ಕೋಟಿಗೊಬ್ಬ!!: ಎಸ್.ಜಿ.ಶಿವಶಂಕರ್

ಪ್ರೇಕ್ಷಕರು ಉಸಿರು ಬಿಗಿಹಿಡಿದು ಕೂತಿದ್ದರು!!
ಟಿವಿ ಸ್ಟುಡಿಯೋದಿಂದ 'ಕೋಟಿ ಲೂಟಿ' ಕಾರ್ಯಕ್ರಮ ನೇರ ಪ್ರಸಾರವಾಗುತ್ತಿತ್ತು. ಸ್ಟುಡಿಯೋದ ಪ್ರೇಕ್ಷಕರ ಜೊತೆಗೆ ಮನೆಗಳಲ್ಲಿ ಟಿವಿ ನೋಡುತ್ತಿದ್ದವರೂ ಸಹ ಉಸಿರು ಬಿಗಿಹಿಡಿದು ಕೂತಿದ್ದರು!! ಆತ ಅದ್ವಿತೀಯನೆನಿಸಿದ್ದ! ಒಂದಿಷ್ಟೂ ತಿಣುಕದೆ ಸರಾಗವಾಗಿ, ಒಂದು ಕ್ಷಣವೂ ಯೋಚಿಸದೆ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದ! ಇದುವರೆಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾರಿಗೂ ಆ ರೀತಿಯಲ್ಲಿ ಉತ್ತರಿಸಲು ಸಾಧ್ಯವಾಗಿರಲಿಲ್ಲ! 

ಕಾರ್ಯಕ್ರಮವನ್ನು ಪ್ರಾರಂಭದಿಂದಲೂ ವೀಕ್ಷಿಸುತ್ತಿದ್ದವರಿಗೆ ಆಶ್ಚರ್ಯ! ಯಾರೀತ? ಇಲ್ಲಿಯವರೆಗೂ ಯಾರ ಗಮನಕ್ಕೂ ಬಾರದೆ ಎಲ್ಲಿ ಅಡಗಿದ್ದ? ಜ್ಞಾನಭಂಡಾರದ ಬಾಗಿಲನ್ನೇ ತೆರೆದಂತೆ ಅವನ ಮಾತು! ಖಚಿತ, ಸ್ಪಷ್ಟ, ಕಂಚಿನ ಕಂಠದ ಉತ್ತರಗಳು! ಅವನ ಹಾವ-ಭಾವ, ಕಣ್ಣುಗಳಲ್ಲಿದ್ದ ಆತ್ಮವಿಶ್ವಾಸ ಅಚ್ಚರಿ ಹುಟ್ಟಿಸುತ್ತಿತ್ತು! 

ಐವತ್ತು ಲಕ್ಷದ ರೂಪಾಯಿಯ ಬಹುಮಾನದ ಪ್ರಶ್ನೆಗೆ ಅವನ ಉತ್ತರಕ್ಕೆ ಕಾರ್ಯಕ್ರಮ ನಿರ್ವಾಹಕನಿಂದ ಹಿಡಿದು, ಕ್ಯಾಮೆರಾ ಹಿಡಿದವರೂ, ಲೈಟ್‍ಮನ್‍ಗಳೂ, ಪ್ರೇಕ್ಷಕರೂ ಸೇರಿದಂತೆ ಅಲ್ಲಿದ್ದವರೆಲ್ಲಾ ಪ್ರಚಂಡ ಕರತಾಡನ ಮಾಡಿದರು. ಸುಮಾರು ಐದು ನಿಮಿಷಗಳಾದರೂ ಕರತಾಡನ ಮುಗಿಯುವಂತೆ ಕಾಣುತ್ತಿರಲಿಲ್ಲ!!
ಆತ ಸುಮಾರು ನಲವತ್ತೈದು ಪ್ರಾಯದವ. ಸಾಧಾರಣ ಮೈಕಟ್ಟು, ತುಸು ನಸುಗಪ್ಪು ಮೈಬಣ್ಣ, ಟೀ ಷರ್ಟು, ಜೀನ್ಸ್‍ದಾರಿ. ಎಲ್ಲರ ಕಣ್ಣಿಗೆ ತ್ರಿವಿಕ್ರಮನಂತೆ ಗೋಚರಿಸುತ್ತಿದ್ದ! ಸೋಲಿಲ್ಲದ ಸರದಾರ ಎನಿಸಿಕ್ಕೊಳ್ಳವತ್ತ ಸಾಗುತ್ತಿದ್ದ!! 

ಈವರೆಗೆ ಈತ ಎಲ್ಲಿದ್ದ..? ಆ ಕಾರ್ಯಕ್ರಮ ಪ್ರಾರಂಭವಾಗಿ ಒಂದು ವರ್ಷವೇ ಕಳೆದಿತ್ತು! ಇಲ್ಲಿಯವರೆಗೂ ಯಾರೂ ಆ ಕಾರ್ಯಕ್ರಮದ ಪೂರಾ ಮೊತ್ತ ಕೋಟಿ ರೂಪಾಯಿಗಳನ್ನು ಗೆದ್ದಿರಲಿಲ್ಲ! ಈತ ಆ ಹಣವನ್ನು ಗೆಲ್ಲುವುದು ಖಚಿತ ಎನ್ನುವಂತಿತ್ತು!!

"ಸುದಾಮ, ಬಹುಮಾನದ ಹಣದಿಂದ ಏನು ಮಾಡಲು ಬಯಸುತ್ತೀರಿ..?" ಕರತಾಡನ ನಿಂತ ನಂತರ ಆಂಕರ್ ಕೇಳಿದ. ಆಂಕರ್ ಮಾಡುತ್ತಿದ್ದವನು ಪ್ರಖ್ಯಾತ ಸಿನಿಮಾ ನಟ.
"ನಾನು ಸುಳ್ಳು ಹೇಳುವುದಿಲ್ಲ, ದೊಡ್ಡದೊಡ್ಡ ಮಾತುಗಳಾಡುವುದಿಲ್ಲ. ಹಣದ ಅಡಚಣೆಯಿಂದ ಕನಿಷ್ಠ ಜೀವನ ಸಾಗಿಸುತ್ತಿದ್ದೇನೆ. ಅದಕ್ಕೆ ಮಂಗಳ ಹಾಡಿ ನೆಮ್ಮದಿಯ ಜೀವನ ಸಾಗಿಸಾಬೇಕೆಂದಿದ್ದೇನೆ"
"ನಿಮ್ಮ ಆಸೆ ನೆರವೇರುವುದರಲ್ಲಿ ಸಂದೇಹವೇ ಇಲ್ಲ! ಇಂತಾ ಅಸಾಧಾರಣ ಜ್ಞಾನ ಹೇಗೆ ಗಳಿಸಿದಿರಿ..?"
"ಒಬ್ಬ ಸ್ನೇಹಿತನ ಕೃಪೆಯಿಂದ"
"ಅವರ ಹೆಸರು..?"
"ಆತ ಅಜ್ಞಾತವಾಗಿರಲು ಬಯಸಿದ್ದಾನೆ"
"ಗುಡ್ ಲಕ್! ಈಗ ಪ್ರಶ್ನೆ ನಿಮಗೆ..! ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರೆ ನೀವು ಗಳಿಸುವ ಬಹುಮಾನ ಎಂಬತ್ತು ಲಕ್ಷ!!
ಪ್ರೇಕ್ಷಕರ ಜೀವ ಬಾಯಿಗೆ ಬಂದಂತೆ ಇತ್ತು!!

