ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವ ‘ಬಾಲ ಕಾರ್ಮಿಕ’ ಪದ್ಧತಿ…: ಹುಸೇನಮ್ಮ ಪಿ.ಕೆ. ಹಳ್ಳಿ

 

ಮಕ್ಕಳನ್ನು ‘ನಂದವನದ ಹೂಗಳು’ ಎನ್ನುತ್ತಾರೆ. ಮಕ್ಕಳು ಅಷ್ಟು ಮೃದು, ಅಮೂಲ್ಯ ಮತ್ತು  ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಮಕ್ಕಳು, ಪ್ರೀತಿಯ ಲಾಲನೆ-ಪಾಲನೆಯಲ್ಲಿ ಬೆಳೆಯಬೇಕಾದ ಅವಶ್ಯಕತೆ ಇರುತ್ತದೆ. ಒಂದು ವೇಳೆ ಇಂತಹ ವಾತ್ಸಲ್ಯ ದೊರಕದೆ ಹೋದರೆ, ಆರೋಗ್ಯ ಬೆಳವಣಿಗೆಯ ಜೊತೆಗೆ ಅವರ ಎಳೆಯ ಮನಸ್ಸಿನ ಮೇಲೂ ಇದು ದುಷ್ಪರಿಣಾಮ ಬೀರುತ್ತದೆ. ಆಡಿ ನಲಿಯಬೇಕಾದ ಸುಂದರ ಬಾಲ್ಯವನ್ನು ಅವರಿಂದ ಕಸಿದುಕೊಂಡಂತಾಗುತ್ತಿದೆ.  ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಬಾಲ್ಯದ ಸಂತೋಷವನ್ನು ಅನುಭವಿಸಲಾಗದೆ, ನಿರಾಶದಾಯಕ ಭವಿಷ್ಯದಲ್ಲಿ ತೊಳಲಾಡುವ ಪರಿಸ್ಥಿತಿ ಎದುರಾಗುತ್ತಿದೆ. ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುವ ‘ಬಾಲ ಕಾರ್ಮಿಕ ಪದ್ಧತಿ’ಯನ್ನು ತಿರುಗಿ ನೋಡಬೇಕಿದೆ.

ಪ್ರತಿ ವರ್ಷ ಜೂನ್ 12ರಂದು  ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ದಿನ ಆಚರಿಸುತ್ತೇವೆ. ನಾವು ಅದರ ಬಗ್ಗೆ ಮಾತನಾಡುತ್ತೇವೆ, ನಂತರ ಸುಮ್ಮನೆ ಆಗುತ್ತೇವೆ. ಆದರೆ, ಸಮಾಜ ಬದಲಾವಣೆ ಆಗಬೇಕೆಂಬ ಆಸೆ ಪ್ರತಿಯೊಬ್ಬರಲ್ಲಿಯೂ ಹುಟ್ಟುತ್ತದೆ. ಆದರೆ, ಆ ಬದಲಾವಣೆಯ ಆಸೆಯನ್ನು ಈಡೇರಿಸಿಕೊಳ್ಳುವಷ್ಟು ಶಕ್ತರಾಗಬೇಕು. ಇಂದಿಗೂ ಅನೇಕ ಹಳ್ಳಿಗಳಿಂದ ನಗರಗಳಿಗೆ ಮಕ್ಕಳು ವಲಸೆ ಹೋಗಿ ಗ್ಯಾರೇಜ್, ಹೋಟೆಲ್, ಬಟ್ಟೆ ಅಂಗಡಿ, ಮೈನಿಂಗ್ ಮತ್ತು ಲಾರಿಗಳಲ್ಲಿ ಕ್ಲೀನರ್ಗಳಾಗಿ, ಮತ್ತು ಇತರೆ ಕ್ಷೇತ್ರ್ರಗಳಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಲೆ ಇದ್ದಾರೆ. ಅವರ ಆಸೆ ಆಕಾಂಕ್ಷೆಗಳು ಮಣ್ಣುಪಾಲಾಗುತ್ತಿವೆ. ಇಂತಹ ಅನಾಹುತವನ್ನು ತಡೆಗಟ್ಟಗಲು ಸರ್ಕಾರಗಳು ಅನೇಕ ಕಾನೂನುನುಗಳನ್ನು  ಜಾರಿ ಮಾಡಿದ್ದರೂ, ಎಷ್ಟರ ಮಟ್ಟಿಗೆ ಪ್ರಯೋಜನವಾಗಿದೆ? ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ.

ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವ ಸಮಸ್ಯೆಗಳಲ್ಲಿ ಬಾಲ ಕಾರ್ಮಿಕ ಸಮಸ್ಯೆಯು ಒಂದು ಜ್ವಲಂತ ಸಮಸ್ಯೆಯಾಗಿದೆ. ಭವಿಷ್ಯಕ್ಕೆ ಕಂಟಕವಾಗುವ ಈ ಪದ್ಧತಿಯು  ಹೆಚ್ಚಿನ ಪ್ರಮಾಣದಲ್ಲಿ  ನಮ್ಮ ದೇಶದಲ್ಲಿದೆ ಎಂದು ಅಂತಾರಾಷ್ಟೀಯ ಸಂಘಟನೆಗಳಿಂದ ಸಾಭೀತುಗೊಂಡಿದೆ. 1991ರ ಗಣತಿಯ ಪ್ರಕಾರ ಸುಮಾರು 15 ಮಿಲಿಯನ್ ಬಾಲಕಾರ್ಮಿಕರಿದ್ದರೆ. 1998ರ ಸುಮಾರು 50 ಮಿಲಿಯಕ್ಕಿಂತ ಹೆಚ್ಚಾಗಿದ್ದಾರೆಂದು ಅಂದಾಜು ಮಾಡಲಾಗಿದೆ. ಯುನಿಸೆಫ್‍ನ ಒಂದು ಅಂದಾಜಿನ ಪ್ರಕಾರ, ಆರು ವರ್ಷದಿಂದ 14 ವರ್ಷದೊಳಗಿನ ಬಾಲ ಕಾರ್ಮಿಕರು ವಿಶ್ವದಲ್ಲಿ ಸುಮಾರು 200 ಮಿಲಿಯನ್ಗಿಂತ ಹೆಚ್ಚಾಗಿದ್ದಾರೆಂದು ಅಂದಾಜಿಸಲಾಗಿದೆ. ಅದರಲ್ಲಿ ಸುಮಾರು ಅರ್ಥದಷ್ಟು ಏಷ್ಯಾಖಂಡದಲ್ಲೆ ಇದ್ದಾರೆಂದು ವಾಖ್ಯಾನ ಹೊರಡಿಸಿದೆ.  

ಬಾಲ ಕಾರ್ಮಿಕರು ಹುಟ್ಟಿಕೊಳ್ಳಲು ಕಾರಣವೇನು?

ಅನಕ್ಷರತೆ, ಬಡತನ, ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ ಮತ್ತು ಇತ್ಯಾದಿ ಸಮಸ್ಯೆಗಳು ಬಾಲಕಾರ್ಮಿಕತೆಗೆ ಪ್ರಮುಖ ಕಾರಣಗಳಾಗಿವೆ. ಅತ್ಯಂತ ಕಡಿಮೆ ವಾರ್ಷಿಕ ವರಮಾನವನ್ನು ಹೊಂದಿರುವ ಕುಟುಂಬಗಳು, ಅವರ ಭವಿಷ್ಯವನ್ನು ರೂಪಿಸುವ ಸಾಮಥ್ರ್ಯವಿಲ್ಲದೆ ಮಕ್ಕಳನ್ನು ಜೀತಕ್ಕೆ ಇರಿಸಿ, ಅವರ ದುಡಿಮೆಯಿಂದ ದೈನಂದಿನ ಜೀವನ ನಡೆಸುವ ಜೀವನದ ಉಳಿವಿಗಾಗಿ ಅವರ ಮಕ್ಕಳ ಕೂಲಿಯನ್ನೆ ಅವಲಂಬಸಿರುವ ರೀತಿಯನ್ನು ನಾವು ಕಾಣಬಹುದಾಗಿದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ, ಇಳಿ ವಯಸ್ಸಿನಲ್ಲಿಯೆ ಮಕ್ಕಳು ಕೆಲಸಕ್ಕೆ ಗುರಿಯಾಗಿ, ಇಲ್ಲದ ತೊಂದರೆಗಳಿಗೆ ಅಹ್ವಾನವನ್ನು ತಂದುಕೊಳ್ಳುತ್ತಿದ್ದಾರೆ.  

