ಮೊದಲು ಓದುಗನಾಗು

ಸುಡುವ ಬೆಂಕಿಯ ನಗು ಪುಸ್ತಕ ವಿಮರ್ಶೆ: ಸಚಿನ್‍ಕುಮಾರ ಬಿ.ಹಿರೇಮಠ

                                                                                                                   

ಪುಸ್ತಕದ ಹೆಸರು : ಸುಡುವ ಬೆಂಕಿಯ ನಗು (ಕವನ ಸಂಕಲನ)

ಕವಿ : ಸುರೇಶ ಎಲ್. ರಾಜಮಾನೆ (ಎಲ್ಲಾರ್ ಸೂರ್ಯ)

ಪ್ರಕಾಶಕರು : ವಿಕ್ರಮ ಪ್ರಕಾಶನ, ನಂ 240, ಕೆಂಪಾಪುರ, ಹೆಬ್ಬಾಳ, ಬೆಂಗಳೂರು

ಪುಟಗಳು : 96

ಬೆಲೆ : 80/-

ಕನ್ನಡ ಸಾರಸತ್ವ ಲೋಕದಲ್ಲಿ ದಿನೇ ದಿನೇ ಅನೇಕ ಕವಿಗಳು ತಮ್ಮ ಕಾವ್ಯ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಫೇಸ್‍ಬುಕ್, ಬ್ಲಾಗ್ ಅಥವಾ ತಮ್ಮದೇ ಸ್ವಂತ ಜಾಲತಾಣಗಳನ್ನು ಸೃಷ್ಟಿಸಿ ತಮ್ಮ ಕಾವ್ಯ ಪ್ರೌಢಿಮೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಂತಹ ಉದಯೋನ್ಮುಖ ಕವಿಗಳಲ್ಲಿ ರನ್ನನೂರಾದ ಮುಧೋಳ ತಾಲೂಕಿನ ಸುರೇಶ ಎಲ್.ರಾಜಮಾನೆ ಒಬ್ಬರು. ಇದೇ ವರ್ಷ ಈ ಕವಿಯ ‘ಸುಡುವ ಬೆಂಕಿಯ ನಗು’ ಎಂಬ ಕವನ ಸಂಕಲನ ಫೇಸ್ ಫೌಂಡೇಷನ್ ವತಿಯಿಂದ ಬಿಡುಗಡೆಯಾಯಿತು. ಅದೇ ಭರದಲ್ಲಿ ಕೃತಿ ಕೈ ಸೇರಿತು. 

ಸುರೇಶ ಎಲ್. ರಾಜಮಾನೆಯವರ ‘ಸುಡುವ ಬೆಂಕಿಯ ನಗು’ ಓದುತ್ತ ಓದುತ್ತ ನಮ್ಮ ಅಂತರಾಳದಲ್ಲಿ ನಾವು ಬಂಧಿಯಾಗುತ್ತೇವೆ. ಅವರು ನೇರವಾಗಿ ನಮ್ಮ ಬದುಕಲ್ಲಿ ಎಂದೋ ನಡೆದು ಹೋದ ಕೆಲವು ಸಂಗತಿಗಳನ್ನು ನಮಗೆ ನೆನೆಪಿಸಿ ಬದುಕಿನ ವಿವಿಧ ಆಯಾಮಗಳನ್ನು ದರ್ಶಿಸುತ್ತಾರೆ. 

 
 
ಸುರೇಶ ಎಲ್. ರಾಜಮಾನೆ  

ಸುರೇಶ ಅವರ ಕವಿತೆಗಳಲ್ಲಿ ವಯೋ ಸಹಜವಾದ ವಿರಹ, ಪ್ರೀತಿ, ನೋವು, ನಲಿವು ಹಾಗೂ ಬದುಕಿನ ಮೈಲಿಗಲ್ಲಂತಿರುವ ಬಡತನ, ಶ್ರೀಮಂತಿಕೆ ಅಲ್ಲದೇ ಪರಿಸರ ಕಾಳಜಿ, ಅಸಹನೆ, ಭವಿತವ್ಯದ ಆಶಾವಾದ ಮುಂತಾದವುಗಳೆಲ್ಲ ಸಮ್ಮಿಳಿತಗೊಂಡಿವೆ. ಕನಸುಗಾರರಾಗಿ ತೋರುವ ಕವಿ ಸುರೇಶ ತಮ್ಮ ಕನಸನ್ನು ‘ನನ್ನೆದೆಯ ಕನಸುಗಳು’ ಎಂಬ ಕವನದಲ್ಲಿ ಹೀಗೆ ವಿವರಿಸುತ್ತಾರೆ.     

