ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಪಕ್ಷಿಗಳು ಇರುವುದೇ  ಹಾರಾಡುವುದಕ್ಕಾಗಿ
ಒಂದು ದಿನ ಹಸ್ಸಿದ್‌ನ ಮುಮುಕ್ಷು ಜೂಸಿಯಾ ಎಂಬಾತ ಪರ್ವತ ಪ್ರದೇಶದಲ್ಲಿ ಅಡ್ಡಾಡುತ್ತಿದ್ದಾಗ ಒಬ್ಬ ತನ್ನ ಮನೆಯ ಹೊರಗೆ ಪಂಜರದಲ್ಲಿ ಬಂಧಿಸಿ ಇಟ್ಟಿದ್ದ ಅನೇಕ ಪಕ್ಷಿಗಳನ್ನು ನೋಡಿದ. ಜೂಸಿಯಾ ಪಂಜರದ ಬಾಗಿಲು ತೆರೆದ — ಏಕೆಂದರೆ ಪಕ್ಷಿಗಳು ಇರುವುದೇ ಹಾರಾಡುವುದಕ್ಕಾಗಿ — ಎಲ್ಲ ಪಕ್ಷಿಗಳೂ ಹಾರಿಹೋದವು.

ಪಂಜರದ ಮಾಲಿಕ ತನ್ನ ಮನೆಯಿಂದ ಹೊರಗೋಡಿಬಂದು ಕೇಳಿದ, “ಇದೇನು ಮಾಡಿದೆ ನೀನು?”
ಜೂಸಿಯಾ ಹೇಳಿದ, “ಪಕ್ಷಿಗಳಿರುವುದೇ ಹಾರಾಡುವುದಕ್ಕಾಗಿ. ನೋಡು, ನೋಡು, ಹಾರಾಡುವಾಗ ಅವು ಎಷ್ಟು ಸುಂದರವಾಗಿ ಕಾಣಿಸುತ್ತವೆ?”

ಆದರೆ ಆ ಪಂಜರದ ಮಾಲಿಕನ ಆಲೋಚನೆ ಬೇರೆಯದೇ ಆಗಿತ್ತು. ಅವನು ಜೂಸಿಯಾನಿಗೆ ಚೆನ್ನಾಗಿ ಹೊಡೆದ. ಅವನ ಇಡೀ ದಿನ ನಾಶವಾಗಿತ್ತು, ಆ ದಿನ ಮಾರುಕಟ್ಟೆಗೆ ಹೋಗಿ ಆ ಪಕ್ಷಿಗಳನ್ನು ಮಾರುವ ಯೋಜನೆ ಅವನದಾಗಿತ್ತು, ತದನಂತರ ಮಾಡಬೇಕಾದ ಕೆಲಸಗಳು ಅನೇಕವಿದ್ದವು — ಈಗ ಜೂಸಿಯಾ ಅವನ ಎಲ್ಲ ಯೋಜನೆಗಳನ್ನೂ ನಾಶ ಮಾಡಿದ್ದ.