ಸುದಾಮನಿಗೆ ತನ್ನ ಎದೆ ಬಡಿತ ಇಡೀ ಸಭಾಂಗಣಕ್ಕೆ ಕೇಳಿಸುತ್ತಿದೆ ಎಂದು ಭಾಸವಾಯಿತು. ಎಂಬತ್ತು ಲಕ್ಷ!! ಒಂದು ಲಕ್ಷ ಕಾಣದ ತಾನೀಗ ಎಂಬತ್ತು ಲಕ್ಷದ ಒಡೆಯನಾಗಲಿರುವೆ!! ಎದೆ ನಗಾರಿಯಾಯಿತು!! ಹಣೆಯಲ್ಲಿ ಬೆವರ ಹನಿಗಳ ಚಿಲುಮೆ!! ಉಸಿರು ಬಿಗಿ ಹಿಡಿದು ಪ್ರಶ್ನೆಯನ್ನು ಆಲಿಸಿದ. 
ಉತ್ತರ ತನ್ನಷ್ಟಕ್ಕೆ ತಾನೇ ಬಾಯಿಂದ ಈಚೆ ಬಂತು! 

ಮತ್ತೆ ಕರತಾಡನ! ಆಂಕರ್ ಮಾಡುತ್ತಿದ್ದ ಸಿನಿಮಾ ನಟ ಎದ್ದು ನಿಂತು ಸುದಾಮನನ್ನು ಆಲಂಗಿಸಿದ.
"ಯೂ ಆರ್ ಎ ಜೀನಿಯಸ್! ನಿಮ್ಮಂತ ಮೇಧಾವಿಯನ್ನು ಈವರೆಗೆ ಕಂಡಿರಲಿಲ್ಲ! ನೀವೇಕೆ ಈವರೆಗೆ ಕಾರ್ಯಕ್ರಮಕ್ಕೆ ಬಂದಿರಲಿಲ್ಲ..? ವರ್ಷದ ಮುಂಚೆ ಬಂದಿದ್ದರೆ ಒಂದು ಕೋಟಿಯ ಒಡೆಯ ಈಗಾಗಲೇ ಆಗಿರುತ್ತಿದ್ದಿರಿ.

ಆ ಮಾತಿಗೆ ಸುದಾಮನ ನಗುವೊಂದೇ ಉತ್ತರವಾಗಿತ್ತು! ಅವನಿಗೆ ಗೊತ್ತಿತ್ತು! ತಾನೇಕೆ ಬಂದಿರಲಿಲ್ಲ ಎನ್ನುವುದು! ಹಾಗೆ ಬಂದಿದ್ದರೆ ತಾನು ನಗೆಪಾಟಲಾಗುತ್ತಿದ್ದ್ತೆ ಎನ್ನುವುದು ಅವನಿಗೆ…ಕೇವಲ ಅವನಿಗೆ ಮಾತ್ರ ಗೊತ್ತಿತ್ತು!
"ಇನ್ನೊಂದು ಪ್ರಶ್ನೆ….ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡಿದರೆ ನೀವು ಇತಿಹಾಸವನ್ನು ಸೃûಷ್ಟಿಸುತ್ತೀರಿ!!"
ಅದಕ್ಕೆ ಅವನ ನಗುವೊಂದೇ ಉತ್ತರವಾಗಿತ್ತು!!

"ಪ್ರಶ್ನೆ ಕೇಳಲು ನೀವು ರೆಡಿಯಾಗಿದ್ದೀರಾ..?"
"ರೆಡಿ" ಅವನ ಆ ಒಂದು ಮಾತಿಗೆ ಕಿವಿ ಗಡಚಿಕ್ಕುವಂತೆ ಜನರ ಚಪ್ಪಾಳೆ!
ಬಹುಶಃ ಯಾರೂ ಉತ್ತರಿಸಲಾಗದ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ಅತ್ಯಂತ ಕ್ಲಿಷ್ಠ ಪ್ರಶ್ನೆ ಅರ್ಜುನನ ಸರ್ಪಾಸ್ತ್ರದಂತೆ ಬಂದಿತು! ಬಹುಶಃ ಇನ್ನು ಇಪ್ಪತ್ತು ಲಕ್ಷವನ್ನು ಉಳಿಸಿಕ್ಕೊಳ್ಳುವ ಉಪಾಯ ಕಾರ್ಯಕ್ರಮದ ಅಯೋಜಕರದ್ದಾಗಿರುವಂತಿತ್ತು!
ಸ್ಫರ್ಧಿ ವಿಚಲಿತನಾದಂತೆ ತೋರಿತು!!
ಪ್ರೇಕ್ಷಕರು ಆತಂಕದಿಂದ ಸುದಾಮನತ್ತ ನೋಡುತ್ತಿದ್ದರು!! ಆತ ಗೆಲ್ಲುವನೋ..? ಇಲ್ಲ ಇಲ್ಲಿಯವರೆಗೂ ಗೆದ್ದು ಈಗ ಸೋಲುವನೋ..?