        “ಬಾಡುತ್ತೇನೆಂದು ಹೆದರಿ ಮೊಗ್ಗಾಗಿವೆ
          ಹಾಡುತ್ತಾರೆಂದು ಹೆದರಿ ಅರ್ಥವಿಲ್ಲದ ಪದವಾಗಿವೆ
          ಕೇಳುತ್ತಾರೆಂದು ಹೆದರಿ ಮಾತಿಲ್ಲದಂತಾಗಿವೆ
          ನೀ ಬರುವ ದಾರಿಯಲ್ಲಿ
          ಕಂಬನಿಗೆರೆಯುತ ಕಾಯುತಿವೆ:
          ನನ್ನೆದೆಯ ಕನಸುಗಳು ನಿನ್ನೆದೆಯ ಸೇರಲು”

ಕನಸುಗಳು ಕೂಡ ಅಸ್ಖಲಿತ ಭಾವಗಳು ಎಂಬ ನಂಬುಗೆ ಅವರದು. ಪ್ರೀತಿಯನ್ನು ಕವಿ ಸುರೇಶ ಅವರ ಕವಿತೆಗಳಿಮದಲೇ ತಿಳಿದುಕೊಳ್ಳಬೇಕು. ಮನದನ್ನೆಯ ಬಗೆಗಿನ ಪ್ರೀತಿಯನ್ನು ‘ಕಾವ್ಯ ಕನ್ನಿಕೆ’ ಎಂಬ ಕವನದಲ್ಲಿ ಹೀಗೆ ಹೇಳುತ್ತಾರೆ.       

        “ಮನದಲ್ಲಿಳಿದು ಮರೆಯಾದರೆ
         ವರ್ಣಿಸುವ ಸಂತೋಷ ಪದಗಳಿಗೆಲ್ಲಿದೆ?
         ಪ್ರೀತಿ ತೋರಿ ನೀ ನನ್ನವಳಾದರೆ
         ನನ್ನಷ್ಟು ಸಂತೋಷ ಇನ್ನಾರಿಗಿದೆ?”

ಪ್ರೇಯಸಿಯ ಸನಿಹಕ್ಕಿಂತ ಹಿತವಾದ ಸುಖವಿಲ್ಲ ಎಂಬ ರಸಾನುಭಾವ ಇವರ ಹಲವು ಕವಿತೆಗಳಲ್ಲಿ ಸಿಗುತ್ತದೆ. ಬದುಕಿನ ನೋವುಗಳಲ್ಲಿ ಹೆತ್ತವರ ನೋವು ನಲಿವುಗಳು ಮುಖ್ಯ. ಅಪ್ಪನ ಬಗೆಗೆ ಕವಿ ಅನೇಕ ಸತ್ಯಗಳನ್ನು ಬಿಚ್ಚಿ ನಮ್ಮನ್ನು ಚಿಂತನೆಗೆ ಒಳಪಡಿಸತ್ತಾರೆ. ‘ನೆರಳಾಗುವ ಮುನ್ನ’ ಎಂಬ ಕವಿತೆಯಲ್ಲಿ,         

        “ಅಪ್ಪ ನನಗೆಲ್ಲ ಕಲಿಸಿದ
          ಅವನು ಕಲಿತಿಲ್ಲ
          ಯಾಕೋ ಗೊತ್ತಿಲ್ಲ..
          ಅವನು ಕಲಿತಿದ್ರೆ ಹೀಗಿರ್ತಿಲಿಲ್ಲ”

ಎಂದು ತಂದೆಯ ಒಡನಾಟದ ಬಗ್ಗೆ ತಂದೆಯೇ ಗುರುವಾದ ಬಗ್ಗೆ ಹೇಳಿಕೊಳ್ಳುತ್ತಾರೆ. ಹೀಗೆ ಕಲಿಸಿದ ಗುರುವಿನಂತಹ ತಂದೆ ದೂರವದಾಗ ಆ ಅಸಹನೆಯನ್ನು ಹೀಗೆ ಹೊರ ಹಾಕುತ್ತಾರೆ.

