ವೈದೇಹಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ಕ್ರೌಂಚ ಪಕ್ಷಿಗಳು’: ಮೋಹನ್ ಕೊಳ್ಳೇಗಾಲ

ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳನ್ನೊಳಗೊಂಡ ಒಂದು ಕಥಾಸಂಕಲನ. ಎಲ್ಲಾ ಕಥೆಗಳಲ್ಲಿಯೂ ಹೊಸ ಹುಡುಕಾಟವಿದೆ, ಅದ್ಭುತ ಮತ್ತು ನೈಜವೆನಿಸಿಕೊಳ್ಳುವ ಭಾವನೆಗಳನ್ನು ಎಳೆ ಎಳೆಯಾಗಿ ಹರಿಯಬಿಡುವ ನಿರೂಪಣೆಯಿದೆ, ಹೊಸ ಹೊಸ ಭಾವನೆಗಳ ಮಿಳಿತವಿದೆ, ನೋವಿನ ಜೊತೆಗೆ ನಲಿವಿದೆ, ನಂಬಿಕೆ ಅಪನಂಬಿಕೆಗಳ ನಡುವಿನ ಗುದ್ದಾಟವಿದೆ, ಅರ್ಧದಾರಿಗೇ ನಮ್ಮನ್ನು ನಿಲ್ಲಿಸಿಹೋಗುವ ಒಗಟುಗಳಿವೆ, ಪ್ರಶ್ನೆಯಾಗಿ ಕಾಡಿ ಪ್ರಶ್ನೆಯಾಗಿಯೇ ಉಳಿದುಕೊಳ್ಳುವ ಭಾವನೆಗಳಿವೆ, ಜೊತೆಗೆ ಕುಂದಾಪುರ ಕನ್ನಡದ ನವಿರು ಸೊಗಡಿನ ದುಡಿಮೆಯಿದೆ. ಇವೆಲ್ಲಕ್ಕಿಂತಲೂ ಈ ಕಥೆಗಳಲ್ಲಿ ಪ್ರಮುಖವಾಗಿ ಗ್ರಹಿಸಿಕೊಳ್ಳಬಹುದಾದ ಅಂಶವೆಂದರೆ ‘ಪ್ರತಿ ಕಥೆಯಲ್ಲೂ ವಿರುದ್ಧಭಾವಗಳು ಒಟ್ಟೊಟ್ಟಿಗೆ ಮೇಳೈಸಿಕೊಂಡಿವೆ’, ಇಷ್ಟು ಅದ್ಭುತವಾಗಿ ಒಂದೇ ಕಥೆಯಲ್ಲಿ ಕೆಲವೇ ಸಾಲುಗಳಲ್ಲಿ ವಿರುದ್ಧಭಾವ ಚಿತ್ರಣಗಳನ್ನು ಇಷ್ಟು ಸುಲಭವಾಗಿ ಕಟ್ಟಿಕೊಡಲು ಸಾಧ್ಯವೇ? ಆದರೆ ಇಲ್ಲಿ ಸಾಧ್ಯವಾಗಿದೆ.

ಉದಾಹರಣೆಗೆ, ಈ ಕಥಾಸಂಕಲನದ ಮೊದಲ ಕಥೆಯಾದ ‘ದಾಳಿ’ಯಲ್ಲಿ ಬಸ್ಸಿಗೆ ಹತ್ತದ ಆಕೆಯನ್ನು ಕಂಡಕ್ಟರ್ ಹತ್ತಲು ಹೇಳುತ್ತಾನೆ. ಆಕೆ ‘ಸೀಟಿಲ್ಲವಲ್ಲ, ನಿಲ್ಲೋಕೆ ಆಗಲ್ಲಪ್ಪ ನನಗೆ’ ಎಂದು ಹೇಳಿದಾಗ ‘ಒಂದು ಸೀಟಿಲ್ಲವ, ಕೊಡುವ ಬನ್ನೀ…’ ಎಂದು ಹೇಳಿದವನು ಆಕೆ ಒಳಗೆ ಬಂದಮೇಲೆ ಟಿಕೇಟು ಹರಿಯುವಾಗ ಆಕೆಯ ಮೇಲೆ ರೇಗಿಕೊಳ್ಳುತ್ತಾನೆ, ಸೀಟೇ ಇರಲಿಲ್ಲವೆಂಬುದು ನಿಜ, ಆದರೆ ಕಂಡಕ್ಟರ್ ಗೆಂದು ಮೀಸಲಾಗಿದ್ದ ಟಿಕೆಟುಪೆಟ್ಟಿಗೆ ಹೊತ್ತ ಸೀಟೊಂದಿತ್ತು. ನಿಂತುಕೊಳ್ಳಲಾಗದಿದ್ದವಳನ್ನು ಸೀಟುಕೊಡುತ್ತೇನೆ ಎಂದು ಹತ್ತಿಸಿಕೊಂಡು ಭರವಸೆ ಕೊಟ್ಟವನು ಆ ಸೀಟನ್ನಾದರೂ ನೀಡಬಹುದಾಗಿತ್ತು, ಆದರೆ ನಿರಪರಾಧಿಯಾದ ಆಕೆಯ ಮೇಲೆ ಇದ್ದಕ್ಕಿದ್ದಂತೆ ಇನ್ನಿಲ್ಲದಂತೆ ರೇಗಿಕೊಳ್ಳುತ್ತಾನೆ. ‘ಸೀಟು ಬೇಕು ಸೀಟು! ಅಷ್ಟಿದ್ದವರು ಮೊದಲೇ ಬರಬೇಕಿತ್ತು. ಏನು, ನಿದ್ದೆ ಮಾಡುತ್ತಿದ್ದಿರ…? ನಿದ್ದೆಗೆ ನಿದ್ದೆಯೂ ಬೇಕು ನಿಮಗೆ, ಸೀಟಿಗೆ ಸೀಟೂ’ ಎಂದು ಮೇಲೆರಗುತ್ತಾನೆ. ಆತ ಟಿಕೆಟು ಹರಿಯುವುದು ಮುಗಿಸಿ ಮತ್ತೆ ಹಿಂದೆ ಬಂದಾಗ ಟಿಕೆಟುಪೆಟ್ಟಿಗೆ ಹೊತ್ತ ಸೀಟಿನ ಮೇಲೆ ಒಬ್ಬ ವ್ಯಕ್ತಿ ಕುಳಿತಿರುತ್ತಾನೆ, ಆತ ಆ ಕಂಡಕ್ಟರಿಗೆ ಪರಿಚಯಸ್ಥರಾದ್ದರಿಂದ ನಗುನಗುತ್ತಲೇ ಮಾತನಾಡುತ್ತಾನೆ. ಆಕೆ ಕೈ ಸೋತು ಕೆಳಗಿಟ್ಟಿದ್ದ ಬುಟ್ಟಿ ಕಣ್ಣಿಗೆ ಬೀಳುತ್ತದೆ, ಅದನ್ನು ಪಟಾರನೆ ತುಳಿದು ‘ಕಾಲಡಿ ಕೈಯಡಿ ಇಡುತ್ತೀರಲ್ಲ, ನಿಮಗೇನು ಭಾಷೆ ಇಲ್ಲವ?’ ಎಂದು ಅರಚಿಕೊಳ್ಳುತ್ತಾನೆ.
 
