ಸರಣಿ ಬರಹ

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ-4


ಬೆಳಕಿನ ಮರಗಳ ರಹಸ್ಯ

    “ಲಗೋರಿಬಾಬಾ ಫ್ರೀ ಇದೀರಾ ಈ ವಾರ? ಸಾಧ್ಯವಾದ್ರೆ ನನ್ನ ಜೊತೆ ಶ್ರೀಲಂಕಾಗೆ ಬನ್ನಿ. ಒಂದು ರಹಸ್ಯದ ಬಗ್ಗೆ ಅಧ್ಯಯನ ಮಾಡಲು ಡಾ.ಕೋವೂರ್ ಜೊತೆ ಹೋಗೋಣ.” ಫ್ಲಾಪಿಬಾಯ್ ಕೇಳಿದ ಲಗೋರಿಬಾಬಾನಿಗೆ.

    “ಏನು ರಹಸ್ಯ? ಡಾ. ಕೋವೂರ್ ಅಂದ್ರೆ ಯಾರು? ಸಿಲೋನ್‍ಗೆ ಅವಶ್ಯವಾಗಿ ಹೋಗೋಣ. ನಾನು ಎಲ್ಲಿಗಾದರೂ ಸೈ” ಲಗೋರಿಬಾಬಾ ಪ್ರತ್ಯುತ್ತರಿಸಿದ.

    “ಶ್ರೀಲಂಕಾದ ಉತ್ತರ ಭಾಗದಲ್ಲಿ ಮನ್‍ಕುಳಮ್ ಅಂತ ಊರಿದೆ. ಆ ಊರಿನ ಕಾಡಿನ ಬೇಟೆಗೆ ಬೇರೆ ಬೇರೆ ಕಡೆಯಿಂದ ಜನ ಬರ್ತಾರೆ. ಅಲ್ಲಿ ಓಳುಮಾಡು ಅಂತ ಒಂದು ಕ್ಷೇತ್ರವಿದೆ. ಅಲ್ಲಿನ ಎರಡು ಮರಗಳಲ್ಲಿ ‘ಕಾಟೇರಿ’ ಅನ್ನೋ ಎರಡು ದಂಪತಿ ದೆವ್ವಗಳು ವಾಸಿಸ್ತಾ ಇವೆಯಂತೆ. ರಾತ್ರಿ ಟೈಮಲ್ಲಿ ಆ ಮರಗಳಿಂದ ಉಜ್ವಲ ಬೆಳಕು ಬರತ್ತಂತೆ. ಇದನ್ನ ಬಹಳಷ್ಟು ಜನರು ನೋಡಿದ್ದಾರಂತೆ. ಇತ್ತೀಚೆಗೆ ಆ ಮರಗಳ ಅಕ್ಕಪಕ್ಕದ ಮರಗಳೂ ರಾತ್ರಿ ಬೆಳಕು ಸೂಸ್ತಾ ಇವೆಯಂತ ಸುದ್ಧಿ ಬಂದಿದೆ. ಅದನ್ನ ನೋಡೋಕೆ ಅಂತಾ ಹೋಗ್ತಾ ಇದೀವಿ. ಇನ್ನು ಡಾ. ಅಬ್ರಾಹಾಂ ಡಿ. ಕೋವೂರ್ ವೃತ್ತಿಯಿಂದ ಕಾಲೇಜು ಪ್ರಿನ್ಸಿಪಾಲ್. ಮೇಲಾಗಿ ಅತೀಂದ್ರಿಯ, ಅತಿ ಮಾನಸ ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನು ಹೊಂದಿದವರ ಬಗ್ಗೆ ಅನೇಕ ಸಂಶೋಧನೆ ಮಾಡಿದಂತಹ ಮಹಾನ್ ಸಂಶೋಧಕರು.” ಎಂದ ಫ್ಲಾಪಿಬಾಯ್.