          “ಹೌದು ಅಪ್ಪ ಬೆರಳು ಹಿಡಿದು ನಡೆಸಿದ
          ಬರೆಯುವ ಕೈಯನು
          ಕಾಲ್ ನಡಿಗೆಯಲಿ ನಡೆಯುವ ದಾರಿಯಲಿ
          ಗಿಡವ ಹಚ್ಚಿ ಬಿಟ್ಟ ಹಸಿರಾಗಲು ಭೂಮಿ
          ಆದರೆ
          ಅಮ್ಮನ ಒಡಲಿನ ಉರಿಗೆ
          ನೆರಳು 
          ನಾನಾಗುವ ಮುನ್ನವೇ ಉಸಿರು ಬಿಟ್ಟ”

ಬಡತನ ಬದುಕಲ್ಲಿ ಅನೇಕ ಪಾಠ ಕಲಿಸುತ್ತದೆ ಎನ್ನುವುದನ್ನು ಒಪ್ಪಿಕೊಳ್ಳುವಂತೆ ಮಾಡುತ್ತಾರೆ ಕವಿ ಸುರೇಶ. ‘ಮುದುಡದ ಜೀವನ’ ಎಂಬ ಕವಿತೆಯಲ್ಲಿ ಬಡತನವನ್ನು ಹಳಿಯದೇ ಮುಂದೆ ಸಗುತ್ತಾರೆ.         

         ‘ಹಣೆಯ ಮೇಲೆ
           ಬೆವರು,  ಹಸಿದ ಮೈಗೆ
           ಆಯಾಸದೂಟ |
           ಬಟ್ಟೆ ಹರಿದದ್ದು
           ಬದುಕನ್ನು ಬಿಂಬಿಸಿತು        

          ಮುಡಿಗೇರಿದ ಮಲ್ಲಿಗೆ

          ಹೂ ಬಡಿದರದರ

          ಬದುಕು ಕ್ಷೀಣ |
          ಬಾಡಿದ ಬದುಕನು
          ಅರಳಿಸಲರಿತರೇ ನಿತ್ಯವೂ
          ಸುಂದರ ಜೀ(ಕ)ವನ

ಜೀವನವನ್ನು ಬದುಕುವ ಕಲೆಯನ್ನಯ ಅರಿತುಕೊಂಡರೆ ಸಾಕು ಬದುಕು ಮತ್ತೇ ಅರಳುತ್ತದೆ ಎಂಬುದು ಅವರ ಅಂಬೋಣ. ಸುರೇಶ ಅವರ ಕವಿತೆಗಳು ಸಮಾಜ ಮುಖಿಯಾದವುಗಳು. ಕೇವಲ ಒಂದೇ ಆಯಾಮವನ್ನು ಪಡೆಯದೇ ಸಮಾಜದ ಓರೆ ಕೋರೆಗಳನ್ನು ತಿದ್ದುವತ್ತ ತುಡಿಯುತ್ತವೆ. ಈ ತುಡಿತವನ್ನು ಅವರ ‘ಪಾಪದ ಬೆಂಬಲಿಗರು ಎಂಬ ಕವನದಲ್ಲಿ ಈ ರೀತಿಯಾಗಿ ಕಾಣಬಹುದು.        

       “ನನ್ನದು ಈ ಧರ್ಮ ಇದರಂತೆ ನಾನು, ನಾವು
     ನಾವಾಗಿರಬೇಕು ನಾನಾರೆಂಬುದೆ ನನಗರಿವಿಲ್ಲದಿರುವಾಗ
         ನನಗೇನಿದೆ? ನಂದೇನಿದೆ? ನನ್ನದೇನು?
         ಎಂಬುದರ ಚಿಂತೆ ಏಕೆ? ಚಿತೆಯೊಳಗಿಡಬೇಕು
         ಧರ್ಮಗಳನು ಕಟ್ಟಿ ಸುತ್ತಿ.”

