ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ದೈವೇಚ್ಛೆ

ಮುಲ್ಲಾ ನಜ಼ರುದ್ದೀನನೂ ಇತರ ಇಬ್ಬರು ಸಂತರೂ ಮೆಕ್ಕಾಗೆ ಯಾತ್ರೆ ಹೋದರು. ಅವರ ಪ್ರಯಾಣದ ಅಂತಿಮ ಭಾಗದಲ್ಲಿ ಒಂದು ಹಳ್ಳಿಯ ಮೂಲಕ ಹೋಗುತ್ತಿದ್ದರು. ಅವರ ಹತ್ತಿರವಿದ್ದ ಹಣ ಹೆಚ್ಚುಕಮ್ಮಿ ಮುಗಿದಿತ್ತು; ಅರ್ಥಾತ್ ಬಹು ಸ್ವಲ್ಪ ಉಳಿದಿತ್ತು. ಆ ಹಳ್ಳಿಯಲ್ಲಿ ಅವರು ಸಿಹಿ ತಿನಿಸು ಹಲ್ವಾ ಕೊಂಡುಕೊಂಡರು. ಆದರೆ ಅದು ಮೂರು ಮಂದಿಗೆ ಸಾಲುವಷ್ಟು ಇರಲಿಲ್ಲ, ಮೂವರೂ ಬಹು ಹಸಿದಿದ್ದರು. ಮಾಡುವುದೇನು? – ಪಾಲು ಮಾಡಿದರೆ ಯಾರ ಹಸಿವನ್ನೂ ಅದು ಇಂಗಿಸಲಾರದು ಎಂಬ ಕಾರಣಕ್ಕಾಗಿ ಅದನ್ನವರು ಹಂಚಿಕೊಳ್ಳಲು ಸಿದ್ಧವಿರಲಿಲ್ಲ. ಎಂದೇ ಪ್ರತಿಯೊಬ್ಬನೂ ತನ್ನ ಕುರಿತು ಬಡಾಯಿಕೊಚ್ಚಕೊಳ್ಳಲಾರಂಭಿಸಿದರು, “ನಾನು ಲೋಕದಲ್ಲಿ ಇರಬೇಕಾದದ್ದು ಅತೀ ಮುಖ್ಯವಾದದ್ದರಿಂದ ನನ್ನ ಪ್ರಾಣ ಉಳಿಸಲೇ ಬೇಕು.”

ಮೊದಲನೇ ಸಂತ ಹೇಳಿದ, “ನಾನು ಉಪವಾಸ ಮಾಡುತ್ತಿದ್ದೇನೆ, ಕಳೆದ ಅನೇಕ ವರ್ಷಗಳಿಂದ ಪ್ರಾರ್ಥನೆ ಮಾಡುತ್ತಿದ್ದೇನೆ. ನಿಮ್ಮಿಬ್ಬರ ಪೈಕಿ ಯಾರೊಬ್ಬರೂ ನನ್ನಷ್ಟು ದೈವಭಕ್ತಿ ಉಳ್ಳವರೂ ಅಲ್ಲ ಪವಿತ್ರವಾದವರೂ ಅಲ್ಲ. ಅದ್ದರಿಂದ ನಾನು ಉಳಿಯಬೇಕೆಂದು ದೇವರು ಬಯಸುತ್ತಾನೆ. ಎಂದೇ ಹಲ್ವಾ ನನಗೆ ಸೇರಬೇಕು.”

