ಸುಬ್ಬೀ ಮದುವೆ: ಕೃಷ್ಣವೇಣಿ ಕಿದೂರ್

  
ಮಗಳನ್ನು  ಕರೆದುಕೊಂಡು  ರೈಲು  ಹತ್ತಿದ್ದ  ಭಟ್ಟರು  ಪ್ರಯಾಣದ ಉದ್ದಕ್ಕೂ  ಸುಬ್ಬಿ ಹತ್ತಿರ  ಒಂದೇಒಂದು  ಮಾತನ್ನೂ ಆಡಲಿಲ್ಲ.  ಅಪ್ಪನ  ದೂರ್ವಾಸಾವತಾರಕ್ಕೆ ಹೆದರಿ ಕೈಕಾಲು ಬಿಟ್ಟಿದ್ದ  ಅವಳು  ತೆಪ್ಪಗೆ  ಕುಸುಕುಸು  ಮಾಡುತ್ತ   ಮುಖ  ಊದಿಸಿಕೊಂಡೇ  ಕೂತಳು. ಎರ್ನಾಕುಲಂ   ನಿಲ್ದಾಣ  ಹತ್ತಿರವಾಗಿ ಇನ್ನೇನು  ಇಳಿಯುವ  ಹೊತ್ತು ಬಂತು ಅನ್ನುವಾಗ  ಭಟ್ಟರು  ಕೆಂಗಣ್ಣು  ಬಿಟ್ಟು  ಮಗಳತ್ತ  ದುರುಗುಟ್ಟಿದರು.
                       
" ಬಾಯಿ ಮುಚ್ಚಿಕೊಂಡು  ಮಾವ ಹೇಳಿದ ಹಾಗೆ  ಕೇಳಿದ್ರೆ ಸೈ. ಇಲ್ಲವಾದ್ರೆ  ನನ್ನ ಬೊಜ್ಜಕ್ಕೆ ವಾಪಸ್ ಮನೆಗೆ ಬಂದ್ರಾಯ್ತು.  ನಾ ಮಾತಿಗೆ  ತಪ್ಪುವವನಲ್ಲ ತಿಳ್ಕೋ"
                  
ಕಿಸ್ಕಾರ ಹೂವಿನ ಬಣ್ಣಕ್ಕೆ ತಿರುಗಿದ್ದ ಕಣ್ಣನ್ನು  ಒರೆಸಿಕೊಳ್ಳುತ್ತ  ಸುಬ್ಬಿ  ಅಪ್ಪನ ಹಿಂದೆ  ಹೋದಳು. ಅಲ್ಲಿ ಅವಳ ಸೋದರಮಾವ   ದೇವಸ್ಥಾನದ  ಪೂಜಾರ್ಥವಾಗಿ ನೆಲಸಿದವರು.   ಅವರ ಮನೆಗೆ ತಲಪಿ ಮಗಳನ್ನು ಅಲ್ಲಿ ಬಿಟ್ಟ  ಭಟ್ಟರು  ಊಟ ಮುಗಿಸಿದ್ದೇ  ಮತ್ತಿನ ರೈಲಿಗೆ  ಹಿಂದೆ ಹೊರಟರು.
                    
" ಗೋಪಣ್ಣಭಾವಾ,  ಯಾರದ್ರೂ  ಅರ್ಚಕ ಹುಡುಗನಿಗೆ ಕೊಟ್ಟು  ತಾಳಿ ಕಟ್ಟಿಸಿಬಿಡು.   ನನ್ನ ಕಣ್ಣು ತಪ್ಪಿಸಿ    ಯಾವ್ಯಾವನ ಹಿಂದೆ ಓಡಾಡಿದ  ಹೆಣ್ಣಿನ ಮೇಲೆ   ಮಗಳು ಅನ್ನೂ ಮೋಹ ಇಲ್ಲೆ.  ನಂಗಿಪ್ಪುದು ಎರಡು ಗಂಡುಮಕ್ಕ್ಳು  ಮಾತ್ರ ಅಂತ  ತಿಳ್ಕೊಂಡಾಯ್ತು.   ಈ ಪರದೇಸಿ  ಹೇಗೆ ಸತ್ತ್ರೂ ನಂಗೆ ಸೂತಕ ಇಲ್ಲೆ.  ಮದುವೆಗೆ ಒಪ್ಪದೆ ಹೋದರೆ  ಹೇಳು, ನಾವಿಬ್ಬ್ರೂ ಜೀವ ಮಡಕ್ಕೊಂಬವರಲ್ಲ.  ಯಂಗಳ  ಬೊಜ್ಜದ ವಡೆ ತಿಂಬುಲೆ  ಬರಲಿ. ನಾ ಅಪ್ಪನಲ್ಲ; ಅದು ನನ್ನ ಮಗಳಲ್ಲ."
