ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ


೧. ಕುದುರೆ ವ್ಯಾಪಾರಿ
ಮಾರುಕಟ್ಟೆಯಲ್ಲಿ ಕುದುರೆ ವ್ಯಾಪಾರಿಯೊಬ್ಬ ತಾನು ಮಾರುತ್ತಿದ್ದ ಕುದುರೆಯ ಗುಣಗಾನ ಮಾಡುತ್ತಿದ್ದದ್ದನ್ನು ಕೇಳುತ್ತಾ ನಿಂತಿದ್ದ ನಜ಼ರುದ್ದೀನ್‌. “ಇಡೀ ಹಳ್ಳಿಯಲ್ಲಿ ಇರುವ ಕುದುರೆಗಳ ಪೈಕಿ ಅತ್ಯಂತ ಉತ್ಕೃಷ್ಟವಾದ್ದು ಇದು. ಇದು ಮಿಂಚಿನ ವೇಗದಲ್ಲಿ ಓಡುತ್ತದೆ. ಎಷ್ಟುಹೊತ್ತು ಓಡಿದರೂ ಸುಸ್ತಾಗುವುದೇ ಇಲ್ಲ. ನಿಜ ಹೇಳಬೇಕೆಂದರೆ, ಈಗ ನೀವು ಈ ಕುದುರೆಯನ್ನೇರಿ ಇಲ್ಲಿಂದ ಹೊರಟರೆ ಬೆಳಗ್ಗೆ ೫ ಗಂಟೆಯ ವೇಳೆಗೆ ಸಮರ್‌ಕಂಡ್‌ನಲ್ಲಿ ಇರುತ್ತೀರಿ.”
ತಕ್ಷಣ ನಜ಼ರುದ್ದೀನ್‌ ಪ್ರತಿಕ್ರಿಯಿಸಿದ: “ಅಯ್ಯೋ ದೇವರೇ! ಅಷ್ಟು ಬೆಳಗಿನ ಜಾವ ಸಮರ್‌ಕಂಡ್‌ ಸೇರಿ ಮಾಡಬೇಕಾದದ್ದು ಏನಿದೆ?”

****

೨. ಸುಳ್ಳುಗಾರ, ಉತ್ಪ್ರೇಕ್ಷಕ ನಜ಼ರುದ್ದೀನ್
ನಗರಾಧ್ಯಕ್ಷ: “ನಜ಼ರುದ್ದೀನ್‌ ನೀನೊಬ್ಬ ಸುಳ್ಳುಗಾರನಷ್ಟೇ ಅಲ್ಲ, ಯಾವುದನ್ನೇ ಆಗಲಿ ಉತ್ಪ್ರೇಕ್ಷಿಸಿ ಮಾತನಾಡುವವನು ಎಂಬುದಾಗಿ ಖ್ಯಾತನಾಗಿರುವೆ ಎಂಬುದಾಗಿ ತಿಳಿಯಿತು. ಹೆಚ್ಚು ಆಲೋಚಿಸದೆ ನನಗೊಂದು ಅಂಥ ಸುಳ್ಳು ಹೇಳಿದರೆ ನಿನಗೆ ೫೦ ದಿನಾರ್‌ ಬಹುಮಾನ ಕೊಡುತ್ತೇನೆ.”
ನಜ಼ರುದ್ದೀನ್‌: “ಐವತ್ತು ದಿನಾರ್ ಗಳೇ? ಈಗ ತಾನೇ ನೀವು ಒಂದುನೂರು ದಿನಾರ್‌ಗಳನ್ನು ಕೊಡುವುದಾಗಿ ಭರವಸೆ ನೀಡಿದ್ದಿರಲ್ಲವೇ?”

*****

೩. ನಜ಼ರುದ್ದೀನ್‌ನ ಆತ್ಮ
ನಜ಼ರುದ್ದೀನ್‌ ತನ್ನ ಪತ್ನಿಯನ್ನು ಬಹಳ ಪ್ರೀತಿಸುತ್ತಿದ್ದ. ಎಂದೇ, ಅವಳನ್ನು “ನನ್ನ ಅತ್ಮ” ಎಂಬುದಾಗಿ ಉಲ್ಲೇಖಿಸುತ್ತಿದ್ದ. ಇಂತಿರುವಾಗ ಒಂದು ರಾತ್ರಿ ದಂಪತಿಗಳು ಮಲಗಿ ನಿದ್ರಿಸುತ್ತಿದ್ದಾಗ ಸಾವಿನ ದೂತನೊಬ್ಬ ನಜ್ರುದ್ದೀನ್‌ನ ಸಮೀಪಕ್ಕೆ ಬಂದು ವನನ್ನು ಎಬ್ಬಿಸಿ ಹೇಳಿದ, “ನಾನು ನಿನ್ನ ಆತ್ಮವನ್ನು ಒಯ್ಯಲು ಬಂದಿದ್ದೇನೆ.” ತಕ್ಷಣ ನಜ಼ರುದ್ದೀನ್‌ ಪತ್ನಿಯತ್ತ ತಿರುಗಿ ಹೇಳಿದ, “ಏಳು, ಎದ್ದೇಳು. ನಿನಗಾಗಿ ಇಲ್ಲಿಗೆ ಯಾರೋ ಬಂದಿದ್ದಾರೆ!”