ಆದರೆ ಆಕೆ ಕೊಂಚವೂ ಅಳುಕುವುದಿಲ್ಲ. ಆತನ ಪ್ರತಿ ಮಾತಿಗೂ, ನಿಲ್ಲಲಾಗದ ನೋವಿನಲ್ಲೂ ತನ್ನ ತೆಳುನಗೆಯನ್ನು ತೇಲಿಸುತ್ತಿರುತ್ತಾಳೆ. ಸುತ್ತಲಿನ ಜನ ಕಂಡಕ್ಟರ್ ನ ಮಾತನ್ನು ತಮಾಷೆಯಾಗಿ ಸ್ವೀಕರಿಸಿ ನಕ್ಕರೆ, ಕೆಲವರು ಸೀಟು ಕೊಡುತ್ತೇನೆ ಎಂದು ಹತ್ತಿಸಿಕೊಂಡ ಮೇಲೆ ‘ಸೀಟು ಕೊಟ್ಟರಾದರೂ ಸಮ, ಈಗ ರಾಪು ನೋಡು’ ಎಂದು ಕಂಡಕ್ಟರ್ ಮೇಲೆ ಒಳಗೊಳಗೆ(!) ಸಿಡುಕಿಕೊಂಡರೆ, ಮತ್ತೆ ಕೆಲವರು ಆಕೆಯ ಮಾತಿಲ್ಲದ ಬರಿ ನಗುವನ್ನು ಕಂಡು ‘ಅವಳಿಗಾದರೂ ಏನದು, ತೆಗೆದುಕೊಂಡು ಹೋಗುವಂಥ ನಗೆ!’ ‘ಕೆಲವು ಹೆಂಗಸರು ಹಾಗೇಪ್ಪ, ಥು’ ‘ಆತನಿಂದಲ್ಲ, ಅವಳ ನಗೆಯಿಂದಲೇ ಆ ಬುಟ್ಟಿ ಉರುಳಿತೋ ಏನು!’-ಹೀಗೆ ಮೂದಲಿಕೆಗಳು ಸಾಗಿದರೂ ಆಕೆ ಆಚೆ ಈಚೆ ಒತ್ತುವ ಜನಗಳ ನಡುವೆ ನಗೆ ಹಚ್ಚಿ ನಿಲ್ಲುತ್ತಾಳೆ. ಬಸ್ಸಿನೊಳಗಿದ್ದವರನ್ನು ಜನರು ಎನ್ನುವ ಬದಲು ಪ್ರೇಕ್ಷಕರು ಎಂದೂ, ಎರಡೇ ಪಾತ್ರಗಳಿರುವ ನಾಟಕವಿದು ಎಂದು ಲೇಖಕಿ ಕರೆಯುವಾಗ ಇಂದು ನಮ್ಮ ನಿಮ್ಮ ನಡುವೆ ನಡೆಯುವ ಒಂದು ಮೂಕ ನೈಜ ಚಿತ್ರಣದ ಅರಿವಾಗುತ್ತದೆ. ಅವಳ ನಗುವನ್ನು ನೋಡಿ ತಡೆಯಲಾಗದ ಕಂಡಕ್ಟರ್ ಟಿಕೆಟುಪೆಟ್ಟಿಗೆ ಸೀಟ್ ಮೇಲೆ ಕುಳಿತಿದ್ದ ಪರಿಚಯಸ್ಥನ ಬಳಿ ಬಂದು ‘ಹಡಬೆಟ್ಟಿಗಳೆಲ್ಲ ಹತ್ತಿ ಜೀವ ತಿಂತಾರೆ ಮಾರಾಯರೆ’ ಮುಂತಾಗಿ ಕೆಟ್ಟಬಾಯಿಯ ಮಾತುಗಳನ್ನಾಡಿದರೂ ಆಕೆಯ ಮೆಲುನಗೆ ನಿಲ್ಲುವುದಿಲ್ಲ. ಮತ್ತೆ ಆತ ‘ಎಂಥೆಂಥಾ ಪ್ಯಾಸೆಂಜರುಗಳು ಅಂತೀರಿ. ಬಸ್ಸು ಹತ್ತಿದ ಕೂಡಲೇ ‘ಸೀಟು!’ ಸೀಟನ್ನು ಕುಂಡೆಗೆ ಕಟ್ಟಿಕೊಂಡೇ ಬರಬಹುದಲ್ಲ’ ಎಂದಾಗ ಯಾರೋ ಪುಣ್ಯಾತ್ಮ ‘ಈಗ ನಮಗೆ ಮೂವತ್ತಮೂರು ಪರ್ಸೆಂಟ್ ಸೀಟು ಬೇಕು ಸ್ವಾಮಿ ‘ನಮಗೆ’’ ಎಂದಾಗ ಅವಳನ್ನು ಸುತ್ತುವರಿದು ಅಟ್ಟಹಾಸದ ನಗುವೊಂದು ಎದ್ದು ಬಿಡುತ್ತದೆ. ಆದರೆ ಆಕೆಯ ಮುಖದ ಮೇಲಿನ ಮಂದಹಾಸ ಶಾಂತವಾಗಿ ದೀಪದಂತೆ ಬೆಳಗುತ್ತಿರುತ್ತದೆ.
 
 
ಹೀಗೆ ಈ ಕಥೆ ಸಾಗುವಾಗ ಕೊನೆಗೆ ಕಂಡಕ್ಟರ್ ‘ಯಾಕೆ… ಯಾಕೆ ನಗುವುದು ನೀವು!’ ಎಂದು ಆರ್ಭಟಿಸುತ್ತಾನೆ. ಅವನ ದನಿಯ ಕರಕರಕ್ಕೆ ಮೌನಗೊಂಡ ಸುತ್ತಲಿನವರು ಅವರಿಬ್ಬರನ್ನೇ ನೋಡುತ್ತಾ ನಿಂತುಬಿಡುತ್ತಾರೆ. ‘ಹೇ!… ಸುಮ್ಮ ಸುಮ್ಮನೆ… ಛಕ್s…’ ಎಂದು ಚೀರಿಕೊಂಡು ಹಣೆ ಬಡಿದುಕೊಳ್ಳುತ್ತಾನೆ. ಕೊನೆಗೆ ಫುಟ್‍ಬೋರ್ಡಿನ ಮೇಲೆ ನಿಂತ ಆತನಿಗೆ ಮೈಯೆಲ್ಲಾ ಉರಿ ಏಳುತ್ತದೆ. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಮೈಗಿಂತ ಮನಸ್ಸಿನುರಿ ಆತನನ್ನು ತಿನ್ನುತ್ತಿರುತ್ತದೆ. ಬೆವರೊರೆಸಿಕೊಳ್ಳುತ್ತಾನೆ, ಗಾಳಿ ಬೀಸಿಕೊಳ್ಳುತ್ತಾನೆ, ಕಿಸೆಯಿಂದ ಪೊಟ್ಟಣವೊಂದನ್ನು ಒಡೆದು ಬಾಯಿಗೆ ಸುರಿದುಕೊಂಡು ಜಗಿಯತೊಡಗುತ್ತಾನೆ, ಏನೋ ಪ್ರಬಲವಾದುದನ್ನು ಜಗ್ಗುತ್ತಿರುವಂತೆ ಆತನ ಸ್ನಾಯುಗಳು ಗಟ್ಟಿಗೊಂಡು ಏರಿಳಿಯುತ್ತವೆ. ಆತ ತೆರೆದದ್ದೋ, ಅದೇ ತೆರೆದುಕೊಂಡಿತೋ ಗೊತ್ತಿಲ್ಲ ಬಢಾರನೇ ಬಾಗಿಲನ್ನು, ಬಡಿದು ಹಾಕಿಕೊಳ್ಳುತ್ತಾನೆ. ಕೋಪ ಹೆಚ್ಚಾಗಿಯೋ, ಚಡಪಡಿಕೆ ಹೆಚ್ಚಾಗಿಯೋ, ನಿಂತಲ್ಲೇ ಕತ್ತು ಹಿಸುಕಿದ ಪಕ್ಷಿಯಂತೆ ಮಿಸುಕಾಡುವ ಆತನ ಕಡೆಯಿಂದ ಮತ್ತೆ ಬಾಗಿಲು ತೆರೆದು ಬಡಿದ ಸದ್ದು ಬರುತ್ತದೆ. ಹಾರಿದನೋ, ಬಾಗಿಲು ತೆರೆದುಕೊಂಡು ತಾನಾಗಿ ಹೊರಗೆ ಬಿದ್ದನೋ, ಕಾಲು ಜಾರಿತೋ ಏನೋ ಬಸ್ಸು ಚೊರ್ರೋ ಎಂದು ಬ್ರೇಕ್ ಹಾಕಿಕೊಂಡು ನಿಲ್ಲುತ್ತದೆ. ಕೆಳಗೆ ಬಿದ್ದಾತನೆಡೆಗೆ ಎಲ್ಲರೂ ಧಡಧಡನೆ ಓಡುತ್ತಾರೆ. ಆಕೆ ಮಾತ್ರ ಭುಜದಿಂದ ಬ್ಯಾಗನ್ನು ಬದಲಿಸಿಕೊಂಡು ಅದೇ ಮೆಲುನಗೆಯಲ್ಲಿ ಕಿಟಕಿಯ ಕಡೆ ನೋಡುತ್ತ ನಿಂತುಬಿಡುತ್ತಾಳೆ.
 
