Facebook

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 6

ಕನ್ನಡದ ಬರಹಗಳನ್ನು ಹಂಚಿ ಹರಡಿ


ಪತ್ರಕರ್ತೆಯೊಂದಿಗೆ ಫ್ಲಾಪಿಬಾಯ್

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಒಂದು ಹಳ್ಳಿಯಲ್ಲಿ ಜನೋಪಕಾರಿಯಾಗಿ ಅತ್ಯುತ್ತಮ ಸಲಹೆ ನೀಡುತ್ತಾ, ಬಡ ಜನರ ಸೇವೆ ಮಾಡುತ್ತಿದ್ದರೂ- ತಮ್ಮಷ್ಟಕ್ಕೆ ತಾವು ಆಶ್ರಮ ಕಟ್ಟಿಕೊಂಡು ಒಂದೆಡೆ ಇದ್ದರು. ಇಂತಹ ಅಪರೂಪದ ಜನ ನಮ್ಮ ಸಮಾಜದಲ್ಲಿ ಪ್ರಚಾರಕ್ಕೆ ಬರುವುದು ಅಪರೂಪ. ಅದೇನು ವಿಧಿ ಲಿಖಿತವೋ, ಇವರ ಒಳ್ಳೆಯತನ ಗುರುತಿಸುವ ಶಕ್ತಿ ಸತ್ತ ಪ್ರಜೆಗಳಿಗೆ ಜಾಗೃತೆಯಾಗಿ ಸತ್ಪ್ರಜೆಯಾದರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರಿಗೆ ವ್ಯಾಪಕ ಪ್ರಚಾರವಂತೂ ಜನರ ಬಾಯಿಮಾತಿನಿಂದಲೇ ಹೆಚ್ಚೆಚ್ಚು ದೊರಕಿತ್ತು. ಆಗ ತಾನೆ ಕೆಲಸಕ್ಕೆ ಸೇರಿದ್ದ ಟಿವಿ ರಿಪೋರ್ಟರ್ ವರದಾ ಇವರನ್ನು ಸಂದರ್ಶನ ಮಾಡಲೆಂದು ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಇದ್ದ ಆಶ್ರಮಕ್ಕೆ ಬಂದಳು.

ವರದಾ- “ನಮಸ್ತೆ ಫ್ಲಾಪಿಬಾಯ್..  ಇತ್ತೀಚೆಗೆ ನೀವು ಮತ್ತು ಲಗೋರಿಬಾಬಾ ತುಂಬಾನೇ ಫೇಮಸ್ ಆಗ್ತಾ ಇದೀರ. ನಿಮ್ಮ ತಂತ್ರಜ್ಞಾನ ಮತ್ತು ಲಗೋರಿಬಾಬಾನ ಆತ್ಮಜ್ಞಾನ ಇಜ್ ಸೋ ಇಂಪ್ರೆಸ್ಸಿವ್. ನಮಗೆ ನಿಮ್ಮಿಬ್ಬರದು ಒಂದು ಇಂಟರ್‍ವ್ಯೂ ಕೊಟ್ರೆ ನಮ್ಮ ಚಾನಲ್‍ನಲ್ಲಿ ಪ್ರಸಾರ ಮಾಡ್ತೀವಿ. ಆ ಮೂಲಕ ನಿಮ್ಮ ಒಳ್ಳೆಯತನವನ್ನ ಜಗತ್ತಿಗೇ ಸಾರ್ತೀವಿ.”

“ಅಯ್ಯೋ ನೀವ್ ಸಾರೋದು, ನಂತ್ರ ಇಡೀ ದಿನ ಕಾರೋದು ಏನೂ ಬೇಡ. ಅಗತ್ಯವಿದ್ದವರು ಇಲ್ಲಿ ಬಂದು ತಮ್ಮ ಸಮಸ್ಯೆ ಹೇಳ್ಕೊತಾರೆ. ನಾವು ನಮಗೆ ತಿಳಿದಷ್ಟನ್ನು ಹೇಳ್ತೀವಿ. ನಮಗ್ಯಾವ ಪ್ರಚಾರವೂ ಬೇಡ. ನಿಮ್ಮ ವಿಚಾರವೂ ಬೇಡ. ದಯವಿಟ್ಟು ತಪ್ಪು ತಿಳಿಯದಿರಿ. ನಮಗೆ ಸಮಾಜದ ಎದುರು ಬರಲು ಸ್ವಲ್ಪವೂ ಇಷ್ಟವಿಲ್ಲ ಅದಿಕ್ಕೇ ತಾನೆ ನಾನು ಬ್ರಹ್ಮಚಾರಿ ತಂತ್ರಜ್ಞಾನಿಯಾಗಿದ್ದು ಹಾಗೂ ಲಗೋರಿಬಾಬಾ ಅಘೋರನಾಗಿ ಬದಲಾದದ್ದು. ನಿಮಗೆ ಅರ್ಥವಾಯ್ತು ಅಂದ್ಕೋತಿನಿ. ಟಿವಿಯಲ್ಲಿ ಪತ್ರಿಕೆಲಿ ನಮ್ಮ ಬಗ್ಗೆ ಹಾಕೋದೇನೂ ಬೇಡ” ನೇರವಾಗಿಯೇ ಹೇಳಿದ ಫ್ಲಾಪಿಬಾಯ್.

