ಕಾಡು(ವ) ಕಟ್ಟುವ ಕತೆ!! ಭಾಗ-6: ಅಖಿಲೇಶ್ ಚಿಪ್ಪಳಿ


ಬಿದಿರಿಗೆ ಬಂದ ಆಪತ್ತು
ಮನುಷ್ಯನ ಜೀವನಕ್ಕೆ ಹೋಲಿಸಿದರೆ ಭೂಮಿಯ ವಯಸ್ಸು ಅಗಾಧವಾದದು. ವಿಜ್ಞಾನಿಗಳು ಹೇಳುವಂತೆ 460 ಕೋಟಿ ವರ್ಷಗಳು. ಅಗ್ನಿಯ ಗೋಲವಾಗಿದ್ದ ಭೂಮಿಯ ಚೂರು, ಕೋಟಿ ವರ್ಷಗಳಿಂದ ವಾತಾವರಣಕ್ಕೆ ಸಿಲುಕಿ, ತರ-ತರಹದ ರಾಸಾಯನಿಕ ಕ್ರಿಯೆಗೊಳಪಟ್ಟು 420 ಕೋಟಿ ವರ್ಷಗಳು ಬೆಂಗಾಡಾಗಿಯೇ ಇತ್ತು. ಭೂಮಿಯ ಈ ವಯಸ್ಸಿನಲ್ಲಿ ಹೂ ಅರಳಿ, ಜೀವೋತ್ಪನ್ನಕ್ಕೆ ನಾಂದಿಯಾಯಿತು. ಅಂತೂ ಮಾನವನೆಂಬ ಪ್ರಾಣಿ ಜನಿಸಿ, ಕಾಡಿನಲ್ಲಿ ಜೀವ ನಡೆಸಿ, ಬೆಂಕಿಯನ್ನು ಕಂಡು ಹಿಡಿದು, ಕೃಷಿಯನ್ನು ಕಲಿತು ನಾಗರೀಕನೆಂಬ, ವಿಜ್ಞಾನಿಯೆಂಬ, ವಿವೇಕನಂತನೆಂಬ, ವಿಚಾರವಂತನೆಂಬ ನಾನಾ ತರಹದ ಸ್ವಯಂ-ಬಿರುದಿಗೆ ಪಾತ್ರನಾಗಿ ಈಗೊಂದು 3-4 ಶತಮಾನಗಳು ಸಂದವು ಅಷ್ಟೆ. ಕೈಗಾರಿಕೋತ್ತರ ಅಭಿವೃದ್ಧಿ ಈ ಭೂಮಿಯ ಬಹಳಷ್ಟು ಕಾಡುಗಳನ್ನು ನಾಶ ಮಾಡಿತು. ಶೇ 52ರಷ್ಟು ಪ್ರಾಣಿ ಪ್ರಪಂಚವನ್ನು ಕಳೆದ ಒಂದೇ ಶತಮಾನದಲ್ಲಿ ಹೊಸಕಿ ಹಾಕಿತು. ಅರಿವಿಗೆ ಬರುವ ಮೊದಲೇ ಅತ್ಯಂತ ಅಪರೂಪದ ಸಸ್ಯಸಂಕುಲಗಳು ಅಳಿದುಹೋದವು. ಮರುಸೃಷ್ಟಿ ಮಾಡಲಾಗದ ಅನೇಕ ಸ್ಥಾನಿಕ ಪ್ರಭೇದಗಳು ಕಣ್ಮರೆಯಾದವು. ನಾವಿನ್ನೂ ಅಭಿವೃದ್ಧಿಯೆಂಬ ಕಣ್ಣು ಕೋರೈಸುವ, ಬೆಚ್ಚಿ ಬೀಳಿಸುವ ಸಿಡಿಲಿನ ಅಬ್ಬರದಲ್ಲಿ ಕುರುಡರಾಗಿದ್ದೇವೆ, ಕಿವುಡರಾಗಿದ್ದೇವೆ. ಈ ಹಂತದಲ್ಲಿ ಒಂದಿಪ್ಪತ್ತು ಎಕರೆ ಕಾಡು ಬೆಳೆಸುವ ಮಾತು ಜಾಗತಿಕ ಮಟ್ಟದಲ್ಲಿ ಹಾಸ್ಯಾಸ್ಪದವೇ ಇದ್ದೀತು. ಆದರೆ ಸ್ಥಳೀಯವಾಗಿ ಈ ಪ್ರಯತ್ನ ಅತ್ಯಂತ ಅಪರೂಪದ ಪ್ರಯೋಜನ ನೀಡಬಲ್ಲದು.

