Facebook

ಸತ್ತವನ ಶಿಕಾಯತ್ತುಗಳು : ಪ್ರಸಾದ್ ಕೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ

 

1977 ರ ದಿನಗಳು

ಇಪ್ಪತ್ತೆರಡರ ಯುವಕನೊಬ್ಬನಿಗೆ ಬ್ಯಾಂಕಿನಿಂದ ಲೋನ್ ಬೇಕಾಗಿತ್ತು. ಲೋನ್ ಅಂದಾಗ ಕಾಗದ ಪತ್ರಗಳ ಅವಶ್ಯಕತೆ, ಓಡಾಟ ಎಲ್ಲವೂ ಸಹಜವೇ ಅನ್ನಿ. ಆಗಿನ ಕಾಲದಲ್ಲಿ ಈಗಿನಂತೆ ಕರೆದು ಸಾಲ ಕೊಡುತ್ತಿರಲಿಲ್ಲವೋ ಏನೋ! ಇರಲಿ, ವಿಷಯಕ್ಕೆ ಬರೋಣ. ಸೋ ಈ ನಮ್ಮ ಬಡಪಾಯಿ ಯುವಕ ಆ ಸರ್ಟಿಫಿಕೇಟು, ಈ ಸರ್ಟಿಫಿಕೇಟು ಅಂತ ಕಾಗದ ಪತ್ರಗಳನ್ನು ಲಗುಬಗೆಯಿಂದ ಹೊಂದಿಸುತ್ತಲೇ ಇದ್ದ. ಬಹುತೇಕ ಎಲ್ಲಾ ಮುಗಿದ ನಂತರ ತನ್ನ ಗುರುತು ಪ್ರಮಾಣಪತ್ರದ ಸಲುವಾಗಿ ಆತ ರೆವೆನ್ಯೂ ಆಫೀಸಿನ ಬಾಗಿಲು ತಟ್ಟಬೇಕಾಯಿತು. ಇದಕ್ಕಾಗಿ ಉತ್ತರಪ್ರದೇಶದ ಆಜಂಗಢದಲ್ಲಿರುವ ಜಿಲ್ಲಾ ಮುಖ್ಯಕಾರ್ಯಾಲಯಕ್ಕೆ ಹೋದಾಗ ಅಲ್ಲಿ ಎದುರಾದ ಸತ್ಯವೊಂದು ಅವನ ಅಸ್ತಿತ್ವವನ್ನೇ ಅಲ್ಲಾಡಿಸಿತ್ತು. ಅಂದ ಹಾಗೆ ಅವನ ಹೆಸರು ಲಾಲ್ ಬಿಹಾರಿ. 

“ಯಾರ್ರೀ ನೀವು? ಒಮ್ಮೆ ಕಣ್ಣು ಬಿಟ್ಟು ನೋಡಿ ಈ ರಿಜಿಸ್ಟರನ್ನು. ಹೆಸರು ಲಾಲ್ ಬಿಹಾರಿ. ಹೆಸರಿನ ಬಗಲಿನಲ್ಲಿ ಮೂವತ್ತನೇ ತಾರೀಕಿನ ಜುಲಾಯಿ, ಸಾವಿರದ ಒಂಭೈನೂರ ಎಪ್ಪತ್ತಾರರಲ್ಲಿ ದೈವಾಧೀನರಾಗಿದ್ದಾರೆ ಎಂದು ದಾಖಲಾಗಿದೆ'', ಸರ್ಕಾರಿ ಕಾರ್ಯಾಲಯದ ಅಧಿಕಾರಿ ಗೊಣಗುತ್ತಾ ನೋಡಿದ. “ಅರೇ… ಲಾಲ್ ಬಿಹಾರಿ ನಾನೇ ಕಣ್ರೀ… ನಿಮ್ಮೆದುರೇ ನಿಂತಿದ್ದೇನೆ ನೋಡಿ'', ಆತ ಕಣ್ಣುಕಣ್ಣು ಬಿಡುತ್ತಾ, ನಗೆ ಬೀರಲು ಪ್ರಯತ್ನಿಸುತ್ತಾ ಹೇಳಿದ. “ಊಹೂಂ… ಸರ್ಕಾರಿ ದಾಖಲೆಗಳಲ್ಲಿ ನೀವು ಸತ್ತು ಹೋಗಿದ್ದೀರಿ ಎಂದಾದ ಮೇಲೆ ನೀವು ಜೀವಂತವಾಗಿರಲಿಕ್ಕೆ ಸಾಧ್ಯವೇ ಇಲ್ಲ'', ಅಧಿಕಾರಿ ಫೈಲನ್ನೂ, ರಿಜಸ್ಟ್ರಿ ಪುಸ್ತಕವನ್ನೂ ಮುಚ್ಚಿ ಲಾಲ್ ಬಿಹಾರಿ ಅನ್ನೋ ಮಾನವಾಕೃತಿ ಅಲ್ಲಿ ನಿಂತೇ ಇಲ್ಲ ಎಂಬಂತೆ ತಲೆ ತಗ್ಗಿಸಿ ತನ್ನ ಕೆಲಸಕಾರ್ಯಗಳಲ್ಲಿ ಮಗ್ನನಾದ. ಯಾವ ಕೋನದಲ್ಲಿ ನೋಡಿದರೂ ಹುರುಳಿಲ್ಲದ ಈ ವಾದವನ್ನು ಲೆಕ್ಕಪತ್ರ ಅಧಿಕಾರಿಯ ಕಂಚಿನ ಕಂಠದಿಂದ ಕೇಳಿ ಲಾಲ್ ಬಿಹಾರಿಗೆ ನಿಜವಾಗಿಯೂ ಪೇಚಾಟಕ್ಕಿಟ್ಟುಕೊಂಡಿತು. 

“ನಾನಿನ್ನೂ ಜೀವಂತವಾಗಿದ್ದೇನೆ ಕಣ್ರೀ'' ಅನ್ನುವುದನ್ನು ಜಗತ್ತಿಗೆ ಸಾರಲು ಮುಂದೆ ಲಾಲ್-ಬಿಹಾರಿ ಸಾಹೇಬ್ರು ಏನೇನು ಮಾಡಬೇಕಾಯಿತು ಅನ್ನುವುದೇ ಒಂದು ದೊಡ್ಡ ಕಥೆ!

*************

ಹಾಗಿದ್ದರೆ ಕಥೆ ಶುರುವಾಗಿದ್ದು ಎಲ್ಲಿಂದ? 

