಲ್ಲ . ನನ್ನ ಮನದ ಇಂಗಿತವನ್ನು ಕೆಂಗುಲಾಬಿಯೊಂದಿಗೆ ನಿನ್ನೆದುರು ತೋಡಿಕೊಂಡೆ ಮರು ಮಾತನಾಡದೆ ನೀನು ಸಮ್ಮತಿಸಿ ಗುಲಾಬಿ ಸ್ವೀಕರಿಸಿ ನನ್ನನ್ನು ಅಪ್ಪಿಕೊಂಡೆ ಸ್ನೇಹಿತರೆಲ್ಲ ಚಪ್ಪಾಳೆಯ ಮಳೆಗರೆದರು ನಮ್ಮಿಬ್ಬರ ಒಲವಿನ ಸಂಗಮಕ್ಕೆ ಆ ಸುಂದರ ಸ್ಮಾರಕ ಮೂಖ ಸಾಕ್ಷಿಯಾಗಿ ಮಂದಹಾಸ ಬೀರಿತ್ತು.    

ನಿನ್ನ ಹಿಂದೆ ಅಮಾಯಕನಂತೆ ಅಲೆಯುತ್ತಿರುವೆನಲ್ಲಾ ಎಂಬ ಕಾರಣಕ್ಕೋ, ನನ್ನ ಮುಗ್ಧತೆಗೋ, ಸರಳ ವ್ಯಕ್ತಿತ್ವಕ್ಕೋ, ಅದಾವ ಕಾರಣಕ್ಕೆ ನೀ ನನಗೊಲಿದೆ ಎಂಬುದರ ಸುಳಿವಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ನಿನ್ನನ್ನು ಮೊದಲ ಬಾರಿ ಕಂಡಾಗಿದ್ದ ಮುಂಜಾವಿನ ಮೈ ಕೊರೆವ ಚಳಿ ಇಂದು ನಮ್ಮಿಬ್ಬರ ಆಲಿಂಗನದ ಮದ್ಯೆ ಸಿಲುಕಿ ಸತ್ತಿರುವುದಂತೂ ದಿಟ. ಅದರ ಸಾವಿಗೆ ನಾವಿಬ್ಬರೂ ಸಮ ಪಾಲುದಾರರಾದರೂ ಆ ಅಪರಾಧವನ್ನು ನಾನೊಬ್ಬನೇ ಹೊತ್ತು ಜೈಲು ಪಾಲಾದುದ್ದರ ತಾತ್ಪರ್ಯವಿಷ್ಟೇ. ನಮ್ಮ ಈ ಒಲವಿನ ಅಪರಾಧಕ್ಕೆ ಹೃದಯವೇ ಜೈಲು ಅಲ್ಲಿರುವುದು ಒಬ್ಬಳೇ ಪೇದೆ, ಅದು ನೀನು. 'ಒಲವನ್ನು ತೋರ್ಪಡಿಪ ಆ ಜೈಲು ಕಂಬಿ, ಚೆಲುವನ್ನು ತುಂಬಿಟ್ಟ ಚಂದನದ ಕಳಿಸಿ, ಪ್ರೇಮವನೇ ಸುರಿಸುವ ಆ ನಾಲ್ಕು ಗೋಡೆ ಬರಿಮುತ್ತು ಸುರಿಸುವ ಒಬ್ಬಳೇ ಪೇದೆ ' ಇಷ್ಟು ಸಾಕಲ್ಲವೇ ಇನ್ನೇನುತಾನೆ ಬೇಕು. ಪೇಮಖೈದಿ ಎಂಬ ಹಣೆಪಟ್ಟಿ ಹೊತ್ತುಕೊಳ್ಳಲು ನನಗಾವ ಹಿಂಜರಿಕೆಯೂ ಇಲ್ಲ. ಆದರೆ ನೀನು ಆಗಾಗ ತೋರ್ಪಡಿಸುವ ಹುಸಿಮುನಿಸು ನನ್ನಲ್ಲಿ ಆತಂಕ ಆನಂದ ಎರಡನ್ನೂ ಒಟ್ಟೊಟ್ಟಿಗೆ ಹುಟ್ಟಿಸುತ್ತದೆ. ಆ ಹುಸಿಮುನಿಸಿನಿಂದ ನೀನೆಲ್ಲಿ ನನ್ನಿಂದ ದೂರಾಗುತ್ತಿಯೋ ಎಂಬ ಆತಂಕ ಒಂದೆಡೆಯಾದರೆ ಆ ಮುನಿಸಿನಲ್ಲೂ ಸೊಗಸಾಗಿ ಕಾಣುವ ಕಂಗಳು ನನ್ನಲ್ಲಿ ಜೀವನೋತ್ಸಾಹವನ್ನು ನೂರ್ಮಡಿಗೊಳಿಸುತ್ತವೆ. ನಮ್ಮ ಜಯಂತ ಕಾಯ್ಕಿಣಿ ಗುರುಗಳು ತಮ್ಮ ಪರವಶನಾದೆನು ಹಾಡಿನಲ್ಲಿ ತಮ್ಮ  ಏಕಾಂತವನ್ನು  ಮರಳಿಸುವಂತೆ ಪ್ರೇಯಸಿಯಲ್ಲಿ ಗೋಳಿಡುತ್ತಾರೆ, ಆದರೆ ನಾನು  ಮಾತ್ರ ನಿನ್ನ ಸಾಂಗತ್ಯವನ್ನು ಎಂದಿಗೂ ಕಳೆದು -ಕೊಳ್ಳಲು ಇಚ್ಚಿಸುವುದಿಲ್ಲ.

ಇಂತಿ
ನಿನ್ನೊಲವಿನ ಒಡನಾಡಿ
-(ಉಶಿರು)
ಶಿವಾನಂದ ಆರ್ ಉಕುಮನಾಳ