ಅರಳುಗುಪ್ಪೆ : ಕಲ್ಲರಳಿ ಕಲೆಯಾಗಿ…: ದಂಡಿನಶಿವರ ಮಂಜುನಾಥ್


Dandinashivara manjunath

ಬೇಲೂರು-ಹಳೇಬೀಡಿನ ದೇವಾಲಯಗಳು ವಿಶ್ವದಲ್ಲಿಯೇ ಶಿಲ್ಪಕಲೆಗೆ ಹೆಸರುವಾಸಿಯಾಗಿವೆ. ಹಾಗೆಯೇ ಅದೆಷ್ಟೋ ದೇವಾಲಯಗಳು ಶಿಲ್ಪಕಲಾ ಸೌಂದರ್ಯದಿಂದ ತುಳುಕುತ್ತಿದ್ದರೂ ಸಹ ಇನ್ನೂ ಅಪರಿಚಿತವಾಗಿಯೇ ಉಳಿದಿದೆ. ಅಂತಹ ಅಪರಿಚಿತ ದೇವಾಲಯಗಳಲ್ಲಿ ಅರಳುಗುಪ್ಪೆಯ ದೇವಾಲಯಗಳೂ ಸೇರ್ಪಡೆಗೊಂಡಿವೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ಅರಳುಗುಪ್ಪೆ ಎಂಬ ಕುಗ್ರಾಮ ಕಿಬ್ಬನಹಳ್ಳಿ ಹೋಬಳಿಗೆ ಸೇರಿದೆ. ಇಲ್ಲಿರುವ ಹೊಯ್ಸಳರ ಕಾಲದ ಶ್ರೀ ಚನ್ನಕೇಶವ ದೇವಾಲಯ ಮತ್ತು ದ್ರಾವಿಡ ಶೈಲಿಯ ಶ್ರೀ ಕಲ್ಲೇಶ್ವರ ದೇವಾಲಯಗಳು ಶಿಲ್ಪಕಲಾ ಸೌಂದರ್ಯದಿಂದ ಕಂಗೊಳಿಸುತ್ತಿವೆ.

ಚನ್ನಕೇಶವ ದೇಗುಲ :
ಚನ್ನಕೇಶವ ದೇವಾಲಯವನ್ನು ನೋಡಿದ ತಕ್ಷಣ ನಮಗೆ ನೆನಪಾಗುವುದು ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳು. ಹೊಯ್ಸಳರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದೆಂದು ಹೇಳಲಾಗುವ ಈ ದೇವಾಲಯ ಸುಂದರ ಕೆತ್ತನೆ ಕೆಲಸದಿಂದ ಕೂಡಿದೆ. ಗೋಡೆಗಳ ಮೇಲೆ ಕಲ್ಲಿನ ಕೆತ್ತನೆ ಮನಮೋಹಕವಾಗಿದೆ. ಈ ಗೋಡೆಗಳ ಮೇಲೆ ಸುಮಾರು 44 ವಿಷ್ಣುವಿನ ವಿವಿಧ ಅವತಾರ ಭಂಗಿಗಳ ಮೂರ್ತಿಗಳಿವೆ. ಈ ಮೂರ್ತಿಗಳ ಪಾದಪೀಠದ ಭಾಗದಲ್ಲಿ `ಹೊನೊಜ' ಎಂಬ ಮೂರಕ್ಷರಗಳು ರೂಪುತಾಳಿವೆ. ಸುಮಾರು 12 ಮೂರ್ತಿಗಳ ಪಾದ ಪೀಠದ ಭಾಗದಲ್ಲಿ `ಹೊ' ಎಂಬ ಕಲಾವಿದನ ಸಹಿಯನ್ನು ಹಾಗೂ 7 ಮೂರ್ತಿಗಳ ಪಾದಪೀಠದಡಿ `ಭ' ಎಂಬ ಕಲಾವಿದನ ಸಹಿಯನ್ನು ಕಾಣಬಹುದಾಗಿದೆ. ಈ ಸಹಿಗಳ ಮತ್ತು ಹೆಸರಿನ ಆಧಾರದ ಮೇಲೆ ಈ ದೇಗುಲವನ್ನು ಸುಮಾರು 12 ನೇ ಶತಮಾನದಲ್ಲಿ ನಿರ್ಮಿಸಿರಬಹುದೆಂದು ಶಿಲ್ಪಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ.