    “ಓಹ್ ವಿಚಿತ್ರವಾಗಿದೆ. ನಡಿ ನೋಡೋಣ ನಾವೂ ಕಾಟೇರಿ ದಂಪತಿಗಳನ್ನ! ನನಗೂ ಈ ಜನರ ಜೊತೆ ಏಗಿ ಏಗಿ ಸಾಕಾಗಿದೆ. ದೆವ್ವಗಳ ಜೊತೆ ಕಷ್ಟಸುಖ ಮಾತಾಡೋಕೆ ಮಜಾ ಬರಬಹುದು” ಎಂದು ಎದ್ದು ಹೊರಡಲನುವಾದ ಲಗೋರಿಬಾಬಾ.

    “ಈ ಬಗ್ಗೆ ಕೆಲವು ಮಾಹಿತಿ ಕಲೆ ಹಾಕಿದ್ದೇನೆ ಬಾಬಾ. ಆ ಪ್ರಕಾರ ಓಳುಮಾಡು ಅತ್ಯಂತ ಅಪಾಯಕಾರಿ ಕ್ಷೇತ್ರ. ಇಲ್ಲಿ ಬೇಟೆಯಾಡಲು ಹೋದ ಅನೇಕ ಶಿಕಾರಿಗಳು ಹೆಣವಾಗಿದ್ದಾರೆ. ಸ್ಥಳಿಯರು ಯಾರಿಗೂ ಆ ಕಾಡಿನೊಳಗೆ ಹೋಗಲು ಕೊಡುವುದಿಲ್ಲ. ಅವರ ಕಣ್ತಪ್ಪಿಸಿ ಹೋದಂತ ಅನೇಕರು ಜೀವಂತ ವಾಪಸ್ಸಾಗಿಲ್ಲ. ಆ ಕಾಡಿನಲ್ಲಿಯೇ ಇದೆ ಕಗ್ಗತ್ತಲೆಯ ರಾತ್ರಿಯಲ್ಲಿಯೂ ಎಲ್.ಇ.ಡಿ. ಬಲ್ಬಿನಂತೆ ಉಜ್ವಲ ಬೆಳಕು ನೀಡುವ ಪಲು ಮರಗಳು (ಮಿಮಸಾಪ್ಸ್ ಹೆಕ್ಸಾಂಡ್ರಾ)” ಎನ್ನುತ್ತಾ ತಾನೂ ರೆಡಿಯಾದ ಫ್ಲಾಪಿಬಾಯ್.

ಓಳುಮಾಡು ರಹಸ್ಯ ಕೇಳಿ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಇಬ್ಬರ ಆಸಕ್ತಿಯೂ ಕೆರಳಿತ್ತು. ಪ್ರಕೃತಿಯ ಮಡಿಲಲ್ಲಿಯ ಆ ರಹಸ್ಯದ ಬಗ್ಗೆ ನೋಡಲೇಬೇಕೆಂಬ ದೃಢ ನಿರ್ಧಾರಕ್ಕೆ ಬಂದರು. ರಾತ್ರಿ ಹೊತ್ತು ಆ ಕ್ಷೇತ್ರಕ್ಕೆ ಹೋಗಿ ಬೆಳಕು ಚೆಲ್ಲುವ ಮರಗಳನ್ನು ನೋಡೇ ಬಿಡುವುದಾಗಿ ಸಾರಿದರು. ಅವರ ಜೊತೆಗೆ ಮಹಾನ್ ಗಟ್ಟಿಗ ಡಾ.ಕೋವೂರ್ ಕೂಡಾ ಸಾಥ್ ನೀಡಿದರು.