ಮೇಲಿನ ಕಥೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಥೆಯ ಭಾವ ಅಂತ್ಯದಲ್ಲಿ ತೀವ್ರ ತೆರನಾಗಿ ಅಭಿಮುಖವಾಗಿ ತಿರುಗಿಕೊಳ್ಳುತ್ತದೆ. ಆತ ಆಕೆಯನ್ನು ಸೋಲಿಸುತ್ತಿದ್ದಾನೆ, ಹಿಂಸಿಸುತ್ತಿದ್ದಾನೆ ಎಂದುಕೊಂಡರೆ ಒಳಗೊಳಗೆ ಆತನೇ ಬೇಯುತ್ತಿದ್ದ, ಆತನ ಅಷ್ಟೂ ಮೂದಲಿಕೆಗಳನ್ನು ಸಹಿಸಿಕೊಂಡಾಕೆಯ ಒಂದು ಮೆಲುನಗೆಯನ್ನು ತಡೆದುಕೊಳ್ಳಲಾಗಲಿಲ್ಲವಾತನಿಗೆ, ಆಕೆಯನ್ನೇ ‘ಸಂತ್ರಸ್ಥಳಂತೆ’ ನೋಡುತ್ತ ನಿಂತಿದ್ದ ಜನ ಕೊನೆಗೆ ಆತನೆಡೆಗೆ ಓಡುವಂತಾಯಿತು. ಇಷ್ಟೆಲ್ಲಾ ಓದಿದ ನಂತರ ‘ದಾಳಿ’ ಎಂಬ ಶೀರ್ಷಿಕೆ ಆಕೆಯ ಮೇಲೆ ಹುಟ್ಟಿದ್ದಲ್ಲ ಆಕೆಯ ಕಡೆಯಿಂದ ಹುಟ್ಟಿದ್ದು ಎಂದೆನಿಸುತ್ತದೆ. ಈ ರೀತಿ ವಿರುದ್ಧಭಾವಗಳಿಗೆ ಕಥೆಗಳನ್ನು ತಿರುಗಿಸಿಕೊಳ್ಳುವುದೇ ಇಲ್ಲಿನ ನಿಪುಣ ತಂತ್ರಗಾರಿಕೆ.
 
ಇಲ್ಲಿನ ಹತ್ತೂ ಕಥೆಗಳಲ್ಲೂ ತದ್ವಿರುದ್ಧ ಭಾವ ಮೇಳೈಸುವ ಕಲೆಗಾರಿಕೆಯ ಜೊತೆಗೆ ಅನೇಕ ಕಡೆ ವ್ಯಕ್ತಿತ್ವಗಳ ಹೊಸ ಹೊಸ ಹುಡುಕಾಟವಿದೆ. ‘ಸಬಿತಾ’ ಎಂಬ ಕಥೆಯಲ್ಲಿ ಪ್ರತಿದಿನ ಕೆಲಸಕ್ಕೆ ಹೊರಟು ದುಡಿದುಣ್ಣುವ ಸಬಿತಾಳಿಗೆ ಎದುರುಮನೆಯ ಶ್ರೀಮಂತಿಕೆಯದೇ ಮಾತು. ಇಂಟರ್‍ವ್ಯೂಗೆಂದು ಬಂದು ಸಬಿತಾಳ ಮನೆಯಲ್ಲಿ ತಂಗಿಕೊಳ್ಳುವ ಗೆಳತಿಯೊಟ್ಟಿಗಿನ ಪ್ರತಿ ಮಾತಿನಲ್ಲೂ ಎದುರು ಮನೆಯ ಶ್ರೀಮಂತಿಕೆಯ ವಿಚಾರ, ಹೆಚ್ಚಾಗಿ ಆ ಮನೆಯ ಏಕೈಕ ಹೆಂಗಸಿನ ಬಗ್ಗೆ ಇರುತ್ತದೆ. ಇವೆಲ್ಲಾ ಕೇಳಲು ಇಷ್ಟವಿಲ್ಲದ ಗೆಳತಿ ಮಾತು ಬದಲಿಸಿದರೂ, ಬದಲುಗೊಂಡ ಮಾತನ್ನು ಸಬಿತಾ ಎದುರು ಮನೆಯ ಶ್ರೀಮಂತಿಕೆಯ ವರ್ಣನೆಗೆ ಮತ್ತು ಆ ಜನಗಳ ಅಹಂಕಾರವನ್ನು ವಿಶ್ಲೇಷಿಸಲು ಉಪಯೋಗಿಸಿಕೊಳ್ಳುತ್ತಾಳೆ. ಅವರು ‘ಮನುಷ್ಯರ ವಾಸನೆ ಇಲ್ಲದವರು’, ‘ಪಕ್ಕದ ಮನೆ ಎಂಬ ಯಾವ ವಾಂಛೆಯೂ ಇಲ್ಲ’ ಇತ್ಯಾದಿಯಾಗಿ ಅವಳೇ ಆ ಶ್ರೀಮಂತಿಕೆಯ ಬಗ್ಗೆ ಅವಲೋಕಿಸಿದರೂ ಎಲ್ಲೋ ಒಂದು ಕಡೆ ಈ ವೈರಾಗ್ಯಕ್ಕೆ ಆ ಶ್ರೀಮಂತಿಕೆಯೇ ಕಾರಣ ಎಂದು ಅರ್ಥ ಮಾಡಿಕೊಳ್ಳುವುದಿಲ್ಲ. ತನ್ನ ಬಡತನ ಕೊಟ್ಟ ಸ್ವಾತಂತ್ರ್ಯ ಅವಳ ಶ್ರೀಮಂತಿಕೆ ಅವಳಿಗೆ ಕೊಟ್ಟಿಲ್ಲವೆಂಬ ಸೂಕ್ಷ್ಮವನ್ನು ಆಕೆ ಅರ್ಥ ಮಾಡಿಕೊಳ್ಳುವುದಿಲ್ಲ. ಕೊನೆಗೆ ಶ್ರೀಮಂತಿಕೆ ಮನೆಯೊಳಗಿನ ಹೆಂಗಸು ಬಚ್ಚಲು ಮನೆಯಲ್ಲಿ ನೇಣು ಹಾಕಿಕೊಂಡು ತೀರಿಕೊಂಡಾಗಲೂ ಬಡವಳಾದ ತಾನು ಬದುಕುಳಿದಿದ್ದೇನೆಂದು ಆಕೆ ಅರ್ಥ ಮಾಡಿಕೊಳ್ಳದೆ ‘ಸುಖ ಜಾಸ್ತಿ ಆಯಿತು ಬಹುಶಃ’ ಎಂದು ಹೇಳುವಾಗ ಬಬಿತಾ ತಮ್ಮನ್ನು ತಾವು ಸುಧಾರಿಸಿಕೊಳ್ಳಲಾಗದಂತಹ  ಅನೇಕ ಹೆಂಗಸರ ಪ್ರತಿನಿಧಿಯಾಗಿ ನಿಲ್ಲುತ್ತಾಳೆ.
 
