ನುಡಿಸೇವಕ: ಮಹಾಂತೇಶ್ ಯರಗಟ್ಟಿ


 “ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
 ಕನ್ನಡವೇ ಸತ್ಯ ಕನ್ನಡವೇ ನಿತ್ಯ”

ರಾಷ್ಟ್ರಕವಿ ಕುವೆಂಪುರವರ ಈ ಮೇಲಿನ ಸಾಲುಗಳಂತೆ ತಾವಿದ್ದ ಸ್ಥಳದಲ್ಲೆ ಅದೆಷ್ಟೊ ಸಾಧಕರು ಕನ್ನಡ ಸೇವೆಗಾಗಿ ಶ್ರಮಿಸುವರ ಸಾಲಿನಲ್ಲಿ ನಟರಾಜಕುಂದೂರ ರವರು ಕೂಡ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು ಇವರು ಮೂಲತಃ ದಾವಣಗೆರೆ ಜಿಲ್ಲೆಯ ಹೋನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಬಡಕುಟುಂಬದಲ್ಲಿ ಜನಿಸಿದವರು, ತಮ್ಮ ಬಾಲ್ಯದ ಶಿಕ್ಷಣದಲ್ಲೆ ಕನ್ನಡದ ನೆಲ-ಜಲದ ಬಗ್ಗೆ ಅಪಾರ ಪ್ರೀತಿಯನ್ನೇ ಮೈಗೂಡಿಸಿಕೊಂಡವರು. ನಟರಾಜ ಕುಂದೂರು ರವರು ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನಿರ್ವಾಹಕರಾಗಿ 13 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾವಿದ್ದ ವೃತ್ತಿಯಲ್ಲೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕನ್ನಡ ಪ್ರೇಮಿ ಕಂಡಕ್ಟರ್ ಎಂದೇ ಹೆಸರುವಾಸಿಯಾದವರು.

ನವೆಂಬರ್ 01 ಎಲ್ಲೇಡೆ ಕರ್ನಾಟಕ ರಾಜ್ಯೋತ್ಸವದ ಕಲರವ  ಅದರಂತಯೇ ನಟರಾಜಕುಂದೂರು ರವರು ಕೂಡಾ ತಾವು ಕಾರ್ಯನಿರ್ವಹಿಸುವ ವಾಹನವನ್ನು ಕನ್ನಡಮಯವಾಗಿಸಿ ಪ್ರಯಾಣಿಕರಲ್ಲಿ ಕನ್ನಡ ಜಾಗೃತಿ ಮೂಡಿಸುವಲ್ಲಿ ಪ್ರತಿ ವರ್ಷ ಹೊಸದೊಂದು ಇತಿಹಾಸ ಬರೆಯುತ್ತಾರೆ. ತಾವು ಕಾರ್ಯನಿರ್ವಹಿಸುವ ವಾಹನಕ್ಕೆ ಕನ್ನಡದ ಧ್ವಜ ಕಟ್ಟಿ, ವಾಹನದ ಗಾಜುಗಳಿಗೆ ಅಂಟಿಸಿದ ಕನ್ನಡದ ಕಣ್ಮಣಿಗಳಾದ, ಅರಸರು, ಸಾಹಿತಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು, ವಿಜ್ಞಾನಿಗಳ ಭಾವಚಿತ್ರಗಳು ನೋಡುಗರಲ್ಲಿ ಕನ್ನಡಾಭಿಮಾನವನ್ನು ಹುಟ್ಟಿಸುತ್ತವೆ. ಅದಲ್ಲದೆಪ್ರಯಾಣಿಕರಿಗೆ ವಾಹನದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ, ಕರ್ನಾಟಕದ ಆಯಾ ಜಿಲ್ಲೆಗಳ ಕುರಿತು ಪ್ರವಾಸಿ ತಾಣಗಳು, ವಿಶೇಷ ವ್ಯಕ್ತಿಗಳು, ದಾಸರು-ಶರಣರು, ಅಲ್ಲಿ ಬೆಳೆಯುವ ಪ್ರಮುಖ ಬೆಳೆ, ಆಯಾ ಜಿಲ್ಲೆಗಳಲ್ಲಿ ದೊರೆಯುವ ಖನಿಜ ಸಂಪತ್ತುಗಳ ಬಗ್ಗೆ ಸಮಗ್ರ ಚಿತ್ರಣ ಒದಗಿಸುವ ಚಿತ್ರಪಟಗಳನ್ನು ತಮ್ಮದೇ ಕೈಬರಹದಿಂದ ರಚಿಸಿ ವಾಹನದ ಉದ್ದಗಲಕ್ಕೂ ನೇತುಹಾಕಿದ್ದಾರೆ. ‘ಕರುನಾಡ ತಾಯಿ ಸದಾ ಚಿನ್ಮಯಿ’ ಎಂದೂ ಸಾರಿ ಹೇಳುವ ಅದೇಷ್ಟೋ ಕಿವಿಗಿಂಪುನೀಡುವ ಕನ್ನಡದ ಗೀತೆಗಳನ್ನು ಧ್ವನಿವರ್ಧಕದ ಮೂಲಕ ಕೇಳಿಸುತ್ತಾರೆ. ಒಟ್ಟಾರೆ ಸ್ಪರ್ಧಾ ಪರೀಕ್ಷಾರ್ಥಿಗಳಿಗೆ ಕರ್ನಾಟಕದ ಬಗೆಗಿನ ಉಪಯುಕ್ತ ಮಾಹಿತಿಗಳನ್ನು ಒಂದೇ ಸೂರಿನಡಿ ಕಟ್ಟಿಕೊಡುವ ನಟರಾಜಕುಂದೂರ ರವರು ಪ್ರಯಾಣಿಕರ ಜೊತೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಸರಿ ಉತ್ತರ ನೀಡಿದ ಪ್ರಯಾಣಿಕರಿಗೆ, ಕನ್ನಡ ಕಾದಂಬರಿ, ಪ್ರಬಂಧ, ಕಥಾಸಂಕಲನ, ಕವನ ಸಂಕಲನಗಳಂತ ಪುಸ್ತಕಗಳನ್ನು ನೀಡುವುದರ ಜೊತೆಗೆ ಸಿಹಿ ತಿನಿಸುಗಳನ್ನು ನೀಡಿ ಪ್ರಯಾಣಿಕರಲ್ಲಿ ಕನ್ನಡ ಜಾಗೃತಿ ಮೂಡಿಸುತ್ತಾರೆ.