    ರಾತ್ರಿ ಸುಮಾರು 9 ಗಂಟೆಯ ಸಮಯ. ಇವರು ಇಳಿದುಕೊಂಡಿದ್ದ ಮನ್‍ಕುಳಮ್ ರೆಸ್ಟ್ ಹೌಸ್‍ನಲ್ಲಿ ಡಾ. ಕೋವೂರ್, ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ರಾತ್ರಿಯ ಊಟ ಮುಗಿಸಿದರು. ಬಂದೂಕುಗಳು, ಟಾರ್ಚುಗಳು, ಫೀಲ್ಡ್ ಗ್ಲಾಸುಗಳು, ಹಗ್ಗಗಳು ಎಲ್ಲವನ್ನೂ ಇಟ್ಟುಕೊಂಡು ಕಾರಿನಲ್ಲಿ ಹೊರಟರು. ಸ್ವಲ್ಪ ಮುಂದೆ ಹೋಗುತ್ತಲೇ ಅಲ್ಲಿನ ಮಾರ್ಗದರ್ಶಿ ಚಿನ್ನಯ್ಯ ಇವರ ಜೊತೆಯಾದ. ಭಾರತದಿಂದ ಬಂದಿದ್ದ ಫ್ಲಾಪಿಬಾಯ್ ಮತ್ತು ಲಗೋರಿಬಾಬಾರವರ ರಕ್ಷಣೆಗೆ ಭಾರತದ ಸರ್ಕಾರದ ಮನವಿಯ ಮೇರೆಗೆ ಶ್ರೀಲಂಕಾ ಸರ್ಕಾರ ಸ್ಥಳಿಯನಾದ ಚಿನ್ನಯ್ಯನನ್ನು ಇವರ ಜೊತೆ ಹೋಗಲು ಕಳುಹಿಸಿತ್ತು. ಮಾರ್ಗದರ್ಶಿ ಚಿನ್ನಯ್ಯ ಒತ್ತಾಯಪೂರ್ವಕವಾಗಿ ಮಂತ್ರಹಾಕಿದ ಅರಿಶಿನ ಬೇರುಗಳನ್ನು ಇವರ ಕೈಗೆ ಕಟ್ಟಿದ. ಅವು ಕಾಟ್ಟೇರಿ ಭೂತಗಳಿಂದ ರಕ್ಷಿಸುತ್ತವೆ ಎನ್ನುವುದು ಅವನ ನಂಬಿಕೆಯಾಗಿತ್ತು. ಆ ಭಾಗದ ಅನೇಕ ಮಂದಿ ಇಂತಹ ಬೇರುಗಳನ್ನು ಕಟ್ಟಿಕೊಂಡೇ ಉಜ್ವಲ ಬೆಳಕು ನೀಡುವ ಮರಗಳನ್ನು ನೋಡಿ ಬಂದಿದ್ದರು.

    ಕಾರುಹೊರಟು ಅರ್ಧಗಂಟೆಯಾಗಿರಬಹುದು ಕಾಲುವೆಯೊಂದರ ಬಳಿ ಕಾರು ಗಕ್ಕನೆ ನಿಂತುಕೊಂಡಿತು. ಮುಮದೆ ಕಾರು ಹೋಗಲಾರದ ಜಾಗವದು. ಎಲ್ಲರೂ ಇಳಿದರು. ಕೈಯಲ್ಲಿ ಬಂದೂಕು, ಹಗ್ಗ, ಟಾರ್ಚು ಎಲ್ಲಾ ಹಿಡಿದು ಆ ರಾತ್ರಿ ನಡೆಯತೊಡಗಿದರು. ಕಷ್ಟಪಟ್ಟು ಒಂದು ಮೈಲು ನಡೆಯುತ್ತಲೇ ಅವರಿಗೆ ಒಂದು ಬಯಲು ಕಾಣಿಸಿತು. ಅಲ್ಲೇ ನಿಲ್ಲಲು ಸೂಚಿಸಿದ ಚಿನ್ನಯ್ಯ. ಅಲ್ಲಿಂದ ಮುಂದೆ ಸುಮಾರು ನೂರು ಮೀಟರ್ ದೂರದಲ್ಲಿದ್ದ ಮರಗಳನ್ನು ನೋಡಲು ಹೇಳಿದ.

