ಕಪ್ಪುಸುಂದರಿಯ ಕಿರಿಗೂಡು!!: ಅಖಿಲೇಶ್ ಚಿಪ್ಪಳಿ

ಅನಿವಾರ್ಯ ಕಾರಣಗಳಿಂದಾಗಿ ಮನೆಯಿಂದ ಹೊರಗೆ ಕಾಲಿಡದೇ ವಾರದ ಮೇಲಾಗಿತ್ತು. ಮನೆಯಲ್ಲಿ ಇದ್ದ-ಬದ್ದ ಪುಸ್ತಕಗಳೆಲ್ಲಾ ಓದಿ ಮುಗಿದವು. ಈಡಿಯಟ್ ಪೆಟ್ಟಿಗೆ ವೀಕ್ಷಿಸಲು ವಿದ್ಯುಚ್ಛಕ್ತಿ ಭಾಗ್ಯವಿಲ್ಲವಾಗಿತ್ತು. ಮಳೆಯಿಲ್ಲದ ಮಳೆಗಾಲದಲ್ಲೆ ಬಿರುಬೇಸಿಗೆಗಿಂತ ಸುಡುವ ಬಿಸಿಲು. ಆಕಾಶ, ಗಾಳಿ, ನೆಲವೆಲ್ಲಾ ಬಿಸಿಯ ಝಳದಿಂದ ಕಾದು ಬೆಂದು ಹೋಗಿದ್ದವು. ಮಾಡಲು ಕೆಲಸವಿಲ್ಲದಿದ್ದಾಗ ಸಮಯದ ಸೆಕೆಂಡಿನ ಮುಳ್ಳು ನಿಧಾನಕ್ಕೇ ಚಲಿಸುತ್ತದೆ. ಅದರಲ್ಲೂ ಈ ತರಹದ ವ್ಯತಿರಿಕ್ತ ವಾತಾವರಣ ಮಾನಸಿಕ ಆರೋಗ್ಯವನ್ನೇ ತಿಂದು ಬಿಡುತ್ತದೆ. ಲವಲವಿಕೆಯಿಲ್ಲದೇ ಮರದ ಕೊರಡಿನಂತೆ ಬಿದ್ದುಕೊಂಡಿದ್ದವನಿಗೆ, ಕಾಲಬುಡದಲ್ಲೊಂದು ಹೆಜ್ಜೇನಿಗಿಂತ ಕೊಂಚ ದೊಡ್ಡದಾದ ಕರೀ ಬಣ್ಣದ ಕೀಟವೊಂದು ಗುಂಯ್ ಗುಟ್ಟಿದಂತೆ ಕೇಳಿತು. ಕಾಲು ಒದರಿದೆ. ಅದರ ಉದ್ಧೇಶ ಬೇರೆಯದೇ ಇತ್ತು. ಅನವಶ್ಯಕವಾಗಿ ನಾನೇ ಕಾಲು ಒದರಿದ್ದು. ಇಡೀ ಪ್ರಪಂಚದ ಖಿನ್ನತೆಯನ್ನು ಹೊದ್ದು ಮಲಗಿದವನಿಗೆ, ಕಿನ್ನರಲೋಕದಿಂದ ಅಪ್ಸರೆಯೊಬ್ಬಳು ಇಳಿದು ಬಂದು ಸಾಂತ್ವಾನ ಹೇಳಿದಂತೆ ಇತ್ತು ಈ ಕರೀಕೀಟದ ಆಗಮನ!