***

"ಪುಷ್ಕರ್, ಇಲ್ಲಿ ನೋಡಿ, ಎರಡು ತಿಂಗಳ ಹಿಂದೆ ನಿನ್ನನ್ನು ನೋಡಲು ಬಂದಿದ್ದ ನಿಮ್ಮ ಸ್ನೇಹಿತ ಸುದಾಮ ಇನ್ನೊಂದೇ ಪ್ರಶ್ನೆಗೆ ಉತ್ತರ ನೀಡಿದರೆ ಕೋಟಿ ಗೆಲ್ಲುತ್ತಾನೆ"
ಪುಷ್ಕರನ ಪತ್ನಿ ಸುಧಾ ಉತ್ಸಾಹದಿಂದ ನುಡಿದಳು.
"ಏನು..? ಸುದಾಮನೇ..?"
ಲ್ಯಾಪ್ಟಾಪಿನಲ್ಲಿ ತಲೆ ಹುದುಗಿಸಿದ್ದ ಪುಷ್ಕರ್ ಕೇಳಿದ.
"ಹೌದು ಸುದಾಮ. ಇದುವರೆಗಿನ ಎಲ್ಲಾ ಪ್ರಶ್ನೆಗೂ ಅಚ್ಚರಿಯಾಗುವಂತೆ ಉತ್ತಸಿದ್ದಾರೆ. ಆದರೆ ಈ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಲ್ಲ! ಬರಿಯ ಎಂಬತ್ತು ಲಕ್ಷಕ್ಕೆ ಸಮಾದಾನ ಪಟ್ಟುಕ್ಕೊಳ್ಳಬೇಕಾಗುತ್ತದೆ"
"ಯಾಕೆ ಅಷ್ಟೊಂದು ಕ್ಲಿಷ್ಟವೇ ಆ ಪ್ರಶ್ನೆ..?"

"ಹೌದು. ಅದಕ್ಕೆ ಉತ್ತರ ಗೊತ್ತಿರುವವರು ಬೆರಳೆಣಿಕೆಯಷ್ಟು ಮಾತ್ರ. ಅದು ಇದೀಗ ಜರ್ಮನಿಯ ವಿಶ್ವವಿದ್ಯಾಲಯವೊಂದರಲ್ಲಿ ಸಂಶೋಧಿಸಿರುವ ವಿಷಯದ ಬಗೆಗೆ"
"ರಿಯಲೀ..?"
"ರಿಯಲೀ..ಪಾಪ ಇಲ್ಲಿಯವರೆಗೂ ಸರಿಯಾದ ಉತ್ತರವನ್ನೇ ಹೇಳಿ ಈಗ…?"
"ಉತ್ತರಿಸಿದರೆ ಹೇಳು ನೋಡೋಣ"
"ನನಗೊಂದು ಸಂದೇಹ"
ಸುಧಾ ಅನುಮಾನದಿಂದ ಮಾತು ಎಳೆದಳು.

"ಏನು..?"
"ನೀವು ನಿಮ್ಮ ಸ್ನೇಹಿತ ಸುದಾಮ ತೀರಾ ಸಾದಾರಣ ಬುದ್ದಿಯವ ಎಂದು ಹೇಳಿದ್ದಿರಿ"
"ಹೌದು"
"ಮತ್ತೆ..ಈಗಿನ ಈ ಅಸಾಧಾರಣ ಬುದ್ಧಿಶಕ್ತಿ ಹೇಗೆ ಬಂತು..?"
"ಅತೀಂದ್ರಿಯ ಜ್ಞಾನ ಪ್ರಾಪ್ತಿಯಾಗಿದೆಯೇ..?" ಪುಷ್ಕರ್ ನಕ್ಕ. ಸುಧಾ ಕೂಡ ನಕ್ಕಳು!
"ಈ ಕಾರ್ಯಕ್ರಮದಲ್ಲಿ ಗೆಲ್ಲಲು ಬೇಕಾಗಿರೋದು ಬುದ್ದಿ ಶಕ್ತಿಯಲ್ಲ ಬದಲಿಗೆ ನೆನಪಿನ ಶಕ್ತಿ"
"ಬರೀ ನೆನಪೆÇಂದರಿಂದಲೇ ಸಾಧ್ಯವಿಲ್ಲ. ಜೊತೆಗೆ ಒಂದಿಷ್ಟು ಜಾಣತನ ಕೂಡ ಬೇಕು.."
"ಅದು ಸುದಾಮನಿಗೆ ಇಲ್ಲ ಎನ್ನುತ್ತೀಯಾ..?"
"ಅದು ನೀವು ಹೇಳಬೇಕು. ನಿಮ್ಮ ಸ್ನೇಹಿತ ಅವನು"
"ಅವನು ಕೋಟಿ ಗೆಲ್ಲುತ್ತಾನೆ"
"ಏನು..? ಸುದಾಮನಂತೆ ನಿಮಗೆ ಕೂಡ ಅತೀಂದ್ರಿಯ ಜ್ಞಾನ ಪ್ರಾಪ್ತಿಯಾಯಿತೆ?"
ಸುಧಾ ಮಾತಿಗೆ ಪುಷ್ಕರ ನಕ್ಕ.

***

ಸುದಾಮನ ಮೇಲೆ ಇಡೀ ದೇಶದ ಟಿವಿ ವೀಕ್ಷಕರ ಕಣ್ಣು ಕೇಂದ್ರೀಕೃತವಾಗಿದ್ದವು! ಟಿವಿ ಸ್ಟುಡಿಯೋದಲ್ಲಿ ನೆರೆದಿದ್ದವರು ಅಚ್ಚರಿ, ಅನುಮಾನಗಳಿಂದ ಬಾಯಿ ತೆರೆದು ಕೂತಿದ್ದರು.
ಅತ್ಯಂತ ಕ್ಲಿಷ್ಟವಾದ ಪ್ರಶ್ನೆ! ಕೆಲವೇ ತಿಂಗಳುಗಳ ಹಿಂದೆ ಜರ್ಮನಿಯ ವಿಶ್ವವಿದ್ಯಾಲಯವೊಂದರಲ್ಲಿ ಸಂಶೋಧಿಸಿದ್ದ ವಿಷಯದ ಬಗೆಗೆ! 
ಟಿವಿ ಕಾರ್ಯಕ್ರಮ ನಿರ್ವಾಹಕ ಅನುಮಾನದಿಂದ ಸುದಾಮನನ್ನು ನೋಡುತ್ತಿದ್ದ. 
"ನಿಮ್ಮ ಮೂರು ಸಹಾಯಗಳು ಉಳಿದಿವೆ. ಬೇಕಾದರೆ ನೀವು ನನ್ನನ್ನು ಇದಕ್ಕೆ ಕ್ಲೂ ಕೇಳಬಹುದು. ಇಲ್ಲವೇ ನಿಮ್ಮ ಸ್ನೇಹಿತರಿಗೆ ಫೆÇೀನಾಯಿಸಬಹುದು. ಮೂರನೆಯ ಸಹಾಯವಾಗಿ ಪ್ರೇಕ್ಷಕರನ್ನು ಕೇಳಬಹುದು. ಇನ್ನು ಎರಡು ನಿಮಿಷಗಳ ಸಮಯ ನಿಮಗಿದೆ..ಯೋಚಿಸಿ..ಇದುವರೆಗೂ ನೀವು ಯಶಸ್ವಿಯಾಗಿದ್ದೀರಿ. ಇದರಲ್ಲಿ ಕೂಡ ಯಶಸ್ವಿಯಾಗುತ್ತೀರ ಎಂಬ ನಂಬಿಕೆ ನನಗಿದೆ"
"ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು. ಈ ಪ್ರಶ್ನೆಗೆ ಉತ್ತರಿಸಲು ನನಗೆ ಸಹಾಯದ ಅವಶ್ಯಕತೆ ಇಲ್ಲ ಎನಿಸುತ್ತಿದೆ"
"ಗುಡ್! ನಿಮ್ಮ ಆತ್ಮ ವಿಶ್ವಾಸಕ್ಕೆ ನನ್ನ ಹ್ಯಾಟ್ಸ್ ಆಫ್"