ಅವನು ಜೂಸಿಯಾನಿಗೆ ಚೆನ್ನಾಗಿ ಹೊಡೆಯುತ್ತಲೇ ಇದ್ದ,  ಜೂಸಿಯಾ ನಗುತ್ತಲೇ ಇದ್ದ, ಜೂಸಿಯಾ ನಲಿಯುತ್ತಿದ್ದ — ಆ ಮಾಲಿಕ ಹೊಡೆಯುತ್ತಲೇ ಇದ್ದ! ಜೂಸಿಯಾ ಒಬ್ಬ ಹುಚ್ಚನಿರಬೇಕು ಎಂಬುದಾಗಿ ಆ ಮಾಲಿಕ ತೀರ್ಮಾನಿಸಿದ. ಅವನು ಹೊಡೆಯುವುದನ್ನು ನಿಲ್ಲಿಸಿದಾಗ ಜೂಸಿಯಾ ಕೇಳಿದ, “ ಹೊಡೆಯುವುದು ಮುಗಿಯಿತೋ, ಇಲ್ಲ ಇನ್ನೂ ಬಾಕಿ ಇದೆಯೋ? ಮುಗಿದಿದ್ದರೆ ನಾನು ಹೋಗುತ್ತೇನೆ.” ಮಾಲಿಕನಿಗೆ ಉತ್ತರ ಕೋಡಲು ಆಗಲಿಲ್ಲ. ಉತ್ತರ ಕೊಡಬೇಕೆಂದರೂ ಏನೆಂದು ಕೊಡುವುದು? ಈ ಮನುಷ್ಯ ನಿಜವಾಗಿಯೂ ಹುಚ್ಚನಾಗಿರಲೇ ಬೇಕು! ಜೂಸಿಯಾ ಆನಂದದಿಂದ ಹಾಡಲಾರಂಭಿಸಿದ. ಅವನಿಗೆ ಬಲು ಖುಷಿಯಾಗಿತ್ತು — ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತಿರುವುದನ್ನು ನೋಡಿ ಆನಂದಿಸುತ್ತಿದ್ದ, ಇದರಿಂದಾಗಿ ಆ ಮಾಲಿಕ ಹೊಡೆಯುತ್ತಿದ್ದರೂ ಅವನಿಗೆ ನೋವಾಗಿರಲಿಲ್ಲ, ಇದೂ ಅವನ ಆನಂದಕ್ಕೆ ಕಾರಣವಾಗಿತ್ತು. ಏಟುಗಳನ್ನು ಉಡುಗೊರೆಯಾಗಿ ಸ್ವೀಕರಿಸಲು ಸಾಧ್ಯವಾದದ್ದಕ್ಕೆ ಅವನಿಗೆ ಆನಂದವಾಗಿತ್ತು. ದೇವರಿಗೆ ಕೃತಜ್ಞತೆಗಳನ್ನು ಅರ್ಪಿಸಲು ಪೆಟ್ಟು ತಿಂದ ನಂತರವೂ ಸಾಧ್ಯವಾದದ್ದಕ್ಕೆ ಅವನಿಗೆ ಆನಂದವಾಯಿತು. ಯಾರನ್ನೂ ಅವನು ದೂರುವಂತೆಯೇ ಇರಲಿಲ್ಲ.

ಜೂಸಿಯಾನ ಮನೋಧರ್ಮ ಇಡೀ ಸನ್ನಿವೇಶದಲ್ಲಿ ಭಾರೀ ಬದಲಾವಣೆಯನ್ನೇ ಉಂಟುಮಾಡಿತ್ತು! ಬಂದದ್ದೆಲ್ಲವನ್ನೂ ಅವಿರುವ ಹಾಗೆಯೇ ಸಂತೋದಿಂದ ಸ್ವೀಕರಿಸುವ ಮನೋಧರ್ಮ!!!

*****

೨. ಮೂರು ಪ್ರಶ್ನೆಗಳು
ಒಬ್ಬ ಮನುಷ್ಯ ತನ್ನ ಹತ್ತಿರ ಏನೇನು ಸೌಲಭ್ಯಗಳು ಇರಬೇಕೆಂದು ಬಯಸಬಹುದೋ ಅವೆಲ್ಲವೂ ಒಬ್ಬ ಸುಲ್ತಾನನ ಹತ್ತಿರ ಇದ್ದವು. ಆದರೂ ಜೀವನದ ಉದ್ದೇಶ ಏನೆಂಬುದು ಅವನಿಗೆ ತಿಳಿದಿರಲಿಲ್ಲ. ಈ ಮುಂದಿನ ಮೂರು ಪ್ರಶ್ನೆಗಳು ಅವನನ್ನು ಕಾಡಲಾರಂಭಿಸಿದವು:
೧. ನಾನೇನು ಮಾಡಬೇಕು?
೨. ನಾನು ಮಾಡಬೇಕೆಂದು ದೇವರು ಹೇಳಿದ್ದನ್ನು ನಾನು ಯಾರೊಂದಿಗೆ ಮಾಡಬೇಕು?
೩. ಅದನ್ನು ನಾನು ಯಾವಾಗ ಮಾಡಬೇಕು?

