ಮುಂಬೈ ಮುಂಗಾರು ಮಳೆ: ಅಪರ್ಣಾ ರಾವ್

ನೀನು ಇನ್ನೇನು ಎರಡು ದಿನದಲ್ಲಿ ಬರ್ತೀಯ ಅಂತ ಗುಲ್ಲು ಹಬ್ಬಿತ್ತು.  ಎಲ್ಲಾ ಕಡೆ ನಿಂದೇ ಜಪ. ನನಗೂ ನೀನು ಬರೋ ನಿರೀಕ್ಷೆ  ಬೆಟ್ಟದಷ್ಟು..  ಆದ್ರೆ  ಯಾರ ಹತ್ರಾನೂ  ಹೇಳ್ಕೊಲ್ಲಿಲ್ಲ. ನಿನ್ನ ನೆನಪಾದಾಗಲೆಲ್ಲಾ ಒಂದು ದೀರ್ಘ ಬಿಸಿ ಉಸಿರು ಬಿಟ್ಟಿದ್ದಷ್ಟೇ. ನನಗೆ  ಸಿಟ್ಟೂ ಕೂಡ ನಿನ್ಮೇಲೆ.. ಅದೆಷ್ಟು ಜನರಿಗೆ ನೀನು ಪ್ರಿಯತಮ.?

ನೀನು ನನಗಿಂತಾ ಹೆಚ್ಚು ಆ ಊರ್ಮಿಳೆ  ಇಳೆ ಜೊತೆ ಸರಸ ಆಡೋ ವಿಷ್ಯ ನನಗೇನು ಗೊತ್ತಿಲ್ವಾ? ನೀನು ಅವಳು ದೂರದಲ್ಲೆಲ್ಲೋ ಸೇರೋದನ್ನ ವಾಸನೆಯಲ್ಲೇ ಕಂಡು ಹಿಡಿತೀನಿ ನಾನು. ನಿಮ್ಮಿಬ್ಬರಿಗೂ ಒಂಚೂರೂ ಸಂಕೋಚ ಮುಚ್ಚು ಮರೆ  ಇಲ್ಲ.. ಎಲ್ಲರ ಮುಂದೆ ನಿಮ್ಮ ಪ್ರೀತಿಯ ಹುಚ್ಚು ಹೊಳೆ ಹರಿಸ್ತೀರಾ.
 
ಇದೆಲ್ಲಾ ಗೊತ್ತಿದ್ದೂ ಒಂದೊಂದು ಸಾರಿ ಅಂದ್ಕೊಳ್ತೀನಿ , ಯಾಕ್ ಬೇಕು ನಿನ್ನ ಸಹವಾಸ ಅಂತ. ಎನ್ಮಾಡ್ತೀಯ  ಹೇಳು? 'ದಿಲ್ ತೋ ಬಚ್ಚಾ ಹೈ ಜೀ'.  ಈ ಸಾರಿ ಬರೋದಿಕ್ಕೆ ತಡ ಮಾಡೋಲ್ಲ ಅಂದುಕೊಂಡಿದ್ದೆ.
 
ನೀನೋ  ನಿನ್ನ ವರಸೆಯೋ ? ಅದೇನು ಎಂಟ್ರಿ  ಪ್ರತೀಸಾರಿ ನಿಂದು ? ತೀರಾ ಅಬ್ಬರ ಮಾಡ್ತೀಯಪ್ಪ. ಪ್ರಳಯಾಂತಕ ಆನೋ ಹಾಗೆ ಬಂದು  ಒಂದೊದುಸಾರಿ ಏನೂ ಮಾಡದೆ ಟುಸ್ಸ್ ಆನಿಸಿ ಹೋಗ್ತೀಯ.. ಇನ್ನೊಂದು ಸಾರಿ ಸದ್ದಿಲ್ಲದೇ ಬಂದವನು ನಿನ್ನ ಪ್ರತಾಪ ತೋರಿಸಿ   ಎಲ್ಲಾ ಲೂಟಿ ಮಾಡ್ಕೊಂಡು ಹೋಗ್ತೀಯ.. ನಿಂದೊಂದು ತರ  ಹುಚ್ಚು ಹುಡುಗನ ಸಹವಾಸ.
   