ಎರಡನೇ ಸಂತ ಹೇಳಿದ, “ನೀನು ಬಲು ಕಟ್ಟನಿಟ್ಟಿನಿಂದ ದೇವತಾರಾಧನೆ ಮಾಡುತ್ತಿರುವೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ನಾನೊಬ್ಬ ವಿದ್ವಾಂಸ. ಎಲ್ಲ ಪವಿತ್ರ ಗ್ರಂಥಗಳನ್ನು ನಾನು ಓದಿದ್ದೇನೆ. ಜ್ಞಾನ ಪ್ರಸಾರಕ್ಕಾಗಿ ನನ್ನ ಜೀವನವನ್ನೇ ಮೀಸಲಾಗಿಟ್ಟಿದ್ದೇನೆ. ನಿನ್ನಂತೆ ಉಪವಾಸ ಮಾಡುವವರ ಆವಶ್ಯಕತೆ ಜಗತ್ತಿಗಿಲ್ಲ. ನೀನೇನು ಮಾಡಬಲ್ಲೆ? – ನೀನು ಉಪವಾಸ ಮಾತ್ರ ಮಾಡಬಲ್ಲೆ. ಸ್ವರ್ಗದಲ್ಲಿಯೂ ನೀನು ಉಪವಾಸ ಮಾಡಬಹುದು! ಜಗತ್ತಿಗೆ ಜ್ಞಾನದ ಆವಶ್ಯಕತೆ ಇದೆ. ಜಗತ್ತು ಎಷ್ಟು ಅಜ್ಞಾನದಲ್ಲಿ ಮುಳುಗಿದೆಯೆಂದರೆ ಅದು ನನ್ನಂಥವನನ್ನು ಕಳೆದುಕೊಳ್ಳಲು ತಯಾರಿಲ್ಲ. ಎಂದೇ ಹಲ್ವಾ ನನಗೇ ಸೇರಬೇಕು.”

ಮುಲ್ಲಾ ನಜ಼ರುದ್ದೀನ್‌ ಹೇಳಿದ, “ನಾನು ಬೈರಾಗಿಯಲ್ಲವಾದ್ದರಿಂದ ಸ್ವನಿಯಂತ್ರಣ ಮಾಡುತ್ತೇನೆ ಎಂಬ ಭರವಸೆ ನೀಡಲಾರೆ. ನಾನು ವಿಶೇಷವಾದದ್ದೇನನ್ನೂ ಓದಿಲ್ಲ, ಆದ್ದರಿಂದ ವಿದ್ವಾಂಸನೂ ಅಲ್ಲ. ನಾನೊಬ್ಬ ಸಾಧಾರಣ ಪಾಪಿ. ದೇವರು ಪಾಪಿಗಳಿಗೆ ಯಾವಾಗಲೂ ವಿಶೇಷ ಕರುಣೆ ತೋರುತ್ತಾನೆ ಎಂಬುದಾಗಿ ಕೇಳಿದ್ದೇನೆ. ಎಂದೇ ಹಲ್ವಾ ನನಗೆ ಸೇರಬೇಕು.”

ಯಾವ ತೀರ್ಮಾನಕ್ಕೂ ಆಗ ಬರಲಾಗದ್ದರಿಂದ ಮುಂದೇನು ಮಾಡುವುದೆಂಬುದರ ಕುರಿತು ಇಂತು ತೀರ್ಮಾನಿಸಿದರು: “ನಾವು ಮೂವರೂ ಹಲ್ವಾ ತಿನ್ನದೆ ಮಲಗೋಣ. ಅದು ಯಾರಿಗೆ ಸೇರಬೇಕೆಂಬುದನ್ನು ದೇವರು ತೀರ್ಮಾನಿಸಲಿ. ಯಾರಿಗೆ ಅತ್ಯುತ್ತಮವಾದ ಕನಸು ಬೀಳುವಂತೆ ದೇವರು ಮಾಡುತ್ತಾನೋ ಅವನಿಗೆ ಈ ಹಲ್ವಾ ಬೆಳಗ್ಗೆ ಸೇರಲಿ.”

ಬೆಳಗ್ಗೆ ಮೊದಲನೇ ಸಂತ ಹೇಳಿದ, “ನನ್ನೊಂದಿಗೆ ಇನ್ನುಮೇಲೆ ಯಾರೂ ಸ್ಪರ್ಧಿಸಲಾರರು. ಆ ಹಲ್ವಾ ನನಗೆ ಕೊಡಿ – ಕನಸ್ಸಿನಲ್ಲಿ ನಾನು ದೇವರ ಪಾದಗಳಿಗೆ ಮುತ್ತು ಕೊಟ್ಟೆ. ಇದಕ್ಕಿಂತ ಉತ್ತಮವಾದದ್ದು ಬೇರೇನಿರಲು ಸಾಧ್ಯ? ಇದಕ್ಕಿಂತ ಉತ್ತಮವಾದ ಅನುಭವ ಆಗಲು ಸಾಧ್ಯವೇ?”

