ಮರಳೆಂಬ ಚಿನ್ನದ ಪುಡಿ: ಅಖಿಲೇಶ್ ಚಿಪ್ಪಳಿ


ಈ ಅಂಕಣವನ್ನು ನಿಯಮಿತವಾಗಿ ಓದುತ್ತಿರುವವರಿಗೆ ಈ ಹಿಂದೆ ಬರೆದ “ಕರಿಯನ ಕತೆ” ನೆನಪಿರಬಹುದು. ಅದೊಂದು ನಾಯಿಮರಿಯನ್ನು ತಂದು ಸಾಕಿದ್ದೆ. ಮನೆಯೆದುರಿನ ನುಣ್ಣನೆಯ ರಸ್ತೆಯಲ್ಲಿ ನಸುಕಿನ ಹೊತ್ತು ಅಕ್ರಮ ಮರಳು ಲಾರಿಗಳು ಅತ್ಯಂತ ವೇಗವಾಗಿ ಸಾಗುತ್ತವೆ. ಒಂದು ದಿನ ಮರಳಿನ ಲಾರಿಗೆ ಸಿಕ್ಕುವುದರಿಂದ ಸ್ವಲ್ಪದಲ್ಲಿ ಕರಿಯ ಪಾರಾದ. ಅವತ್ತೇ ಲೆಕ್ಕ ಹಾಕಿ, ಅನಂತಪುರದ ಒಬ್ಬರಿಗೆ ಕರಿಯನನ್ನು ದಾಟಿಸಿ ಬಂದೆ. ಲಾರಿ ಮಾಫಿಯಾ ಯಾವ ಪರಿ ಬೆಳೆದಿದೆಯೆಂದರೆ, ಅದರ ಲೆಕ್ಕಾಚಾರ, ಅನೈತಿಕ ಸಾಮಾನ್ಯರಿಗೆ ನಿಲುಕುವುದೇ ಇಲ್ಲ. ಬೆಂಗಳೂರಿನಲ್ಲಿ ಉಳುಮೆ ಮಾಡುವ ನೆಲದ ಮಣ್ಣನ್ನೇ ತೊಳೆದು ಮರಳಿನ ರೂಪ ಕೊಟ್ಟು ಮಾರುತ್ತಾರೆ. ಸಾಗರಕ್ಕೆ ಹೆಗ್ಗೋಡು, ಹೊಸನಗರ ಭಾಗಗಳಿಂದ ಮರಳು ಪೂರೈಕೆಯಾಗುತ್ತದೆ. ಒಂದು ಲೋಡು ಮರಳು ಎಂದರೆ ಇವತ್ತು ಕಾಲು ಲಕ್ಷ ರೂಪಾಯಿ. ಮರಳನ್ನು ಅಕ್ರಮವಾಗಿ ಸಾಗಿಸಲು ಮರಳು ಮಾಫಿಯಾ ಮೊಬೈಲ್ ತಂತ್ರಜ್ಞಾನವನ್ನು ಅತಿಯಾಗಿ ನೆಚ್ಚಿಕೊಂಡಿದೆ. ಮರಳು ಮಾಫಿಯಾದ ಹುಡುಗರು ಮೊಬೈಕಿನಲ್ಲಿ ಮುಂದೆ ಸಾಗುತ್ತಾರೆ. ಎಲ್ಲಾದರೂ ಪೋಲೀಸ್, ಫಾರೆಸ್ಟ್ ಅಥವಾ ಕಂದಾಯ ಇಲಾಖೆಯ ಜೀಪುಗಳು ಮರಳು ಲಾರಿಯನ್ನು ಹಿಡಿಯಲು ಹೊಂಚು ಹಾಕಿದ್ದರೆ, ಮೊಬೈಕ್ ಹುಡುಗರು ತಮ್ಮ ಮೊಬೈಲ್‍ನಿಂದ ತಕ್ಷಣ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತಾರೆ. ಲಾರಿ ಅಲ್ಲೇ ನಿಲ್ಲುತ್ತದೆ ಅಥವಾ ಅಡ್ಡದಾರಿ ಹಿಡಿದು ಸಾಗರ ಸೇರುತ್ತದೆ.