ಖಲೀದಾಬಾದ್ ನಲ್ಲಿ ಲಾಲ್ ಬಿಹಾರಿಗೆ ಪಿತ್ರಾರ್ಜಿತವಾಗಿ ಬರಲಿರುವ ಒಂದು ಎಕರೆಗೂ ಕಡಿಮೆ ವಿಸ್ತೀರ್ಣದ ಜಮೀನೊಂದಿತ್ತು. ಆದರೆ ಲಾಲ್ ಬಿಹಾರಿಯ ದೂರದ ಸಹೋದರನೊಬ್ಬ ಈ ಜಮೀನನ್ನು ಲಪಟಾಯಿಸುವ ಸಲುವಾಗಿ ರಿಜಿಸ್ಟ್ರಿ ಆಫೀಸಿಗೆ ಹೋಗಿ, ಸರ್ಕಾರಿ ಆಫೀಸಿನ ಅಧಿಕಾರಿಗಳಿಗೆ ಜುಜುಬಿ ಲಂಚ ತಿನ್ನಿಸಿ ಲಾಲ್ ಬಿಹಾರಿ ಸತ್ತಿದ್ದಾನೆ ಅಂತ ಸರ್ಕಾರಿ ದಾಖಲಾತಿಗಳಲ್ಲಿ ನಮೂದಿಸಿದ್ದ. ಅಷ್ಟೇ ಅಲ್ಲದೆ, ಲಾಲ್ ಬಿಹಾರಿ ಸತ್ತ ಕಾರಣದಿಂದಲೂ, ಈ ಜಮೀನಿಗೆ ಇನ್ಯಾರೂ ದಿಕ್ಕಿಲ್ಲದಿದ್ದುದರಿಂದಲೂ, ಮೃತವ್ಯಕ್ತಿಯ ಹತ್ತಿರದ ಸಂಬಂಧಿಯೆಂದು ದಾಖಲೆಗಳನ್ನು ಮಾಡಿಸಿಕೊಂಡು ಜಮೀನನ್ನು ಲಪಟಾಯಿಸಿದ್ದ. ಬ್ಯಾಂಕ್ ಲೋನಿಗೆಂದು ಕಾಗದ ಪತ್ರಗಳನ್ನು ತಯಾರಿ ಮಾಡಬೇಕಾಗಿದ್ದ ಸಮಯದಲ್ಲಿ ಲಾಲ್ ಬಿಹಾರಿಗೆ ಈ ಆಘಾತಕಾರಿ ವಿಷಯ ತಿಳಿದು ಬಂದಿತ್ತು. ತಿಳಿದು ಇನ್ನು ಮಾಡುವುದಾದರೂ ಏನು? ಇನ್ನೇನಿದ್ದರೂ ತನ್ನ ಜೀವಂತಿಕೆಯನ್ನು ಮೊದಲು ಪ್ರಮಾಣೀಕರಿಸಿ ತೋರಿಸಬೇಕಿತ್ತು. ಈ ಮೂಲಕ ಲಾಲ್ ಬಿಹಾರೀ ಎಂಬ ಉತ್ತರಪ್ರದೇಶದ ಯುವಕನೊಬ್ಬನ ವಿಚಿತ್ರವಾದ ಕೇಸು ಆರಂಭವಾಯಿತು. ಜುಜುಬಿ ಮೊತ್ತದ ಲಂಚವನ್ನು ಕೊಟ್ಟು ತನ್ನ ಜೇಬನ್ನು ತುಂಬಿಸಿಕೊಂಡ ಸಂಬಂಧಿಯೋರ್ವನ ಈ ಕೆಟ್ಟ ಕುತಂತ್ರದ ತಪ್ಪಿನಿಂದಾಗಿ, `ತಾನು ಇನ್ನೂ ಜೀವಂತವಾಗಿದ್ದೇನೆ' ಎಂದು ಸಾಧಿಸಬೇಕಾದ ಸಂದಿಗ್ಧಕ್ಕೆ ಸಿಲುಕಿಕೊಂಡು ಲಾಲ್ ಬಿಹಾರಿಯ ಮುಂದಿನ ಹದಿನೇಳು ವರ್ಷಗಳು ಹಳ್ಳ ಹಿಡಿದುಹೋದವು.  

ಮೊದಲ ಹೆಜ್ಜೆಯಾಗಿ ಲಾಯರೊಬ್ಬರನ್ನು ಹಿಡಿದು ಜೀವಂತಿಕೆಯ ವಾದ(?)ವನ್ನು ನ್ಯಾಯಾಲಯದಲ್ಲಿ ಪ್ರಮಾಣಿಸಿ ತೋರಿಸಬೇಕಿತ್ತು. ಒಂದೆರಡು ವಕೀಲರನ್ನು ಸಂಪರ್ಕಿಸಿದ ಲಾಲ್ ಬಿಹಾರಿಗೆ ಅಂಥಾ ಆಶ್ವಾಸನೆಯೇನೂ ಸಿಗಲಿಲ್ಲ. “ಅಯ್ಯೋ ಇದಕ್ಕೆಲ್ಲಾ ಕೋರ್ಟು-ಕಛೇರಿ ಅಂತ ಅಲೆದಾಡುವುದೇ? ಹಲವು ವರ್ಷಗಳಷ್ಟು ಸಾಗಬಹುದು ಈ ಕೇಸು'', ಎಂದು ಶುರುವಾಗುವ ಮುನ್ನವೇ ಷರಾ ಬರೆದು ವಕೀಲರುಗಳು ಕೈಚೆಲ್ಲಿದರು. ದುರದೃಷ್ಟವಶಾತ್ ಈ ವಿಷಯ ಬಾಯಿಂದ ಬಾಯಿಗೆ ಗಾಳಿಮಾತಾಗಿ ಹರಡಿ ಲಾಲ್ ಬಿಹಾರಿ ತನ್ನ ಹಳ್ಳಿಯಲ್ಲಿ ಒಂದು ಹಾಸ್ಯದ ವಸ್ತುವಾಗಿ ಹೋಗಿದ್ದ. ಲಾಲ್ ಬಿಹಾರಿಯನ್ನು ಕಂಡಾಗಲೆಲ್ಲಾ “ಹೋ… ಭೂತ ಬಂದೈತೆ ನೋಡು'' ಎಂದು ವ್ಯಂಗ್ಯವಾಡುವ ಜನಗಳು ಅಲ್ಲಲ್ಲಿ ಹುಟ್ಟಿಕೊಂಡರು. “ಸತ್ತವ ಬಂದ'', ಎಂದೆಲ್ಲಾ ಬೀದಿಬದಿಯಲ್ಲಿ ಬೀಡಿಸೇದುತ್ತಾ ಕಾಲಹರಣ ಮಾಡುವ ಹುಡುಗರು ಪಬ್ಲಿಕ್ಕಾಗಿಯೇ ಲಾಲ್ ಬಿಹಾರಿಯನ್ನು ಗೋಳುಹೊಯ್ದುಕೊಳ್ಳಲಾರಂಭಿಸಿದರು. ಸುತ್ತಮುತ್ತಲಿನ ಜನರ ಲೇವಡಿಯನ್ನು ಕೇಳಿ, ಕೇಳಿ, ಸಹಿಸಿಕೊಂಡು ಲಾಲ್ ಬಿಹಾರಿ ರೋಸಿ ಹೋಗಿದ್ದ. ಈ ಸಮಸ್ಯೆಗೊಂದು ಪರಿಹಾರವನ್ನು ಹುಡುಕಲೇಬೇಕಿತ್ತು. 