ಇತಿಹಾಸದಿಂದಾಚಗೆ ನೋಡುವುದಾದರೆ…

ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಮಕ್ಕಳನ್ನು, ಅತ್ಯಂತ ಕಿರಿ ವಯಸ್ಸು ಅಂದರೆ- 4 ವರ್ಷದವರನ್ನು ಕಾರ್ಖಾನೆಗಳ ಅಪಾಯಕಾರಿ ಹಾಗೂ ಮಾರಕ ದುಡಿಮೆಯ ಸ್ಥಿತಿಗಳಲ್ಲಿ ದುಡಿಸಿಕೊಳ್ಳಲಾಗಿತ್ತು. ಕೈಗಾರಿಕಾ ಕ್ರಾಂತಿಯ ಕಾಲದಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಬಾಲ ಕಾರ್ಮಿಕ ಪದ್ದತಿಯು ಪ್ರಮುಖ ಪಾತ್ರವನ್ನು ವಹಿಸಿತು. ಉದಾಹರಣೆ: ಚಾಲ್ರ್ಸ್ ಡಿಕನ್ಸನ್ ತನ್ನ ಕುಟುಂಬದ ಸಾಲದ ಭಾದೆಯಿಂದಾಗಿ ತನ್ನ 12ನೇ ವಯಸ್ಸಿನಲ್ಲಿ ಬ್ಲ್ಯಾಕಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಬಡ ಕುಟುಂಬದಲ್ಲಿನ ಮಕ್ಕಳು ಕುಟುಂಬದ ಆರ್ಥಿಕತೆಯ  ನಿರ್ವಹಣೆಗಾಗಿ ಸಹಾಯ ಮಾಡಬೇಕಾಗಿದ್ದರಿಂದ, ಅಪಾಯಕಾರಿ ಕೆಲಸಗಳಲ್ಲಿ ದೀರ್ಘಾವಧಿವರೆಗೆ ಕಡಿಮೆ ವೇತನಕ್ಕಾಗಿ ದುಡಿಯುತ್ತಿದ್ದರು.  ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯಲ್ಲಿ ತೊಡಗುತ್ತಿದ್ದರು. ಇಲ್ಲಿ ಮಕ್ಕಳು 3ನೇ ವಯಸ್ಸಿನಲ್ಲಿರುವಾಗಲೆ ಅವರನ್ನು ಕೆಲಸಕ್ಕೆ ಹಾಕಲಾಗುತ್ತಿತ್ತು. ಕಲ್ಲಿದ್ದಲು ಗಣಿಗಳಲ್ಲಿ ಮಕ್ಕಳು ತಮ್ಮ 5ನೇ ವಯಸ್ಸಿಗೆ ದುಡಿಯಲು ಪ್ರಾರಂಭಿಸಿ, ಸಾಮಾನ್ಯವಾಗಿ ತಮ್ಮ 25ನೇ ವಯಸ್ಸಿನಲ್ಲಿ ಮರಣ ಹೊಂದುತ್ತಿದ್ದರು. 

