ಸರಣಿ ಬರಹ

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 7


ಪತ್ರಕರ್ತೆಯೊಂದಿಗೆ ಲಗೋರಿಬಾಬಾ
ಫ್ಲಾಪಿಬಾಯ್ ಮತ್ತು ಲಗೋರಿಬಾಬಾನೊಂದಿಗೆ ಸಂದರ್ಶನ ಮಾಡಲು ಬಂದಿದ್ದ ಪತ್ರಕರ್ತೆ ವರದಾ ಫ್ಲಾಪಿಬಾಯ್‍ನೊಂದಿಗೆ ಮಾತುಕತೆ ನಡೆಸಿ ನಂತರ ಲಗೋರಿಬಾಬಾನೊಮದಿಗೆ ಚಿಟ್ ಚಾಟ್ ಮಾಡಲು ಭಲೇ ಉತ್ಸುಕಳಾಗಿದ್ದಳು. ತರುಣ ಯುವಕ ಲಗೋರಿಬಾಬಾ ನೊಡಲು ಹ್ಯಾಂಡ್‍ಸಮ್ ಆಗಿದ್ರೂ ಅಘೋರಿಯಾಗಿ ವಿಕಾರಿತರ ಇದ್ದ. ಮೊದಲ ನೋಟಕ್ಕೇ ಭಯಪಡಿಸುವಂತಿದ್ದ ಆತನ ಚಹರೆಯ ಜೊತೆಗೇ.., ಮೊದಮೊದಲಿಗೆ ಆತನ ಮಾತೂ ಹೆದರಿಕೆ ಹುಟ್ಟಿಸುವಂತಿತ್ತು. ಆದರೆ ಅಪರಿಮಿತ ಜ್ಞಾನಿಯಾದ ಲಗೋರಿಬಾಬಾನನ್ನು ಮಾತನಾಡಿಸಲೇಬೇಕೆಂದು ವರದಾ ಹಠ ಹಿಡಿದು ಅವನ ಬಳಿ ಬಂದಳು.. ಮುಂದೆ..??
ಇನ್ನೇನು..??

ಓದಿ ಗೊತ್ತಾಗತ್ತೆ..!
ಲಗೋರಿಬಾಬಾ ಚುಟ್ಟಾ ಬಿಸಾಕಿ ಮೈಗೆಲ್ಲಾ ಬೂದಿ ಬಳಿದುಕೊಳ್ತಾ ಇದ್ದ. 
“ಬಾಬಾ ನಿಮ್ಮತ್ರ ಸ್ವಲ್ಪ ಮಾತಾಡಬಹುದಾ?” ಕೇಳಿದಳು ವರದಾ
“ಸ್ವಲ್ಪ ಯಾಕೆ? ಪೂರ್ತಿ ಮಾತಾಡಿ..” ಉತ್ತರಿಸಿದ ಲಗೋರಿಬಾಬಾ
“ಏನಿಲ್ಲಾ ನೀವ್ಯಾಕೆ ಹೀಗಿದೀರಾ? ನೋಡೋಕೂ ಸುಂದರವಾಗಿದೀರ, ವಯಸ್ಸೂ ಚಿಕ್ಕದೇ..! ಆದ್ರೂ ಯಾಕೆ ಈ ಸ್ಥಿತಿ? ಸನ್ಯಾಸತ್ವ ಎಲ್ಲಾ?” ಪಟಪಟನೆ ಕೇಳಿದಳು ವರದಾ.

“ನನ್ನಿಷ್ಟ..” ಒಂದೇ ಮಾತು ಲಗೋರಿಬಾಬಾದು.
ಯಾಕೋ ವರದಾಳಿಗೆ ಬಾಬಾನ ಬಳಿ ಏನು ಕೇಳೋದಂತಲೇ ಗೊತ್ತಾಗಿಲ್ಲ.. “ಬಾಬಾ ಏನಾದ್ರೂ ಹೇಳಿ..! ನಿಮ್ಮ ಮಾತು ಕೇಳಬೇಕು ಅಂತಾ ತುಂಬಾ ಅನ್ನಿಸ್ತಿದೆ ನಂಗೆ. ಆದ್ರೆ ಏನು ಕೇಳೋದಂತಾ ತಿಳಿತಿಲ್ಲ.” ಅಸಹಾಯಕಳಾಗಿ ಹೇಳಿದಳು ವರದಾ.
ಬಾಬಾ ಒಮ್ಮೆ ಅವಳ ಮುಖ ನೋಡಿದ. ಆತನಿಗೇ ಪಿಚ್ಚೆನಿಸಿತು. ನಂತರ ಒಮ್ಮೆಲೇ ಯಾವುದೋ ಓಘ ಮೈಮೇಲೆ ಬಂದಂತೆ ಮಾತಾಡ ಹತ್ತಿದ,