    ಚಿನ್ನಯ್ಯ ಹೇಳಿದ್ದು ನಿಜ! ಸುಮಾರು 30 ಮರಗಳ ಕಾಂಡಗಳು ಕೆಂಡದಂತೆ ಹೊಳೆಯುತ್ತಿದ್ದವು! ಎಲ್ಲರೂ ದಿಗ್ಬ್ರಾಂತರಾದರು. ಎಂದಿಗೂ ಮರೆಯಲಾಗದ ದೃಶ್ಯವದು. ಅವುಗಳಲ್ಲಿ ಎರಡು ಮರಗಳಂತೂ ಎಲೆರಹಿತ ಟೊಂಗೆಗಳೂ ಕೂಡಾ ಕಾಣುವಂತೆ ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಇಲ್ಲಿಂದ ಮುಂದೆ ಹೋಗಲು ಲಗೋರಿಬಾಬಾ ಮೊದಲು ಸಿದ್ಧನಾದ. ಅವನನ್ನು ಹೋಗದಂತೆ ಚಿನ್ನಯ್ಯ್ ತಡೆದ. ಡಾ.ಕೋವೂರ್ ಮತ್ತು ಫ್ಲಾಪಿಬಾಯ್ ಕೂಡಾ ಆ ಕ್ಷಣದಲ್ಲಿ ತಟಸ್ಥರಾಗಿದ್ದು ಏನೂ ಪ್ರತಿಕ್ರಿಯೆ ನೀಡದಿದ್ದುದು ಲಗೋರಿಬಾಬಾನಿಗೆ ಅತ್ಯಾಶ್ಚರ್ಯವೆನಿಸಿತು. ಚಿನ್ನಯ್ಯ ಎಲ್ಲರನ್ನೂ ವಾಪಾಸ್ ಹೊರಡಿಸಿಕೊಂಡು ಅವರ ರೂಮಿಗೆ ತಂದು ಬಿಟ್ಟನು.