ಒಂದು ಪರಿಹಾರ ಕಂಡುಕೊಳ್ಳುವ ಸಲುವಾಗಿ ಶುರುವಾದ ಲಾಲ್ ಬಿಹಾರಿಯ ಸಂಶೋಧನೆ, ಓಡಾಟಗಳು ಇನ್ನೊಂದು ಕಟುಸತ್ಯಕ್ಕೆ ಅಚ್ಚರಿಯೆಂಬಂತೆ ಬೆಳಕು ಹಿಡಿದವು. ಉತ್ತರಪ್ರದೇಶದ ಆಜಂಗಢ್ ಜಿಲ್ಲೆಯೊಂದರಲ್ಲೇ ಈ ಮಾದರಿಯ ಪ್ರಕರಣಗಳು ಬರೋಬ್ಬರಿ ನೂರಕ್ಕೆ ಸಮೀಪವಿರುವುದು ತಿಳಿದು ಬಂತು. ಬಾಡಿಗೆ ಹಂತಕನೊಬ್ಬನಿಗೆ ಸುಪಾರಿ ಕೊಟ್ಟು ಜಮೀನಿನ ಮಾಲೀಕನೊಬ್ಬನನ್ನು ರಹಸ್ಯವಾಗಿ ಕೊಂದು ಭೂಮಿಯನ್ನು ಲಪಟಾಯಿಸುವುದಕ್ಕಿಂತಲೂ, ತತ್ಸಂಬಂಧಿ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಕೈ ಬಿಸಿ ಮಾಡಿ ಕಾನೂನಿನ ರಾಜಮಾರ್ಗದ ಮೂಲಕವೇ ಜಮೀನುಗಳನ್ನು ಲಪಟಾಯಿಸುತ್ತಿರುವವರ ಸಂಖ್ಯೆ ಸದ್ದಿಲ್ಲದೆ ಬೆಳೆಯುತ್ತಿತ್ತು. `ಸತ್ತವ'ರೆಂದು ದಾಖಲೆಗಳಲ್ಲಿ ನಮೂದಿಸಲ್ಪಟ್ಟಿದ್ದ ಹಲವು ಜನರು, ನಿಜವಾಗಿಯೂ ಆಗಬಹುದಾದ ಈ ಭೂ-ಸಂಬಂಧಿ ಕೊಲೆಗಳ ಭೀತಿಯಿಂದ ನ್ಯಾಯದೇವತೆಯ ಬಾಗಿಲನ್ನೇ ತಟ್ಟಿರಲಿಲ್ಲ. ಈ ವರ್ಗದ ಜನ `ಸರ್ಕಾರಿ ದಾಖಲೆಗಳಲ್ಲಿ ಬದುಕಿದ್ದು, ನೈಜವಾಗಿ ಹೆಣವಾಗುವುದರ' ಬದಲು `ಸರ್ಕಾರಿ ದಾಖಲೆಗಳಲ್ಲಿ ಹೆಣವಾಗಿ, ನೈಜವಾಗಿ ಬದುಕಿರುವುದೇ ಲೇಸೆಂದು' ಮನಗಂಡು ತುಟಿಪಿಟಕ್ಕೆನ್ನಲಿಲ್ಲ. ಒಂದೆರಡು ಎಕರೆಯಷ್ಟು ಬೆರಳೆಣಿಕೆಯ ವಿಸ್ತೀರ್ಣದ ಜಮೀನುಗಳಲ್ಲೂ ಇಂಥಾ ಗೋಲ್-ಮಾಲ್ ಗಳು ನಡೆಯುತ್ತಿದ್ದವು ಎಂಬುದು ವಿಚಿತ್ರ ಆದರೂ ನಿಜ. ಈ ಲಾಲ್ ಬಿಹಾರಿಯ ಪ್ರಕರಣವನ್ನೇ ತೆಗೆದುಕೊಳ್ಳಿ. ಈ ಪ್ರಕರಣದ ಕೇಂದ್ರ ಬಿಂದುವಾಗಿದ್ದ ವಿವಾದಿತ ಜಮೀನಿನ ವಿಸ್ತೀರ್ಣ ಒಂದು ಎಕರೆಗೂ ಕಮ್ಮಿ.  