    ***

"ರೀ..ಇದು ನಮ್ಮ ಸುದಾಮನೇ.."
ಆಗ ತಾನೆ ಪ್ರವೇಶಿಸುತ್ತಿದ್ದ ಹರೀಶ, ಪತ್ನಿಯ ಮಾತಿಗೆ ಅಚ್ಚರಿಗೊಂಡ.  
"ಎಲ್ಲಿ ಸುದಾಮ..?"
"ಇಲ್ಲಿ ನೋಡಿ ನಮ್ಮ ಸುದಾಮ….ಕೋಟಿ ಲೂಟಿ ಕಾರ್ಯಕ್ರಮದಲ್ಲಿ ಒಂದು ಕೋಟಿ ರೂಪಾಯಿ ಗೆಲ್ತಿದ್ದಾನೆ..?"
"ಏನೇ ನೀನು ಹೇಳೋದು..? ಇದು ಜಗತ್ತಿನ ಅದ್ಭುತ ವಿಷಯಗಳಲ್ಲೊಂದು…! ನಮ್ಮ ಸುದಾಮನೇ..? ನನ್ನ ಶತದಡ್ಡ ತಮ್ಮ ಸುದಾಮನೇ..?" ತನ್ನ ಕಿವಿಯನ್ನೇ ನಂಬದೆ ಕೇಳಿದ.
"ಹೂ ರೀ..ನಾನ್ಯಾಕೆ ಸುಳ್ಳು ಹೇಳಲಿ..?"
ಹರೀಶ ಕಾಲಿನಲ್ಲಿದ್ದ ಷೂಗಳನ್ನೂ ಕಳಚದೆ ಟಿವಿಯತ್ತ ಧಾವಿಸಿದ. ತಮ್ಮನನ್ನು ಟಿವಿಯಲ್ಲಿ ನೋಡಿದ ಅಚ್ಚರಿಯಿಂದ.
"ಹೌದು ಇದು ಸುದಾಮನೇ..ಏನಾಶ್ಚರ್ಯ..?!"
"ಮೂರು ತಿಂಗಳ ಹಿಂದೆ ಬಂದಿದ್ದ ಅಲ್ವೇ..?"
"ನೀನೇ ಬಾಯಿಗೆ ಬಂದಂತೆ ಬೈದು ಕಳಿಸಿದೆ…" ಅಣ್ಣ ಅಕ್ಷೇಪಿಸಿದ.
"ಅವನು ಒಂದು ಕೋಟಿ ಗೆಲ್ಲುತ್ತಾನೆ ಅಂತ ನನಗೆ ಕನಸು ಬಿದ್ದಿರಲಿಲ್ಲ. ಎಲ್ಲಿವರೆಗೆ ನಾವು ಹಣ ಕೊಡೋಕೆ ಸಾಧ್ಯವಿತ್ತು..? ಪ್ರತೀ ತಿಂಗಳೂ ಅವನ ಗೋಳಾಟ ಇದ್ದೇ ಇತ್ತು"
"ನಾವು ತಪ್ಪು ಮಾಡಿದೋ.." ಅಣ್ಣ ಗೊಣಗಿದ.
"ನೀವು ಮಾಡಿರಬಹುದು. ನಾನು ಮಾಡಿಲ್ಲ.." ಆಕೆಯ ಮಾತಿನಲ್ಲಿದ್ದ ಮೊಂಡುತನಕ್ಕೆ ಬೇಸರಗೊಂಡ.

***

"ಹಲೋ..?"
"ಯಾರು..?"
"ಸಾರ್ ನಾನು ದೀಪಕ್"
"ಏನ್ರೀ ದೀಪಕ್"
"ಸಾರ್ ನಮ್ಮ ಸುದಾಮ ಕೋಟಿ ಲೂಟಿ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ"
"ನಮ್ಮ ಆಫೀಸ್ ಕ್ಲರ್ಕ್ ಸುದಾಮಾನೇ..?"
"ಹೌದು ಸರ್, ನಮ್ಮ ಸುದಾಮಾನೇ..? ತಕ್ಷಣ ನೋಡಿ ಸಾರ್ ಆಗಲೇ ಐವತ್ತು ಲಕ್ಷ ಗೆದ್ದಿದಾನೆ"
"ಈಸ್ ಇಟ್..? ಐ ಕೆನಾಟ್ ಬಿಲೀವ್…ಆ ಕಾರ್ಯಕ್ರಮದಲ್ಲಿ ಭಾಗವಹಿಸೋ ಎಲಿಜಿಬಿಲಿಟಿ ಕೂಡ ಅವನಿಗೆ ಸಿಗಲಾರದು ಅಂತಾದ್ರಲ್ಲಿ..? ರೀ ನೀವು ಬೇರೆ ಇನ್ಯಾರನ್ನೋ ನೋಡಿ ಕನ್‍ಫ್ಯೂಸ್ ಮಾಡ್ಕೊಂಡಿದ್ದೀರ"
"ಇಲ್ಲಾ ಸರ್, ನೂರಕ್ಕೆ ನೂರು ಭಾಗ ನಮ್ಮ ಸುದಾಮನೇ…ಆಹಾ ಏನು ಪರ್ಫಾರಮೆನ್ಸು ಸಾರ್..! ತಿಪ್ಪೆಯಲ್ಲಿ ಸಿಕ್ಕ ರತ್ನದ ಹಾಗೆ ಹೊಳೀತಾ ಇದ್ದಾನೆ"
"ನಿಮ್ಮ ಮಾತಲ್ಲಿ ನಂಬಿಕೆ ಬರ್ತಿಲ್ಲ..ನೋಡ್ತೀನಿ.."
"ಇಂಟರೆಸ್ಟಿಂಗ್ ಸ್ಟೇಜಲಿದೆ ಸಾರ್ ಗೇಮು..ಬೈ ಸಾರ್, ಆಮೇಲೆ ಫೆÇೀನ್ ಮಾಡ್ತೀನಿ"