‘ನಟಿ’ ಎಂಬ ಕಥೆಯಲ್ಲಿ ‘ಪಾರ್ಸಿನ ರತ್ನ’ನ ನಗುವಿನೊಡನೆ ಬೆರೆತುಹೋದ ರತ್ನಳ ದುರಂತ ಚಿತ್ರಣವನ್ನು ಹುಡುಕಿಕೊಡುತ್ತಾರೆ. ಪಾರ್ಸು ಎಂದರೆ ‘ಯಾರನ್ನೋ ಮಾತು ಮತ್ತು ಅಭಿನಯದ ಮೂಲಕ ಕಣ್ಣಿಗೆ ಕಟ್ಟಿ ನಿಲ್ಲಿಸಿಕೊಡುವುದು’. ಪ್ರತಿ ಹಳ್ಳಿಯ ಪ್ರತಿ ದಿಣ್ಣೆಗಳ ಮೇಲೂ ಇಂತಹ ಅನೇಕ ಹೆಂಗಸರನ್ನು ಕಾಣುತ್ತೇವೆ. ಪಾರ್ಸಿನ ರತ್ನ ‘ಅವರಿವರ ಮಾತುಕತೆಗಳ’ ತನ್ನ ಮಾತು ನಟನೆ ಮೂಲಕ ಅಭಿನಯಿಸಿ ಎಲ್ಲರಿಗೂ ತೋರಿಸುವುದರಲ್ಲಿ ನಿಸ್ಸೀಮಳು. ಸತ್ಯನಾರಾಯಣ ಪೂಜೆಗೆಂದು ಸೇರಿಕೊಳ್ಳುವ ಹೆಂಗಸರ ಗುಂಪಿನ ನಡುವೆ ಪ್ರಾರಂಭವಾಗುವ ಆಕೆಯ ಪಾರ್ಸಿನ ಮೂಲಕ ನಗೆ ಉಕ್ಕುತ್ತದೆ. ಅವಳು ಹಾಗೆ ಹೀಗೆ ಅದೂ ಇದೂ, ಯಾರ್ಯೋರೋ ಗಂಡ ಹೆಂಡತಿ ನಡುವಿನ ಸರಸ ಎಲ್ಲಾ ನಡೆಯುವಾಗ, ವ್ಯಕ್ತಿಯಿಂದ ವ್ಯಕ್ತಿಗೆ ಅದು ಬದಲಾಗಿ ನೆರೆದಿದ್ದ ಹೆಂಗಸರೆಲ್ಲಾ ಇನ್ನಿಲ್ಲದಂತೆ ಖುಷಿ ಪಡುವಾಗ ‘ಪದ್ದಕ್ಕ ಮತ್ತು ಆಕೆಯ ಗಂಡನ ಬಗ್ಗೆ’ ಪಾರ್ಸು ನಡೆಯುವಾಗ ರತ್ನಳೇ ವಿಚಾರವನ್ನು ತನ್ನ ಗಂಡನೆಡೆಗೆ ತಮಾಷೆಯಾಗಿ ಹೊರಳಿಸಿಕೊಳ್ಳುತ್ತಾಳೆ. ‘ಅವ್ರ್ ಎಲ್ಲಿಗೇ ಹೊರ್ಡ್ ಲಿ. ‘ಎಲ್ಲಿಗೆ?’ ಅಂಬ ಶಬ್ದ ಮಾತ್ರ ಕೇಂಬುಕಾಗ. ಎಲ್ಲಿಗೆ ಅಂತೆಳಿ ಕೇಂಡ್ರೆ ದವ್ಡೆ ಹಲ್ಲೆಲ್ಲ ಉದುರ್ಸಿ ಕೊಡೆ. ಅಪಶಕ್ನ. ನಿನ್ನ್ ಉಪ್ಪಿಟ್ಟನ್ನ ತಲೆ ಮೇಲೆ ತಟ್ಕೊ’ ಎಂದು ಪ್ರಾರಂಭಿಸಿದವಳ ಮಾತನ್ನು ಯಾರೋ ನಿನ್ನ ಮಗಳು ಹೀಗೆ ಕೇಳದೇ ಮೇಲಕ್ಕೆ ಹೊರಟುಬಿಟ್ಟಳಲ್ಲ ಎಂದು ಕೇಳಿದಾಗ ಆಕೆ ‘ಹೌದೇ, ಎಲ್ಲಿಗೆ ಅಂತೆಳಿ ಕೇಂಬುಕಾಗ್ದಲೇ. ಮಗ, ಕೆಲಸ ಇಲ್ದೆ ಮನೆಲ್ಲೇ ಇದ್ದವ, ಒಂದು ಇಂಟ್ರೂ ಬಂತು, ಬೆಂಗ್ಳೂರಿಗೆ ಹೋಯಿದಿವ. ಹೋಯ್ಕೇ. ಹೋಗ್ದೆ ಕಳೆಯ. ಅದಂತೂ ಸಾಯೂ ಹೆಣ್ಣೇ, ಇವತ್ತು ನಾಳೆ ಅಂತವೇ ಇದಿತ್ತ್, ಸತ್ತ್ ಹೋಯ್ತ್’ ಎಂದು ಹೇಳಿ ಖಳ್ಳ ನಗುವನ್ನು ನಗುತ್ತಾಳೆ. ಅಲ್ಲೂ ಆಕೆಯ ಕಡೆಯಿಂದ ತಮಾಷೆಯಿರುತ್ತದೆ. ಎಲ್ಲಿಗೆ ಎಂದು ಹೇಳದೇಹೋದ ಗಂಡ, ಪಟ್ಟಣಕ್ಕೆ ಹೋಗಿ ಕಳೆದುಹೋದ ಮಗನಿಲ್ಲದಿದ್ದಾಗ ತಾನೇ ತನ್ನ ಮಗಳ ಹೆಣಕ್ಕೆ ಕೊಳ್ಳಿ ಇಟ್ಟದ್ದನ್ನೂ ‘ಬಿಡುನಾ ನಾನು? ಹ್ಹ’ ಎಂದು ನಕ್ಕು ಅಭಿನಯಿಸಿ ತೋರಿಸುತ್ತಾಳೆ. ಅಷ್ಟಕ್ಕೇ ಎಲ್ಲರೂ ಆರತಿ ತೆಗೆದುಕೊಳ್ಳಲು ಪೂಜಾಸ್ಥಳಕ್ಕೆ ಧಾವಿಸುತ್ತಾರೆ. ಆದರೆ ಪಾರ್ಸಿನ ರತ್ನ ಇರುವುದಿಲ್ಲ. ‘ರತ್ನ ಎಲ್ಲಿ? ರತ್ನ, ರತ್ನ’ ಎಂದು ಅನೇಕರು ಕೂಗಿ ಹುಡುಕುತ್ತಾರೆ. ಕೊನೆಗೆ ಆಕೆ ಸೀರೆ ಸರಿ ಮಾಡಿಕೊಂಡು ಬರುತ್ತೇನೆ ಎಂದುಹೋದ ಕೋಣೆಗೆ ಹುಡುಗಿಯೊಂದು ಓಡಿ ‘ರತ್ನತ್ತೇ.. ರತ್ನತ್ತೇ..’ ಎಂದು ಎಷ್ಟೇ ಕೂಗಿದರೂ ಆಕೆ ಬಾಗಿಲು ತೆರೆಯುವುದಿಲ್ಲ. ಎಲ್ಲರನ್ನೂ ನಗಿಸಿ ‘ನಟಿ’ಯಾದ ಆಕೆ ತನ್ನ ವಿಚಾರದ ಮೂಲಕವೂ ಅವರನ್ನು ಮುದಗೊಳಿಸಿವಳೇ ಕೋಣೆ ಸೇರಿ ದುಃಖದಲ್ಲಿ ಮಡುವುಗಟ್ಟಿರುತ್ತಾಳೆ. ದುರಂತದೊಂದಿಗೆ ಆಕೆ ಮುಗಿದೇಹೋದಳೇ ಎಂಬ ಪ್ರಶ್ನೆ ಕೊನೆಯದಾಗಿ ಓದುಗನಲ್ಲಿ ಉಳಿದುಬಿಡುತ್ತದೆ.
 