ಹಾಗೆಯೇ ಜುಂಯ್‍ಗುಡುತ್ತಾ ಇದ್ದ ಕೀಟದ ಸದ್ದು ಅಚಾನಕ್ ನಿಂತು ಹೋಯಿತು. ಹಾಗಾದರೆ ಅದೆಲ್ಲೋ ಕುಳಿತಿರಬೇಕು! ಏನು ಮಾಡುತ್ತಿದೆ? ಎದ್ದು ಕುಳಿತು ಹುಡುಕಾಡಿದೆ. ಸದ್ದು ಇಲ್ಲ. ಕೀಟವೂ ಇಲ್ಲ. ಛೇ! ಕಾಲು ಒದರಿದ್ದೇ ತಪ್ಪಾಯಿತೇನೋ ಎಂದು ಖುದ್ದು ಶಪಿಸಿಕೊಳ್ಳುತ್ತಿರಬೇಕಾದರೆ, ಮತ್ತೇ ಕ್ಷೀಣವಾದ ಜುಂಯ್ ಸದ್ದು ಕೇಳಿತು. ಬಾಗಿಲ ಚಿಲಕವನ್ನು ಹಾಕುವ ದುಂಡನೆಯ ರಂಧ್ರದಿಂದ ಹಿಮ್ಮುಖವಾಗಿ ಹೊರಬಂದಳಾ ಕೃಷ್ಣಸುಂದರಿ. ಮತ್ತೇ ಜುಂಯ್‍ಗುಡುತ್ತಾ ತೆರೆದ ಬಾಗಿಲಿನಿಂದ ಹಾರಿಹೋಯಿತು. ಮತ್ತೆ ಖಿನ್ನತೆಯ ರಜಾಯಿ ತನ್ನನ್ನು ಹೊದ್ದುಕೊಂಡು ಮಲಗು ಎಂಬ ಒತ್ತಾಯ ಶುರು ಮಾಡುವ ಹೊತ್ತಿನಲ್ಲಿ ಮತ್ತೊಮ್ಮೆ ಜುಂಯ್ ಶಬ್ಧ! ಫಿನಿಕ್ಸ್ ಪಕ್ಷಿಯಂತೆ ಮತ್ತೆ ಮೇಲೆದ್ದು ಕುಳಿತೆ. ಈಗ ಬಂದ ಕೃಷ್ಣ ಸುಂದರಿಯ ಕಾಲಿನಲ್ಲಿ ಚಿಕ್ಕ ಹುಳವೊಂದು ಇತ್ತು. ಹುಳದ ಸಮೇತ ರಂಧ್ರದೊಳಕ್ಕೆ ಹೋಯಿತು. ಇದೀಗ ಕಾಯುತ್ತಾ ಕೂರುವ ಸರದಿ ನನ್ನದು.

ಕಪ್ಪುರಂಧ್ರದಂತಹ ಗೂಡಿನಾಳದಲ್ಲಿ ಅದೇನು ಕರಾಮತ್ತು ನಡೆಸಿದೆ ಎಂದು ಊಹಿಸುವುದು ಕಷ್ಟವಾಗಲಿಲ್ಲ. ಅದಲ್ಲಿ ಗೂಡು ಕಟ್ಟುತ್ತಿತ್ತು. ಮೊಟ್ಟೆಯಿಟ್ಟು ಮರಿ ಮಾಡುವ ಪೂರ್ವತಯಾರಿ ನಡೆಸಿತ್ತು. ಮತ್ತೆ ಹಾರಿ ಹೊರಹೋಯಿತು. ಈ ಕುತೂಹಲವನ್ನಿಷ್ಟು ನೋಡು ಎಂದು ಮಡದಿಗೆ ಹೇಳಿದೆ. ಮೊಬೈಲ್ ಟಾರ್ಚ್ ಬಿಟ್ಟು ನೋಡಿದವಳ ಕಣ್ಣು ಅಷ್ಟು ದೊಡ್ಡದಾಗಿತ್ತು. ಹಸಿರೆಲೆ ಮತ್ತು ಹಸಿರು ಹುಳಗಳಿದ್ದಾವೆ ಎಂಬ ವರದಿ ಸಿಕ್ಕಿತು. ಇಷ್ಟರಲ್ಲೆ ಮತ್ತೆ ಕಪ್ಪುಸುಂದರಿ ಸಶಬ್ಧವಾಗಿ ಹಾರಿ ಬಂದಳು. ಮತ್ತೊಂದು ಹುಳು. ಹೀಗೆ ಪ್ರತಿ ಐದರಿಂದ ಹತ್ತು ನಿಮಿಷಗಳ ಒಳಗೆ ಒಂದು ಬಾರಿಯಂತೆ ನೂರಿನ್ನೂರು ಬಾರಿ ಮನೆಯ ಒಳಕ್ಕೂ ಹೊರಕ್ಕೂ ಹಾರಾಡಿತು. 