    ಹಗಲಿನ ಬೆಳಕಿನಲ್ಲಿ ಆ ಮರಗಳನ್ನು ನೋಡಬೇಕೆಂದು ಮುಂಜಾನೆಯೇ ಮತ್ತೆ ಹೊರಟರು ಡಾ. ಕೋವೂರ್, ಫ್ಲಾಪಿಬಾಯ್ ಮತ್ತು ಲಗೋರಿಬಾಬಾ. ಈ ಬಾರಿ ಯಾರಿಗೂ ಗೊತ್ತಾಗದಂತೆ ಹೋಗಬೇಕೆಂದು ಅಂದುಕೊಂಡಿದ್ದರೂ ಇವರ ಸುತ್ತ ಗುಪ್ತಚಾರಿಕೆ ಮಾಡುತ್ತಿದ್ದ ಚಿನ್ನಯ್ಯ ಇವರಿಗೆ ಮತ್ತೆ ಎದುರಾದ. ಬೇರೆ ದಾರಿ ಇಲ್ಲದೆ ಚಿನ್ನಯ್ಯ ಮತ್ತು ಅವನ ಜೊತೆಗಾರರ ಜೊತೆಯೇ ಮತ್ತೊಮ್ಮೆ ಹೊರಟರು ಈ ಮೂವರು! ಓಳುಮಾಡು ತಲುಪಿದಾಗ ಆಗಿನ್ನು ಏಳುಗಂಟೆ ಸಮಯ. ರಾತ್ರಿ ನೋಡಿದ ಮರಗಳನ್ನು ಗುರುತಿಸುವುದು ಇವರಿಗೆ ಕಷ್ಟವೇ ಆಗಿದ್ದರೂ ಚೆನ್ನಯ್ಯ ಇನ್ನೂ ಮುಂದೆ ಹೋಗಲು ಯಾರನ್ನೂ ಬಿಡಲಿಲ್ಲ. ಆ ಸಮಯದಲ್ಲಿ ಇವರ ಹಿಂದೆಯೇ ಬರುತ್ತಿದ್ದ ಲಗೋರಿಬಾಬಾ ಅಲ್ಲಿ ಎಲ್ಲೂ ಕಾಣಲಿಲ್ಲ. ದಿಗಿಲುಗೊಂಡು ಜೋರಾಗಿ ಕರೆಯುತ್ತಾ ಎಲ್ಲರೂ ಲಗೋರಿಬಾಬಾನನ್ನು ಹುಡುಕಹತ್ತಿದರು. ಚಿನ್ನಯ್ಯ ಮತ್ತವನ ಸಂಗಡಿಗರು, ಫ್ಲಾಪಿಬಾಯ್ ಮತ್ತು ಡಾ. ಕೋವೂರ್ ಒಂದೊಂದು ದಿಕ್ಕಿಗೆ ಹೋಗಿ ಹುಡುಕಿದರೂ ಸಿಗಲಿಲ್ಲ. ಬಹಳಷ್ಟು ಹುಡುಕಿ ನಂತರ ಬೇಸರದಿಂದ ಊರಿಗೆ ಹೋಗಿ ಪೊಲೀಸ್ ಕಂಪ್ಲೆಂಟ್ ಕೊಡೋಣವೆಂದು ಕಾರಿನತ್ತ ಬಂದರೆ, ಏನಾಶ್ಚರ್ಯ! ಲಗೋರಿಬಾಬಾ ಅಲ್ಲೇ ಇದ್ದ. ಎಲ್ಲರಿಗೂ ಹೋದ ಜೀವ ಬಂದಂತಾಯ್ತು. ಎಲ್ಲರೂ ತಮ್ಮ ತಮ್ಮ ರೂಮಿಗೆ ವಾಪಸ್ಸಾಗಿ ಸ್ವಲ್ಪ ಸಮಯದ ನಂತರ ಡಾ ಕೋವೂರ್,ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ರೂಮ್ ಚೆಕ್ ಔಟ್ ಮಾಡಿಸಿ ಚಿನ್ನಯ್ಯ ಮತ್ತವನ ಸಂಗಡಿಗರಿಗೆ ವಂದಿಸಿ ಅಲ್ಲಿಂದ ಹೊರಟರು.

ವಾರದ ತರುವಾತ, ಕೊಲಂಬೋದಲ್ಲಿ ರಾತ್ರಿ 7 ಗಂಟೆ ಸಮಯ. ಡಾ.ಕೋವೂರ್ ಮಾಧ್ಯಮದವರಿಗೆ ಪ್ರೆಸ್ ಮೀಟ್ ಕರೆದಿದ್ದರು. ಓಳುಮಾಡಿನ ಕಾಡಿನ ಬೆಳಕು ಬಿಡುವ ಮರಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಕರೆದಿದ್ದ ಪ್ರೆಸ್ ಮೀಟಿನಲ್ಲಿ ಹೊರದೇಶದ ಮಾಧ್ಯಮದವರೂ ನೆರೆದಿದ್ದರು. 

ಡಾ.ಕೋವೂರ್ ಮಾತನಾಡುತ್ತಾ, “ಕಾಟೇರಿ ದೆವ್ವದ ರಹಸ್ಯ ಇದೀಗ ಬಯಲಾಗಿದೆ. ದೆವ್ವಗಳಿಂದ ಬೆಳಕು ಬರುತ್ತದೆ ಎನ್ನುವ ಮಾತು ಸಂಪೂರ್ಣ ಸುಳ್ಳು..” ಎಂದೆನ್ನುತ್ತಿದ್ದಂತೆ ಪತ್ರಕರ್ತರು ಎಲ್ಲರೂ ಒಟ್ಟೊಟ್ಟಿಗೆ ಮಾತನಾಡಲು ಶುರುಮಾಡಿ, 
ಒಬ್ಬ “ಹೇಗೆ ಹೇಳ್ತೀರಾ ಇದನ್ನ ಸುಳ್ಳು ಅಂತಾ?” ಎಂದು ಕೇಳಿದ.