ಎಲ್ಲ ರೀತಿಯ ವಿವೇಕಿಗಳನ್ನು ಕರೆಯಿಸಿ ಈ ಕುರಿತಾದ ಸಲಹೆಗಳನ್ನು ನೀಡುವಂತೆ ಸುಲ್ತಾನ ಅವರನ್ನು ಕೇಳುತ್ತಿದ್ದ. ಆ ಸಂದರ್ಭದಲ್ಲಿ ಯಾರೋ ಅವನಿಗೆ ಹೇಳಿದರು – ಬಹು ದೂರದ ಒಂದೂರಿನಲ್ಲಿ ಇರುವ ಚಿಷ್ತಿ ಎಂಬ ಫಕೀರನನ್ನು ಕೇಳಿದರೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರೆತೀತು. ತಕ್ಷಣವೇ ಆ ಫಕೀರನನ್ನು ಕಾಣಲೋಸುಗ ಸುಲ್ತಾನ ತ್ರಾಸದಾಯಕವಾದ ಸುದೀರ್ಘ ಪ್ರಯಾಣವನ್ನು ಕೈಗೊಂಡ. ಅನೇಕ ವಾರಗಳ ಕಾಲ ಪಯಣಿಸಿ ಸುಲ್ತಾನ ಆ ಫಕೀರನನ್ನು ಭೇಟಿ ಮಾಡಿದ. ತನ್ನ ಸ್ವಂತ ಜಮೀನಿನಲ್ಲಿ ಆ ಫಕೀರ ಉಳುಮೆ ಮಾಡುತ್ತಿದ್ದ. ಅವನೊಬ್ಬ ಬಲು ಸರಳ ವ್ಯಕ್ತಿಯಾಗಿದ್ದನೇ ವಿನಾ ದಡ್ಡನಾಗಿರಲಿಲ್ಲ. ಒಂದು ಪರ್ಷಿಯನ್‌ ಭಾಷೆಯ ಚತುಷ್ಪದಿಯನ್ನು ಪುನಃಪುನಃ ಹಾಡುತ್ತಾ ತನ್ನ ಕೆಲಸ ಮಾಡುತ್ತಿದ್ದ.