“ಆಯ್ತು ನಿಮಗೆ ಬೇಡ ಅಂದ್ರೆ ನಾನೂ ಫೋರ್ಸ್ ಮಾಡೊಲ್ಲ. ನಿಮ್ಮಿಬ್ಬರ ಬಗ್ಗೆ ನಾನೂ ಕೇಳಿದೀನಿ ನನಗೆ ಕೆಲವೊಂದು ಸಂದೇಹಗಳಿವೆ ಕೇಳಬಹುದೆ? ಹ್ಹಾ.. ಇದೇನು ನಮ್ಮ ಚಾನಲ್‍ನಲ್ಲಿ ಹಾಕಲ್ಲ ಸುಮ್ನೆ ನನ್ನ ಕುತೂಹಲಕ್ಕೆ ಮಾತ್ರ!” ವರದಾ ಮಾತಿನಲ್ಲಿ ವಿನಂತಿಯಿತ್ತು.

“ಅವಶ್ಯಕವಾಗಿ ಮುಚ್ಚುಮರೆ ಇಲ್ಲದೆ ಕೇಳಿ, ನನಗೂ ಬಾಬಾಗೂ ಯಾವುದೇ ಫಿಲ್ಟರ್ ಇಲ್ಲ ಮಾತಲ್ಲಿ! ನೇರವಾಗಿಯೇ ಹೇಳ್ತೀವಿ. ಆಮೇಲೆ ನಿಮಗೆ ಕಸಿವಿಸಿಯಾದ್ರೆ ಅದ್ಕೆ ನಾನಂತೂ ಕಾರಣ ಅಲ್ಲ, ಮೊದ್ಲೇ ಹೇಳಿರ್ತೀನಿ” ಪ್ರತಿ ನುಡಿದ ಫ್ಲಾಪಿ.

“ಅಯ್ಯೋ ಅಂತಾದ್ದೇನೂ ಕೇಳಲ್ಲ ಬಿಡಿ. ನನಗೆ ಗೊತ್ತು ನೀವು ಹೆಂಗೇ ಅಂತ! ಸಾಮಾನ್ಯ ಪ್ರಶ್ನೆಗಳಷ್ಟೆ.. ಲಗೋರಿಬಾಬಾ ಯಾಕೆ ಯಾವಾಗ್ಲೂ ಒಂಟಿಯಾಗಿರ್ತಾರೆ?” ಧ್ಯಾನಾಸಕ್ತ ಲಗೋರೊಬಾಬಾನ ನೋಡಿ ಸಹಜವಾಗಿ ಕೇಳಿದಳು ವರದಾ.

ಅದಕ್ಕೆ ಫ್ಲಾಪಿಬಾಯ್- “ಅಯ್ಯೋ ಮೇಡಂ. ಅವರು ಒಂಟಿಯಾಗಿಲ್ಲ ಏಕಾಂತದಲ್ಲಿದ್ದಾರೆ. ಏಕಾಂತಕ್ಕೂ ಒಂಟಿತನಕ್ಕೂ ಹಲವರಿಗೆ ವ್ಯತ್ಯಾಸವೇ ಗೊತ್ತಿಲ್ಲ. ಏಕಾಂತ ಶಕ್ತಿ ಕೊಡುತ್ತದೆ. ಒಂಟಿತನ ಶಕ್ತಿ ಹೀರುತ್ತದೆ. ಇದೊಂದು ವಾಸ್ಟ್ ಸಬ್ಜೆಕ್ಟ್ ಒಂದೆರಡು ವಾಕ್ಯದಲ್ಲಿ ಹೇಳೋಕಾಗಲ್ಲ.”