*****

೪. ನಜ಼ರುದ್ದೀನ್‌ ಕತ್ತೆಯನ್ನು ಹೂಳಿದ್ದು
ಒಂದು ದಿನ ನಜ಼ರುದ್ದೀನ್‌ನ ಪ್ರೀತಿಯ ಕತ್ತೆಯು ಸತ್ತು ಬಿದ್ದಿತು. ಬಲುದುಃಖಿತನಾದ ನಜ಼ರುದ್ದೀನ್‌ ಮನುಷ್ಯರನ್ನು ಹೂಳುವ ರೀತಿಯಲ್ಲಿಯೇ ಅದನ್ನೂ ಹೂಳಿದ. ತದನಂತರ ಸಮಾಧಿಯ ಸಮೀಪದಲ್ಲಿ ಕುಳಿತು ಅಳುತ್ತಿದ್ದಾಗ ‌ಆ ಮಾರ್ಗವಾಗಿ ಹೋಗುತ್ತಿದ್ದ ಒಬ್ಬ ಕೇಳಿದ, “ಇದು ಯಾರ ಸಮಾಧಿ?”
ಅದು ತನ್ನ ಕತ್ತೆಯದ್ದು ಎಂಬುದಾಗಿ ಹೇಳಲು ಸಂಕೋಚವಾದದ್ದರಿಂದ  ನಜ಼ರುದ್ದೀನ್‌ ಹೇಳಿದ, “ಇದು ಒಬ್ಬ ಮಹಾನ್‌ ಷೇಕ್‌ನ ಸಮಾಧಿ. ಆತ ನನಗೆ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಸಮಾಧಿಗೆ ಯಾರೂ ಬಂದು ಗೌರವ ಸಲ್ಲಿಸುತ್ತಿಲ್ಲ ಎಂಬುದಾಗಿ ಹೇಳಿದ. ಆದ್ದರಿಂದ ನಾನು ಇಲ್ಲಗೆ ಬಂದು ಅವನನನ್ನು ನೆನಪಿಸಿಕೊಂಡು ಗೌರವ ಸಲ್ಲಿಸುತ್ತಿದ್ದೇನೆ.”
ಷೇಕ್‌ನ ಸಮಾಧಿಯೊಂದು ಇರುವ ಕುರಿತಾಗಿ ಸುದ್ದಿ ಹರಡಿ ಜನ ಆ ಸಮಾಧಿಗೆ ಬಂದು ಗೌರವ ಸಲ್ಲಿಸಲಾರಂಭಿಸಿದರು. ಮುಂದೊಂದು ದಿನ ನಜ಼ರುದ್ದೀನ್‌ ತನ್ನ ಹೊಸ ಕತ್ತೆಯೊಂದಿಗೆ ಆ ಮಾರ್ಗವಾಗಿ ಎಲ್ಲಿಗೋ ಹೋಗುತ್ತಿದ್ದ. ತನ್ನ ಕತ್ತೆಯ ಸಮಾಧಿಯ ಹತ್ತಿರ ಅನೇಕರು ಇರುವುದನ್ನೂ ಪೂಜಾವೇದಿಕೆಯೊಂದು ನಿರ್ಮಾಣವಾಗಿರುವುದನ್ನೂ ಗಮನಿಸಿದ. 
ಅಲ್ಲಿ ಇದ್ದವರ ಪೈಕಿ ಒಬ್ಬನನನ್ನು ಕೇಳಿದ, “ಇಲ್ಲಿ ಏನು ನಡೆಯುತ್ತಿದೆ?”
ಅವನು ತಿಳಿಸಿದ, “ಒಬ್ಬ ಮಹಾನ್‌ ಷೇಕ್‌ನ ಸಮಾಧಿ ಇದು. ನಾವು ಅವನಿಗೆ ಗೌರವ ಸಲ್ಲಿಸುತ್ತಿದ್ದೇವೆ.”
ನಜ಼ರುದ್ದೀನ್‌ ಪ್ರತಿಕ್ರಿಯಿಸಿದ, “ಏನು ಷೇಕ್‌ನದ್ದೇ! ಇದು ನನ್ನ ಕತ್ತೆಯ ಸಮಾಧಿ. ಅದನ್ನು ಇಲ್ಲಿ ನಾನೇ ಸಮಾಧಿ ಮಾಡಿದ್ದು.”
ಇದನ್ನು ಕೇಳಿ ಅಲ್ಲಿದ್ದವರು ಕೋಪೋದ್ರಿಕ್ತರಾಗಿ ನಜ಼ರುದ್ದೀನ್‌ನನ್ನು ಮತೀಯ ಮುಖಂಡನೊಬ್ಬನ ಹತ್ತಿರ ಎಳೆದೊಯ್ದರು. ನಜ಼ರುದ್ದೀನ್‌ನ ಕೃತ್ಯವನ್ನು ಮತೀಯ ಅಪಚಾರ ಎಂಬುದಾಗಿ ಪರಿಗಣಿಸಿದ ಮತೀಯ ಮುಖಂಡ ಅವನಿಗೆ ಕೆಲವು ಚಡಿಯೇಟು ಕೊಡುವಂತೆ ಆದೇಶಿಸಿದ.
ಬಾಸುಂಡೆಗಳಿಂದ ಅಲಂಕೃತವಾದ ಬೆನ್ನಿನೊಂದಿಗೆ ನಜ಼ರುದ್ದೀನ್‌ ಇಂತು ಆಲೋಚಿಸಿದ, “ವಾ, ನನ್ನ ಕತ್ತೆಯ ಸಮಾಧಿಯನ್ನು ಒಬ್ಬ ಷೇಕ್‌ ನ ಸಮಾಧಿ ಎಂಬುದಾಗಿ ಜನರೆಲ್ಲರೂ ನಂಬಬೇಕಾದರೆ ನನ್ನ ಕತ್ತೆಯ ಆತ್ಮ ಒಂದು ಮಹಾನ್‌ ಆತ್ಮವೇ ಆಗಿದ್ದಿರಬೇಕು!”  