***

"ಸುದಾಮ ಈ ಪ್ರಶ್ನೆಗೆ ಉತ್ತರ ಹೇಳೋಕೆ ಮುಂಚೆ ಒಂದು ಸಣ್ಣ ಮಾಹಿತಿ ಕೊಡಿ"
"ಕೇಳಿ ಸರ್"
"ಈ ಕಾರ್ಯಕ್ರಮಕ್ಕೆ ಬರೋದಕ್ಕೆ ನಿಮಗೆ ಸಿಕ್ಕ ಪ್ರೇರಣೆ?"
"ಹಣದ ಅವಶ್ಯಕತೆ"
"ಪ್ರಾಮಾಣಿಕವಾದ ಉತ್ತರ. ಮನೆಯಲ್ಲಿ ಯಾರ್ಯಾರಿದ್ದೀರಿ"
"ನನ್ನ ಸಂಸಾರ ದೊಡ್ಡದು ಸಾರ್, ಅದ್ರೆ ನನ್ನ ಆದಾಯ ಬಹಳ ಕಡಿಮೆ. ಮನೆಯಲ್ಲಿ ನನ್ನ ಜೊತೆ ತಂದೆ-ತಾಯಿ ಇದ್ದಾರೆ, ಇಬ್ಬರು ತಂಗಿಯರು, ಹೆಂಡತಿ, ಇಬ್ಬರು ಮಕ್ಕಳು ಮತ್ತು ನನ್ನ ಅವಿವಾಹಿತ ಸೋದರತ್ತೆ"
"ನಿಮ್ಮ ಹೃದಯ ದೊಡ್ಡದು. ಕೂಡು ಕುಟುಂಬಗಳೇ ಇಲ್ಲದಿರುವ ಈ ದಿನಗಳಲ್ಲಿ ಇಷ್ಟೊಂದು ಜನರ ತುಂಬಿದ ಸಂಸಾರದ ನೊಗ ಹೊತ್ತಿರುವ ನಿಮಗೆ ಇಲ್ಲಿ ನೆರೆದಿರುವ ಎಲ್ಲರ ಪರವಾಗಿ ಧನ್ಯವಾದಗಳು" 
"ಇದಕ್ಕೆ ಧನ್ಯವಾದಗಳೇಕೆ? ಇದು ಕರ್ತವ್ಯ ಅಲ್ಲವೆ..?"
"ಹಾಗೆಂತ ಎಷ್ಟು ಜನ ತಿಳಿದುಕೊಂಡಿದ್ದಾರೆ ಹೇಳಿ…ಕೂಡು ಕುಟುಂಬ ಎಂದರೆ ಅಸಹ್ಯಪಡುವವರೇ ಹೆಚ್ಚು! ತಂದೆ-ತಾಯಿಗಳಿಗೆ ವೃದ್ಧಾಶ್ರಮದ ದಾರಿ ತೋರುವ ಮಕ್ಕಳೇ ಹೆಚ್ಚಿದ್ದಾರೆ ಈಗ"
"ನಿಮ್ಮ ಒಡಹುಟ್ಟಿದವರು"
"ಇಬ್ಬರು ಅಣ್ಣಂದಿರು ಮತ್ತು ಇಬ್ಬರು ತಂಗಿಯರು"
"ಅಣ್ಣಂದಿರು..?"
"ಚೆನ್ನಾಗಿದ್ದಾರೆ. ಅವರ ಬಗೆಗೆ ದಯಮಾಡಿ ಪ್ರಶ್ನೆ ಕೇಳಬೇಡಿ. ನನಗೆ ಅವರ ಬಗೆಗೆ ಗೌರವವಿದೆ"
"ಅದ್ಭುತ ಸುದಾಮ! ನೀವೊಬ್ಬರು ಸಂತರಂತೆ ನನ್ನ ಕಣ್ಣಿಗೆ ಕಾಣುತ್ತಿದ್ದೀರಿ"
 ಕಾರ್ಯಕ್ರಮ ನಿರ್ವಹಿಸುತ್ತಿದ್ದ ಭಾರತೀಯ ಚಿತ್ರರಂಗದ ಮೇರು ನಟ ಎದ್ದು ಸುದಾಮನಿಗೆ ನಮಸ್ಕರಿಸಿದ. ಅವನನ್ನು ಇಡೀ ಪ್ರೇಕ್ಷಕ ವೃಂದವೇ ಅನುಕರಿಸಿತು.
ಪ್ರಶಂಸೆಯ ಮಹಾಪೂರಕ್ಕೆ ಸುದಾಮ ತತ್ತರಿಸಿದ. ಜೀವನದಲ್ಲಿ ಎಂದೂ ಅಂತಹ ಉತ್ಕಟ ಸನ್ನಿವೇಶ ಬಂದಿರಲಿಲ್ಲ! ಭಾವನೆಗಳ ಭಾರಕ್ಕೆ  ಕುಸಿದ! 
 "ಇದೊಂದು ಇತಿಹಾಸವಾಗಲಿದೆ ಸುದಾಮ! ಈವರೆಗೆ ಒಂದು ಕೋಟಿಯನ್ನು ಗೆದ್ದವರು ಯಾರೂ ಇಲ್ಲ. ಮೊಟ್ಟ ಮೊದಲ ವ್ಯಕ್ತಿ ನೀವಾಗಲಿದ್ದೀರಿ..ಅದೂ ನೀವು ಕೊನೆಯ ಪ್ರಶ್ನೆಗೂ ಸರಿಯಾದ ಉತ್ತರ ನೀಡಿದಲ್ಲಿ. ಆ ಉತ್ತರ ನೀಡುವ ಸಾಮರ್ಥ್ಯ  ನಿಮಗಿದೆ! ಆ ನಂಬಿಕೆ ನನಗಿದೆ. ಬಹುಶಃ ಇಲ್ಲಿ ನೆರೆದಿರುವ ಎಲ್ಲರಲ್ಲೂ ಆ ಭರವಸೆಯಿದೆ..ಅಲ್ಲವೆ..?"
ಆ ಮಾತಿಗೆ ಇಡೀ ಪ್ರೇಕ್ಷಕ ವೃಂದವೇ ಎದ್ದು ನಿಂತು "ಹೌದು, ಹೌದು.." ಎಂದು ಉತ್ತರಿಸಿತು.