              
"ಸರಿ ಭಾವಾ. ನಂಗೆ  ಗೊತ್ತಿರೂ ಒಂದೆರಡು  ಸಂಬಂಧ  ನೋಡ್ತೆ.  ನೀವು ಹೇಳಿದ ಹಂಗೆ  ಹದಿನೈದು ದಿನದ ಒಳಗೆ  ತಾಳಿ ಬಿಗಿಸಿ  ಕೈ ತೊಳ್ಕೊಳ್ತೆ"
              
ಸುಬ್ಬಿ  ಮೂಕವಾಗಿ  ರೋದಿಸಿ, ಉಪವಾಸ ಮಾಡಿದರೂ  ಕರುಣೆ ತೋರದೆ  ಗೋಪಣ್ಣಮಾವನೂ,  ವೇದತ್ತೆಯೂ ಹುಡುಗಿ  ನೋಡುವ ಏರ್ಪಾಡು  ಮಾಡಿದರು.  ಅಪ್ಪ  ಹೇಳಿದ ಹಾಗೆ ಮಾಡುವವರು  ಅನ್ನುವ ಸತ್ಯ ಗೊತ್ತಿದ್ದ ಸುಬ್ಬಿಗೆ  ಅವರ ಸಾವು ಬೇಕಿರಲಿಲ್ಲ. ರಣಮಳೆಯಲ್ಲಿ  ತೋಡಿನ   ಕೆಂಪು ಕೆಂಪು ನೀರಿನ ಬೆಳ್ಳದಲ್ಲಿ  ತೇಲಿಹೋಗುವ ತೆಂಗಿನಕಾಯಿ  ಹಿಡಿಯಲು ಹೋಗಿ  ಮಾರಿಬೆಳ್ಳದಲ್ಲಿ  ಕೊಚ್ಚಿಹೋದ  ತಮ್ಮ ಪ್ರೀತಿಯ ಅಕ್ಕ  ಸುಬ್ಬಕ್ಕನ ಹೆಸರನ್ನು  ಮುದ್ದಿನ ಮಗಳಿಗಿಟ್ಟು  ಸತ್ತ ಅಕ್ಕನೇ  ಪುನ ಹುಟ್ಟಿಬಂದಳೆಂದು  ಸಂಭ್ರಮಿಸಿ  ಮುದ್ದಿಸಿ ಸಾಕಿದ  ಅಪ್ಪನ ಜೀವಕ್ಕೆ  ಇನಿತು ನೋವು  ಆಗುವುದೂ  ಅವಳಿಗೆ  ಮನಸ್ಸಿಲ್ಲ.    ಇಂಜನೀರಿಂಗ್  ಮುಗಿಯದೆ ಮದುವೆ ಬೇಡ ಅಪ್ಪಾ ಎಂದಾಗ ಅಪ್ಪ ಒಪ್ಪಿ ಕಲಿತಾಗಲಿ  ಸುಬ್ಬೀ ಅಂದಿದ್ದರು.  ಆದರೆ  ಗೆಸ್ಟ್ ಲೆಕ್ಚರರ್ ಆಗಿ  ಬಂದ  ಮುರಳಿ  ಸುಬ್ಬಿಯ ಮುಗ್ಧ, ಮೋಹಕ  ಚೆಲುವಿಗೆ ಸೋತು  ಲವ್ ಸಾಂಗ್  ಹಾಡಿದಾಗ  ಸುಬ್ಬಿ  ಮರುಳಾಗಿ  ಕರಗಿದ್ದಳು.  ಅದೇಕೋ  ಆಗ ಅಪ್ಪನ ನೆನಪಾಗಿರಲಿಲ್ಲ.  ಕೂತರೆ ನಿಂತರೆ  ಎಲ್ಲೆಲ್ಲೂ  ಮೋಹನ ಮುರಳಿಯ  ಭವ್ಯ , ಸುಂದರ  ಆಕಾರವೇ  ಕಣ್ಣೆದುರೆ ಬರುತ್ತಿತ್ತು.   