ಮುಖ್ಯ ಕತೆ ಇದಲ್ಲ. ಸುಮಾರು 30-40 ವರ್ಷಗಳ ಹಿಂದೆ ಚಂಬಲ್ ಕಣಿವೆಯ ಹೆಸರು ಕೇಳಿದರೆ ಸಾಕು, ಜನಸಾಮಾನ್ಯರು ನಿದ್ಧೆಯಲ್ಲೂ ಬೆಚ್ಚಿಬೀಳುವ ಪರಿಸ್ಥಿತಿ ಇತ್ತು. ಮಧ್ಯಪ್ರದೇಶದ ಚಂಬಲ್ ಕಣಿವೆಯನ್ನು ಡಕಾಯಿತರು ಅಕ್ಷರಷ: ಆಳುತ್ತಿದ್ದ ಕಾಲವದು. ಫೂಲನ್ ದೇವಿಯ ಹೆಸರು ಈಗಿನ ತಲೆಮಾರಿಗೆ ಗೊತ್ತಿಲ್ಲವಾದರೂ, ಡಕಾಯತಿ ರಾಣಿಯಾಗಿ ಮೆರೆದು, ಶರಣಾಗಿ, ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬಂದಳಾಕೆ. ದೌರ್ಜನ್ಯಕ್ಕೊಳಗಾದ ಅಬಲೆಯೊಬ್ಬಳು ಡಕಾಯತಿ ರಾಣಿಯಾಗಿ, ಸಂಸತ್ತು ಪ್ರವೇಶ ಮಾಡಿ, ದುರಂತ ಅಂತ್ಯ ಕಂಡ ಫೂಲನ್ ಹೆಸರಿನಲ್ಲಿ ಸಿನಿಮಾಗಳು ಬಂದು ಹೋಗಿವೆ. ಅದೇ ಚಂಬಲ್ ಕಣಿವೆಯನ್ನು ಇದೀಗ ಆಳುತ್ತಿರುವವರು ಪೇಟೆಯ ಸಂಪನ್ನರೆಂದು ಕರೆಸಿಕೊಳ್ಳುವ ಭೂಮಾಫಿಯಾ! ಕೊಂಚ ವಿವರವಾಗಿ ನೋಡೋಣ.

ರಾಷ್ಟ್ರೀಯ ಚಂಬಲ್ ವನ್ಯಧಾಮವಿರುವುದು ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಸರಹದ್ದುಗಳಲ್ಲಿ. ಒಟ್ಟು 435 ಕಿ.ಮಿ. ಉದ್ದ ಹರಿಯುವ ಚಂಬಲ್ ನದಿಯು ಜಗತ್ತಿನ ಅತ್ಯಪರೂಪದ ‘ಗರಿಯಾಲ್’ ಎಂಬ ಮೊಸಳೆ ಪ್ರಬೇಧಗಳ ತವರು. ಏಷ್ಯಾ ಖಂಡದ ಕೆಲವು ಭಾಗಗಳಲ್ಲಿ ಕಂಡು ಬರುವ ಈ ಅಪರೂಪದ ಜೀವಿ ಅಳಿವಿನಂಚಿನಲ್ಲಿದೆ ಎಂದು ಜಾಗತಿಕ ಪರಿಸರ ಸಂಘಟನೆಗಳ ವರದಿಗಳು ಹೇಳುತ್ತವೆ. ಬರೀ ಸಿಹಿನೀರಿನ ಮೀನುಗಳನ್ನು ಮಾತ್ರ ತಿಂದು ಬದುಕುವ ಈ ಗರಿಯಾಲ್ ಮೊಸಳೆಗಳ ಸಂಖ್ಯೆ ಬರೀ 400. ಅಲ್ಲದೆ ಅಪರೂಪದ ಮೂರು ಜಾತಿಯ ಆಮೆ ಪ್ರಬೇಧ ಹಾಗೂ ಇಂಡಿಯನ್ ಸ್ಕಿಮ್ಮರ್ ಎಂಬ ಅಪರೂಪದ ಪಕ್ಷಿ ಪ್ರಬೇಧವೂ ಇಲ್ಲಿ. ಈ ಮೂರು ವನ್ಯಜೀವಿಗಳ ಉಳಿವಿಗೆ ಚಂಬಲ್ ನದಿ ತೀರದ ಮರಳು ಅನಿವಾರ್ಯ. ಇವು ಮೊಟ್ಟೆಯಿಟ್ಟು ಮರಿ ಮಾಡುವುದು ಮರಳಿನಲ್ಲೇ. ನಿಯಮಗಳ ಪ್ರಕಾರ ರಾಷ್ಟ್ರೀಯ ವನ್ಯಧಾಮ ಪ್ರದೇಶದಲ್ಲಿ ಯಾವುದೇ ತರಹದ ಇತರೆ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಅಲ್ಲಿರುವ ಯಾವುದೇ ವಸ್ತುಗಳನ್ನು ಆ ಸ್ಥಳದಿಂದ ಹೊರಗೆ ಸಾಗಿಸುವಂತಿಲ್ಲ. ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ, ನದಿ ತೀರದ ಮರಳನ್ನು ತೆಗೆಯುವುದಾದಲ್ಲಿ ಕೇಂದ್ರ ಪರಿಸರ ಇಲಾಖೆಯ ಪರವಾನಿಗೆ ಕಡ್ಡಾಯ. ಇಷ್ಟೆಲ್ಲಾ ಬಿಗಿ ಕಾನೂನುಗಳಿದ್ದರೂ ಚಂಬಲ್ ನದಿಯ ಮರಳನ್ನು ಅಲ್ಲಿನ ಭೂಮಾಫಿಯ ಎಗ್ಗಿಲ್ಲದೆ ಎತ್ತಿ ಸಾಗಿಸುತ್ತಿದೆ. 