ಸಂಜೆ 5.30 ಗಂಟೆಯಾಗುತ್ತಿದ್ದಂತೆ ಸೊಳ್ಳೆಗಳ ದಾಳಿ ಶುರುವಾಗುತ್ತದೆ. ಇದಕ್ಕಾಗಿ ಪ್ರತಿದಿನ ಬಾಗಿಲು ಹಾಕುವುದು ರೂಡಿ. ಇವತ್ತು ವಿಶೇಷ ಅತಿಥಿಗಾಗಿ ಬಾಗಿಲು ತೆರೆದಿಡಬೇಕಾದ ಸಂದರ್ಭವಿತ್ತು. ಕೃಷ್ಣಸುಂದರಿಯ ಪ್ಯಾರಾಥಾನ್ (ಗಾಳಿಯಲ್ಲಿ ತೇಲಿ ಬರುತ್ತಿದ್ದರಿಂದ ಮ್ಯಾರಾಥಾನ್ ಅಲ್ಲ) ಸುಮಾರು 6.30 ಗಂಟೆಯವರೆಗೂ ನಡೆಯಿತು. ಆಮೇಲೆ ಬರಲಿಲ್ಲ. ಬೆಳಗಾಗುವುದಕ್ಕಾಗಿ ಕಾತರದಿಂದ ಕಾಯುವ ಸರದಿ ನಮ್ಮದು. ಬೆಳಗ್ಗೆ 6 ಗಂಟೆಗೇ ಬಾಗಿಲು ತೆಗೆದಿಟ್ಟಾಯಿತು. ಬಹುಷ: ಕಪ್ಪುಸುಂದರಿ ಸೂರ್ಯವಂಶಸ್ಥಳಿರಬೇಕು. ಅಂತೂ 9 ಗಂಟೆಗೆ ರಾಗ ಹಾಡುತ್ತಾ ಬಂತು. ಕೈಯಲ್ಲಾಗಲಿ, ಬಾಯಲ್ಲಾಗಲೀ ಎನೂ ಇರಲಿಲ್ಲ. ಅದರ ಪಾಡಿಗೆ ಅದನ್ನು ಬಿಟ್ಟುಬಿಡುವುದು ಅಂದರೆ ಅದಕ್ಕೆ ಹೆಚ್ಚಿನ ತೊಂದರೆ ಕೊಡುವುದು ಬೇಡವೆಂದು ಸುಮ್ಮನಾದೆವು. ಮನೆ ಕಸ ಗುಡಿಸಿ, ಒರೆಸಿ ತೋಟಕ್ಕೆ ಹೋಗುವ ಗಡಿಬಿಡಿಯಲ್ಲಿ ಅಭ್ಯಾಸಬಲದಂತೆ ಕೃಷ್ಣಸುಂದರಿಗೆ ತನ್ನ ಮನೆಗೆ ಹೋಗಲಾರದಂತೆ ಬಾಗಿಲು ಹಾಕಿ ಹೋಗಿದ್ದರು ನಮ್ಮ ಹೋಂ ಮಿನಿಷ್ಟರ್. ಇದೇನು ತುಂಬಾ ಹೊತ್ತಿನಿಂದ ಜುಂಯ್ ಗುಡುತ್ತಲೇ ಇದೆಯಲ್ಲ ಎಂದು ನೋಡಿ ಹಾಕಿದ ಬಾಗಿಲನ್ನು ತೆಗೆದೆ, ಅದಕ್ಕೆ ಕಾಯುತ್ತಿದ್ದಂತೆ ಕೀಟ ಕಪ್ಪುರಂಧ್ರದೊಳಕ್ಕೆ ಮಾಯವಾಯಿತು. 