“ದೇವ್ರು ನಿಮ್ಮತ್ರ ಯಾವ ಕಾರಿದೆ? ಅಂತ ಕೇಳಲ್ಲ, ನೋಡಲ್ಲ! ಆದ್ರೆ ಪ್ರಯಾಣಕ್ಕೆ ಕಷ್ಟಪಡುತ್ತಿರುವ ಎಷ್ಟು ಜನರಿಗೆ ನೀವು ಸಹಾಯ ಮಾಡಿದಿರಿ, ಅಂತಾ ಖಂಡಿತಾ ನೋಡ್ತಾ ಇರ್ತಾನೆ! ದೇವ್ರು ನೀವು ಎಷ್ಟು ಹೊತ್ತು ಕೆಲ್ಸ ಮಾಡಿದೆ ಅಂತ ನೋಡಲ್ಲ. ಆದ್ರೆ ನಿನ್ನ ಕೆಲಸದಿಂದ ಎಷ್ಟು ಉಪಯೋಗವಾಗಿದೆ ಅಂತ ಗಮನಿಸ್ತಾನೆ.  ದೇವ್ರು ನಿಮ್ಗಳ ಬ್ರಾಂಡೆಡ್ ಡ್ರೆಸ್ ನೋಡಲ್ಲ. ಆದ್ರೆ ಅವ ಎಷ್ಟು ಜನರಿಗೆ ಬಟ್ಟೆ ಹಾಕೊಳಕ್ಕೆ ನೀವು ಸಹಾಯ ಮಾಡಿದೀರಿ ಅಂತ ನೋಡ್ತಾ ಇರ್ತಾನೆ. ದೇವ್ರು ನಿಮ್ಮ ಸ್ಯಾಲರಿ ನೋಡಲ್ಲ. ನಿಮ್ಮ ಕ್ಯಾರೆಕ್ಟರ್ ನೋಡ್ತಾನೆ. ದೇವ್ರಿಗೆ ನಿಮ್ಮ ಪ್ರೊಮೋಶನ್ ಬೇಕಾಗಿಲ್ಲ, ನೀವೆಷ್ಟು ಜನರಿಗೆ ಪ್ರೊಮೋಟ್ ಮಾಡಿದ್ರಿ ಅಂತ ನೋಡ್ತಾ ಇರ್ತಾನೆ. ಗಾಡು ನಿಮ್ಮ ಹಕ್ಕುಗಳನ್ನು ನೋಡಲ್ಲ. ಆದ್ರೆ ಹಕ್ಕುಗಳಿಗೆ ನೀವು ಹೇಗೆ ರಕ್ಷಿಸ್ತೀರಿ ಅಂತಾ ನೋಡ್ತಾನೆ. ದೇವ್ರು ನಿಮ್ ನೆರೆಹೊರೆಯವರ ನಡವಳಿಕೆ ಗಮನಿಸಲ್ಲ. ಆದ್ರೆ ನೆರೆಹೊರೆಯವರೊಂದಿಗೆ ನಿಮ್ ನಡವಳಿಕೆ ಮೇಲೆ ಮಾತ್ರ ಖಂಡಿತಾ ಕಣ್ಣಿಟ್ಟಿರ್ತಾನೆ. ದೇವ್ರು ನಿಮ್ಮ ಚರ್ಮದ ಕಲರ್ ನೋಡಲ್ಲ, ಆದ್ರೆ ನಿಮ್ಮ ನಡವಳಿಕೆಯನ್ನ ಗಮನಿಸ್ತಾನೆ ಇರ್ತಾನೆ…” ಹೀಗೆ ಇನ್ನೂ ಓತಪ್ರೋತವಾಗಿ ಹೇಳ್ತಾನೆ ಇದ್ದ ಲಗೋರಿಬಾಬಾ, ಅಷ್ಟರಲ್ಲಿ ನಡುವೆಯೇ ತಡೆದ ವರದಾ,

“ಬಾಬಾ ಬಾಬಾ ನಂಗೆ ಏನೂ ಅರ್ಥವಾಗ್ತಾ ಇಲ್ಲ ನಿಮ್ಮ ಮಾತುಗಳು” ಅಂತಂದಳು.
ಅವಳು ಹಾಗಂದಿದ್ದೇ ತಡ ಮತ್ತೆ ಮೌನಕ್ಕೆ ಶರಣಾದ ಲಗೋರಿಬಾಬಾ ಸೈಲೆಂಟಾಗಿ ಭಂಗಿ ಸೇದತೊಡಗಿದ.
ಅಷ್ಟರಲ್ಲಿ ಅಲ್ಲಿಗೆ ಬಂದ ಫ್ಲಾಪಿಬಾಯ್, “ರೀ ಮೇಡಂ.. ಸುಮ್ನೆ ಇರಿ ಮತ್ತೆ ಮಾತಾಡಿಸಿದ್ರೆ ಬೈಸ್ಕೊಳ್ತೀರ ಬಾಬಾ ಹತ್ರ. ಅವರ ಮಾತುಗಳೇ ಹಾಗೆ ಒಗಟೊಗಟಿನ ತರ, ಆಸಾಮಿ ಒಮ್ಮೆ ಇರೋ ತರ ಇನ್ನೊಮ್ಮೆ ಇರಲ್ಲ. ಆದ್ರೆ ಅವರ ಎಲ್ಲಾ ಮಾತುಗಳಿಗೂ ಖಂಡಿತಾ ಅರ್ಥವಿದ್ದೇ ಇರತ್ತೆ. ಆದ್ರೆ ಆತುರ ಪಟ್ಟು ಮಧ್ಯೆ ಬಾಯಿ ಹಾಕಿದ್ರೆ ಬಾಬಾಗೆ ಇಷ್ಟವಾಗಲ್ಲ. ಇನ್ನು ನೀವು ಹೊರಡಿ, ಮತ್ತೆ ಯಾವಾಗಲಾದ್ರೂ ಸಿಗೋಣ” ಎಂದು ಸಾಗ ಹಾಕಿ ಹೊಸ ಪ್ರಯೋಗದಲ್ಲಿ ನಿರತನಾದ ತಂತ್ರಜ್ಞಾನಿ ಬ್ರಹ್ಮಚಾರಿ.