ನೀನು ಬರ್ತಿದ್ದ ಹಾಗೆ ಮೊದಲು ನನ್ನ ಮೂಗನ್ನೇ ಚುಂಬಿಸ್ತೀಯ ಅಂತ ಗೊತ್ತಿತ್ತು . ನನ್ನ ತುಟಿಯೆಲ್ಲಾ ಒದ್ದೆಯಾಗಿ ನಾನೂ ಸಣ್ಣಗೆ ನಡುಗಿ ಪ್ರೇಮ ಕಾವ್ಯ ಶುರು. ಈ ಫಿಲಂ ಗಳಲ್ಲಿ  ಪ್ರಿಯ ಪ್ರಿಯೆ ಸಲ್ಲಾಪ  ಕಾಲಿಂದ ತೋರಿಸ್ತಾರೆ. ನೀನು ನೋಡಿದ್ರೆ ತಲೆಯಿಂದ ಶುರು ಮಾಡ್ಕೊಳ್ತೀಯ.  ನೆನೆಸಿಕೊಂಡು  ಮನದಲ್ಲೇ  ಹಿಗ್ಗತಿರ್ತೀನಿ.  ನಂದೋ ಒಂದು ತರದ  ಮರಳು. ಬಾಕಿಯವರಿಗೂ ಇದನ್ನೇ ಮಾಡ್ತಿಯೇನೋ? ಹೋಗತ್ಲಾಗೆ ನೀನು..   
 
ನನಗೂ ಸ್ವಾಭಿಮಾನಕ್ಕೇನು  ಕಡಿಮೆ ಇಲ್ಲ. ಪ್ರತೀ ಸಾರಿ ಹಾಗೆ ಈ ಸಾರಿನೂ ಅಷ್ಟು ಸಲೀಸಾಗಿ ನಿನ್ನ ಕೈಗೆ ಸಿಗೋದಿಲ್ಲ ಅಂದುಕೊಂಡಿದ್ದೆ. ನಿಂಜೊತೆ ಕಣ್ಣು ಮುಚ್ಚಾಲೆ ಆಟ ನನಗೆ ತುಂಬಾ ಇಷ್ಟ. ನಾನಂತೂ ತಲೆ ಎತ್ತಿ ದಿಟ್ಟಿಸೋದೂ ಇಲ್ಲ.. ಆದ್ರೆ ಈಸಾರಿ ನೀನು ಬರ್ತಿಯೇನೋ?  ಅಥ್ವಾ ದೂರದಲ್ಲಿ ಬಂದಂತಾಗಿ ತಲೆ ಎತ್ತಿ ಎತ್ತಿ ನೋಡಿದೆ. ನೀನು ಬಂದಿರಲಿಲ್ಲ.ಮತ್ತೆ ಸಿಟ್ಟು ಬಂದು ಅಂದ್ಕೊಳ್ತಿದ್ದೆ. ನಾನು ನಿನಗೆ ಕಾಯಲ್ಲ ಅಂತ. ಮತ್ತೆ ಸೋಲ್ತಿದ್ದೆ. 

ಇನ್ನೇನು ಈಗ ಬರ್ತೀಯ.. ಆಗ ಬರ್ತೀಯ ಅಂತ ಮಾತಾಡ್ಕೊಳ್ತಿದ್ರು. ನಾನೂ ಸಂಭ್ರಮದಿಂದ  ರೆಡಿ  ಆಗ್ತಿದ್ದೆ. ಒಂದಷ್ಟು ಹೊಸ ಬಟ್ಟೆ, ಚಪ್ಲಿ ತಗೊಂಡೆ. ನೀನು ಬಂದು ಮೈಯೆಲ್ಲಾ  ಮುತ್ತು ಸುರಿಸ್ತೀಯಾ ಅಂತ ಗೊತ್ತಿತ್ತು.. ಆ ಮುತ್ತು ಎಲ್ಲೆಲ್ಲಿಗೋ ಇಳಿದು  ಕಚುಗುಳಿ ಕೊಡೋದನ್ನ ಸಂಭ್ರಮಿಸೋ ಹಾಗೂ ಇಲ್ಲ.. ನೀನೊಬ್ಬ.. ಬೀದಿಯಲ್ಲೇ ಶುರು ಹಚ್ಚಿಕೊಂಡು ಬಿಡ್ತೀಯ.. ನಿನಗೋ ಮುಚ್ಚು ಮರೆ ಏನಿಲ್ಲ. ನನಗೋ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳೋ ಹಾಗಾಗುತ್ತೆ. ನಾನೆಷ್ಟು ಸಾರಿ ಹೇಳಿದ್ದೀನಿ. ಸದ್ದಿಲ್ಲದೇ ಹಿತ್ತಲಿಗೆ ಬಾ.. ಅಲ್ಲಿ ಸೇರೋಣ ಅಂತ. ನೀನೆಲ್ಲಿ ಕೇಳ್ತೀಯಾ? ನಿನಗೋ ಆತುರ. 
 
