ಉತ್ತರಕರ್ನಾಟಕ ಉದಯೋನ್ಮುಖ ಪ್ರತಿಭೆ ಪೂರ್ಣಿಮಾ ದೇಶಪಾಂಡೆ: ಗುಂಡೇನಟ್ಟಿ ಮಧುಕರ

     
ಬೆಳಗಾವಿ ಭಾಗ್ಯನಗರದಲ್ಲಿ ವಾಸಿಸುತ್ತಿರುವ  ಪೂರ್ಣಿಮಾ ದೇಶಪಾಂಡೆ ಇವಳಿಗೆ ಮೊದಲಿನಿಂದಲೂ ಒಂದೇ ಆಸೆ. ತಾನು ಚಲನಚಿತ್ರ ನಿರ್ದೇಶಕಿಯಾಗಬೇಕೆಂಬುದು. ಇದು ಹೇಗೆ ಅವಳ ಮನಸ್ಸಿನಲ್ಲಿ ಮೊಳಕೆಯೊಡೆಯಿತೋ ಗೊತ್ತಿಲ್ಲ. ಆದರೂ ಅವಳದು ಒಂದೇ ಆಸೆ ನಿರ್ದೇಶಕಿಯಾಗಬೇಕೆಂದು. ಅದರಂತೆ ಅವರ ತಂದೆ ತಾಯಿ ಇಬ್ಬರೂ ಸಹಕರಿಸಿದರು. ಮಗಳ ಮನಸ್ಸಿನ ವಿರುದ್ಧ ಹೋಗಬಾರದೆಂದು ಅವಳಲ್ಲಿರುವ  ಪ್ರತಿಭೆಗೆ ನೀರೆರೆಯಲು ಮುಂದಾದರು. ಎಲ್ಲ ಪಾಲಕರೂ ತಮ್ಮ ಮಕ್ಕಳು ಇಂಜನಿಯರರು ಇಲ್ಲವೇ ಡಾಕ್ಟರರಾಗಬೇಕು. ಇವೆರಡನ್ನು ಬಿಟ್ಟು ಬೇರೆ ಜಗತ್ತೇ ಇಲ್ಲವೆಂದು ವರ್ತಿಸುತ್ತಿರುವ ಇಂದಿನ ಜಗತ್ತಿನಲ್ಲಿ. ಪೂರ್ಣಿಮಾಳ ತಾಯಿ ಸುಪ್ರಿಯಾ ಹಾಗೂ ತಂದೆ ಪ್ರಾಣೇಶ ಇವರನ್ನು ನಾವು ಅಭಿನಂದಿಸಲೇ ಬೇಕು. 

ಪೂರ್ಣಿಮಾ ದೇಶಪಾಂಡೆ    

ನಿರ್ದೇಶನದಲ್ಲಿ ಹಲವಾರು ಕೆಲಸಗಳನ್ನು ಮಾಡಿ, ಅತಿ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಅನುಭಗಳನ್ನು ಹೊಂದಿರುವ ಕು. ಪೂರ್ಣಿಮಾಳ ಭೇಟಿ ಇತ್ತೀಚೆಗೆ ಕೆಸಲವೊಂದರ ನಿಮಿತ್ತ ಆಯಿತು. ಅವಳೊಂದಿಗೆ ಚಲನಚಿತ್ರ, ನಿರ್ದೇಶನಗಳ ಕುರಿತು ಹಲವಾರು ವಿಷಯಗಳನ್ನು ಮಾತನಾಡಿದಾಗ, ಬೇರೆ ಬೇರೆ ವಿಷಯಗಳನ್ನು ನನ್ನೊಂದಿಗೆ ಹಂಚಿಕೊಂಡರು
    
ಗುಂಡೇನಟ್ಟಿ ಮಧುಕರ: ನಿಮಗೆ ನಟನೆ, ನಿರ್ದೇಶನದತ್ತ ಒಲವು ಮೂಡಿದ್ದು ಹೇಗೆ?  
    
ಪೂರ್ಣಿಮಾ ದೇಶಪಾಂಡೆ: ಮನೆತನದ ಹಿನ್ನಲೆಯೇನೂ ಇಲ್ಲ. ನಮ್ಮ ಮನೆಯಲ್ಲಿ  ನಾಟಕ ಅಥವಾ ಚಿತ್ರರಂಗದಲ್ಲಿ ಯಾರೂ ಇರಲಿಲ್ಲ. ನನಗೆ ಇಂಗ್ಲೀಷ ಸಾಹಿತ್ಯ ಓದುವದರತ್ತ ಒಲವಿತ್ತು. ಶಾಲೆಯಲ್ಲಿ   Enid Blyton  ಇವರು (ಇಂಗ್ಲೀಷ)  ನನ್ನ ಮೆಚ್ಚಿನ ಲೇಖಕಿ. ಇವರ ಕೃತಿಗಳನ್ನು ಹೆಚ್ಚಾಗಿ ಓದುತ್ತಿದ್ದೆ. ಮಕ್ಕಳ ಸಾಹಸಮಯ ವಸ್ತುಗಳನ್ನಾಧರಿಸಿದ ಕಥೆಗಳನ್ನೇ ಇವರು ಹೆಚ್ಚಾಗಿ ಬರೆಯುತ್ತಿದ್ದುದು.  ಓದಿದುದನ್ನು  ತಾಯಿ (ಸುಪ್ರಿಯಾ)ಯೊಂದಿಗೆ ಹಂಚಿಕೊಳ್ಳುತ್ತಿದ್ದೆ. ಅಲ್ಲದೇ ನನ್ನ ತಾಯಿಯೂ ಸ್ವತಃ ಲೇಖಕಿಯಾದ್ದರಿಂದ  ಅವರೇ ರಚಿಸಿದ ಕೆಲ ಏಕಪಾತ್ರಾಭಿನಯ, ನಾಟಕಗಳಲ್ಲಿ ಪಾತ್ರ ವಹಿಸುವ  ಅವಕಾಶಗಳು ನನಗೊದಗಿ ಬಂದಿವು. ಅಲ್ಲದೇ ಶಾಲೆಯಲ್ಲಿ ಸಹ ಪಠ್ಯಪುಸ್ತಕದಲ್ಲಿಯ ನಾಟಕಗಳನ್ನು ಮಕ್ಕಳಿಗೆ ನಿರ್ದೇಶನ ನೀಡಿ ಆಡಿಸುತ್ತಿದ್ದೆ. ನಮ್ಮ ವರ್ಗದ ಶಿಕ್ಷಕರೂ ಪ್ರೋತ್ಸಾಹಿಸುತ್ತಿದ್ದರು. ಹೀಗೆ ನನಗೆ  ನಿರ್ದೇಶನದತ್ತ ಒಲವು ಮೂಡಿತು.
    
ಗುಂಡೇನಟ್ಟಿ ಮಧುಕರ: ಇದಕ್ಕೆ ನಿಮ್ಮ ತಂದೆ ತಾಯಿ ಸಹಕಾರವಿತ್ತೆ?
    
ಪೂರ್ಣಿಮಾ ದೇಶಪಾಂಡೆ: ಎಲ್ಲ ತಂದೆ ತಾಯಂದಿರಿಗಿರುವಂತೆ ಸಿನಿಮಾ ರಂಗದಲ್ಲಿ ಮಗಳು ಸೇರುವುದು ಬೇಡವೇ ಆಗಿತ್ತು. ಆದರೂ ತಾಯಿ ಸಮ್ಮತಿಸಿದರು. ತಂದೆ ಸಿನಿಮಾ, ನಿರ್ದೇಶನ ಬಿಟ್ಟು ಬೇರೆ ಏನಾದರೂ ಮಾಡಲಿ ಎಂಬ ಆಸೆ ಇತ್ತು. ಆದರೆ ನನ್ನಲ್ಲಿದ್ದ ಪ್ರಬಲ ಆಸೆಯನ್ನು ಅರಿತ ಅವರು ಮನಸ್ಸಿನ ವಿರುದ್ಧ ಹೋಗಲಾರದೇ Govt. Film & Television Institute, Hesargatta,  Bangalore ಕಾಲೇಜಿನ ಪರಿಚಯ ಕೈಪಿಡಿಯನ್ನು ತಂದೆಯವರೇ ತಂದು ಕೊಟ್ಟರು. ಇದು 3 ವರ್ಷ ಅವಧಿಯ ಕೋರ್ಸ ಆಗಿತ್ತು. ಇದನ್ನು ಮಾಡಿಕೊಂಡೆ.
    