ಎರಡನೇ ವಿದ್ವಾಂಸ ಸಂತ ನಗುತ್ತಾ ಹೇಳಿದ, “ಅದು ನನ್ನ ಕನಸಿಗೆ ಹೋಲಿಸಿದರೆ ಏನೇನೂ ಅಲ್ಲ. ನನ್ನ ಕನಸಿನಲ್ಲಿ ದೇವರು ನನ್ನನ್ನು ತಬ್ಬಿಕೊಂಡು ಮುತ್ತು ಕೊಟ್ಟರು! ನೀನು ಅವನ ಕಾಲಿಗೆ ಮುತ್ತು ಕೊಟ್ಟೆಯಷ್ಟೆ? ಅವನು ನನಗೆ ಮುತ್ತು ಕೊಟ್ಟದ್ದೂ ಅಲ್ಲದೆ ನನ್ನನ್ನು ತಬ್ಬಿಕೊಂಡ! ಹಲ್ವಾ ಎಲ್ಲಿದೆ? ಅದು ನನಗೇ ಸೇರಬೇಕು.”

ಅವರೀರ್ವರೂ ನಜ಼ರುದ್ದೀನನ ಕಡೆಗೆ ನೋಡಿ ಕೇಳಿದರು, “ನಿನಗೇನು ಕನಸು ಬಿತ್ತು?”

ನಜ಼ರುದ್ದೀನ್‌ ಹೇಳಿದ, “ನಾನೊಬ್ಬ ಬಡಪಾಯಿ ಪಾಪಿ, ನನ್ನ ಕನಸು ಬಲು ಸಾಧಾರಣದ್ದು – ಎಷ್ಟು ಸಾಧಾರಣದ್ದು ಅಂದರೆ ನಿಮಗೆ ಹೇಳಲೂ ತಕ್ಕುದಾದದ್ದಲ್ಲ. ಆದರೂ ನಾವು ಮಾಡಿಕೊಂಡ ಒಪ್ಪಂದದ ಪ್ರಕಾರ ಹೇಳಲೇಬೇಕಾದ್ದರಿಂದ ಹೇಳುತ್ತೇನೆ. ನನ್ನ ನಿದ್ದೆಯಲ್ಲಿ ದೇವರು ಕಾಣಿಸಿಕೊಂಡು ಹೇಳಿದರು, ‘ಎಲವೋ ಮೂರ್ಖ, ನೀನೇನು ಮಾಡುತ್ತಿರುವೆ? ಹಲ್ವಾ ತಿನ್ನು’ – ಆದ್ದರಿಂದ ನಾನು ಹಲ್ವಾವನ್ನು ತಿಂದೆ. ದೇವರ ಆಜ್ಞೆಯನ್ನು ನಾನು ಪಾಲಿಸದಿರುವುದು ಹೇಗೆ? ಈಗ ಹಲ್ವಾ ಉಳಿದಿಲ್ಲ!”

*****

೨. ನಗುವಿನಿಂದಾಗುವ ಲಾಭ

ಅಪರಿಚಿತನೊಬ್ಬ ಕಾಫಿಗೃಹದಲ್ಲಿ ಹೇಳುತ್ತಿದ್ದ ಬಲು ಉದ್ದನೆಯ ಕತೆಯೊಂದನ್ನು ಮುಲ್ಲಾ ನಜ಼ರುದ್ದೀನ್ ಬಲು ಏಕಾಗ್ರತೆಯಿಂದ ಕೇಳಿದ.

ಆದರೆ ಆ ಅಪರಿಚಿತನ ಉಚ್ಚಾರಣೆ ಅಸ್ಪಷ್ಟವಾಗಿದ್ದದ್ದಷ್ಟೇ ಅಲ್ಲದೆ ಮುಖ್ಯಾಂಶ ಸೂಚಕ ಪದಗಳ ಹೇಳುವಿಕೆಯೂ ಕುಲಗೆಟ್ಟಿತ್ತು. ತತ್ಪರಿಣಾಮವಾಗಿ ಕತೆ ಕೇಳುಗರನ್ನು ನಗಿಸುವಂತೆಯೂ ಇರಲಿಲ್ಲ. ಆ ಕತೆ ಕೇಳಿದವರ ಪೈಕಿ ನಕ್ಕದ್ದು ಮುಲ್ಲಾ ಒಬ್ಬ ಮಾತ್ರ! ಆ ಅಪರಿಚಿತ ಅಲ್ಲಿಂದ ಹೋದ ನಂತರ “ನಜ಼ರುದ್ದೀನ್‌ ನೀನು ನಕ್ಕದ್ದು ಏಕೆ?” ಎಂಬುದಾಗಿ ಯಾರೋ ಕೇಳಿದರು. “ನಾನು ಇಂಥ ಸನ್ನಿವೇಶಗಳಲ್ಲಿ ಯಾವಾಗಲೂ ನಗುತ್ತೇನೆ, ಆಗ ನಾನು ನಗದೇ ಇದ್ದಿದ್ದರೆ ಅವರು ಆ ಕತೆಯನ್ನು ಇನ್ನೊಮ್ಮೆ ಹೇಳುವ ಅಪಾಯವಿತ್ತು!”