ಸ್ಥಳೀಯವಾಗಿ ನಮ್ಮ ಅಭಿವೃದ್ಧಿಯ ಕಲ್ಪನೆ ಹೇಗಿದೆ ಎಂಬುದನ್ನು ಕೊಂಚ ನೋಡೋಣವೆ? ಪಂಚಾಯ್ತಿಯ ಮಟ್ಟದಿಂದ ಮಹಾನಗರಗಳವರೆಗೂ ಅಭಿವೃದ್ಧಿ ತನ್ನ ವಿರಾಟ್ ಸ್ವರೂಪವನ್ನು ತೋರಿಸುತ್ತಲೇ ಇದೆ. ಇದಕ್ಕೆ ನಮ್ಮ ಜನಪ್ರತಿನಿಧಿಗಳು ಹಾಗೂ ಆಳುವವರು ನೀರೆರೆಯುತ್ತಲೇ ಇರುವರು. ಇದೇ ತಾಲ್ಲೂಕಿನ ಒಂದು ಚಿಕ್ಕ ಅಂಕಿ-ಅಂಶವನ್ನು ಗಮನಿಸೋಣ. ಸಾಗರ ತಾಲ್ಲೂಕಿನ 35 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 800 ನೂರು ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕೆಂದು ನಿರ್ಮಿಸಿರುವ ಈ ತಂಗುದಾಣಗಳಲ್ಲಿ ಶೇ.80ರಷ್ಟು ಸಂಜೆಯ ವೇಳೆಗೆ ಬಾರ್‍ಗಳಾಗಿ ಪರಿವರ್ತನೆಯಾಗುತ್ತವೆ. ಗೋಡೆಗಳ ತುಂಬಾ ಅಶ್ಲೀಲ ಬರಹಗಳು. ಹಗಲಿನಲ್ಲಿ ಕೊಠಡಿಯಂತೆ ತೋರುವ ಪ್ರಯಾಣಿಕರ ತಂಗುದಾಣಗಳಲ್ಲಿ ಯಾವುದೇ ಮಹಿಳೆ ಕುಳಿತುಕೊಳ್ಳಲು ಸಾಧ್ಯವೆ ಇಲ್ಲದಂತಹ ವಾತಾವರಣ. ಹಾಗಾಗಿ ಸಭ್ಯ ನಾಗರಿಕರು ಯಾರು ಈ ತಂಗುದಾಣಗಳನ್ನು ಉಪಯೋಗಿಸುವುದಿಲ್ಲ. ಒಂದು ತಂಗುದಾಣಕ್ಕೆ ಒಂದು ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಕೊಂಡರೂ 800 ತಂಗುದಾಣಗಳಿಗೆ 8 ಕೋಟಿ ರೂಪಾಯಿಗಳ ವೆಚ್ಚವಾಗಿದೆ ಎಂದು ಅರ್ಥೈಸಬಹುದು. ಇವುಗಳ ನಿರ್ವಹಣೆಗಾಗಿ ಪ್ರತಿವರ್ಷ ಮತ್ತೊಂದಿಷ್ಟು ಲಕ್ಷಗಳು. ಯಾರಿಗೂ ಪ್ರಯೋಜನವಿಲ್ಲದ ಬಹುತೇಕ ತಂಗುದಾಣಗಳನ್ನು ಅಲ್ಲಿದ್ದ ನಿಸರ್ಗ ನಿರ್ಮಿತ ತಂಗುದಾಣಗಳನ್ನು ಅಂದರೆ ಮರಗಳನ್ನು ಕಡಿದೇ ನಿರ್ಮಿಸಲಾಗಿದೆ. ಎಷ್ಟು ಸಿಮೇಂಟ್, ಮರಳು ಹಾಳಾಗಿದೆ ಎಂದು ಯಾರಾದರೂ ಲೆಕ್ಕ ಹಾಕುತ್ತಾರ? ವಿಪರ್ಯಾಸವೆಂದರೆ ಇದೇ ಇರಬಹುದು. ಹಾಗೆಯೇ ಸಾಗರ ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣವನ್ನು ಹೊಸದಾಗಿ ನಿರ್ಮಿಸಲಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿದ ಈ ನಿಲ್ದಾಣಕ್ಕೆ ಹಲವು ಕೋಟಿ ಖರ್ಚಾಗಿದ್ದು, ವ್ಯಾಜ್ಯದಲ್ಲಿ ಪರ್ಯಾವಸನಗೊಂಡು ನಿರರ್ಥಕವಾಗಿದೆ. ಪ್ರಜೆಗಳ ಸಂಗ್ರಹಿಸಿದ ಹಣವನ್ನು ಆಳುವವರು ಹೇಗೆಲ್ಲಾ ಪೋಲು ಮಾಡುತ್ತಾರೆ ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ. 