ಗುಂಡೇನಟ್ಟಿ ಮಧುಕರ: ಈ ಕೋರ್ಸ ಮುಗಿದ ನಂತರ ನಿಮ್ಮ ನಿರ್ದೇಶನ ಕಾರ್ಯ ಹೇಗೆ ಪ್ರಾರಂಭವಾಯಿತು?
    
ಪೂರ್ಣಿಮಾ ದೇಶಪಾಂಡೆ: ನಾನು  ಸಿನೇಮಾ ಕುರಿತಾದ ಕೋರ್ಸ ಮುಗಿದ ನಂತರ ಮೊಟ್ಟಮೊದಲು ಲೇಖಕಿ ದಿ. ಸರಿತಾ ಕುಲಕರ್ಣಿಯವರ ಕಥೆಯನ್ನಾಧಾರಿತ  ‘ಪೋಸ್ಟಪ್ಪನ ಫಜೀತಿ’ ಎಂಬ  20 ನಿಮಿಷಗಳ ವಿಡಿಯೋ ಕ್ಲಿಪ್‍ನ್ನು ನನ್ನ ನಿರ್ದೇಶನದಲ್ಲಿ ಹೊರತಂದೆ. ಗ್ರಾಮೀಣ ಪ್ರದೇಶದಲ್ಲಿ ಅಕ್ಷರಜ್ಞಾನದ ಮಹತ್ವವನ್ನು ಪರಿಚಯಿಸುವ ಹಾಸ್ಯಚಿತ್ರ ಇದಾಗಿತ್ತು.. ಸ್ವತಂತ್ರವಾಗಿ ಹೊರತಂದ ಮೊದಲ ಚಿತ್ರ ಇದಾದರೂ ಇದಕ್ಕಿಂತ ಮೊದಲು ಮುತ್ತಿನ ತೆನೆ, ನಾ ನಿನ್ನ ಬಿಡಲಾರೆ ಮುಂತಾದ ಕಿರುತೆರೆ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕಿ ಹಾಗೂ ಸಹಾಯಕ ಛಾಯಾಗ್ರಾಹಕಿಯಾಗಿ ಕೆಲಸ ಮಾಡಿದ ಅನುಭವ ನನಗಿತ್ತು.
    
ಗುಂಡೇನಟ್ಟಿ ಮಧುಕರ:ನಿಮಗೆ ಅತ್ಯಂತ ಖುಷಿ ಕೊಟ್ಟ ನಿರ್ದೇಶನ ಯಾವುದು?
    
ಪೂರ್ಣಿಮಾ ದೇಶಪಾಂಡೆ: ನಾನೇ ಸ್ವತಂತ್ರವಾಗಿ ನಿರ್ದೇಶನ ನೀಡಿದ ‘ಪೋಸ್ಟಪ್ಪನ ಫಜೀತಿ’ ನನಗೆ ಅತ್ಯಂತ ಖುಷಿ ಕೊಟ್ಟಿತು. ಏಕೆಂದರೆ ಇದು ನಾನು ಮಾಡಿದುದು ಎಂಬುದು ಒಂದು ಕಾರಣವಾದರೆ. ಇದರಲ್ಲಿ  ಕುಟುಂಬದ ಸದಸ್ಯರು ಹಾಗೂ ನನ್ನ ಸ್ನೇಹಿತರನ್ನೇ ಪಾತ್ರಗಳಿಗಾಗಿ ಆಯ್ಕೆ ಮಾಡಿಕೊಂಡಿದ್ದೆ. ಸಂಕೇಶ್ವರದ ಹತ್ತಿರದ ಹಳ್ಳಿಯೊಂದರಲ್ಲಿ ಮಾಡಿದ ಸ್ವತಂತ್ರ ಚಿತ್ರವಿದು. ನನ್ನ ಸ್ನೇಹಿತರೊಂದಿಗೆ ಚಿತ್ರೀಕರಣಕ್ಕಾಗಿ ಆ ಹಳ್ಳಿಯಲ್ಲಿ ತುಂಬ ಖುಷಿಯಾಗಿ ಕಳೆದೆವು ಅಲ್ಲದೇ ಅದು ಚಿತ್ರವಾಗಿ ಹೊರಬಂದ ನಂತರ ಆ ಚಿತ್ರವನ್ನು ಒಬ್ಬ ಪ್ರೇಕ್ಷನಾಗಿ ನೋಡಿದೆ; ನಿರ್ದೇಶನ ಕುರಿತು ನನಗೆ ತೃಪ್ತಿಯನ್ನೂ ಕೊಟ್ಟಿತು.    
    