ಮುಂದೆ 1980 ರಲ್ಲಿ ಹಿತೈಷಿಯೊಬ್ಬರ ಸಲಹೆಯಂತೆ “ಈಗಾಗಲೇ ಸತ್ತಿರೋದಂತೂ ನಿಜ. ಸತ್ತವನಾಗಿಯೇ ನೀನ್ಯಾಕೆ ಹೋರಾಟ ಮಾಡಬಾರದು?'' ಎಂಬ ಸಲಹೆಯಂತೆ ಲಾಲ್ ಬಿಹಾರಿಯ ಹೋರಾಟದ ಹಾದಿ ಶುರುವಾಗುತ್ತದೆ. ಅಂದಿನಿಂದ ಲಾಲ್ ಬಿಹಾರಿ ತನ್ನ ತರಹೇವಾರಿ ವಿಧಾನಗಳೊಂದಿಗೆ ಜನರ ಗಮನವನ್ನು ತನ್ನ ಮತ್ತು ತನ್ನ ಪ್ರಕರಣದ ಕಡೆಗೆ ಸೆಳೆಯಲು ಯತ್ನಿಸತೊಡಗುತ್ತಾರೆ. ಲಾಲ್ ಬಿಹಾರಿ ತನ್ನ ಹೆಸರಿನ ಹಿಂದೆ `ಮೃತಕ್' ಎಂಬ ಲೇಬಲ್ ಅಂಟಿಸುತ್ತಾರೆ. ಹಿಂದಿ ಭಾಷೆಯಲ್ಲಿ `ಮೃತಕ್' ಅಂದರೆ `ಸತ್ತವನು' ಎಂಬ ಅರ್ಥವಿದೆ. ಹೋದಹೋದಲ್ಲೆಲ್ಲಾ `ಮೃತಕ್ ಲಾಲ್ ಬಿಹಾರಿ' ಎಂದು ಕರೆಸಿಕೊಳ್ಳುವುದಷ್ಟೇ ಅಲ್ಲದೆ ಅದೇ ನಾಮಧಾಯದ ಹಸ್ತಾಕ್ಷರವನ್ನೂ ಮಾಡತೊಡಗುತ್ತಾರೆ. ಮುಂದೆ ಮೃತಕ್ ಲಾಲ್ ಬಿಹಾರಿಯ ನೇತೃತ್ವದಲ್ಲಿ `ಮೃತಕ್ ಸಂಘ್' (ಸತ್ತವರ ಸಂಘ) ಕೂಡ ಸ್ಥಾಪನೆಯಾಯಿತು. ಉತ್ತರಪ್ರದೇಶವಷ್ಟೇ ಅಲ್ಲದೆ ಇತರ ರಾಜ್ಯಗಳಿಂದಲೂ ಸದಸ್ಯರನ್ನು ಹೊಂದಿರುವ ಈ ಸಂಘ `ಸತ್ತಿದ್ದಾರೆ' ಎಂದು ಘೋಷಿಸಲಾದ ಹಲವು ಜನರನ್ನು `ಜೀವಂತವಾಗಿದ್ದಾರೆ' ಎಂದು ಕಾನೂನಿನ ಪ್ರಕಾರ ಸಾಬೀತುಪಡಿಸಲು ಯಶಸ್ವಿಯಾಗಿದೆಯಂತೆ. ಏನೇ ಆದರೂ ಈ ಮಾದರಿಯ ಪ್ರಕರಣಗಳಲ್ಲಿ ಸಹಾಯ, ಅಭಿಪ್ರಾಯಗಳನ್ನು ಕೇಳಿಕೊಂಡು ಲಾಲ್ ಬಿಹಾರಿಯವರ ಬಾಗಿಲು ತಟ್ಟಿದವರು ದೇಶಾದ್ಯಂತ ಬಹಳಷ್ಟಿದ್ದಾರೆ. 

ಜನರ ಗಮನವನ್ನು ತನ್ನೆಡೆಗೆ ಸೆಳೆಯುವ ಲಾಲ್ ಬಿಹಾರಿಯವರ ಕರಾಮತ್ತು ಅಲ್ಲಿಗೇ ನಿಲ್ಲಲಿಲ್ಲ. ತನ್ನ ಜಮೀನನ್ನು ಲಪಟಾಯಿಸಿದ ಸಂಬಂಧಿಯೊಬ್ಬನ ಪುಟ್ಟ ಮಗುವನ್ನು ಅಪಹರಿಸಿ ತನ್ನ ಮನೆಯಲ್ಲಿರಿಸಿಕೊಂಡರು. ಪೋಲೀಸರೊಂದಿಗೆ ಕಾಲು ಕೆರೆದು ಜಗಳಕ್ಕೆ ಹೋದರು. ಹೋದ ಕೋರ್ಟುಗಳಲ್ಲೆಲ್ಲಾ ನ್ಯಾಯಾಧೀಶರಿಗೆ ಮಾತಲ್ಲೇ ಮಂಗಳಾರತಿಯನ್ನು ಮಾಡಿದರು. ಪೋಲೀಸಪ್ಪನೊಬ್ಬನಿಗೆ ಲಂಚ ಕೊಟ್ಟು “ನನ್ನನ್ನು ಒಳಗೆ ಹಾಕಪ್ಪಾ'' ಅಂದರು. ಇವನ್ನೆಲ್ಲಾ ಮಾಡಿ ಜೈಲು ಸೇರುವುದು, ಆ ಮೂಲಕ ಜೈಲು ಸಿಬ್ಬಂದಿಗಳ ಪ್ರಮಾಣಪತ್ರಗಳ ದಾಖಲೆಯನ್ನು ತೋರಿಸಿ `ಈ ವ್ಯಕ್ತಿ ದಾಂಧಲೆ ಮಾಡಿ ಜೈಲಿಗೆ ಹೋಗಿದ್ದಾನೆ. ಅಂದರೆ ಜೀವಂತವಾಗೇ ಇದ್ದಾನೆ ಎಂದು ತೋರಿಸುವುದು' ಇವರ ಯೋಜನೆಯಾಗಿತ್ತು. ದುರಾದೃಷ್ಟವಶಾತ್ ಈ ಉಪಾಯ ಅಷ್ಟೇನೂ ಪರಿಣಾಮವನ್ನು ಬೀರಲಿಲ್ಲ. ಮಗುವಿನ ಅಪಹರಣದ ಪ್ರಕರಣವಂತೂ ಸ್ಥಳೀಯ ಪತ್ರಿಕೆಯಾದ `ಸ್ವತಂತ್ರ ಭಾರತ್' ನಲ್ಲಿ ಪ್ರಕಟವಾಗಿ ಬಿಸಿಬಿಸಿ ಸುದ್ದಿಯಾಗಿತ್ತು. ಅಪಹರಣದ ಬಳಿಕ ತನ್ನ ವಿರುದ್ಧ ಪೋಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದರ್ಜಾಗುತ್ತದೆ ಎಂದು ಆಶಾಭಾವದಿಂದ ಕಾಯುತ್ತಿದ್ದ ಲಾಲ್ ಬಿಹಾರಿಯವರ ಉಪಾಯಕ್ಕೆ ಅವರ ಸಂಬಂಧಿಗಳು ತಣ್ಣೀರೆರಚಿದ್ದರು. ಲಾಲ್ ಬಿಹಾರಿಗಿಂತಲೂ ಹತ್ತುಪಟ್ಟು ಚಾಣಾಕ್ಷರಾಗಿದ್ದ ಅವರ ಸಂಬಂಧಿಗಳು ಯಾವ ಕಂಪ್ಲೇಂಟುಗಳ ಸಹಾಯವೇ ಇಲ್ಲದೆ ಉಪಾಯವಾಗಿ ಮಗುವನ್ನು ಬಿಡಿಸಿಕೊಂಡು ಹೋಗಿ ಲಾಲ್ ಬಿಹಾರಿಯವರ ಪ್ಲಾನ್ ಅನ್ನು ಬುಡಮೇಲು ಮಾಡಿದರು. ಮುಂದೆ ಪ್ರಕಟಿತ ಮಾಧ್ಯಮ ವರದಿಗೆ ಪೂರಕವಾಗಿ ಲಕ್ನೋ ಅಸೆಂಬ್ಲಿಯಲ್ಲಿ ಈ ಪ್ರಕರಣದ ಬಗ್ಗೆ ಚರ್ಚೆಯೂ ಆಯಿತು. ಇದರಿಂದ ಉತ್ತೇಜಿತರಾದ ಲಾಲ್ ಬಿಹಾರಿ ಲಕ್ನೋ ಅಸೆಂಬ್ಲಿಯ ಹೊರಗಡೆ ಧರಣಿ ಆರಂಭಿಸಿದರು. ಆದರೆ ತನ್ನಂತೆಯೇ ಧರಣಿ ಕುಳಿತ ಇತರ ಕೆಲವು ಚಿಕ್ಕಪುಟ್ಟ ಗುಂಪುಗಳನ್ನು ಕಂಡಾಗ ಇಲ್ಲೂ ಯಶಸ್ಸು ಸಿಗುವುದಿಲ್ಲ ಎಂಬುದು ಅವರಿಗೆ ಖಾತ್ರಿಯಾಯಿತು. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಲಾಲ್ ಬಿಹಾರಿ ತನ್ನ ಹಳ್ಳಿಗೆ ಮರಳಿದರು. 