ಕಿರಿದಾದ ಸುರಂಗ ಮಾರ್ಗಗಳಲ್ಲಿ ತೆವಳಿ ಕೆಲಸ ಮಾಡಲು ಮಕ್ಕಳನ್ನು ಉಪಯೋಗಿಸಿಕೊಳ್ಳತ್ತಿದ್ದರು, ಮಕ್ಕಳು ಸಂದೇಶವಾಹಕರಾಗಿ, ಕಸ ಗುಡಿಸುವವರಾಗಿ, ಬೂಟ್ ಪಾಲಿಶ್ ಮಾಡುವವರಾಗಿ, ಹೂವು ಕಟ್ಟುವುದು ಮತ್ತು  ಇತರೆ ಸರಕುಗಳನ್ನು ಸಾಗಿಸುವ ಕೆಲಸವನ್ನು ಮಾಡುತ್ತಿದ್ದರು. ಬಾಲಕಾರ್ಮಿಕ ವೃತ್ತಿಗಳಾದ ಮನೆಯಾಳು ಮತ್ತು ಕಟ್ಟಡದ ನಿರ್ಮಾಣಗಳಲ್ಲಿ ಕೆಲವು ಮಕ್ಕಳು ಉದ್ಯೋಗಾರ್ಥಿಗಳಾಗಿ ಕೆಲಸಕ್ಕೆ ಸೇರಿದ್ದರು. 18ನೇಶತಮಾನದ ಮಧ್ಯದಲ್ಲಿ ಲಂಡನ್ನಿನಲ್ಲಿ ಸುಮಾರು 1,20,000ಕ್ಕೂ ಮೇಲ್ಪಟ್ಟ ಮನೆ ಕೆಲಸದಾಳುಗಳಾಗಿದ್ದರು. ಅದರೆ, ಅಧುನಿಕ ಜಗತ್ತಿನಲ್ಲಿ ಇನ್ನೂ ಅನೇಕ ಕಡೆಗಳಲ್ಲಿ ಬಾಲ ಕಾರ್ಮಿಕ ಪದ್ದತಿ ಜೀವಂತಿಕೆಯಿಂದ ಇರುವುದು ವಿಷಾದಕರ ಸಂಗತಿಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲೆ ಅಂದರೆ 1948ರಲ್ಲೇ ಬಾಲಕಾರ್ಮಿಕ ವಿರೋಧಿ ಕಾನೂನು ಜಾರಿ ಮಾಡಲಾಯಿತು. 14 ವರ್ಷದ ಒಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಯಿತು. ನಂತರ ಕಾಲಕ್ರಮೇಣ ಕಾನೂನಿನಲ್ಲಿದ್ದ ಲೋಪಗಳನ್ನು ತಿದ್ದುಪಡಿ ಮಾಡಲಾಯಿತು. ಆದರೆ, ಈ ಕಾನೂನು ಅಷ್ಟೇನು ಪರಿಣಾಮಕಾರಿಯಾಗದಿದ್ದರೂ, ಇದರ ಭಯವನ್ನು ಅಲ್ಲಗಳೆಯುವಂತಿಲ್ಲ. ಇವೆಲ್ಲದರ ಅನುಷ್ಠಾನದ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕಾರ್ಮಿಕಾ ಇಲಾಖೆ ತೀವ್ರಗತಿಯ ಕಾಳಜಿವಹಿಸಿ ದಕ್ಷವಾಗಿ ಕಾರ್ಯನಿರ್ವಹಿಸಬೇಕಿದೆ.

ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ಬೀಳುವ ಪರಿಣಾಮಗಳು 

ಆರ್ಥಿಕ ಶೋಷಣೆಯಿಂದ ಮಕ್ಕಳನ್ನು ರಕ್ಷಿಸಲಾಗುವುದಿಲ್ಲ. ಅವರು ನಿರ್ವಹಿಸುವ  ಅಪಾಯಕಾರಿ ಕೆಲಸಗಳು ಹಲವಾರು ಸಮಯಗಳಲ್ಲಿ ಅವರ ಅಮೂಲ್ಯವಾದ ಜೀವನವನ್ನು ಬಲಿತೆಗೆದುಕೊಳ್ಳುತ್ತವೆ. ಇದರಿಂದ ಅವರ ಕುಟುಂಬದವರು ಜೀವನದಲ್ಲಿ ಸುಸ್ಥಿರತೆಯನ್ನು  ಕಂಡುಕೊಳ್ಳಲಾಗುವುದಿಲ್ಲ. ಮಕ್ಕಳಿಗೆ  ವಿದ್ಯಾಭ್ಯಾಸವನ್ನು ಕೊಡಿಸಲು ಕುಟುಂಬದವರು ಆರ್ಥಿಕ  ಸಾಮಥ್ರ್ಯವನ್ನು ಹೊಂದಿರುವುದಿಲ್ಲ. ಅದ್ದರಿಂದ ಅನಿವಾರ್ಯವಾಗಿ ಕೆಲವೊಮ್ಮೆ ಮಕ್ಕಳೆ ಮನೆಯನ್ನು ನೋಡಿಕೊಳ್ಳಬೇಕಾದ ಸಂಧಿಗ್ದತೆ ಒದಗಿ ಬರುತ್ತದೆ. ಮನೆಯವರ ಅರೋಗ್ಯಕ್ಕೆ ತೊಂದರೆಯಾದಲ್ಲಿ ಮಕ್ಕಳ ದೈಹಿಕ, ಮಾನಸಿಕ, ನೈತಿಕ ಮತ್ತು  ಸಾಮಾಜಿಕ ಬೆಳವಣಿಗೆಯು ಕುಂಠಿತವಾಗುತ್ತದೆ. 

 ಸಾಮಾನ್ಯವಾಗಿ ಬಾಲ ಕಾರ್ಮಿಕರು ಅಮಾನವೀಯ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಗಾಳಿ, ಬೆಳಕು ಕಾಣದೆ, ಹೋಗೆ ಧೂಳಿನಿಂದ ಕೂಡಿದ  ವಾತಾರಣದಲ್ಲಿ ಹಗಲು-ರಾತ್ರಿಯೆನ್ನದೆ  ಸತತವಾಗಿ ದುಡಿಯುವ ಅನಿವಾರ್ಯತೆ ಅವರದಾಗಿದೆ. ಇದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಒತ್ತಡಗಳು ಎದುರಾಗುತ್ತದೆ. ಕ್ಷಯ, ಅಸ್ತಮಾ, ಹೃದಯ ಸಂಬಂಧಿ ಖಾಯಿಲೆಗಳು ಮತ್ತು ಇನ್ನಿತರ ಚರ್ಮರೋಗಗಳಿಗೆ ತುತ್ತಾಗುವರಲ್ಲದೆ, ಕೆಲವರು ಅಕಾಲ ಮರಣಕ್ಕೂ ಗುರಿಯಾಗುತ್ತಿದ್ದಾರೆ. ಆದ್ದರಿಂದ ನಮ್ಮ ದೇಶದ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊರುವ ಮಕ್ಕಳನ್ನು ಭವಿಷ್ಯದ ಪ್ರಜೆಗಳನ್ನಾಗಿ ಮಾಡಬೇಕು. ಅವರನ್ನು ಅವರಿಷ್ಟದಂತೆ ಬದುಕಲು ಬಿಡಬೇಕು.