ದಿನಾಂಕ 06/03/2016ರಂದು ನರೇಂದ್ರ ಕುಮಾರ್ ಶರ್ಮ ಎಂಬಾ ಅರಣ್ಯ ಇಲಾಖೆಯ ಗಾರ್ಡ್ ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಮರಳಿನ ಟ್ರ್ಯಾಕ್ಟರನ್ನು ತಡೆದು ನಿಲ್ಲಿಸುವ ಪ್ರಯತ್ನದಲ್ಲಿದ್ದಾಗ, ದುಷ್ಕರ್ಮಿಗಳು ಟ್ರ್ಯಾಕ್ಟರನ್ನು ಗಾರ್ಡ್ ಮೇಲೆ ಹತ್ತಿಸಿ ಸಾಯಿಸಿದರು. ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ ಗಾರ್ಡ್ ದುರ್ಮರಣಕ್ಕೆ ಈಡಾದರು. ಮರಳು ಮಾಫಿಯಾಕ್ಕೆ ಇದೇನು ಮೊದಲ ಬಲಿಯಲ್ಲ. ಹೋದ ವರ್ಷ ಏಪ್ರಿಲ್‍ನಲ್ಲಿ ಧÀರ್ಮೇಂದ್ರ ಚೌವಾಣ್ ಎಂಬ ಪೋಲಿಸ್ ಪೇದೆಯನ್ನು 2009ರ ಬ್ಯಾಚಿನ ಐ.ಪಿ.ಎಸ್. ಅಧಿಕಾರಿ ನರೇಂದ್ರ ಕುಮಾರ್‍ರನ್ನು 2012ರಲ್ಲಿ ಬಲಿ ತೆಗೆದುಕೊಂಡ ಕರಾಳ ಇತಿಹಾಸವಿದೆ. ಕಳೆದ ಹದಿನೈದು ತಿಂಗಳಿಂದ 150 ಅಕ್ರಮ ಲಾರಿಯನ್ನು ಹಿಡಿದು ಮಟ್ಟ ಹಾಕಿದ ಸಾಹಸಿ ನರೇಂದ್ರ ಕುಮಾರ್ ಶರ್ಮ ದುರ್ಮರಣದಿಂದ ಅಲ್ಲಿನ ಅರಣ್ಯ ಇಲಾಖೆಯ ಸ್ಥೈರ್ಯವೆ ಉಡುಗಿ ಹೋಗಿದೆ. ಅದರಲ್ಲೂ 435 ಕಿ.ಮಿ. ಉದ್ದ ಹರಿಯುವ ಚಂಬಲ್ ನದಿಯ ರಕ್ಷಣೆಗೆ ಮಧ್ಯಪ್ರದೇಶದ ಸರ್ಕಾರವತಿಯಿಂದ 15 ಗಾರ್ಡ್, ರಾಜಾಸ್ಥಾನವತಿಯಿಂದ 17 ಉತ್ತರಪ್ರದೇಶವತಿಯಿಂದ 10 ಫಾರೆಸ್ಟ್ ಗಾರ್ಡ್‍ಗಳು ಮಾತ್ರ ಇದ್ದಾರೆ. ಹೀಗೆ ಸಿಬ್ಬಂದಿಯ ಕೊರತೆಯೂ ಮರಳು ಮಾಫಿಯಾ ವಿಜೃಂಭಿಸಲು ಕಾರಣವಾಗಿದೆ.