ಕಾಡಿಗೊಂದು ವಿವರಣೆ ಕೊಡಿ ಎಂದರೆ ಏನೆಲ್ಲಾ ಕೊಡಬಹುದು. ವ್ಯವಹಾರಸ್ಥನಾದರೆ ಅಡಿಗಿಂತಿಷ್ಟು ಅಂತ ಲೆಕ್ಕ ಹಾಕಬಹುದು. ನಾಟಿವೈದ್ಯ ಔಷಧೀಯ ಗುಣಗಳ ಪಟ್ಟಿ ಮಾಡಬಹುದು. ಸಸ್ಯವಿಜ್ಞಾನಿ ಅವುಗಳ ಉಪಯೋಗಗಳ ಪಟ್ಟಿ ಮಾಡಿ ಹೇಳಬಹುದು. ವನ್ಯತಜ್ಞ ಈ ಕಾಡಿನಿಂದ ಇಷ್ಟು ಶುದ್ಧಗಾಳಿ, ನೀರು ಸಿಗಬಹುದು ಎನ್ನಬಹುದು. ವನ್ಯಜೀವಿತಜ್ಞ ಈ ಸಮೃದ್ಧ ಕಾಡಿನಲ್ಲಿ ಏನೆಲ್ಲಾ ಜೀವಿವೈವಿಧ್ಯವಿರಬಹುದು ಎಂದು ಖುಷಿಪಡಬಹುದು. ಜೇನುತಜ್ಞ ಪರಾಗಸ್ಪರ್ಶದ ಮಹತ್ವ ಸಾರಬಹುದು. ಗಣಿಗಾರಿಕೆಯವರಾದರೆ, ಕಾಡಿನಡಿಯಲ್ಲಿ ಇಷ್ಟು ಚಿನ್ನ, ಕಬ್ಬಿಣ, ಮ್ಯಾಂಗನೀಸ್ ಇತ್ಯಾದಿಗಳಿರಬಹುದು ಎಂದು ಅಂದಾಜು ಮಾಡಬಹುದು. ಹವಾಮಾನ ತಜ್ಞ ಕಾಡಿದ್ದಲ್ಲಿ ಮಳೆ ಹೆಚ್ಚು ಎಂಬ ವೈಜ್ಞಾನಿಕ ವರದಿಯನ್ನೆ ನೀಡಬಹುದು. ಕವಿಯಾದರೆ ಉತ್ತಮ ಕವಿತೆ ಬರೆದು ಹಾಡಬಹುದು. ಕತೆಗಾರನಾದರೆ ಕಾದಂಬರಿ ಬರೆಯಬಹುದು. ಹೀಗೆ ಒಬ್ಬಬ್ಬರೂ ಅವರವರ ಇಷ್ಟಕ್ಕೆ, ಭಾವಕ್ಕೆ ತಕ್ಕಂತೆ ಕಾಡನ್ನು ವಿವರಿಸಬಹುದು. 