 
ಇಷ್ಟಲ್ಲದೇ ಕೆಲವು ಹುಡುಕಾಟಗಳನ್ನು ಒಗಟಾಗಿಯೇ ನಮ್ಮ ಮುಂದೆ ಇಡುತ್ತಾರೆ. ಅದು ನೈಜವಾದುದರಿಂದ ಸ್ವೀಕೃತವೇ ಹೌದು. ಅದು ಇರುವುದು ಹೀಗೆಯೇ, ಸ್ವೀಕರಿಸಿ ಎಂದು ಒತ್ತಿದಂತೆ ಆಗುತ್ತದೆ. ಉದಾಹರಣೆಗೆ ‘ಒಗಟು’ ಕಥೆಯಲ್ಲಿ ‘ಶುಭಾಂಟಿ’ ಮನೆಗೆ ಬಂದಾಗ ಆಕೆಗೆ ಅಚ್ಚರಿಯ ಮೇಲಚ್ಚರಿಯಾಗುತ್ತದೆ, ಯಾರು ಎಲ್ಲಿಗೆ ಬೇಕಾದರೂ ಹೋಗಿ, ತಾನು ಮನೆಯಲ್ಲಿರುತ್ತೇನೆ ಎಂಬ ಸ್ವಭಾವದ ಎಲ್ಲಿಗೂ ಹೊರಡದ ಶುಭಾಂಟಿ ‘ನಾನು ನನ್ನ ಮದುವೆಗೆ ಬಂದದ್ದೇ ಹೆಚ್ಚು’ ಎಂದು ಹೇಳುವಾಗ ಆಕೆಯ ಸ್ಪಷ್ಟ ಚಿತ್ರಣ ಸಿಗುತ್ತದೆಯಾದರೂ ಈಗ ಮನೆಗೆ ಬಂದಾಗ ಗೊಂದಲ ಮೂಡುತ್ತದೆ. ‘ಜಗಳವೇನೋ’ ಎಂದು ವಿಚಾರಿಸಿದರೆ ‘ಜಗಳವಲ್ಲ’. ಬಂದವಳೇ ಸ್ನಾನ ಮುಗಿಸಿ ಶುಭ್ರ ಉಡುಗೆ ತೊಟ್ಟು, ಮೈಗೆ ಸೆಂಟು ಪೌಡರ್ ಹಚ್ಚಿಕೊಂಡು ಹೊರಗೆ ಹೋದವಳೇ ಸಂಜೆ ಕತ್ತಲಾದ ಮೇಲೆ ಬಂದು ತಣ್ಣೀರು ಸ್ನಾನ ಮಾಡಿ, ಬಟ್ಟೆಯನ್ನು ತೊಳೆದು ಒಣಗಲಿಟ್ಟು ಊಟ ಮಾಡಿ ತಾನಿನ್ನು ಹೊರಡುತ್ತೇನೆ ಎನ್ನುವಾಗ ‘ಎಲ್ಲಿಗೆ ಹೋಗಿದ್ದಳು?’ ಎಂಬ ಗೊಂದಲ ಮೂಡುವ ಜೊತೆಗೆ ಎಷ್ಟೇ ಹಿಂಸೆ ಮಾಡಿದರೂ ಉಳಿದುಕೊಳ್ಳದ ಆಕೆಯ ನಡವಳಿಕೆ ಆಕೆ ಬಂದಿದ್ದಾರೂ ಎಂತಕ್ಕೆ ಎಂಬ ಕುತೂಹಲ ಹುಟ್ಟಿಸಿದರೂ ಕೊನೆಗೆ ಉತ್ತರ ದೊರಕುವುದಿಲ್ಲ. ಅದು ಇನ್ನಿಲ್ಲದ ಒಗಟಾಗಿಯೇ ಉಳಿದುಕೊಳ್ಳುತ್ತದೆ. ಇದೇ ಲೇಖಕಿಯ ಹುಡುಕಾಟವಿರಬಹುದೇ ಎಂದು ಕೇಳಬೇಕೆನಿಸುತ್ತದೆ. ಇದೇ ತರಹನಾದ ಒಗಟಿನ ಭಾವನೆಯೊಂದು ‘ತೆರೆಯದ ಪುಟಗಳು’ ಎಂಬ ಕಥೆಯಲ್ಲಿ ದೋಸೆ ತಿರುವಿದಂತೆ ಘಟನೆಗಳನ್ನು ಎಷ್ಟೇ ತಿರುವಿದರೂ ಸಿಗಲೊಲ್ಲದು. ಕೆಲವೊಂದು ವಿಚಾರಗಳನ್ನು ಯಾರೊಂದಿಗೂ ಹೇಳಿಕೊಳ್ಳಲಾಗದು ಎಂಬ ಭಾವ ಹುಟ್ಟಿಸಿ ಆ ಕಥೆ ಕೊನೆಗೊಳ್ಳುತ್ತದೆ. ‘ಪ್ರಶ್ನೆ’ ಎಂಬ ಕಥೆಯಲ್ಲೂ ಒಬ್ಬ ಒಳ್ಳೆಯ, ಶ್ರೇಷ್ಟ ಭಾಷಣಕಾರನ ಮಗ್ಗಲು ಬದಲಿಸುವ ಗುಣ ಹುಡುಕಿ ಕೊನೆಗೆ ತನ್ನ ಗೆಳತಿ ‘ಅನು’ ಭಾಷಣಕಾರನೊಡನೆ ಕಾರಿನಲ್ಲಿ ತೆರಳಿದಾಗ, ಹೋದದ್ದು ಮನೆಗೋ, ರೂಮಿಗೋ ಎಲ್ಲಿಗೆ? ತನಗೆ ಬಿಡಿಸಿ ಕೇಳುವ ಧೈರ್ಯವಾಗಲಿಲ್ಲವೆಂದು ಭುವಿ ಹೇಳುವಾಗ ಅಂತ್ಯ ಮಾತ್ರ ಮತ್ತೆ ಪ್ರಶ್ನೆಯಾಗಿ, ಒಗಟಾಗಿ ಉಳಿದುಬಿಡುತ್ತದೆ.
 