 1996ರಲ್ಲಿ ‘ಬಾಲ ಕಾರ್ಮಿಕ ನಿಷೇಧ’ ಕಾಯ್ದೆಯನ್ನು ಜಾರಿ ಮಾಡಲಾಯಿತು. ಈ ಕಾಯ್ದೆಗನುಗುಣವಾಗಿ ಮಕ್ಕಳನ್ನು ಕಠಿಣ ದುಡಿಮೆಗೆ  ತೊಡಗಿಸಿಕೊಳ್ಳವುದನ್ನು ನಿಷೇದಿಸಿದೆ.  ಸುಪ್ರೀಂ ಕೋರ್ಟ್ ಇತ್ತಿಚೆಗೆ ನೀಡಿದ  ಒಂದು ತೀರ್ಪಿನ ಪ್ರಕಾರ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ  ಮಾಲಿಕರು ಅಂತಹ ಮಕ್ಕಳ ಶಿಕ್ಷಣಕ್ಕಾಗಿ ಮೀಸಲು ನಿಧಿಗೆ ರೂ. 20,000 ನೀಡಬೇಕು ಎಂದು ಆದೇಶ ಹೊರಡಿಸಿದೆ. ಇದರಿಂದಾಗಿ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಕಾರ್ಯಕ್ಕೆ  ಮತ್ತಷ್ಟು ಉತ್ತೇಜನ ಬಂದಂತಾಗಿದೆ. ಇದರ ಆದೇಶದಂತೆ 14 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಸೇರಿಸುವುದನ್ನು ನಿಷೇಧಿಸಿದೆ. ಯುಎನ್‍ಓ ಹಾಗೂ ಯುನಿಸೆಫ್‍ಗೂ ಕೂಡ ಮಕ್ಕಳ ಈ ಸಮಸ್ಯೆಗಳನ್ನು ಬಗೆಹರಿಸಲು ಸಲಹೆ ಸೂಚನೆಗಳನ್ನು ನೀಡಿದೆ.

ಕಾನೂನಿನ ಪ್ರಕಾರ:

ಭಾರತದ ಸಂವಿಧಾನದ ಪ್ರಕಾರ ದೇಶದ ಎಲ್ಲ ಮಕ್ಕಳಿಗೂ ಉಚಿತ ಪ್ರಾಥಮಿಕ ಶಿಕ್ಷಣ ಕಲಿಕೆ ಕಡ್ಡಾಯ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಗಿದೆ.  ಕಾಯ್ದೆಯನ್ವಯ ಮಕ್ಕಳಿಗೆ ಶಿಕ್ಷಣ ಪೂರೈಕೆ ಮತ್ತು ರಕ್ಷಣೆ ಕೊಡಲೆಬೇಕು. ಇದರಿಂದ ಮಕ್ಕಳು ವಂಚಿತರಾದಲ್ಲಿ, ಸಂಬಂಧ ಪಟ್ಟ ಇಲಾಖೆಗಳಿಂದ ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪರಿಹಾರ  ಒದಾಗಿಸಲಾಗುವುದು. ಇದು ಎಲ್ಲರೂ ಅರಿತುಕೊಳ್ಳುವ ಮುಖ್ಯ ವಿಚಾರವಾಗಿದೆ. ಮೊದಲಿಗೆ ಪೋಷಕರು ಮತ್ತು ಕೆಲಸ ಮಾಡಿಸಿಕೊಳ್ಳವರು ನಿಮ್ಮ ಮನೆಯಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ,  1 ವರ್ಷ ಜೈಲು ಹಾಗೂ 20,000 ರೂ ದಂಡ ವಿಧಿಸಲಾಗುತ್ತದೆ. ಒಂದು ವೇಳೆ, ಸರಕಾರಿ ನೌಕರರಾಗಿದ್ದು ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡರೆ, ಸರ್ಕಾರಿ ಕೆಲಸದಿಂದ ವಜಾ ಮಾಡುವ ಅಧಿಕಾರವನ್ನು ಈ ಕಾಯ್ದೆ ಹೊಂದಿದೆ. 