ಮಾನವ ಇಂದು ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ಅಸಹ್ಯ ಕಾರ್ಯಾಚರಣೆಗಳು ಹಾಗೂ ರಕ್ತಪಾತಗಳನ್ನು ಕಂಡು ಕವಿ ಮನ ಮಾನವ ಧರ್ಮವನ್ನು ಹೊರತುಪಡಿಸಿ ಎಲ್ಲ ಧರ್ಮಗಳನ್ನು ಕಟ್ಟಿಡಬೇಕೆನ್ನುತ್ತಾರೆ. ಇಷ್ಟೇ ಅಲ್ಲದೇ ಕವಿ ತಮ್ಮ ಸುಡುವ ಬೆಂಕಿಯ ನಗುವಿನಲ್ಲೇ ದೇಶಪ್ರೇಮ ಹಾಗೂ ನಾಡಭಕ್ತಿಯನ್ನು ಪ್ರದರ್ಶಿಸಿದ್ದಾರೆ. ತಮ್ಮ ‘ಭಾರತ ಕವಿತೆ’ ಎಂಬ ಕವಿತೆಯಲ್ಲಿ ಹೀಗೆ ಬರೆಯುತ್ತಾರೆ.          

         “ನನ್ನದೆನ್ನುವ ಬದಲು ನಮ್ಮೆದೆಂಬುವ ನುಡಿ
           ಅಡಗಿದೆ ಮಣ್ಣಿನ ಉದರದಲಿ ಹೆಣ್ಣಿನ
           ಹೃದಯವಿಹುದು ಈ ಮಣ್ಣಿನಲಿ”

ಭಾರತ ದೇಶವನ್ನು ಒಂದು ಹೆಣ್ಣಿನ ಹೃದಯಕ್ಕೆ ಹೋಲಿಸಿ ಆರಾಧಿಸುವ ಕಲ್ಪನೆ ಕವಿ ಸುರೇಶರ ಸೃಜನಶೀಲತೆಗೊಂದು ಹಿಡಿದ  ಕನ್ನಡಿ. 

ಒಟ್ಟಿನಲ್ಲಿ ‘ಸುಡುವ ಬೆಂಕಿಯ ನಗು’ ಓದುತ್ತಾ ಹೋದಂತೆ ಬೆಂಕಿಯ ನಡುವಿನ ವಿವಿಧ ಅನುಭೂತಿಗಳನ್ನು ಅನುಭವಿಸಿದಂತಾಗುತ್ತದೆ. ಕವಿತೆಗಳು ಭಾವದಾಚೆಗೂ ಚಿಮ್ಮಿ ಬದುಕಿನ ಸತ್ಯಾಸತ್ಯತೆ, ಹೊಯ್ದಾಟಗಳು, ರಾಗ-ದ್ವೇಷಗಳು, ಸನಿಹ- ವಿರಹಗಳು, ನೋವು ನಲಿವುಗಳು, ತುಡಿತಗಳು, ಜವಾಬ್ದಾರಿಗಳು, ಮಾನವ ಧರ್ಮ ಹಾಗೂ ಎಚ್ಚರಿಕೆಯ ಮಾತುಗಳು ಅನಿರ್ಭವಿಸುತ್ತದೆ. 

ಆದರೆ ಬೆರಳಂಚಿನ ಜಗತ್ತಿನಲ್ಲಿ ದೀರ್ಘ ಓದು ನಗಣ್ಯವಾಗುತ್ತಿದ್ದು ಒಂದು ವಿಷಾದಕರ ಸಂಗತಿ. ಈ ನಿಟ್ಟಿನಲ್ಲಿ ಸುರೇಶ ಅವರ ಕವಿತೆಗಳು ಗಾತ್ರದಲ್ಲಿ ತುಸು ದೀರ್ಘವೆನಿಸುತ್ತವೆಯಾದರೂ ಓದುತ್ತಾ ಹೋದಂತೆ ಲಘುವೆನಿಸುತ್ತವೆ.

ಈಗಾಗಲೇ ಬ್ಲಾಗ್, ಫೇಸ್‍ಬುಕ್‍ನಲ್ಲಿ ಪರಿಚಿತರಾಗಿರುವ ಸುರೇಶ ಎಲ್. ರಾಜಮಾನೆ ಒಬ್ಬ ಭಾವಜೀವಿ. ಕವನ ಸಂಕಲನವನ್ನು ಆದಷ್ಟು ಬೇಗ ತರಿಸಿಕೊಂಡು ಓದಿ.

— ಸಚಿನ್‍ಕುಮಾರ ಬಿ.ಹಿರೇಮಠ (ರನ್ನ ಕಂದ)