*****

೩. ನೆನಪಿನ ಕಾಣಿಕೆ

“ನಜ಼ರುದ್ದೀನ್‌,” ಒಬ್ಬ ಸ್ನೇಹಿತ ಹೇಳಿದ, “ನಾನು ಬೇರೊಂದು ಹಳ್ಳಿಗೆ ವಲಸೆ ಹೋಗುತ್ತಿದ್ದೇನೆ. ನಿನ್ನ ಉಂಗುರವನ್ನು ನನಗೆ ಕೊಡುವೆಯಾ? ಏಕೆಂದರೆ ಅದನ್ನು ನಾನು ನೋಡಿದಾಗಲೆಲ್ಲ ನಿನ್ನನ್ನು ನೆನಪಿಸಿಕೊಳ್ಳುತ್ತೇನೆ.”

“ಓ, ನೀನು ಆ ಉಂಗುರವನ್ನು ಕಳೆದುಕೊಳ್ಳಬಹುದು ಹಾಗು ತದನಂತರ ನನ್ನನ್ನು ಮರೆತುಬಿಡಬಹುದು. ನಾನು ನಿನಗೆ ಉಂಗುರ ಕೊಡದೇ ಇದ್ದರೆ ಹೇಗೆ? ಆಗ ನೀನು ನಿನ್ನ ಬೆರಳು ನೋಡಿದಾಗಲೆಲ್ಲ ಅಲ್ಲಿ ಉಂಗುರ ಕಾಣಿಸುವುದಿಲ್ಲ, ಆಗ ನೀನು ಖಂಡಿತ ನನ್ನನ್ನು ನೆನಪಿಸಿಕೊಳ್ಳುವೆ.”

*****

೪. ಠಕ್ಕ ಫಕೀರ!

ಹಳ್ಳಿಯ ಕೇಂದ್ರ ಸ್ಥಳದಲ್ಲಿ ಫಕೀರನೊಬ್ಬ ನಿಂತುಕೊಂಡು “ದಿಢೀರ್‌ ತಂತ್ರ”ವೊಂದರ ನೆರವಿನಿಂದ ಅನಕ್ಷರಸ್ಥನಿಗೆ ಓದಲು ಕಲಿಸಬಲ್ಲೆ ಎಂಬುದಾಗಿ ಹೇಳಿಕೊಳ್ಳುತ್ತಿದ್ದ.

“ಸರಿ ಹಾಗಾದರೆ, ನನಗೆ ಕಲಿಸು,” ಹೇಳಿದ ನಜ಼ರುದ್ದೀನ್‌.

ಫಕೀರ ನಜ಼ರುದ್ದೀನನ ತಲೆಯನ್ನು ಮುಟ್ಟಿ ಹೇಳಿದ, “ಈಗ ಹೋಗು ಏನನ್ನಾದರೂ ಓದು.”

ನಜ಼ರುದ್ದೀನ್ ಮನೆಗೆ ಹೋದ. ಒಂದು ಗಂಟೆಯ ನಂತರ ಪುನಃ ಕೋಪೋದ್ರಿಕ್ತನಾದಂತೆ ಕಾಣುತ್ತಿದ್ದ ನಜ಼ರುದ್ದೀನ್‌ ಅಲ್ಲಿಗೆ ಹಿಂದಿರುಗಿದ.

“ಏನಾಯಿತು? ನೀನೀಗ ಓದಬಲ್ಲೆಯಾ?” ಕೇಳಿದರು ಹಳ್ಳಿಯವರು.