***

"ಪುಷ್ಕರ್ ನಿಮ್ಮ ಸ್ನೇಹಿತ ಕೊನೆಯ ಪ್ರಶ್ನೆಗೆ ಉತ್ತರ ನೀಡಿಬಿಟ್ಟ! ಎಂತಾ ಆಶ್ಚರ್ಯ! ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿದ್ದ ಉತ್ತರ ಇವರಿಗೆ ಹೇಗೆ ತಿಳಿಯಿತು…? ಆತ ನಿಜವಾಗಿಯೂ ಮೇಧಾವಿ! ಅದಕ್ಕೇ ಅವನಿಗೆ ಕೋಟಿಯ ಕಿರೀಟ"
ಸುಧಾಳ ಮಾತಿಗೆ ಪುಷ್ಕರ ನಸು ನಕ್ಕ.
"ಪುಷ್ಕರ್, ಸ್ನೇಹಿತನ ಈ ಯಶಸ್ಸಿಗೆ ನಿಮಗೆ ಖುಷಿಯಾಗುತ್ತಿಲ್ಲವೆ..? ಅಚ್ಚರಿ ಎನಿಸುತ್ತಿಲ್ಲವೇ..?"
ಸುಧಾಳ ಮಾತಿನಲ್ಲಿ ಅಸಹನೆಯಿತ್ತು.
"ಏಕಿಲ್ಲ! ಆತನ ಈ ವಿಜಯಕ್ಕೆ ನನಗೆ ಖಂಡಿತಾ ಖುಷಿಯಾಗಿದೆ ಹೆಮ್ಮೆ ಕೂಡ!"
ಪುಷ್ಕರ ಟಿವಿಯ ಮುಂದೆ ಬಂದು ಕೂತು ಪತ್ನಿ ಜೊತೆಯಲ್ಲಿ ಕೂತು ಕೋಟಿ ಹಣವನ್ನು ಗೆದ್ದುಕೊಂಡ ಸುದಾಮನನ್ನು ನೋಡಿದ. ತೃಪ್ತಿಯ ನಗೆ ಅವನ ಮುಖದಲ್ಲಿ ಸುಳಿಯಿತು.

    ***

 ಇತಿಹಾಸದ ಪುಟಗಳಲ್ಲಿ ಸುದಾಮ ತನ್ನ ವಿಜಯವನ್ನು ಬರೆದಿದ್ದ! ಇಡೀ ಟಿವಿ ಸ್ಟುಡಿಯೋದಲ್ಲಿ ಸಂಭ್ರಮ!! 
 ಒಂದು ದಿನದ ಹಿಂದೆ ಭಾರತ ನೂರಿಪ್ಪತ್ತು ಕೋಟಿ ಚಿಲ್ಲರೆ ಜನಸಂಖ್ಯೆಯಲ್ಲಿ ಒಬ್ಬನಾಗಿದ್ದು, ಯಾರ ಅರಿವಿಗೂ ಬಾರದೆ, ಅನಾಮಧೇಯನಾಗಿದ್ದ  ಸುದಾಮ ಇಂದು ಇಡೀ ಭಾರತಕ್ಕೆ ಗೊತ್ತಾಗಿದ್ದ! ಎಲ್ಲರ ಮೆಚ್ಚುಗೆ, ಅಚ್ಚರಿಗೆ ಪಾತ್ರನಾಗಿದ್ದ. ಒಂದೇ ಒಂದು ದಿನದ ಹಿಂದೆ ಏನೂ ಅಗಿಲ್ಲದವನು ಇಂದು ಎಲ್ಲವೂ ಆಗಿದ್ದ. ಬಡತನದ ಬೇಗೆಯಲ್ಲಿ ಉರಿಯುತ್ತಿದ್ದವನಿಗೆ ಕೋಟಿ ರೂಪಾಯಿಯ ವರ್ಷಧಾರೆ! ಹಣದ ಸಾಗರದಲ್ಲಿ ಮುಳುಗಿದ್ದ!
"ಸುದಾಮ, ಈ ವಿಜಯವನ್ನು ಹೇಗೆ ಸೆಲಿಬರೇಟ್ ಮಾಡುತ್ತೀರಿ?"
ನಿರ್ವಾಹಕ ಕೇಳಿದ.
"ನನ್ನ ಈ ಯಶಸ್ಸಿಗೆ ಕಾರಣ ಪುರುಷನನ್ನು ಭೇಟಿ ಮಾಡಿ ಅವನಿಗೆ ಕೃತಜ್ಞತೆ ಅರ್ಪಿಸುವ ಮೂಲಕ"
"ಗ್ರೇಟ್..ವಿಷ್ ಯೂ ಆಲ್ ದಿ ಸಕ್ಸಸ್ ಇನ್ ಲೈಫ್. ಈ ಕ್ಷಣದಿಂದ ನೀವೊಬ್ಬರು ಪ್ರಸಿದ್ಧ ವ್ಯಕ್ತಿಯಾಗಿದ್ದೀರಿ. ಜಾಹೀರಾತು ಮಾಧ್ಯಮದಲ್ಲಿ ವಿಪುಲ ಅವಕಾಶ ನಿಮಗೆ ದೊರೆಯುತ್ತದೆ"