ಆ ಸಮಯಕ್ಕೆ ಸರಿಯಾಗಿ ಜಪ್ಪ್.. ಎಂದು ಕರೆಂಟ್ ಹೋಯ್ತು. ಸುತ್ತಲೂ ಕತ್ತಲು. ಆಗ ಟೇಬಲ್ ಮೇಲೆ ಕೆಲವು ಕೆಂಡದಂತ ವಸ್ತುಗಳು ಕಾಣತೊಡಗಿದವು. ಎಲ್ಲರಿಗೂ ದಿಗಿಲು. ಇಲ್ಲಿ ಏನಾಗುತ್ತಿದೆ? ಹೊಳೆಯುತ್ತಿರುವ ವಸ್ತು ಏನು ಎಂದು ನೋಡುವಷ್ಟರಲ್ಲಿಯೇ ಬೆಳಕು ಬಂತು. ಆಗ ಫ್ಲಾಪಿಬಾಯ್ ಕೈಯಲ್ಲಿ ನಿರ್ಜೀವ ಮರದ ತುಂಡನ್ನು ಹಿಡಿದು ಹೇಳಿದ, “ನೀವಿಗ ನೋಡಿದ ಹೊಳೆದ ವಸ್ತಿ ಇದೇ! ನೀವು ಅಂದುಕೊಂಡಿರೋ ಕಾಟೇರಿ ದೆವ್ವ ಕೂಡಾ ಇದೇ!” ಎನ್ನುತ್ತಾ ಟೇಬಲ್ ಮೇಲಿಟ್ಟ,