‘ಜ್ಞಾನಕ್ಕೂ ಅತೀತವಾದ ಕೆಲಸವೊಂದಿದೆ, ಅದನ್ನು ಮನಗಾಣು ಹೋಗು!
ಅನರ್ಘ್ಯಮಣಿ ಗಳಿಸಲೋಸುಗ ಶ್ರಮಿಸದಿರು, ಗಣಿಯೇ ನೀನಾಗು ಹೋಗು!
ಹೃದಯವೊಂದು ತಾತ್ಕಾಲಿಕ ನಿವಾಸ, ಅದನ್ನು ತೊರೆದು ಬಾ!
ಆತ್ಮವೇ ಅಂತಿಮ ನಿವಾಸ, ಅದನ್ನು ಮನಗಾಣು ಹೋಗು!’
ಸುಲ್ತಾನನಿಗೆ ಪರ್ಷಿಯನ್‌ ಕವಿತೆಗಳಲ್ಲಿ ಏನೇನೂ ಆಸಕ್ತಿ ಇರಲಿಲ್ಲವಾದ್ದರಿಂದ ಅವನು ತನಗೆ ಉತ್ತರ ಬೇಕಿದ್ದ ಮೂರು ಪ್ರಶ್ನೆಗಳನ್ನು ಫಕೀರನಿಗೆ ಕೇಳಿದ. ಫಕೀರ ಆ ಪ್ರಶ್ನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೇ ತನ್ನ ಕೆಲಸವನ್ನು ಮಾಡುತ್ತಲೇ ಇದ್ದ. ಇದರಿಂದ ಸುಲ್ತಾನನಿಗೆ ಕೋಪ ಬಂದು ಹೇಳಿದ, “ನಾನು ಯಾರೆಂಬುದು ನಿನಗೆ ತಿಳಿದಿಲ್ಲವೇ? ನಾನು ಸುಲ್ತಾನರುಗಳ ಸುಲ್ತಾನ.” ಇದು ಫಕೀರನ ಮೇಲೆ ಯಾವ ಪ್ರಭಾವವನ್ನೂ ಬೀರಲಿಲ್ಲ, ಅವನು ತನ್ನ ಕೆಲಸವನ್ನು ಮಾಡುತ್ತಲೇ ಇದ್ದ. ಇದ್ದಕ್ಕಿದ್ದಂತೆ ತುಂಬ ದೊಡ್ಡ ಗಾಯವಾಗಿದ್ದವನೊಬ್ಬ ಎಲ್ಲಿಂದಲೋ ಬಂದು ಫಕೀರನ ಎದುರು ನೆಲದಲ್ಲಿ ದೊಪ್ಪನೆ ಬಿದ್ದ. ಫಕೀರ ಸುಲ್ತಾನನಿಗೆ ಹೇಳಿದ, “ಇವನನ್ನು ನನ್ನ ಮನೆಗೆ ಸಾಗಿಸಲು ಸಹಾಯ ಮಾಡು!” “ನಾನು ನಿನಗೆ ಸಹಾಯ ಮಾಡುತ್ತೇನೆ. ಆದರೆ ಆನಂತರ ನೀನು ನನ್ನ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕು,” ಎಂಬುದಾಗಿ ಹೇಳಿದ ಸುಲ್ತಾನ. “ಆಮೇಲೆ,” ಎಂಬುದಾಗಿ ಹೇಳಿದ ಫಕೀರ ಸುಲ್ತಾನ ನೆರವಿನೊಂದಿಗೆ ಗಾಯಾಳುವನ್ನು ತನ್ನ ಗುಡಿಸಲಿಗೆ ಒಯ್ದು ಅವನ ಗಾಯಕ್ಕೆ ಯುಕ್ತ ಚಿಕಿತ್ಸೆ ನೀಡಿ ಮಾಡಿದ.

ತದನಂತರ ಸುಲ್ತಾನ ಹೇಳಿದ, “ಈಗ ನಾನು ನನ್ನ ಪ್ರಶ್ನೆಗಳಿಗೆ ಉತ್ತರ ಪಡೆಯಲಿಚ್ಛಿಸುತ್ತೇನೆ.” 
ಫಕೀರ ಸುಲ್ತಾನನಿಗೆ ಹೇಳಿದ, “ನೀನೀಗ ನಿನ್ನ ಅರಮನೆಗೆ ಹಿಂದಿರುಗಿ ಹೋಗು. ಏಕೆಂದರೆ ನಿನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಈಗಾಗಲೇ ಪಡೆದಿರುವೆ. ಏನು ಮಾಡಬೇಕು? – ನಿನ್ನ ಜೀವನ ಪಥದಲ್ಲಿ ಏನು ಎದುರಾಗುತ್ತದೋ ಅದನ್ನು ಮಾಡು. ಯಾರೊಂದಿಗೆ ಮಾಡಬೇಕು? – ಅಲ್ಲಿ ಯಾರಿರುತ್ತಾರೋ ಅವರೊಂದಿಗೆ ಮಾಡು. ಯಾವಾಗ ಮಾಡಬೇಕು? – ಅದು ಎದುರಾದ ತಕ್ಷಣವೇ ಮಾಡು.”