ಏಕ ವ್ಯಕ್ತಿ ಸಂಘಟನೆಯಂತಿರುವ ನಟರಾಜ ಕುಂದೂರರವರು ತಮ್ಮ ಈ ಕಾರ್ಯಕ್ರಮದ ಖರ್ಚಿಗಾಗಿ ತಿಂಗಳ ಸಂಬಳದಲ್ಲಿ 1500ರೂ ಗಳನ್ನು ಸಂಗ್ರಹಿಸಿಡುತ್ತಾರೆ. ಅವರ ಶ್ರೀಮತಿಯವರಾದ ಕವಿತಾ ನಟರಾಜ ಅವರ ಬೆಂಬಲ ಜೊತೆಗೆ ಘಟಕ ವ್ಯವಸ್ಥಾಪಕರು ಮತ್ತು ವಾಹನದ ಚಾಲಕನ ಸಂಪೂರ್ಣ ಸಹಕಾರದೊಂದಿಗೆ ಪ್ರಯಾಣಿಕರೊಂದಿಗೆ ಆಚರಿಸುವ ಈ ಕನ್ನಡ ರಾಜ್ಯೋತ್ಸವದ ಜಾಗೃತಿ ರಥದ ಉದ್ಘಾಟನೆಯನ್ನು ಈ ವರ್ಷ ಸ್ಥಳೀಯ ಪ್ರಗತಿಪರ ರೈತರಾದ ಶ್ರೀ ರಾಜಪ್ಪ ಅವರಿಂದ ನೆರವೇರಿಸಿದ್ದು ಇನ್ನೊಂದು ವಿಶೇಷವಾಗಿತ್ತು.

ನಟರಾಜ ಕುಂದೂರ ರವರು ಚುಟುಕು ಕವಿ ಕೂಡ. ಸಾಧನೆ, ಮೂಡಲಗಾಳಿ, ಸಂಬಂಧ, ಕಣ್ಣೀರು, ನಾ ಕಂಡ ಕನಸು, ನಾ ಕಂಡಕನಸು (ಕಥೆ) ಹೀಗೂ ಹಲವಾರು ಕವಿತೆಗಳನ್ನು ಬರೆದಿದ್ದಾರೆ. “ನನ್ನ ಶಾಲೆ” ಕವನಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಹುಮಾನ ಕೂಡ ಲಭಿಸಿದೆ. ಈ ಕಾರ್ಯಕ್ರಮವನ್ನು ಹೊರೆತು ಪಡೆಸಿ ಬಿಡುವಿನ ವೇಳೆಯಲ್ಲಿ ಹತ್ತಿರದ ಶಾಲಾ ಕಾಲೇಜುಗಳಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ “ನಾಡು-ನುಡಿ” ಶಿರ್ಷಿಕೆ ಅಡಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿ, ಅನ್ಯ ಭಾಷೆಗಳಿಗೆ ಮಾರು ಹೋಗುವ ಇಂದಿನ ವಿದ್ಯಾರ್ಥಿ ಪೀಳಿಗೆಗೆ ನಮ್ಮ ನಾಡಿನ ನೆಲ-ಜಲದ ಬಗ್ಗೆ ಅರಿವು ಮೂಡಿಸುತ್ತಾರೆ.