ನಾಲ್ಕಾರು ಬಾರಿ  ಮಂಗಳೂರಿನ  ಥಿಯೇಟರ್,  ಬಾವುಟಗುಡ್ಡೆ ಪಾರ್ಕ್,  ನೇತ್ರಾವತಿ ಕಡಲತೀರ,  ಪಣಂಬೂರು  ಬೀಚು,  ಉಳ್ಳಾಲದ  ಸೊಬಗು ಕಂಡು  ಪ್ರಪಂಚವಿಡೀ  ತಾವಿಬ್ಬರೇ  ಅಂತ ಕೈಕೈ ಹಿಡಿದು  ಸುತ್ತಾಡಿದಾಗ  ಸುತ್ತಲಿನ  ಜನ ಭಟ್ಟರಿಗೆ  ಸುದ್ದಿ ತಲಪಿಸಿ  ಕೃತಾರ್ಥರಾಗಿದ್ದರು . ತಮ್ಮ ಮುದ್ದಿನ ಸುಬ್ಬಿ ಉರುಫ್   ಸುಭಾಷಿಣಿಯ   ಲವ್  ಸ್ಟೋರಿ  ಕಂಡ  ಅವರು  ದೂರ್ವಾಸಾವತಾರ  ತಾಳಿ ನಿಂತ ಮೆಟ್ಟಿಗೇ  ಕಾಲೇಜು  ಬಿಡಿಸಿ  ತಂದು ಮನೆಯಲ್ಲಿ ನೂಕಿದ್ದರು.  ಮುರಳಿ ಮೋಹನನಿಗೆ  ಸುಬ್ಬಿಯ ದರ್ಶನವಿಲ್ಲ, ಫೋನು ಇಲ್ಲ,  ದನಿ ಕೇಳಲಿಲ್ಲ,  ಸುಬ್ಬೀ ಎಲ್ಲಿ ಹೋದೆಯೇ  ನನ್ನ ಅರಗಿಣೀ ಅಂತ  ಹುಡುಕಿ ಹುಡುಕಿ  ಸೋತು ಸುಣ್ಣವಾದ  ಅವನು  ಕೆಲಸ ಬಿಟ್ಟು  ಎತ್ತ ಹೋದ ಅನ್ನುವುದು ಯಾರಿಗೂ ಗೊತ್ತಿಲ್ಲ.  ಇತ್ತ ಸುಬ್ಬಿ   ಅತ್ತುಕರೆದರೆ   ಅತ್ತ ಮುರಳಿ   ಗಡ್ಡ, ಮೀಸೆ  ಉದ್ದುದ್ದಕ್ಕೆ ಬಿಟ್ಟು  ಮನೆ ದೇವರಾದ  ಮುರಳಿಕೃಷ್ಣನಿಗೆ  : ನಿನಗೆ ರಾಧೆ  ಇದ್ದ ಹಾಗೆ ನನಗೆ ಇದ್ದಳಲ್ಲೋ  ಸುಭಾಷಿಣಿ;    ನನ್ನ ಪಾಡು  ಕಾಣುವುದಿಲ್ವಾ ನಿನಗೆ?  ಹುಡುಕ್ಕೊಡೋ  ಅವಳನ್ನ"  ಅಂತ  ಗೋಳಾಡುವುದು  ಕೇಳಲಾಗದೆ  ಅವನಪ್ಪ  ತಮ್ಮ ಅಣ್ಣನ  ಮನೆಗೆ  ಕಳಿಸಿದರು.  ಬೇಗನೆ  ಒಬ್ಬ  ಚೆಲುವೆಯ ಜೊತೆ     ಮದುವೆ ಮಾಡಿದರೆ ಈ  ಹರೆಯದ ಹುಚ್ಚಾಟವೆಲ್ಲ  ನಿಂತುಹೋಗುತ್ತದೆ ಅಂತ  ಅವರ ಅಭಿಪ್ರಾಯ.