*****

೩. ಒಂದು ಮಾತಿನ ಶಕ್ತಿ
ಹಿಂದೊಮ್ಮೆ ಒಂದು ಮಗುವಿನ ರೋಗಕ್ಕೆ ಚಿಕಿತ್ಸೆ ನೀಡುತ್ತಿದ್ದ ಒಬ್ಬ ಸೂಫಿ. ಅವನು ಮಗುವನ್ನು ಎತ್ತಿಕೊಂಡು ಕೆಲವು ಪದಗಳನ್ನು ಅನೇಕ ಬಾರಿ ಪುನರುಚ್ಚರಿಸಿದ. ತದನಂತರ ಮಗುವನ್ನು ತಂದೆತಾಯಿಯರಿಗೆ ಒಪ್ಪಿಸಿ ಹೇಳಿದ, “ಈಗ ಮಗು ಗುಣಮುಖವಾಗಿತ್ತದೆ.”
ಅಲ್ಲಿದ್ದ ಅವನ ಎದುರಾಳಿಯೊಬ್ಬ ತಕ್ಷಣ ಹೇಳಿದ, “ಕೆಲವು ಪದಗಳನ್ನು ಪುನರುಚ್ಚರಿಸಿದರೆ, ಕೆಲವು ಮಾತುಗಳಿಂದ ರೋಗ ವಾಸಿಯಾಗಲು ಹೇಗೆ ಸಾಧ್ಯ?”
ಸಾತ್ವಿಕ ಸ್ವಭಾವದ ಸೂಫಿಯೊಬ್ಬನಿಂದ ಸಿಡುಕಿನ ಮಾತುಗಳನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲವಾದರೂ ಈ ಬಾರಿ ಸೂಫಿ ಅವನತ್ತ ತಿರುಗಿ ಹೇಳಿದ, “ನೀನೊಬ್ಬ ಮೂರ್ಖ. ಈ ಕುರಿತು ನಿನಗೇನೂ ಗೊತ್ತಿಲ್ಲ.”
ಇದರಿಂದ ಆ ಎದುರಳಿಗೆ ಭಾರೀ ಅವಮಾನವಾಯಿತು. ಅವನ ಮುಖ ಕೋಪದಿಂದ ಕೆಂಪಾಯಿತು. ತಕ್ಷಣವೇ ಸೂಫಿ ಹೇಳಿದ, “ಒಂದು ಮಾತು ನಿನಗಿಷ್ಟು ಕೋಪ ಬರಿಸಬಲ್ಲುದಾದರೆ ಒಂದು ಮಾತಿಗೆ ರೋಗ ನಿವಾರಿಸುವ ಶಕ್ತಿ ಏಕಿರಬಾರದು?”

*****

೪. ಗುರುವಾಗಬಯಸಿದವನ ಮೊದಲನೇ ಪಾಠ!
ಬಹಾವುದ್ದೀನ್‌‌ ನಕ್ವ್‌ಶ್‌ಬಂದ್‌ನ ಹತ್ತಿರ ಒಬ್ಬಾತ ಬಂದು ಹೇಳಿದ, “ನಾನು ಒಬ್ಬರಾದ ಒಬ್ಬರಂತೆ ಅನೇಕ ಮಂದಿ ಅಧ್ಯಾಪಕರ ಹತ್ತಿರ ಹೋಗಿದ್ದೇನೆ. ನಾನು ಅನೇಕ ದಾರ್ಶನಿಕ ಪಂಥಗಳ ತತ್ವಗಳನ್ನು ಅಧ್ಯಯಿಸಿದ್ದೇನೆ. ಅವೆಲ್ಲವುಗಳಿಂದ ನನಗೆ ಅನೇಕ ಲಾಭಗಳಾಗಿವೆ, ಅನೇಕ ರೀತಿಯ ಅನುಕೂಲಗಳಾಗಿವೆ. ಈಗ ನಾನು ನಿಮ್ಮ ಶಿಷ್ಯನಾಗಿ ನಿಮ್ಮ ಜ್ಞಾನ ಭಂಡಾರದ ಲಾಭ ಪಡೆದು ತರೀಕಾ ವಿಧಾನದಲ್ಲಿ ಹೆಚ್ಚುಹೆಚ್ಚು ಮುಂದುವರಿಯಬೇಕೆಂದುಕೊಂಡಿದ್ದೇನೆ.”