Copy of DSC03030

Copy of DSC00021

ದೇವಾಲಯದ ಒಳಭಾಗದಲ್ಲಿ ನಾಲ್ಕು ಜೊತೆ ಕಂಬಗಳಿವೆ. ಈ ಕಂಬಗಳೆಲ್ಲವೂ ವಿಶಿಷ್ಟ ಶಿಲ್ಪಕಲಾ ವಿನ್ಯಾಸದಿಂದ ಕೂಡಿವೆ. ಒಂದು ಜೊತೆ ಕಂಬದ ಕೆತ್ತನೆ ಹಾಗೆ ಇನ್ನೊಂದು ಜೊತೆ ಕಂಬಗಳಿಲ್ಲ. ಗರ್ಭಗೃಹದ ಎರಡೂ ಪಾಶ್ರ್ವಗಳಲ್ಲೂ ಸುಂದರ ಕೆತ್ತನೆ ಕೆಲಸದಿಂದ ಕೂಡಿದ ಎರಡು ವಿಗ್ರಹಗಳಿವೆ. ಗರ್ಭಗೃಹದ ಎಡಭಾಗದಲ್ಲಿ ಗಣೇಶನ ಸುಂದರವಾದ ಮತ್ತು ಮನಮೋಹಕವಾದ ವಿಗ್ರಹವಿದೆ. ಇದರ ಬಲಭಾಗದಲ್ಲಿ ಕರಿ ಕಲ್ಲಿನಿಂದ ಕೆತ್ತಲ್ಪಟ್ಟ ಮಹಿಷಾಸುರ ಮರ್ದಿನಿಯ ಸುಂದರ ವಿಗ್ರಹವಿದೆ. ಗರ್ಭಗೃಹದಲ್ಲಿ ನಿಜವಾಗಿ ನಿಂತಿದೆಯೋ ಏನೋ ಎನ್ನುವಂತೆ ಕಾಣುವ ಸುಂದರವಾದ ಆಳೆತ್ತರದ ಶ್ರೀ ಚನ್ನಕೇಶವನ ವಿಗ್ರಹದ ನಿಂತಿರುವ ಭಂಗಿಯನ್ನು ನೋಡುವುದೇ ಕಣ್ಣಿಗೆ ಹಬ್ಬ.

ಕಲ್ಲೇಶ್ವರ ದೇವಾಲಯ :
ಚನ್ನಕೇಶವ ದೇವಾಲಯದ ಈಶಾನ್ಯ ಬಾಗಕ್ಕೆ ಇಟ್ಟಿಗೆಗಳಿಂದ ನಿರ್ಮಿಸಿರುವ ದ್ರಾವಿಢ ಶೈಲಿಯ ಕಲ್ಲೇಶ್ವರ(ಪಂಚಲಿಂಗ) ದೇಗುಲವಿದೆ. ಈ ದೇವಾಲಯವು ಹೊರಭಾಗದಿಂದ ನೋಡಲು ಸಾಧಾರಣದಂತೆ ಕಂಡುಬಂದರೂ ಸಹ ತನ್ನ ಮಡಿಲಲ್ಲಿ ಅಪೂರ್ವ ಶಿಲ್ಪಕಲೆಯನ್ನು ಹೊಂದಿದೆ. ಈ ದೇಗುಲವನ್ನು ಪಂಚಲಿಂಗೇಶ್ವರ ದೇವಾಲಯವೆಂತಲೂ ಕರೆಯುತ್ತಾರೆ. ಐದು ದೇವಾಲಯಗಳು ಇಲ್ಲಿದ್ದು, ಐದು ಲಿಂಗಗಳನ್ನು ಮತ್ತು ಐದು ನಂದಿ ವಿಗ್ರಹಗಳನ್ನು ಹೊಂದಿವೆ. ಆದ್ದರಿಂದಲೇ ಈ ದೇವಾಲಯವನ್ನು ಪಂಚಲಿಂಗ ದೇವಾಲಯವೆಂದು ಕರೆಯಲಾಗುತ್ತಿದೆ.