***

"ಏನಿದು.." ಪುಷ್ಕರ ಕೇಳಿದ.
"ಋಣ ಸಂದಾಯ. ನಿನ್ನ ಸಹಾಯದಿಂದ ಗೆದ್ದ ಹಣದ ಚೆಕ್ ಮತ್ತು ಒಂದಿಷ್ಟು ಹಣ್ಣು, ಸಿಹಿ. ಜೊತೆಗೆ ನನ್ನ ಬಡತನ ನಿರ್ಮೂಲ ಮಾಡಿದ ನಿನ್ನ ಆವಿಷ್ಕಾರ "
ಸುದಾಮ ತಾನು ತಂದಿದ್ದ ದೊಡ್ಡ ಬ್ಯಾಗನ್ನು ಕೆಳಗಿಟ್ಟ. ನಂತರ ಅದರಲ್ಲಿದ್ದ ಒಂದೊಂದೇ ವಸ್ತುಗಳನ್ನು ತೆಗೆದು ಪುಷ್ಕರನ ಮುಂದಿದ್ದ ಟೀಪಾಯಿಯ ಮೇಲಿಟ್ಟ. ದೊಡ್ಡದೊಂದು ಹಾರ, ಸಿಹಿ ತಿನಿಸಿನ ಪ್ಯಾಕೆಟ್, ಒಂದು ಲ್ಯಾಪ್‍ಟಾಪ್ ಮತ್ತು ಸೆನ್ಸಾರುಗಳನ್ನೊಳಗೊಂಡ ಶಿರಸ್ತ್ರಾಣದಂತ ಸಾಧನ. ಅದು ಹೆಚ್ಚು ಕಡಿಮೆ ಸ್ಕೂಟರ್, ಮೋಟಾರ್ ಬೈಕ್ ಓಡಿಸುವವರು ಧರಿಸುವ ಹೆಲ್ಮೆಟ್ಟಿನ ಆಕಾರದಲ್ಲಿತ್ತು. ಆ ಎರಡು ವಸ್ತುಗಳೇ ಸುದಾಮನಿಗೆ ಮಹತ್ತರವಾಗಿದ್ದವು. ಅವು ಪುಷ್ಕರ ತನ್ನ ಸ್ನೇಹಿತನಿಗಾಗಿ ವಿಶೇಷವಾಗಿ ಆವಿಷ್ಕಾರ ಮಾಡಿದ್ದವು. ಶಿರಸ್ತ್ರಾಣದಲ್ಲಿ ಅಳವಡಿಸಿರುವೆ ಸೆನ್ಸಾರುಗಳ ಮೂಲಕ ನೇರವಾಗಿ ಸುದಾಮನ ಮಿದುಳಿನ ವಿವಿಧ ಭಾಗಗಳಿಗೆ ಜ್ಞಾನವನ್ನು ಅತಿ ಶೀಘ್ರವಾಗಿ, ಸಾಂಪ್ರದಾಯಿಕ ಕಲಿಕೆಯಿಲ್ಲದೆಯೇ ವರ್ಗಾವಣೆ ಮಾಡಿದ್ದ ಪುಷ್ಕರ್. ಅವುಗಳ ಸಹಾಯದಿಂದಲೇ ಅತಿ ಸಾಮಾನ್ಯನಾದ ಸುದಾಮ ಅತ್ಯಂತ ಮೇಧಾವಿಯಾಗಿ ದೇಶವನ್ನೇ ಅಚ್ಚರಿಗೊಳಿಸಿದ್ದ.
ತನಗೆ ಹಾರ ಹಾಕಲು ಬಂದ ಸುದಾಮನನ್ನು ತಡೆದ ಪುಷ್ಕರ.
"ನಾನೇನು ಮಠದ ಸ್ವಾಮಿ ಎಂದುಕೊಂಡಿದ್ದೀಯ..ಹೀಗೆ ಮಾಡಲು" ಹುಸಿ ಕೋಪದಿಂದ ಗದರಿದ.
"ಪುಷ್ಕರ್, ಇದು ನಮ್ಮಿಬ್ಬರಿಗೆ ಮಾತ್ರ ಗೊತ್ತಿರುವ ಸಂಗತಿ. ಈ ನಿನ್ನ ವೈಜ್ಞಾನಿಕ ಆವಿಷ್ಕಾರದಿಂದ ದರಿದ್ರನಾಗಿದ್ದವನು ಕೋಟ್ಯಾಧಿಪತಿಯಾಗಿದ್ದೇನೆ. ಈ ಋಣ ಭಾರ ನನಗೆ ಬೇಡ. ಅದನ್ನು ತೀರಿಸುವ ಸಲುವಾಗಿ ಬಂದಿದ್ದೇನೆ"

"ಸುದಾಮ, ನಾವಿಬ್ಬರೂ ಬಾಲ್ಯದ ಗೆಳೆಯರು. ನನ್ನ ಈ ಹೊಸ ಸಂಶೋಧನೆಯಿಂದ ನೇರವಾಗಿ  ನಿನ್ನ ಮಿದುಳಿಗೆ ಅಗಾಧವಾದ ಮಾಹಿತಿ ತುಂಬಿದ್ದೇನೆ. ಜೊತೆಗೆ ತಾರ್ಕಿಕವಾಗಿ ಯೋಚಿಸುವ ಶಕ್ತಿಯನ್ನು ಹತ್ತು ಪಟ್ಟು ಹೆಚ್ಚಿಸಿದ್ದೇನೆ. ನಿನ್ನ ಬಲಭಾಗದ ಮಿದುಳನ್ನು ಉತ್ತೇಜಿಸಿ ಅದು ಕಾರ್ಯಶೀಲವಾಗುವಂತೆ ಮಾಡಿದ್ದೇನೆ. ನಾನು ಮಾಡಿದ್ದು ಕರ್ತವ್ಯ! ಕಷ್ಟದಲ್ಲಿದ್ದ ಒಬ್ಬ ಸ್ನೇಹಿತನಿಗೆ ಅಗತ್ಯವಾಗಿ ಮಾಡಬೇಕಾದುದನ್ನೆಲ್ಲಾ ಮಾಡಿದ್ದೇನೆ. ನಿನ್ನ ಹೃದಯವಂತಿಕೆ ದೊಡ್ಡದು. ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಕೂಡ ತಂದೆ-ತಾಯಿ, ತಂಗಿಯರು, ಸೋದರತ್ತೆ ಎಲ್ಲರನ್ನೂ ಪ್ರೀತಿಯಿಂದ ಸಾಕುತ್ತಿರುವ ನಿನ್ನ ಈ ಗುಣದ ಮುಂದೆ ನನ್ನ ಸಹಾಯ ಅಲ್ಪ"
ಪುಷ್ಕರ ಸುದಾಮನ ಬೆನ್ನಿನ ಮೇಲೆ ಕೈಯಿಟ್ಟು ವಿಶ್ವಾಸದಿಂದ ಹೇಳಿದ.
"ಅದೆಲ್ಲಾ ಸರಿ, ಆದರೆ ನಿನ್ನ ಸಹಾಯವನ್ನು ನಾನು ಹೇಗೆ ಹಿಂದಿರುಗಿಸಲಿ..?"
ಸುದಾಮ ಕಳಕಳಿಯಿಂದ ಕೇಳಿದ. ಕೃತಜ್ಞತೆಯಿಂದ ಅವನ ಕಣ್ಣುಗಳು ತುಂಬಿದ್ದವು.
"ಬಹುಮಾನದ ಚೆಕ್ ಕೊಡು" ಎಂದ ಪುಷ್ಕರ.
ಅವನ ಮಾತಿಗೆ ಶಾಕ್ ಆದರೂ ಮರುಮಾತಿಲ್ಲದೆ ಚೆಕ್ಕನ್ನು ಪುಷ್ಕರನ ಕೈಗಿತ್ತು ಗೆಳೆಯನನ್ನು ನೋಡಿದ ಸುದಾಮ.
ಹಣದ ಬಗೆಗೆ ಇವನಿಗೂ ವ್ಯಾಮೋಹ ಬಂತೆ..? ಆಗರ್ಭ ಶ್ರೀಮಂತ, ವಿಜ್ಞಾನಿ, ಇಡೀ ವಿಶ್ವವನ್ನೇ ಅಚ್ಚರಿಗೊಳಿಸುವ ಸಂಶೋಧನೆ ಮತ್ತು ಆವಿಷ್ಕಾರದಿಂದ ವಿಪುಲ ಹಣ ಸಂಪಾದಿಸಿರುವ ಇವನಿಗೂ ಆಸೆಯೇ…? ಇದರಲ್ಲಿ ಪಾಲು ಕೇಳುತ್ತಾನಾ..? ಸುದಾಮ ಅನುಮಾನದಿಂದ ಸ್ನೇಹಿತನನ್ನು ನೋಡಿದ.
"ಈ ಹಣ ಪೂರಾ ನಿನ್ನದಲ್ಲ..!"
"ಅಂದರೆ..?" ಸಂಶಯದಿಂದ ಉಸುರಿದ.