ಇಂಡಿಯನ್ ಸ್ಕಿಮ್ಮರ್ 

 ಗರಿಯಾಲ್ ಮೊಸಳೆ

ಉತ್ತರ ಭಾಗದ ಪವಿತ್ರ ನದಿ ಗಂಗೆಯಿಂದ ಹಿಡಿದು ದಕ್ಷಿಣ ಭಾರತದ ಪೆರಿಯಾರ್ ನದಿಯವರೆಗೂ ಹಾಗೂ ಪಶ್ಚಿಮದ ನರ್ಮದಾದಿಂದ ಹಿಡಿದು ಪೂರ್ವದ ಮಹಾನದಿಯವರೆಗೂ ಭಾರತದ ಯಾವ ಚಿಕ್ಕ ಅಥವಾ ದೊಡ್ಡ ನದಿಗಳು ಮರಳು ಮಾಫಿಯಾದಿಂದ ಹೊರತಾಗಿ ಉಳಿದಿಲ್ಲ. ಮರಳು ಮಾಫಿಯಾ ಎಷ್ಟು ಬಲಿಷ್ಠವಾಗಿದೆಯೆಂದರೆ 2013ರಲ್ಲಿ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದ 2009ರ ಬ್ಯಾಚಿನ ಐ.ಏ.ಎಸ್. ಅಧಿಕಾರಿ ದುರ್ಗಾಶಕ್ತಿ ನಾಗ್‍ಪಾಲ್ ಘಟನೆ. ದೆಹಲಿಯ ಹೊರವಲಯದಲ್ಲಿ ಉತ್ತರ ಪ್ರದೇಶಕ್ಕೆ ಸೇರಿದ ಗ್ರೇಟರ್ ನೋಯ್ಡಾದ ಪಕ್ಕದಲ್ಲೇ ಯಮುನೆ ಹರಿಯುತ್ತಾಳೆ. ಈ ಪ್ರದೇಶದಲ್ಲಿ ಯಾವುದೇ ಲಂಗು ಲಗಾಮಿಲ್ಲದೆ ಮರಳು ತೆಗೆಯಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲೇ ಬೇಕು ಎಂದು ನಿರ್ಧರಿಸಿದ ದುರ್ಗಾಶಕ್ತಿ, ಆರು ತಿಂಗಳಲ್ಲಿ ನೂರಾರು ಅಕ್ರಮ ಮರಳು ಲಾರಿಗಳನ್ನು ಹಿಡಿದು ಹಾಕುತ್ತಾರೆ. ಅಲ್ಲಿಯ ಸ್ಥಳೀಯ ನ್ಯಾಯಾಲಯದಲ್ಲಿ ನೂರಾರು ಕೇಸುಗಳು ದಾಖಲಾಗುತ್ತವೆ. ಮರಳು ಮಾಫಿಯಾದಿಂದ ಪದೇ ಪದೇ ಬಂದ ಬೆದರಿಕೆ ಕರೆಗಳಿಗೂ ಬಗ್ಗದ ದುರ್ಗಾಶಕ್ತಿ ನಾಗ್‍ಪಾಲ್‍ರನ್ನು ಅಲ್ಲಿನ ಸರ್ಕಾರ ಮಸೀದಿ ಗೋಡೆ ಕೆಡವಿದ ಸುಳ್ಳು ಆರೋಪವನ್ನು ಹೊರಿಸಿ, ಸಸ್ಪೆಂಡ್ ಮಾಡುತ್ತದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಅವರ ತಂದೆ ಮುಲಾಯಂ ಕೈವಾಡ ಇರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ದೇಶದ ಎಲ್ಲೆಡೆಯಿಂದ ಬಂದ ಛಿ. ಥೂಗಳು ಅಲ್ಲಿನ ಸರ್ಕಾರಕ್ಕೆ ಮುಖಭಂಗವನ್ನುಂಟು ಮಾಡುತ್ತದೆ. ಮತ್ತಿತರ ಐಎಎಸ್ ಅಧಿಕಾರಿಗಳ ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಸರ್ಕಾರ ಸಸ್ಪೆಂಡ್ ಆದೇಶವನ್ನು ವಾಪಾಸು ಪಡೆದು, ಅವರನ್ನು ಲಕ್ನೋದ ಬೋರ್ಡ್ ಆಫ್ ರೆವಿನ್ಯೂ ಎಂಬ ಯಾತಕ್ಕೂ ಕೆಲಸಕ್ಕೆ ಬಾರದ ಇಲಾಖೆಗೆ ವರ್ಗ ಮಾಡಿ ಕೈತೊಳೆದು ಕೊಳ್ಳುತ್ತದೆ. ವ್ಯವಸ್ಥೆ ಹೀಗೆ ನಿಷ್ಠಾವಂತ ಅಧಿಕಾರಿಯನ್ನು ಮೂಲೆಗೆ ಕೂರಿಸುವಲ್ಲಿ ಸಫಲವಾಗುತ್ತದೆ.