               
ಮೌನ ವ್ರತವಾಚರಿಸುತ್ತಿದ್ದ ಸುಬ್ಬಿಯನ್ನು  ಮಾತಾಡಿಸಲಾಗದೆ ಮಾವ  ಅವಳಪ್ಪನಿಗೆ  ಪೊದು(ಸಂಬಂಧ)  ಇದೆ, ಬನ್ನಿ ಅಂದ.  " "ನಾನು ಬರುವುದೇ!  ನಾ ಹೇಳಿದ  ಮಾತು ಕೇಳದವಳು  ನನ್ನ ಮಗಳಲ್ಲ. ಯಾವ ಕೋತಿಗೆ  ಕೊಟ್ಟು  ತಾಳಿ ಕಟ್ಟಿಸಿ  ಅದರ ಹಿಂದೆ ಅಟ್ಟಿದರೂ  ಯಾಕೆ ಎಂದು ನಾ ಕೇಳುವುದಿಲ್ಲ."  ಸರಿ.  ಗೋಪಣ್ಣ ಮಾವ  ಹುಡುಗನ   ಪೈಕಿಯವರನ್ನು  ಕನ್ಯೆ ನೋಡಲು  ಕರೆದರು.  ಅವರೂ  ಪಾಲಕ್ಕಾಡಿನ  ಕ್ಷೇತ್ರವೊಂದರ  ಮೇಲ್ ಶಾಂತಿಯವರು( ಅರ್ಚಕರು)  .  ಹೊಂದಾಣಿಕೆ  ಸರಿ ಹೋಯ್ತು.  ಸುಬ್ಬಿ ಇದೇ ಊರಿನ ಮಾಣಿಯ ಕೈಹಿಡಿದು  ಇಲ್ಲೇ  ಸೆಟಲ್  ಆಗಿಬಿಟ್ಟರೆ  ಅವಳ ಪತಿಗಾಗಲೀ, ನೂತನ ಸಂಬಂಧಿಕರಿಗಾಗಲೀ  ಅವಳ ಹಳೆಯ ಲವ್ವಿನ  ಬಗ್ಗೆ, ಮಾಜಿ ಪ್ರೇಮಿಯ ಬಗ್ಗೆ  ಕಿವಿಯೂದುವ  ಚಾಡಿಕೋರರ  ತಂಟೆ ತಕರಾರು  ಬಾರದು ಎಂದು ಮಾವ ಹಿಗ್ಗಿದರು.     ಬಂದರು ಹೆಣ್ಣು ನೋಡಲು.  ಹುಡುಗ   ಕಾಟಾಚಾರಕ್ಕೆ  ಬಂದವನ ಹಂಗೆ ಕುಂತಿದ್ದ.  ವಧು ಮತ್ತೇನು?  ಅವಳು  ಬಲಿ ಕೊಡುವುದಕ್ಕೆ ಕಟ್ಟುವ  ಗುಟ್ಟ  ಯಾವುದಾದರೇನು ಎಂದು   ಮುಖ ತಗ್ಗಿಸಿ  ಬಂದಳು.  ಹುಡುಗನ ಹಿರಿಯರಿಗೆ  ಕಲಿತ   ಹೆಣ್ಣಿನ  ಲಜ್ಜೆ, ಹಿರಿಯರೆದುರಿಗೆ ತಗ್ಗಿದ ತಲೆಯ  ಶೀಲ ಬಲು ಹಿಡಿಸಿತು. " ಮಾಣಿಗೆ ಹೆಣ್ಣಿನ ಕೈಲಿ  ಮಾತಾಡೂಕಿದ್ರೆ  ಮಾತಾಡಿಬಿಡಲಿ. ಈಗಿನ ಕಾಲ.  ಅದೆಲ್ಲ ಕಾಮನ್ನು"  ಅಂದರು.   "  ಬೇಡ"  ಒಂದೇ ಮಾತಿಗೆ ಉತ್ತರಿಸಿದ  ದನಿ ಕೇಳಿ   ಸುಬ್ಬಿ  ತಲೆ ಎತ್ತಿದಳು.  