ಸಾರ್ವಜನಿಕರಿಂದ ತೆರಿಗೆಯ ಮೂಲಕ ಹಣ ಸಂಗ್ರಹಿಸುವ ಸರ್ಕಾರಗಳಿಗೆ ಕಾಡುಗಳಿಂದಲೂ ಆದಾಯವಿದೆ. ಆದರೆ ಸರ್ಕಾರ ಹಣ ಖರ್ಚು ಮಾಡುವ ರೀತಿ ಕೆಲವು ಬಾರಿ ಭೀತಿಯುಂಟು ಮಾಡುತ್ತದೆ. ಈ ಕತೆಯನ್ನು ಬರೆಯುವಾಗ ವಿಧಾನ ಪರಿಷತ್ ಚುನಾವಣೆಯ ತಯಾರಿ ನಡೆಯುತ್ತಿತ್ತು. ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ಹಲವು ತಂತ್ರಗಳನ್ನು ಬಳಸುತ್ತಿದ್ದರು. ಆದರೆ, ಮನಿಯೆಂಬ ಮಾಯೆಯ ಮುಂದೆ ಮಿಕ್ಕೆಲ್ಲಾ ವಿಷಯಗಳು ಗೌಣವಾಗುತ್ತವೆ. ವಿಧಾನ ಪರಿಷತ್ ಚುನಾವಣೆಗೆ ಮೇಲ್ಮನೆ ಚುನಾವಣೆ ಅಂತಲೂ ಹೇಳುತ್ತಾರೆ. ಈ ಎಂ.ಎಲ್.ಸಿಗಳಿಗೆ ಮತ ನೀಡುವವರು ಮಾತ್ರ ನಮ್ಮಿಂದ ಆಯ್ಕೆಯಾದ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳಾಗಿರುತ್ತಾರೆ. ಜನಸಾಮಾನ್ಯರಿಗೆ ಮತ ಹಾಕುವ ಅಧಿಕಾರವಿರುವುದಿಲ್ಲ. ಕಣಕ್ಕಿಳಿದ ಪ್ರತಿ ಪಕ್ಷದ ಸದಸ್ಯರುಗಳು ಎಲ್ಲಾ ಮತದಾರರಿಗೆ ಹಣವನ್ನು ನೀಡಿರುವುದು ಗುಟ್ಟಾಗಿ ಉಳಿದಿಲ್ಲ. ನಮ್ಮದೇ ಪಂಚಾಯ್ತಿಯ ಎಲ್ಲಾ ಸದಸ್ಯರೂ ಪ್ರತಿ ಅಭ್ಯರ್ಥಿಯಿಂದ ನಿಮಗೇ ಓಟು ಹಾಕುತ್ತೇವೆ ಎಂದು ಪೀಕಿದ ಹಣ ತಲಾ 33 ಸಾವಿರವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ 400 ಚಿಲ್ಲರೆ ಪಂಚಾಯ್ತಿ ಹಾಗೂ 4000 ಚಿಲ್ಲರೆ ಸದಸ್ಯರು ಇದ್ದಾರೆ. ಒಬ್ಬಬ್ಬರಿಗೆ ಇಷ್ಟು ಹಣವೆಂದರೆ ಗೆದ್ದ ಸೆಣಸಿದ ಅಭ್ಯರ್ಥಿಗಳು ಎಷ್ಟು ಹಣ ಖರ್ಚು ಮಾಡಿರಬಹುದು ಎಂಬುದನ್ನು ನೀವೇ ಲೆಕ್ಕಾಚಾರ ಹಾಕಿಕೊಳ್ಳಿ.