ನಮ್ಮ ಮುಂದೆ ಇರುವ ಸವಾಲುಗಳು, ನಮ್ಮ ಸರ್ಕಾರಗಳು ಭಾರತದಲ್ಲಿರುವ ಪ್ರತಿ ಬಡಕುಟುಂಬಗಳಿಗೂ ಒಂದು ಮಟ್ಟದ ಆರ್ಥಿಕ ಭದ್ರತೆ ಮತ್ತು ಕನಿಷ್ಠ ಮೂಲ ಸೌಕರ್ಯಗಳನ್ನು ಖಾತ್ರಿಗೊಳಿಸಬೇಕು. ಬಾಲ ಕಾರ್ಮಿಕ ಪದ್ದತಿಯಿಂದ ಮಕ್ಕಳ ಬೆಳವಣಿಗೆಯ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು ಮತ್ತು  ಬಾಲ ಕಾರ್ಮಿಕ ಪದ್ಧತಿಯನ್ನು ಪೋಷಿಸುತ್ತಿರುವವರನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸಬೇಕು ಎಂಬುದಾಗಿವೆ. ಈ ಪದ್ಧತಿಗೆ ಒಳಗಾಗಿರುವ ಮಕ್ಕಳನ್ನು ಬಿಡುಗಡೆ ಮಾಡಿ, ಸರಕಾರಿ ಶಾಲೆಗೆ ಅಥವಾ ಜಿಲ್ಲಾಡಳಿತ ನಡೆಸುವ ಬಾಲ ಕಾರ್ಮಿಕ ವಿಶೇಷ ವಸತಿ ಶಾಲೆಗಳಿಗೆ ದಾಖಲಿಸಿ, ಮಕ್ಕಳು ಬಾಲ್ಯಶಿಕ್ಷಣ ಮತ್ತು ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗುವುದು ಮಖ್ಯ ಕರ್ತವ್ಯವಾಗಿದೆ. ಆದ್ದರಿಂದ, ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಮಕ್ಕಳ ಹಿತ ದೃಷ್ಟಿಯಿಂದ ಅವರಿಗೆ ಪೂರಕವಾಗಿ ರೂಪಿಸಲಾದ ಅನೇಕ ಕಾನೂನುಗಳನ್ನು ಪಾಲಿಸಬೇಕಾದುದು ನಮ್ಮ ಕರ್ತವ್ಯವಾಗಬೇಕಾದೆ.

-ಹುಸೇನಮ್ಮ ಪಿ.ಕೆ. ಹಳ್ಳಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ವೈ.ಕೆ.ಸಂಧ್ಯಾ ಶರ್ಮ
ವೈ.ಕೆ.ಸಂಧ್ಯಾ ಶರ್ಮ
5 years ago

ಮಾನ್ಯರೆ,
ಇದು ನಾನು ಜನಪದ -ವಾರ್ತಾ ಇಲಾಖೆಯ ಮಾಸಪತ್ರಿಕೆಗೆ ಬರೆದ ಲೇಖನ. ಇದನ್ನು ಮೊದಲರ್ಧ ಅನಾಮತ್ತಾಗಿ ಹುಸೆನಮ್ಮ ಪಿ.ಕೆ.ಹಳ್ಳಿ ಕೃತಿಚೌರ್ಯ ಮಾಡಿದ್ದಾರೆ. ಕಡೆಯರ್ಧ ವಿಕಿಪೀಡಿಯಾ ಮತ್ತು ವಿಕಾಸ್ ಪೀಡಿಯಾದಿಂದ ತೆಗೆದುಕೊಂಡಿರುವುದು. ಮಾಹಿತಿ ಎಲ್ಲಿಂದ ಬೇಕಾದರೂ ತೆಗೆದುಕೊಳ್ಳಬಹುದು. ಆದರೆ ವಾಕ್ಯರಚನೆ, ಭಾವ-ಕಲ್ಪನೆ , ಇಡಿಯಾಗಿ ಇಪ್ಪತ್ತು ಸಾಲುಗಳನ್ನು ಎತ್ತಿ ಬಳಸುವುದು, ಮೂಲ ಲೇಖಕರನ್ನು ಸ್ಮರಿಸದೆ ತೆಗೆದುಕೊಳ್ಳುವುದು ಸರಿಯಲ್ಲ. ಸ್ವಂತ ಆಲೋಚನೆ,ಬರೆಯುವ ಶೈಲಿಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು.

1
0
Would love your thoughts, please comment.x
()
x