ಇದಕ್ಕಿಂತ ಘೋರವಾದ ಇನ್ನೊಂದು ಘಟನೆಯೆಂದರೆ, 19 ಜೂನ್ 2015ರಂದು ಬಾಲ್‍ಘಾಟ್ ಜಿಲ್ಲೆಯ ಉರ್ಮಿ ಎಂಬ ಊರಿಗೆ ಸ್ನೇಹಿತನ ಬೈಕಿನಲ್ಲಿ ಹೋಗುತ್ತಿದ್ದ ಸಂದೀಪ್ ಕೊಠಾರಿ ಎಂಬ ಪತ್ರಕರ್ತನನ್ನು ಮರಳು ಮಾಫಿಯಾ ಅಪಹರಿಸಿತು. ಮಾರನೇ ದಿನ ಸುಟ್ಟು ಕರಕಲಾದ ಆತನ ಹೆಣ ಮಹಾರಾಷ್ಟ್ರದ ವಾದ್ರ ಜಿಲ್ಲೆಯ ರೈಲು ಹಳಿಯ ಪಕ್ಕದಲ್ಲಿ ಬಿದ್ದಿತ್ತು. ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮ್ಯಾಂಗನೀಸ್ ಹಾಗೂ ಮರಳು ದಂಧೆಯ ಕುರಿತು ನಿರಂತರವಾಗಿ ನಯೀ ದುನಿಯಾ ಎಂಬ ಪತ್ರಿಕೆಗೆ ವರದಿ ಮಾಡುತ್ತಿದ್ದರು. ಈತನ ವರದಿಯಿಂದಾಗಿ ಅನೇಕ ಅಡಚಣೆಗಳನ್ನು ಅಲ್ಲಿನ ಮರಳು ಮಾಫಿಯಾ ಅನುಭವಿಸಬೇಕಾಯಿತು. ಇದರಿಂದ ಸಿಟ್ಟಿಗೆದ್ದ ಮಾಫಿಯಾ ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ ರಾಜಕೀಯಸ್ಥರು ಕೊಠಾರಿಯ ಮೇಲೆ ಅನೇಕ ಸುಳ್ಳು ಕೇಸುಗಳನ್ನು ದಾಖಲು ಮಾಡಿದರು. ಇದರಲ್ಲಿ ಮೂರು ಕೇಸುಗಳು ಮಾನಭಂಗಕ್ಕೆ ಸಂಬಂಧಿಸಿದವು. ಸೂಕ್ತ ಸಾಕ್ಷ್ಯವಿಲ್ಲದೆ ಈ ಮೂರು ಮಾನಭಂಗದ ಕೇಸುಗಳನ್ನು ಅಲ್ಲಿನ ನ್ಯಾಯಾಲಯ ವಜಾ ಮಾಡಿತು. ಒಂದು ಕೇಸಿನಲ್ಲಿ ಜಿಲ್ಲೆಯಿಂದಲೇ ಗಡಿಪಾರು ಮಾಡಲಾಯಿತು. ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದರೂ, ಸಂದೀಪ್ ಕೊಠಾರಿ ತನ್ನ ವರದಿಗಳನ್ನು ನಿಲ್ಲಿಸಲಿಲ್ಲ. ಕಡೆಗೂ ಬೇಸತ್ತ ಮಾಫಿಯಾ ಇವನನ್ನು ಬಲಿ ಪಡೆಯಿತು. ಈ ಸಂಬಂಧ ಅಲ್ಲಿನ ಪೋಲೀಸರು ಎರಡು ಜನರನ್ನು ಬಂಧಿಸಿದ್ದಾರೆ. ಇವೂ ಕೂಡ ಸೂಕ್ತ ಸಾಕ್ಷ್ಯವಿಲ್ಲದೆ ಸೊರಗುವ ಭೀತಿಯಿದೆ.