ಮೇಲ್ಮನೆ ಚುನಾವಣೆ ಒಂದು ಮುಖ ಇದಾದರೆ, ಇನ್ನೊಂದು ಮುಖವನ್ನು ಕೊಂಚ ನೋಡೋಣ. 400 ಚಿಲ್ಲರೆ ಗ್ರಾಮಪಂಚಾಯ್ತಿಗಳಲ್ಲೂ ಒಂದೇ ದಿನ ಮತ ಚಲಾಯಿಸುವ ವ್ಯವಸ್ಥೆ ಇತ್ತು. ಒಂದೊಂದು ಬೂತಿನಲ್ಲಿ ಸರಾಸರಿ 10 ಜನ ಮತ ಚಲಾಯಿಸುವ ಸದಸ್ಯರು. ಮತಗಟ್ಟೆ ಅಧಿಕಾರಿಗಳ ಸಂಖ್ಯೆ ಎಲ್ಲಾ ಸೇರಿ 5. ತಾಲ್ಲೂಕಾ ಕೇಂದ್ರದಿಂದ ಚುನಾವಣ ಬೂತಿಗೆ ಹಿಂದಿನ ದಿನವೇ ಹೋಗಿರಬೇಕು. ಅಲ್ಲಿ ಅವರಿಗೆ ಊಟ-ವ್ಯವಸ್ಥೆಯಾಗಬೇಕು. ಪ್ರತಿ ಮತಗಟ್ಟೆಯ 5 ಅಧಿಕಾರಿಗಳಿಗೆ ವಾಹನ ವ್ಯವಸ್ಥೆಯಾಗಬೇಕು. ಇಲ್ಲಿ ಮಾನವ ಶ್ರಮದ ದುರುಪಯೋಗ ಎಷ್ಟಾಯಿತು? ಸಾರ್ವಜನಿಕರ ದುಡ್ಡು ಹೀಗೆ ಪೋಲಾಗುತ್ತದೆ. ಚುನಾವಣ ಆಯುಕ್ತರು ಒಂದು ಆದೇಶ ಮಾಡಿದ್ದರೆ ಸಾಕಿತ್ತು. ಎಲ್ಲಾ ಗ್ರಾಮಪಂಚಾಯ್ತಿ ಸದಸ್ಯರು ತಾಲ್ಲೂಕ ಕೇಂದ್ರಕ್ಕೆ ಬಂದು ಮತ ಚಲಾಯಿಸಬೇಕು ಎಂದು, ಎಷ್ಟೊಂದು ಹಣ, ಶ್ರಮ ಉಳಿತಾಯವಾಗುತ್ತಿತ್ತು ಅಲ್ಲವೇ? ಬರೀ ಹತ್ತು ಓಟಿಗಾಗಿ ಆಡಳಿತ ಯಂತ್ರದ 5 ಮಂದಿಯ ಶ್ರಮ ಉಳಿತಾಯವಾಗುತ್ತಿತ್ತಲ್ಲವೇ?

ಇತಿಹಾಸದ ಪಾಠದುದ್ದಕ್ಕೂ ನಾವು ಪದೇ ಪದೇ ಓದಿರುವ ವಿಷಯವೆಂದರೆ, ನಾಗರೀಕತೆ ಅರಳಿದ್ದು ನದಿಯ ತೀರಗಳಲ್ಲಿ ಎಂಬುದಾಗಿದೆ. ಸಿಂಧು ನದಿ ತೀರವಿರಬಹುದು ಅಥವಾ ನೈಲ್ ನದಿ ತೀರವಿರಬಹುದು. ಆಗ ತಾನೆ ಕೃಷಿಯನ್ನು ಕಲಿತ ಆದಿ ಮಾನವ ತನ್ನೆಲ್ಲಾ ಕೆಲಸಗಳಿಗೂ ಅಗತ್ಯವಾದ ನೀರಿನ ಮೂಲದ ಹತ್ತಿರವೇ ವಾಸ ಮಾಡಲು ಉಪಕ್ರಮಿಸಿದ. ಆಗ ಅವನಿಗೆ ಗೊತ್ತಿಲ್ಲದೇ ಇದ್ದ ವಿಷಯವೊಂದಿತ್ತು. ನದಿಗೆ ಮೂಲ ಕಾಡು