ಎದುರಿನ ಉದ್ದಾನುದ್ದದ ಗಡ್ಡ, ಪೊದೆ ಮೀಸೆಯ ಬೈರಾಗಿ ವೇಷದವ ತನ್ನ ಮುರಳಿಮೋಹನ!  !  ಕಣ್ಣುಜ್ಜಿಕೊಂಡು ಮತ್ತೆ ನೋಡಿದಳು. ಹೌದು!   ಅದು ಹೇಗೆ ಸಾಧ್ಯ?  ಎಲ್ಲಿಯ ಮಂಗಳೂರು; ಎತ್ತಣ  ಎರ್ನಾಕುಲಂ!   ಎರಡು ತಿಂಗಳಿಂದ  ಮೈ ಮನಕ್ಕೆ  ಹತ್ತಿದ  ಜಡತ್ವ  ಕೊಡವಿ ಬಿತ್ತು. ಆದರೂ ಅನುಮಾನ.  ತನ್ನ ದನಿ  ಕೇಳಲಿ ಒಮ್ಮೆ .  ಆಗಿನ ರಿಯಾಕ್ಷನ್  ನೋಡಬೇಕು.  ದನಿ ಎತ್ತಿ  "  ನಾನೊಮ್ಮೆ ಮಾತಾಡಬಹುದೇ?"   ಕೇಳಿದಳು ಮಧುರವಾಗಿ.   ಮಿಂಚು ಬಡಿದ ಹಾಗೆ ರಪ್ಪನೆ  ಬೈರಾಗಿ ಮುಖ  ಎತ್ತಿದ.  ಕಣ್ಣು ಕಣ್ಣು  ಒಂದಾಯಿತು. ಮೈಮನ  ಹೂವಾಯಿತು. ನೋಟದಲ್ಲಿ  ಸಹಸ್ರ ಕಾಮನಬಿಲ್ಲು  ಮೂಡಿತು.  ವೈರಾಗ್ಯಮೂರ್ತಿ ಹಾಗೆ ಕೂತಿದ್ದ ಹುಡುಗ ಎದ್ದ.
  
ಹಗುರವಾದ ಹಕ್ಕಿಯ ಹೆಜ್ಜೆಯಲ್ಲಿ  ಒಳಕೋಣೆಗೆ  ನಡೆದಳು  ಸುಬ್ಬಿ. "  ಸುಬ್ಬೀ, ಜೋಪಾನ.   ಸಂಬಂಧ  ಆಗಬಹುದು. ಯದ್ವಾತದ್ವಾ ಮಾತಾಡಿ  ತಪ್ಪಿಸಬೇಡ. ಅರ್ಚಕನಾದರೆ ಏನಂತೆ!  ದಾನ, ದಕ್ಷಿಣೆ,  ಪಂಚೆ, ಶಾಲು  ವರ್ಷ ಪೂರಾ ಸಿಗುತ್ತೆ.  ಅಷ್ಟಕ್ಕೂ  ಹೆಣ್ಣು  ಎಷ್ಟು  ಕಲಿತರೂ  ಪಲ್ಯ, ಮೇಲಾಗ್ರ  ಮಾಡಿ  ಹಾಕೂದೆ ಅಲ್ವಾ ಅವಳ ಬದುಕು.  ಇಲ್ಲೇ  ಇರು.  ಭಾವಂಗೂ ನೆಮ್ಮದಿ. ಒಪ್ಪಿಕೊ  ತೆಪ್ಪಗೆ " ಅಂತ  ಸೊಂಟಕ್ಕೆ  ಚಿವುಟಿ  ಗದರಿಸಿದಳು  ಅತ್ತೆ.  "  ಇದು  ಹ್ಯಾಗೇ! ಕನಸೋ ಅಲ್ಲ ನನಸೋ" ಅಂತ ಮುರಳಿಯೂ  ಅವಳಿಗೆ ಬಲವಾಗಿ ಚಿವುಟಿದ.  