ಗುಂಡೇನಟ್ಟಿ ಮಧುಕರ: ನಿರ್ದೇಶಕ ಗಿರೀಶ ಕಾಸರವಳ್ಳಿಯವರೊಂದಿಗ ನಿರ್ದೇಶನ ನಿಡಿದ ನಿಮ್ಮ ಅನುಭವ ಯಾವ ರೀತಿ ಇತ್ತು?. 
    
ಪೂರ್ಣಿಮಾ ದೇಶಪಾಂಡೆ: 2010 ರಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕøತ  ಗಿರೀಶ ಕಾಸರವಳ್ಳಿ ನಿರ್ದೇಶನದಲ್ಲಿ ಹೊರಬಂದ ‘ಕನಸೆಂಬ ಕುದರೆಯನೇರಿ’ ಎಂಬ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದೆ. ಗಿರೀಶ ಕಾಸರವಳ್ಳಿಸರ್‍ರೊಂದಿಗೆ  ಮಾಡಿದ ಕೆಲಸ ನನಗೆ ವಿಭಿನ್ನ ಅನುಭವವನ್ನು ಕೊಟ್ಟಿತು. ಅವರಂಥ ಹಿರಿಯ ನಿರ್ದೇಶಕರಿಂದ ನಾವು ಕಲಿಯಬೇಕಾದುದು ಬಹಳಷ್ಟಿದೆ. ಅವರೇ ಒಂದು ವಿಶ್ವವಿದ್ಯಾಲಯವಿದ್ದಂತೆನ್ನಿಸಿತು.
    
ಗುಂಡೇನಟ್ಟಿ ಮಧುಕರ: ಮತ್ತೆ ನೀವು ಯಾವ ಯಾವ ಚಿತ್ರಗಳಲ್ಲಿ ಕೆಲಸ ಮಾಡಿದ್ದೀರಿ?
    
ಪೂರ್ಣಿಮಾ ದೇಶಪಾಂಡೆ: ಉದಯ ಟಿ.ವಿ.ಯ ‘ಮುತ್ತಿನ ತೆನೆ’ ಹಾಗೂ ಝಿ ಟಿ.ವಿ.ಯ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಈ ಟಿ.ವಿ.ಯ ‘ಮಳೆ ಬಿಲ್ಲು’ ಧಾರಾವಾಹಿಯಲ್ಲಿ ಸಹಾಯಕ ಛಾಯಾಗ್ರಾಹಕಿಯಾಗಿ ಕೆಲಸ ಮಾಡಿದ್ದೇನೆ. ಹೀಗೆ ಬೇರೆ ಬೇರೆ ಧಾರಾವಾಹಿಗಳಲ್ಲಿ  ಅಲ್ಲದೇ ಇತ್ತೀಚೆಗೆ ಸೆಪ್ಟೆಂಬರ್ 2015 ರಲ್ಲಿ ಬಿಡುಗಡೆಗೊಂಡ ಪ್ರೇಮ ಕಥೆ ಕಥಾವಸ್ತು ಹೊಂದಿದ the perfect girl ಹಿಂದಿ ಚಿತ್ರದ ಅಸೋಸಿಯೇಟ್ ನಿರ್ದೇಶಕಿಯಂದು ಕೆಲಸ ಮಾಡಿದೆ. ಹೀಗೆ ಎಲ್ಲ ತರಹದ ಕೆಲಸಗಳನ್ನು ಮಾಡಿದ್ದೇನೆ.    
    