ಹಾಗೆಯೇ ಹೊರಬಂದು ಜಗುಲಿಯಲ್ಲಿ ಮಲಗಿ ಆಕಾಶ ನೋಡುತ್ತಿದ್ದವನಿಗೆ, ಹಲವು ದೃಶ್ಯಗಳು ಕಂಡುಬಂದವು. ಅತಿವೇಗವಾಗಿ ಹಾರುತ್ತಾ ಕೀಟಭಕ್ಷಣೆ ಮಾಡುತ್ತಿರುವ ಆಕಾಶಗುಬ್ಬಿಗಳು, ಎರೋಪ್ಲೇನ್ ಚಿಟ್ಟೆಗಳು, ಬಲಿಗಾಗಿ ಹೊಂಚು ಹಾಕಿ ಸುತ್ತುತ್ತಿರುವ ಗಿಡುಗ, ಜೀಕುತ್ತಾ ಹಾರುತ್ತಿರುವ ಮಂಗಟ್ಟೆ, ಗುಟುಕು ನೀಡಲು ಬಾಯಿತುಂಬಾ ಕೀಟ ತುಂಬಿಕೊಂಡು ಕಾಯುತ್ತಿರುವ ಪಿಕಳಾರ ಇತ್ಯಾದಿಗಳು. ಇಷ್ಟರಲ್ಲೇ ಬೆಚ್ಚಿಬೀಳುವಂತೆ ಕಿವಿಗಡಚಿಕ್ಕುವ ಹಾಗೆ ಮೈಕ್ ಕಟ್ಟಿಕೊಂಡ ಆಟೋವೊಂದು ರಸ್ತೆಯಲ್ಲಿ ನುಗ್ಗಿ ಬಂತು. ಕರ್ಣಬೀಕರವಾದ ಮೈಕಿನ ಕೂಗು ಸಾಮಾನ್ಯ ಮನುಷ್ಯನ ಕಿವಿತಮಟೆ ಹರಿದುಹೋಗುವಷ್ಟು ತಾರಕದಲ್ಲಿತ್ತು. ಬೆಚ್ಚಿದ ಸಕಲ ಜೀವಕೋಟಿಗಳು ತಮ್ಮ ನಿತ್ಯಕಾಯಕವನ್ನು ಬದಿಗೊತ್ತಿ ಜೀವಭಯದಿಂದ ನಿಮಿರಿ ನಿಂತವು. ಕೊಟ್ಟಿಗೆಯಲ್ಲಿನ ಜಾನುವಾರುಗಳು ಕಣ್ಣಿ ಕಿತ್ತುಹೋಗುವಂತೆ ಹಗ್ಗ-ಜಗ್ಗಾಡಿದವು. ಈ ದಿನವೇ ಮುಖ್ಯಮಂತ್ರಿಗಳು ನಮ್ಮ ನಗರಕ್ಕೆ ಬರುವ ಕಾರ್ಯಕ್ರಮವಿತ್ತು, ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮಕ್ಕೆ ಕರೆ ಮಾಡಲು ಬಂದ ಆಟೋ ಶರವೇಗದಲ್ಲಿ ಅರ್ಥವಾಗದಂತೆ ಅದೇನೇನೋ ವದರಿ ಅಂತರ್ಧಾನವಾಯಿತು. ಆಕಾಶದಲ್ಲೂ ಗುಡುಗಿನಂತೆ ಸದ್ದು ಮಾಡುತ್ತಾ ಉಕ್ಕಿನ ಹಕ್ಕಿ ಹಾರಿ ಬಂತು. ಮುಖ್ಯಮಂತ್ರಿಗಳು ಹೆಲಿಕಾಪ್ಟರ್‍ನಲ್ಲಿ ಬಂದರು ಎಂದು ಕೆಲವರು ಹೊರಗೆ ಬಂದು ಆಕಾಶ ನೋಡಿ ಮತ್ತೆ ಒಳ ಹೋದರು. 