ಇಷ್ಟಲ್ಲದೇ ‘ಮಾತು ಸೋತ ಕ್ಷಣ’ ಕಥೆಯಲ್ಲಿ ವೃದ್ಧನೋರ್ವನ ‘ಭಾರಗೊಂಡ’ ಮೌನದ ಚಿತ್ರಣವಿದೆ. ಮನ ಮಿಡಿಯುವಂಥ ಚಿತ್ರಣದ ಜೊತೆಗೆ ಮಾತನಾಡದ ವೃದ್ಧನೋರ್ವ ಮೌನದ ಮೂಲಕವೇ ತನ್ನ ಭಾವನೆಗಳನ್ನು ಹೊರಗೆ ಹಾಕುವ ಮನ ಕಲಕುವ ಚಿತ್ರಣವಿದೆ. ಆತ ಮಾತನಾಡಬಹುದು, ಮಾತನಾಡಬಹುದು ಎಂಬುದು ಕಥೆಯ ಕುತೂಹಲವಾದರೂ ತುಟಿ ಬಿಚ್ಚಿದರೂ ಮಾತು ಹೊರಡಿಸದ ಆತ. ಆ ಮೌನ ವ್ಯಕ್ತಿತ್ವದ ಹುಡುಕಾಟದಲ್ಲಿ ಕಥೆ ಮಗ್ನವಾಗುವುದರಿಂದ ಆ ಸಾವಿನ ಸೂತಕದ ಮನೆಗೂ ಆ ವೃದ್ಧನಿಗೂ ಇರುವ ಸಂಬಂಧವೇನು ಎಂಬುದು ಈ ಕಥೆಯಲ್ಲಿ ಸ್ಪಷ್ಟವಾಗುವುದಿಲ್ಲ. ‘ಅವರವರ ಭಾವ’ಕ್ಕೆ ಕಥೆಯೂ ಅನೇಕ ವ್ಯಕ್ತಿತ್ವ ಹುಡುಕಾಟಗಳಿಗೆ ಸಾಕ್ಷಿಯಾಗುತ್ತದೆ. ಬಾಡಿಗೆ ಮನೆಗೆ ‘ದೇವರ ಕೋಣೆ’ ಬೇಕೇ ಬೇಡವೆ ಎಂಬ ವಿಚಾರದ ಮೂಲಕ ಪ್ರಾರಂಭವಾಗುವ ಕಥೆಯಲ್ಲಿ ದೇವರ ವಿಚಾರವಾಗಿ ತಿರುಗುಮುರುಗು ತಿರುಗಿಕೊಳ್ಳುವ ವ್ಯಕ್ತಿತ್ವಗಳ ಪರಿಚಯವಿದೆ. ‘ಮನೆಯವರೆಗಿನ ಹಾದಿ’ ಕಥೆಯಲ್ಲಿ ಒಂದು ಉದ್ಧಾರದ ಹಿಂದೆ ಮನುಷ್ಯನ ಸ್ವಾರ್ಥದ ಪರಿಚಯದ ಜೊತೆಗೆ, ಹೊಸದಾಗಿ ಬಂದ ರಸ್ತೆಯೊಂದಿಗಿನ ಅನುಕೂಲದ ಜೊತೆಗೆ ದುರಂತದ ಸಣ್ಣ ಚಿತ್ರಣದೊಂದಿಗೆ ಕಥೆ ಅಂತ್ಯಗೊಳ್ಳುತ್ತದೆ.
 
ಕೊನೆಯದಾಗಿ, ಈ ಕಥಾಗುಚ್ಚಕ್ಕೆ ‘ಕ್ರೌಂಚ ಪಕ್ಷಿಗಳು’ ಎಂಬ ಹೆಸರು ಬಂದಿದ್ದಾರೂ ಹೇಗೆ? ಒಂದು ಕ್ರೌಂಚಪಕ್ಷಿ ಸತ್ತು ಮತ್ತೊಂದು ಕ್ರೌಂಚಪಕ್ಷಿ ಬದುಕಿ ನೋವಿನಲ್ಲಿ ಒದ್ದಾಡಿದ್ದೇ ವಾಲ್ಮೀಕಿ ಮಹರ್ಷಿಗೆ ಅನುಕಂಪ ಹುಟ್ಟಿ ರಾಮಾಯಣ ಬರೆಯಲು ಪ್ರೇರೇಪಣೆಯಾದದ್ದು. ರಾಮಾಯಣದ ಕ್ರೌಂಚ ಪಕ್ಷಿಗಳಿಗೂ ಈ ಕಥೆಗಳೊಳಗಿನ ಭಾವನೆಗಳಿಗೂ ಸಂಬಂಧವೆಂಥದ್ದು ಎಂದು ಯೋಚಿಸಿದಾಗ – ಮೊದಲನೆಯದಾಗಿ ‘ಕ್ರೌಂಚ ಪಕ್ಷಿಗಳು’ ಎಂಬುದು ಈ ಕಥಾಸಂಕಲನದ ಕೊನೆಯ ಕಥೆಯ ಶೀರ್ಷಿಕೆಯೂ ಹೌದು. ಈ ಕಥೆಯಲ್ಲಿ ಕ್ರೌಂಚಪಕ್ಷಿಗಳು ಯಾರ್ಯಾರು? ಇಲ್ಲಿ ಸ್ವಾತಂತ್ರ್ಯ ನಂತರದ ದೇಶ ವಿಭಜನೆಯ ನೆಪದಲ್ಲಿ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯದ ಚಿತ್ರಣವಿದೆ. ಸ್ವಾತಂತ್ರ್ಯ ಬಂದ ಖುಷಿಯ ಜೊತೆಗೆ ಈ ದುಃಖಗಳನ್ನು ಮಿಶ್ರಣಗೊಳಿಸುವ ಈ ವಿರುದ್ಧಭಾವದ ತಂತ್ರಗಾರಿಕೆಯೇ ಎಲ್ಲಾ ಕಥೆಗಳ ಕೇಂದ್ರ. ಉತ್ತರದೇಶದಲ್ಲಿ ಅನ್ಯಕೋಮಿನ ಜನ ಅಶ್ನಾರ್ಣಭಟ್ಟರ ಹೆಂಡತಿ ಲಕ್ಷ್ಮಮ್ಮನನ್ನು ಹೊತ್ತುಕೊಂಡು ಹೋದ ನಂತರ, ಭಟ್ಟರು ದಕ್ಷಿಣದೇಶದಲ್ಲಿರುವ ತಮ್ಮ ಊರಿಗೆ ಬಂದುಬಿಡುತ್ತಾರೆ. ಕಥೆಯ ಪ್ರಾರಂಭದಲ್ಲಿ ಅಶ್ನಾರ್ಣಭಟ್ಟರು ತಮ್ಮ ಗೋಳು ತೋಡಿಕೊಳ್ಳುವಾಗ ಲಕ್ಷ್ಮಮ್ಮ ಸತ್ತ ಕ್ರೌಂಚ ಪಕ್ಷಿಗೂ, ಅಶ್ನಾರ್ಣಭಟ್ಟರು ಬದುಕಿ ಒದ್ದಾಡುತ್ತಿರುವ ಪಕ್ಷಿಗೂ ಹೋಲಿಕೆಯಾದಂತೆ ಕಾಣುತ್ತಾರೆ. ಅರುಂಧತಿ(ಕಥೆಯ ಒಂದು ಪಾತ್ರ) ಎಂಬುವಳು ತನ್ನ ಗೆಳತಿಯೊಂದಿಗೆ ಸ್ವಾತಂತ್ರ್ಯ ನಂತರ ವಲಸೆ ಜನರ ಪುನರ್ವಸತಿಗಾಗಿ ದುಡಿದ ವಿಶಾಖಾ ಬೆನ್ ಎಂಬುವವರನ್ನು ಸಂದರ್ಶಿಸಲು ಅವರ ಮನೆಗೆ ಹೋದಾಗ ಅಲ್ಲಿ ಲಕ್ಷ್ಮಮ್ಮ ಸಿಗುತ್ತಾಳೆ. ಅದೆಷ್ಟೋ ವರ್ಷಗಳು ಗಂಡನಿಲ್ಲದೆ ಜೀವನ ಸಾಗಿಸಿದ ಲಕ್ಷ್ಮಮ್ಮಳಿಗೆ, ಅಶ್ನಾರ್ಣಭಟ್ಟರ ‘ವಿರಹದ ಬೇಗೆ’ಯನ್ನು, ನೋವನ್ನು ವಿವರಿಸಲು ಅರುಂಧತಿ ಮುಂದಾದಾಗ ಲಕ್ಷ್ಮಮ್ಮ ಅಶ್ನಾರ್ಣಭಟ್ಟರ ಮತ್ತೊಂದು ಮುಖವನ್ನು ತೆರೆದಿಡುತ್ತಾಳೆ.
 