ಈ ಮಾತಿಗೆ ನೇರವಾಗಿ ಪ್ರತಿಕ್ರಿಯಿಸುವುದಕ್ಕೆ ಬದಲಾಗಿ ಬಹಾವುದ್ದೀನ್‌ ಈ ಅತಿಥಿಗೆ ಭೋಜನ ಬಡಿಸಲು ಸೇವಕರಿಗೆ ಹೇಳಿದ. ಅನ್ನ ಮತ್ತು ಮಾಂಸದ ಸಾರನ್ನು ಅವರು ತಂದಾಗ ಒಂದು ತಟ್ಟೆ ತುಂಬ ತಿನಿಸನ್ನು ಅತಿಥಿಯ ಮುಂದಿಟ್ಟು, ಅವನು ಅದನ್ನು ತಿಂದ ತಕ್ಷಣ ಇನ್ನೊಂದಷ್ಟನ್ನು ತಟ್ಟೆಗೆ ಬಡಿಸಿದ. ಇಂತು ಅನೇಕ ಬಾರಿ ಮಾಡಿದ ನಂತರ ಹಣ್ಣುಗಳನ್ನೂ ಪಿಷ್ಟ ಭಕ್ಷ್ಯಗಳನ್ನೂ ರಸಾಯನಗಳನ್ನೂ ಮಿಠಾಯಿಗಳನ್ನೂ ಬಡಿಸಿ ತಿನ್ನುವಂತೆ ಒತ್ತಾಯಿಸುತ್ತಲೇ ಇದ್ದ. 

ಬಹಾವುದ್ದೀನ್‌ ತನ್ನನ್ನು ವಿಶೇಷವಾಗಿ ಸತ್ಕರಿಸುತ್ತಿರುವುದು ಆತನಿಗೆ ಬಲು ಸಂತೋಷ ಉಂಟುಮಾಡಿತು. ತಾನು ತಿನ್ನುವುದನ್ನು ನೋಡಿ ಬಹಾವುದ್ದೀನ್‌ ಖುಷಿ ಪಡುತ್ತಿದ್ದದ್ದರಿಂದ ಸಾಧ್ಯವಿರುವಷ್ಟನ್ನೂ ತಿಂದ. ತಿನ್ನುವಿಕೆಯ ವೇಗ ಕಮ್ಮಿ ಆದಾಗ ಬಹಾವುದ್ದೀನನಿಗೆ ಸಿಟ್ಟು ಬಂದಂತೆ ತೋರುತ್ತಿದ್ದದ್ದರಿಂದ ಆತ ಹೆಚ್ಚು ಕಮ್ಮಿ ಮತ್ತೂ ಒಂದು ಪೂರ್ಣ ಪ್ರಮಾಣದ ಭೋಜನವನ್ನೇ ಕಷ್ಟಪಟ್ಟು ತಿಂದು ಮುಗಿಸಿದ. ಇನ್ನೊಂದು ತುತ್ತನ್ನೂ ತಿನ್ನಲು ಸಾಧ್ಯವಿಲ್ಲದಾದಾಗ ತುಸು ನರಳುತ್ತಾ ಪಕ್ಕದಲ್ಲಿ ಇದ್ದ ಮೆತ್ತೆಯ ಮೇಲೆ ಉರುಳಿದ.