ಗುಂಡೇನಟ್ಟಿ ಮಧುಕರ: ನಿಮಗೆ ಯಾವ ತರಹದ ಚಿತ್ರಗಳಿಗೆ ನಿರ್ದೇಶನ ಕೊಡಲು ಇಷ್ಟ ಪಡುತ್ತೀರಿ?
    
ಪೂರ್ಣಿಮಾ ದೇಶಪಾಂಡೆ: ನನಗೆ ಒಂದೇ ತರಹದ ಚಿತ್ರಗಳಿಗೆ  ಬ್ರ್ಯಾಂಡ್  ಆಗುವುದು ನನಗೆ ಇಷ್ಟವಿಲ್ಲ. ಕಲಾತ್ಮಕವಿರಬಹದು, ವಾಣಿಜ್ಯ ಚಿತ್ರವಿರಬಹುದು, ಹಾಸ್ಯವಿರಬಹುದು, ಸಾಮಾಜಿಕ, ಕೌಟುಂಬಿಕ ಅಥವಾ ಭಯಾನಕ ಹೀಗೆ ಎಲ್ಲ ತರಹದ ಚಿತ್ರಗಳನ್ನು ನಿರ್ದೇಶಿಸಲು ನನಗೆ ಇಷ್ಟ. ಹೊಸ ಹೊಸ ಅನುಭವಗಳಿಗೆ ನನ್ನ ಮನಸ್ಸು ತುಡಿಯುತ್ತಿರುತ್ತದೆ.
    
ಗುಂಡೇನಟ್ಟಿ ಮಧುಕರ: ಈ ಸಧ್ಯದ ನಿಮ್ಮ ಕಾರ್ಯಯೋಜನೆಗಳೇನು?
    
ಪೂರ್ಣಿಮಾ ದೇಶಪಾಂಡೆ: ಈಗ ನಾನು ಇನ್ನೂ ಹೆಸರಿಡಿದ ಮರಾಠಿ ಭಾಷೆಯ ಹಾಸ್ಯ ಚಿತ್ರವೊಂದನ್ನು ತಯಾರಿಸುವ ಯೋಜನೆಯೊಂದನ್ನು ಹಾಕಿಕೊಂಡಿದ್ದು. ಈ ಚಿತ್ರದ ಪಾತ್ರಗಳ ಹುಡುಕಾಟ ನಡೆದಿದೆ. ಇದರಲ್ಲಿ  ಮೂರು ವರ್ಷದ ಮಗುವಿನಿಂದ ಹಿಡಿದು ಮುದುಕರವರೆಗೆ ಎಲ್ಲ ವಯಸ್ಸಿನವರ ಪಾತ್ರಗಳೂ ಇವೆ. ಯಾರಾದರೂ ಅಭಿನಯದಲ್ಲಿ ಆಸಕ್ತಿಯುಳ್ಳ ಕಲಾವಿದರು castingforfilm1@gmail.com  ಈ  ಇಮೇಲ್ ವಿಳಾಸಕ್ಕೆ ತಮ್ಮ ಹೆಸರು, ವಯಸ್ಸು, ಎತ್ತರ ಮುಂತಾದ ವಿವರಗಳೊಂದಿಗೆ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಂಪರ್ಕಿಸಬಹುದಾಗಿ.
    
ಗುಂಡೇನಟ್ಟಿ ಮಧುಕರ: ನೀವು ಸುಡುಗಾಡಸಿದ್ದರ ಕುರಿತಾದ ಒಂದು ಡಾಕ್ಯುಮೆಂಟರಿ ಪಿಲ್ಮ ಮಾಡಿದ್ದೀರಂತಲ್ಲ?
    