ಆತ ತನ್ನನ್ನು ಗುರುತಿಸಲು ಬಂದಿದ್ದ, ಒಂದು ವರ್ಷವೆಲ್ಲಾ ಅನ್ಯಸ್ಥಳದಲ್ಲಿದ್ದವಳನ್ನು ಆತ ಕರೆದುಕೊಂಡು ಹೋಗಲಿಲ್ಲ ಎಂದು ಹೇಳುತ್ತಾಳೆ. ಸ್ವಾತಂತ್ರ್ಯೋತ್ತರ ಗಲಭೆಯ ಮೂಲಕ ಪ್ರಾರಂಭವಾಗಿ ತಾನು ಪಟ್ಟಪಾಡನ್ನು ವಿವರಿಸುತ್ತಾಳೆ. ಕಣ್ಣೀರಾಗುತ್ತಾಳೆ, ಈ ನೆಪದಲ್ಲಿ ಕವಯತ್ರಿಯವರು ಅಂದಿನ ಮಹಿಳೆಯರ ಶೋಚನೀಯ ಸ್ಥಿತಿಯನ್ನು, ವರ್ಷವೆಲ್ಲಾ ಅನ್ಯಜಾಗಗಳಲ್ಲಿದ್ದು ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯರಾಗಿ ದಿಕ್ಕಾಪಾಲಾದ ಮಹಿಳೆಯರ ಸಂದಿಗ್ಧತೆಯನ್ನು ವಿವರಿಸುತ್ತಾರೆ. ಈಗ, ಒಂದೇ ಸಮನೆ, ಲಕ್ಷ್ಮಮ್ಮ ಸತ್ತುಹೋದ ಕ್ರೌಂಚಪಕ್ಷಿಯ ಬದಲಾಗಿ ಕೆಳಕ್ಕೆ ಬಿದ್ದು ಒದ್ದಾಡಿದ ಪಕ್ಷಿಯಂತೆ ಕಾಣುತ್ತಾಳೆ. ಅಶ್ನಾರ್ಣಭಟ್ಟರು ಅಪರಾಧಿ ಸ್ಥಾನದಲ್ಲಿ ನಿಂತಂತೆ ಕಾಣುತ್ತಾರೆ. ಎಲ್ಲಾ ಕಥೆಗಳಲ್ಲೂ ಈ ವಿರುದ್ಧಭಾವದ ಶ್ರೇಷ್ಟ ತಂತ್ರಗಾರಿಕೆ ಇರುವುದರಿಂದಲೋ ಏನೋ ಒಟ್ಟಾರೆಯಾಗಿ ಈ ಕಥಾಸಂಕಲನಕ್ಕೆ ‘ಕ್ರೌಂಚ ಪಕ್ಷಿಗಳು’ ಎಂಬ ಹೆಸರನ್ನು ಸೂಚಿಸಿಕೊಂಡಿರಬಹುದು. ಇದೇ ಕಥೆಯಲ್ಲಿ ‘ಇಷ್ಟಕ್ಕೂ ಲಕ್ಷ್ಮಮ್ಮ ಹೇಳಿದ್ದು ಸತ್ಯ ಅಂತ ನಂಬುವುದು ಹೇಗೆ?’ ಎಂದು ಹೇಳಿಸುವುದರ ಮೂಲಕ ಒಂದು ಗೊಂದಲವನ್ನು, ಮತ್ತೆ ಒಗಟನ್ನು ತಂದಿಡುತ್ತಿದ್ದಾರೆಂದೆನಿಸುವಷ್ಟರಲ್ಲಿಯೇ ಕಥೆಯ ಸಾಕ್ಷಾತ್ಕಾರಕ್ಕೆ, ನೈಜತೆಗೆ ಅದು ಬೇಕಾಗಿತ್ತು, ಜೊತೆಗೆ ತನ್ಮೂಲಕ ಈ ವಿಚಾರದ ಅಪ್ರಸ್ತುತತೆಯನ್ನೂ ಬಿಂಬಿಸುತ್ತಿದ್ದಾರೆ ಎನಿಸುತ್ತದೆ. 'ಸಮೋಸಾ ಅಷ್ಟೇ ಅಲ್ಲ, ಮೋಸ ಸಾ ಗೊತ್ತು' ಎಂದು ಹಿಂದೆ ಅಶ್ನಾರ್ಣಭಟ್ಟರು ಹೇಳಿದ್ದ ಮಾತನ್ನು ಮತ್ತೆ ತೇಲಿಸಿ, ಅಪರಾಧವನ್ನು ಎರಡನೇ ಮದುವೆಯಾಗಿದ್ದ ಅಶ್ನಾರ್ಣಭಟ್ಟರ ಕಡೆ ಹೆಚ್ಚು ವಾಲಿಸುತ್ತಾರೆ.
 

ಒಟ್ಟಿನಲ್ಲಿ, ಸರಳ ನಿರೂಪಣೆಯೊಂದಿಗೆ ಸಂಕೀರ್ಣಭಾವಗಳನ್ನು ನಮ್ಮ ಮುಂದೆ ತೆರೆದಿಡುವ ಕಥಾಸಂಕಲನವೇ ‘ಕ್ರೌಂಚ ಪಕ್ಷಿಗಳು’. ಕೇವಲ ಮೇಲ್ನೋಟದಲ್ಲಷ್ಟೇ ಗ್ರಹಿಸಿದರೆ, ಪಂಚತಂತ್ರ ಕಥೆಗಳಂತೆ ಓದಿದರೆ ಅನೇಕ ಕಡೆ ಗೊಂದಲಗಳು ಎದುರಾಗಬಹುದು. ಮೆಲುನಗೆಯನ್ನೇ ಗೆಲ್ಲಿಸುವ ‘ದಾಳಿ’ ಕಥೆಯಲ್ಲಿ ಒಬ್ಬ ಗಂಡಸು ಅಷ್ಟು ಕ್ರೂರವಾಗಿರಲು ಸಾಧ್ಯವೇ ಎನಿಸಬಹುದು, ‘ಒಗಟು’ ಕಥೆ ಬರಿ ಅರ್ಧವಷ್ಟೇ ಮುದ್ರಣವಾಗಿದೆಯಲ್ಲವೆಂದೆನಿಸಿ, ‘ಮಾತು ಸೋತ ಕ್ಷಣ’ ಕಥೆಯಲ್ಲಿ ಆ ವೃದ್ಧನಾದರೂ ಯಾರು ಎಂಬ ಸಂಶಯ ಗಾಢವಾಗಿ ಬರಬಹುದು. ಪ್ರಶ್ನೆ ಕಥೆ ಬರಿ ಪ್ರಶ್ನೆ ಹುಟ್ಟು ಹಾಕುವುದರಲ್ಲಷ್ಟೇ ಸಫಲವಾಯಿತೇನೋ ಎಂದೆನಿಸಬಹುದು. ‘ತೆರೆಯದ ಪುಟಗಳು’ ಕಥೆಯಲ್ಲಿ ‘ರಾಜತ್ತೆ’ಯ ವಿಚಾರ ಕೊನೆಯ ಸಾಲಿನವರೆವಿಗೂ ಸ್ಪಷ್ಟವಾಗದೇ ಕಥೆಯ ಉದ್ದೇಶವೇ ಗೊಂದಲವಾಗಿಬಿಡಬಹುದು. ಆದ್ದರಿಂದ, ಈ ಕಥೆಗಳು ಒಳಗ್ರಾಹಿಯಾಗಿವೆ, ಅನುಭವಿಸಿ ಓದಿದಾಗ ಹೊಸ ಲೋಕವೇ ತೆರೆದು ನಿಲ್ಲುತ್ತದೆ. ಸ್ತ್ರೀವಾದಿ ಲೇಖಕಿಯಿಂದ ಮೂಡಿರುವ ಈ ಕಥೆಗಳಲ್ಲಿ ಸ್ತ್ರೀಪರ ಚಿಂತನೆಗಳೇ ಹೆಚ್ಚಾಗಿದ್ದರೂ ಹೆಣ್ಣಿನಷ್ಟೇ ಗಂಡು ಕೂಡ ಕಥೆಗಳಲ್ಲಿ ಭಾಗಿಯಾಗುತ್ತಾನೆ.