ಆಗ ಬಹಾವುದ್ದೀನ್ ಅವನಿಗೆ ಇಂತೆಂದ: “ಈಗ ನಿನ್ನ ಹೊಟ್ಟೆಯಲ್ಲಿ ವಿಭಿನ್ನ ರೀತಿಯ ಜೀರ್ಣವಾಗದ ಆಹಾರ ಹೇಗೆ ತುಂಬಿಕೊಂಡಿದೆಯೋ ಅಂತೆಯೇ ನಿನ್ನ ಮನಸ್ಸಿನಲ್ಲಿ ಮನೋಗತವಾಗದ ವಿಭಿನ್ನ ರೀತಿಯ ಬೋಧನೆಗಳು ನೀನು ನನ್ನನ್ನು ನೋಡಲು ಬಂದಾಗ ತುಂಬಿಕೊಂಡಿದ್ದವು. ಆಹಾರ ಜೀರ್ಣವಾಗದಿರುವಾಗ ಉಂಟಾಗುವ ಅಸೌಖ್ಯವನ್ನು ನೀನು ಗುರುತಿಸಬಲ್ಲೆಯಾದರೂ ಬೋಧನೆಗಳು ಮನೋಗತವಾಗದಿರುವಾಗ ಉಂಟಾಗುವ ಅಸೌಖ್ಯವನ್ನು ಗುರುತಿಸಲಾರೆ. ಆಗಿನ ಅಸೌಖ್ಯವನ್ನು ನೀನು ಹೆಚ್ಚಿನ ಜ್ಞಾನಕ್ಕಾಗಿ ಇರುವ ಹಸಿವು ಎಂಬುದಾಗಿ ತಪ್ಪಾಗಿ ಅರ್ಥೈಸಿದೆ. ವಾಸ್ತವವಾಗಿ ಅಜೀರ್ಣವೇ ನಿನ್ನ ನಿಜವಾದ ಸಮಸ್ಯೆ. ನಾನು ನಿನಗೆ ಬೋಧಿಸಬಲ್ಲೆ, ನೀನು ನಾನು ಹೇಳುವಷ್ಟು ಕಾಲ ಇಲ್ಲಿಯೇ ನಿಂತು ನನ್ನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬಲ್ಲೆಯಾದರೆ. ನಿನಗೆ ಅಸಂಗತ ಎಂಬುದಾಗಿ ಅನ್ನಿಸಬಹುದಾದರೂ ಯುಕ್ತ ಚಟುವಟಿಕೆಗಳ ಮುಖೇನ ಕಲಿತದ್ದನ್ನು ಜೀರ್ಣಿಸಿಕೊಳ್ಳುವಂತೆ, ಅರ್ಥಾತ್ ಮನೋಗತ ಮಾಡಿಕೊಳ್ಳುವಂತೆ ನಾನು ಮಾಡಬಲ್ಲೆ. ತತ್ಪರಿಣಾಮವಾಗಿ ತಿಂದ ಆಹಾರ ಕೇವಲ ತೂಕವಾಗುವುದಕ್ಕೆ ಬದಲಾಗಿ ಜೀರ್ಣವಾಗಿ ಹೇಗೆ ಪೋಷಕಾಂಶವಾಗುತ್ತದೋ ಅದೇ ರೀತಿ ಕಲಿತದ್ದು ಅನೇಕ ಜ್ಞಾನಾಂಶಗಳ ಮೂಟೆಯಾಗುವುದಕ್ಕೆ ಬದಲಾಗಿ ಮನೋಗತವಾಗಿ ನಿಜವಾದ ಜ್ಞಾನವಾಗುತ್ತದೆ.”

ಬಂದಾತ ಅದಕ್ಕೊಪ್ಪಿದ. ಅವನು ಮುಂದೆ ಖ್ಯಾತ ಬೋಧಕ ಎಂಬುದಾಗಿ ಗುರುತಿಸಲ್ಪಟ್ಟ ಖಲೀಲ್ ಅಶ್ರಫ್‌ಜಾದಾ. ಅನೇಕ ದಶಕಗಳ ನಂತರ ಅವನು ತನ್ನ ಶಿಷ್ಯರಿಗೆ ಈ ಕತೆಯನ್ನು ಹೇಳುತ್ತಿದ್ದ.