ಕೊಟ್ಟಿದ್ದು  ಐದೇ  ಮಿನಿಟು. ಅಷ್ಟರಲ್ಲಿ  ಮಾತು ಮುಗಿಸಿ ಹೊರಬರಬೇಕು .  ಸುಬ್ಬಿ  ಸುರುಬುರು ಅಳುತ್ತ  ಮುರಲಿಯ  ತೋಳಲ್ಲಿ ಹುದುಗಿದಳು.  ಅಪ್ಪನ ದಶಾವತಾರವನ್ನು  ವಿವರಿಸಿದಳು.  ಮುರಲಿ  ತನ್ನಪ್ಪನ ಬಗ್ಗೆ  ಹೇಳಿದ.   ಅವನ  ಹುಟ್ಟೂರು  ಗುರುವಾಯೂರು.  ಅವನಪ್ಪ   ಉದ್ಯೋಗ ನಿಮಿತ್ತ  ಊರು ಬಿಟ್ಟು  ಪರ ಊರಿಗೆ   ಹೋಗಿ ನೆಲಸಿದ ಕಾರಣ  ಹುಟ್ಟೂರು  ಅವನಿಗೆ  ಅಪರಿಚಿತ ಜಾಗ.    ಪ್ರೇಮ   ವೈಫಲ್ಯತೆಯಿಂದ  ಮತಿಗೆಟ್ಟವನ  ಹಾಗೆ    ಸಂಕಟದಿಂದ  ಹೊರಳುವ ಮಗನನ್ನು  ಕುಲದೇವರ ಸನ್ನಿಧಿಗೆ ,  ಅಂದರೆ  ವಂಶಪಾರಂಪರ್ಯವಾಗಿ  ತಮಗೆ  ಬಂದು ಇದೀಗ ತನ್ನಣ್ಣ  ಪೂಜಿಸುತ್ತ ಬಂದ  ಶ್ರೀಕೃಷ್ಣನ  ಸನ್ನಿಧಿಗೆ  ಶಾಂತಿ, ನೆಮ್ಮದಿ ಸಿಗಲಿ ಎಂದು  ಅಪ್ಪ ಕಳಿಸಿದ್ದು  ಕಣ್ಣೊರೆಸಿಕೊಳ್ಳುತ್ತಲೇ  ಹೇಳಿ ಬಿಗಿದಪ್ಪಿದ  ತನ್ನ ಸುಬ್ಬಿಯನ್ನು.   ಅದೆಲ್ಲ ಗೊತ್ತಾದರೆ ತನ್ನಪ್ಪ  ಪುನ ಕೆರಳಿ ಮದುವೆಗೆ  ಒಪ್ಪಲಾರರು ಎಂದ ಸುಬ್ಬಿ  ತಾವು  ಅಪರಿಚಿತರೆಂದೇ  ತೋರಿಸಿಕೊಂಡು   ಹಸೆಮಣೆ  ಏರೋಣ.   ಯಾರಿಗೂ   ಗೊತ್ತಾಗುವುದು  ಬೇಡ. ಆಗ ಅಪ್ಪ  ಪ್ರೀತಿಯಿಂದ  ಮನೆಗೆ ಸೇರಿಸಿದಾರು ಎಂದು  ಮುರಲಿಯ   ಅಪ್ಪುಗೆಯಲ್ಲಿ ಅವನಿಗೆ ಉಪದೇಶ ಮಾಡಿದಳು. "   ನನ್ನ   ಚಿನ್ನಾ  , ಸುಬ್ಬಿ  ಡಿಯರ್,  ನಮ್ಮ  ಲವ್ ಎಟ್ ಫಸ್ಟ್ ಸೈಟ್  ಸುರುವಾಗಿದ್ದು  ಕಳೆದ ಫೆಬ್.  ಹದಿನಾಲ್ಕಕ್ಕೆ.  ಅದರಿಂದ ಮಧ್ಯ ನೂರಾರು  ತೊಡಕುಗಳು.  ಇದೀಗ  ಒಂದಾಗುತ್ತಿದ್ದೇವೆ.  