ಆದರೆ 1986 ರಲ್ಲಿ ಮರಳಿ ಲಕ್ನೋ ಗೆ ಬಂದ ಲಾಲ್ ಬಿಹಾರಿಯವರ ಕೈಯಲ್ಲಿ ಘೋಷಣೆಯ ಕರಪತ್ರಗಳು ಮಾತ್ರವಲ್ಲದೆ ಸ್ಥಳೀಯ ನಾಯಕರೊಬ್ಬರಿಂದ ದೊರಕಿಸಲ್ಪಟ್ಟಿದ್ದ ಅಸೆಂಬ್ಲಿಯ ವಿಸಿಟರ್ಸ್ ಪಾಸ್ ಕೂಡ ಇತ್ತು. ಅನಾಯಾಸವಾಗಿ ತುಂಬಿದ ಅಸೆಂಬ್ಲಿಯ ಸಭೆಯೊಳಕ್ಕೆ ನುಗ್ಗಿದ ಲಾಲ್ ಬಿಹಾರಿ, ಚರ್ಚಾ ಅವಧಿ ಇನ್ನೂ ನಡೆಯುತ್ತಿರುವಂತೆಯೇ “ಮುಝೇ ಝಿಂದಾ ಕರೋ… ಮುಝೇ ಝಿಂದಾ ಕರೋ… (ನನ್ನನ್ನು ಜೀವಿತನಾಗಿ ಮಾಡಿ)'' ಎಂದು ಮುದ್ರಿತವಾಗಿದ್ದ ತನ್ನ ಘೋಷಣಾ ಕರಪತ್ರಗಳನ್ನು ಸಭೆಯ ತುಂಬಾ ಚೆಲ್ಲಾಡಿದರು. ತಕ್ಷಣವೇ ಸ್ಥಳಕ್ಕೆ ನುಗ್ಗಿದ ಅಸೆಂಬ್ಲಿಯ ಮಾರ್ಷಲ್ ಗಳು ಘೋಷಣೆಯನ್ನು ಕೂಗುತ್ತಿದ್ದ ಲಾಲ್ ಬಿಹಾರಿಯವರನ್ನು ಕೆಲವು ಘಂಟೆಗಳ ಕಾಲ ಜೈಲಿಗೆ ತಳ್ಳಬೇಕಾಯಿತು. ಹೀಗೆ ಈ ಪ್ರಕರಣದ ಪಟಾಕಿ ಅಸೆಂಬ್ಲಿಯಲ್ಲಿ ಮತ್ತೊಮ್ಮೆ ಚರ್ಚೆಯಾಗಿ ಅಷ್ಟೇ ಬೇಗ ಠುಸ್ ಆಯಿತು. ಇಷ್ಟಕ್ಕೇ ನಿಲ್ಲದ ಲಾಲ್ ಬಿಹಾರಿ “ನಾನು ಸತ್ತಿದ್ದೇನಲ್ಲವೇ? ನನ್ನ ಪತ್ನಿಗೆ ವಿಧವೆಯರಿಗೆ ಕೊಡಲ್ಪಡುವ ಪರಿಹಾರಧನವನ್ನು ಕೊಡಿ'' ಎಂದು ಮಾಧ್ಯಮದಲ್ಲಿ ಕೂಗಾಡಿದರು. 1988 ರಲ್ಲಿ ಮಾಜಿ ಪ್ರಧಾನಿ ವಿ.ಪಿ ಸಿಂಗ್ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಅಲಹಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿ ಸರ್ಕಾರಕ್ಕೇ ಸಡ್ಡು ಹೊಡೆದು, ಸಾವಿದೈನೂರಕ್ಕೂ ಹೆಚ್ಚು ಮತವನ್ನೂ ಪಡೆದರು. ಚುನಾವಣೆಯಲ್ಲಿ ಸೋತಿದ್ದಲ್ಲದೆ, ಇದ್ದ ಒಂದು ಮನೆಯೂ ಈ ಚುನಾವಣೆಯಲ್ಲಿ ಕೈಜಾರಿಹೋಯಿತು. ಮುಂದೆ 1989 ರಲ್ಲಿ ಉತ್ತರಪ್ರದೇಶದ ಅಮೇಥಿ ಕ್ಷೇತ್ರದಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ವಿರುದ್ಧ ಚುನಾವಣೆಗೆ ನಿಲ್ಲಲು ನಾಮಪತ್ರವನ್ನು ಸಲ್ಲಿಸುವ ಮೂಲಕವೂ ಸುದ್ದಿ ಮಾಡಿ ಸರ್ಕಾರವೆಂಬ ವ್ಯವಸ್ಥೆಯ ಎಡಬಿಡಂಗಿತನವನ್ನು ಪ್ರಶ್ನಿಸಿದರು. ಅಂತೂ 1994 ರ ಜೂನ್ ತಿಂಗಳಲ್ಲಿ ಈ ಎಲ್ಲಾ ಹಾಸ್ಯಾಸ್ಪದ ಡ್ರಾಮಾಗಳಿಂದ ತಮ್ಮ ಮುಖಕ್ಕೆ ಮಸಿ ಬಳಿದುಕೊಂಡಿದ್ದ ಇಲಾಖೆಗಳು “ಲಾಲ್ ಬಿಹಾರಿ ಒಬ್ಬ ಜೀವಂತ ವ್ಯಕ್ತಿ'' ಎಂಬ ಆದೇಶದ ಪ್ರಮಾಣಪತ್ರವನ್ನು ಮಂಜೂರು ಮಾಡಿದವು. ಸಾಯದೇನೇ ಪುನರ್ಜನ್ಮದ ಭಾಗ್ಯ! ಲಾಲ್ ಬಿಹಾರಿಯವರ ಜಮೀನನ್ನು ಅಕ್ರಮವಾಗಿ ಸ್ವಾಧೀನ ಮಾಡಿಕೊಂಡ ಆ ಸಂಬಂಧಿ ಬಳಿಕ ತಪ್ಪೊಪ್ಪಿಕೊಂಡು ಅವರ ಕ್ಷಮೆ ಕೇಳಿದನಂತೆ. ಜುಲೈ 30, 1977 ರಲ್ಲಿ ತಮ್ಮ ವಕೀಲ ಕೆ.ಕೆ. ಪಾಲ್ ರಿಂದ ಸಲ್ಲಿಸಲ್ಪಟ್ಟಿದ್ದ ಲಾಲ್ ಬಿಹಾರಿಯವರ ಪ್ರಕರಣದ ಪೆಟಿಷನ್ ಗೆ ಹದಿನೇಳು ವರ್ಷಗಳ ಬಳಿಕ ಜಯ ದೊರಕಿತ್ತು.   