“ಸ್ವಲ್ಪ ವಿವರವಾಗಿ ಹೇಳಿ?” ಎಂದು ಪತ್ರಕರ್ತರು ಕೇಳಿದಾಗ,
ಡಾ. ಕೋವೂರ್ ಮಾತನಾಡಲಾರಂಭಿಸಿದರು. “ರಾತ್ರಿ ಕಾಡಿನಲ್ಲಿ ಮೊದಲಬಾರಿಗೆ ಬೆಳಕು ನೀಡುತ್ತಿದ್ದ ಮರ ನೋಡಿದಾಗ ಆಶ್ವರ್ಯವಾಯ್ತು. ಬೆಳಿಗ್ಗೆ ಮತ್ತೆ ಹೋದೆವು ನಾವು. ಆದ್ರೆ ಸ್ಥಳಿಯರ ನಂಬಿಕೆ ಬಲವಾಗಿ ಇದ್ದಿದ್ರಿಂದ ನಮಗೆ ಮುಂದುವರೆಯಲಾಗಿಲ್ಲ. ಈ ಸಮಯದಲ್ಲಿ ನಮ್ಮ ಲಗೋರಿಬಾಬಾ ಒಮದು ಉಪಾಯ ಮಾಡಿದ್ರು. ಅವರು ಕಾಡಿನಲ್ಲಿ ತಪ್ಪಿಸಿಕೊಂಡಂತೆ ಕೆಲ ಸಮಯ ಕಾಣೆಯಾದ್ರು. ಆಗ ನಾನು ಮತ್ತು ಫ್ಲಾಪಿಬಾಯ್ ಯಾರಿಗೂ ತಿಳಿಯದಂತೆ ಕಾಡಿನ ಒಳಗೆ ಹೋಗಿ ಮರಗಳ ಬಳಿ ಸೂಕ್ಷ್ಮವಾಗಿ ಗಮನಿಸಿದ್ವಿ. ಕಾರಿನ ಬಳಿ ಬರುವ ಮೊದಲೇ ಅಲ್ಲಿನ ನಿರ್ಜೀವ ಮರದ ತುಂಡುಗಳನ್ನು ಕತ್ತರಿಸಿ ಬ್ಯಾಗಿನೊಳಗೆ ಹಾಕಿಕೊಂಡಿದ್ವಿ. ನಂತರ ರೂಮ್ ಚೆಕ್ ಔಟ್ ಮಾಡಿ ನಾವು ಹೋದದ್ದು ಜಾಫ್ನಾಗೆ. ಅಲ್ಲಿನ ಕಾಲೇಜ್ ಲ್ಯಾಬಿನಲ್ಲಿ ಮರದ ತುಂಡುಗಳನ್ನು ಪರೀಕ್ಷಿಸಿದಾಗ ಗೊತ್ತಾಯ್ತು ಮರ ಹೊಳೆಯುತ್ತಿದ್ದುದು ಆ ಮರದ ಮೇಲಿದ್ದ ‘ಬಯೋಲುಮಿನಸ್ ಫಂಗಸ್’ ಎನ್ನುವ ಒಂದು ಬಗೆಯ ಬೂಸ್ಟಿನಿಂದ! ಇಂಥ ಬೂಸ್ಟು ರಾತ್ರಿ ಹೊತ್ತು ಬೆಳಕು ಸೂಸುತ್ತವೆ. ಇವು ಅಸಾಧಾರಣ ವಿಷಯವೇನಲ್ಲ. ನೀವೆಲ್ಲಾ ಮಿಂಚುಹುಳ ನೋಡಿರ್ತೀರಾ ಅವು ಕೂಡಾ ಇದೇ ರೀತಿ ಬೆಳಕು ಸೂಸುತ್ತವೆ. ಅದೇ ರೀತಿ ಕೆಲವು ನಾಕ್ಟಿಲೂಕಾ ಮೀನುಗಳು ಕೂಡಾ ಸಮುದ್ರದಲ್ಲಿ ತಮ್ಮ ಶರೀರದಿಂದ ಬೆಳಕನ್ನು ಹೊರಬಿಡ್ತವೆ. ಇದು ಜಲಪಿಶಾಚಿಗಳಿರಬೇಕೆಂದು ಕಡಲ ಸಂಚಾರಿಗಳು ಭಾವಿಸ್ತಾರೆ ಇದು ತಪ್ಪು ಕಲ್ಪನೆ ಮಾತ್ರ. ಮತ್ತೇನಾದ್ರೂ ಪ್ರಶ್ನೆಗಳಿದ್ರೆ ಕೇಳಿ?” ಎಂದು ಮಾತು ಮುಗಿಸಿದರು ಡಾ. ಕೊವೂರ್.
ಹೀಗೆ ಓಳುಮಾಡು ಕಾಡಿನಲ್ಲಿ ಕಂಡ ಬೆಳಕು ಹೊರಬಿಡುವ ಮರಗಳ ಅಸದೃಶ ದೃಶ್ಯದ ಹಿಂದೆ ಪ್ರಕೃತಿ ವಿಸ್ಮಯ ಕಾರಣವೇ ಹೊರತು ಮತ್ತಾವುದೇ ಭೂತದ ಕಾರ್ಯ ಇಲ್ಲದೆಂದು ಈ ಮೂಲಕ ಜಗತ್ತಿಗೆ ಸಾರಿಯಾಗಿತ್ತು. 

(ನಿಜ ಘಟನೆಗೆ ಕಾಲ್ಪನಿಕ ಎಳೆ ಸೇರಿಸಲಾಗಿದೆ. ಈ ಕತೆಗೆ ಹಲವಾರು ಗ್ರಂಥಗಳು, ಲೇಖನಗಳು ಹಾಗೂ ವಿಶ್ವಕೋಶಗಳನ್ನು ಆಧಾರವಾಗಿ ಬಳಸಿಕೊಳ್ಳಲಾಗಿದೆ)

******