“ಓಹ್ ಓಕೆ. ಆಕ್ಚುವಲಿ ನಾನು ಕೇಳಬೇಕೂ ಅಂತಿದ್ದದ್ದು ಅದಲ್ಲ. ನಿಮ್ಮ ಮತ್ತು ಬಾಬಾ ಪರಿಚಯ ಹೇಗಾಯ್ತು? ಅವರು ಮತ್ತು ನೀವು ಇಬ್ಬರೂ ವೃತ್ತಿಯಿಂದ ಮತ್ತು ಪ್ರವೃತ್ತಿಯಿಂದ ವಿಭಿನ್ನರು. ಆದ್ರೂ ನಿಮ್ಮಿಬ್ಬರ ಸ್ನೇಹ ಗಾಢವಾಗಿದೆಯಲ್ಲ ಅದೆಲ್ಲ ಹೇಗೆ ಸಾಧ್ಯ?” ತುಂಬಾ ಕ್ಯೂರಿಯಸ್ ಆಗಿ ಕೇಳಿದಳು ವರದಾ.

ಫ್ಲಾಪಿಬಾಯ್ ತನ್ನ ಇತಿಹಾಸವನ್ನು ಕೆದಕಿಕೊಳ್ಳಿತ್ತಾ ಹೇಳತೊಡಗಿದ. “ಲಗೋರಿಬಾಬಾ ನನ್ನ ಜೀವನದಲ್ಲಿ ಸಿಗೋ ಮೊದಲು ನನ್ನ ಜೀವನ ತುಂಬಾನೆ ಕಷ್ಟಕರವಾಗಿತ್ತು. ನಾನು ಮುಟ್ಟಿದ್ದೆಲ್ಲ್ಲಾ ಫ್ಲಾಪ್ ಆಗ್ತಾ ಇತ್ತು. ಜೀವನದಲ್ಲಿ ಗುರಿನೇ ಇಲ್ಲದೆ ಬದುಕ್ತಿದ್ದೆ. ಮನೆಯವರು ಹೇಳಿದ್ದೇ ಓದಿದೆ, ಇಷ್ಟವಿಲ್ಲದಿದ್ರೂ.. ಕಾರಣ ಓದು ತಲೆಗೆ ಹತ್ತಲಿಲ್ಲ. ಫೇಲ್ ಆದೆ. ಇನ್ನಾಗಲ್ಲ ಅಂತ ಕಾಲೇಜು ಬಿಟ್ಟೆ. ಬೇರೆ ಕಡೆ ಕೆಲಸ ಮಾಡೋಣ ಅಂದ್ರೆ ನನ್ನ ಮೆಂಟಾಲಿಟಿಯಿಂದ ಅಲ್ಲಿಯೂ ನನಗೆ ಇರಲಾಗ್ತಾ ಇರಲಿಲ್ಲ. ‘ಏನಾದ್ರೂ ಮಾಡ್ಕೊಂಡ್ ಸಾಯಿ..’ ಅಂತ ಮನೆಯವರೂ ನನ್ನನ್ನ ಕಡೆಗಣಿಸೋಕೆ ಶುರು ಮಾಡಿದ್ರ್ರು, ಮನೆಗೆ ಹೋದ್ರೆ ಮತ್ತದೇ ಅವಮಾನ, ಮೂದಲಿಕೆ. ಎಲ್ಲಾ ಡಿಪ್ರೆಸ್ಸಿವ್ ಯುವಕರಂತೆ ನನಗೂ ಜೀವನ ಬೇಡ, ನಾನೂ ನಿಷ್ಪ್ರಯೋಜಕ ಅಂದುಕೊಂಡು ಸಾಯೋ ಯೋಚನೆಯಲ್ಲಿದ್ದೆ. ಆಗಲೇ ಸಿಕ್ಕಿದ್ರು ನಂಗೆ ಲಗೋರಿಬಾಬಾ. ಅವರಿಂದಲೇ ಹೊಸ ಹೊಸತು ಏನಾದ್ರೂ ಮಾಡಬೇಕು ಎನ್ನುವ ಅನೇಕ ವಿಷಯ ಕಲಿತೆ.. ಹಳೇ ಆ¯ದ ಮರಕ್ಕೇ ನೇತಾಡೋದ್ರಲ್ಲಿ ನನಗೆ ಒಂಚೂರೂ ನಂಬಿಕೆ ಇರ್ಲಿಲ್ಲ. ಸರಿಯಾದ ಮಾರ್ಗದರ್ಶಕರಿಲ್ಲದೆ ಏಕಾಂಗಿ ಹೋರಾಟದ ನನ್ನ ಜೀವನಕ್ಕೆ ಆಸರೆಯಾದವರೇ ಲಗೋರಿಬಾಬಾ. ಅವರದ್ದು ಇನ್ನೂ ಕಷ್ಟದ ಜೀವನ, ಅದನ್ನ ನೀವು ಅವರ ಬಾಯಿಂದಲೇ ಕೇಳ್ಬೇಕು. ನಂತರವೂ ನಾನು ನೂರಾರು ಕೆಲಸ, ಸಂಶೋಧನೆ ಎಲ್ಲವನ್ನೂ ಮಾಡಿದೆ ಎಲ್ಲದರಲ್ಲಿಯೂ ಫ್ಲಾಪ್. ಹೀಗೆ ಫ್ಲಾಪ್ ಆಗಿ ಆಗಿ ಫ್ಲಾಪಿಬಾಯ್ ಅಂತಾನೆ ಬದಲಾಗೋದೆ. ಎಷ್ಟೂಂದ್ರೆ ನನ್ನ ನಿಜ ಹೆಸರನ್ನೇ ಮರೆಸುವಷ್ಟು. ನನಗೆ ಈಗ ನನ್ನ ಮೊದಲಿನ ಹೆಸರು ಬೇಕಾಗಿಯೂ ಇಲ್ಲ ಎನ್ನುವಷ್ಟು ಈ ಫ್ಲಾಪಿಬಾಯ್ ಹೆಸರು ಆಪ್ತವಾಗಿದೆ. ನಂತರ ಲಗೋರಿಬಾಬಾ ಜೊತೆ ಸೇರಿ ಅಧ್ಯಯನ ಮಾಡಿದೆ. ವಿಚಾರ ವಿನಿಮಯ ಮಾಡಿಕೊಂಡೆ. ವಿಜ್ಞಾನ, ಧರ್ಮ, ಸಂಪ್ರದಾಯ, ಶಾಸ್ತ್ರ, ಇತಿಹಾಸ, ನಂಬಿಕೆ ಎಲ್ಲವನ್ನೂ ಶೃದ್ಧೆಯಿಂದ ಧೇನಿಸಿದೆವು. ಗೊತ್ತಿರೋ ವಿಚಾರಗಳನ್ನು ಹಂಚಿದೆವು. ಈಗ ಅದರ ರಿಸಲ್ಟು ನೀವು ನಮ್ಮ ಮುಂದಿರೋದು” ಎಂದು ಹೇಳುತ್ತಾ ಮುಗುಳ್ನಕ್ಕ.