ನಟರಾಜ ಕುಂದೂರ ರವರ ಈ ಸೇವೆಯನ್ನು ಗುರುತಿಸಿ ನಮ್ಮ ನಾಡಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಅನೇಕ ಸಂಘ ಸಂಸ್ಥೆಗಳು ಈ ಕೆಳಗಿನಂತಿರುವ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿವೆ.
  
ಡಾ|| ವಿಷ್ಣುವರ್ಧನ, ಕನ್ನಡ ರತ್ನ, ಅಮೋಘವರ್ಷ, ಸುವರ್ಣ ಕರ್ನಾಟಕ ಪ್ರಶಸ್ತಿ, ಅಪ್ಪಟ ಕನ್ನಡ ಅಬಿಮಾನಿ, ಕನ್ನಡ ಸೇವಕ, ವಿಶ್ವಚೇತನ ಕಲಾ ಪ್ರಶಸ್ತಿ, ಸುವರ್ಣ ಕರ್ನಾಟಕ ಕಾಮಧೇನು, ಕನ್ನಡ ಸಾರಥಿ, ಸಮಾಜ ಭೂಷಣ, ಕನ್ನಡ ಕೇಸರಿ, ಕನ್ನಡ ಸಾರಿಗೆ ಕುವರ.
“ಗಡಿನಾಡ ಧ್ವನಿ” (ರಾಜ್ಯ ಪ್ರಶಸ್ತಿ ಕಾಸರಗೂಡಿನ ಕನ್ನಡ ಧ್ವನಿ ಪತ್ರಿಕೆ)
“ವರ್ಷದ ಕನ್ನಡಿಗ” (2011 ದಾವಣಗೆರೆ ಅಭಿಮಾನಿಗಳ ಸಂಘ)
“ಕುವೆಂಪು ವಿಶ್ವ ಮಾನವ ಪ್ರಶಸ್ತಿ” (ಅಮೃತಧಾರೆ ಸಂಸ್ಥೆ ಬೆಂಗಳೂರು)
“ಡಾ|| ಅಂಬೇಡ್ಕರ್‍ನ್ಯಾಷನಲ್ ಫಿಲಾಸಫಿ ಅವಾರ್ಡ್” (2011 ದಲಿತ ಸಾಹಿತ್ಯ ಪರಿಷತ್ ದೆಹಲಿ)
“ಭಗವಾನ್ ಬುದ್ಧ ನ್ಯಾಷನಲ್ ಅವಾರ್ಡ್” (2012 ಬೌದ್ಧ ಸಾಹಿತ್ಯ ಪರಿಷತ್ ದೆಹಲಿ)

ಪ್ರತಿ ವರ್ಷ ನೆವೆಂಬರ್ ತಿಂಗಳ ಪೂರ್ತಿ ನಡೆಯುವ ಈ ಕಾರ್ಯಕ್ರಮವನ್ನು ನಟರಾಜ ಕುಂದೂರ ರವರು ಈ ವರ್ಷ ರೈತರ ಆತ್ಮಹತ್ಯೆ, ಡಾ|| ಕಲ್ಬುರ್ಗಿ ರವರ ಹತ್ಯೆ, ಮತ್ತು ಕಳಸಾ ಬಂಡೂರಿ ಹೋರಾಟ ವಿಚಾರವಾಗಿ ಒಂದು ವಾರದ ಆಚರಣೆ ಮೂಲಕ ಸಂತಾಪ ಸೂಚಿಸಿದ್ದಾರೆ.

ಗುಂಡ್ಲುಪೇಟೆಯಿಂದ, ಮೈಸೂರು, ಅರಸಿಕೆರೆ, ಶಿವಮೊಗ್ಗ ಮಾರ್ಗವಾಗಿ, ದಾವಣೆಗೆರೆ ಸಂಚರಿಸುವ ಈ ವಾಹನದಲ್ಲಿ ಸಾಧ್ಯವಾದರೆ ಒಮ್ಮೆ ಸಂಚರಿಸಿ.

ತಾವಿದ್ದ ಸ್ಥಳದಲ್ಲೆ ಕನ್ನಡ ಜಾಗೃತಿ ಮೂಡಿಸಿ ಕೆ.ಎಸ್.ನಿಸ್ಸಾರ್ ಅಹಮ್ಮದ್ ರವರ ಕನಸಾದ ನಿತ್ಯೋತ್ಸವವನ್ನು ನನಸು ಮಾಡಲು ಹೊರಟಿರುವ ನಟರಾಜ ಕುಂದೂರ ಈ ಒಂದು ಕಾರ್ಯಕ್ರಮಕ್ಕೆ ಸಾಧ್ಯವಾದರೆ ಜಂಗಮವಾಣಿ (9900478868) ಗೊಂದು ಕರೆ ಅಥವಾ ಸಂದೇಶದ ಮೂಲಕ ಯಶಸ್ಸು ಸಿಗಲಿ ಎಂದು ಹಾರೈಸೋಣ.    

ಜೈ ಕರ್ನಾಟಕ ಮಾತೇ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x