ಎಂಬ ಅರಿವು ಇರಲಿಲ್ಲ. ಈಗಲೂ ಬಹುತೇಕ ಜನರಿಗೆ ನದಿಯ ಮೂಲ ಕಾಡೇ ಆಗಿದೆ ಎಂಬ ಅರಿವಿಲ್ಲ. ಇತ್ತ ನದಿಯ ತಟದಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ, ಅತ್ತ ಕಾಡಿನ ಪ್ರಮಾಣವನ್ನು ಕಡಿಮೆ ಮಾಡುತ್ತಾ ಸಾಗಿದ ಮನುಷ್ಯನಿಗೆ ಪ್ರಕೃತಿಯ ಸಂಕೀರ್ಣತೆ ಅರಿವಾಗುವ ಹೊತ್ತಿಗೆ ಸುಖ-ಲೋಲುಪತನದ ವ್ಯಸನಕ್ಕೆ ಸಿಲುಕಿ ತಿರುಗಿ ಬರಲಾರದ ಹಂತಕ್ಕೆ ಬಂದಿದ್ದ. ಹುಲುಮಾನವನ ದೌರ್ಜನ್ಯವನ್ನು ಅದು ಹೇಗೋ ಸಹಿಸಿಕೊಳ್ಳುತ್ತಾ ಬಂದ ನಿಸರ್ಗ, ಇವನ ಆಟಾಟೋಪ ಮಿತಿಮೀರಿದಾಗ ಮೌನ ಮುರಿದು ಗದರುವ ಪ್ರಯತ್ನ ಮಾಡಿತು. ಅಲ್ಲಲ್ಲಿ ಮೈ ಕೊಡವಿತು, ದಾವಾನಲ ಹೊರಬಂದು ನಭಕ್ಕೇರಿತು, ಉಸಿರಾಡುವ ಜೀವವಾಯುವೇ ಬಿರುಗಾಳಿಯಾಯಿತು. ಜೀವಜಲವೇ ಪ್ರಳಯಸದೃಶವಾಯಿತು. ಹುಲುಮಾನವನಿಗೆ ಬುದ್ಧಿ ಬಂತೇ? ಸುಖಲೋಲುಪತೆಯ ವ್ಯಸನಕ್ಕಂಟಿಕೊಂಡವನಿಗೆ ಅಹಂಕಾರವೂ ಜೊತೆಯಾಯಿತು. ಪ್ರಕೃತಿಯನ್ನು ಬಗ್ಗಿಸಬಲ್ಲೆ, ತಗ್ಗಿಸಬಲ್ಲೆ ಎಂಬ ಭ್ರಮಾಲೋಕದ ನೌಕೆಯಲ್ಲಿ ಹೊರಟವನಿಗೆ, ಪ್ರಕೃತಿಯ ಯಾವ ಎಚ್ಚರಿಕೆಯೂ ಎಚ್ಚರಿಕೆಯಾಗಿ ತೋರಲಿಲ್ಲ. ನದಿಯ ನೀರು ಕಡಿಮೆಯಾಯಿತೋ, ಸರಿ ಅಂತರ್ಜಲವಿದೆಯಲ್ಲ. ಮಳೆಬರಲಿಲ್ಲವೋ, ಮೋಡ ಬಿತ್ತನೆ ತಂತ್ರ ಗೊತ್ತಲ್ಲ. ಮಳೆ ಹೆಚ್ಚಾಯಿತೋ, ಮೋಡಕ್ಕೆ ರಾಕೇಟ್ ಬಿಟ್ಟು ಓಡಿಸುವ ವಿಜ್ಞಾನ ಕೈಗೆ ಸಿದ್ಧಿಸಿದೆಯಲ್ಲ. ಹೀಗೆ ಪ್ರಕೃತಿಯ ಎಲ್ಲಾ ಗಂಭೀರ ಎಚ್ಚರಿಕೆಗಳನ್ನು ಅರ್ಥ ಮಾಡಿಕೊಳ್ಳುವ ಬದಲು, ಪ್ರತಿತಂತ್ರ ಹೂಡುವ ವಿಧಾನಕ್ಕೆ ಮನುಜನಿಳಿದ. 