ಲಾಲ್ ಬಿಹಾರಿಯವರ ಪ್ರಕರಣ ನ್ಯಾಯಾಂಗದ ನಿದ್ದೆಗೆಡಿಸಿದ್ದೂ ಸುಳ್ಳಲ್ಲ. 1999 ರಲ್ಲಿ ಮಾಧ್ಯಮ ವರದಿಯೊಂದನ್ನಾಧರಿಸಿ ಉತ್ತರಪ್ರದೇಶದ ಹೈಕೋರ್ಟು ಈ ಬಗ್ಗೆ ತನಿಖೆಯನ್ನು ನಡೆಸಲು ಸರ್ಕಾರಕ್ಕೆ ಸೂಚನೆ ಕೊಟ್ಟಿತು. ತನ್ಮೂಲಕ ಮತ್ತೆ ಸುದ್ದಿಯಾದ ಈ ಪ್ರಕರಣ ಈ ಮಾದರಿಯ ಮತ್ತಷ್ಟು ಪ್ರಕರಣಗಳಿಗೆ ಹೊಸ ಜೀವವನ್ನು ತಂದುಕೊಟ್ಟಿತು. ಮರುವರ್ಷವೇ ಇಂಥಾ ವಿಲಕ್ಷಣವಾದ ಪ್ರಕರಣಗಳ ಗಂಭೀರತೆಯನ್ನು ಅರಿತ ಹೈಕೋರ್ಟು ಮಾನವ ಹಕ್ಕುಗಳ ಆಯೋಗವನ್ನೂ ಅಖಾಡಕ್ಕೆ ತಂದಿರಿಸಿತು. ಮುಂದೆ 2005 ರಲ್ಲಿ ತನ್ನ ಹದಿನೇಳು ವರ್ಷಗಳ ಹೋರಾಟಕ್ಕೆ ಪರಿಹಾರರೂಪವಾಗಿ ಇಪ್ಪತ್ತೈದು ಕೋಟಿ ರೂಪಾಯಿಗಳ ಮೊತ್ತವನ್ನು ಆಗ್ರಹಿಸಿ ರಿಟ್ ಅರ್ಜಿಯನ್ನು ಸಲ್ಲಿಸುವ ಮುಖಾಂತರ ಲಾಲ್ ಬಿಹಾರಿ ಉತ್ತರಪ್ರದೇಶ ಸರ್ಕಾರವನ್ನು ಮತ್ತೊಮ್ಮೆ ಮುಜುಗರಕ್ಕೀಡುಮಾಡಿದರು. ಉತ್ತರಪ್ರದೇಶದ ಸರ್ಕಾರವಂತೂ ಈ ಪ್ರಕರಣದ ವಿಚಾರಣೆಯನ್ನು ರಿಟ್ ಅರ್ಜಿಯನ್ನಾಧರಿಸಿ ಮಾಡುವುದು ನಾಲಾಯಕ್ಕೆಂದು ವಾದಿಸಿ, ನ್ಯಾಯಾಲಯದಿಂದ ತಿರಸ್ಕøತವಾಗಿ, ನಿರ್ದಯವಾಗಿ ಮುಖಕೆಡಿಸಿಕೊಂಡಿತು. ಬರೋಬ್ಬರಿ ಹತ್ತುವರ್ಷಗಳ ಬಳಿಕವೂ ಈ ಪ್ರಕರಣ, ಪರಿಹಾರ ಧನ, ರಿಟ್ ಅರ್ಜಿಗಳ ಒಗಟುಗಳು ಸಂಪೂರ್ಣವಾಗಿ ತಾರ್ಕಿಕ ಅಂತ್ಯವನ್ನು ಕಾಣದಾಗಿದೆ.          