ಈ ಮಧ್ಯೆ ಮನೆಗೆ ಯಾರ್ಯಾರೋ ನೆಂಟರು ಬಂದರು. ಒಟ್ಟಾರೆಯಾಗಿ ಕಪ್ಪುಸುಂದರಿಯ ಕಾಯಕದ ಬಗ್ಗೆ ಗಮನ ಹರಿಸಲಾಗಲಿಲ್ಲ. ಸಂಜೆಯ ಹೊತ್ತಿಗೆ ಆಕಾಶದಲ್ಲಿ ರಂಗೋಲಿ ಹಾಕಲು ಬಾಲೆಯೊಬ್ಬಳು ಚುಕ್ಕಿಯಿಟ್ಟಂತೆ ಅಗಣಿತ ಸಂಖ್ಯೆಯ ನಕ್ಷತ್ರಗಳನ್ನು ನೋಡುತ್ತಾ ಖಿನ್ನತೆಯ ರಜಾಯಿಯನ್ನು ಕಿತ್ತೆಸೆಯುವ ಪ್ರಯತ್ನದಲ್ಲಿದ್ದೆ. ಅದೆಲ್ಲಿಂದಲೋ ಬೀಸಿ ಬಂದ ತಣ್ಣನೆಯ ಗಾಳಿ ಕಚ್ಚುವ ಸೊಳ್ಳೆಗಳನ್ನು ಹಾರಿಸಿಕೊಂಡು ಹೋಯಿತು. ನೀಲಾಕಾಶದಲ್ಲಿ ಇದ್ದಕ್ಕಿಂದಂತೆ ಕರಿಮೋಡಗಳು ದಟೈಸಿದವು. ಕಾರ್ಮುಗಿಲು ಪ್ರಳಯಸದೃಶದಂತೆ ಕಂಡು ಎನೇನೋ ಯೋಚನೆಗಳನ್ನು ಮಸ್ತಕದಲ್ಲಿ ಹುಟ್ಟುಹಾಕಿದವು. ದೂರದಲ್ಲಿ ರೋಡ್‍ರೋಲರ್ ಚಲಿಸಿದಾಗ ಆಗುವ ಶಬ್ಧದಂತೆ ಒಂದು ಕ್ಷೀಣವಾದ ಶಬ್ಧ. ಗುಡುಗು. ಒಮ್ಮೆಗೇ ಬೀಸಿ ಬಂದ ತಂಗಾಳಿ ರುದ್ರಸದೃಶದ ವಾತಾವರಣವನ್ನು ರಮಿಸುವ ಹಾಗೆ ವಿಶಿಷ್ಟವಾದ ಅಹ್ಲಾದತೆಯನ್ನು ಸೃಷ್ಟಿಸಿತು. ಬಾಲೆಯೊಬ್ಬಳು ಇಟ್ಟ ರಂಗೋಲಿ ಚುಕ್ಕಿಗಳು ಮಾಯವಾಗಿ ಆ ಜಾಗದಲ್ಲಿ ಕಣ್ ಕೋರೈಸುವ ಮಿಂಚು ಚುಕ್ಕಿಗಳನ್ನು ಜೋಡಿಸಿದಂತೆ ರಂಗೋಲಿಯಾಕಾರವನ್ನು ತಳೆದು ಮಾಯವಾಯಿತು. ಹಿಂದೆಯೇ ಛಟಾರೆಂದು ಸಿಡಿಲಿನ ಆರ್ಭಟದೊಂದಿಗೆ ಅಪರೂಪದ ಅತಿಥಿಯಾಗಿ ಬಂದಿದ್ದ ವಿದ್ಯುಚ್ಚಕ್ತಿಯ ಬೆಳಕು ನಂದಿಸಿ, ಇಡೀ ಮನೆ ಗಾಡಾಂಧಕಾರಮಯವಾಗಿಸಿತು.  ಜೊತೆಗೆ ಲೆಕ್ಕ ಮಾಡಬಹುದಾದಷ್ಟೇ ಬಿದ್ದ ಮಳೆಹನಿಗಳು, ಕಾದ ನೆಲವನ್ನು ತಣಿಸಲು ವಿಫಲವಾದಂತೆ ಸೋತು ಹೋದವು. ಅದೆಲ್ಲೋ ಅಡಗಿದ್ದ ಚಂದ್ರ ಮೋಡದ ಮರೆಯಿಂದ ಹಣಿಕಿದ. ಮಳೆಗಾಗಿ ಕಾದು ಕಾತರಿಸಿ ವಿಷಣ್ಣವಾಗಿದ್ದ ಜೀರುಂಡೆಗಳು ಕಡೆಯ ಪ್ರಯತ್ನವೆಂಬಂತೆ ಹೊಟ್ಟೆಹರಿದುಕೊಂಡು ಕೂಗಲು ಮೊದಲು ಮಾಡಿದವು. 