“ವ್ಹಾವ್ ಅಮೇಜಿಂಗ್! ಸಾಯೋ ಯೋಚನೆಯಲ್ಲಿದ್ದ ನಿಮ್ಮನ್ನು ಲಗೋರಿಬಾಬಾನೇ ಬದಲಾಯಿಸಿದ್ರು ಅಂದ್ರೆ ಹಿ ಇಜ್ ರಿಯಲಿ ಗ್ರೇಟ್..” ಎನ್ನುತ್ತಾ ದೂರದಲ್ಲಿದ್ದ ಲಗೋರಿಬಾಬಾನನ್ನು ಮೆಚ್ಚುಗೆಯ ಕಣ್ಣಿಂದ ನೋಡಿದಳು ಸುಂದರಿ ವರದಾ.

“ಅಫ್‍ಕೋರ್ಸ್, ನನ್ನ ಮನೆಯವರು, ಈ ಸಮಾಜ, ನನ್ನ ಜೀವನ ಅನುಭವ ಎಲ್ಲಕ್ಕಿಂತಲೂ ಮಿಗಿಲಾದದ್ದು ಸ್ವ ಪ್ರೇರಣೆ ಎಂದು ತಿಳಿಸಿಕೊಟ್ಟದ್ದು ಬಾಬಾ. ನನ್ನ ಜೀವನ ನಾನೇ ಕಟ್ಟಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಟ್ಟದ್ದು ಬಾಬಾ. ನಾನೊಬ್ಬ ವೇಸ್ಟ್ ಬಾಡಿ ಅಂದ್ಕೊಂಡಾಗ ಕೆಟ್ಟು ಹೋದ ಗಡಿಯಾರ ಕೊಟ್ಟು ಅದು ದಿನಕ್ಕೆ ಎರಡುಬಾರಿ ಸರಿಯಾದ ಸಮಯವನ್ನೇ ತೋರ್ಸತ್ತೆ ಅಂತಾದ್ರಲ್ಲಿ ನಿಂದೇನು ಅಂತ ಬೈದು ಬುದ್ದಿ ಹೇಳಿದ್ದು ಲಗೋರಿಬಾಬಾ. ನನ್ನ ಜೀವನವನ್ನ ಹೇಗೆ ಪ್ರೀತಿಸ್ಬೇಕು, ಆರೋಗ್ಯವನ್ನ ಹೇಗೆ ಕಾಪಾಡಿಕೊಳ್ಬೇಕು ಅಂತ ತೋರಿಸಿಕೊಟ್ಟದ್ದು ಲಗೋರಿಬಾಬಾ. ನನ್ನ ಪ್ಲಾನ್ ಆಫ್ ಆಕ್ಷನ್‍ಗೆ ವೇದಿಗೆ ನಿರ್ಮಿಸಿಕೊಳ್ಳುವಂತೆ ಮಾಡಿದ್ದು ಇದೇ ಬಾಬಾ. ನನ್ನ ಪ್ರತಿಯೊಂದು ಸೋಲಿಗೂ ಯಾರನ್ನೂ ಹೊಣೆಮಾಡಬೇಡವೆಂದು ಹೇಳಿಕೊಟ್ಟವನು ಬಾಬಾ. ಸಕ್ಸಸ್ ಹಾಗೂ ಫೇಲ್ಯೂರ್ ಎರಡನ್ನೂ ಒಂದೇ ರೀತಿ ನೋಡುವಂತೆ ಕಲಿಸಿಕೊಟ್ಟದ್ದು ಬಾಬಾ. ಹೀಗೆ ಲಗೋರಿಬಾಬಾ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆಯೇ” ಎಂದು ಮೌನವಾದ ಫ್ಲಾಪಿಬಾಯ್.

ಅಷ್ಟರಲ್ಲಿ ಲಗೋರಿಬಾಬಾ ಧ್ಯಾನದಿಂದೆದ್ದು ರಂಗಿತರಂಗದ ಅಂಗಾರನ ಸ್ಟೈಲಿನಲ್ಲಿ ಚುಟ್ಟಾ ಸೇದುತ್ತಾ ಕುಳಿತಿದ್ದ. ಬಾಬಾನನ್ನು ಒಮ್ಮೆ ಮಾತನಾಡಿಸಿ ಬರುತ್ತೇನೆ ಎಂದು ಹೊರಟ ವರದಾಳಿಗೆ ಹತ್ತಿರ ಹೋಗುತ್ತಲೇ ಒಂಥರಾ ಭಯ ಶುರುವಾತು. ಆದರೂ ಧೈರ್ಯಮಾಡಿ ಬಾಬಾ ಬಳಿಹೋಗಿ “ಬಾಬಾ ನಿಮಗೆ ಇಷ್ಟೆಲ್ಲಾ ಶಕ್ತಿ ಹೇಗೆ ಬಂತು?” ಅಂತ ತಡವರಿಸುತ್ತಾ ಕೇಳಿದಳು ವರದಾ. ಆಕೆಗೆ ಏನು ಕೇಳಬೇಕೆಂದು ತೋಚದೆ ಭಯದಲ್ಲಿ ಇನ್ನೇನೋ ಕೇಳಿದ್ದಳು.

ಲಗೋರಿಬಾಬಾ ಅವಳತ್ತ ನೋಡಿ ನಗುತ್ತಾ “ಧಿಯೋ ಯೋನಃ ಪ್ರಚೋದಯಾತ್” ಎಂದು ಹೇಳಿ ಚುಟ್ಟಾ ಬಿಸಾಕಿ ಮೈಗೆಲ್ಲಾ ಬೂದಿ ಬಳಿದುಕೊಳ್ಳಲು ತೊಡಗಿದ.


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

2 Responses to “ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 6”

  1. chaithra says:

    ಏಕಾಂತ ಮತ್ತು ಒಂಟಿತನ ಖಂಡಿತ ಸತ್ಯ ! ಸೂಪರ್ ಬಾಬಾ….

Leave a Reply