ಪೂರ್ಣಿಮಾ ದೇಶಪಾಂಡೆ: ಹೌದು, ನಾನು ಗಿರೀಶ ಕಾಸರವಳ್ಳಿಯವರ ‘ಕನಸೆಂಬ ಕುದರೆಯನೇರಿ’  ಸಹ ನಿರ್ದೇಶಕನಾಗಿ ಕೆಲಸ ಮಾಡುವ ಮುಂದೆ. ಆ ಚಿತ್ರದಲ್ಲಿ ಸುಡಗಾಡುಸಿದ್ಧರ ಒಂದು ಪಾತ್ರ ಬರುತ್ತಿತ್ತು. ಸುಡುಗಾಡು ಸಿದ್ಧರ ನಡೆನುಡಿ, ಹಾವಭಾಗ, ಜೀವನಶೈಲಿ ತಿಳಿದುಕೊಳ್ಳುವದರ ಸಂಬಂಧವಾಗಿ ಬೆಳಗಾವಿಯಿಂದ ಧಾರವಾಡ ಮಧ್ಯದಲ್ಲಿ ಒಂದು ಹಳ್ಳಿಯಿತ್ತು. ಆ ಊರಿನಲ್ಲೊಬ್ಬ ಸಿದ್ಧಪ್ಪನೆಂಬ ಸುಡುಗಾಡುಸಿದ್ಧನಿದ್ದ. ಅವನನ್ನು ಭೇಟಿಯಾದೆ. ಅವರು ಹಾಕಿಕೊಳ್ಳುವ ಕವಡಿ ಸರ, ವೇಷ ಭೂಷಣ ನನ್ನಲ್ಲಿ ಉತ್ಸಕತೆಯನ್ನು ಹುಟ್ಟಿಸಿದವು. ಕುತಲಕ್ಕಾಗಿ ಅವರಿಂದ ಅವರ ವೃತ್ತಿಯ ಬಗೆಗೆ ಎಲ್ಲ ವಿಷಯಗಳನ್ನು ಸಂಗ್ರಹಿಸಿದೆ. ಇದೇ ಅವಕಾವನ್ನು ಉಪಯೋಗಿಸಿಕೊಂಡು ನಾನು ನಶಿಸಿಹೋಗುತ್ತಿರುವ ಸುಡುಗಾಡು ಸಿದ್ದ ಜನಾಂಗದ ಕುರಿತಾದ ಒಂದು ಡಾಕ್ಯುಮೆಂಟರಿ ಪಿಲ್ಮ ಮಾಡಿದ್ದೇನೆ.
    
ಗುಂಡೇನಟ್ಟಿ ಮಧುಕರ: ಹಾಲಿಹುಡ್ ಚಲನಚಿತ್ರ ತರಬೇತಿ ಶಿಬಿರಕ್ಕೆ ತಾವೇನೋ ಭಾಗವಹಿಸದ್ದೀರಂತೆ ಅದರ ಅನುಭವ ಹೇಗಿತ್ತು?
    
ಪೂರ್ಣಿಮಾ ದೇಶಪಾಂಡೆ: ಮುಂಬೈಯ ಬ್ಲಾಕ್ ಕಾಪಿ ಪ್ಲೀಮ್ಸ ಆಂಡ್ ಮೀಡಿಯಾ ಅವರು ಆಯೋಜಿಸಿದ್ದ ಪ್ರತಿಭಾ ವಿಕಸನ ಹಾಗೂ ತರಬೇತಿ ಶಿಬರದಲ್ಲಿ ಭಾಗವಹಿಸಿದ್ದೆ.  ಗಿಲ್ ಬೆಟ್‍ಮೆನ್ ನಿರ್ದೇಶನ,  ಜೆ. ವಾಲ್ಟರ್ ಸಿನಿಮಾಟೋಗ್ರಫಿ, ಟಾಮ್ ಅಬ್ರಾಹ್ಮಂ ಅವರಿಂದ ಚಿತ್ರಕತೆ ಹಾಗೂ ಸಂಭಾಷನೆ ತರಬೇತಿ ಹೀಗೆ ಪ್ರತಿಯೊಂದು ವಿಷಯದ ಮೇಲೆಯೂ ನಾಲ್ಕು ದಿನಗಳ ತರಬೇತಿ ಇರುತ್ತಿತ್ತು. ಇವು ದೆಹಲಿ ಹಾಗೂ ಬಾಂಬೆಯಲ್ಲಿಯಲ್ಲಿದ್ದವು. ಇದರಲ್ಲಿ ನಾನು ಭಾಗವಹಿಸದ್ದರಿಂದ ಹಲವಾರು ವಿಷಯಗಳನ್ನು ತಿಳಿದುಕೊಳ್ಳಲು ಅನಕೂಲವಾಯಿತು. ಇದು ಚಲನಚಿತ್ರ ನಿರ್ದೇಶನ, ಸಿನಿಮಾಟೋಗ್ರಫಿ, ಚಿತ್ರಕಥೆ ಹಾಗೂ ಸಂಭಾಷಣೆಗಳ ಕುರಿತಾದ ಹಲವಾರು ಸೂಕ್ಷ್ಮ ವಿಷಯಗಳನ್ನುಯ ತಿಳಿದುಕೊಳ್ಳಲು ಅನಕೂಲವಾಯಿತು.
    