ಏನು ಹೇಳಲಿ ನಿಂಗೆ ? ನಮ್ಮಿಬ್ಬರ ವಿಷ್ಯ ನನ್ನ ಗಂಡನಿಗೂ ಗೊತ್ತಾಗಿದೆ. ಅವನಂತೂ  ಜೋರಾಗಿ ಸಿಡುಕ್ತಾನೆ. ಈ ನಿಮ್ಮಿಬ್ಬರ ಅವಾಂತರದಿಂದ ನಾಳೆ ಏನಾದರೂ ಹೆಚ್ಚು ಕಡಿಮೆ ಆದ್ರೆ ನಾನು ಜವಾಬ್ದಾರಿಯಲ್ಲ ಅಂತಾನೆ..  ನೀನು ಬಂದಾಗ  ನಾನು ನಿನಗೆ ಕಾಣಿಸದಂತೆ  ಮನೆಯೊಳಗೇ ನುಸುಳಿ ಕಿಟಕಿಯಿಂದ ಇಣುಕುತ್ತಿರುತ್ತೀನಿ. ಕದ್ದು ನೋಡೋದ್ರಲ್ಲಿ ಇರೋ ರೋಮಾಂಚನ  ಎದುರೆದುರಿಗೆ ಭೇಟಿಯಲ್ಲಿ ಇರಲ್ಲ ಬಿಡು..
ಏನೇ ಹೇಳು ನನ್ನ ಗಂಡನೇ  ವಾಸಿ. ನೀನೋ ಬಂದು ನಿನ್ನ ಕೆಲಸ ನೀನು ಮುಗಿಸಿಕೊಂಡು ಹೋಗ್ತೀಯ.. ಆಮೇಲೆ ನನಗೆ ಹೆಚ್ಚು ಕಡಿಮೆ ಆಗಿ  ಒದ್ದಾಡಿದ್ರೆ ಕಡೆಗೆ ನೋಡೋನು ನನ್ನ ಗಂಡ ತಾನೇ.. ನಾನೂ ಏನೆಲ್ಲಾ ಮುಚ್ಚು ಮರೆ ಮಾಡ್ತೀನಿ.. ಯಾರಿಗೂ ಗೊತ್ತಾಗಬಾರದು ಅಂತ. ನೀನು ನನ್ನ ಆವರಿಸಿದ ಮೇಲೆ ಸೀದಾ ಮನೆಗೆ ಬಂದು ಬಟ್ಟೆ ಬದಲಿಸ್ತೀನಿ..
 
ಅದೇನೋಪ್ಪ? ಎಲ್ರೂ ತಮ್ಮ ಪ್ರೇಮ ಪ್ರಸಂಗದಲ್ಲಿ ಕಾವೇರುತ್ತೆ ಅಂತಾರೆ..ನೀನು ನೋಡಿದ್ರೆ ಒಂದತ್ತು ನಿಮಿಷದಲ್ಲಿ ನನ್ನ ಉಷ್ಣ ಇಳಿಸಿಬಿಡ್ತೀಯ.

ಮೊನ್ನೆ ತೀರಾ ಅನಿರೀಕ್ಷಿತ ನನಗೆ.. ತಕ್ಷಣಕ್ಕೆ ನೀನು ಬರುವವನಲ್ಲ ಎಂದುಕೊಂಡು  ಮನೆ  ಬಿಟ್ಟು ಹೊರಟೆ .. ತಿರುವಿನ ದಾರಿಯಲ್ಲಿ  ನೀನು ಸಿಕ್ಕೇ ಬಿಡುವುದೇ ? ನನಗೋ ಗಲಿ ಬಿಲಿ. ಏನು ಮಾಡಲಿ ಹೇಗೆ ನಿನ್ನ ಎದುರಿಸಲಿ ಗೊತ್ತಾಗಲಿಲ್ಲ.. ನಾಚಿಕೆಯಿಂದ ಓಡಿದೆ ನಿನ್ನಿಂದ ಬಚ್ಚಿಟ್ಟುಕೊಳ್ಳೋಕೆ. ನೀನೆಲ್ಲಿ ಬಿಡ್ತೀಯಾ? ಹಿಡಿದೇ ಬಿಟ್ಟೆ ನೀ ನನ್ನ.. ಒಲವೇ…ಸುರಿದೆ ಮೆಲ್ಲಗೆ..  ಆ ಆ  ಆ  ಆ  ಆಕ್ಷಿ! 
 <3 ಮುಂಬೈ ಮುಂಗಾರು ಮಳೆ <3


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x