ಇಲ್ಲಿರುವ ಐದು ದೇವಾಲಯಗಳ ಪೈಕಿ ಒಂದು ದೇವಾಲಯ ಸ್ವಲ್ಪ ದೊಡ್ಡದಾಗಿದ್ದು ಮುಂಭಾಗದಲ್ಲಿ ಕರಿ ಕಲ್ಲಿನಿಂದ ಕೆತ್ತಲ್ಪಟ್ಟಿರುವ ಒಂದು ನಂದಿ ವಿಗ್ರಹವಿದೆ. ಇದು ಆರು ಅಡಿ ಎತ್ತರವಿದ್ದು, ಬಹಳ ಸೊಗಸಾಗಿದೆ. ನಂದಿಯ ಕೊರಳಿನಲ್ಲಿ ಕಲ್ಲಿನಿಂದ ಕೆತ್ತಿರುವ ಘಂಟೆ ಹಾರವಿದೆ. ಇದೇ ರೀತಿಯದಾದ ನಂದಿ ವಿಗ್ರಹವನ್ನು ನಾವು ತುರುವೇಕೆರೆಯ ಗಂಗಾಧರೇಶ್ವರ ದೇವಾಲಯದ ಮುಂಭಾಗದಲ್ಲಿ ಕಾಣಬಹುದಾಗಿದೆ. ಆಶ್ಚರ್ಯವೆಂದರೆ ಈ ಎರಡೂ ನಂದಿ ವಿಗ್ರಹಗಳೂ ಒಂದೇ ರೀತಿಯ ಕೆತ್ತನೆಯಿಂದ ಕೂಡಿವೆ.
ಈ ನಂದಿಯ ಮುಂಭಾಗದಲ್ಲಿರುವ ದೇವಾಲಯದ ಗರ್ಭಗೃಹದಲ್ಲಿ ಒಂದು ಸುಂದರವಾದ ಮತ್ತು ದೊಡ್ಡದಾದ ಲಿಂಗವಿದೆ. ದೇವಾಲಯದ ಒಳಗಡೆ ನವರಂಗದ್ವಾರದ ಮೇಲ್ಭಾಗದಲ್ಲಿ ಶ್ರೀ ಭುವನೇಶ್ವರಿಯ ಕಲಾಕೃತಿ ಇದೆ.

ಆರು ಅಡಿ ಚೌಕಾಕಾರದ ಕಲ್ಲಿನ ಮಧ್ಯಭಾಗದದಲ್ಲಿ ಪ್ರಳಯಕಾಲದ ಶಿವನ ತಾಂಡವ ನೃತ್ಯದ ಅಪರೂಪದ ದೃಶ್ಯವಿದೆ. ಇದನ್ನು ಅಷ್ಟದಿಕ್ಪಾಲಕರು ವಾಹನವೇರಿ ಅಂಗನೆಯರೊಡನೆ ವೀಕ್ಷಿಸುತ್ತಿದ್ದಾರೆ. ಈ ರುದ್ರನ ಸುತ್ತ ಸರಪಳಿಯಲ್ಲಿ ಜೋಲಾಡುತ್ತಿರುವ ನಾಲ್ಕು ಋಷಿಗಳಶಿಲ್ಪಗಳಿವೆ. ನಂದಿ ವಿಗ್ರಹದ ಒಂದು ಪಕ್ಕದಲ್ಲಿ ಉಮಾಮಹೇಶ್ವರಿ. ಇನ್ನೊಂದು ಪಕ್ಕದಲ್ಲಿ ವಿಷ್ಣು ಹಾಗೂ ನಂದಿ ವಿಗ್ರಹದ ಹಿಂಬಾಗದಲ್ಲಿ ವೀರಭದ್ರನ ವಿಗ್ರಹಗಳು ತಮ್ಮದೇ ಆದ ದೇವಾಲಯಗಳನ್ನು ಹೊಂದಿವೆ. ಈ ದೇವಾಲಯಗಳ ಪಕ್ಕದಲ್ಲಿ ಅನೇಕ ವೀರಗಲ್ಲುಗಳು ನಾಗರಕಲ್ಲುಗಳಿವೆ. ಇಂತಹ ದೇವಾಲಯ ನಶಿಸಿ ಹೋಗುತ್ತಿರುವುದನ್ನು ಮನಗಂಡ ಸರ್ಕಾರ, ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡಿರುವುದು ಮತ್ತು ದೇಗುಲವನ್ನು ಸುಸ್ಥಿತಿಯಲ್ಲಿಡಲು ನೌಕರರನ್ನು ನೇಮಿಸಿರುವುದು ಪ್ರಶಂಸನೀಯ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x