ಅದೇ ಕರ್ಣಪಿಶಾಚಿಯೆಂಬ ಯಂತ್ರದ ಟಾರ್ಚ್‍ನಿಂದ ಕಪ್ಪುಸುಂದರಿಯ ಗೂಡನ್ನು ನೋಡಿದಾಗ ಅಚ್ಚರಿ ಕಾದಿತ್ತು. ಇತಿಹಾಸದ ಪುಟದಲ್ಲಿ ಮೇರುವ್ಯಕ್ತಿಯ ಪ್ರೇಮಿಸಿ, ಸಿಕ್ಕಿಬಿದ್ದು, ಜೀವಂತವಾಗಿ ಸಮಾಧಿಯಾದ ಅನಾರ್ಕಲಿಯ ನೆನಪನ್ನು ತರಿಸುವ ಹಾಗೆ, ಈ ಕಪ್ಪು ಸುಂದರಿ ತನ್ನದೇ ಗೂಡಿಗೆ ಹೋಗುವ ದ್ವಾರವನ್ನು ಜೇಡಿಮಣ್ಣಿನಿಂದ ಮುಚ್ಚಿಹಾಕಿತ್ತು. ಒಳಗಿದ್ದ, ಎಳೆ ಎಲೆಗಾಗಲಿ ಅಥವಾ ಕೂಡಿಟ್ಟ ಆಹಾರವಾದ ಹುಳುಗಳಿಗಾಗಲಿ ಇಷ್ಟೂ ಗಾಳಿಯಾಡದ ಹಾಗೆ ಬಿರಡೆಯಂತೆ ಮುಚ್ಚಿ ಹಾಕಿತ್ತು. ಗಾಳಿಯಾಡದೇ ಮರಿಗಳು ಸತ್ತು ಹೋಗಬಹುದು ಸೂಜಿಯಿಂದ ಚಿಕ್ಕದೊಂದು ತೂತು ಮಾಡುವ ಎಂಬ ಮಡದಿಯ ಸಲಹೆಯನ್ನು ತಳ್ಳಿಹಾಕಿದೆ. ಪ್ರಕೃತಿಯ ಒಡಲಲ್ಲಿ ಅದೆಂಥಾ ತಂತ್ರಗಳಿವೆಯೋ ಬಲ್ಲವರಾರು. ನಮ್ಮ ಹಸ್ತಕ್ಷೇಪವೇ ಕರಿಸುಂದರಿಯ ಕುಲಕ್ಕೆ ಮುಳುವಾಗಬಹುದು. ನಮ್ಮದಲ್ಲದ ಲೆಕ್ಕಾಚಾರದಲ್ಲಿ ನಾವು ಯಾವಾಗಲೂ ಮಧ್ಯಸ್ತಿಕೆವಹಿಸಬಾರದು ಇದೇ ಪ್ರಕೃತಿಯ ನಿಯಮ ಎಂದು ಸಮಜಾಯಿಷಿ ನೀಡಿದೆ. ಮಾರನೇ ದಿನವೂ ಕಪ್ಪುಕೀಟ ಸಾಸಿವೆ ಕಾಳಿಗಿಂತ ಚಿಕ್ಕದಾದ ಜೇಡಿಮಣ್ಣಿನ ಉಂಡೆಯನ್ನು ತಂದು ನುರಿತ ಗಾರೆ ಮಾಡುವ ಮೇಸ್ತ್ರಿಗಿಂತ ಚೆಂದವಾಗಿ ಉಂಡೆಯನ್ನು ಲಟ್ಟಿಸಿ ದ್ವಾರವನ್ನು ಇನ್ನೂ ಗಟ್ಟಿಗೊಳಿಸಿ ಹಾರಿಹೋಯಿತು. ಕೈಯಲ್ಲಿ ಸವರಿ ನೋಡಿದರೆ, ಮುಚ್ಚಿದ ಬಾಗಿಲು ಕಾಂಕ್ರೀಟ್‍ನಂತೆ ಗಟ್ಟಿಯಾಗಿತ್ತು. ಕಪ್ಪುಸುಂದರಿ ಕೀಟ ಮುಂದೇನು ಮಾಡಬಹುದು ಎಂಬ ಕುತೂಹಲದೊಂದಿಗೆ ಕಾಯುವುದನ್ನು ಬಿಟ್ಟರೆ ಮಾಡಲು ಇನ್ನೇನು ಕೆಲಸವಿಲ್ಲ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
trackback