-ಮೋಹನ್ ವಿ. ಕೊಳ್ಳೇಗಾಲ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
ಈಶ್ವರ ಭಟ್

ನಾನೂ ಓದಿದ ಪುಸ್ತಕ. ತುಂಬಾ ಉತ್ತಮವಾದ ಪರಿಚಯ ಮೋಹನರೇ. 

ramachandra shetty
ramachandra shetty
11 years ago

ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಬರಹಗಾರಲ್ಲೊಬ್ಬರು ವೈದೇಹಿಯವರು.. ಹಾಗೆ ನೀವು "ಕ್ರೌ೦ಚ ಪಕ್ಷಿಗಳು" ಕಥಾಸ೦ಕಲನ್ನು ವಿಮರ್ಶಿಸಿ ಬರೆದ  ರೀತಿ ತು೦ಬಾ ಖುಷಿಕೊಟ್ಟಿತು..ನಾನು ಇದನ್ನು ಕೊ೦ಡು ಓದುವೆ..ಧನ್ಯವಾದಗಳು ಮೋಹನಣ್ಣ

Mohan V Kollegal
Mohan V Kollegal
11 years ago

ಓದಿದವರಿಗೆ, ಇಷ್ಟಪಟ್ಟವರಿಗೆ, ಪ್ರತಿಕ್ರಿಯಿಸಿದವರಿಗೆ ಹಾಗೂ ಹಂಚಿಕೊಂಡ ಪಂಜು ಬಳಗಕ್ಕೆ ವಂದನೆಗಳು. ಎಲ್ಲರೂ ಓದಿ ಗ್ರಹಿಸಿಕೊಳ್ಳಬಹುದಾದಂತಹ ಪುಸ್ತಕವಿದು. ನಾನಿಲ್ಲಿ ವಸ್ತುನಿಷ್ಠ ವಿಮರ್ಶೆಗೆ ಪ್ರಯತ್ನಿಸಿದ್ದೇನೆ. ಕೆಲವು ಕಥೆಗಳನ್ನು ಓದುವಾಗ ಇನ್ನಿಲ್ಲದ ಒಗಟು ಅಥವಾ ಪ್ರಶ್ನೆಗಳು ಎದುರಾಗುತ್ತವೆ. ಅವುಗಳನ್ನು ಪ್ರಶ್ನೆ ಮಾಡಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ಉತ್ತರವನ್ನು ಕಂಡುಕೊಳ್ಳಲೂ ಪ್ರಯತ್ನಿಸಿದ್ದೇನೆ. ಮತ್ತೊಮ್ಮೆ ಮಗದೊಮ್ಮೆ ವಂದನೆಗಳು… 🙂

Basavaraju
Basavaraju
11 years ago

ನನಗೆ ವೈಯಕ್ತಿಕವಾಗಿ ತುಂಬಾ ಖುಷಿ ಕೊಟ್ಟ ವಿಮರ್ಶೆ. ಒಂದು ಪುಸ್ತಕವನ್ನು ಈ ರೀತಿಯೆಲ್ಲಾ ಯೋಚಿಸಬಹುದೇ ಎಂಬ ಅಚ್ಚರಿಯಾಗುತ್ತದೆ. ಈ ಪುಸ್ತಕವನ್ನು ನಾನು ಓದಿದ್ದೆ. ನಿಮಗೆ ಕಾಡಿದ್ದ ಪ್ರಶ್ನೆಗಳೆಲ್ಲ ನನಗೂ ಕಾಡಿ ಇಲ್ಲಿ ಉತ್ತರ ದೊರಕಿದಂತನಿಸುತ್ತಿದೆ. ಮುಲಾಜಿಲ್ಲದೆ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ವಂದನೆ. ಇದನ್ನು ಕಾಪಿ ಮಾಡಿಟ್ಟುಕೊಳ್ಳುತ್ತೇನೆ ನಿಮ್ಮನುಮತಿಯೊಂದಿಗೆ 

Raghunandan K
11 years ago

ಪುಸ್ತಕ ಓದುವ ಕುತೂಹಲ ಮೂಡಿಸುವಷ್ಟು ಚಂದನೆಯ ಹಾಗೂ ಆಸಕ್ತಿದಾಯಕ ವಿಮರ್ಶೆ… 
ಇಷ್ಟವಾಯಿತು…

M.S.Krishna Murthy
M.S.Krishna Murthy
11 years ago

ವೈದೇಹಿ ಅವರ ಕಥಾ ಸಂಕಲನದ ತುಂಬಾ ಚೆನ್ನಾದ ಪರಿಚಯ, ವಿಮರ್ಷೆ ಮಾಡಿಕೊಟ್ಟಿದ್ದೀರಿ ಮೋಹನ್. ಅಬಿನಂದನೆಗಳು. ಸಬಿತಾ ಎಂಬ ಕತೆಯ ವಿಮರ್ಷೆ ಮಾಡಿಕೊಡುವಾಗ ಸಬಿತಾ ಮತ್ತು ಬಬಿತಾ ಎಂಬ ಎರಡು ಪಾತ್ರಗಳನ್ನು ಉಲ್ಲೇಕಿಸಿದ್ದೀರಿ. ಎರಡೂ ಬೇರೆ ಬೇರೆ ಪಾತ್ರಗಳೆ ?

Mohan V Kollegal
Mohan V Kollegal
11 years ago

ಇಲ್ಲ ಸರ್… ಎರಡೂ ಒಂದೇ ಪಾತ್ರ. ಸಬಿತಾ ಸರಿ. ಬಬಿತಾ ಯಾಕೆ ನಡುವೆ ಬಂದಳೆಂಬುದೇ ಆಶ್ಚರ್ಯ. 🙂

parthasarathy N
parthasarathy N
11 years ago

ಹೆಚ್ಚು ಕಡಿಮೆ 
ವೈದೇಹಿಯವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ಕ್ರೌಂಚ ಪಕ್ಷಿಗಳು’ 
ಪುಸ್ತಕವನ್ನು ಓದಿದ ಅನುಭವವೆ ಆಯಿತು , ಉತ್ತಮ ಪರಿಚಯ

Santhoshkumar LM
Santhoshkumar LM
11 years ago

ಕೊಂಚವೂ ಹೆಚ್ಚು ಕಮ್ಮಿಯಿಲ್ಲದೆ ಬರೆದ ವಿಮರ್ಶೆ. ಪುಸ್ತಕವನ್ನೇ ಓದಿದ ಅನುಭವವಾಯಿತು.  "ದಾಳಿ"ಯಂತೂ ಕತೆಯನ್ನೇ ಓದಿದಂತೆ ಅನ್ನಿಸಿಬಿಟ್ಟಿತು. ಚೆನ್ನಾಗಿದೆ.

Venkatesh
Venkatesh
11 years ago

Very nice mohan sir 🙂

ಸುಮತಿ ದೀಪ ಹೆಗ್ಡೆ

ಆ ಪುಸ್ತಕವನ್ನ ಓದಲೇ ಬೇಕು ಅನ್ನೋ ಹಾಗೆ ಇದೆ ನಿಮ್ಮ ವಿಮರ್ಶೆ…

ದಿವ್ಯ ಆಂಜನಪ್ಪ

ಉತ್ತಮ ವಿಮರ್ಶೆ, ಧನ್ಯವಾದಗಳು ಸರ್

12
0
Would love your thoughts, please comment.x
()
x