2003 ರಲ್ಲಿ ಲಾಲ್ ಬಿಹಾರಿಯವರು ತಮ್ಮ ಈ ಅಪರೂಪದ ಪ್ರಕರಣದಿಂದಾಗಿ “ಇಗ್-ನೊಬೆಲ್'' ಪ್ರಶಸ್ತಿಗೆ ಭಾಜನರಾದರು. ಮೃತ ವ್ಯಕ್ತಿಯೆಂದು ಘೋಷಿಸಿದ ಬಳಿಕವೂ ಸಕ್ರಿಯವಾಗಿ ಜೀವನವನ್ನು ನಡೆಸಿದ್ದಕ್ಕಾಗಿ, ಸರ್ಕಾರದಿಂದ ಮೃತವ್ಯಕ್ತಿಯೆಂದು ದಾಖಲಿಸಲ್ಪಟ್ಟು ಅದೇ ಸರ್ಕಾರದ ವಿರುದ್ಧ ಯುದ್ಧ ಸಾರಿದ್ದಕ್ಕಾಗಿ ಮತ್ತು `ಸತ್ತವರ ಸಂಘ'ದ ಸ್ಥಾಪನೆಗಾಗಿ ಈ ಪುರಸ್ಕಾರವನ್ನು ಲಾಲ್ ಬಿಹಾರಿಯವರಿಗೆ ನೀಡಲಾಗಿದೆ ಎಂದು “ಇಗ್-ನೊಬೆಲ್'' ಪ್ರತಿಷ್ಠಾನವು ಅಧಿಕೃತವಾಗಿ ಘೋಷಿಸಿತು. ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿಯ ಸ್ಯಾಂಡರ್ಸ್ ಥಿಯೇಟರಿನಲ್ಲಿ ವರ್ಷಂಪ್ರತಿ ಕೊಡಲ್ಪಡುವ ಈ “ಇಗ್-ನೊಬೆಲ್'' ಪ್ರಶಸ್ತಿಯದೇ ಇನ್ನೊಂದು ಕಥೆಯಿದೆ. “ಇಗ್-ನೊಬೆಲ್'' ಸಂಸ್ಥೆ ಹೇಳುವ ಪ್ರಕಾರ `ಜನರನ್ನು ಮೊದಲು ನಗಿಸುವ ಮತ್ತು ನಂತರ ಚಿಂತನೆಗೀಡುಮಾಡುವ ಸಂಶೋಧನೆ ಮತ್ತು ಕಾರ್ಯಸಾಧನೆ'ಗಳಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 1991 ರಲ್ಲಿ ಮಾರ್ಕ್ ಅಬ್ರಹಾಮ್ ರಿಂದ ಆರಂಭಿಸಲ್ಪಟ್ಟ ಈ ಪ್ರಶಸ್ತಿಯನ್ನು ಭೌತಶಾಸ್ತ್ರ, ಸಾಹಿತ್ಯ, ಜೀವಶಾಸ್ತ್ರ, ವಿಶ್ವಶಾಂತಿ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ಸಾಧನೆಯನ್ನು ಮಾಡಿದ ಅಪರೂಪದ ಸಾಧಕರಿಗೆ ಪ್ರತಿವರ್ಷವೂ ಸಪ್ಟೆಂಬರ್ ತಿಂಗಳಿನಲ್ಲಿ ಕೊಡಲಾಗುತ್ತಿದೆ. ಆದರೆ ಪ್ರಶಸ್ತಿಯನ್ನು ಕೊಡಲು ನೊಬೆಲ್ ಪ್ರಶಸ್ತಿಯನ್ನು ಪಡೆದ ಸಾಧಕರನ್ನೇ ಆಹ್ವಾನಿಸುವುದು ಇಲ್ಲಿಯ ವಿಶೇಷತೆ. ಸಮಾರಂಭ ನಡೆಯುತ್ತಿರುವಾಗಲೇ ವೇದಿಕೆಗೆ ಕಾಗದದ ವಿಮಾನಗಳನ್ನು ಮಾಡಿ, ಎಸೆದು ಮಜಾ ನೋಡುವುದು ಇಲ್ಲಿಯ ಪರಂಪರೆಗಳಲ್ಲೊಂದಂತೆ. ಅಂದಹಾಗೆ 2013 ರಲ್ಲಿ ವಿಶ್ವಶಾಂತಿ ವಿಭಾಗದ “ಇಗ್-ನೊಬೆಲ್'' ಪುರಸ್ಕಾರವನ್ನು ಬೆಲಾರಸ್ ದೇಶದ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೋ ರವರಿಗೆ “ಚಪ್ಪಾಳೆ ಹೊಡೆಯುವುದನ್ನು ಕಾನೂನುಬದ್ಧವಾಗಿ ನಿಷೇಧಿಸಿದ ಕಾರಣಕ್ಕಾಗಿ'' ಮತ್ತು ಬೆಲಾರಸ್ ಸ್ಟೇಟ್ ಪೋಲೀಸ್ ವಿಭಾಗಕ್ಕೆ “ಚಪ್ಪಾಳೆ ಹೊಡೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಮಹಾಕಾರ್ಯಕ್ಕಾಗಿ'' ನೀಡಲಾಯಿತು. ಸ್ಯಾಂಪಲ್ಲಿಗೊಂದು ಇರಲಿ ಅಂತ ಈ ಉದಾಹರಣೆಯನ್ನು ಓದುಗರಿಗಾಗಿ ಕೊಟ್ಟದ್ದಷ್ಟೇ. ಇವೆಲ್ಲದರ ಮಧ್ಯೆಯೂ ಸರ್ ಆಂದ್ರೆ ಗೀಮ್ ಎಂಬ ಬ್ರಿಟಿಷ್ ವಿಜ್ಞಾನಿ ಭೌತಶಾಸ್ತ್ರ ವಿಭಾಗದಲ್ಲಿ “ಇಗ್-ನೊಬೆಲ್'' ಮತ್ತು “ನೊಬೆಲ್'' ಎರಡೂ ಪುರಸ್ಕಾರಗಳನ್ನು 2000 ಮತ್ತು 2010 ರಲ್ಲಿ ಕ್ರಮವಾಗಿ ತನ್ನ ಮುಡಿಗೇರಿಸಿಕೊಂಡು ಅಚ್ಚರಿ ಮೂಡಿಸಿದ್ದಂತೂ ಸತ್ಯ.    

ಈ ಲೇಖನವು ತಮಾಷೆಯಾಗಿ ಓದಿಸಿಕೊಂಡು ಹೋಗುವುದು ಎಷ್ಟು ಸತ್ಯವೋ, ಎಲ್ಲೋ ಒಂದು ಕಡೆ ಸಮಾಜದ ಮತ್ತು ಸಂಪೂರ್ಣ ವ್ಯವಸ್ಥೆಯೊಂದರ ಭಯಾನಕ ಮುಖವನ್ನು ತೆರೆದಿಡುವುದೂ ಅಷ್ಟೇ ಸತ್ಯ. ದೆಹಲಿಯಲ್ಲಿ ವಾಸವಾಗಿದ್ದ ದಿನಗಳಲ್ಲಿ ಉತ್ತರಪ್ರದೇಶದ ಸರ್ಕಾರಿ ಆಫೀಸುಗಳಲ್ಲಿ ನೆಲದ ಮಹಿಮೆಯೆಂಬಂತೆ ಬೇರೂರಿರುವ ಭ್ರಷ್ಟಾಚಾರವನ್ನು ಹತ್ತಿರದಿಂದ ನಾನು ಕಂಡಿದ್ದೇನೆ. ಉತ್ತರಪ್ರದೇಶದ ಸರ್ಕಾರಿ ಇಮಾರತ್ತುಗಳಲ್ಲಿ ಚಪರಾಸಿಯಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳವರೆಗೂ `ಚಾಯ್-ಪಾನಿ' ಹೆಸರಲ್ಲಿ ಮುಕ್ತವಾಗಿ ಲಂಚ ಕೇಳುವ ಸರ್ಕಾರಿ ಕುಳಗಳನ್ನು ನಾನು ನೋಡಿದ್ದೇನೆ. ದಿನವಿಡೀ ಸಿನಿಮೀಯ ಶೈಲಿಯಲ್ಲಿ ಪಾನ್ ತಿನ್ನುತ್ತಾ, ಆಫೀಸುಗಳ ಮೂಲೆಮೂಲೆಗಳನ್ನು ತಮ್ಮ ಕಾರಂಜಿ ಸಿಡಿಸಿ ಕೆಂಪು ಮಾಡುತ್ತಾ, ಬೇಸಿಗೆಯಲ್ಲಿ ದುಬಾರಿ ಏರ್-ಕಂಡೀಷನರ್ ಹವೆಯನ್ನು ಆಸ್ವಾದಿಸುತ್ತಾ, ಚಳಿಗಾಲದಲ್ಲಿ ಮಧ್ಯಾಹ್ನದ ಹನ್ನೆರಡಾದರೂ ಹೀಟರ್ ಆನ್ ಮಾಡಿ ಕಡಲೇಕಾಯಿಯನ್ನು ಮೆಲ್ಲುತ್ತಾ, ಟಿಪಕಲ್ `ಬಾಬು' ಸ್ಟೈಲಿನಲ್ಲಿ ಇವರುಗಳು ಸಲ್ಲಿಸುತ್ತಿರುವ ಸೇವೆ ದೇವರಿಗೇ ಪ್ರೀತಿ. 