“ನಿಜವಾಗಿಯೂ ನಾನು ಓದಬಲ್ಲೆ. ಆದರೆ ನಾನು ಹಿಂದಿರುಗಿ ಬಂದದ್ದು ಆ ಕಾರಣಕ್ಕಲ್ಲ. ಈಗ ಎಲ್ಲಿದ್ದಾನೆ ಆ ಠಕ್ಕ ಫಕೀರ?”

ಜನ ಕೇಳಿದರು, “ಮುಲ್ಲಾ, ಒಂದು ನಿಮಿಷದ ಒಳಗೆ ಆತ ನಿನಗೆ ಓದುವುದನ್ನು ಕಲಿಸಿದ. ಅಂದಮೇಲೆ ಅವನೊಬ್ಬ ಠಕ್ಕ ಎಂಬುದಾಗಿ ಹೇಗೆ ಹೇಳುವೆ?”

ನಜ಼ರುದ್ದೀನ್‌ ವಿವರಿಸಿದ, “ನಾನು ಮನೆಗೆ ಹೋದ ಮೇಲೆ ಓದಲಾರಂಭಿಸಿದ ಪುಸ್ತಕದಲ್ಲಿ ‘ಎಲ್ಲ ಫಕೀರರೂ ಠಕ್ಕರು’ ಎಂಬುದಾಗಿ ಖಡಾಖಂಡಿತವಾಗಿ ಬರೆದಿತ್ತು.”

*****

೫. ನಜ಼ರುದ್ದೀನನ ಸವಿತಿನಿಸು

ನಜ಼ರುದ್ದೀನನೂ ಅವನ ಇಬ್ಬರು ಸಹಪ್ರಯಾಣಿಕರೂ ಪ್ರಯಾಣಾವಧಿಯಲ್ಲಿ ತಿನ್ನಲೆಂದೇ ತಾವು ತಂದಿದ್ದ ಬುತ್ತಿಗಳಲ್ಲಿದ್ದದ್ದನ್ನು ತಿನ್ನಲೋಸುಗ ಒಂದೆಡೆ ವಿರಮಿಸಿದರು.

ಅವರ ಪೈಕಿ ಒಬ್ಬ ಬಡಾಯಿಕೊಚ್ಚಿಕೊಂಡ, “ನಾನು ಯಾವಾಗಲೂ ಹುರಿದು ಉಪ್ಪು ಹಾಕಿದ ಪಿಸ್ತಾ ಬೀಜಗಳನ್ನು, ಗೋಡಂಬಿಗಳನ್ನು, ಖರ್ಜೂರಗಳನ್ನು ಮಾತ್ರ ತಿನ್ನುತ್ತೇನೆ.”

“ಓ, ನಾನು ಒಣಗಿಸಿದ ಸ್ಯಾಲಮನ್‌ಗಳನ್ನು ಮಾತ್ರ ತಿನ್ನುತ್ತೇನೆ,” ಹೇಳಿದ ಇನ್ನೊಬ್ಬ ಸಹಪ್ರಯಾಣಿಕ.

ಇಬ್ಬರೂ ನಜ಼ರುದ್ದೀನ್‌ ಏನು ಹೇಳುತ್ತಾನೆಂಬುದನ್ನು ಕೇಳಲು ಅವನತ್ತ ನೋಡಿದರು.                                                  

ಕೆಲವು ಕ್ಷಣಗಳ ನಂತರ ನಜ಼ರುದ್ದೀನ್‌ ಒಂದು ಬ್ರೆಡ್ ತುಂಡನ್ನು ಎತ್ತಿ ಹಿಡಿದು ಆತ್ಮವಿಶ್ವಾಸದಿಂದ ಹೇಳಿದ, “ನಾನು ತಿನ್ನುವುದು ಚೆನ್ನಾಗಿ ಪುಡಿ ಮಾಡಿ ಜಾಗರೂಕತೆಯಿಂದ ನೀರಿನೊಂದಿಗೆ ಬೆರೆಸಿ ನಿಗದಿತ ಪರಿಮಾಣದ ಯೀಸ್ಟ್‌ ಮತ್ತು ಉಪ್ಪು ಸೇರಿಸಿ ನಿಗದಿತ ಕಾಲದಲ್ಲಿ ನಿಗದಿತ ಉಷ್ಣತೆಯಲ್ಲಿ ಬೇಯಿಸಿದ ಗೋಧಿಯನ್ನು ಮಾತ್ರ!”

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x