[…] ಕರಿಸುಂದರಿಯ ಕಿರಿಗೂಡು-1 [ಎರಡು ವಾರದ ಹಿಂದೆ ಬರೆದಿದ್ದ ಈ ಸತ್ಯಕಥೆಯನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ಇದ್ದುದ್ದರಿಂದ, ನಂತರದಲ್ಲಿ ನಡೆದ ಘಟನೆಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿದ್ದರೆ, ಪ್ರಪಂಚ ಸುಲಲಿತವಾಗಿಯೇ ಇರುತ್ತಿತ್ತೇನೋ. ಇಲ್ಲಿ ಪುಟ್ಟ ಕಣಜವೊಂದು ತನ್ನ ವಂಶಾಭಿವೃದ್ಧಿಯ ಪ್ರಯತ್ನದಲ್ಲಿದ್ದಾಗಲೇ, ದೂರದ ಅಸ್ಸಾಂನಲ್ಲಿ ಮಾನವನ ಶೋಕಿಗಾಗಿ ಒಂದು ಅಪ್ರಿಯ ಘಟನೆ ನಡೆಯಿತು. ಜೀವಜಾಲದಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ಪೋಣಿಸಲಾಗಿದೆ]    ತನ್ನ ಗೂಡಿಗೆ ಲಪ್ಪ ಹಾಕಿ ಮೆತ್ತಿದಂತೆ, ಜೇಡಿ ಮಣ್ಣನ್ನು ಮೆತ್ತಿ ಹೋದ ಕಪ್ಪು ಸುಂದರಿ ಸರಿಯಾಗಿ ಹತ್ತು ದಿವಸದ ನಂತರ ತಿರುಗಿ ಬಂದಳು. ಇಷ್ಟರಲ್ಲೆ ನಮ್ಮ ಕಲ್ಪನೆಯ ಗಾಳಿಪಟ ಬಾಲಂಗೋಚಿ ಕಳೆದುಕೊಂಡು ಎತ್ತೆತ್ತಲೋ ಹಾರುತ್ತಿತ್ತು. ಕಪ್ಪುರಂಧ್ರದೊಳಗಿನ ಮೊಟ್ಟೆಗಳು ಮರಿಯಾಗಿರಬಹುದೆ? ಮೊಟ್ಟೆಯೊಡೆದ ಮರಿಗಳಿಗೆ ಆಹಾರವಾಗಿ ಇಟ್ಟಿದ್ದ ಹುಳುಗಳನ್ನು ಮರಿಗಳು ತಿಂದವೇ? ಮರಿಗಳಿಗೀಗ ರೆಕ್ಕೆ ಬಂದಿರಬಹುದೇ? ಇಂತವೇ ಯೋಚನೆಗಳು, ಬರೀ ಕೆಲಸಕ್ಕೆ ಬಾರದವು ಎಂದು ಕೊಂಡರೂ ಅಡ್ಡಿಯಿಲ್ಲ. ವಾಪಾಸು ಬಂದ ಕರಿಸುಂದರಿಯ ಹತ್ತಿರ ಗಟ್ಟಿಯಾದ ಗೂಡಿನ ಬಾಗಿಲನ್ನು ಒಡೆಯಲು ಉಳಿ-ಸುತ್ತಿಗೆಗಳಂತಹ ಸಲಕರಣೆಗಳೇನು ಇರಲಿಲ್ಲ. ನಾವೂ ಗೂಡಿಗೆ ತೀರಾ ಹತ್ತಿರ ಹೋದರೂ ಅದು ತನ್ನ ಕೆಲಸವನ್ನೇನು ನಿಲ್ಲಿಸಲಿಲ್ಲ. ಒಂದು ಬಾರಿಯಂತೂ ಅದರ ರೆಕ್ಕೆಗೇ ಕೈಬೆರಳು ತಾಗಿತು. ಆದರೂ ಅದು ಗಲಿಬಿಲಿ-ಗಾಬರಿಯಾಗಲಿ ಆಗಲಿಲ್ಲ. ಉಳಿದ ಕೀಟಗಳಿಗೆ ಹೋಲಿಸಿದರೆ, ಇದರ ಹಾರಾಟದ ವೇಗ ತುಸು ಕಡಿಮೆಯೆಂದೇ ಹೇಳಬೇಕು. ಅಂದರೆ ಜೇನ್ನೊಣ ಅಥವಾ ನೊಣಗಳ ವೇಗ ಇದಕ್ಕಿಲ್ಲ ಎಂಬುದು ನಾವು ಗಮನಿಸಿದ ಸಂಗತಿ.  ಬಹುಷ: ತನ್ನ ಇಕ್ಕಳದಂತಹ ಹಲ್ಲಿನಿಂದಲೇ ಕೊರೆದು ಬಾಗಿಲನ್ನು ತೆಗೆಯುವ ಪ್ರಯತ್ನ ಮಾಡುತ್ತಿತ್ತು. ಮಧ್ಯೆ-ಮಧ್ಯೆ ಹೊರಗೆ ಹಾರಿಹೋಗುತ್ತಿತ್ತು. […]

1
0
Would love your thoughts, please comment.x
()
x