ಗುಂಡೇನಟ್ಟಿ ಮಧುಕರ: ನೀವು ಬೆಳಗಾವಿಯವರೇ ಆಗಿದ್ದು. ಬೆಳಗಾವಿ ಬಹಳಷ್ಟು ಜನಕ್ಕೆ ನಿಮ್ಮ ಈ ಎಲ್ಲ ಕೆಲಸ ಕಾರ್ಯಗಳ ಪರಿಚಯವೇ ಇಲ್ಲವಲ್ಲ?
    
ಪೂರ್ಣಿಮಾ ದೇಶಪಾಂಡೆ: ಹೌದು ನೀವು ಹೇಳುವುದು ಸರಿಯಿದೆ. ಬಹಳಷ್ಟು ಜನಕ್ಕೆ ಗೊತ್ತೇ ಇಲ್ಲ ಕಾರಣವೆಂದರೆ ನನ್ನ ಕುರಿತು ನಾನಾಗಿಯೇ ಅಷ್ಟಾಗಿ ಹೇಳಿಕೊಳ್ಳುವುದಿಲ್ಲ. ಇದು ನನ್ನ ಸ್ವಭಾವ. ನಾನಾಯಿತು ನಾನು ಒಪ್ಪಿಕೊಂಡ ಕೆಲಸವಾಯಿತು. ಹೀಗಾಗಿ ನನ್ನ ಕೆಲಸ ಕಾರ್ಯಗಳ ಕುರಿತು ಅಷ್ಟಾಗಿ ಯಾರಿಗೂ ಗೊತ್ತಿಲ್ಲ.  ನಾನು ಇನ್ನೂ ಸಾಧಿಸಬೇಕಾದದ್ದು ಸಾಕಷ್ಟಿದೆ. ನನ್ನ ಸಾಧನೆಯ ನಂತರ ಜನ ತಾವಾಗಿಯೇ ಗುರ್ತಿಸುತ್ತಾರೆ. ನಾವು ನಮ್ಮ ಕೆಲಸದಿಂದ ಗುರುತಿಸಬೇಕೊಳ್ಳಬೇಕೆ ಹೊರತು ಅನವಶ್ಯಕ ಪ್ರಚಾರದಿಂದಲ್ಲವೆಂದು ನನ್ನ ಭಾವನೆ.    
    
ಗುಂಡೇನಟ್ಟಿ ಮಧುಕರ: ನಿವು ಬೆಳಗಾವಿಯ ಯಾವ ಯಾವ ಶಾಲೆ – ಕಾಲೇಜುಗಳಲ್ಲಿ ಶಿಕ್ಷಣ ಪಡೆದಿದ್ದೀರಿ?
    