"ಇದರಲ್ಲಿ ಅರ್ಧ ಭಾಗ ಮಾತ್ರ ನಿನ್ನದು…ಅಷ್ಟು ಸಾಕಲ್ಲವೆ..ನಿನ್ನ ಸ್ಥಿತಿ ಉತ್ತಮವಾಗಲು..?" ಪುಷ್ಕರ ನಿಧಾನವಾಗಿ ಹೇಳಿದ.
"ಬೇಕಾದಷ್ಟಾಯಿತು. ಲಕ್ಷಕ್ಕೂ ಗತಿಯಿಲ್ಲದವನಿಗೆ ಅದು ದೊಡ್ಡ ಮೊತ್ತ" ಸುದಾಮ ಉಸುರಿದ. 'ಉಳಿದ ಹಣ ಏನಾಗುತ್ತದೆ..? ಯಾರ ಪಾಲಾಗುತ್ತದೆ?' ಎನ್ನುವ ಮಾತುಗಳು ಸುದಾಮನ ಗಂಟಲಲ್ಲೇ ಉಳಿದವು!!
"ಆಶ್ಚರ್ಯವಾಗ್ತಿದೆಯಾ..? ಇನ್ನರ್ಧ ಹಣ ನಾನು ಉಳಿಸ್ಕೋತೀನೀಂತ ಅನುಮಾನ ಬಂದಿದೆಯಲ್ಲ..? ಅಂತ ಅನುಮಾನ ಬೇಡ. ಇನ್ನುಳಿದ ಹಣದಲ್ಲಿ ಒಂದು ಟ್ರಸ್ಟ್ ಶುರು ಮಾಡು, ಅದರ ಮೂಲಕ ಸಮಾಜಸೇವಾ ಕಾರ್ಯಕ್ರಮಗಳನ್ನು ಮಾಡು. ಅದರಲ್ಲಿ ನಾನೂ ಒಬ್ಬ ಆಹ್ವಾನಿತ ಸದಸ್ಯ..ಒಪ್ಪಿಗೆಯಾ..?"
ಪುಷ್ಕರ ನಿಧಾನವಾಗಿ ದೃಢ ಸ್ವರದಲ್ಲಿ ಹೇಳಿದ.
"ನಿನ್ನ ಬಗ್ಗೆ ಅನುಮಾನಿಸಿದ್ದಕ್ಕೆÉ ನಾಚಿಕೆಯಾಗ್ತಾ ಇದೆ ಪುಷ್ಕರ್. ನೀನೊಬ್ಬ ಮಹಾನ್ ವ್ಯಕ್ತಿ. ನಿನ್ನ ಉಪಕಾರವನ್ನ ನಾನೆಂದಿಗೂ ಮರೆಯಲಾರೆ"
"ಹೊಗಳಿಕೆ ಸಾಕು …ಟ್ರಸ್ಟ್ ವಿಷಯ ಮರೀಬೇಡ" 
 "ಖಂಡಿತ ಮರೆಯೊಲ್ಲ. ನನ್ನ ಶಕ್ತಿ ಮೀರಿ ಸಮಾಜಕ್ಕೆ, ಅಸಹಾಯಕರಿಗೆ, ಅದರಲ್ಲಿಯೂ ನನ್ನಂತವರ ಅಗತ್ಯಗಳಿಗೆ ನಾನು ಗಮನ ಕೊಡ್ತೀನಿ. ಇದು ಪ್ರಮಾಣ"
 ಪುಷ್ಕರನ ಪತ್ನಿ ಸುಧಾ ಟೀ ಮತ್ತು ಬಿಸ್ಕೆಟ್ಟಿನ ಟ್ರೇ ಹಿಡಿದು ಬಂದಿದ್ದಕ್ಕೆ ಸುದಾಮ ಮೌನ ವಹಿಸಿದ.
"ಅರೆ,,ನೀವಾ..? ನಾನು ಯಾರೋ ಬಂದಿದ್ದಾರೆ ಅಂದ್ಕೊಂಡಿದ್ದೆ…ನೆನ್ನೆ ನಿಮ್ಮ ಕಾರ್ಯಕ್ರಮ ನೋಡಿದೆ. ಯೂ ಆರ್ ರಿಯಲೀ ಗ್ರೇಟ್! ಜೀನಿಯಸ್!! ಅದರಲ್ಲಿಯೂ ಕೊನೆಯ ಪ್ರಶ್ನೆಯ ಉತ್ತರಕ್ಕೆ ನನ್ನ ಹ್ಯಾಟ್ಸ್ ಆಫ್"
"ನಿಜವಾಗಿಯೂ ಅದೆಲ್ಲಕ್ಕೂ … ಪುಷ್ಕರನ ಸಹಾಯವಿಲ್ಲದಿದ್ದರೆ ನಾನು ಗೆಲ್ಲುತ್ತಿರಲಿಲ್ಲ..ನಿಜವಾಗಿ..ನಿಮ್ಮ ಪ್ರಶಂಸೆ…? "
ಸುಧಾ ಮಾತಿಗೆ ಸುದಾಮ ನಾಚಿಕೆಯಿಂದ ತಲೆ ತಗ್ಗಿಸಿ ನುಡಿಯುತ್ತಿದ್ದಂತೆ ಪುಷ್ಕರ ಗದರಿ ಅವನ ಮಾತನ್ನು ಕತ್ತರಿಸಿದ.
"ಏನು..? ಒಂದು ಲ್ಯಾಪ್ಟಾಪ್ ಕೊಟ್ಟ ಮಾತ್ರಕ್ಕೆ ಅದೇನು ದೊಡ್ಡ ಸಹಾಯವಾ..? ಸುಮ್ಮನೆ ಏನೇನೋ ದೊಡ್ಡ ಮಾತುಗಳನ್ನಾಡಬೇಡ ನೀನು ನನ್ನ ಬಾಲ್ಯ ಸ್ನೇಹಿತ ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ"
ವಿಶ್ವಾಸದಿಂದ ಸುದಾಮನ ಹೆಗಲ ಮೇಲೆ ಕೈಯಿರಿಸಿದ ಪುಷ್ಕರ್.
ಸ್ನೇಹಿತರಿಬ್ಬರ ಮಾತನ್ನು ಕೇಳುತ್ತಿದ್ದ ಸುಧಾ ನಸುನಗುತ್ತಾ ಟೀ ಟ್ರೇಯನ್ನು ಟೀಪಾಯ್ ಮೇಲಿಟ್ಟಳು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x