*****

೫. ಚರ್ಚೆ
ನಜ಼ರುದ್ದೀನ್‌ ತನ್ನ ಗೆಳೆಯರೊಂದಿಗೆ ಪಟ್ಟಣದ ಮುಖ್ಯ ಚೌಕದ ಅಂಚಿನಲ್ಲಿ ಒಂದು ಕಟ್ಟೆಯ ಮೇಲೆ ಕುಳಿತು ಹರಟುತ್ತಿದ್ದ. ನೋವನ ನಾವೆಗೆ ಆಲಿವ್‌ನ ಸಣ್ಣ ರೆಂಬೆಯನ್ನು ತಂದ ಪಾರಿವಾಳದ ಲಿಂಗ ಯಾವುದಿದ್ದಿರಬಹುದೆಂಬುದು ಅವರ ನಡುವಿನ ಚರ್ಚಾ ವಿಷಯವಾಗಿತ್ತು. 
ಚರ್ಚೆಯನ್ನು ಆಸಕ್ತಿಯಿಂದ ಮೌನವಾಗಿ ಕೇಳುತ್ತಿದ್ದ ನಜ಼ರುದ್ದೀನ್ ಕೊನೆಗೊಮ್ಮೆ ಹೇಳಿದ, “ಇದು ಬಹಳ ಸುಲಭವಾಗಿ ಉತ್ತರಿಸಬಹುದಾದ ಪ್ರಶ್ನೆ. ರೆಂಬೆಯನ್ನು ತಂದ ಪಾರಿವಾಳ ಗಂಡು ಎಂಬುದಾಗಿ ನಾನು ಖಚಿತವಾಗಿ ಹೇಳುತ್ತೇನೆ.”
ಒಬ್ಬ ಕೇಳಿದ, “ಅಷ್ಟು ಖಚಿತವಾಗಿ ಹೇಗೆ ಹೇಳುವೆ?”
ನಜ಼ರುದ್ದೀನ್‌ ವಿವರಿಸಿದ, “ಅಷ್ಟು ದೀರ್ಘ ಕಾಲ ಬಾಯಿ ಮುಚ್ಚಿಕೊಂಡಿರಲು ಯಾವ ಹೆಣ್ಣಿಗೂ ಸಾಧ್ಯವಿಲ್ಲ!”

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x