ಪೂರ್ಣಿಮಾ ದೇಶಪಾಂಡೆ: ನಾನು ಪೂರ್ವ ಪ್ರಾಥಮಿಕದಿಂದ ಹೈಸ್ಕೂಲವರೆಗೆ ಡಿ. ಪಿ. ಸ್ಕೂಲಿನಲ್ಲಿಯೇ ಕಲಿತದ್ದು. ಎಸ್.ಎಸ್.ಎಲ್.ಸಿ.  ಪ್ರಥಮ ದರ್ಜೆಯಲ್ಲಿ ಪಾಸಾದೆ. ಮುಂದೆ ಜಿ.ಎಸ್.ಎಸ್. ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದೆ.  ಪಿ.ಯು.ಸಿ. ದ್ವಿತೀಯ ದರ್ಜೆಯಲ್ಲಿ ಪಾಸಾದೆ. ಡಿಪ್ಲೋಮಾ ಇನ್ ಸಿನಿಮಾಟೊಗ್ರಾಫಿಯಲ್ಲಿ ಡಿಸ್ಟಿಂಗಶನ್‍ನಲ್ಲಿ ಪಾಸಾದೆ. ಮುಂದೆ ಸುರಾನಾ ಮಹಾವಿದ್ಯಾಲಯದಲ್ಲಿ ಬಿ. ಎ. ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಾಸಾದೆ. ಇದೇ ಸಂದರ್ಭದಲ್ಲಿ ನನಗೆ “ಬೆಸ್ಟ್ ಔಟ್‍ಗೋಯಿಂಗ್ ಸ್ಟುಡೆಂಟ್” ಎಂದು ಮುಖ್ಯ ನ್ಯಾಯಾಧೀಶರಾದ ಎಮ್. ಎನ್. ವೆಂಕಟಾಚಲಯ್ಯ ಅವರಿಂದ ಪ್ರಶಸ್ತಿ ಪಡೆದೆ.   ನಾನು ಹೇಳುವ ಉದ್ದೇಶವೆಂದರೆ ನಮಗೆ ಅಭಿರುಚಿಯಿಂದ ಶಿಕ್ಷಣವನ್ನು ಆಯ್ದುಕೊಂಡರೆ ಅದರಲ್ಲಿ ನಾವು ಹೆಚ್ಚಿನ ಅಂಕ ತೆಗೆದುಕೊಂಡು ಪಾಸಾಗಿ ಏನನ್ನಾದರೂ ಸಾಧಿಸಲು ಸಾಧ್ಯವಿದೆ.
    
ಹೀಗೆ ಸಂಗೀತ, ಕಲೆ, ಸಾಹಿತ್ಯ, ಚಿತ್ರರಂಗ ಹೀಗೆ ಎಲ್ಲ ಕ್ಷೇತ್ರ ಉತ್ಸುಕತೆಯಿಂದ, ಆಸಕ್ತಿಯಿಂದ ಕೆಲಸ ಮಾಡುವು ಹಲವಾರು ಪ್ರತಿಭೆಗಳು ಉತ್ತರ ಕಾರ್ನಾಟಕದಲ್ಲಿ ಇವೆ ಅವುಗಳಿಗೆ ಸರಿಯಾದ ಪ್ರೋತ್ಸಾಹವಿಲ್ಲದೇ ಅಲ್ಲಿಯೇ ಬಾಡಿ ಹೋಗುತ್ತಲಿವೆ. ಉತ್ತರ ಕರ್ನಾಟಕದಿಂದ ಅರಳುತ್ತಿರುವ ಈ ಪ್ರತಿಭೆ ಪೂರ್ಣಿಮಾ ದೇಶಪಾಂಡೆಯವರಿಗೆ ಹಿರಿಯ ನಿರ್ಮಾಪಕರು ಹೆಚ್ಚಿನ ಅವಕಾಶ ನೀಡಿ ಪ್ರೋತ್ಸಾಹಿಸಬೇಕಾದುದು ಅವಶ್ಯವಿದೆ. ಇಂಥ ಯುವಪ್ರತಿಭೆಗಳಿಗೂ ಕನ್ನಡ ಚಿತ್ರರಂಗದಲ್ಲಿ ಅವಕಾಶ ದೊರೆತದ್ದೇ ಆದಲ್ಲಿ, ಹೊಸ ಹೊಸ ವಿಚಾರ, ಯೋಜನೆಗಳಿಂದ ಕೂಡಿರುವ ಇಂಥ  ಪ್ರತಿಭೆಗಳು ಹೊಸದನ್ನೇನಾದರೂ ಚಿತ್ರರಂಗಕ್ಕೆ ಕೊಡುವರೆಂಬ ಭರವಸೆ ನನ್ನದು. ಪೂರ್ಣಿಮಾ ಅವರಿಗೆ ಹೊಸ ಹೊಸ ಅವಕಾಶಗಳು ಸಿಗಲಿ. ಅವರೂ ಒಬ್ಬ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾಗಿ ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸುತ್ತೇನೆ – Best of luck

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x