ಈ ಫೆಬ್ರವರಿ   ಹದಿನಾಲ್ಕು ನಮ್ಮಂಥ    ಪ್ರೇಮಿಗಳ ದಿನ.  ಅದೇ ದಿನ  ನಮ್ಮ  ಮದುವೆ ಇಟ್ಟುಕೊಂಡರೆ   ಬಲು  ಸೊಗಸು. ಆಗುತ್ತದಾ? "  ಅರಳಿತು ಸುಭಾಶಿಣಿಯ ಮೊಗ. " ವಾವ್!  ಅದ್ಭುತ!  ಶೂರ್, ಶೂರ್, ನನ್ನ  ಕೃಷ್ಣ ಎಂದು ಅಪ್ಪಿದಳು.   ಲೇಟಾಯ್ತು  ಎಂದು   ಹೊರಗಿಂದ ಮಾವ ಬಾಗಿಲು ತಟ್ಟಿದಾಗ   ತೆಪ್ಪಗೆ  ಮುಖ  ಊದಿಸಿಕೊಂಡು  ಹೊರಬಂದರು.   ವಾರದಲ್ಲಿ  ಸುಬ್ಬಿಯ ಮದುವೆ  ಮುರಳಿಯ ಜೊತೆ  ಕೃಷ್ಣನ  ಸನ್ನಿಧಿಯಲ್ಲಿ ಜರಗಿತು.  ವಧು  ಹಳೆಯ  ಪ್ರಿಯತಮನ ನೆನಪಿನಿಂದ  ಓಡಿಹೋಗದ ಹಾಗೆ  ವಿವಾಹದ   ಮುಹೂರ್ತದ  ತನಕ  ಕಣ್ಣಿನರೆಪ್ಪೆ ಮುಚ್ಚದೆ  ಹಗಲಿರುಳು  ಕಾವಲು ಕಾಯ್ದ  ಗೋಪಣ್ಣ ಮಾವ, ಮತ್ತೆ ಅವರ ಪತ್ನಿ  ಅವಳ ಕೊರಳಿಗೆ   ಮದುಮಗ ಕರಿಮಣಿ  ಕಟ್ಟಿದ  ಮೇಲೆ  ಅಲ್ಲೇ  ಜಮಖಾನದಲ್ಲಿಅಡ್ಡ ಮಲಗಿ  ಸಣ್ಣನಿದ್ದೆ ತೆಗೆದರು.  ಹುಡುಗನ  ದೊಡ್ಡಪ್ಪ, ದೊಡ್ಡಮ್ಮನಿಗೆ ಆದ ಹಿಗ್ಗು ಅಪಾರ. ಕುಲದೇವರ ಸನ್ನಿಧಿಗೆ  ಬಂದ ಮೇಲೆ  ಮುರಳಿಯ  ಮಂಕುತನ  ಬಿಟ್ಟು ಹೋಗಿ  ಹುಡುಗ ಲವಲವಿಕೆಯಿಂದ   ಮೊದಲಿಗಿಂತಲೂ  ಸುಪ್ರಸನ್ನತೆಯಿಂದ ಇದ್ದಾನೆ .  ಭಗವಂತಾ ಏನಿದು  ಲೀಲೆ!
                        
ಮುದ್ದು ಮಗಳು  ಸುಬ್ಬಿಯ ಮದುವೆಗೆ  ಕೋಪ ತಗ್ಗಿದ  ಅಪ್ಪ, ಅಮ್ಮನೂ ಬಂದು  ಹರಸಿದಾಗ   ಪ್ರೇಮಿಗಳು  ಪ್ರೇಮದಿಂದ  ಲಜ್ಜೆದುಂಬಿ  ನಕ್ಕರು.

-ಕೃಷ್ಣವೇಣಿ ಕಿದೂರ್



 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x