ಮರಳಿಗೆ ಈ ಪರಿ ಬೇಡಿಕೆ ಬರಲು ಕಾರಣವೆಂದರೆ ಅಂದಾದುಂಧಿ ಅಭಿವೃದ್ಧಿ ಹಾಗೂ ಭೂಮಾಫಿಯಾ. ಹಾಗಂತ ಮರಳು ತೆಗೆಯಲೇ ಬಾರದು ಎಂದು ವಾದ ಮಾಡಲು ಬರುವುದಿಲ್ಲ. ಮನೆ ಕಟ್ಟಲು ಮರಳು ಬೇಕೇ ಬೇಕು. ಮರಳುಗಾಡಿನ ಮರಳಾಗಲಿ ಅಥವಾ ಸಮುದ್ರದ ಮರಳಲಾಗಲಿ ಮನೆ ಕಟ್ಟಲು ಸೂಕ್ತವಲ್ಲ. ಈ ಎರಡೂ ಮರಳುಗಳು ಸಿಮೇಂಟಿನೊಂದಿಗೆ ಸರಿಯಾದ ರೀತಿಯಲ್ಲಿ ಬೆರೆಯುವುದಿಲ್ಲ. ಈ ಮರಳುಗಳಿಂದ ಕಟ್ಟಿದ ಮನೆಗಳು ಶಿಥಿಲವಾಗಿರುತ್ತವೆ ಹಾಗೂ ಅಪಾಯಕಾರಿ. ನಮ್ಮೆಲ್ಲಾ ಅಭಿವೃದ್ಧಿಗಳಿಗೆ, ಮನೆಗೆ ಮರಳು ಅನಿವಾರ್ಯ, ಹಾಗಂತ ಬೇಕಾಬಿಟ್ಟಿ ಮರಳನ್ನು ನದಿ ತೀರದಿಂದ ಎತ್ತುವುದು ಹಲವು ತರಹದ ಅನಾಹುತಕ್ಕೆ ಕಾರಣವಾಗುತ್ತದೆ. ನದಿ ಬತ್ತಿಹೋಗುವ, ಅಂತರ್ಜಲ ಮಟ್ಟ ಕುಸಿಯುವ, ಜೀವಿವೈವಿಧ್ಯ ನಾಶವಾಗುವ ಹೀಗೆ ಹತ್ತು-ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾದ ಮರಳು ನೀತಿ ಜಾರಿಯಾಗಿ ಅನುಷ್ಠಾನವಾಗುವವರೆಗೂ ಮೇಲೆ ಹೇಳಿದ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಧಿಕಾರಿಗಳು, ಪತ್ರಕರ್ತರು ಬಲಿಯಾಗುತ್ತಲೇ ಇರುತ್ತಾರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Dattatreyagh
Dattatreyagh
7 years ago

ಲೇಖನ ಸೂಕ್ತವಾಗಿದೆ

Akhilesh Chipli
Akhilesh Chipli
7 years ago

ಧನ್ಯವಾದಗಳು ದತ್ತಾತ್ರೇಯರವರೆ,

2
0
Would love your thoughts, please comment.x
()
x