*****

೫. ಶಿಷ್ಯ ಸಿದ್ಧನಾದಾಗ
ಪರಿಪೂರ್ಣ ಗುರುವನ್ನು ಹುಡುಕಲು ಒಬ್ಬಾತ ನಿರ್ಧರಿಸಿದ. ಆ ಕುರಿತಾದ ಅನೇಕ ಪುಸ್ತಕಗಳನ್ನು ಓದಿದ. ಅನೇಕ ಜ್ಞಾನಿಗಳನ್ನು ಭೇಟಿ ಮಾಡಿದ, ಚರ್ಚಿಸಿದ ಹಾಗೂ ಅಭ್ಯಾಸ ಮಾಡಿದ. ಇಷ್ಟಾದರೂ ಏನೋ ಸಂಶಯ, ಏನೋ ಅನಿಶ್ಚಿತತೆ ಅವನನ್ನು ಕಾಡುತ್ತಿತ್ತು. ಇಪ್ಪತ್ತು ವರ್ಷಗಳು ಕಳೆದ ನಂತರ ಅವನು ತಿಳಿದಿದ್ದಂತೆ ಸತ್ಯದ ಸಂಪೂರ್ಣ ಸಾಕ್ಷಾತ್ಕಾರವದವನ ನಡೆ-ನುಡಿಗಳನ್ನು ಪರಿಪೂರ್ಣವಾಗಿ ಹೋಲುತ್ತಿದ್ದ ವ್ಯಕ್ತಿಯೊಬ್ಬನನ್ನು ಅವನು ಸಂಧಿಸಿದ. ತಕ್ಷಣವೇ ಆತ ಹೇಳಿದ, “ಮಹಾಶಯರೇ, ತಾವೊಬ್ಬ ಪರಿಪೂರ್ಣ ಗುರುವಿನಂತೆ ನನಗೆ ಕಾಣುತ್ತಿದ್ದೀರಿ. ಇದು ನಿಜವಾಗಿದ್ದರೆ ನನ್ನ ಹುಡುಕಾಟದ ಪಯಣ ಇಂದು ಕೊನೆಗೊಳ್ಳುತ್ತದೆ.” 

ಆ ವ್ಯಕ್ತಿ ಉತ್ತರಿಸಿದ, “ಹೌದು, ಎಲ್ಲರೂ ನನ್ನನ್ನು ಹಾಗೆಂದೇ ಗುರುತಿಸುತ್ತಾರೆ.” 
“ಅಂದ ಮೇಲೆ ದಯವಿಟ್ಟು ನಿಮ್ಮ ಶಿಷ್ಯನಾಗಿ ನನ್ನನ್ನು ಸ್ವೀಕರಿಸಬೇಕಾಗಿ ಬೇಡಿಕೊಳ್ಳುತ್ತೇನೆ,” ಎಂಬುದಾಗಿ ಗೋಗರೆದ ಪರಿಪೂರ್ಣ ಗುರುವಿನ ಹುಡುಕಾಟದಲ್ಲಿದ್ದವ.
ಗುರುಗಳು ಹೇಳಿದರು, “ಆ ಕೆಲಸ ನಾನು ಮಾಡುವುದಿಲ್ಲ. ನೀನು ಪರಿಪೂರ್ಣ ಗುರು ಬೇಕೆಂದು ಬಯಸುತ್ತಿರಬಹುದು. ಆದರೆ, ಪರಿಪೂರ್ಣ ಗುರು ಒಬ್ಬ ಪರಿಪೂರ್ಣ ಶಿಷ್ಯನನ್ನು ಪಡೆಯಲು ಇಚ್ಛಿಸುತ್ತಾನೆ.”

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x