ಅಭಿವೃದ್ಧಿಯನ್ನು ಸುಸ್ತಿರವಾಗಿ ಮಾಡಿ, ನಿಮ್ಮೆಲ್ಲಾ ಅಭಿವೃದ್ಧಿಗಳೂ ಪರಿಸರಪೂರಕವಾಗಿರಲಿ, ಅಂದಾದುಂಧಿ ಅಭಿವೃದ್ಧಿ ಇಡೀ ಮನುಕುಲಕ್ಕೇ ಮಾರಕವಾಗುತ್ತದೆ ಎನ್ನುವ ಗುಂಪು ಸೃಷ್ಟಿಯಾಯಿತು. ಅಷ್ಟೇಕೆ, ನಮ್ಮದೇ ಗಾಂಧಿತಾತ ಹೇಳಿದ್ದು ನೆನಪಿರಬೇಕಲ್ಲವೇ? ಚಿಕ್ಕದು ಚೊಕ್ಕದು, ಗುಡಿ ಕೈಗಾರಿಕೆಗಳಿಗೆ ಒತ್ತು ಕೊಡಿ, ಸರಳ ಜೀವನ ನಡೆಸಿ, ಇತ್ತ ದಾರ್ಶನಿಕ ಪಂಥದವರು ಇದನ್ನೇ ಹೇಳಿದರು. ಆದರೆ, ಹೆಡ್ಡನಿಗೆ ದೊಡ್ಡದು ಲೇಸು ಎಂಬಂತೆ, ನಮ್ಮೆಲ್ಲ ಅಭಿವೃದ್ಧಿ ಧೋರಣೆಗಳು ಜೀವ-ಜನ ವಿರೋಧಿಗಳಾಗಿವೆ. ದೊಡ್ಡ ದೊಡ್ಡ ಆಣೆಕಟ್ಟುಗಳು, ದೈತ್ಯ ಯಂತ್ರಗಳು, ಅಗಲ ರಸ್ತೆಗಳು, ಶಹರದಂತೆ ತೋರುವ ಹಡಗುಗಳು, ಮೈಲುದ್ದದ ರೈಲುಗಳು, ಸಾವಿರಾರು ಜನರನ್ನು ಹೊತ್ತೊಯ್ಯಬಲ್ಲ ವಿಮಾನಗಳು, ಖಂಡಾತರ ಕ್ಷಿಪಣಿಗಳು, ಬೆಳಕಿನ ವೇಗ ಸರಿಗಟ್ಟುವ ರಾಕೇಟ್‍ಗಳು ಹೀಗೆ ಅಭಿವೃದ್ದಿಗೆ ಎಲ್ಲವೂ ದೊಡ್ಡದಾಗಿರಬೇಕು ಎಂಬ ಕಲ್ಪನೆಯಲ್ಲಿ ಕಾಡು ಕರಗುತ್ತಾ ಬಂತು, ನದಿಗಳು ಸೊರಗಿದವು. ಕಾಡಿನ ಮಹತ್ವ್ತ ತಿಳಿಯುವಷ್ಟರಲ್ಲಿ ಪ್ರಪಂಚದ ಬಹುತೇಕ ಮುಖ್ಯ ಅರಣ್ಯ ಪ್ರದೇಶಗಳು ಅಭಿವೃದ್ಧಿಯ ದಾಳಿಗೆ ನಲುಗಿಹೋದವು. 

ಅಗಳ, ಬೇಲಿ, ಗೇಟು ಇತ್ಯಾದಿಗಳೆಲ್ಲಾ ಸಾಕಷ್ಟು ಬಂದೋಬಸ್ತು ಆಗಿವೆ ಎಂದು ನಂಬಿ ಕುಳಿತವನ ಎದೆಯ ಮೇಲೆ ಕಲ್ಲುಬಂಡೆ ಬಿದ್ದಂತೆ ಆಗುವ ಘಟನೆಯೊಂದು ನಡೆಯಿತು. ಎಂದಿನಂತೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ಬಿದಿರಿನ ಗಿಡಗಳು ಬುಡಸಮೇತ ಕಿತ್ತು ರಸ್ತೆಯಲ್ಲಿ ಅಲ್ಲಲ್ಲಿ ಬಿದ್ದಿದ್ದವು. ಹನಿ ನೀರಿಲ್ಲದೇ ವಾತಾವರಣ ವೈಪರೀತ್ಯವನ್ನು ಮೀರಿ ಚಿಗುರುತ್ತಿರುವ ಬಿದಿರಿನ ಬಗ್ಗೆ ನನಗೆ ಅತೀವ ಹೆಮ್ಮೆಯಿತ್ತು. ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿ ಯಾರೋ ಕಿತ್ತಂತೆ ಕಾಣುವ ಈ ಕೆಲಸವನ್ನು ಯಾರು ಮಾಡಿರಬಹುದು ಎಂದು ತನಿಖೆ ಮಾಡಲುಪಕ್ರಮಿಸಿದೆ. ಮೊದಲ ನೋಟಕ್ಕೆ ಏನೂ ಗೊತ್ತಾಗುವಂತೆ ಇರಲಿಲ್ಲ. ನೆಲಕ್ಕೆ ಬಿದಿರು ಬಾಡಿ ಹೋಗಿತ್ತು. ನರ್ಸರಿಯಿಂದ ತಂದ ಬಿದಿರನ್ನು ಕೊಟ್ಟೆಯಿಂದ ತೆಗೆದು ಮೂಲ ಮಣ್ಣು ಹಾಗೆಯೇ ಇರುವಂತೆ ನೆಡಲಾಗಿತ್ತು. ಆ ಮಣ್ಣಿನ ಸಮೇತ ಬಿದಿರಿನ ಅವಸಾನವಾಗಿತ್ತು. ಹೀಗೆ ಒಂದು ಹತ್ತು ಬಿದಿರಿನ ಮರಿಗಳು ಧರಾಶಾಯಿಯಾಗಿದ್ದವು. ಬಹುಷ: ಕಾಡುಕೋಣದ ಹಿಂಡಿನ ಕೆಲಸವಿರಬಹುದು ಎಂದು ಕೊಂಡೆ. ಜೊತೆಗಿದ್ದ ಕೆಲಸದ ನಾರಾಯಣನ ಸಹಾಯ ಕೇಳಿದೆ. ಸದಾ ಹಳ್ಳಿಯಲ್ಲಿ ಮೈಮುರಿದು ದುಡಿಯುವ ನಾರಾಯಣನ ಅನುಭವ ಪತ್ತೆ ಕೆಲಸಕ್ಕೆ ನೆರವಾಯಿತು. ಹಿಂದಿನ ಅಧ್ಯಾಯದಲ್ಲಿ ಹೇಳಿದ ಜಾನುವಾರುಗಳೇ ಈ ಕೆಲಸ ಮಾಡಿದ್ದವು. ಹೆಜ್ಜೆ ಗುರುತಿನ ಪುರಾವೆಯ ಸಮೇತ ಆರೋಪಿಗಳು ಯಾರೆಂದು ಪತ್ತೆಯಾಯಿತು. ಆದರೆ ಆರೋಪಿಗಳು ಕೈಗೆ ಸಿಗುವಂತಿರಲಿಲ್ಲ. ಅದ್ಯಾರೋ ಕಾಟಾಚಾರಕ್ಕೆ ಸಾಕಿದ ಹೊಟ್ಟೆಗಿಲ್ಲದ ತುಡು ದನಗಳು ಈ ಕೆಲಸವನ್ನು ಮಾಡಿದ್ದವು. ಇಷ್ಟು ಬಂದೋಬಸ್ತು ಅಗಳವನ್ನೂ ಹಾರಿ ಬಂದು ಈ ಮಲೆನಾಡು ಗಿಡ್ಡಗಳು ಬಿದಿರನ್ನು ನಾಶ ಮಾಡಿದ್ದವು ಎಂಬುದು ನಂಬಲೇ ಬೇಕಾದ ಸತ್ಯವಾಗಿತ್ತು. ಚಿಗುರಿದ ಬಿದಿರಿನ ಗುಚ್ಚಿಗೆ ಬಾಯಿ ಹಾಕಿ ಎಳೆದಿದ್ದವು. ಇನ್ನೂ ತಳದವರೆಗೆ ಬೇರು ನೀಡದ ಬಿದಿರು ಬೇರು ಸಮೇತ ಕಿತ್ತು ಬಂದಿತ್ತು. ಇನ್ನುಳಿದ 300 ಚಿಲ್ಲರೆ ಬಿದಿರನ್ನು ಗಿಡ್ಡಗಳ ಬಾಯಿಂದ ರಕ್ಷಿಸುವುದು ಹೇಗೆ ಎಂಬುದೇ ಈಗ ಮುಂದಿರುವ ದೊಡ್ಡ ಸವಾಲು!.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
prashasti
8 years ago

ಪರಿಸ್ಥಿತಿಯ ವೈಪರೀತ್ಯ ಅಂದ್ರೆ ಇದೇ 🙁 ಬಿದಿರಿಂದು, ಬಸ್ಟಾಂಡಿಂದು.. ಎಲ್ಲಾ ಹೌದು. ಬೇಜಾರಾತು ಓದಿ

1
0
Would love your thoughts, please comment.x
()
x