ಕಣ್ಣಿಗೆ ಕಾಣುವ ಸೂರ್ಯ, ಚಂದ್ರರಷ್ಟೇ ಸತ್ಯವಾಗಿದ್ದ ತನ್ನ `ಐಡೆಂಟಿಟಿ'ಯನ್ನು ಸಾಬೀತುಪಡಿಸಿಕೊಳ್ಳಲು ಲಾಲ್ ಬಿಹಾರಿಯೆಂಬ ಅನಕ್ಷರಸ್ಥ ರೈತನೊಬ್ಬ ಕೋರ್ಟು-ಕಛೇರಿಗಳೆಂದು ಅಲೆಯುತ್ತಾ ಅದೆಷ್ಟು ಚಪ್ಪಲಿಗಳನ್ನು ಸವೆಸಿರಬಹುದು, ಧರಣಿ-ವಿಚಾರಣೆ-ಸಾಕ್ಷಿಗಳೆಂದು ಅದೆಷ್ಟು ಬಾರಿ ತನ್ನ ಗಂಟಲನ್ನು ಹರಿದುಕೊಂಡಿರಬಹುದು! ಈ ಭ್ರಷ್ಟ ಸಾಗರದ ಆಳದ ಭಯಾನಕತೆ ಇಳಿದವನಿಗಷ್ಟೇ ಗೊತ್ತು. ತಿಂಗಳುಗಳ ಮಟ್ಟಿಗೆ ನಿಂತು ಹೋದ ಪಿಂಚಣೆಯ ಬೆನ್ನು ಬಿದ್ದು, ಬೆಂದು ಬೇಸತ್ತು ಹೋಗಿರುವ ಹಿರಿಯ ನಾಗರಿಕರೊಬ್ಬರನ್ನು ಕೇಳಿ ನೋಡಿ. ಅಂಗೈಯಗಲ ಗಾತ್ರದ ಸ್ವಂತ ಜಮೀನೊಂದನ್ನು ಸಕ್ರಮವಾಗಿ ಹೊಂದಿದ್ದರೂ ಅದರ ದಾಖಲಾತಿಯನ್ನು ನವೀಕರಣಗೊಳಿಸಲು ಕಾಗದಪತ್ರಗಳನ್ನು ಹಿಡಿದು ಹಲವು ಆಫೀಸುಗಳಲ್ಲಿ ಶಥಪಥ ತಿರುಗುವ ಹಳ್ಳಿಯ ರೈತನೊಬ್ಬನನ್ನು ಮಾತನಾಡಿಸಿ ನೋಡಿ. ಎಲ್ಲಾ ಅಗತ್ಯ ದಾಖಲಾತಿಗಳನ್ನು ಹೊಂದಿದ್ದರೂ, ಪೋಲೀಸ್ ವೆರಿಫಿಕೇಷನ್ನು ಎಂಬ ಹೆಸರಿನಡಿಯಲ್ಲಿ ಉದ್ಯೋಗನಿಮಿತ್ತದ ಪಾಸ್ ಪೋರ್ಟನ್ನು ಸ್ಥಳೀಯ ಪೋಲೀಸ್ ಠಾಣೆಯಿಂದ ಪಡೆಯಲು ಹಲವು ವಾರಗಳಿಂದ ಕಾದು, ಸುಸ್ತಾಗಿರುವ ಒಬ್ಬ ಉದ್ಯೋಗಾಕಾಂಕ್ಷಿಯನ್ನು ಕೇಳಿ ನೋಡಿ. ಕಳೆದುಕೊಂಡ ಬೆಳೆಗೋ, ಭೂಮಿಗೋ ಪರಿಹಾರ ಕೊಡುವೆನೆಂದು ಆಶ್ವಾಸನೆಗಳನ್ನು ನೀಡಿ ಮಾಯವಾದ, ಅದರ ನಿರೀಕ್ಷೆಯಲ್ಲೇ ದಿನದೂಡುತ್ತಿರುವ ಕುಟುಂಬಗಳನ್ನು ಮಾತನಾಡಿಸಿ ನೋಡಿ. 

ಸತ್ತಿದ್ದು ಯಾರು, ಏನು, ಮನುಷ್ಯನೋ, ವ್ಯವಸ್ಥೆಯೋ ಎಂದೆಲ್ಲಾ ಕೇಳಬಾರದು. ಯಾಕೆಂದರೆ ಪೇಪರಿನಲ್ಲೋ, ನೆಲದ ಮೇಲೋ ಎಂಬ ಹೊಸ ಪ್ರಶ್ನೆಯೊಂದು ಕಾಡತೊಡಗುತ್ತದೆ. 


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಸತ್ತವನ ಶಿಕಾಯತ್ತುಗಳು : ಪ್ರಸಾದ್ ಕೆ.”

  1. savitri says:

    ಹದಗೆಟ್ಟು ಹಳ್ಳ ಹಿಡಿದ ವ್ಯವಸ್ಥೆ ಜನ ಸಾಮಾನ್ಯರನ್ನು ನಿತ್ಯವೂ ಸಾಯಿಸುತ್ತಿದೆ… ಚಿಂತನಾತ್ಮಕ ಲೇಖನ…

Leave a Reply